Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಇಂದು ಬಜೆಟ್ ಕ್ಲೈಮ್ಯಾಕ್ಸ್

Thursday, 12.07.2018, 3:06 AM       No Comments

ಬೆಂಗಳೂರು: ರೈತರ ಸಾಲಮನ್ನಾ ಭರವಸೆ ಈಡೇರಿಸಲು ರಾಜ್ಯದ ಜನತೆಗೆ ಅನ್ನಭಾಗ್ಯದ ಅಕ್ಕಿ ಕಡಿತ, ತೈಲ, ಇಂಧನ ದರ ಏರಿಕೆಯ ಹೊರೆ ಹೆಗಲೇರಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಈಗ ಅದೇ ಕರಭಾರ ಇಳಿಸುವ ವಿಚಾರದಲ್ಲಿ ಮಿತ್ರಪಕ್ಷ ಕಾಂಗ್ರೆಸ್​ನ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಗುರುವಾರ ವಿಧಾನಮಂಡಲದಲ್ಲಿ ಉತ್ತರ ನೀಡಲು ಮುಖ್ಯಮಂತ್ರಿ ಸಜ್ಜಾಗಿರುವಂತೆಯೇ ಬಜೆಟ್​ನ ಮೂರು ಪ್ರಮುಖ ಘೋಷಣೆ ಹಿಂಪಡೆಯುವಂತೆ ಕಾಂಗ್ರೆಸ್ ಪಟ್ಟು ಹಿಡಿದಿರುವುದು ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದ ಜನತೆಯ ವಿಶ್ವಾಸ ಗಳಿಸುವ ಜತೆಯಲ್ಲೇ ಮೈತ್ರಿಕೂಟದಲ್ಲಿ ಮೇಲುಗೈ ಸಾಧಿಸುವ ಹಸ್ತಪಡೆಯ ಈ ಲೆಕ್ಕಾಚಾರಕ್ಕೆ ಎಚ್ಡಿಕೆ ಯಾವ ಪ್ರತಿಬಾಣ ಹೂಡಲಿದ್ದಾರೆಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಬಜೆಟ್ ಘೋಷಣೆಯಂತೆ ಅನ್ನಭಾಗ್ಯದ 2 ಕೆಜಿ ಅಕ್ಕಿ ಕಡಿತ ನಿರ್ಧಾರ ಹಿಂಪಡೆಯುವುದು, ಪೆಟ್ರೊಲ್-ಡೀಸೆಲ್, ವಿದ್ಯುತ್ ಮೇಲೆ ತೆರಿಗೆ ಹೆಚ್ಚಳ ಕೈಬಿಡಬೇಕೆಂಬ ಬೇಡಿಕೆ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಕೊಡಬೇಕೆಂಬ ಮೂರು ಪ್ರಮುಖ ಬೇಡಿಕೆಗಳ ಪಟ್ಟಿ ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರವಾನೆಯಾಗಿದೆ.

ಲೆಕ್ಕಾಚಾರ

ಸಿದ್ದರಾಮಯ್ಯ ಪ್ರಸ್ತಾಪಿಸಿರುವ ಪ್ರಕಾರ, ಅನ್ನಭಾಗ್ಯಯೋಜನೆ ಅಕ್ಕಿ ಕಡಿತದಿಂದ ಕೇವಲ 600ರಿಂದ 700 ಕೋಟಿ ರೂ.ಆದಾಯ ಬರಬಹುದು. ಪೆಟ್ರೊಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳದಿಂದ 3 ಸಾವಿರ ಕೋಟಿ ರೂ. ಬರಬಹುದು.

ಮುಖ್ಯಮಂತ್ರಿ ಭಾಷಣ ಸಸ್ಪೆನ್ಸ್

ಸಾಲಮನ್ನಾ ಸೌಲಭ್ಯ ವಿಸ್ತರಿಸಬೇಕೆಂಬ ರೈತರ ಬೇಡಿಕೆಗೆ ಬಜೆಟ್ ಉತ್ತರದವರೆಗೂ ಕಾದು ನೋಡಿ ಎಂದು ಸಿಎಂ ಕುಮಾರಸ್ವಾಮಿ ಅಭಯ ನೀಡಿರುವುದರಿಂದ ಗುರುವಾರ ಅವರು ಮಾಡಲಿರುವ ಭಾಷಣ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್ ತಂತ್ರವೇನು?

# ಲೋಕಸಭೆ ಚುನಾವಣೆ ಮುನ್ನ ಜನ ಬೆಂಬಲ, ವಿಶ್ವಾಸ ಗಳಿಸುವುದು

# ಅಕ್ಕಿ ಹೆಚ್ಚಳ, ತೈಲ ಬೆಲೆ ಹೆಚ್ಚಳ ಘೋಷಣೆ ವಾಪಸ್​ನ ಶ್ರೇಯ ಪಡೆಯುವುದು

# ಜೆಡಿಎಸ್ ಮೇಲೆ ಹಿಡಿತ ಸಾಧಿಸುವ ಅವಕಾಶ ಬಳಸಿಕೊಳ್ಳುವುದು

ಸಿಎಂ ನಡೆ ಏನು?

# ಕಾಂಗ್ರೆಸ್ ಬೇಡಿಕೆಗಳನ್ನು ಪರಿಗಣಿಸಿ ಬಜೆಟ್ ಘೋಷಣೆ ವಾಪಸ್

# ಕಾಂಗ್ರೆಸ್ ಬೇಡಿಕೆಗೆ ಮಣಿಯದೆ ಬಜೆಟ್ ನಿರ್ಧಾರ ಸಮರ್ಥಿಸಿಕೊಳ್ಳುವುದು

# ಸಾಲಮನ್ನಾಕ್ಕೆ ಸಂಪನ್ಮೂಲ ಕೊರತೆ ಆಗಬಹುದೆಂದು ಬೇರೆ ಲೆಕ್ಕಾಚಾರ ಹೂಡಬಹುದು

# ಲೋಕಸಭೆ ಚುನಾವಣೆವರೆಗೆ ಜೆಡಿಎಸ್ ಜನಪ್ರಿಯತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು

25,000 ರೂ. ಸೊಸೈಟಿ ಸಾಲವೂ ಮನ್ನಾ?

ಒಂದೆಡೆ ಜನಾಕ್ರೋಶ, ಇನ್ನೊಂದೆಡೆ ಮೈತ್ರಿ ಪಕ್ಷ ಕಾಂಗ್ರೆಸ್ ಒತ್ತಡ, ಮತ್ತೊಂದೆಡೆ ಸ್ವಪಕ್ಷೀಯರ ಆಗ್ರಹಕ್ಕೆ ಮಣಿದಿರುವ ಸಿಎಂ ಕುಮಾರಸ್ವಾಮಿ ಗುರುವಾರ 25 ಸಾವಿರ ರೂ. ಸೊಸೈಟಿ ಸಾಲ ಮನ್ನಾ, ಅನ್ನಭಾಗ್ಯ ಅಕ್ಕಿ ಮತ್ತೆ 7 ಕೆಜಿಗೆ ಹೆಚ್ಚಳ, ವಿದ್ಯುತ್ ಪೆಟ್ರೋಲಿಯಂ ತೆರಿಗೆ ವಾಪಸ್ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಜತೆಗೆ ವಿದ್ಯುತ್, ಪೆಟ್ರೋಲಿಯಂ ತೆರಿಗೆ ವಾಪಸ್​ನಿಂದಾಗುವ ಸಂಪನ್ಮೂಲ ಕೊರತೆ ಸರಿದೂಗಿಸಿಕೊಳ್ಳಲು ಅಬಕಾರಿ ತೆರಿಗೆಯನ್ನು ಶೇ.4ರಿಂದ ಶೇ.6ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

ಸಂಪನ್ಮೂಲ ಸವಾಲು

ಕಾಂಗ್ರೆಸ್ ಸವಾಲು ಸ್ವೀಕರಿಸಿ ಎಲ್ಲ ಬೇಡಿಕೆಗಳಿಗೆ ಒಪ್ಪಿಕೊಂಡಲ್ಲಿ ಬಸ್ ಪಾಸ್ ವೆಚ್ಚ ಸೇರಿ ಸರಿಸುಮಾರು 5 ಸಾವಿರ ಕೋಟಿ ರೂ.ಗಳ ಸಂಪನ್ಮೂಲ ಕ್ರೋಡೀಕರಣ ಸರ್ಕಾರಕ್ಕೆ ಬಹುದೊಡ್ಡ ಸವಾಲು ಆಗಲಿದೆ. ಅದಕ್ಕಾಗಿ ಯಾವ ಮೂಲಗಳನ್ನು ಸಿಎಂ ಕುಮಾರಸ್ವಾಮಿ ಅನುಸರಿಸುತ್ತಾರೆ ಎಂಬುದು ಸ್ವತಃ ಅವರಿಗೇ ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಮುಖ್ಯಮಂತ್ರಿಗೆ ಮಾಜಿ ಸಿಎಂ ಪತ್ರ

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಬುಧವಾರ ಸಂಜೆ ಸಿಎಂ ಕುಮಾರಸ್ವಾಮಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ‘ಹಸಿವು ಮುಕ್ತ ಕರ್ನಾಟಕ ನಿರ್ವಣಕ್ಕಾಗಿ ನಾವು ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆಯ ಗಾತ್ರ ಕಡಿಮೆ ಮಾಡಿರುವ ನಿರ್ಧಾರ ಕೈಬಿಡಬೇಕು ಹಾಗೂ ಪೆಟ್ರೊಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವನ್ನೂ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ. ಅನ್ನಭಾಗ್ಯದ ಅಕ್ಕಿ ವಿತರಣೆ ಗಾತ್ರ ಕಡಿತ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ನಿರ್ಧಾರ ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಉಂಟು ಮಾಡುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಸಂದೇಶವನ್ನೂ ಸಿದ್ದರಾಮಯ್ಯ ರವಾನಿಸಿದ್ದಾರೆ.

ಪರಂ ಸಮಾಧಾನ: ಪಕ್ಷದ ಬಹುತೇಕ ಶಾಸಕರು ಸರ್ಕಾರದ ನಿರ್ಧಾರಗಳ ಬಗ್ಗೆ ಅಸಮಾಧಾನ ಹೊಂದಿರುವುದನ್ನು ಮನಗಂಡ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿ ಹೆಚ್ಚಳ, ಇಂಧನ ಮೇಲಿನ ತೆರಿಗೆ ವಾಪಸ್ ಹಾಗೂ ಉಚಿತ ಬಸ್ ಪಾಸ್ ನೀಡಿಕೆ ಕುರಿತಂತೆ ಸಿಎಂ ಕುಮಾರಸ್ವಾಮಿ ಜತೆ ರ್ಚಚಿಸುವ ಭರವಸೆ ನೀಡಿದರು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಈ ಗೊಂದಲಗಳನ್ನೆಲ್ಲ ಸರಿಪಡಿಸುವುದಾಗಿ ಹೇಳಿದರು.

ಆದ್ಯತೆ ಅಸಮತೋಲನ: ಇಂಧನದ ಮೇಲಿನ ತೆರಿಗೆ ಹೆಚ್ಚಳ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಲವು ನಾಯಕರು ಬಜೆಟ್​ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇರುವ ಪ್ರದೇಶಗಳಿಗೆ ಆದ್ಯತೆ ನೀಡಿಲ್ಲ ಎಂದು ನೇರವಾಗಿ ಅಸಮಾಧಾನ ತೋಡಿಕೊಂಡರು.

ಉತ್ತರದ 3 ಪ್ರಶ್ನೆಗಳು: ಸಭೆಯಲ್ಲಿ ಉತ್ತರ ಕರ್ನಾಟಕದ ಹಿರಿಯ ಶಾಸಕರು ತಾವು ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಪ್ರಸ್ತಾಪಿಸಿದರು. ಬಜೆಟ್​ನಲ್ಲಿ ಮುಂಬೈ ಕರ್ನಾಟಕಕ್ಕೆ ಶೇ.1, ಹೈದರಾಬಾದ್ ಕರ್ನಾಟಕಕ್ಕೆ ಶೇ.3 ಹಾಗೂ ಉಳಿದೆಲ್ಲ ಕರ್ನಾಟಕ ಸೇರಿ ಶೇ 7 ಅನುದಾನ ಹಂಚಿಕೆಯಾಗಿದ್ದರೆ, ಬೆಂಗಳೂರಿಗೇ ಶೇ.86 ಹಂಚಿಕೆಯಾಗಿದೆ. ಉತ್ತರ ಕರ್ನಾಟಕದ ಜನರು ಈ ವಿಚಾರದಲ್ಲಿ ಒಟ್ಟಾಗಿ ಹೋರಾಟ ನಡೆಸಿದರೆ ಪ್ರತ್ಯೇಕತೆಯ ಕೂಗು ಗಟ್ಟಿಯಾಗುತ್ತದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.

ಜೆಡಿಎಸ್​ಗೆ ತಲೆ ಬಾಗಿಸಬೇಡಿ: ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಪಕ್ಷದ ಶಾಸಕರ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳಬೇಕು. ಇನ್ನು ಮುಂದೆ ಹೊಸ ಘೋಷಣೆ ಮಾಡುವಾಗ ಆ ವಿಚಾರವನ್ನು ಸಮನ್ವಯ ಸಮಿತಿ ಸಭೆಯ ಗಮನಕ್ಕೆ ತರಬೇಕು. ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡದೆ ಇನ್ನು ಮುಂದೆ ಹೊಸ ಘೋಷಣೆ ಮಾಡಬಾರದು ಎಂದು ಸಚಿವ ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪರಮೇಶ್ವರ್ ಸಮ್ಮತಿ ಸೂಚಿಸಿದರು. ಇದಕ್ಕೂ ಮೊದಲು ಜೆಡಿಎಸ್ ಹೇಳಿದಂತೆ ಎಲ್ಲ ವಿಚಾರಗಳಿಗೂ ತಲೆ ಆಡಿಸಬಾರದೆಂದು ಸಚಿವರೊಬ್ಬರು ನೇರವಾಗಿಯೇ ಡಿಸಿಎಂಗೆ ಹೇಳಿದರೆನ್ನಲಾಗಿದೆ.

ಸಂಪುಟ ವಿಸ್ತರಣೆಗೆ ಒತ್ತಡ: ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಸಂಪುಟ ವಿಸ್ತರಣೆ ಶೀಘ್ರ ಮಾಡಿ, ಶಾಸಕರು ಕಾಯ್ದಿದ್ದಾರೆ ಎಂದು ಒತ್ತಾಯಿಸಿದರಾದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಈ ವಿಚಾರವನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಬಹಿರಂಗವಾಗಿ ಮಾತನಾಡು ವುದು ಬೇಡ ಎಂದು ಪರಮೇಶ್ವರ್ ತೆರೆ ಎಳೆದರು.

ಜಮೀರ್​ಗೆ ಡಿಕೆಶಿ ವಾರ್ನಿಂಗ್

ಬೆಂಗಳೂರಿನ ಹಜ್ ಭವನಕ್ಕೆ ಟಿಪು್ಪ ಸುಲ್ತಾನ್ ಹೆಸರಿಡುವ ಕುರಿತಂತೆ ಹೇಳಿಕೆ ನೀಡಿ ತೀವ್ರ ವಿವಾದ ಸೃಷ್ಟಿಸಿದ್ದ ಸಚಿವ ಜಮೀರ್ ಅಹಮದ್ ಖಾನ್​ಗೆ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. ಪಕ್ಷದ ಶಿಸ್ತು ಎಲ್ಲರಿಗೂ ಒಂದೇ. ನಮ್ಮ ನಮ್ಮ ಇಲಾಖೆಗಳ ಬಗೆಗೆ ಮಾತನಾಡಲು ಆಕ್ಷೇಪ ಇಲ್ಲ. ಆದರೆ ವಿವಾದ ಆಗುವಂತಹ ವಿಚಾರಗಳಲ್ಲಿ ಮಾತನಾಡಲೇಬೇಡಿ ಎಂದು ತಾಕೀತು ಮಾಡಿದರೆಂದು ಹೇಳಲಾಗಿದೆ.

ಅತೃಪ್ತರು ಗೈರು

ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ರಾಮಲಿಂಗಾರೆಡ್ಡಿ ಸೇರಿ ಹಲವು ಶಾಸಕರು ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದ ದೂರ ಉಳಿದರು. ಎಂ.ಟಿ.ಬಿ.ನಾಗರಾಜ್ ಸೇರಿ 20ಕ್ಕೂ ಹೆಚ್ಚು ಶಾಸಕರು ಸಭೆ ಕಡೆ ತಲೆ ಹಾಕಲಿಲ್ಲ. ಆದರೆ ಮಧ್ಯಾಹ್ನ ನಡೆದ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ರೋಷನ್ ಬೇಗ್ ಇದ್ದರು.


ಅಧಿಕಾರ ದಾಹ ಬಿಡಿ, ಪಕ್ಷ ನಿಷ್ಠೆ ಇಡಿ

‘ನಾನು ಯಾರ ಪರವೂ ಅಲ್ಲ, ಕಾಂಗ್ರೆಸ್ ಪರ. ಪಕ್ಷ ಗಟ್ಟಿ ಮಾಡಲು ಯಾರು ಸಹಕಾರ ಕೊಡುತ್ತಾರೋ ಅವರನ್ನು ಬೆಂಬಲಿಸುವೆ. ಪಕ್ಷಕ್ಕೆ ತೊಂದರೆ ಕೊಡುವವರ ಬೆಂಬಲಿಸಲ್ಲ. ಪಕ್ಷ ಉಳಿಸಿ ಬೆಳೆಸುವುದೇ ನನ್ನ ಮೊದಲ ಆದ್ಯತೆ’ ಎಂದು ಕೆಪಿಸಿಸಿ ನೂತನ ಸಾರಥಿ ದಿನೇಶ್ ಗುಂಡೂರಾವ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಂದೇಶ ಕಳಿಸಿದ್ದಾರೆ.

ಅರಮನೆ ಮೈದಾನದಲ್ಲಿ ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಂದ ಅಧಿಕಾರ ಸ್ವೀಕರಿಸಿದ ಅವರು, ಇಂದು ಮಂತ್ರಿ ಸ್ಥಾನ, ನಿಗಮ ಮಂಡಳಿಗಳಿಗೆ ಹೋರಾಟ ನಡೆಯುತ್ತಿದೆ. ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯವಾಗಬಾರದು ನಿಜ. ಆದರೆ, ಅಧಿಕಾರ ಸಿಗದಿದ್ದರೆ ಪಕ್ಷದ ವಿರುದ್ಧ, ಸಿಕ್ಕರೆ ಪರ ಎಂಬ ಧೋರಣೆ ಸರಿಯಲ್ಲ, ಅದನ್ನು ನಾನು ಸಹಿಸಲ್ಲ. ಮಂತ್ರಿ ಮಾಡಲು, ಬೋರ್ಡ್ ಅಧ್ಯಕ್ಷರನ್ನು ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ ಎಂದು ಗುಡುಗಿದರು.

ರಾಜ್ಯದಲ್ಲಿ ಇಂದು ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಅದು ಏಕೆ ರಚನೆಯಾಯಿತು? 79 ಸ್ಥಾನ ಗೆದ್ದರೂ ಸಿಎಂ ಸ್ಥಾನ ಏಕೆ ಬಿಟ್ಟುಕೊಡಲಾಯಿತು? ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಈ ತೀರ್ವನದ ಹಿಂದೆ ಸಾಕಷ್ಟು ಚಿಂತನೆ, ಚರ್ಚೆ ನಡೆದಿದೆ. ದೇಶದಲ್ಲಿ ಕೋಮುವಾದ ಹೋಗಲಾಡಿಸಲು ತ್ಯಾಗದ ಸಂದೇಶ ಕೊಡಲು ಹೀಗೆ ಮಾಡಲಾಯಿತು ಎಂದರು.

ನಿಷ್ಠಾವಂತರ ಕರತಾಡನ!

ಅಧಿಕಾರ ಕಳೆದುಕೊಂಡಿದ್ದೇವೆಂದರೆ ದುರ್ಬಲವೆಂದಲ್ಲ. ಸರ್ಕಾರಕ್ಕೆ ಕಾಂಗ್ರೆಸ್ ಸಹಕಾರ ಕೊಡಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಂದೇಶ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಕೂಡ ಮೈತ್ರಿ ಧರ್ಮದ ಪಾಲನೆ ಮಾಡಬೇಕಾಗುತ್ತದೆ. ನಾನು ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯದ ಎಲ್ಲ ಕಡೆ ಓಡಾಡುತ್ತೇವೆ. ನಿಷ್ಠಾವಂತರನ್ನು ಗುರುತಿಸಿ ಅವಕಾಶ ಕೊಡುತ್ತೇವೆ. ಪಕ್ಷಕ್ಕಾಗಿ ದುಡಿಯುವ ಅನೇಕರಿಗೆ ಕೆಪಿಸಿಸಿ ಗೊತ್ತಿರಲ್ಲ. ಕೆಪಿಸಿಸಿ ಸುತ್ತುವವರೇ ಬೇರೆ. ಶಬ್ದ ಮಾಡಿಕೊಂಡು ನಾಯಕರ ಜತೆ ನಿಲ್ಲುವವರಿಗೆ ಅವಕಾಶ ಕೊಟ್ಟರೆ ನಿಷ್ಠಾವಂತರು ಎಲ್ಲಿಗೆ ಹೋಗಬೇಕು? ಎಂದು ದಿನೇಶ್ ಪ್ರಶ್ನಿಸಿದಾಗ ಸಭೆಯಲ್ಲಿದ್ದವರಿಂದ ಭಾರಿ ಕರತಾಡನ ಕೇಳಿಬಂತು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಸಿಗುತ್ತದೆಂದು ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. ಇಷ್ಟೊಂದು ದೊಡ್ಡ ಹುದ್ದೆ ಸಿಕ್ಕಿರುವುದು ಹೆಮ್ಮೆ ವಿಚಾರ. ಇದನ್ನು ನಿಭಾಯಿಸುವುದು ಸುಲಭದ ಕೆಲಸ ಅಂದುಕೊಂಡಿಲ್ಲ. ಇದನ್ನು ಜವಾಬ್ದಾರಿ ಎಂದುಕೊಂಡಿದ್ದೇನೆ.

| ದಿನೇಶ್ ಗುಂಡೂರಾವ್ ಕೆಪಿಸಿಸಿ ನೂತನ ಅಧ್ಯಕ್ಷ

‘ಲೋಕಾ’ ಗುರಿ

ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲಬೇಕು ಎಂಬುದು ಮುಖ್ಯ ಗುರಿ. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು ಎಂದ ದಿನೇಶ್, ಪ್ರಧಾನಿ ನರೇಂದ್ರ ಮೋದಿ ಏನು ಸಾಧನೆ ಮಾಡಿದ್ದಾರೆ? ಕೇವಲ ಭಾಷಣ ಮಾಡಿದ್ದಾರೆ. ಸಾಧನೆ ಕಡಿಮೆ, ಪ್ರಚಾರ ಜಾಸ್ತಿ. ಕೋಮುವಾದ, ವೈಷಮ್ಯ ಹಬ್ಬಿಸಿ, ಮತ ವಿಭಜಿಸಿ ಮತ್ತೆ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.

ಸಿದ್ದು ಕೊಂಡಾಡಿದ ಅಧ್ಯಕ್ಷ

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ ದಿನೇಶ್ ಗುಂಡೂರಾವ್, ಈಗಲೂ ನೀವೇ ಜನಪ್ರಿಯ ನಾಯಕ. ಮೂರ್ನಾಲ್ಕು ತಿಂಗಳಲ್ಲಿ ಜನ ವ್ಯಥೆ ಪಡುವ ಕಾಲ ಬರಲಿದೆ. ಆಗ ಗೊತ್ತಾಗಲಿದೆ ಎಂದರು.

ಮುಖ್ಯಾಂಶ

ವೇದಿಕೆ ಏರಲು ಮತ್ತು ವೇದಿಕೆಯ ಮೊದಲ ಸಾಲಲ್ಲಿ ಕೂರಲು ಪಕ್ಷದ ನಾಯಕರು ಪೈಪೋಟಿಗಿಳಿದರು. ಶಕ್ತ್ಯಾನುಸಾರ ಹೋರಾಡಿ ಕುರ್ಚಿ ಗಿಟ್ಟಿಸಿದ್ದು ಕೆಲವರಾದರೆ ಮತ್ತೆ ಕೆಲವರು ‘ಟು-ಬೈ ತ್ರೀ’ ಫಾಮುಲಾದಲ್ಲಿ ಕುರ್ಚಿ ಹಂಚಿಕೊಂಡರು. ಆದರೆ, ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಹಿಂದಿನ ಸಾಲಲ್ಲಿ ಕುಳಿತು ಗಾಂಭೀರ್ಯ ಮೆರೆದರು.

ದಿನೇಶ್ ತಾಯಿ ವರಲಕ್ಷ್ಮಿ ಗುಂಡೂರಾವ್, ಪತ್ನಿ ತಬಸ್ಸುಂ ಮತ್ತಿತರರು ಸಭೆಯಲ್ಲಿ ಆಸೀನರಾಗಿ ಪದಗ್ರಹಣ ಕಣ್ತುಂಬಿಕೊಂಡರು. ದಿನೇಶ್ ಭಾಷಣದಲ್ಲಿ ತಂದೆಯನ್ನು ನೆನಪಿಸಿಕೊಂಡರು.

ದಿನೇಶ್ ಒಳಿತಿಗೆ ಪೂಜೆ

ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಶ್ರೀಉಳ್ಳಾಳ್ತಿ ಅಮ್ಮನವರ ದೇವಸ್ಥಾನದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಶುಭವಾಗಲೆಂದು ಬಾಬ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಹೊಸ ಟೀಮ್ೆ ರಾಹುಲ್ ಮಂತ್ರ

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ದೇಶದಲ್ಲಿ ಕಳೆಗುಂದಿರುವ ಪಕ್ಷಕ್ಕೆ ಮರು ವರ್ಚಸ್ಸು ತಂದುಕೊಡಲು ಹೆಣಗುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಅವರ ತಂಡವನ್ನು ಸಜ್ಜುಗೊಳಿಸಿದ್ದಾರೆ.

ಐದು ಬಾರಿ ಆಯ್ಕೆಯಾದ ಶಾಸಕ ದಿನೇಶ್ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ ಅವರಿಗೆ ಪಟ್ಟಕಟ್ಟುವ ಜತೆಗೆ ರಾಜ್ಯದಲ್ಲಿ ಪಕ್ಷವನ್ನು ಹೇಗೆ ಮುನ್ನಡೆಸಬೇಕೆಂಬ ಸೂತ್ರವೊಂದನ್ನು ತಿಳಿಸಿಕೊಟ್ಟಿದ್ದಾರೆ. ಜತೆ ಅನುಷ್ಠಾನದಲ್ಲಿ ರಾಜಿಯಾಗದಂತೆ ‘ಮಂತ್ರದಂಡ’ದ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ರಾಹುಲ್ ಗಾಂಧಿ, ಪಕ್ಷದ ಮೇಲೆ ಹಿಡಿತ ಸಾಧಿಸುವ ಮತ್ತು ಬಿಜೆಪಿ ಮಾದರಿಯಲ್ಲಿ ಪಕ್ಷ ಬಲಗೊಳಿಸುವ ಕಲೆ ಬಗ್ಗೆ ಒಂದು ತಾಸು ಪಾಠ ಮಾಡಿದ್ದಾರೆ.ಪ್ರಮುಖವಾಗಿ ಮುಲಾಜಿಗೆ ಬಗ್ಗದೇ, ನಾಯಕರ ಪರವಾಗಿ ನಿಲ್ಲದೇ ಸಮಚಿತ್ತವಾಗಿ ಪಕ್ಷಪರ ನಿಲುವಿಗೆ ಅಂಟಿಕೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ತಂಡಕ್ಕೆ ಸೂಚನೆ ನೀಡಿದ್ದಾರೆ. ಜತೆಗೆ ನೇರ ಸಂಪರ್ಕದಲ್ಲಿದ್ದು ಆಗಿಂದಾಗ ಮಾಹಿತಿ ನೀಡುವಂತೆಯೂ ತಿಳಿಸಿದ್ದಾರೆನ್ನಲಾಗಿದೆ.

ರಾಹುಲ್ ಹೇಳಿದ್ದೇನು?: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಆಗಬೇಕಾದ ತಯಾರಿ ಬಗ್ಗೆ ರಾಹುಲ್ ಜತೆಗಿರುವ ವೃತ್ತಿಪರರ ತಂಡ ಒಂದು ಸೂತ್ರ ತಯಾರಿಸಿದ್ದು, ಅದನ್ನು ದಿನೇಶ್-ಈಶ್ವರ್ ಜೋಡಿಗೆ ರಾಹುಲ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪ್ರಮುಖವಾಗಿ ವಿಧಾನಸಭೆಯಲ್ಲಿ ಪಕ್ಷಕ್ಕೆ ಸೋಲುವ ಅಂಶಗಳಿಲ್ಲದಿದ್ದರೂ ಬಿಜೆಪಿ- ಆರ್​ಎಸ್​ಎಸ್ ಜೋಡಿಯ ತಳ ಮಟ್ಟದ ಪರಿಶ್ರಮ ಫಲಿತಾಂಶ ಏರುಪೇರಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣ ಬಳಕೆ, ಪಕ್ಷದ ಇತರ ಘಟಕಗಳ ಸದ್ಬಳಕೆಯಲ್ಲಿ ಪಕ್ಷ ಹಿಂದಿದ್ದು, ಸರಿಪಡಿಸಿ ಎನ್ನುವ ಜತೆಗೆ ಮುಂದೇನು ಮಾಡಬೇಕೆಂದು ಸೂಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಪಾಠದ ಸಾರಾಂಶ

# ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಬಿಜೆಪಿ ಮುಂದಿದೆ. ಪ್ರಚಾರ, ನಕಾರಾತ್ಮಕ ಪ್ರಚಾರ, ಮೂರನೇ ವ್ಯಕ್ತಿ ಪ್ರಚಾರ ಹೀಗೆ ಎಲ್ಲ ರೀತಿಯಲ್ಲಿ ಯುವಕರ ತಲುಪುತ್ತಿದ್ದು, ಸುಳ್ಳನ್ನೂ ಸತ್ಯ ಎಂಬಂತೆ ನಂಬಿಸುತ್ತದೆ. ಕಾಂಗ್ರೆಸ್ ಸಹ ಈ ಮಾಧ್ಯಮದಲ್ಲಿ ಬಲಿಷ್ಠವಾಗಿ ಬಿಜೆಪಿಗೆ ಕೌಂಟರ್ ಕೊಡಬೇಕು. ಕಾಂಗ್ರೆಸ್​ನಿಂದ ದೇಶಕ್ಕೆ ಒಳಿತೆಂಬುದನ್ನು ಯುವಕರಿಗೆ ಮುಟ್ಟಿಸುವ ಕೆಲಸವಾಗಬೇಕು.

# ಬಿಜೆಪಿಯ ಮತ ಪ್ರಮಾಣ ಹೆಚ್ಚಳದ ಹಿಂದೆ ಕೆಳಹಂತದ ಸಮಿತಿಗಳ ಜವಾಬ್ದಾರಿ ಇದೆ. ಹೀಗಾಗಿ ಬೂತ್ ಮತ್ತು ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಗೊಳ್ಳುವುದರ ಜತೆ ಸದಾ ಚಟುವಟಿಕೆಯಲ್ಲಿದ್ದು, ಜನರ ಜತೆ ಬೆರೆಯಬೇಕು. ಅರ್ಹ, ನಿಷ್ಠರನ್ನು ಬಳಸಿಕೊಳ್ಳಬೇಕು.

# ಯುವ ಕಾಂಗ್ರೆಸ್, ಎನ್​ಎಸ್​ಯುುಐ ಘಟಕಗಳ ಚುಟುವಟಿಕೆ ಹೆಚ್ಚಾಗಬೇಕು. ಇವು ಪ್ರಚಾರಕ್ಕೆ ಸೀಮಿತವಾಗದೇ ಪಕ್ಷದ ವರ್ಚಸ್ಸು ಹೆಚ್ಚಿಸುವ ಕೆಲಸ ಮಾಡಬೇಕು. ವಿಶೇಷ ಸಂದರ್ಭಗಳಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಜನರ ಬಳಿಗೆ ತೆರಳಿ ಪಕ್ಷದ ನಡುವಿನ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು.

# ಬಿಜೆಪಿಯು ಅಪಪ್ರಚಾರ ಮತ್ತು ಭಾವನಾತ್ಮಕ ವಿಚಾರದಲ್ಲಿ ಮತಗಳ ಕ್ರೊಡೀಕರಣ ಮಾಡುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಅದೇ ಆಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಇದನ್ನು ತಡೆಯಲು ಮುಂದಾಗಬೇಕು.

ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆದು ಸೋಲಿಸಿದರು. ಕಾರ್ಯಕರ್ತರು ಎದೆಗುಂದಬಾರದು. ಕನಿಷ್ಠ ಕಾರ್ಯಕ್ರಮದ ದೀವಿಗೆ ಅಡಿಯಲ್ಲಿ ಸರ್ಕಾರ ನಡೆಯುತ್ತದೆ.

| ಈಶ್ವರ ಖಂಡ್ರೆ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ

ಬಿಜೆಪಿಯನ್ನು ದೂರವಿಡಲು ರಾಹುಲ್ ಸೂಚನೆ ಕೊಟ್ಟಿದ್ದರಿಂದ ಈ ಸರ್ಕಾರ ರಚನೆಯಾಗಿದೆ. ನಮ್ಮ ಭಾಗದ ಕೆಲವು ಜಿಲ್ಲೆಯ ಕಾರ್ಯಕರ್ತರಿಗೆ ನೋವಿದ್ದು, ಅರಿವಿದೆ. ಉಳಿದ ಕಡೆ ಒಳ್ಳೆಯ ತೀರ್ಮಾನ ಎಂಬ ಭರವಸೆಯಲ್ಲಿದ್ದಾರೆ.

| ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವ

ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬೇಕು, ರಾಹುಲ್ ಪ್ರಧಾನಿಯಾಗಬೇಕು. ದಿನೇಶ್, ಈಶ್ವರ ಖಂಡ್ರೆ ಜೋಡಿ ಹೆಚ್ಚುಸ್ಥಾನ ತಂದುಕೊಡುತ್ತದೆ ಎಂಬ ವಿಶ್ವಾಸವಿದೆ.

| ಜಿ.ಪರಮೇಶ್ವರ್ ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ

ವಿಧಾನಸಭೆ ಚುನಾವಣೆಯಲ್ಲಿ ನನ್ನ ಹಾಗೂ ಪರಮೇಶ್ವರ್ ಮೇಲೆ ರಾಹುಲ್ ಗಾಂಧಿ ನಂಬಿಕೆ ಇಟ್ಟಿದ್ದರು. ಆದರೆ, ನಿರೀಕ್ಷೆ ಈಡೇರಲಿಲ್ಲ. ನಮ್ಮ ಸೋಲಿಗೆ ಬಿಜೆಪಿ, ಆರ್​ಎಸ್​ಎಸ್ ಮಾಡಿದ ಅಪಪ್ರಚಾರ ಕಾರಣ. ಇದರ ಬಗ್ಗೆ ತಿಳಿಸುವ ಗಟ್ಟಿ ಕೆಲಸ ನಮ್ಮ ಕಡೆಯಿಂದಾಗಲಿಲ್ಲ.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *

Back To Top