Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಗೌರಿ ಕೇಸ್ ರಾಜಕೀಯ ಟ್ವಿಸ್ಟ್

Tuesday, 06.03.2018, 5:30 AM       No Comments

| ಸಿ.ಕೆ. ಮಹೇಂದ್ರ/ಮಾದರಹಳ್ಳಿ ರಾಜು

ಮಂಡ್ಯ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಸಣ್ಣ ಸುಳಿವು ಪತ್ತೆಗೂ ವಿಫಲವಾಗಿರುವ ರಾಜ್ಯ ಸರ್ಕಾರ ಇದೀಗ ಈ ವಿಚಾರವನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಾಭ ಎತ್ತಲು ಹೊರಟಿದೆಯೇ? ಈ ಸಂಶಯಕ್ಕೆ ಪುಷ್ಟಿನೀಡುವಂತೆ, ಪ್ರಕರಣದಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಗೆ ಹಂತಕನ ಪಟ್ಟ ಕಟ್ಟಲು ನಡೆಸಿರುವ ರಹಸ್ಯ ಸಂಚಿನ ಇಂಚಿಂಚೂ ಮಾಹಿತಿ ವಿಜಯವಾಣಿ, ದಿಗ್ವಿಜಯ ನ್ಯೂಸ್ 24×7ಗೆ ಲಭ್ಯವಾಗಿದೆ.

ಸ್ನೇಹಿತರೇ ಗಾಳ: ಮಂಡ್ಯ ಜಿಲ್ಲೆ ಮದ್ದೂರಿನ ಹಿಂದುಪರ ಸಂಘಟನೆಯ ನವೀನ್​ಕುಮಾರ್ ಎಂಬಾತನನ್ನು ಅಕ್ರಮವಾಗಿ ಸಜೀವ ಗುಂಡು ಗಳನ್ನು ಇಟ್ಟುಕೊಂಡಿದ್ದ ಆರೋಪದಡಿ ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿದ್ದರು. ಇದೀಗ ಆತನ ಮೇಲೆ ಗೌರಿ ಹತ್ಯೆಯ ಆರೋಪ ಹೊರಿಸುವ ಸಿದ್ಧತೆ ನಡೆದಿದೆ. ನವೀನನನ್ನು ಖೆಡ್ಡಾಕ್ಕೆ ಕೆಡವಲು ಆತನ ಸ್ನೇಹಿತರನ್ನೇ ಸಾಕ್ಷಿದಾರರನ್ನಾಗಿ ಮಾಡಲು ಎಸ್​ಐಟಿ ಪೊಲೀಸರು ಸಂಚು ರೂಪಿಸಿರುವ ವಿಷಯವನ್ನು ಬಂಧಿತನಾಗಿ ಸದ್ಯ ಬಿಡುಗಡೆ ಆಗಿರುವ ನವೀನ್​ಕುಮಾರ್ ಆತ್ಮೀಯ ಗೆಳೆಯ ಗಿರೀಶ್ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಎದುರು ಬಾಯ್ಬಿಟ್ಟಿದ್ದಾರೆ.

ಬಂಧಿಸಿದ್ದು ಎಲ್ಲಿ?: ಪೊಲೀಸರ ಪ್ರಕಾರ ಫೆ.18ರಂದು ಮೆಜೆಸ್ಟಿಕ್​ನಲ್ಲಿ ಗುಂಡುಗಳನ್ನು ಮಾರುತ್ತಿದ್ದಾಗ ನವೀನ್​ನನ್ನು ಬಂಧಿಸಲಾಗಿದೆ. ಆದರೆ ನಿಜಕ್ಕೂ ಆತನನ್ನು ಬಂಧಿಸಿದ್ದು ಫೆ.14ರಂದು ಬಿರೂರಿನ ಅವರ ಮನೆಯಲ್ಲಿ ಎಂಬುದು ಗಿರೀಶ್, ನವೀನ್ ಸಹೋದರ ತಿಮ್ಮೇಗೌಡರ ಹೇಳಿಕೆ.

ನವೀನ್​ಕುಮಾರ್ ಮೊಬೈಲ್ ಕರೆಗಳ ಆಧಾರದ ಮೇಲೆ ಆತನ ಸ್ನೇಹಿತ ಅನಿಲ್​ಕುಮಾರ್​ನನ್ನು ಕೂಡ ಅದೇ ದಿನ ವಶಕ್ಕೆ ಪಡೆದಿದ್ದಾರೆ. 15ರ ಮಧ್ಯಾಹ್ನ ಅಭಿಲಾಷ್ ನನ್ನ ಮೊಬೈಲ್​ಗೆ ಕರೆ ಮಾಡಿ ಲಕ್ಷ್ಮೀ ದೇವಾಲಯದ ಬಳಿಗೆ ಕರೆದ. ಅಲ್ಲಿ ಹೋದ ಬೆನ್ನಲ್ಲೇ ನಾಲ್ಕಾರು ಜನ ನನ್ನನ್ನ ಸುತ್ತುವರಿದು ಜೀಪಿಗೆ ಹಾಕಿಕೊಂಡರು ಎಂದು ಗಿರೀಶ್ ಹೇಳಿದರು.

ಉತ್ತರ ಸಿಗದ ಪ್ರಶ್ನೆಗಳು..: 2017ರ ಸೆ.5ರಂದು ನಡೆದ ಗೌರಿ ಲಂಕೇಶ್ ಹತ್ಯೆ, ಮಹಾರಾಷ್ಟ್ರದಲ್ಲಿ ನಡೆದ ನರೇಂದ್ರ ದಾಬೋಲ್ಕರ್(2013ರ ಆ.20), ಗೋವಿಂದ ಪನ್ಸಾರೆ (2015ರ ಫೆ.16) ಹಾಗೂ ರಾಜ್ಯದ ಎಂ.ಎಂ. ಕಲಬುರ್ಗಿ (2015ರ ಆ.30) ಹತ್ಯೆ ಪ್ರಕರಣಗಳೆಲ್ಲ ಒಂದೇ ಮಾದರಿಯಲ್ಲಿ ನಡೆದಿರುವುದಾಗಿವೆ. ಹೆಲ್ಮೆಟ್ ಧರಿಸಿಕೊಂಡು ಬಂದ ದುಷ್ಕರ್ವಿುಗಳು ಅತ್ಯಂತ ಸಮೀಪದಲ್ಲಿ ನಿಂತು ಹಣೆಗೆ ಗುಂಡಿಟ್ಟು ಕೊಂದಿದ್ದಾರೆ. ಎರಡೂ ರಾಜ್ಯಗಳ ವಿಶೇಷ ತನಿಖಾ ತಂಡಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಈವರೆಗೆ ಆರೋಪಿಗಳ ಸುಳಿವೂ ಲಭ್ಯವಾಗಿಲ್ಲ.

ಗೌರಿ ಪ್ರಕರಣದಲ್ಲಿ ಪೊಲೀಸರು ರೇಖಾಚಿತ್ರ ಬಿಡುಗಡೆ ಮಾಡಿದಾಗ ಒಬ್ಬನ ಹಣೆಗೆ ಕುಂಕುಮ ಇಟ್ಟಿದ್ದು, ಸರ್ಕಾರ ಹಿಂದುಪರ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿದೆ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯ ಹಣೆಗೆ ಕುಂಕುಮ ಇಟ್ಟಿದ್ದು ಹೇಗೆ ಕಂಡಿತು ಎಂಬ ಅಂಶ ಈ ಸಂದೇಹ ಮೂಡಿಸಿತು.

ಬಂಧಿಸಿದ್ದು ನಾಲ್ವರನ್ನು!

ಅಕ್ರಮವಾಗಿ ಗುಂಡುಗಳನ್ನು ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನಕ ಬಂಧಿಸಿದ್ದು ನವೀನ್​ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬುವನನ್ನು ಮಾತ್ರ ಎಂಬುದು ಹೊರ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಅಸಲಿಯಾಗಿ ಪೊಲೀಸರು ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದರು. ನವೀನ್​ಕುಮಾರ್​ನನ್ನು ಫೆ.14ರಂದು ಬಂಧಿಸಿದ ಬಳಿಕ 15ರಂದು ಶ್ರೀರಂಗಪಟ್ಟಣದ ಅನಿಲ್​ಕುಮಾರ್, ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಗಿರೀಶ್, ಕೆಸ್ತೂರಿನ ಅಭಿಲಾಷ್ ಎಂಬವರನ್ನ ಬಂಧಿಸಿದ್ದರು. ನ್ಯಾಯಾಲಯ ಫೆ.26ರಂದು ಪೊಲೀಸರ ಕಸ್ಟಡಿಗೆ ಕೊಡಲು ನಿರಾಕರಿಸಿದ ಕಾರಣದಿಂದ ಮೂವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಕಾಡುತ್ತಿದೆ ಜೀವಭಯ

ಸ್ನೇಹಿತನನ್ನು ಪ್ರಕರಣದಲ್ಲಿ ಫಿಕ್ಸ್ ಮಾಡಲು ಯತ್ನ ನಡೆದಿರುವುದು ಒಂದೆಡೆಯಾದರೆ, ತನಗೆ ಜೀವಭಯ ಕಾಡುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ನಮ್ಮ ಮೇಲೆ ದೊಡ್ಡ ಕೇಸ್ ಬುಕ್ ಮಾಡಲು ನಿರ್ಧರಿಸಿದ್ದಾರೆ. ಕೆಲ ಮಾಧ್ಯಮಗಳು ಆಧಾರ ರಹಿತ ವಿಚಾರಗಳನ್ನು ಪ್ರಚಾರ ಮಾಡಿ ನವೀನ್​ಕುಮಾರ್ ಆರೋಪಿ ಎಂಬಂತೆ ಬಿಂಬಿಸುತ್ತಿವೆ ಎಂದು ಗಿರೀಶ್ ಅಳಲು ತೋಡಿಕೊಂಡಿದ್ದಾರೆ. ನವೀನ್​ಕುಮಾರ್ ತಪ್ಪು ಮಾಡಿದ್ದರೆ ಎಂಥ ಶಿಕ್ಷೆಯನ್ನಾದರೂ ನೀಡಲಿ. ಆದರೆ, ರಾಜಕೀಯ ಲಾಭಕ್ಕೋಸ್ಕರ ಒಬ್ಬ ಹಿಂದುಪರ ಹೋರಾಟಗಾರನನ್ನು ಬಲಿಪಶು ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಗಿರೀಶ್ ಹೇಳಿದ್ದೇನು?

ಪ್ರಶ್ನೆ: ನವೀನ್​ಕುಮಾರ್ ನಿಮಗೆ ಹೇಗೆ ಗೊತ್ತು?

ಗಿರೀಶ್: ನಾವು ಹಲವು ವರ್ಷದಿಂದ ಸ್ನೇಹಿತರು. ಅವರ ಹಿಂದು ಪರ ಹೋರಾಟ ನನಗೆ ಇಷ್ಟವಾಗಿ ಅವರ ಜತೆ ಇರುತ್ತಿದ್ದೆ. ನನ್ನನ್ನು ತಮ್ಮ ಎಂದೇ ಅವರು ಭಾವಿಸಿದ್ದಾರೆ.

ಪ್ರಶ್ನೆ: ಪೊಲೀಸರು ಅವರನ್ನೇ ಯಾಕೆ ಬಂಧಿಸಿದರು?

ಗಿರೀಶ್: ನವೀನ್ ಹಿಂದು ಯುವ ಸೇನೆ ಸ್ಥಾಪಿಸಿ ಹೋರಾಟ ಮಾಡುತ್ತಿದ್ದರು. ಮದ್ದೂರಿನಲ್ಲಿ ಹಿಂದುಗಳನ್ನು ಕ್ರೖೆಸ್ತ ಧರ್ಮಕ್ಕೆ ಮತಾಂತರ ಮಾಡುವುದು ಹೆಚ್ಚುತ್ತಿತ್ತು. 2 ತಿಂಗಳ ಹಿಂದೆ ಈ ಸಂಬಂಧ ಅವರು ಹೋರಾಟ ತೀವ್ರಗೊಳಿಸಿದ್ದರು. ಆಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರೇ ಠಾಣೆಗೆ ಕರೆ ಮಾಡಿ ನವೀನ್​ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಪ್ರಶ್ನೆ: ಅದೊಂದೇ ಕಾರಣಕ್ಕೆ ಇಷ್ಟು ದೊಡ್ಡ ಪ್ರಕರಣವೇ?

ಗಿರೀಶ್: ಅಷ್ಟೇ ಅಲ್ಲ, ಕೆ.ಎಂ.ದೊಡ್ಡಿಯಲ್ಲಿ ವಿವಾದಿತ ಜಾಗದಲ್ಲಿ ಮಸೀದಿಯೊಂದು ತಲೆ ಎತ್ತುತ್ತಿತ್ತು. ಅದರ ಮಾಹಿತಿ ಸಿಕ್ಕ ತಕ್ಷಣ ನವೀನ್​ಕುಮಾರ್ ಹೋರಾಟ ಆರಂಭಿಸಿದರು. ಆಗ ಸಂಘಟನೆಯೊಂದು ನಿನ್ನನ್ನು ಮುಗಿಸುತ್ತೇವೆಂದು ಬೆದರಿಕೆ ಒಡ್ಡಿತ್ತು. ಈ ಕಾರಣದಿಂದ ಪೊಲೀಸರು ಕೆಲ ದಿನ ಹೊರಗೆ ಇರುವಂತೆ ಹೇಳಿದ್ದರಿಂದ ಅವರು ಬೀರೂರಿನಲ್ಲಿ ಉಳಿದುಕೊಂಡಿದ್ದರು.

ಪ್ರಶ್ನೆ: ನಿಮ್ಮನ್ನು ಬಂಧಿಸಿ ಏನು ಮಾಡಿದರು?

ಗಿರೀಶ್: ಫೆ.15ರ ಮಧ್ಯಾಹ್ನ ಅಭಿ ಹಾಗೂ ನನ್ನನ್ನು ಬೆಂಗಳೂರಿಗೆ ಕರೆದೊಯ್ದರು. ನಾವು ಎಲ್ಲಿ ಹೋಗುತ್ತಿದ್ದೇವೆ ಎಂಬುದು ಗೊತ್ತಾಗದಿರಲಿ ಎಂದು ತಲೆಯನ್ನು ಬಗ್ಗಿಸಿ ಕೂರಿಸಿದ್ದರು. ತುಮಕೂರು ರಸ್ತೆಗೆ ತಿರುಗಿದ್ದು ಗೊತ್ತಾಯಿತು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ನಮ್ಮ ಮುಖಕ್ಕೆ ಟವೆಲ್ ಕಟ್ಟಿ ರೆಸಾರ್ಟ್​ವೊಂದಕ್ಕೆ ಕರೆದೊಯ್ದರು. ನಮ್ಮ ಮುಂದೆ ನವೀನ್​ಕುಮಾರ್​ನನ್ನು ಇಬ್ಬರು ಎಳೆದುಕೊಂಡು ಹೋದರು. ಅಣ್ಣನಿಗೆ ಚೆನ್ನಾಗಿ ಹೊಡೆದಿದ್ದರು. ಅವರನ್ನು ನೋಡಿ ನನಗೆ ಅಳುಬಂತು. ಮತಾಂತರ ಹಾಗೂ ಮಸೀದಿ ತಡೆದ ವಿಚಾರಕ್ಕೆ ಬಂಧಿಸಿರಬೇಕು ಎಂದುಕೊಂಡೆ.

ಪ್ರಶ್ನೆ: ರೆಸಾರ್ಟ್​ನಲ್ಲಿ ಏನು ಮಾಡಿದರು?

ಗಿರೀಶ್: ಫೆ.19ರಂದು ಜ್ಞಾನಭಾರತಿ ಠಾಣೆಯಲ್ಲಿ ನಮ್ಮ ಮೂವರ ವಿರುದ್ಧ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು ಎಂದು ಪೆಟ್ಟಿ ಕೇಸು ದಾಖಲಿಸಿದರು. ನಂತರ ನಮ್ಮನ್ನು ರೆಸಾರ್ಟ್​ಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟರು. ನಾನು ಆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೆ. ಆದ್ದರಿಂದ ನನಗೆ ಮಾನಸಿಕವಾಗಿ ಹಿಂಸೆ ನೀಡಿದರು. ಬಹಿರಂಗವಾಗಿ ಹೇಳಲಾಗದ ಭಾಷೆಯಲ್ಲಿ ಬೈದರು.

ಪ್ರಶ್ನೆ: ಪೊಲೀಸರು ನಿಮ್ಮನ್ನು ಹೇಗೆ ನಡೆಸಿಕೊಂಡರು?

ಗಿರೀಶ್: ಅದನ್ನು ಮಾತಿನಲ್ಲಿ ಹೇಳಲಾಗದು. ಆದರೆ, ಈ ಪ್ರಕರಣದಿಂದ ಅವರಿಗೂ ಭಯವಿದೆ. ಕಾರಣ ಅವರು ರಾಜಕೀಯ ಒತ್ತಡದಿಂದ ನಮ್ಮನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಮಹಾರಾಷ್ಟ್ರದಲ್ಲೂ ತನಿಖೆ ನಡೆಯುತ್ತಿದೆ, ಅಲ್ಲಿ ಸುಳ್ಳು ಎಂದು ಗೊತ್ತಾದರೆ ನಮ್ಮ ಮಾನ ಹರಾಜಾಗುತ್ತದೆ ಎಂದು ಅವರು ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ.


ಎಲೆಕ್ಷನ್ ವರಿ; ಅಮಾಯಕರು ಹರಕೆಕುರಿ?

| ವಿಜಯವಾಣಿ ವಿಶೇಷ

ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆ ತಡೆಯಲೇಬೇಕೆಂದು ಪಣ ತೊಟ್ಟಿರುವ ರಾಜ್ಯ ಸರ್ಕಾರಕ್ಕೆ ಹಿಂದು ಕಾರ್ಯಕರ್ತರ ಹತ್ಯೆ ಕಗ್ಗಂಟಾಗಿದೆ. ಇದಕ್ಕೆ ಪರ್ಯಾಯವಾಗಿ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣವನ್ನು ಹಿಂದು ಪರ ಸಂಘಟನೆಗಳ ತಲೆಗೆ ಕಟ್ಟಿ ಬಿಜೆಪಿಗೆ ಮುಖಭಂಗ ಮಾಡಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ಆರಂಭದಿಂದಲೂ ಇದೆ. ಅದಕ್ಕೆ ನವೀನ್​ಕುಮಾರ್ ಬಂಧನ ಪ್ರಕರಣ ಪುಷ್ಠಿ ನೀಡಿದೆ.

ಗೌರಿ ಹತ್ಯೆಗೆ ಸಂಬಂಧಿಸಿದಂತೆ ನವೀನ್​ನನ್ನು ಪೊಲೀಸರು ಟಾರ್ಗೆಟ್ ಮಾಡಿದ್ದು ಏಕೆ ಮತ್ತು ಇಷ್ಟು ತರಾತುರಿಯಲ್ಲಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಏಕೆ ಎಂಬ ಪ್ರಶ್ನೆಗಳು ಕಾಡತೊಡಗಿವೆ.

ಚುನಾವಣೆ ಸಂದರ್ಭದಲ್ಲಿ ಇಂತಹ ಅತಿಸೂಕ್ಮ ವಿಚಾರಗಳು ಜನ ಸಾಮಾನ್ಯರ ಮೇಲೆ ಅತಿಹೆಚ್ಚು ಪ್ರಭಾವ ಬೀರುತ್ತವೆ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಗೌರಿ ಹತ್ಯೆ ಪ್ರಕರಣ ಭೇದಿಸುವುದಕ್ಕಿಂತ, ಹತ್ಯೆ ಮಾಡಿದವರ ಹಿನ್ನೆಲೆ ಮುಖ್ಯವಾಗುತ್ತದೆ. ಬಲಪಂಥೀಯ ನಿಲುವನ್ನು ಹೊಂದಿರುವ, ಬಿಜೆಪಿ ಹಾಗೂ ಹಿಂದುಪರ ಸಂಘಟನೆ ನಾಯಕರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ ಆರೋಪಿಯಾಗುವುದು ಈ ಪ್ರಕರಣದಲ್ಲಿ ಅಗತ್ಯವಾಗಿತ್ತು ಎಂಬ ಅನುಮಾನಗಳು ಹುಟ್ಟುತ್ತವೆ.

ಆರೋಪಿ ನವೀನ್ ಹಿಂದುಪರ ಹೋರಾಟಗಳಲ್ಲಿ ಭಾಗಿಯಾಗಿದ್ದಲ್ಲದೆ, ಬಿಜೆಪಿ, ಹಿಂದುಪರ ಸಂಘಟನೆಗಳ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಇವರನ್ನು ಬಂಧಿಸಿ ಗೌರಿ ಕೇಸಿಗೆ ತಳುಕು ಹಾಕಲು ನಡೆಯುತ್ತಿರುವ ಪ್ರಯತ್ನದ ಹಿಂದೆ ರಾಜಕೀಯ ಹುನ್ನಾರವಿದೆ ಎಂಬ ಆರೋಪಗಳು ಕೇಳಿಬಂದಿವೆ. ನವೀನ್​ನನ್ನು ಪ್ರಮುಖ ಆರೋಪಿಯನ್ನಾಗಿಸಿದರೆ ಚುನಾವಣೆ ಮುಗಿಯುವವರೆಗೂ ಪ್ರಕರಣ ಕಾವನ್ನು ಉಳಿಸಿಕೊಂಡಿರುತ್ತದೆ. ನಂತರ ನ್ಯಾಯಾಲಯದಲ್ಲಿ ಪ್ರಕರಣ ಏನಾಗುತ್ತದೆ ಎಂಬುದು ಯಾರಿಗೂ ಬೇಕಾಗಿಲ್ಲ. ಈಗಿರುವ ಪ್ರಕಾರ ತನಿಖೆ ಇಡಿಯಾಗಿ ಇಂತಹುದೇ ಯೋಜಿತ ಸಂಚು ಎನ್ನಲಾಗುತ್ತಿದೆ.

ಕುಟುಂಬಗಳಿಗೆ ಮಾಹಿತಿಯೇ ಇಲ್ಲ

ಸಾಮಾನ್ಯವಾಗಿ ಪೊಲೀಸರು ಯಾರನ್ನೇ ಬಂಧಿಸಬೇಕಾದರೂ ಮಾನವ ಹಕ್ಕುಗಳ ಪ್ರಕಾರ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಬೇಕು. ಆದರೆ, ನಾಲ್ವರನ್ನು ಬಂಧಿಸಲು ಪೊಲೀಸರು ಯಾವುದೇ ವಾರಂಟ್ ತರಲಿಲ್ಲ. ಬಂಧಿಸಿದ ನಂತರ ಕನಿಷ್ಠ ನಮ್ಮ ಕುಟುಂಬದವರಿಗೆ ಮಾಹಿತಿ ನೀಡಲಿಲ್ಲ. ನಾಪತ್ತೆಯಾಗಿರುವ ಬಗ್ಗೆ ನಮ್ಮ ಕುಟುಂಬ ಸದಸ್ಯರು ದೂರು ಕೊಡಲು ಹೋದಾಗ ಇನ್ನಿಲ್ಲದ ಕಾರಣ ಹೇಳಿ ದೂರು ಸ್ವೀಕರಿಸದೆ ವಾಪಸ್ ಕಳಿಸಿದರು. ಇದರಿಂದ ನಾವೆಲ್ಲ ತೀವ್ರ ನೋವು ಅನುಭವಿಸಬೇಕಾಯಿತು ಎಂದು ಗಿರೀಶ್ ಕಣ್ಣೀರಿಟ್ಟರು.

 ಸುಳ್ಳು ಸಾಕ್ಷಿ ಹೇಳಿಸಿದರೇ ಪೊಲೀಸರು?

ಇಡೀ ಪ್ರಕರಣದಲ್ಲಿ ನವೀನ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಹುಟ್ಟುಹಾಕುವ ಭರದಲ್ಲಿ ಆತನ ಅನುಯಾಯಿಗಳಿಂದ ಪೂರಕ ದಾಖಲೆಗಳನ್ನು ಸೃಷ್ಟಿಸುವ ಯತ್ನ ನಡೆದಿದೆ ಎನ್ನಲಾಗಿದೆ. ನವೀನ್​ಕುಮಾರ್ ಜತೆಗೆ ಆತನ ಸ್ನೇಹಿತರಾದ ಗಿರೀಶ್, ಅಭಿ ಹಾಗೂ ಅನಿಲ್​ರನ್ನು ಪೊಲೀಸರು ಬಂಧಿಸಿದ್ದಾರೆ. ‘ನವೀನ್​ನನ್ನು ಗೌರಿ ಹತ್ಯೆ ಆರೋಪಿಯನ್ನಾಗಿಸಿ, ನಮ್ಮನ್ನು ಸಾಕ್ಷಿದಾರರನ್ನಾಗಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ’ ಎಂಬುದು ಗಿರೀಶ್ ಆರೋಪ.

‘ನ್ಯಾಯಾಧೀಶರ ಮುಂದೆ ಏನು ಹೇಳಬೇಕೆಂದು ಪೊಲೀಸರೇ ಕಂಠಪಾಠ ಮಾಡಿಸಿದ್ದಾರೆ.

ಒಂದನೆಯದು, ನವೀನ್​ಕುಮಾರ್ ನಾಲ್ವರನ್ನು ಕರೆಸಿಕೊಂಡು ಗೌರಿ ಹತ್ಯೆಗೆ ತರಬೇತಿ ನೀಡಿದ್ದ. ಎರಡನೆಯದು ಈ ಬುಲೆಟ್​ಗಳನ್ನು ಗೌರಿ ಹತ್ಯೆಗೆ ಬಳಸುವುದಕ್ಕೆ ಸಿದ್ಧಮಾಡಿಕೊಂಡಿದ್ದ. ಮೂರನೆಯದು ಗೌರಿ ಹತ್ಯೆಯಾದ ಹಲವು ದಿನಗಳ ನಂತರ ನವೀನ್ ನಮ್ಮ ಮನೆಗೆ ಬಂದ. ನಾನು ಯಾಕೆ 2 ತಿಂಗಳಿಂದ ಮೊಬೈಲ್ ಸ್ವಿಚ್ ಆಫ್ ಎಂದು ಕೇಳಿದಾಗ ಗೌರಿ ಹತ್ಯೆ ವಿಚಾರವಾಗಿ ತಲೆ ಮರೆಸಿಕೊಂಡಿದ್ದೆ ಕಣೋ ಅಂತ ಹೇಳಿದ. ನಾಲ್ಕನೆಯದು ಈಗ ನಾಲ್ಕು ಮಂದಿ ಬಂದು ಉಳಿದಿದ್ದಾರೆ. ಅವರೆಲ್ಲರಿಗೂ ತರಬೇತಿ ನೀಡಿ ಕೊಳ್ಳೇಗಾಲಕ್ಕೆ ಕರೆದೊಯ್ದ. ಈ ರೀತಿ ಹೇಳಬೇಕೆಂದು ಪೊಲೀಸರು ಹೇಳಿದಾಗ ನಾನು ನಿರಾಕರಿಸಿದೆ. ಆಗ

ಜ್ಞಾನಭಾರತಿ ಸಿಪಿಐ ಗಿರಿರಾಜ್, ಮರ್ಯಾದೆಯಿಂದ ನಾನು ಹೇಳಿದ್ದನ್ನು ಕೇಳಿದರೆ ಬದುಕುತ್ತೀಯಾ ಇಲ್ಲದಿದ್ದರೆ ನಿನ್ನನ್ನು ಕೇಸಿನಲ್ಲಿ ಫಿಟ್ ಮಾಡುತ್ತೇವೆ’ ಎಂದು ಹೆದರಿಸಿದರು.

19ರಂದು ಬಿಡುಗಡೆ ಮಾಡುವುದಾಗಿ ಹೇಳಿ ರಾತ್ರಿ ಪೂರಾ ಬೆಂಗಳೂರಿನಲ್ಲಿ ಸುತ್ತಾಡಿಸಿದರು. 20ರಂದು ನಮ್ಮ ಮನೆಯವರನ್ನು ಕರೆಸಿ ನಮ್ಮನ್ನು ಷರತ್ತುಗಳ ಮೇಲೆ ಕಳಿಸಿದರು. 24ರಂದು ಮತ್ತೆ ಕರೆದು, 28ಕ್ಕೆ ಬರಲು ಹೇಳಿದರು. ಆದರೆ, 26ರ ಬೆಳಗ್ಗೆ 9 ಗಂಟೆಗೆ ಬರುವಂತೆ ಉಪ್ಪಾರಪೇಟೆ ಪಿಎಸ್​ಐ ಕೃಷ್ಣಕುಮಾರ ಮೊಬೈಲ್​ಗೆ ಕರೆ ಮಾಡಿದರು. ಅಲ್ಲಿಗೆ ಹೋದಾಗ ಜ್ಞಾನಭಾರತಿ ಠಾಣೆಯಿಂದ ಯುನಿವರ್ಸಿಟಿ ಗೇಟ್ ತನಕ 10 ನಿಮಿಷದಲ್ಲಿ ನಡೆದುಕೊಂಡು ಬರಲು ಹೇಳಿದರು. ರಸ್ತೆಯುದ್ದಕ್ಕೂ ನನ್ನ ಮೇಲೆ ಕಣ್ಣಿಟ್ಟಿದ್ದರು. ಅಲ್ಲಿಯೂ ನನ್ನಿಂದ ನ್ಯಾಯಾಧೀಶರ ಮುಂದೆ ಹೇಗೆ ಹೇಳಬೇಕೆಂದು ಮತ್ತೊಮ್ಮೆ ಹೇಳಿಸಿದರು. ನಂತರ ನ್ಯಾಯಾಧೀಶರಿಗೆ ಮೂವರು ಪೊಲೀಸರು ಹೇಳಿಕೊಟ್ಟಿದ್ದಂತೆ ಹೇಳಿಕೆ ನೀಡಿದೆವು. ಆಗ ನ್ಯಾಯಾಧೀಶರು ಅನುಮಾನದಿಂದ ಎಲ್ಲರೂ ಒಂದೇ ರೀತಿಯ ಸ್ಕ್ರಿಪ್ಟ್ ಬರೆದುಕೊಟ್ಟಂತೆ ಹೇಳುತ್ತಿದ್ದೀರಿ, ಸತ್ಯ ಹೇಳಿ ಎಂದರು. ನಮಗೆ ಧೈರ್ಯ ಬರಲಿಲ್ಲ. ಆಗ ಪೊಲೀಸರು ನಮ್ಮನ್ನು ಕಸ್ಟಡಿಗೆ ಕೊಡಿ ಎಂದು ಕೇಳಿದರು. ಆದರೆ, ನ್ಯಾಯಾಧೀಶರು ನಿರಾಕರಿಸಿ, ನಮ್ಮನ್ನು ಬಿಡುಗಡೆ ಮಾಡಿದರು. ಬಳಿಕ ಪೊಲೀಸರು ನಮ್ಮನ್ನು ಈ ವಿಚಾರ ಎಲ್ಲಿಯೂ ಹೊರಗೆ ಬರಬಾರದು. ನೀವು ಪರಸ್ಪರ ಯಾವುದೇ ಚರ್ಚೆ ಮಾಡಬಾರದು. ನಿಮ್ಮೆಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿರಬೇಕು ಎಂದು ಹೇಳಿದರು. ಅದರಲ್ಲೂ ನನಗೆ ನಿನ್ನನ್ನು ಬಿಡುತ್ತಿರುವುದು ನೆಮ್ಮದಿಯಾಗಿ ಇರುವುದಕ್ಕಲ್ಲ. ಇನ್ನಷ್ಟು ತಿಮಿಂಗಿಲಗಳನ್ನು ಹಿಡಿಯಲು ಬಿಟ್ಟಿದ್ದೇವೆ ಎಂದಿದ್ದಾರೆ. ಇದರಿಂದಾಗಿ ನಮಗೆ ಜೀವಭಯವಿದೆ’ ಎಂದು ಗಿರೀಶ್ ಹೇಳಿದ್ದಾರೆ.

 

ನವೀನ್ ನಿರಪರಾಧಿ. ಸಿದ್ದರಾಮಯ್ಯ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆತನನ್ನು ದೊಡ್ಡ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದೆ. ಈಗ ಚುನಾವಣೆ ಸಮಯ. ಗೌರಿ ಹಂತಕರನ್ನು ಬಂಧಿಸಿಲ್ಲ ಎಂಬ ಆರೋಪ ಕಾಡುತ್ತಿದೆ. ಬಿಜೆಪಿಗೆ ಇದು ವರದಾನವಾಗಲಿದೆ ಎಂಬ ಕಾರಣಕ್ಕೆ ಹಿಂದು ಪರ ಸಂಘಟನೆಯೇ ಕೊಲೆ ಮಾಡಿದೆ ಎಂದು ಬಿಂಬಿಸಿದರೆ ಕಾಂಗ್ರೆಸ್​ಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ. ನನ್ನ ತಮ್ಮ ಸೇರಿದಂತೆ ಆತನ ಸ್ನೇಹಿತರಿಗೆ ಜೀವಭಯವಿದೆ. ಅವರ ಜೀವಕ್ಕೆ ಏನೇ ಆದರೂ ಅದಕ್ಕೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ.

| ತಿಮ್ಮೇಗೌಡ, ನವೀನ್ ಸಹೋದರ

 

Leave a Reply

Your email address will not be published. Required fields are marked *

Back To Top