Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಸಮರ್ಥ ನಾಯಕತ್ವದಿಂದ ಬದಲಾವಣೆ ಸಾಕಾರ

Monday, 19.02.2018, 3:03 AM       No Comments

| ತರುಣ್​ ವಿಜಯ್​

ಆಡಳಿತದಲ್ಲಿ ಸುಧಾರಣೆ ತರುವುದು ಸುಲಭದ ಮಾತಲ್ಲ. ಜಡುಗಟ್ಟಿದ ವ್ಯವಸ್ಥೆ, ಅಧಿಕಾರಶಾಹಿಯ ನಿರ್ಲಕ್ಷ್ಯ ಧೋರಣೆ, ಈಗಾಗಲೇ ಬೇರೂರಿರುವ ಕೆಡಕುಗಳನ್ನು ನಿವಾರಿಸುತ್ತ ಮುಂದೆ ಸಾಗಲು ಪ್ರಬಲ ಇಚ್ಛಾಶಕ್ತಿ, ಸವಾಲುಗಳೊಂದಿಗೆ ಸೆಣೆಸುವ ಛಲ ಬೇಕು. ಸಮರ್ಥ ನಾಯಕತ್ವವೊಂದೇ ಈ ಬಗೆಯ ಬದಲಾವಣೆಗೆ ಮುನ್ನುಡಿ ಬರೆಯಬಲ್ಲದು.

ಕೇಸರಿ ತೊಟ್ಟ ಸಂನ್ಯಾಸಿ ಉತ್ತರಪ್ರದೇಶದಂಥ ದೊಡ್ಡ ರಾಜ್ಯವನ್ನು ಹೇಗೆ ಮುನ್ನಡೆಸಬಲ್ಲರು? ಹಲವು ಸಮಸ್ಯೆಗಳಿಂದ ನಲಗುತ್ತಿರುವ ಈ ರಾಜ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಆಕ್ಷೇಪಗಳು ಯೋಗಿ ಆದಿತ್ಯನಾಥರನ್ನು ಉ.ಪ್ರ ಸಿಎಂ ಆಗಿ ಘೋಷಿಸಿದಾಗ ಕೇಳಿಬಂದವು. ಆದರೆ, ರಾಜ್ಯವೊಂದು ಸಕಾರಾತ್ಮಕ ಬದಲಾವಣೆಯತ್ತ ವೇಗವಾಗಿ ಹೇಗೆ ತೆರೆದುಕೊಳ್ಳಬಹುದು ಎಂಬುದಕ್ಕೆ ಇವತ್ತು ಇಡೀ ದೇಶ ಉತ್ತರಪ್ರದೇಶದತ್ತ ನೋಡುತ್ತಿದೆ. ಯೋಗಿ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಈ ರಾಜ್ಯದ ಅಭಿವೃದ್ಧಿವೇಗವನ್ನು ಕಂಡು ಖುಷಿಯಾಗಿದ್ದಾರ

ಕೆಲವೇ ವರ್ಷಗಳ ಮೊದಲ ಉ.ಪ್ರ.ದ ಸ್ಥಿತಿ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಅಪರಾಧ, ಭ್ರಷ್ಟಾಚಾರ, ದಬ್ಬಾಳಿಕೆ, ಅಶಿಸ್ತು… ಇಂಥ ನಕಾರಾತ್ಮಕ ಕಾರಣಗಳಿಂದಲೇ ಈ ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಜತೆಗೆ ಅಭಿವೃದ್ಧಿಯಲ್ಲಿ ಹಿನ್ನಡೆ, ರೈತರ ಸಂಕಷ್ಟ, ನಿರುದ್ಯೋಗಿಗಳ ಬವಣೆ ಇವೆಲ್ಲ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದ್ದವು. ಕಳೆದ 15 ವರ್ಷಗಳಲ್ಲಿ ನೇಮಕಾತಿ-ವರ್ಗಾವಣೆಗಳಲ್ಲೂ ಭ್ರಷ್ಟಾಚಾರ, ಅವ್ಯವಹಾರದಂಥ ಅಪಸವ್ಯಗಳು ಸದ್ದು ಮಾಡಿದವು. ವೋಟಿಗಾಗಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ನೀಡುವ ಪ್ರಹಸನವೇನೋ ನಡೆಯಿತು. ಆದರೆ, ಆ ಲ್ಯಾಪ್​ಟಾಪ್​ಗಳು ಕಾರ್ಯನಿರ್ವಹಿಸಲು ಅದೆಷ್ಟೋ ಗ್ರಾಮಗಳಿಗೆ ವಿದ್ಯುತ್ತೇ ಇರಲಿಲ್ಲ. ಶಿಕ್ಷಣ, ಆರೋಗ್ಯ, ಲೋಕೋಪಯೋಗಿ… ಯಾವ ಇಲಾಖೆ-ವಿಭಾಗದಲ್ಲೂ ಕಣ್ಣಾಡಿಸಿದರೂ ಢಾಳಾಗಿ ಗೋಚರಿಸುತ್ತಿದ್ದುದು ಭ್ರಷ್ಟಾಚಾರವೇ.

ಅದಕ್ಕೆಂದೆ, ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ದಿನದಿಂದಲೇ ಈ ಎಲ್ಲ ಕೆಡುಕುಗಳ ವಿರುದ್ಧ ಸಮರ ಸಾರುತ್ತ ಹೊಸ ಭರವಸೆ ಮೂಡಿಸಿದ್ದಾರೆ. ನಾನು ಕಳೆದ ಎರಡು ದಶಕಗಳಿಂದ ಯೋಗಿ ಆದಿತ್ಯನಾಥರನ್ನು ಬಹು ಹತ್ತಿರದಿಂದ ಬಲ್ಲೆ. ಪ್ರಾಣಿ, ಪಕ್ಷಿ, ಸಕಲ ಚರಾಚರವನ್ನು ಪ್ರೀತಿಸುವ ಆಧ್ಯಾತ್ಮಿಕ ಸಂಬಂಧ ಅವರದ್ದು. ಯೋಗಿ ಆದಿತ್ಯನಾಥರ ಗುರುಗಳಾದ ಯೋಗಿ ಅವೇದ್ಯನಾಥರೊಂದಿಗೆ ಉತ್ತಮ ಸ್ನೇಹಭಾವ ಹೊಂದಿದ್ದೆ. ಮಠ-ಪೀಠಗಳು ಸಮಾಜದಲ್ಲಿ ಹೇಗೆ ಕ್ರಾಂತಿಕಾರಿ ಬದಲಾವಣೆ ತರಬಹುದು ಎಂಬುದನ್ನು ಅವೇದ್ಯನಾಥರು ತೋರಿಸಿಕೊಟ್ಟರು. ಅವರು ಹಾಕಿಕೊಟ್ಟ ಆ ಮಹಾನ್ ಪರಂಪರೆಯನ್ನೇ ಆದಿತ್ಯನಾಥರು ಮುಂದುವರಿಸಿಕೊಂಡು ಬಂದಿದ್ದರಿಂದ ಮೂಢನಂಬಿಕೆ, ಮಿಥ್ಯ ವಿಚಾರಗಳನ್ನು ತೊಡೆದು ಹಾಕಿ ಅಧ್ಯಾತ್ಮದ ಬೆಳಕನ್ನು ತೋರಿದರು. ಇಂಥ ವ್ಯಕ್ತಿತ್ವ ರಾಜಕೀಯ ಪ್ರವೇಶಿಸಿದಾಗ ಸಂಚಲನ ಸೃಷ್ಟಿಯಾಗಿದ್ದು ಸ್ವಾಭಾವಿಕವೇ. ಮುಖ್ಯಮಂತ್ರಿ ಹುದ್ದೆಗೆ ಅವರ ಹೆಸರು ಘೋಷಣೆಯಾದಾಗಲಂತೂ ಈ ದೇಶದ ತಥಾಕಥಿತ ಸೆಕ್ಯುಲರ್​ರು ತುಂಬ ನಿರಾಸೆ ಅನುಭವಿಸಿದರು. ಯೋಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಿದರು, ಶಿಕ್ಷಣ ರಂಗಕ್ಕೆ ಸುಧಾರಣೆಯ ತಾಕೀತು ನೀಡಿದರು. ಈ ನಿಟ್ಟಿನಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಾವೇ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು, ಶಾಲೆಗಳಿಗೆ ಹೋಗಿ ಶಿಕ್ಷಕರು-ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನೇಮಕಾತಿ-ವರ್ಗಾವಣೆಗಳಿಗೆ ಹಣ ತಿನ್ನುತ್ತಿದ್ದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳದಿಂದ ವರ್ಗ ಮಾಡಿದರು. ವಿಚಿತ್ರವೇನು ಗೊತ್ತೆ? ಉ.ಪ್ರ.ದಲ್ಲಿ ಜೂನ್​ನಲ್ಲಿ ಶಾಲೆಗಳು ಆರಂಭಗೊಂಡರೆ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ಪೂರೈಕೆಯಾಗುತ್ತಿದ್ದದ್ದು ಡಿಸೆಂಬರ್ ತಿಂಗಳಲ್ಲಿ! ಇದನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಿದ ಫಲ ಈಗ ಜುಲೈ ತಿಂಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ದೊರೆಯುತ್ತಿವೆ.

‘ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಬೊಕ್ಕಸ ಖಾಲಿಯಾಗಿದೆ’ ಎಂಬ ಕಳವಳಗಳ ಬೆನ್ನಲ್ಲೇ ಎಲ್ಲ ವಿತ್ತತಜ್ಞರ ಅನುಮಾನಗಳಿಗೆ ಉತ್ತರ ನೀಡುತ್ತ ಯೋಗಿ ಲಕ್ಷಾಂತರ ರೈತರ ಸಾಲವನ್ನು ಮನ್ನಾ ಮಾಡಿದರು. ಇದರಿಂದ ರೈತವರ್ಗದಲ್ಲಿ ಹೊಸ ಉತ್ಸಾಹ, ನಿರೀಕ್ಷೆ ಮೂಡಿದೆ. ಗಾಜಿಯಾಬಾದ್​ನಿಂದ ಬುಲಂದ್​ಶಹರ್, ಬಿಜನೌರ್​ವರೆಗಿನ ಪ್ರದೇಶ ‘ಅಪರಾಧ ಪ್ರದೇಶ’ ಎಂಬ ಹಣೆಪಟ್ಟಿ ಹೊತ್ತಿಕೊಂಡಿತ್ತು. ಈ ಪ್ರದೇಶ ಅದೆಷ್ಟು ಕುಖ್ಯಾತಿ ಹೊಂದಿತ್ತೆಂದರೆ ಇಲ್ಲಿನ ಅಪರಾಧ ಲೋಕದ ಮೇಲೆ ಒಂದು ಸಿನಿಮಾ ಕೂಡ ಬಂತು! ಇಲ್ಲಿ ಕಾನೂನು-ಸುವ್ಯವವಸ್ಥೆ ಅಸ್ತಿತ್ವದಲ್ಲೇ ಇರಲಿಲ್ಲ. ಕೊಲೆ, ದರೋಡೆ, ಕಳ್ಳತನದ ಪ್ರಕರಣಗಳು ಮಾಮೂಲು ಎಂಬಂತೆ ನಡೆಯುತ್ತಿದ್ದವು. ಇಲ್ಲೆಲ್ಲ ದಕ್ಷ ಅಧಿಕಾರಿಗಳನ್ನು ನಿಯೋಜಿಸಿ, ರೌಡಿಶೀಟರ್​ಗಳನ್ನು ಒಳಕ್ಕೆ ಹಾಕಲಾಗಿದೆ. ಕಾನೂನು-ಸುವ್ಯವಸ್ಥೆ ಸ್ಥಾಪಿಸುವ ಮೂಲಕ ಜನರಲ್ಲಿನ ಆತಂಕ ನಿವಾರಿಸಲಾಗಿದೆ.

ಗಂಗೆ, ಯಮನೆಯ ಧಾರೆ, ರಾಮ, ಕೃಷ್ಣ, ಶಿವನ ಭೂಮಿ ಆಗಿದ್ದರೂ ಉತ್ತರಪ್ರದೇಶದಲ್ಲಿ ಹಿಂದುಗಳಿಗೇ ರಕ್ಷಣೆ, ಸುರಕ್ಷೆ ಇರಲಿಲ್ಲ. ಈ ಹಿಂದಿನ ಕೆಲ ಸರ್ಕಾರಗಳು ಒಂದು ಕೋಮಿನ ಪರವಾಗಿ ನಿಂತ ಫಲವಾಗಿ ಹಿಂದುಗಳು ಭಯದಲ್ಲೇ ಬದುಕುವಂಥ ದುಸ್ಥಿತಿ. ಹಿಂದು ಶ್ರದ್ಧೆಗಳೊಂದಿಗೆ ಸದಾ ಚೆಲ್ಲಟವಾಡಿಕೊಂಡು ಬರಲಾಯಿತು. ಅಧ್ಯಾತ್ಮ ಮತ್ತು ಸಂಸ್ಕೃತಿಯ ದಿವ್ಯದರ್ಶನ ಮಾಡಿಸುವ ಕುಂಭಮೇಳದಲ್ಲೂ ಹಣ ಲಪಟಾಯಿಸುವ, ದುಡ್ಡ ಮಾಡುವ ದಂಧೆ ಅವ್ಯಾಹತವಾಗಿ ಸಾಗಿತು. ರಸ್ತೆಗಳಲ್ಲಿ ಗುಂಡಿಗಳೋ, ಗುಂಡಿಗಳಲ್ಲೇ ರಸ್ತೆಗಳೋ ಎಂದು ಹುಡುಕವ ದುಸ್ಥಿತಿ.

ಅದೇನೆ ಇರಲಿ, ಉತ್ತರಪ್ರದೇಶದಲ್ಲಿ ಈಗ ಸುಧಾರಣೆಯ ಪರ್ವ ಆರಂಭಗೊಂಡಿದೆಯಲ್ಲ ಅದು ಸಮರ್ಥ ನಾಯಕತ್ವದ ಲಕ್ಷಣ. ರಾಜ್ಯದ ಪ್ರವಾದ್ಯೋಮಕ್ಕೆ ಹೊಸ ಚಹರೆ ಒದಗಿಸುವ ಯತ್ನ ನಡೆಯುತ್ತಿದೆ. ಶಿವಭಕ್ತರು ಸೇರಿದಂತೆ ಎಲ್ಲ ಯಾತ್ರಾರ್ಥಿಗಳಿಗೂ ಉತ್ತಮ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಿಂದುಗಳು ಸೇರಿದಂತೆ ಎಲ್ಲ ಮತ-ಧರ್ಮದವರ ಶ್ರದ್ಧೆ, ನಂಬಿಕೆ, ಆಚರಣೆಗಳನ್ನು ಗೌರವಿಸುತ್ತ ಸಹಬಾಳ್ವೆ, ಸಮನ್ವಯದ ವಾತಾವರಣ ನಿರ್ವಿುಸಲಾಗಿದೆ. ಇತ್ತೀಚೆಗಷ್ಟೇ ಯೋಗಿ ಸರ್ಕಾರದ ಬಜೆಟ್ ಮಂಡನೆಯಾಯಿತು. ರಾಜ್ಯದ ಪ್ರತೀ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 29883.05 ಕೋಟಿ ರೂ. ಮೀಸಲಿರಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಯುವತಿಯರ ಸಾಮೂಹಿಕ ವಿವಾಹ ಯೋಜನೆಗೆ 250 ಕೋಟಿ ರೂ. ಒದಗಿಸಲಾಗಿದೆ. ಅಲಹಾಬಾದ್(ಪ್ರಯಾಗ್)ನಲ್ಲಿ ನಡೆಯಲಿರುವ ಐತಿಹಾಸಿಕ ಕುಂಭಮೇಳಕ್ಕೆ 1305 ಕೋಟಿ ರೂ., ರಸ್ತೆಗಳ ನಿರ್ವಣಕ್ಕೆ 11,343 ಕೋಟಿ ರೂ. ನೀಡಲಾಗಿದೆ. ಅಕ್ರಮ ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗುತ್ತಿದ್ದು, ಗೋರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಇವ್ಯಾವವು ತಥಾಕಥಿತ ಜಾತ್ಯತೀತವಾದಿಗಳ ಗಮನಕ್ಕೆ ಬಂದಿಲ್ಲ. ಬಂದಿದ್ದರೂ ಅವರು ಜಾಣಮೌನ ತಳೆದಿದ್ದಾರೆ ಎಂಬುದು ರಹಸ್ಯವೇನೆಲ್ಲ.

ಜನಹಿತವನ್ನು ಗಮನಿಸಿ, ಸಂವೇದನವನ್ನು ಗೌರವಿಸಿದರೆ ಯಾವುದೇ ರಾಜ್ಯವು ಅಭಿವೃದ್ಧಿಯತ್ತ ಹೆಜ್ಜೆ ಹಾಕಬಹುದು. ಕೇಂದ್ರ ಸರ್ಕಾರವೂ ಕೊರತೆಗಳ ಬಗ್ಗೆ ಮಾತಾಡಲಿಲ್ಲ. ಬದಲಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತ ಸಾಗುತ್ತಿದೆ. ಉ.ಪ್ರ.ದಲ್ಲಿ ಈಗ ಯೋಗಿ ಆದಿತ್ಯನಾಥರು ಅದೇ ಕೆಲಸ ಮಾಡುತ್ತಿದ್ದಾರೆ. ನಿಗರ್ವಿ, ಜನಮನವನ್ನು ಪ್ರೀತಿಸುವ ನಾಯಕ ಹೇಗೆ ರಾಜ್ಯದ ಚಿತ್ರಣವನ್ನೇ ಬದಲಿಸಬಹುದು ಎಂಬುದಕ್ಕೆಲ್ಲ ಈ ವಿದ್ಯಮಾನಗಳು ಸಾಕ್ಷಿಯಾಗುತ್ತಿವೆ. ಅಭಿವೃದ್ಧಿಯ ನಿಟ್ಟಿನಲ್ಲಿ ಮುಂದೊಂದು ದಿನ ಉತ್ತರಪ್ರದೇಶ ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಹೊರಹೊಮ್ಮಿದರೆ ಅಚ್ಚರಿ ಪಡಬೇಕಿಲ್ಲ. ನಮ್ಮ ನಾಯಕರು, ರಾಜ್ಯಗಳು ಸ್ಪರ್ಧೆ ನಡೆಸುವುದೇ ಆದರೆ ಅಭಿವೃದ್ಧಿಯ ಬಗ್ಗೆ ನಡೆಸಲಿ. ಆಗ ರಾಜಕೀಯ ಗೌಣವಾಗಿ ಜನಹಿತ ಮುಖ್ಯವಾಗುತ್ತದೆ. ಅಲ್ಲವೇ?

Leave a Reply

Your email address will not be published. Required fields are marked *

Back To Top