More

    ಟೆಕ್​ಲೋಕ; ಪ್ರೋಗ್ರಾಮ್ ಬರೆಯದೆ ಪ್ರೋಗ್ರಾಮಿಂಗ್ ಮಾಡಿ!

    ಟೆಕ್​ಲೋಕ; ಪ್ರೋಗ್ರಾಮ್ ಬರೆಯದೆ ಪ್ರೋಗ್ರಾಮಿಂಗ್ ಮಾಡಿ!ಸಾಫ್ಟ್​ವೇರ್ ಇಂಜಿನಿಯರುಗಳು ಏನು ಮಾಡುತ್ತಾರೆ ಎಂದು ಕೇಳಿದರೆ ಸಾಫ್ಟ್​ವೇರ್ ಬರೆಯುತ್ತಾರೆ ಎನ್ನುವುದು ಸುಲಭದ ಉತ್ತರ. ಎಲ್ಲರೂ ಅಲ್ಲದಿದ್ದರೂ ಬಹುಪಾಲು ಸಾಫ್ಟ್​ವೇರ್ ಇಂಜಿನಿಯರ್​ಗಳು ಸಾಫ್ಟ್​ವೇರ್ ಬರೆಯುವುದು ನಿಜವೂ ಹೌದು.

    ಸಾಫ್ಟ್​ವೇರ್, ಅಂದರೆ ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸ ಸಾಕಷ್ಟು ಸಂಕೀರ್ಣವಾದದ್ದು. ನಮ್ಮ ಸಾಫ್ಟ್​ವೇರ್ ಯಾವ ಕೆಲಸವನ್ನು ಹೇಗೆ ಮಾಡಬೇಕು ಎಂದು ನಿರ್ಧರಿಸುವುದು, ಕಂಪ್ಯೂಟರ್ (ಅಥವಾ ಮೊಬೈಲ್ ಫೋನ್) ಆ ಕೆಲಸ ಮಾಡಲು ಬೇಕಾದ ನಿರ್ದೇಶನಗಳನ್ನೆಲ್ಲ ‘ಪ್ರೋಗ್ರಾಮ್ ಅಥವಾ ‘ಕೋಡ್’ ರೂಪದಲ್ಲಿ ಬರೆದಿಡುವುದು ಈ ಕೆಲಸದ ಪ್ರಮುಖ ಹೆಜ್ಜೆಗಳು. ‘ಪ್ರೋಗ್ರಾಮಿಂಗ್’ ಅಥವಾ ‘ಕೋಡಿಂಗ್’ ಎಂದು ಕರೆಯುವುದು ಈ ಕೆಲಸವನ್ನೇ. ವಿವಿಧ ಕೆಲಸಗಳನ್ನು ಮಾಡುವ ಇಂತಹ ಹಲವು ಪ್ರೋಗ್ರಾಂಗಳು ಒಟ್ಟುಸೇರಿದಾಗ ತಂತ್ರಾಂಶ ಸಿದ್ಧವಾಗುತ್ತದೆ. ಹೀಗೆ ಸಿದ್ಧವಾದ ತಂತ್ರಾಂಶ ಎಲ್ಲಿ ಕೆಲಸಮಾಡುತ್ತದೋ ಆ ಸಾಧನ ಈ ಪ್ರೋಗ್ರಾಂಗಳಲ್ಲಿ ಹೇಳಿರುವ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತದೆ.

    ಕಂಪ್ಯೂಟರ್, ಮೊಬೈಲ್ ಮುಂತಾದ ಯಾವುದೇ ಸಾಧನಕ್ಕೆ ಅರ್ಥವಾಗುವುದು ಒಂದು-ಸೊನ್ನೆಗಳ ಯಂತ್ರ ಭಾಷೆ ಮಾತ್ರ ಎನ್ನುವುದು ನಮಗೆ ಗೊತ್ತಿದೆ. ಹಾಗಾದರೆ ನಾವು ಬರೆಯುವ ಪ್ರೋಗ್ರಾಮುಗಳೂ ಅದೇ ಭಾಷೆಯಲ್ಲೇ ಇರಬೇಕೇ? ಎರಡು ಅಂಕಿಗಳನ್ನು ಕೂಡು ಎನ್ನುವುದಕ್ಕೆ ಒಂದನ್ನೂ ಸೊನ್ನೆಯನ್ನೂ ತಲಾ ಅದೆಷ್ಟು ಸಾರಿ ಬರೆಯಬೇಕು? ‘0010 1010 0001 1101’, ‘0011 1100 1010 1111’, ‘0101 0110 1101 0101’ ಎಂದೆಲ್ಲ ಟೈಪಿಸುವಾಗ 1 ಬರೆಯುವ ಕಡೆ 0, 0 ಬರೆಯುವ ಕಡೆ 1 ಬರೆದಿಟ್ಟರೆ ಪ್ರೋಗ್ರಾಮಿನ ಫಲಿತಾಂಶದ ಗತಿ?

    ಸಾಫ್ಟ್​ವೇರ್ ಇಂಜಿನಿಯರುಗಳ ಪುಣ್ಯ, ಅವರು ಇಷ್ಟೆಲ್ಲ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಮನುಷ್ಯರಿಗೆ-ಯಂತ್ರಗಳಿಗೆ ಇಬ್ಬರಿಗೂ ಅರ್ಥವಾಗುವ ಪ್ರೋಗ್ರಾಮಿಂಗ್ ಭಾಷೆಗಳು ಅವರ ಕೆಲಸವನ್ನು ಸಾಕಷ್ಟು ಸುಲಭಗೊಳಿಸುತ್ತವೆ. ಮಾತಾಡಲು-ಓದಿ ಬರೆಯಲು ಹೊಸ ಭಾಷೆ ಕಲಿಯುವ ಹಾಗೆ ಪ್ರೋಗ್ರಾಮಿಂಗ್ ಭಾಷೆಯ ವ್ಯಾಕರಣವನ್ನೂ ಕಲಿತರೆ ಸಾಕು, ಅವರು ತಮ್ಮ ನಿರ್ದೇಶನಗಳನ್ನು ಅದೇ ಭಾಷೆಯಲ್ಲಿ ಬರೆಯಬಹುದು.

    ಇದು ಮೇಲ್ನೋಟಕ್ಕೆ ಸುಲಭವೆನಿಸಿದರೂ ವಾಸ್ತವ ಬೇರೆಯದೇ ಇದೆ. ಹೊರಪ್ರಪಂಚದಲ್ಲಿ ಇರುವ ಹಾಗೆ ಡಿಜಿಟಲ್ ಜಗತ್ತಿನಲ್ಲೂ ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿವೆ. ಒಂದೊಂದು ಕೆಲಸಕ್ಕೆ ಒಂದೊಂದು ಪ್ರೋಗ್ರಾಮಿಂಗ್ ಭಾಷೆ ಬಳಸಬೇಕಾಗಿ ಬರುವುದು ಕೂಡ ಅಪರೂಪವೇನಲ್ಲ.

    ಹೀಗಿರುವಾಗ ಒಬ್ಬ ಸಾಫ್ಟ್​ವೇರ್ ಇಂಜಿನಿಯರ್ ಎಷ್ಟು ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿತಿರಲು ಸಾಧ್ಯ? ಒಂದೊಮ್ಮೆ ಹೊಸ ಭಾಷೆ ಬಳಸಿ ಕೆಲಸಮಾಡಬೇಕಾಗಿ ಬಂದರೆ, ಎಷ್ಟೇ ಬೇಗ ಕಲಿಯುತ್ತೇನೆಂದರೂ, ಆ ಕಲಿಕೆ ಮುಗಿಯುವವರೆಗೆ ಕೆಲಸ ನಿಂತುಹೋಗುತ್ತದಲ್ಲ?

    ಇಂತಹ ಸನ್ನಿವೇಶ ತಪ್ಪಿಸಲೆಂದೇ ತಂತ್ರಜ್ಞರು ಹೊಸ ವ್ಯವಸ್ಥೆಗಳನ್ನು ರೂಪಿಸುತ್ತಿದ್ದಾರೆ. ಇಂತಹ ವ್ಯವಸ್ಥೆಗಳಲ್ಲಿ ’ಲೋ-ಕೋಡ್ ಅಪ್ಲಿಕೇಶನ್ ಪ್ಲಾಟ್​ಫಾಮ್ರ್’ಗಳದು ಪ್ರಮುಖ ಹೆಸರು.

    ತಂತ್ರಾಂಶದ ಮೂಲಕ ನಮ್ಮ ಕೆಲಸ ಸಾಧಿಸಿಕೊಳ್ಳಲು ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಪ್ರೋಗ್ರಾಮ್ ಅಥವಾ ಕೋಡ್ ಬರೆಯುವ ಕೆಲಸವನ್ನು ಗಣನೀಯವಾಗಿ ಕಡಿಮೆಗೊಳಿಸುವುದು ಈ ವೇದಿಕೆಗಳ ಮುಖ್ಯ ಉದ್ದೇಶ. ಯಾವುದೇ ಕೆಲಸ ಹೇಗೆ ಮಾಡಬೇಕೆನ್ನುವುದನ್ನು ಸಾಲುಸಾಲು ಪಠ್ಯದ ರೂಪದಲ್ಲಿ ಟೈಪ್ ಮಾಡುವ ಬದಲು ಪೂರ್ವನಿರ್ಧಾರಿತ ಅಂಶಗಳನ್ನು ಸೂಕ್ತವಾಗಿ ಜೋಡಿಸುವುದರ ಮೂಲಕ ಸಾಧ್ಯವಾಗಿಸುವುದು ಇವುಗಳ ಹೆಚ್ಚುಗಾರಿಕೆ.

    ಕಂಪ್ಯೂಟರ್, ಮೊಬೈಲ್ ಮತ್ತಿತರ ಸಾಧನಗಳಲ್ಲಿ ಸಂಕೇತಗಳನ್ನು ಕ್ಲಿಕ್ ಮಾಡುವ ಹಾಗೂ ಅತ್ತಿತ್ತ ಸರಿಸುವ ಮೂಲಕ (ಡ್ರಾ್ಯಗ್ ಆಂಡ್ ಡ್ರಾಪ್) ಕೆಲಸ ಮಾಡಿಕೊಳ್ಳುವುದು ನಮಗೆ ಗೊತ್ತೇ ಇದೆ. ಪ್ರೋಗ್ರಾಮಿಂಗ್ ಕೆಲಸವನ್ನೂ ಅಷ್ಟೇ ಸುಲಭವಾಗಿಸುವುದು ಲೋ-ಕೋಡ್ ವ್ಯವಸ್ಥೆಗಳ ಉದ್ದೇಶ.

    ನಮ್ಮ ತಂತ್ರಾಂಶದಲ್ಲಿ ಯಾವೆಲ್ಲ ಆಯ್ಕೆಗಳಿರಬೇಕು, ಅದು ಯಾವ ದತ್ತಸಂಚಯದ (ಡೇಟಾಬೇಸ್) ಜತೆ ವ್ಯವಹರಿಸಬೇಕು, ಅಲ್ಲಿ ದಾಖಲಾಗುವ ದತ್ತಾಂಶವನ್ನು ಹೇಗೆ ಉಳಿಸಬೇಕು ಎನ್ನುವುದನ್ನೆಲ್ಲ ನಿರ್ದಿಷ್ಟ ಆಯ್ಕೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಾವಿಲ್ಲಿ ಸರಳವಾಗಿ ಗೊತ್ತುಪಡಿಸಬಹುದು.

    ಹೊಸ ಭಾಷೆಗಳನ್ನು ಕಲಿಯುವ ಅನಿವಾರ್ಯವನ್ನು ಹೋಗಲಾಡಿಸುವುದಷ್ಟೇ ಅಲ್ಲ, ತಂತ್ರಾಂಶ ತಯಾರಿಗೆ ಬೇಕಾದ ಒಟ್ಟು ಸಮಯವನ್ನು ಗಮನಾರ್ಹವಾಗಿ ಕಡಿಮೆಮಾಡುವುದಕ್ಕೂ ಈ ವ್ಯವಸ್ಥೆಗಳು ನೆರವಾಗುತ್ತವೆ. ಇದರಿಂದಾಗಿ ಹೊಸ ತಂತ್ರಾಂಶಗಳನ್ನು ಬೇಗಬೇಗ ಸಿದ್ಧಪಡಿಸುವುದು, ಬಳಕೆದಾರರಿಗೆ ತಲುಪಿಸುವುದು ಸಾಧ್ಯವಾಗುತ್ತದೆ.

    ಹೆಚ್ಚಿನ ತಾಂತ್ರಿಕ ಪರಿಣತಿ ಇಲ್ಲದವರೂ ಪ್ರೋಗ್ರಾಮಿಂಗ್​ನಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಸುವುದು ಇವುಗಳ ಇನ್ನೊಂದು ಅನುಕೂಲ. ವಿಶಿಷ್ಟವಾದ ಉದ್ದೇಶಗಳನ್ನು ಹೊರತುಪಡಿಸಿ, ಸಾಮಾನ್ಯ ಅಗತ್ಯಗಳಿಗೆ ಬೇಕಾದ ಅನೇಕ ಬಗೆಯ ತಂತ್ರಾಂಶಗಳ ಸೃಷ್ಟಿಯಲ್ಲಿ ಇವು ನೆರವಾಗುತ್ತವೆ.

    ಮೈಕ್ರೋಸಾಫ್ಟ್ ಪವರ್​ಆಪ್ಸ್, ಜೋಹೋ ಕ್ರಿಯೇಟರ್, ಮೆಂಡಿಕ್ಸ್ ಮುಂತಾದವು ಈಗಾಗಲೇ ಲಭ್ಯವಿರುವ ಲೋ-ಕೋಡ್ ಅಪ್ಲಿಕೇಶನ್ ಪ್ಲಾಟ್​ಫಾಮ​ಗಳಿಗೆ ಕೆಲ ಉದಾಹರಣೆಗಳು. ಆಪ್ ಮೇಕರ್ ಎನ್ನುವ ವ್ಯವಸ್ಥೆಯೊಂದನ್ನು ಗೂಗಲ್ ಸಂಸ್ಥೆ ಕೂಡ ರೂಪಿಸಿದೆ. 2024ರ ವೇಳೆಗೆ ತಂತ್ರಾಂಶಗಳನ್ನು ಸಿದ್ಧಪಡಿಸುವ ಕೆಲಸದ ಬಹುಪಾಲು ಚಟುವಟಿಕೆಗಳು, ಪ್ರೋಗ್ರಾಮ್ ಬರೆಯದೆ ಪ್ರೋಗ್ರಾಮಿಂಗ್ ಮಾಡಲು ಸಾಧ್ಯವಾಗಿಸುವ ಇಂತಹ ವೇದಿಕೆಗಳ ಮೂಲಕವೇ ಆಗಲಿವೆ ಎಂದು ಗಾರ್ಟ್​ನರ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts