Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಮಾತೆಯರ ಮಹಾತ್ಯಾಗ ಮರೆಯದಿರಿ ಮನುಜರೇ

Saturday, 20.01.2018, 3:05 AM       No Comments

ಭಾರತೀಯ ಸಂಸ್ಕೃತಿ ತಾಯಿಗೆ ಮಹೋನ್ನತ ಸ್ಥಾನ ಕೊಟ್ಟಿದೆ. ತಾಯಿಯ ತ್ಯಾಗ, ಸಮರ್ಪಣೆ ಅಷ್ಟು ಉನ್ನತ. ಆದರೆ, ಇಂದಿನ ದಿನಗಳಲ್ಲಿ ಅನೇಕ ಮಕ್ಕಳು ಬಾಂಧವ್ಯದ ಮಹತ್ವವನ್ನೇ ಅರಿಯದೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ನೂಕುತ್ತಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಆಸರೆ ಬಯಸುವ ಅಪ್ಪ-ಅಮ್ಮಂದಿರು ಇದರಿಂದ ಹತಾಶರಾಗುತ್ತಿದ್ದಾರೆ.

 ಮುಪ್ಪು ಆವರಿಸಿದಾಗ ಮುದುಕರು ಮಕ್ಕಳಂತಾಗುತ್ತಾರೆ ಎಂದು ಕೇಳಿದ್ದೆ. ಆದರೆ ನಾವು ಮಕ್ಕಳಿದ್ದಾಗ ಲಾಲನೆ ಪಾಲನೆ ಮಾಡಿ ತನ್ನ ನಿದ್ರೆ, ಸುಖ ಮರೆತು ಅಳುವ ಕಂದಮ್ಮನನ್ನು ಎದೆಗೊತ್ತಿಕೊಂಡು, ಹಾಡಿ ಹರಸಿದ ತಾಯಿ ಮುದುಕಿಯಾದಾಗ; ಅವಳ ಆರೈಕೆ ಮಾಡಲು ಹಿಂಜರಿದ ಮಗ ಮೂರನೇ ಮಹಡಿಯಿಂದ ತನ್ನ ತಾಯಿಯನ್ನು ತಳ್ಳಿ ‘ಆತ್ಮಹತ್ಯೆ ಮಾಡಿಕೊಂಡಳು’ ಎಂದು ಪುಕಾರು ಎಬ್ಬಿಸಿದ ನೀಚ ಮಗನ ಕತೆ ಓದಿದಾಗ ಎದೆ ಝುಲ್ಲೆಂದಿತು, ಕರುಳು ಕಿತ್ತು ಬಂತು. ಭಗವಂತನೇ ಏನು ಭಯಂಕರ ಕಲಿಯುಗ ಎಂದೆನಿಸಿಗತು!

ಮನುಷ್ಯರು ಮಾನವೀಯತೆ ಮರೆತು ಇಂಥ ಪೈಶಾಚಿಕ ಕೃತ್ಯ ಮಾಡಲು ಕಾರಣ ನಾವು ಮಾತೆಯರ ಮಹತ್ವ ಮರೆತು ಅವರಿಗೆ ಹಿಂದಿನ ಕಾಲದಲ್ಲಿ ಕೊಡುತ್ತಿದ್ದ ಮರ್ಯಾದೆಯ ಸಂಸ್ಕೃತಿ ಬಿಟ್ಟು ವಿಕೃತ ಸ್ವಾರ್ಥಿಗಳಾಗುತ್ತಿರುವುದು. ‘ಯಾದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತ/ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ’ ಎಂದು ದೇವಿಯನ್ನೇ ಮಾತೆಯಂತೆ ಕಂಡು, ತಾಯಿಯನ್ನೇ ದೇವಿಯಂತೆ ಕಾಣುವ ಸುಸಂಸ್ಕೃತ ದೇಶದಲ್ಲಿ ‘ಮಾತೃ ದೇವೋಭವ’ ಎಂಬುದು ರೂಢಿಯಲ್ಲಿತ್ತು! ಆದ್ದರಿಂದ ತಾಯಿಯ ಮಾತನ್ನು ಯಾರೂ ಮೀರುತ್ತಿರಲಿಲ್ಲ.

ನನ್ನ ಸ್ನೇಹಿತೆ ಡಾ. ಶಾಂತಾನಂದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾಗಿನ ಘಟನೆ. ಅವರ ತಂದೆ ಒಂದು ದಿನ ಮನೆಮಂದಿಗೆಲ್ಲ ಕಟ್ಟಪ್ಪಣೆ ಮಾಡಿ- ‘ಅಮ್ಮ ಹೇಳಿದ್ದಾರೆ ನಾಳೆ ಯಾರೂ ಕಚೇರಿಗೆ, ಕಾಲೇಜಿಗೆ ಹೋಗಕೂಡದು. ಹತ್ತುಗಂಟೆಗೆ ಎಲ್ಲರೂ ಅಮ್ಮನ ಹತ್ತಿರ ಬರಬೇಕಂತೆ’ ಎಂದು ತಿಳಿಸಿದರಂತೆ! ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳೆಲ್ಲ ಅಜ್ಜಿಯ ಸುತ್ತಲೂ ಕುಳಿತರಂತೆ. ನೂರು ವರ್ಷದ ಅಜ್ಜಿ ಸ್ನಾನ, ಪೂಜೆ ಮುಗಿಸಿ ತಿಂಡಿ ತಿಂದು ಮನೆಮಂದಿಗೆಲ್ಲ ಆಶೀರ್ವಾದ ಮಾಡುತ್ತ ಹಿಂದಿನ ದಿನ ಹೇಳಿದಂತೆ ಸರಿಯಾಗಿ 10.30ಕ್ಕೆ ದೊಡ್ಡಮಗನ ತೊಡೆಯ ಮೇಲೆ ತಲೆ ಇಟ್ಟುಕೊಂಡು ಕೈಯಲ್ಲಿ ಜಪಮಾಲೆ ಹಿಡಿದು ಕಣ್ಣು ಮುಚ್ಚಿಕೊಂಡವರು ಏಳಲೇ ಇಲ್ಲವಂತೆ! ತಾಯಿಯ ಮಾತನ್ನು ನಂಬಿ ಕೆಲಸ ಬಗಡೆ ಬಿಟ್ಟು ತಾಯಿ ಪಕ್ಕ ಇದ್ದ ಅಂದಿನ ಹಿರಿಯ ಮಗನಿಗೂ ಇಂದು ತಾಯಿಯ ಸೇವೆ ಮಾಡಲಾಗುವುದಿಲ್ಲವೆಂದು ಕೆಳಗೆ ತಳ್ಳಿ ಸಾಯಿಸಿದ ಮಗನಿಗೂ ಎಷ್ಟೊಂದು ವ್ಯತ್ಯಾಸ!

ನನ್ನ ಗೆಳತಿ ಡಾ. ಮಹಾದೇವಿ ಒಂದು ಸಲ ಹೇಳಿದ್ದರು, ಪ್ರತಿದಿನ ತಪ್ಪದೆ ಅವರ ಮನೆಮುಂದೆ ಒಂದು ಹಸು ಬರುತ್ತಿತ್ತು. ಅವರ ತಾಯಿ ಅದಕ್ಕೆ ಬಾಳೇಹಣ್ಣು ತಿನ್ನಿಸಿ ತಲೆ ಸವರಿ ನಮಸ್ಕರಿಸಿ ಕಳಿಸುತ್ತಿದ್ದರು! ಅವರ ತಾಯಿ ತೀರಿಕೊಂಡ ದಿನ ಆ ಹಸುವಿಗೆ ಬಾಳೆಹಣ್ಣು ಕೊಡುವ ವ್ಯವಧಾನ ಯಾರಿಗೂ ಇರಲಿಲ್ಲ. ಆ ಹಸುವಿನ ಕಣ್ಣಲ್ಲೂ ನೀರೂರಿತ್ತು. ಎಲ್ಲರೊಂದಿಗೆ ಆ ಹಸು ಕೂಡ ಸ್ಮಶಾನದವರೆಗೂ ಹೋಯಿತಂತೆ! ಒಂದು ಮೂಕಪ್ರಾಣಿಗೆ ಇರುವ ಉಪಕಾರ ಸ್ಮರಣೆ ಮಾನವರಲ್ಲಿ ಯಾಕೆ ಮಾಯವಾಗಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಹೆಣ್ಣು ಗರ್ಭಧಾರಣೆಯಾದಾಗಿನಿಂದ ತುಂಬ ಜಾಗರೂಕಳಾಗಿ ತನ್ನ ಊಟ ತಿಂಡಿಗೆ ಕಡಿವಾಣ ಹಾಕಿ, ನಡೆನುಡಿಗಳಲ್ಲಿ ನಯ-ವಿನಯ ತಂದು ಮಗುವಿಗೆ ತೊಂದರೆ ಆಗದಂತೆ ಭ್ರೂಣವನ್ನು ಜತನ ಮಾಡುತ್ತಾಳೆ. ಹೆರಿಗೆ ಒಂದು ಪುನರ್ಜನ್ಮದ ತರಹ. ಹಲವು ಹೆಂಗಳೆಯರು ಹೆರಿಗೆ ವೇಳೆಯಲ್ಲಿ ಜೀವವನ್ನೇ ಕಳೆದುಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ಐದು ಮಾತೆಯರು ಹೆರಿಗೆ ಸಮಯದಲ್ಲಿ ಸಾಯುತ್ತಾರೆ. ತಾಯಿ ಮಗುವಿಗೆ ಜನ್ಮಕೊಟ್ಟರೆ ಆ ಮಗುವಿಗೆ ತಾಯಿಯೇ ಜಗತ್ತು! ಅದರ ಎಲ್ಲ ಚಟುವಟಿಕೆಗಳಿಗೆ ತಾಯಿಯೇ ಚಿಲುಮೆ.

ತಾಯಿಯ ಮಹತ್ವ ಅರಿತ ನಮ್ಮ ಸುಸಂಸ್ಕೃತ ಪೂರ್ವಜರು ನಾವು ದೇವರಂತೆ ಪೂಜಿಸುವ ರಾಮ-ಕೃಷ್ಣರನ್ನು ತಾಯಿಯ ಹೆಸರಿನಿಂದಲೇ ಕರೆಯುತ್ತಿದ್ದರು- ಕೌಸಲ್ಯಾಪುತ್ರ, ದೇವಕೀಸುತ ಇತ್ಯಾದಿ. ಮಕ್ಕಳು ತಂದೆ-ತಾಯಂದಿರನ್ನು ದೇವರಂತೆ ಕಾಣುತ್ತಿದ್ದರು. ಕಣ್ಣು ಇಲ್ಲದ ತಂದೆ-ತಾಯಂದಿರನ್ನು ಹೊತ್ತುಕೊಂಡು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರ ದಂತಕಥೆಯಾಗಿ ಉಳಿದಿದ್ದಾನೆ. ‘ಮಾತೃ ದೇವೋಭವ’ ಎಂದ ಪುಣ್ಯಭಾರತದಲ್ಲಿ ಯಾಕೆ ಇಂದು ಮಕ್ಕಳು ಹೀಗೆ ಬಾಂಧವ್ಯವನ್ನೇ ಮರೆಯುತ್ತಿದ್ದಾರೆ?

ಇತ್ತೀಚೆಗೆ ತಾನೇ ಚೆನ್ನೈನಲ್ಲಿ ನಿವೃತ್ತಿಪಡೆದ ತಂದೆ-ತಾಯಿ, ಮಕ್ಕಳು ನೋಡಿಕೊಳ್ಳುತ್ತಿಲ್ಲವೆಂದು ಸುಟ್ಟುಕೊಂಡು ಸತ್ತಿದ್ದನ್ನು ಓದಿಯೇ ಮೈ ಜುಂ ಎಂದಿತು. ಹೀಗೆ ಮಾಡುತ್ತಿರುವುದು ಏನೂ ಓದದ ಅವಿದ್ಯಾವಂತ ಅವಿವೇಕಿ ಬಡ ಮಕ್ಕಳಲ್ಲ! ವಿದ್ಯಾವಂತ ದಾನವರು ಮಾಡುತ್ತಿರುವುದು. ಹಾಗಾದರೆ ನಮ್ಮ ಸಂಸ್ಕೃತಿಯನ್ನು ಧಿಕ್ಕರಿಸಿ ಮಕ್ಕಳು ದಾನವರಾಗಲು ಇಂದಿನ ಶಿಕ್ಷಣ ಪದ್ಧತಿ ಕಾರಣವೇ? ಜಾಗತೀಕರಣದ ಆಧುನಿಕತೆಯ ಪರಿಣಾಮವೇ?

ಹೆಣ್ಣು ಪ್ರಕೃತಿ. ತಾಯಿ ಸಂಸ್ಕೃತಿಯಾದ್ದರಿಂದ ಒಂದು ಕಾಲಕ್ಕೆ ‘ಮಾತೆಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ’ ಎಂದು ಹೇಳುತ್ತಿದ್ದರು. ಆದ್ದರಿಂದ ಮಕ್ಕಳು ತಮ್ಮ ಏಳ್ಗೆಗೆ ತಾಯಿಯೇ ಮುಖ್ಯವೆಂದು ಗೌರವಿಸುತ್ತಿದ್ದರು. ತಾಯಿಯ ಹಾಲು ಶ್ರೇಷ್ಠ. ಅದರಿಂದಲೇ ಮಗುವಿಗೆ ಶಕ್ತಿ. ಆದರೆ ಇಂದಿನ ಹಲವು ತಾಯಂದಿರು ತಮ್ಮ ಮೊಲೆಹಾಲನ್ನು ಕೊಡದೆ ವಂಚಿಸಿ ಮಗುವಿನ ಆರೈಕೆಗೆ ದಾಯಿಯನ್ನಿಟ್ಟು ಅದಕ್ಕೆ ಹಾಲು ಕುಡಿಸುವುದು, ತಿಂಡಿ ತಿನ್ನಿಸುವುದನ್ನು ಕೆಲಸದವಳಿಂದ ಮಾಡಿಸುತ್ತಿರುವುದು ವಿಚಿತ್ರವಾದರೂ ಸತ್ಯ! ಹುಟ್ಟಿದ ಕೆಲವೇ ತಿಂಗಳಿಗೆ ಬೇಬಿಕೇರ್, ನಂತರ ಕಿಂಡರ್ ಗಾರ್ಟನ್, ಮನೆಗೆ ಬಂದರೆ ಕೆಲಸದವರೊಂದಿಗೆ ಬೆಳೆಯುವ ಮಕ್ಕಳು ಶಾಲೆ, ಮನೆ ಮಧ್ಯ ಭಾವನಾತ್ಮಕ ಸಂಬಂಧವಿಲ್ಲದೆ ಯಂತ್ರಗಳಂತೆ ಗಬೆಳೆಯುತ್ತಿದ್ದಾರೆ. ಕೇವಲ ಅಂಕ ಗಳಿಸುವುದು, ಕೆಲಸಕ್ಕೆ ಸೇರುವುದು, ಸಂಪಾದಿಸುವುದು ಅಷ್ಟೇ ಪ್ರಪಂಚವೆಂದು ತಿಳಿದಿದ್ದಾರೆ. ಅವರಿಗೆ ಸುಮಧುರ ಸಂಬಂಧಗಳ ಗಂಧವೇ ಇಲ್ಲ.

ಇತ್ತೀಚೆಗೆ ಅರಬ್ ರಾಷ್ಟ್ರದಲ್ಲಿ ಒಬ್ಬ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು. ಅವಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಂಡ ಪತ್ನಿ ನೀಡಿದ ಕಾರಣ ಕೇಳಿ ಅವಾಕ್ಕಾದ. ಆಕೆ ಹೇಳಿದ್ದು- ‘ಗಂಡ ನನ್ನನ್ನು ತುಂಬ ಪ್ರೀತಿಸುತ್ತಾರೆ ನಿಜ. ನಾನು ಕೇಳಿದ್ದಕ್ಕಿಂತ ಹೆಚ್ಚಾಗಿಯೇ ನನಗೆ ಎಲ್ಲ ಕೊಡಿಸುವುದೂ ನಿಜ. ನನಗೆಂದೂ ಬೇಜಾರು ಮಾಡದೇ ನನ್ನನ್ನು ತುಂಬ ಹಚ್ಚಿಕೊಂಡಿರುವುದೂ ನಿಜ. ಆದರೆ ನನ್ನ ಪ್ರೀತಿಯಲ್ಲಿ ತನ್ನ ಮನೆಯವರನ್ನು ಮರೆತು ಹೆತ್ತತಾಯಿಯನ್ನೇ ದೂರ ಮಾಡಿದ ಈ ಗಂಡನನ್ನು ನಾನು ಹೇಗೆ ನಂಬಲಿ? ಯಾರು ತನಗೆ ಜನ್ಮಕೊಟ್ಟ ತಾಯಿಯನ್ನು ಮರೆಯುತ್ತಾರೋ ಅವರು ನಂಬಿಕೆಗೆ ಅರ್ಹರಲ್ಲ. ಮುಂದೆ ನನ್ನನ್ನೂ ಮರೆಯುವುದಿಲ್ಲವೆಂದು ಹೇಗೆ ನಂಬಲಿ!?’. ನ್ಯಾಯಾಧೀಶರಿಂದ ಹಿಡಿದು ಇಡೀ ದೇಶ ಆ ಮಹಿಳೆಯನ್ನು ಹಾಡಿ ಹೊಗಳಿತು. ಕಾರಣ ಅವಳು ಮಾತೆಯ ಮಹತ್ವ ಮರೆಯಬೇಡ ಎಂದು ಗಂಡನಿಗೆ ವಿಚ್ಛೇದನದ ಶಾಕ್​ನಿಂದ ತಿಳಿಸಿದ್ದಳು. ಇದು ಅತ್ಯಂತ ವಿರಳ ಘಟನೆ. ಆದರೆ ಸಾಮಾನ್ಯವಾಗಿ ಮದುವೆ ಆಗುತ್ತಿದ್ದಂತೆ ಗಂಡನೊಂದಿಗೆ ಬೇರೆ ಮನೆ ಮಾಡುವವರೇ ಹೆಚ್ಚು. ಮಕ್ಕಳು ಮುಪ್ಪಿನಲ್ಲಿ ತಮಗೆ ಆಗುತ್ತಾರೆ ಎಂದು ಹೊಟ್ಟೆಬಟ್ಟೆ ಕಟ್ಟಿ, ಉಪವಾಸ-ವನವಾಸ ಮಾಡಿ ಮಕ್ಕಳಿಗೆ ಉತ್ತಮ ವಿದ್ಯೆ, ಬುದ್ಧಿ ಕೊಡಿಸಿದ ತಂದೆ-ತಾಯಿ ವೃದ್ಧಾಶ್ರಮ ಸೇರಬೇಕಾದ ದುಸ್ಥಿತಿ ಬಂದಿದೆ.

ನಾನು ಕಾಶೀಯಾತ್ರೆಗೆ ಹೋದಾಗ ಪ್ರತೀದಿನ ದೋಣಿಯಲ್ಲಿ ಕುಳಿತು ಪ್ರಶಾಂತವಾಗಿ ಹರಿಯುವ ಪವಿತ್ರ ಗಂಗೆಯಲ್ಲಿ ವಿಹರಿಸುತ್ತಿದ್ದೆ. ದಡದಲ್ಲಿ ಒಂದು ಕಡೆಗೆ ಬಾಗಿದ ಗಂಗೆಯಲ್ಲಿ ಮುಳುಗಿದ ದೇವಸ್ಥಾನ ಕಂಡು ಅಂಬಿಗನಿಗೆ ಕೇಳಿದಾಗ ಆತ-‘ಮಾತಾಜಿ ಇದು ಬಂಗಾಳದ ಒಬ್ಬ ಸಾಹುಕಾರ ತನ್ನ ತಾಯಿಯ ಹೆಸರಿನಲ್ಲಿ ಕಟ್ಟಿಸಿದ ಶಿವಾಲಯ. ಆದರೆ ಅವನು ‘ ನೋಡು ಮಾತೇ ನಿನ್ನ ಹೆಸರಿನಲ್ಲಿ ಒಂದು ಗುಡಿಕಟ್ಟಿ ನಾನು ನಿನ್ನ ಋಣದಿಂದ ಮುಕ್ತನಾದೆ’ ಎಂದು ಅಹಂಕಾರದಿಂದ ತಾಯಿಗೆ ಹೇಳಿದ. ಆಗ ತಾಯಿ-‘ಆದರೆ ನೀನು ನನ್ನ ಗರ್ಭದಲ್ಲಿದ್ದ 9 ತಿಂಗಳ ಋಣದಿಂದ ಮುಕ್ತನಾಗಿಲ್ಲ. ಆಗಲು ಸಾಧ್ಯವೂ ಇಲ್ಲ’ ಎಂದಳು. ಆದ್ದರಿಂದ ವರ್ಷದ ಒಂಭತ್ತು ತಿಂಗಳು ಆ ಗರ್ಭಗುಡಿ ಗಂಗೆಯ ನೀರಲ್ಲಿ ಮುಳುಗಿರುತ್ತದೆ. ಉಳಿದ ಮೂರು ತಿಂಗಳು ಮಾತ್ರ ಅಲ್ಲಿ ಪೂಜೆ ನಡೆಯುತ್ತದೆ’ ಎಂದ. ಕಾಶಿಯಲ್ಲಿ ಇದು ನಾ ಕಂಡ ಸೋಜಿಗ.

ತಂದೆ ತಾಯಿ ಕಣ್ಣಿಗೆ ಕಾಣುವ ದೇವರು; ಅವರನ್ನು ಉಪೇಕ್ಷೆ ಮಾಡುವುದು ಸಲ್ಲ. ಆದ್ದರಿಂದಲೇ ಸಂಸ್ಕೃತ ಸುಭಾಷಿತ ಹೇಳುತ್ತದೆ-‘ನಾಸ್ತಿ ವಿದ್ಯಾ ಸಮೋ ಬಂಧುಃ ನಾಸ್ತಿ ವ್ಯಾಧಿ ಸಮೋರಿಪುಃ/ನಾಸ್ತಿ ಧರ್ಮ ಸಮೋ ಮಿತ್ರಃ ನಾ ಮಾತೃ ಪರದೈವತಃ/’ ಅವಳಿದ್ದರೆ ಅದು ಅರಮನೆ, ಅವಳಿಲ್ಲದಿದ್ದರೆ ಅದು ಮರಳಮನೆ. ತನುವಿಗೆ ತಂಪು ಕೊಡುವುದು ಚಂದನ, ಮನಕೆ ತಂಪು ಕೊಡುವುದು ಅವಳ ಸಾಂತ್ವನ. ಅವಳೇ ಮಮತಾಮಯಿ ಮಾತೆ. ಅವಳ ಋಣ ತೀರಿಸಲು ಸಾಧ್ಯವಿಲ್ಲ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top