Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ರಾಜ್ಯಸಭೆ ಟಿಕೆಟ್​ ಆಕಾಂಕ್ಷಿಯಾಗಿರಲಿಲ್ಲ, ಸಿಗದಿದ್ದಕ್ಕೆ ಬೇಸರವಿಲ್ಲ: ಡಾ. ವಿಜಯ ಸಂಕೇಶ್ವರ್

Tuesday, 13.03.2018, 1:33 PM       No Comments

<< ಕೊನೆಯುಸಿರುವವರೆಗೂ ನಾನು ಬಿಜೆಪಿಗಾಗಿ ದುಡಿಯುತ್ತೇನೆ >>​

ಹುಬ್ಬಳ್ಳಿ: ‘ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಸ್ಥಾನಕ್ಕಾಗಿ ನಾನು ಅರ್ಜಿ ಸಲ್ಲಿಸಿರಲಿಲ್ಲ. ಟಿಕೆಟ್​ ಸಿಗದಿದ್ದಕ್ಕೆ ನನಗೆ ಯಾವುದೇ ಅಸಮಾಧಾನ ಇಲ್ಲ. ಟಿಕೆಟ್​ಗಾಗಿ ನಾನು ಯಾವ ಲಾಬಿ ಮಾಡಿಲ್ಲ’ ಎಂದು ಹೇಳುವ ಮೂಲಕ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಹಾಗೂ ಮಾಜಿ ಸಂಸದ ಡಾ. ವಿಜಯ ಸಂಕೇಶ್ವರ ರಾಜ್ಯಸಭಾ ಚುನಾವಣಾ ಗೊಂದಲಗಳಿಗೆ ಸ್ಪಷ್ಟನೆ ನೀಡಿದರು.

ರಾಜ್ಯಸಭೆ ಚುನಾವಣೆ ಟಿಕೆಟ್ ವಿಚಾರದಲ್ಲಿನ ಗೊಂದಲದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದೇವರ ಬಳಿಯೇ ಇದು ಕೊಡು, ಅದು ಕೊಡು ಎಂದು ಬೇಡಿಕೊಂಡಿಲ್ಲ. ಅದೇ ರೀತಿ ಬಿಜೆಪಿ ಬಳಿಯೂ ನಾನು ಎಂದಿಗೂ ಟಿಕೆಟ್​ ಕೇಳಿಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್​ ಇಬ್ಬರೂ ಕರೆ ಮಾಡಿ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಾಗಿ ನನ್ನ ಹಾಗೂ ರಾಜೀವ್​ ಚಂದ್ರಶೇಖರ್​ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದಿದ್ದರು ಎಂದು ಸ್ಪಷ್ಟನೆ ನೀಡಿದರು.

ರಾಜೀವ್​ ಚಂದ್ರಶೇಖರ್​ ಅಪ್ಪಟ ಕನ್ನಡಿಗ
ರಾಜೀವ್​ ಚಂದ್ರಶೇಖರ್​ ನನಗೆ ಅತ್ಯಂತ ಆತ್ಮೀಯರು. ಪಕ್ಷೇತರರಾಗಿ ಎರಡು ಬಾರಿ ಎಂಪಿ ಆಗುವುದು ಕಷ್ಟದ ಕೆಲಸ. ಮೂರನೇ ಬಾರಿ ರಾಜ್ಯಸಭೆಗೆ ಬಿಜೆಪಿಯಿಂದ ಟಿಕೆಟ್​ ಪಡೆದಿರುವ ಅವರು ಅಪ್ಪಟ ಕನ್ನಡಿಗರು ಎಂದು ಘಂಟಾಘೋಷವಾಗಿ ಹೇಳುತ್ತೇನೆ. ಅವರು ಕರ್ನಾಟಕಕ್ಕೆ ಬಹಳ ಕೊಡುಗೆ ನೀಡಿದ್ದಾರೆ. ಆರ್​ಎಸ್​ಎಸ್​ಗೆ ಅವರ ತಂದೆಯ ಕೊಡುಗೆ ಹೆಚ್ಚಿದೆ. ಕರ್ನಾಟಕಕ್ಕೆ ಉತ್ತಮವಾದ ಸುವರ್ಣ ನ್ಯೂಸ್​, ಕನ್ನಡ ಪ್ರಭ ಪ್ರತಿಕೆ ಕೊಟ್ಟಿದ್ದಾರೆ. ರಾಜೀವ್​ ವಿದ್ಯಾಭ್ಯಾಸ ಮಾಡಿರುವುದು ಮಂಗಳೂರಿನಲ್ಲಿ. ಕನ್ನಡೇತರರು ಎಂದು ರಾಜಕೀಯ ಮಾಡಬೇಡಿ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೀನಿ
ನಾನು 56 ವರ್ಷಗಳಿಂದ ಆರ್​ಎಸ್​ಎಸ್​ನಲ್ಲಿದ್ದೇನೆ. 30 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಕಟ್ಟುವಲ್ಲಿ ನನ್ನ ಅಳಿಲು ಸೇವೆ ಇದೆ. ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದವರು ಏನೇ ಹೇಳಿದರೂ ಅದನ್ನು ಮಾಡುತ್ತೇನೆ. ನಾನು ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತ ಎಂದರು.

ಕಾಂಗ್ರೆಸ್​ ಹಠಾವೋ ಅಭಿಯಾನ ಮಾಡುತ್ತೇನೆ
ದೇಶದಲ್ಲಿ ಈಗಾಗಲೇ ಶೇ.70ರಷ್ಟು ಭಾಗದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕೆಳಗಿಳಿಸಿದ್ದೇವೆ. ಹಾಗೆಯೇ ನಮ್ಮ ರಾಜ್ಯವನ್ನು ಕಾಂಗ್ರೆಸ್​ ಮುಕ್ತ ರಾಜ್ಯವನ್ನಾಗಿಸಲು ನಾನು ದುಡಿಯುತ್ತೇನೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಹಠಾವೋ ಅಭಿಯಾನ ಮಾಡುತ್ತೇನೆ. ಮುಂದಿನ ಬಾರಿ ಬಿಎಸ್​ವೈ ಅವರನ್ನು ರಾಜ್ಯದ ಸಿಎಂ ಆಗಬೇಕು. ಮತ್ತೆ ಪ್ರಧಾನಿಯಾಗಿ ಮೋದಿಯನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತವಾಗುತ್ತೇನೆ ಎಂದರು.

ವೀರಶೈವ ಲಿಂಗಾಯತ ಎರಡೂ ಒಂದೇ
ವೀರಶೈವ ಲಿಂಗಾಯತ ಎರಡೂ ಒಂದೇ. ಅದರಲ್ಲಿ ಅನುಮಾನವಿಲ್ಲ. ನ್ಯಾ.ನಾಗಮೋಹನ್​ ದಾಸ್​ ನೇತೃತ್ವದ ತಜ್ಙರ ವರದಿಯನ್ನು ಸಿಎಂ ಸಿದ್ದರಾಮಯ್ಯನವರೇ ಮಾಡಿಸಿದ್ದಾರೆ. ಲಿಂಗಾಯತರ ಜನಸಂಖ್ಯೆ ಹೆಚ್ಚಿರುವ ಕಾರಣ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಬೇಡುವುದು ಸರಿಯಲ್ಲ. ನಮ್ಮದು ಕೊಡುವ ಕೈ. ಬೇಡುವ ಕೈ ಅಲ್ಲ ಎಂದು ತಿಳಿಸಿದರು.

ಈ ವಿಚಾರದಲ್ಲಿ ಸಿದ್ದರಾಮಯ್ಯನವರು ಅದ್ಭುತ ನಾಟಕವಾಡುತ್ತಿದ್ದಾರೆ. ಅವರು ಯಾವುದಾದರೂ ಕಂಪನಿಗೆ ಸೇರಿಕೊಂಡರೆ ಒಳ್ಳೆಯದು. ರಾಜಕಾರಣಿಗಳು ಕೆಲವು ಮಠಾಧೀಶರನ್ನು ಕಪ್ಪುಹಣ ನೀಡಿ ಖರೀದಿ ಮಾಡಿರುತ್ತಾರೆ. ಅಂಥವರು ಈ ವರದಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೋದಿ ಜಗ್ತತಿನ ಪ್ರಧಾನಿ
ನರೇಂದ್ರ ಮೋದಿಯವರು ಕೇವಲ ಭಾರತದ ಪ್ರಧಾನಿಯಾಗಿ ಉಳಿದಿಲ್ಲ. ಇಡೀ ವಿಶ್ವದ ಪ್ರಧಾನಿಯಾಗಿ ಎಲ್ಲ ದೇಶದ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಜಗತ್ತಿನ ಪ್ರಧಾನಿಯಾಗಿದ್ದಾರೆ ಎಂದು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು.

ದೇಶದಲ್ಲಿ ಹಿಂದುಗಳನ್ನು ಉಳಿಸಬೇಕು ಎಂದರೆ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಮೋದಿ ಅವರ ವಿಚಾರಧಾರೆಗಳು ಬಹಳ ಅದ್ಭುತವಾಗಿವೆ. ಬೇಟಿ ಬಚಾವೋ ಬೇಟಿ ಪಡಾವೋ, ನೋಟು ಅಮಾನ್ಯೀಕರಣ, ಸ್ವಚ್ಛತಾ ಅಭಿಯಾನಗಳಂಥ ಅತ್ಯುತ್ತಮ ಯೋಜನೆಗಳು ಯಶಸ್ವಿಯಾಗಿವೆ. ಅಂದಿನ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಕೂಡ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಪಕ್ಷ ಮತ್ತು ಸಿದ್ಧಾಂತ ಮೇಲಿನ ತಮ್ಮ ನಿಷ್ಠೆ, ಪಕ್ಷ ಕಟ್ಟುವಲ್ಲಿ ತಮ್ಮ ಪರಿಶ್ರಮವನ್ನು ಇದೇ ಸಂದರ್ಭದಲ್ಲಿ ವಿವರಿಸಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ್ ಹಾಜರಿದ್ದರು.

Leave a Reply

Your email address will not be published. Required fields are marked *

Back To Top