Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ನಿಮ್ಮಲ್ಲಾದರೂ ಈ ಪ್ರಶ್ನೆಗಳಿಗೆ ಉತ್ತರವಿದೆಯೇ?

Monday, 12.06.2017, 3:00 AM       No Comments

ಗಡಿಯಲ್ಲಿ ಕಾಯುವ ಯೋಧರು ನಮಗಾಗಿಯೇ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿದ್ದಾರೆ. ಕ್ಷಣ-ಕ್ಷಣಕ್ಕೂ ಹೊಸ ಸವಾಲುಗಳೊಂದಿಗೆ ಹೋರಾಡುತ್ತ, ಹವಾಮಾನ ವೈಪರೀತ್ಯವನ್ನು ಎದುರಿಸುತ್ತ ದೇಶದ ರಕ್ಷಣೆ ಮಾಡುತ್ತಾರೆ. ಇವರ ಈ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುವಷ್ಟು, ಶ್ಲಾಘಿಸುವಷ್ಟು ಸಂವೇದನೆಯಾದರೂ ಈ ಸಮಾಜಕ್ಕೆ ಬೇಕಲ್ಲವೇ?

 

ಕಳೆದ ಕೆಲವರ್ಷಗಳಿಂದ ಕಾಶ್ಮೀರದಲ್ಲಿ ಉಗ್ರರ ಉಪಟಳ ಮೀತಿಮೀರಿದೆ. ಕಳೆದ ವರ್ಷ ಪಠಾಣ್​ಕೋಟ್ ಮತ್ತು ಉರಿಯಲ್ಲಿರುವ ಸೇನಾ ನೆಲೆಗಳ ಮೇಲೆಯೇ ದಾಳಿ ನಡೆಸಿದ್ದ ಉಗ್ರರು ಹತ್ತಾರು ಸೈನಿಕರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರೆದೆಯಲ್ಲಿ ನಡುಕ ಹುಟ್ಟಿಸಿದ ಪರಿ ಮಾತ್ರ ನಿಜಕ್ಕೂ ಅಸಾಧಾರಣ. ಆದರೆ ಇದಕ್ಕೆ ತಿರುಗೇಟು ನೀಡಲು ಉಗ್ರರು ಕಂಡುಕೊಂಡಿರುವ ದಾರಿ ಮಾತ್ರ ನಾಚಿಕೆಗೇಡಿನದ್ದು. ಎದುರಿಗೆ ಬಂದು ಹೋರಾಡಲು ಧೈರ್ಯವಿಲ್ಲದ ಉಗ್ರರು ಬೆನ್ನ ಹಿಂದೆ ಚೂರಿ ಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಇತ್ತೀಚೆಗೆ ಹುತಾತ್ಮನಾದ ಸೈನಿಕ ಉಮರ್ ಸಾವೇ ಇದಕ್ಕೆ ಪ್ರಮುಖ ಸಾಕ್ಷಿ. ಸಂಬಂಧಿಯ ಮದುವೆಗಾಗಿ ರಜೆಯ ಮೇಲೆ ತೆರಳಿದ್ದ ಯೋಧನನ್ನು ಮದುವೆ ಮನೆಯಿಂದಲೇ ಅಪಹರಿಸಿದ ಉಗ್ರರು ಆತನಿಗೆ ಚಿತ್ರಹಿಂಸೆ ನೀಡಿ ಸಾಯಿಸಿದರು.

ಪಾಕಿಸ್ತಾನ ಸೇನೆಯೂ ಉಗ್ರರ ನೆರಳಿನಲ್ಲಿ ನಿಂತು ಪೈಶಾಚಿಕತೆ ಮೆರೆಯುತ್ತಿದೆ. ಕಳೆದ ತಿಂಗಳು ಕಾಶ್ಮೀರದ ಪೂಂಛ್ ಗಡಿಭಾಗದಲ್ಲಿ ಒಳನುಸುಳಿದ್ದ ಪಾಕಿಸ್ತಾನ ಸೇನೆಯ ವಿಶೇಷ ತಂಡದ ಅಧಿಕಾರಿಗಳು ಅಮಾನುಷವಾಗಿ ಭಾರತೀಯ ಯೋಧರಿಬ್ಬರ ಶಿರಚ್ಛೇದನ ಮಾಡಿದ್ದರು. ಇದು ದೇಶವನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಪಾಕ್​ನ ಈ ಧಾಷ್ಟ್ಯ್ಕೆ ಸೂಕ್ತ ಉತ್ತರ ನೀಡುವುದಾಗಿ ಕೇಂದ್ರ ಸರ್ಕಾರವೂ ಹೇಳಿತು. ದೇಶದ ಜನರು ಕೂಡ ಪಾಕ್ ಕೃತ್ಯವನ್ನು ಖಂಡಿಸಿ, ಪಾಕ್​ಗೆ ತಕ್ಕ ಶಾಸ್ತಿ ಮಾಡಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಈಗ ಪರಿಸ್ಥಿತಿ ಹೇಗಿದೆ? ಇದರ ಅವಲೋಕನಕ್ಕೆಂದೆ ಇತ್ತೀಚೆಗಷ್ಟೇ ಶ್ರೀನಗರಕ್ಕೆ ಭೇಟಿ ನೀಡಿದೆ.

ಅಲ್ಲಿಂದ ಮರಳಿದ ಬಳಿಕ ಪ್ರಶ್ನೆಯೊಂದು ನಿರಂತರವಾಗಿ ನನ್ನನ್ನು ಕಾಡುತ್ತಿದೆ. ಗಡಿಯಲ್ಲಿ ದೇಶ ಕಾಯುತ್ತಿರುವ ಯೋಧರು ಯಾರಿಗಾಗಿ ಪ್ರಾಣವನ್ನು ಮುಡಿಪಾಗಿಟ್ಟು, ರಾತ್ರಿ ಹಗಲೆನ್ನದೆ, ವಾತಾವರಣದ ವಿಕೋಪ ಪರಿಸ್ಥಿತಿಗಳಲ್ಲೂ ಗಡಿಯಲ್ಲಿ ವಿಚಲಿತರಾಗದೆ ಕಾಯುತ್ತಿದ್ದಾರೆ.

ಶ್ರೀನಗರದಿಂದ ಮರಳಿದ ಬಳಿಕ ಇಂತಹದ್ದೊಂದು ಭಾವ ಆತ್ಮಸಾಕ್ಷಿಯನ್ನೇ ಅಲುಗಾಡಿಸುತ್ತಿದೆ. ಇದರಿಂದ ಹೊರಬರುವುದಕ್ಕಾಗಿ ದೆಹಲಿಗೆ ತೆರಳಿದರೂ ಪ್ರಯೋಜನವಾಗಿಲ್ಲ. ದೆಹಲಿಯೆಂದರೆ ಭಿನ್ನ ಸಂಸ್ಕೃತಿಯ, ಅಭಿರುಚಿಯ ಜನರಿರುವ ಪ್ರದೇಶ. ಅಲ್ಲಿ ಶಾಂತಿ, ಅಶಾಂತಿ, ನೋವು, ನಲಿವು ಎಲ್ಲವನ್ನೂ ಕೇಳಲು, ಕಾಣಲು ಸಾಧ್ಯವಿದೆ. ರೈತರು, ಕಾರ್ವಿುಕರ ಸಮಸ್ಯೆ, ಅಧ್ಯಾಪಕರ, ಮನೆ ಕಳೆದುಕೊಂಡವರ ದುಃಖವನ್ನು ಕಾಣಬಹುದು. ಶೋಷಣೆಗೊಳಗಾದ ಮಹಿಳೆಯರು, ಮಕ್ಕಳು ಮತ್ತು ದಲಿತರು, ಪ್ರತಿಭಟನೆ ನಡೆಸುತ್ತಿರುವವರು ಹೀಗೆ ಎಲ್ಲರೂ ತಮ್ಮ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ದೆಹಲಿಯತ್ತ ಮುಖ ಮಾಡುತ್ತಾರೆ. ಆದರೆ ಗಡಿ ಕಾಯುತ್ತಿರುವ ಯೋಧನ ಬಗ್ಗೆ ಯಾರು ತಲೆಕೆಡಿಸಿಕೊಂಡಿದ್ದಾರೆ? ಅವರಲ್ಲಿ ಆತ್ಮಸ್ಥೈರ್ಯ ತುಂಬುವಂಥ ಕೆಲಸ ಯಾರು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರ ಸಿಗುವುದು ಕಷ್ಟವಾಗಿಬಿಟ್ಟಿದೆ.

ಮಾಧ್ಯಮಗಳಲ್ಲೂ ಅಷ್ಟೇ ಪ್ರಿಯಾಂಕ ಚೋಪ್ರಾರ ನೂತನ ಗ್ಲಾಮರಸ್ ಡ್ರೆಸ್, ರೋಹಿತ್ ವೇಮುಲರ ಯುವ ಸಂಘಟನೆಯಿಂದ ರಸ್ತೆ ತಡೆ ಅಭಿಯಾನ, ಯಾವುದೋ ವಿವಿಐಪಿ ಅತ್ತೆಗೆ ಸಿಕ್ಕಿದ ಸರ್ಕಾರಿ ಸುರಕ್ಷತೆ, ಗೋರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಂಡ ಕಾರಣಕ್ಕೆ ‘ಜಾತ್ಯತೀತ’ರಿಂದ ವ್ಯಕ್ತವಾಗುತ್ತಿರುವ ಆಕ್ರೋಶ ಮುಂತಾದ ಸುದ್ದಿಗಳೇ ರಾರಾಜಿಸುತ್ತಿವೆ.

ಈ ವರದಿಗಳಲ್ಲಿ ಎಲ್ಲಿಯೂ ಗಡಿಯಲ್ಲಿ ಶಿರಚ್ಛೇದನಕ್ಕೊಳಗಾದ ಸೈನಿಕನ ಬಗ್ಗೆ, ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ಹತನಾದ ಸೈನಿಕ ಉಮರ್ ಫಯಾಜ್​ನ ತಾಯಿ ಅಥವಾ ಸಹೋದರಿಯರ ನೋವಿನ ಬಗ್ಗೆ ವಿವರಣೆಗಳು ಕಂಡುಬರಲಿಲ್ಲ. ದೇಶದ ಸೇವೆ ಮಾಡಬೇಕೆಂಬ ಅನನ್ಯ ತುಡಿತದಿಂದ ಭಾರತ ಸೇನೆಗೆ ಭರ್ತಿಯಾಗಿದ್ದ ಉಮರ್ ಇನ್ನೂ 23 ವರ್ಷದ ಯುವಕ. ಉತ್ಸಾಹ, ಲವಲವಿಕೆಯ ಖಣಿಯಾಗಿದ್ದ ಆತ ಇತ್ತೀಚೆಗಷ್ಟೇ ಸಂಬಂಧಿಕರ ಮದುವೆಗೆಂದು ಊರಿಗೆ ತೆರಳಿದ್ದ. ಈ ವೇಳೆ ಆತನನ್ನು ಅಪಹರಿಸಿದ ಉಗ್ರರು ಚಿತ್ರಹಿಂಸೆ ನೀಡಿ ಹತ್ಯೆಗೈದರು. ಆದರೆ ಇಂತಹ ವಿಚಾರಗಳ ಬಗ್ಗೆ ಆಕ್ರೋಶ ಹೊರಹಾಕಲು ‘ಮಾನವ ಹಕ್ಕು ಪ್ರತಿಪಾದಕರಿಗೆ’ ಸಮಯವೇ ಇಲ್ಲ. ಇಂಡಿಯಾ ಗೇಟ್​ನ ರಾಜ್​ಘಾಟ್ ಬಳಿ ಗೋಭಕ್ಷಣೆ ಪರವಾಗಿ ನಡೆಯುವ ಆಂದೋಲನಗಳಲ್ಲಿ ಮಾತ್ರ ಇವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಾರೆ! ಇವರಿಗೆ ಅದ್ಯಾಕೆ ಸೈನಿಕರ ನೋವು ಅರ್ಥವಾಗುವುದಿಲ್ಲವೋ ದೇವರೇ ಬಲ್ಲ. ಎಲ್ಲವನ್ನೂ ಸ್ವಹಿತಾಸಕ್ತಿಯ ಕನ್ನಡಕದಿಂದ ಕಾಣುವ ಇಂಥವರಿಗೆ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸುವ ತ್ಯಾಗಜೀವಿಗಳ ಮೌಲ್ಯ ಅರಿವಿಗೆ ಬರುವುದಾರೂ ಹೇಗೆ?

ಈ ಸೈನಿಕರು ಯಾರಿಗಾಗಿ ಬದುಕಿದರು? ಯಾರಿಗಾಗಿ ಹುತಾತ್ಮರಾದರು? ಉಮರ್ ಫಯಾಜ್ ದೇಶದ ಹೆಮ್ಮೆಯ ಪುತ್ರನಲ್ಲವೇ? ಯಾವ ಕಾರಣಕ್ಕಾಗಿ ಆತ ಇಷ್ಟೊಂದು ನೋವನ್ನು ಅನುಭವಿಸುವಂತಾಯಿತು? ಈ ಪ್ರಶ್ನೆಗಳಿಗೆ ಉತ್ತರಿಸಲು ಅಥವಾ ಉತ್ತರ ಹುಡುಕುವ ಪ್ರಯತ್ನವನ್ನು ಕೂಡ ಯಾರೂ ಮಾಡುತ್ತಿಲ್ಲ. ಯಾಕೆ? ಸೈನಿಕರು ವೇತನ ಪಡೆದುಕೊಳ್ಳುವುದೇ ಯಾವುದೇ ವಿಕೋಪ ವಾತಾವರಣದಲ್ಲಿಯೂ ಬಂಕರ್​ಗಳಲ್ಲಿ ನೆಲೆಸುವುದಕ್ಕೆ ಎಂಬ ಉಡಾಫೆಯೇ? ಗುಂಡಿಗೆ ಎದೆಯೊಡ್ಡಿ ನಿಲ್ಲುವುದು ಅವರ ಸೇವಾ ಷರತ್ತುಗಳಲ್ಲಿ ಒಂದು. ಹೀಗಿರುವಾಗ ಅವರು ಹುತಾತ್ಮರಾದರೆ ಅದು ಅವರ ಕೆಲಸದ ಒಂದು ಭಾಗ ಮಾತ್ರ ಎಂದು ಅಂದುಕೊಳ್ಳಲು ಸಾಧ್ಯವೇ? ಅವರು ನಿದ್ದೆಗೆಟ್ಟು ಕಾಯುತ್ತಿರುವುದು ನಮ್ಮ ದೇಶವನ್ನು, ನಮ್ಮೆಲ್ಲರ ಪ್ರಾಣವನ್ನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಒಂದು ವೇಳೆ ಉಮರ್ ಬದುಕಿದ್ದರೆ ಅಥವಾ ಅವನಂತೆ ದೇಶಕ್ಕಾಗಿ ಹುತ್ಮಾತ್ಮರಾದ ಸೈನಿಕರು ಪತ್ರವನ್ನು ಬರೆಯಲು ಸಾಧ್ಯವಿದ್ದಿದ್ದರೆ ಅದರಲ್ಲಿ ಈ ಅಂಶಗಳು ಇರುತ್ತಿದ್ದವೇನೋ..

ಓ ನನ್ನ ಗೆಳೆಯನೇ,

ನಾವಿಬ್ಬರೂ 18ನೇ ವಯಸ್ಸಿನಲ್ಲಿ ಜತೆಯಾಗಿಯೇ ಮನೆಯಿಂದ ಹೊರಬಂದಿದ್ದೆವು. ನೀನು ಜೆಇಇ ಪರೀಕ್ಷೆ ಬರೆದರೆ ನಾನು ಎನ್​ಡಿಎ ಪರೀಕ್ಷೆ ಬರೆದೆ. ನನಗೆ ಸೈನ್ಯದಲ್ಲಿ ಅಧಿಕಾರಿಯಾಗಬೇಕಿತ್ತು. ನಿನಗೆ ಡಿಗ್ರಿಗಳ ಗರಿಮೆ ದೊರೆಯುತ್ತ ಹೋದರೆ ನನ್ನ ಭುಜದಲ್ಲಿ ರ್ಯಾಂಕ್​ಗಳು ಸೇರಿಕೊಳ್ಳುತ್ತಾ ಹೋದವು. ನಿನಗೆ ಉತ್ತಮ ವೇತನ ಕೊಡುವ, ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದರೆ, ಸರ್ವಶ್ರೇಷ್ಠ ಪರಾಕ್ರಮ ತೋರುವ ಅವಕಾಶವಿರುವ ಸೇನೆಯಲ್ಲಿ ನನಗೆ ಕೆಲಸ ಸಿಕ್ಕಿತು. ನಿನ್ನ ಪರಿವಾರದ ಪ್ರತಿಯೊಬ್ಬ ಸದಸ್ಯನೂ ನಿನ್ನನ್ನು ಭೇಟಿಯಾಗಲು ಬರುತ್ತಾನೆ. ಆದರೆ ನಾನು ಸದ್ಯದಲ್ಲೇ ಅಪ್ಪ-ಅಮ್ಮನನ್ನು ನೋಡುತ್ತೇನೇನೋ ಎಂದು ಆಸೆಗಣ್ಣಿನಿಂದ ನೋಡುತ್ತಲೆ ಇದ್ದೆ. ನೀನು ದೀಪಾವಳಿ, ಹೋಳಿ ಹಬ್ಬಗಳನ್ನು ಪಟಾಕಿ ಮತ್ತು ಬಣ್ಣಗಳ ನಡುವೆ ಆಚರಿಸಿಕೊಂಡರೆ ನಾನು ಗುಂಡಿನ ಸುರಿಮಳೆಯ ನಡುವೆ ರಕ್ತದ ಧಾರೆಗಳಲ್ಲೇ ಸ್ನಾನ ಮಾಡುತ್ತಿದ್ದೆ. ನಿನ್ನ ಮದುವೆಯಾಯಿತು, ಪತ್ನಿಯೊಂದಿಗೆ ಹಲವೆಡೆ ಸುತ್ತಿ ಬಂದೆ. ನಾನು ನನ್ನ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳುವುದಕ್ಕೂ ಹೋಗಲಾಗದಂತಹ ಸ್ಥಿತಿ. ನಾವಿಬ್ಬರೂ ಮನೆಗೆ ಹಿಂತಿರುಗಿದ್ದೇವೆ. ನಮ್ಮಿಬ್ಬರನ್ನೂ ಮನೆಯವರು ಸ್ವಾಗತಿಸಿದ್ದಾರೆ. ನೀನು ನಿನ್ನ ಐಷಾರಾಮಿ ಕಾರಿನಿಂದ ಗತ್ತಿನಿಂದ ಇಳಿದರೆ, ನಾನು ಬ್ಯಾಂಡ್​ವಾದ್ಯದ ಮೂಲಕ ಬಂದೆ. ನನ್ನ ಶವದ ಮೇಲೆ ತ್ರಿವರ್ಣ ಧ್ವಜ ಹೊದಿಸಲಾಯಿತ್ತು. ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

***

ಈ ಮನದಾಳದ ಮಾತುಗಳು ನನ್ನನ್ನು ಅಲುಗಾಡಿಸಿವೆ. ಹಲವು ಪ್ರಶ್ನೆಗಳನ್ನು ನನ್ನ ಮುಂದಿಟ್ಟಿವೆ. ನಿಮ್ಮಲ್ಲಾದರೂ ಈ ಪ್ರಶ್ನೆಗಳಿಗೆ ಉತ್ತರವಿದೆಯೇ?

 

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top