More

    ವೀರಶೈವ, ಲಿಂಗಾಯತ ಪ್ರತ್ಯೇಕ ಅಲ್ಲ

    ಕುಶಾಲನಗರ: ವೀರಶೈವ ಮತ್ತು ಲಿಂಗಾಯತ ಎಂಬುದು ಪ್ರತ್ಯೇಕ ಅಲ್ಲ, ಎರಡೂ ಒಂದೇ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹದೇವ ಬಿದರಿ ಪ್ರತಿಪಾದಿಸಿದರು.

    ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದಿಂದ ಕುಶಾಲನಗರ ರೈತ ಸಹಕಾರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹಾನಗಲ್ ಶ್ರೀ ಕುಮಾರಸ್ವಾಮಿಗಳ 156ನೇ ಜಯಂತಿ ಮತ್ತು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಸ್ಮರಣೋತ್ಸವ, ವೀರಶೈವ ಧಾರ್ಮಿಕ ಜನಜಾಗೃತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಗ್ಗಟ್ಟಿನಿಂದ ಸಮಾಜ ಉಳಿಯಲು ಸಾಧ್ಯ. ಸಮುದಾಯದವರು, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಮುನ್ನಡೆ ಸಾಧಿಸಬೇಕು ಎಂದು ಹೇಳಿದರು.


    ಸುಳ್ಯದ ಡಾ.ಬಿ.ಪ್ರಭಾಕರ ಶಿಶಿಲ ಅವರ ಕೊಡಗಿನ ಲಿಂಗರಾಜ ಕೃತಿ ಹಾಗೂ ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾ ಶೇಖರ್ ಅವರ ‘ನೆಲಮುಗಿಲು’ ಕವನ ಸಂಕಲನವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಬಿಡುಗಡೆಗೊಳಿಸಿ ಮಾತನಾಡಿ, ವೀರಶೈವ ಸಮಾಜ ಕಾಯಕ ಹಾಗೂ ದಾಸೋಹ ಕಾರ್ಯಕ್ಕೆ ಮಾದರಿಯಾಗಿದೆ. ಬಸವಣ್ಣನ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಪ್ರತಿಯೊಬ್ಬರೂ ಅದನ್ನು ಪಾಲಿಸುವಂತಾಗಬೇಕು ಎಂದರು.


    ಶಾಸಕ ಡಾ.ಮಂತರ್‌ಗೌಡ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಅರಮೇರಿ ಕಳಂಚೇರಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹೈಕೋರ್ಟ್ ವಕೀಲ ಎಚ್.ಎಸ್.ಚಂದ್ರಮೌಳಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸತೀಶ್ ಇದ್ದರು.

    ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ರಸಾಯನಶಾಸ್ತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಜಿ.ಮಂಜುನಾಥ್, ಶಿರಂಗಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಕುಟ್ಟದ ಹಿರಿಯ ನಾಗರಿಕ ಮಹದೇವಪ್ಪ, ಜೆಸಿಐ ಸಂಸ್ಥೆಯ ವಲಯ ಉಪಾಧ್ಯಕ್ಷ ಕೂಡುಮಂಗಳೂರಿನ ಕೆ.ಡಿ.ಪ್ರಶಾಂತ್, ಹೆಬ್ಬುಲುಸೆ ಪಟೇಲ್ ತಮ್ಮಯ್ಯ, ಹೊಸಪಟ್ಟಣದ ಪೂರ್ಣಿಮ ಶಿವಕುಮಾರ್, ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾ ಶೇಖರ್ ಅವರನ್ನು ಮಹಾಸಭಾದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

    ಗಮನ ಸೆಳೆದ ಮೆರವಣಿಗೆ : ಜನಜಾಗೃತಿ ಸಭೆ ಅಂಗವಾಗಿ ಕುಶಾಲನಗರ ಪಟ್ಟಣದ ಬಸವೇಶ್ವರ ದೇವಾಲಯದ ಬಳಿಯಿಂದ ಮುಖ್ಯ ರಸ್ತೆಯ ಮೂಲಕ ಬೆಳ್ಳಿರಥದ ಮೂಲಕ ಮೆರವಣಿಗೆ ನಡೆಸಲಾಯಿತು.


    ಹಾನಗಲ್ ಶ್ರೀ ಕುಮಾರಸ್ವಾಮಿ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಸ ಹೊತ್ತು ಸಾಗಿದರು. ಚಾಮರಾಜನಗರದ ಬೆಟ್ಟಹಳ್ಳಿ ಮಾರಮ್ಮನ ಕಲಾವಿದರ ಸಂಘದ ಬಾಲು ನೇತೃತ್ವದ ಡೊಳ್ಳು ಕುಣಿತ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದ ಕಲಾವಿದ ನೀಲಕಂಠ ನೇತೃತ್ವದ ವೀರಗಾಸೆ ನೃತ್ಯ ಗಮನ ಸೆಳೆಯಿತು.

    29ಏ02: ಕುಶಾಲನಗರ ರೈತ ಸಹಕಾರ ಭವನದಲ್ಲಿ ಆಯೋಜಿಸಿದ್ದ, ಹಾನಗಲ್ ಶ್ರೀ ಕುಮಾರಸ್ವಾಮಿಗಳ 156ನೇ ಜಯಂತಿ ಮತ್ತು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ಸ್ಮರಣೋತ್ಸವ, ವೀರಶೈವ ಧಾರ್ಮಿಕ ಜನಜಾಗೃತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು, ಶಂಕರ ಮಹದೇವ ಬಿದರಿ ಉದ್ಘಾಟಿಸಿದರು. ಕುಲಪತಿ ಅಶೋಕ.ಸಂ.ಆಲೂರು, ವಕೀಲ ಎಚ್.ಎಸ್. ಚಂದ್ರಮೌಳಿ, ಎಚ್.ವಿ.ಶಿವಪ್ಪ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts