Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ಶಾಲೆ ಉಳಿವಿಗೆ ಚಾಲಕನಾದ ಶಿಕ್ಷಕ

Wednesday, 11.07.2018, 10:17 PM       No Comments

ಉಡುಪಿ: ಸರ್ಕಾರಿ ಶಾಲೆಗಳು ಮುಚ್ಚಿದರೆ ನಮಗೇನು? ನಮಗೆ ನಮ್ಮ ಸಂಬಳ ಬರುತ್ತದೆ…ಎಂಬ ಮನಸ್ಥಿತಿಗೆ ಹೊರತಾಗಿ ಇಲ್ಲೊಬ್ಬ ಶಿಕ್ಷಕರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಶಾಲೆ ಉಳಿಯಬೇಕು, ಮಕ್ಕಳು ಶಾಲೆಗೆ ಬರಬೇಕು ಎಂಬ ಉದ್ದೇಶ ಇಟ್ಟುಕೊಂಡು ಶಾಲಾ ವಾಹನದ ಚಾಲಕನಾಗುವ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುತ್ತಿದ್ದಾರೆ.
ಬ್ರಹ್ಮಾವರ ಸಮೀಪದ ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್ ಶಾಲಾ ವಾಹನಕ್ಕೆ ಚಾಲಕನಾದವರು.
ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸೇರಿ ದಾನಿಗಳ ಮೂಲಕ ವಾಹನ ವ್ಯವಸ್ಥೆ ಮಾಡಿದ್ದರು. ವಾಹನಕ್ಕೆ ಚಾಲಕ ಬೇಕು, ಚಾಲಕನಿಗೆ ಸಂಬಳ ಬೇಕು. ಇದು ಮತ್ತಷ್ಟು ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್ ತಾವೇ ವಾಹನಕ್ಕೆ ಚಾಲಕನಾಗಲು ಇಚ್ಛೆ ಪಟ್ಟರು.
ಪ್ರತಿದಿನ 4 ಟ್ರಿಪ್: ಈಗ ಶಾಲೆಯಲ್ಲಿ 90 ವಿದ್ಯಾರ್ಥಿಗಳಿದ್ದಾರೆ. 60 ಮಕ್ಕಳನ್ನು ಶಾಲೆಗೆ ಕರೆತರಲು ಪ್ರತಿದಿನ 4 ಟ್ರಿಪ್ ಮಾಡಬೇಕು. ಹೊರಳಿಜೆಡ್ಡು, ಮುಸಪುರಿ, ಕಾಜ್ರಳ್ಳಿ, ಕಾರ್ತಿಬೆಟ್ಟು ಅಲ್ತಾರು ಮುಂತಾದೆಡೆಯಿಂದ 30 ಕಿ.ಮೀ.ಕ್ರಮಿಸಿ ಮಕ್ಕಳನ್ನು ಕರೆ ತರಬೇಕು. ಬೆಳಗ್ಗೆ 8:15ಕ್ಕೆ ಮನೆ ಬಿಡುವ ರಾಜಾರಾಮ್ 9.15ಕ್ಕೆ ಟ್ರಿಪ್ ಮುಗಿಸಿ ಶಾಲೆಗೆ ಹಾಜರಾಗುತ್ತಾರೆ. ಸಾಯಂಕಾಲವೂ ಮಕ್ಕಳನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಿದ ಬಳಿಕವೇ ಇವರು ಮನೆ ಸೇರುವುದು.
ಪ್ರತಿದಿನ 6 ಲೀಟರ್ ಡೀಸೆಲ್ ವಾಹನಕ್ಕೆ ಬೇಕು, ಡೀಸೆಲ್, ನಿರ್ವಹಣೆ ಖರ್ಚನ್ನು ಹಳೇ ವಿದ್ಯಾರ್ಥಿ ಸಂಘ ನೋಡಿಕೊಳ್ಳುತ್ತದೆ. ವಾಹನದ ಸಣ್ಣಪುಟ್ಟ ನಿರ್ವಹಣೆಯನ್ನು ಈ ದೈಹಿಕ ಶಿಕ್ಷಕರೇ ಮಾಡುತ್ತಾರೆ. ರಾಜರಾಮ್ ರಜೆಯಲ್ಲಿದ್ದಾಗ ಸ್ಥಳೀಯ ರಿಕ್ಷಾ ಚಾಲಕರು ವಾಹನ ಟ್ರಿಪ್ ಮಾಡುತ್ತಾರೆ, ಅವರಿಗೆ ಶಿಕ್ಷಕರೇ ಭತ್ಯೆ ನೀಡುತ್ತಾರೆ. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಆಚಾರ್ ಸಹಕಾರ ನೀಡುತ್ತಾರೆ.

ಶಾಲಾ ವಾಹನ ಕೊಡುಗೆದಾಖಲಾತಿಯಲ್ಲಿ ಏರಿಕೆ: ಖಾಸಗಿ ಶಾಲೆಗಳಲ್ಲಿ ಸಾರಿಗೆ ಸಹಿತ ಮೂಲಸೌಲಭ್ಯ ಕಂಡು ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದರು. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿತ್ತು. 2017-18ರ ವರ್ಷಾರಂಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್ ಶೆಟ್ಟಿ, ನಿರ್ಮಿತಿ ಇಂಜಿನಿಯರ್ ಗಣೇಶ್ ಪ್ರಸಾದ್ ಶೆಟ್ಟಿ ಶ್ರಮದಿಂದ, ಬೆಂಗಳೂರಿನ ಉದ್ಯಮಿ ವಿಜಯ ಹೆಗ್ಡೆ ಬಾರಾಳಿ ಅವರು ಟೆಂಪೊ ಟ್ರಾವೆಲರ್ ವಾಹನವನ್ನು ಶ್ರೀರಾಮ ಸೇವಾ ಸಮಿತಿ ಮೂಲಕ ಶಾಲೆಗೆ ಕೊಡುಗೆಯಾಗಿ ನೀಡಿದರು. ವಾಹನ ವ್ಯವಸ್ಥೆ ಮಾಡಿದ ನಂತರ ಏರಿಕೆಯಾಗಿದೆ. ಮಕ್ಕಳು ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. 1ರಿಂದ 7ನೇ ತರಗತಿವರೆಗೆ ತರಗತಿ ಹೊಂದಿರುವ ಶಾಲೆಯಲ್ಲಿ ನಾಲ್ವರು ಸರ್ಕಾರಿ ಶಿಕ್ಷಕರು, ಓರ್ವ ಗೌರವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ 90 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಶಾಲೆಗೆ ವಾಹನ ವ್ಯವಸ್ಥೆ ಬಂದ ಮೇಲೆ ಮಕ್ಕಳ ದಾಖಲಾತಿ ಸಂಖ್ಯೆ ಏರಿಕೆಯಾಗಿದೆ. ಹಳೇ ವಿದ್ಯಾರ್ಥಿ ಸಂಘ, ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ, ಎಸ್‌ಡಿಎಂಸಿ ತುಂಬು ಸಹಕಾರದಿಂದ ಇದು ಸಾಧ್ಯವಾಗಿದೆ. ಚಾಲಕನನ್ನು ಇಟ್ಟರೆ ಸಂಬಳ ಕೊಡಬೇಕು, ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ನಾನೇ ಚಾಲಕನಾಗಿದ್ದೇನೆ. ನಮ್ಮ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಖುಷಿಯಾಗಿದ್ದೇನೆ.
|ರಾಜಾರಾಮ್, ದೈಹಿಕ ಶಿಕ್ಷಣ ಶಿಕ್ಷಕ

ಶಾಲೆಯ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಸಹಕರಿಸುತ್ತಿದ್ದಾರೆ. ಶಿಕ್ಷಕರು, ಎಸ್‌ಡಿಎಂಸಿ ಸಮಿತಿ ಶ್ರಮಿಸುತ್ತಿದೆ. ಹಳೇ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದ ಶಾಲೆಗೆ ವಾಹನ ದೊರೆತಿದೆ. ಶಾಲೆಗೆ ಈ ವರ್ಷ ಸುವರ್ಣ ಮಹೋತ್ಸವ ಸಂಭ್ರಮ, ಇದರಲ್ಲಿ ದೇಣಿಗೆ ಸಂಗ್ರಹಿಸಿ ಒಂದಿಷ್ಟು ಮೊತ್ತವನ್ನು ಶಾಲಾ ವಾಹನ ನಿರ್ವಹಣೆಗೆ ತೆಗೆದಿಡಲಾಗುತ್ತದೆ.
|ಪ್ರಿಯದರ್ಶನ್ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ

Leave a Reply

Your email address will not be published. Required fields are marked *

Back To Top