Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಸೇನೆಯನ್ನೇ ಟೀಕಿಸುವ ರಾಜಕಾರಣಿಗಳ ಬಗ್ಗೆ ಏನಂತೀರಿ?

Monday, 10.07.2017, 3:00 AM       No Comments

ಅಮೆರಿಕ, ಫ್ರಾನ್ಸ್, ಬ್ರಿಟನ್ ಮುಂತಾದ ರಾಷ್ಟ್ರಗಳಲ್ಲಿ ಸೈನಿಕರನ್ನು ವಿಶೇಷ ಗೌರವಾದರಗಳೊಂದಿಗೆ ನೋಡಿಕೊಳ್ಳಲಾಗುತ್ತದೆ. ಅದೇ ಭಾರತದ ವಿಚಾರ ಬಂದಾಗ ಸೈನಿಕರೆಂದರೆ ಅಂತಹ ಅಸಡ್ಡೆ ಏಕೆ? ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣಮುಡಿಪಾಗಿಟ್ಟಿರುವ ಸೈನಿಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಅವರನ್ನು ಅವಮಾನಿಸುವುದು ಎಷ್ಟು ಸರಿ?

ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಸೈನ್ಯಕ್ಕೆ, ಸೈನಿಕರಿಗೆ ವಿಶೇಷವಾದ ಗೌರವಗಳು ಸಲ್ಲಿಕೆಯಾಗುವುದನ್ನು ಕಾಣಬಹುದಾಗಿದೆ. ಆದರೆ ಭಾರತದಲ್ಲಿ ಮಾತ್ರ ಸೇನೆಯ ಬಗ್ಗೆ ಕೆಲವರು ಅನಾವಶ್ಯಕ ಟೀಕೆ ಮಾಡುವ ಮೂಲಕ ವಿವಾದ ಸೃಷ್ಟಿಸಲು ಬಯಸುತ್ತಾರೆ. ಭಾರತದಲ್ಲಿ ಸೇನೆಯ ವಿರುದ್ಧ ನೀಡುವ ಹೇಳಿಕೆಗಳನ್ನು ಪ್ರಚಾರಕ್ಕಿರುವ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತದೆ. 2013ರಲ್ಲಿ ಆಂಗ್ಲ ಭಾಷೆಯ ಭಾರತೀಯ ಬರಹಗಾರ್ತಿಯೊಬ್ಬರು ಬರೆದ ವರದಿ ಇದಕ್ಕೆ ಪ್ರಮುಖ ಉದಾಹರಣೆ. ಆಕೆ ಬರೆಯುತ್ತಾರೆ, ‘ಛತ್ತೀಸ್​ಗಢದ ಸಮೀಪದಲ್ಲಿ ಸೇನೆಯೂ ಬಡ ನಕ್ಸಲರನ್ನು ಹತ್ಯೆಗೈಯ್ಯುವುದಕ್ಕಾಗಿ ಸ್ಥಳೀಯ ಶಾಲೆಯನ್ನು ಸೈನಿಕರ ಕೇಂದ್ರ ಗಳನ್ನಾಗಿ ಬದಲಾಯಿಸಿದೆ’ ಎಂದು. ಸೇನೆ ಸರ್ಜಿಕಲ್ ದಾಳಿ ನಡೆಸಿದಾಗಲೂ ಸೈನಿಕರ ಸಾಹಸವನ್ನು ಪ್ರಶಂಸಿಸುವ ಬದಲು ಆ ಬಗ್ಗೆಯೇ ಪ್ರಶ್ನೆಗಳನ್ನೆತ್ತಲಾಯಿತು, ಇನ್ನೆಷ್ಟೋ ಜನರು ತಮಾಷೆ, ಲೇವಡಿ ಮಾಡಿದರು. ಅದೇ ಸೇನೆ ಕಾಶ್ಮೀರದಲ್ಲಿ ಶಾಲೆ ಆರಂಭಿಸಿದಾಗ, ಅಲ್ಲಿನ ಯುವಕರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸಿದಾಗ ಯಾರೂ ಮಾತನಾಡಲಿಲ್ಲ. ಒಳ್ಳೆಯ ಕಾರ್ಯ ಮಾಡುತ್ತಿದೆಯೆಂಬ ಶ್ರೇಯ ನೀಡಲಿಲ್ಲ.

ಇದೆಂಥ ಧೋರಣೆ?: ರಾಜಕೀಯ ನಾಯಕರೊಬ್ಬರ ಬಗೆಗೆ ವಿವಾದಾತ್ಮಕ ವ್ಯಂಗ್ಯಚಿತ್ರ ರಚಿಸಿವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಹುಲ್ ಗಾಂಧಿಯನ್ನು ಅವರ ಪಕ್ಷದ ಜಿಲ್ಲಾಧ್ಯಕ್ಷರೊಬ್ಬರು ‘ಪಪ್ಪು’ ಎಂದು ಕರೆದಿದ್ದಕ್ಕೆ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಆದರೆ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರಿಗೆ ಶಿಕ್ಷೆಯಾಗಿದೆಯೇ? ಅಂತಹ ಯಾವುದೇ ಉದಾಹರಣೆ ನಮಗೆ ಕಾಣಸಿಗುವುದಿಲ್ಲ. ದೆಹಲಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಇತ್ತೀಚೆಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್​ರನ್ನು ‘ಗಲ್ಲಿಯ ಗೂಂಡಾ’ ಎಂದು ಜರೆದರು. ಸೇನೆಯ ಅತ್ಯುನ್ನತ ಸ್ಥಾನದಲ್ಲಿರುವ ಬಿಪಿನ್ ಬಗ್ಗೆ ಇಂತಹ ಹೇಳಿಕೆ ನೀಡಿದಾಗ ಯಾರೂ ಪ್ರಶ್ನಿಸಲಿಲ್ಲ. ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಸಿಪಿಐನ ಬೃಂದಾ ಕಾರಟ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಸಂದೀಪ್ ದೀಕ್ಷಿತ್ ಹೇಳಿಕೆಯನ್ನು ಸಮರ್ಥಿಸಿಕೊಂಡರು! ಸಮಾಜವಾದಿ, ಬಿಎಸ್​ಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಡಿಎಂಕೆ, ಪಿಡಿಪಿ, ಅಕಾಲಿದಳ, ಬಿಜು ಜನತಾ ದಳ, ಜೆಡಿಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯೋಚಿಸಿ ನೋಡಿ, ಇದೇ ಹೇಳಿಕೆಯನ್ನು ಮೇಲೆ ಉಲ್ಲೇಖಿಸಿರುವ ಪಕ್ಷಗಳ ಹಿರಿಯ ನಾಯಕರೊಬ್ಬರ ಬಗೆಗೆ ಹೇಳಿದ್ದರೆ ಏನಾಗುತ್ತಿತ್ತು? ಹೇಳಿಕೆ ನೀಡಿದವನ ಮುಖಕ್ಕೆ ಇಂಕು ಎರಚಲಾಗುತ್ತಿತ್ತು. ಪ್ರತಿಭಟನೆಗಳು ನಡೆಯುತ್ತಿದ್ದವು, ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗುತ್ತಿತ್ತು, ಸರ್ಕಾರವೇ ಮಧ್ಯಪ್ರವೇಶಿಸುವ ಅಗತ್ಯ ಎದುರಾಗುತ್ತಿತ್ತು, ಅವಹೇಳನಕಾರಿಯಾದ ಹೇಳಿಕೆ ನೀಡಿದವನು ಒಂದೋ ಜೈಲು ಕಂಬಿ ಎಣಿಸಬೇಕಾಗುತ್ತಿತ್ತು, ಇಲ್ಲವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕಾಗುತ್ತಿತ್ತು. ಆದರೆ ಬಿಪಿನ್ ರಾವತ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಂದೀಪ್ ದೀಕ್ಷಿತ್ ಇಂತಹ ಯಾವುದೇ ಶಿಕ್ಷೆಗೆ ಗುರಿಯಾಗಲಿಲ್ಲ. ನನ್ನದೇ ಅನುಭವವನ್ನು ಹೇಳುವುದಾದರೆ ಲೋಕಸಭೆಯಲ್ಲಿ ನಾನು ಬಳಸಿದ ‘ಕಪ್ಪು’ ಎಂಬ ಶಬ್ದದಿಂದ ಲೋಕಸಭೆ ಕಲಾಪವನ್ನೇ ನಡೆಯಲು ಬಿಡದೆ ಸ್ಥಗಿತಗೊಳಿಸಲಾಯಿತು. ‘ಸೆಕ್ಯುಲರ್’ಗಳು ಎಂದು ಹೇಳಿಕೊಳ್ಳುವವರು ಹಗಲು-ರಾತ್ರಿಯೆನ್ನದೆ ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಸಿದರು. ಆದರೆ ಸೇನಾ ಮುಖ್ಯಸ್ಥರ ಬಗ್ಗೆ ಹೇಳಿಕೆ ನೀಡಿದ ಸಂದೀಪ್ ಆಗಲಿ ಬೃಂದಾ ಆಗಲಿ ಇಬ್ಬರಿಗೂ ಇಂತಹ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭವೇ ಬರಲಿಲ್ಲ. ಆರಾಮವಾಗಿ ‘ರಾಜಕೀಯ’ ಮಾಡಿಕೊಂಡಿದ್ದರು.

ದೇಶಭಕ್ತ ಕುಟುಂಬ: ಉತ್ತರಾಖಂಡದ ಗರ್ವಾಲ್ ಜಿಲ್ಲೆಯವರಾದ ಬಿಪಿನ್ ರಾವತ್ ಅವರದ್ದು ದೇಶಕ್ಕಾಗಿ ಸೇವೆ ಮಾಡಿದ ಸೈನಿಕರ ಕುಟುಂಬ. ಅವರ ತಂದೆ ಜನರಲ್ ಲಕ್ಷ್ಮಣ ರಾವತ್ ಸೇನೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅಷ್ಟೇ ಅಲ್ಲ, ಬಿಪಿನ್ ಸಹೋದರ ಕರ್ನಲ್ ಆಗಿದ್ದರು. 1978ರ ಡಿಸೆಂಬರ್​ನಲ್ಲಿ ಡೆಹ್ರಾಡೂನ್​ನಲ್ಲಿರುವ ಭಾರತೀಯ ಸೇನಾ ಅಕಾಡೆಮಿಯಿಂದ ತರಬೇತಿ ಪಡೆದು ಬಂದ ಬಿಪಿನ್ ಅವರಿಗೆ ‘ಸೋರ್ಡ್ ಆಫ್ ಆನರ್’ ನಿಂದ ಗೌರವಿಸಲಾಗಿತ್ತು. ಯುವ ಸೈನಿಕರಾಗಿದ್ದ ಬಿಪಿನ್ ಅತಿ ಎತ್ತರದ ಅರಣ್ಯ ಪ್ರದೇಶಗಳಲ್ಲಿ ಭಯೋತ್ಪಾದಕರ ವಿರುದ್ಧದ ವಿಶಿಷ್ಟ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಜಮ್ಮು-ಕಾಶ್ಮೀರದಲ್ಲಿ ಕಠಿಣ ಸನ್ನಿವೇಶಗಳಲ್ಲೂ ಸೇವೆ ಸಲ್ಲಿಸಿದರು. ಅವರ ಪರಾಕ್ರಮ, ಸಾಹಸಗಳಿಗಾಗಿ ಅವರಿಗೆ ಸೇನಾ ಯುದ್ಧ ಮೆಡಲ್, ಅತಿವಿಶಿಷ್ಟ ಸೇನಾ ಮೆಡಲ್ ಸೇರಿದಂತೆ ಹಲವು ಗೌರವಗಳು ಲಭ್ಯವಾಗಿವೆ. ಇಂತಹ ಹೆಗ್ಗಳಿಕೆಗಳು ಸೈನಿಕನೊಬ್ಬನಿಗೆ ವಯಸ್ಸಾಗುತ್ತಿದ್ದಂತೆ ನೀಡಲಾಗುವುದಲ್ಲ, ಆತನ ಸಾಹಸ, ಪರಾಕ್ರಮ ನೋಡಿ ಕೊಡುವಂಥದ್ದು. ರಾಜಕೀಯದಲ್ಲಿ ಮಾತ್ರ ರಾಜಕಾರಣಿಗಳಿಗೆ ಮತ್ತವರ ಮಕ್ಕಳಿಗೆ ವಯಸ್ಸಾಗುತ್ತಿದ್ದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ. ಸೈನಿಕರು ಇಂತಹ ಗೌರವಾದರಗಳಿಗೆ ಪಾತ್ರರಾಗುವುದಕ್ಕೆ ಅತ್ಯಂತ ಕಠಿಣ ಪರೀಕ್ಷೆಗಳು ಮತ್ತು ಕರ್ತವ್ಯನಿರತರಾಗಿದ್ದಾಗ ಪರಾಕ್ರಮ ಮೆರೆಯಬೇಕಾಗಿರುತ್ತದೆ. ಜನರಲ್ ರಾವತ್ 11 ಗೋರ್ಖಾ ರೈಫಲ್​ನ ಕರ್ನಲ್ ಕೂಡ ಆಗಿದ್ದರು. ನಿರರ್ಗಳವಾಗಿ ನೇಪಾಳಿ ಮಾತನಾಡಬಲ್ಲರು ಮತ್ತು ಎಂಫಿಲ್, ಪಿಎಚ್​ಡಿಯನ್ನೂ ಪಡೆದುಕೊಂಡಿದ್ದಾರೆ. ಇಂತಹ ಸೈನಿಕನೊಬ್ಬನ ಬಗ್ಗೆ, ಮಹಾನ್ ದೇಶಭಕ್ತನ ಬಗ್ಗೆ ಸಂದೀಪ್ ಅಂತಹ ಹೇಳಿಕೆ ನೀಡಿದ್ದು ಸರಿಯೇ?

ಇಂತಹ ವಿವಾದಾತ್ಮಕ ಹೇಳಿಕೆಗಳಿಂದಲೇ ರಾಜಕೀಯದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹೆಣಗುತ್ತಿರುವ ಸಂದೀಪ್ ದೀಕ್ಷಿತ್, ಬೃಂದಾ ಕಾರಟ್ ಮುಂತಾದವರಿಗೆ ಸೈನಿಕರ ಜೀವನದ ಏಳುಬೀಳುಗಳು ಹೇಗೆ ಅರ್ಥವಾಗಬೇಕು? ಯುದ್ಧಕ್ಕೆ, ಮಹತ್ವದ ಕಾರ್ಯಾಚರಣೆಗೆ ಹೊರಟಾಗ ತ್ರಿವರ್ಣ ಧ್ವಜವನ್ನು ಹಾರಿಸುವ ಅವಕಾಶ ಸಿಗುವುದೇ ಅಥವಾ ಅದೇ ಧ್ವಜ ಅವರ ಮೃತದೇಹದ ಮೇಲಿರುತ್ತದೆಯೇ ಎನ್ನುವುದು ಅವರಿಗೇ ತಿಳಿದಿರುವುದಿಲ್ಲ. ಇಂತಹ ಸೈನಿಕರ ಬಗ್ಗೆ ಅಹಂಕಾರ ತುಂಬಿಕೊಂಡಿರುವ ಜನರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾರೆಂದಾದರೆ ಅದನ್ನು ದೇಶದ ದೌರ್ಭಾಗ್ಯ ಎಂದೇ ಹೇಳಬೇಕಷ್ಟೆ. ಕಮ್ಯೂನಿಸ್ಟ್​ಗಳೆಂದು ಹೇಳಿಕೊಳ್ಳುವವರು ಸೇನಾ ವಿರೋಧಿಗಳಂತೆಯೆ ವರ್ತಿಸುತ್ತಾರೆ. 1962ರಲ್ಲಿ ಚೀನಾಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಸಾವಿರಾರು ಕಮ್ಯೂನಿಸ್ಟ್ ನಾಯಕರನ್ನು ದೇಶದ್ರೋಹದ ಕಾನೂನಿನಡಿಯಲ್ಲಿ ಬಂಧಿಸುವಂತೆ ಜವಾಹರಲಾಲ್ ನೆಹರು ಆದೇಶಿಸಿದ್ದರು ಎಂಬುದನ್ನು ಈ ದೇಶ ಮರೆತು ಬಿಟ್ಟಿದೆಯೇ? ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರು ಮೃತರಾದಾಗ ಕಾಂಗ್ರೆಸ್ ಸರ್ಕಾರ ಅವರನ್ನು ಅವಮಾನಿಸಿತು. ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ವಿಶ್ವದ ಮಹಾನ್ ಸೈನಿಕರಲ್ಲಿ ಒಬ್ಬರೆನಿಸಿಕೊಂಡವರು. 1971ರ ಯುದ್ಧವನ್ನು ಅವರ ನೇತೃತ್ವದಲ್ಲೇ ಗೆದ್ದಿದ್ದೆವು. ಅಂತಹ ಮಹಾನ್ ನಾಯಕ 2008ರ ಜೂನ್ 27ರಂದು ತಮ್ಮ 94ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಸ್ವತಂತ್ರ ಭಾರತದ ಪ್ರಥಮ ಯುದ್ಧ ವಿಜೇತ ಸೇನಾನಿಯ ಅಂತಿಮ ಸಂಸ್ಕಾರಕ್ಕೆ ಭಾರತೀಯ ಸೇನೆಗಳ ಸವೋಚ್ಚ ಕಮಾಂಡರ್ ರಾಷ್ಟ್ರಪತಿ ತೆರಳಲಿಲ್ಲ. ಪ್ರಧಾನಿಯಾಗಲಿ, ರಕ್ಷಣಾ ಸಚಿವರಾಗಲಿ ಹೋಗಲಿಲ್ಲ. ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಸ್ಟಾಫ್ ಕಮಿಟಿಯ ಮುಖ್ಯಸ್ಥರೂ ಅಲ್ಲಿರಲಿಲ್ಲ.

ಭಾರತೀಯ ಸೈನಿಕರದ್ದು ಅಡಕತ್ತರಿಯಲ್ಲಿನ ಬದುಕು, ಒಂದು ಕಡೆ ಪಾಕಿಸ್ತಾನ ಮತ್ತು ಅದರ ಹಣದಿಂದ ಬೆಳೆಯುತ್ತಿರುವ ಉಗ್ರರ ಕಲ್ಲುತೂರಾಟವನ್ನು, ದಾಳಿಗಳನ್ನು ಹಿಮ್ಮೆಟ್ಟಿಸಬೇಕು. ಮತ್ತೊಂದು ಕಡೆ ದೆಹಲಿಯಲ್ಲಿ ರಾಜಕಾರಣಿಗಳು ಮಾಡುವ ಅವಹೇಳನಕಾರಿ ಹೇಳಿಕೆಗಳೆಂಬ ಕಲ್ಲೇಟನ್ನೂ ಅರಗಿಸಿಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ಸೈನಿಕರು ಭಾರತ ರಕ್ಷಣೆಯ ಜವಾಬ್ದಾರಿಯನ್ನು ಹೇಗೆ ಸಮರ್ಥವಾಗಿ ನಿಭಾಯಿಸಬಲ್ಲರು? ಸೇನೆಯಲ್ಲಿರುವ ಸೈನಿಕರು ಬೇರೆ ಗ್ರಹದಿಂದ ಆಗಮಿಸಿರುವವರೇ, ಅವರಿಗೂ ನಮಗೂ ಯಾವ ರೀತಿಯ ಸಂಬಂಧವಿಲ್ಲವೇ? ದೊಡ್ಡ ಮನುಷ್ಯರು ಎನಿಸಿಕೊಂಡವರು ಸೈನಿಕರ ಮೇಲೆ ಆಗುತ್ತಿರುವ ಟೀಕೆಗೆ ಮೌನವಾಗಿರುವ ಮೂಲಕ ವಿಶ್ವಾಸಘಾತ ಮಾಡುತ್ತಿಲ್ಲವೇ? ದೇಶದ ರಕ್ಷಣೆಗಾಗಿ ರಾತ್ರಿ-ಹಗಲೆನ್ನದೆ ಗಡಿ ಕಾಯುವ ಯೋಧರಿಗೆ ಸಲ್ಲಬೇಕಾದ ಗೌರವವನ್ನು ನೀಡಬೇಕು, ಅವರ ಆತ್ಮಸ್ಥೈರ್ಯ, ಮನೋಬಲ ಹೆಚ್ಚಿಸುವಂಥ ಕೆಲಸ ನಡೆಯಬೇಕೆ ವಿನಾ ಟೀಕೆಗಳಿಂದ ಅವರನ್ನು ಕುಗ್ಗಿಸಬಾರದು ಎಂಬುದನ್ನು ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಂಡರೆ ಅದರಿಂದ ದೇಶಕ್ಕೇ ಒಳಿತು.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top