Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ವನಿತೆಯರೇ, ವಿನಾಶಕಾರಿ ವರ್ತನೆಗೆ ವಿರಾಮ ಹೇಳಿ

Tuesday, 06.03.2018, 3:05 AM       No Comments

ಮಹಿಳೆಯರಲ್ಲಿ ಮದ್ಯಪಾನದ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಇತ್ತೀಚೆಗೆ ಮಾತನಾಡಿದ್ದು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಯಿತು, ವಿರೋಧಗಳೂ ಹುಟ್ಟಿಕೊಂಡವು. ಹಾಗಾದರೆ ಕುಡಿತದ ಸಹವಾಸ ಒಳ್ಳೆಯದೇ? ಕುಡಿತ ಜನರನ್ನು ನಾಶಮಾಡುತ್ತದೆ ಎಂಬ ಅರಿವು ಎಲ್ಲರಲ್ಲಿ ಇರಬೇಕಾದ್ದು ಇಂದಿನ ಅನಿವಾರ್ಯತೆ.

 ಇತ್ತೀಚೆಗೆ ವಿಮಾನ ನಿಲ್ದಾಣಕ್ಕೆ ತೆರಳುವಾಗ, ಕಾರ್​ನಲ್ಲಿನ ರೇಡಿಯೋ ಆನ್ ಆಗಿತ್ತು. ಕಾರ್ಯಕ್ರಮದ ನಿರೂಪಕಿಯು ಶ್ರೋತೃವೊಬ್ಬರ ಜತೆ ದೂರವಾಣಿಯಲ್ಲಿ ಮಾತಾಡಿದ ಪರಿ ಕೇಳಿ ಚಕಿತಳಾದೆ. ಅಪರಿಚಿತ ಯುವಕನೊಬ್ಬನನ್ನು ಏಕವಚನದಲ್ಲೇ ಮಾತನಾಡಿಸಿದ ಆಕೆ, ‘ನೀನು ಏನು ಕುಡೀತೀಯ, ಯಾರೊಂದಿಗೆ?’ ಎಂದಾಗ ಪಾಪ ಆತ ‘ಹೆಂಡತಿ ಕೊಟ್ಟ ಕಾಫಿ ಕುಡಿತೀನಿ!’ ಎಂದು ಹೆಂಡತಿಗೆ ಮಾತನಾಡಲು ಹೇಳಿದಾಗ ಈ ನಿರೂಪಕಿ, ‘ಯಾಕೆ ಗಂಡನಿಗೆ ಕುಡಿಯಲು ಬಿಡುವುದಿಲ್ಲವೇ? ನೀವು ಬೀರ್ ಕುಡಿಯುವುದಿಲ್ಲವೇ?!’ ಎಂದೆಲ್ಲ ಕೇಳಿದಾಗ ಅವಳ ಮಾತು-ವರ್ತನೆ ವಿಚಿತ್ರವೆನಿಸಿತು. ಮುಂದುವರಿಸಿದ ಆಕೆ, ‘ಮಹಿಳೆಯರು ಬೀರು ಕುಡಿಯುವ ಬಗ್ಗೆ ಗೋವಾದ ಮುಖ್ಯಮಂತ್ರಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ, ನೀವೇನನ್ನುತ್ತೀರಿ?’ ಎಂದು ಕೇಳುಗರನ್ನು ಪರಿಕ್ಕರ್ ವಿರುದ್ಧ ಎತ್ತಿಕಟ್ಟಲು ಯತ್ನಿಸಿದ್ದು ಕೇಳಿ ಗರಬಡಿದವಳಂತಾದೆ. ರೇಡಿಯೋ ಬಂದ್ ಮಾಡುವಂತೆ ಕಾರಿನ ಚಾಲಕನಿಗೆ ಸೂಚಿಸಿ ಚಿಂತನೆಯಲ್ಲಿ ತೊಡಗಿದೆ.

ರಾಜ್ಯ ಯುವಸಂಪದ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದುರಭ್ಯಾಸಗಳ ಬಗ್ಗೆ ಮಾತನಾಡುತ್ತ ಪರಿಕ್ಕರ್ ‘ನನಗೀಗ ಭಯವೇನೆಂದರೆ ಹುಡುಗಿಯರೂ ಬೀರ್ ಕುಡಿಯಲು ಪ್ರಾರಂಭಿಸಿದ್ದಾರೆ…’ ಅಂದದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಝಾಡಿಸಿದ್ದು, ಅದರಲ್ಲಿ ನಮ್ಮ ಬೆಂಗಳೂರಿನ ರೇಡಿಯೋ ಜಾಕಿ ಕೂಡ ಸೇರಿದ್ದು ಆತಂಕಕಾರಿ! ಕಾರಣ ತಾವು ಓದಿದ್ದೇವೆ, ಆಧುನಿಕರು ಎಂದು ಮೆರೆಯುವ ಈ ವನಿತೆಯರು ವಿಜ್ಞಾನ ಏನು ಹೇಳುತ್ತದೆ ಎಂಬುದರ ಪರಿವೆಯೇ ಇಲ್ಲದ ಅವಿವೇಕಿಗಳು! ಸಾರಾಯಿ ವ್ಯಕ್ತಿಯ ಆರೋಗ್ಯದ ಸರ್ವನಾಶಕ್ಕೆ ಕಾರಣವೆಂದು ಬಹಳಷ್ಟು ಸಂಶೋಧನಾ ಪ್ರಕಟಣೆಗಳು ಸಾರಿಹೇಳಿವೆ. ಅದರ ಈ ಪರಿಜ್ಞಾನವಿಲ್ಲದ ಒಬ್ಬಾಕೆ, ತಂದೆಯೊಡನೆಯೇ ಕುಡಿಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದರೆ, ‘ಮುಖ್ಯಮಂತ್ರಿ ಹೇಳಿದ್ದು ಬೀರಿಗೆ ಗೋಮೂತ್ರ ಹಾಕಿ, ಜತೆಗೆ ಐಸ್ ಬದಲು ಸೆಗಣಿ ಹಾಕಿ ಅಂತ’ ಎಂದು ಇನ್ನೊಬ್ಬಳು ಅಪಹಾಸ್ಯ ಮಾಡಿದಳು! ಕಾಲ ಬದಲಾಗಿದೆಯೆ? ಅಥವಾ ಜನರ ಮನಸ್ಥಿತಿ ಹಾಳಾಗಿದೆಯೆ? ಕುಡಿಯುವ, ಸಿಗರೇಟು ಸೇದುವ ತಂದೆಯನ್ನು ಮಗಳು ವೈದ್ಯರಲ್ಲಿಗೆ ಕರೆತಂದು ಆ ದುರಭ್ಯಾಸ ಬಿಡಿಸಿದ ಉದಾಹರಣೆ ಕಂಡಿದ್ದೇನೆ. ಆದರೆ ತಂದೆಯೇ ಮಗಳಿಗೆ ಕುಡಿಸುವುದು ಕಂಡರಿಯದ ವಿನಾಶಕಾರಿ ವರ್ತನೆ. ಇದು ಸಮಾಜದಲ್ಲಿ ‘ಲಿಬರಲ್’ಗಳು ತಂದ ಕೆಟ್ಟ ಪರಿವರ್ತನೆ!

ಈ ಬಗ್ಗೆ ಯೋಚಿಸುತ್ತಿರುವಾಗ, 45 ವರ್ಷಗಳ ಹಿಂದೆ ನಾನು ಆಗಷ್ಟೇ ಸರ್ಜನ್ ಆಗಿ ಕೆಲಸ ಶುರುಮಾಡಿದ್ದಾಗ ವಾರ್ಡ್​ನಲ್ಲಿ ದಾಖಲಾಗಿದ್ದ ಗೋವಾದ ಮರೀನಾಳ ನೆನಪಾಯಿತು. ಹಾಲು ಬಣ್ಣದ ಸ್ಪುರದ್ರೂಪಿಯಾಗಿದ್ದ ಮರೀನಾ ಸಾಯುವ ಸ್ಥಿತಿಯಲ್ಲೂ ಎಂಥ ಸುಂದರಿಯಾಗಿದ್ದಳು! ಅರ್ಧ ಭಾರತೀಯಳು ಅರ್ಧ ಪೋರ್ಚುಗೀಸ್ ಆಗಿದ್ದ ಮರೀನಾಳ ಕೈಕಾಲು ಸಣ್ಣದಾಗಿ ಹೊಟ್ಟೆಯಲ್ಲಿ ನೀರು ತುಂಬಿ (ascites) ಕಣ್ಣು ಹಳದಿ(ಜಾಂಡೀಸ್) ಆಗಿ ಸಾವಿನ ದವಡೆಯಲ್ಲಿ ನರಳುತ್ತಿದ್ದಳು. ಅವಳ ಎದೆಯ ಮೇಲಿನ ಕೆಂಪು “spider nevi’ ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ! ಎಷ್ಟರಮಟ್ಟಿಗೆ ಎಂದರೆ ಪತ್ರಕರ್ತರೊಬ್ಬರು ಅಂಥ ಸ್ಥಿತಿಯಲ್ಲಿ ಬಂದಾಗ ನಾನು ತಕ್ಷಣ ಡೈಗ್ನೋಸಿಸ್ ಮಾಡಿದ್ದೆ! ಅಂದರೆ ಕುಡಿಯುವ ದುಶ್ಚಟದವರಿಗೆ alcoholic cirrhossis ಆದಾಗ ಇಂಥ ಕೆಂಪುಮಚ್ಚೆಗಳು ಎದೆಯ ಮೇಲ್ಭಾಗದಲ್ಲಿ ಆಗುತ್ತವೆ. ನಮ್ಮ ದೇಹದ ಅಡುಗೆ ಮನೆ ಅನ್ನಿಸಿಕೊಳ್ಳುವ ಯಕೃತ್, ಕುಡಿದಿದ್ದನ್ನು ನಿರ್ವಿಷೀಕರಿಸುತ್ತದೆ. ಆದರೆ ಸಾರಾಯಿಯ ವಿಷ ತೆಗೆಯಲು ಹೋಗಿ ಯಕೃತ್​ನ ಜೀವಕಣಗಳು ಸತ್ತುಹೋಗುತ್ತವೆ. ಹೀಗೆ ಸತ್ತ ಜೀವಕಣಗಳ ಜಾಗದಲ್ಲಿ Scar Tissue ಬೆಳೆದು ಯಕೃತ್ ಸಂಕುಚಿತಗೊಂಡು Cirrhosis ಆಗುತ್ತದೆ. ಆಗ, ತಿಂದದ್ದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಳ್ಳುವ ವ್ಯಕ್ತಿಯ ಕೈಕಾಲು ಸಣ್ಣದಾಗಿ ಹೊಟ್ಟೆ ಕುಂಬಳಕಾಯಿಯಂತೆ ದಪ್ಪಗಾಗುತ್ತದೆ. ಇಂಥವರನ್ನು ಬದುಕಿಸಲು 25-30 ಲಕ್ಷ ಖರ್ಚು ಮಾಡಿ ಯಕೃತ್ ಕಸಿ ಮಾಡಬೇಕಾಗುತ್ತದೆ. ಇಷ್ಟು ದಿನ ಗಂಡಸರು ಕುಡಿತದಿಂದ ಹೀಗೆ ಸತ್ತರೆ ಹೆಂಗಸರು ಅವರ ಜೀವ ಉಳಿಸಲು ಹರಸಾಹಸ ಮಾಡುತ್ತಿದ್ದರು. ಮಹಿಳೆಯರೇ ಈ ದುಸ್ಥಿತಿಗೆ ತಲುಪಿದರೇನು ಗತಿ? ಹೀಗೆ ಸತ್ತವರಲ್ಲಿ ಪ್ರಸಿದ್ಧ ದುರಂತ ನಾಯಕಿ ಮೀನಾಕುಮಾರಿ ಕೂಡ ಒಬ್ಬಳು!

ಮರೀನಾ, ಮೀನಾಕುಮಾರಿಯವರಂತೆ ನಮ್ಮ ಯುವತಿಯರು ಅಕಾಲಿಕವಾಗಿ ದುರ್ಮರಣಕ್ಕೆ ತುತ್ತಾಗಬಾರದೆಂದರೆ ಸಾರಾಯಿಯಿಂದ ಶರೀರದ ಮೇಲಾಗುವ ದುಷ್ಪರಿಣಾಮ, ವೈದ್ಯಕೀಯ ವಿಜ್ಞಾನದ ವಿವರ ಅರಿಯಲೇಬೇಕು. ಗಂಡಸರಿಗಿಂತ ಹೆಂಗಸರ ಮೇಲೆ ಸಾರಾಯಿಯ ದುಷ್ಪರಿಣಾಮ ಹೆಚ್ಚು ಎಂದು ವಿಜ್ಞಾನ ಸಾಬೀತುಪಡಿಸಿದೆ. ಹೆಂಗಸರ ಸೌಂದರ್ಯದ ಗುಟ್ಟು ಅವರ ನಯವಾದ ತ್ವಚೆ, ಹಾಲುಗೆನ್ನೆಗಳು. ಆದರೆ ಮಹಿಳೆಯರು ಆಲ್ಕೋಹಾಲ್ ಇರುವ ಯಾವುದೇ ಪಾನೀಯ ಕುಡಿದರೂ ಚರ್ಮ ಒಣಗುತ್ತದೆ, ಸುಕ್ಕು ಹೆಚ್ಚಾಗಿ ಬೇಗ ಮುಪ್ಪಾದಂತೆ ಕಾಣುತ್ತಾರೆ! ಮೊದಮೊದಲು ಕುಡಿದಾಗ ಮೂಗು ಕೆನ್ನೆ ಕೆಂಪಗಾಗಿ ಕಂಡರೂ ನಂತರ ರಕ್ತನಾಳಗಳು ಹಿಗ್ಗಿ ಚಿಕ್ಕ ರಕ್ತನಾಳಗಳು (capillaries) ಒಡೆದು ಅಲ್ಲಲ್ಲಿ ಕೆಂಪು ಕಲೆಗಳಾಗಿ ಕ್ರಮೇಣ ಕಪು್ಪಕಲೆಗಳಾಗಿ ಎಷ್ಟು ಫೇಷಿಯಲ್ ಮಾಡಿಸಿಕೊಂಡರೂ ಹೋಗದಂತೆ ಉಳಿದುಕೊಳ್ಳುತ್ತವೆ. ಜತೆಗೆ ಕಣ್ಣು ಕೆಂಪಗಾಗಿ ಸುತ್ತಲೂ ಕಪ್ಪಾಗಿ ಊದಿಕೊಂಡು, ಕೆನ್ನೆ ಜೋತುಬಿದ್ದು, ಮುಖ ವಿಕಾರಗೊಳ್ಳುತ್ತದೆ! ಮಹಿಳೆಯರ ಚರ್ಮದ ಸೌಂದರ್ಯ ಹಾಳುಮಾಡುವ ಅತ್ಯಂತ ಕೆಟ್ಟ ಪದಾರ್ಥ ಸಾರಾಯಿ ಎಂದು ವಿಜ್ಞಾನ ಸಾಬೀತುಪಡಿಸಿದೆ. ಭಗವಂತ ಕೊಟ್ಟ ರೂಪವನ್ನು ಹೀಗೆ ಹಾಳುಮಾಡಿಕೊಳ್ಳುವುದು, ಕುಡಿದು ಕುರೂಪಿ ಆಗುವುದು ತರವೇ?

ಕುಡಿತದಿಂದ ಬಾಹ್ಯರೂಪವಷ್ಟೇ ಅಲ್ಲದೆ ಒಳಗಿನ ಮನಸ್ಸೂ ಹಾಳಾಗುತ್ತದೆ. ಕುಡಿದ ಅಮಲಿನಲ್ಲಿ ಯುವತಿಯೊಬ್ಬಳು ಪೊಲೀಸರಿಗೇ ಹೊಡೆದಿದ್ದನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ನೀವು ನೋಡಿರಬಹುದು. ಇದಕ್ಕೆ ಕಾರಣ, ಕುಡಿದ ಮಹಿಳೆಯರು ಬುದ್ಧಿ ಸ್ಥಿಮಿತ ಕಳೆದುಕೊಂಡು

ಆಕ್ರಮಣಕಾರಿಯಾಗಿ, ಉಗ್ರರೂಪಿಗಳಾಗುತ್ತಾರೆ. ಬುದ್ಧಿ ಹೇಳಿದವರೊಂದಿಗೇ ಗುದ್ದಾಡುವ ಸ್ವಭಾವ ಬೆಳೆಯುತ್ತದೆ. ಪರಿಕ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ಕುಡುಕಿಯರಲ್ಲಿ ಇದನ್ನು ನಾವು ಕಂಡಿದ್ದೇವೆ. ವಾಚಾಳಿತನ, ಜಗಳಗಂಟಿತನ ಹೆಚ್ಚಾಗಿ ವಿವಾಹ ವಿಚ್ಛೇದನ, ಜತೆಗೆ ಅನಿರ್ಬಂಧಿತ ಲೈಂಗಿಕ ಕ್ರಿಯೆಗೆ ಮುಂದಾಗುವ ಸಂಭವ ಹೆಚ್ಚು. ಇಂದು ಕರ್ನಾಟಕದಲ್ಲಿ 5 ಲಕ್ಷ ಕುಡುಕರು

ಎಚ್​ಐವಿ-ಏಡ್ಸ್​ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಯುವತಿಯರು ಕುಡಿತದಂಥ ದುರಭ್ಯಾಸವನ್ನು ಹಿಡಿಸಿಕೊಂಡರೆ ಮಾನ ಮರ್ಯಾದೆ ಕಳೆದುಕೊಳ್ಳುವ ಜತೆಗೆ ಭಯಂಕರ ಕಾಯಿಲೆಗೆ ತುತ್ತಾಗಬಹುದೆಂಬ ಭಯ ಇರಬೇಕು. ಒಂದು ಕಾಲಕ್ಕೆ ಕುಡುಕ ಗಂಡ ಸಾವಿಗೀಡಾದರೆ ಬಡಪಾಯಿ ಹೆಣ್ಣು ಕುಟುಂಬದ ಭಾರ ಹೊತ್ತು ಕುಟುಂಬವನ್ನು ಸಲಹುತ್ತಿದ್ದಳು. ಆದರೆ, ಅಂಥ ತಾಯಂದಿರೇ ಸತ್ತರೆ ಮಕ್ಕಳ, ಮನೆಯ ಗತಿ ಏನು?

‘ಸುರೆಯ ಹಿರಿದುಂಡವಗೆ, ಉರಿಯ ಮೇಲ್ದುಡುಕುವಗೆ, ಹರಿಯುವ ಹಾವ, ಪರನಾರಿ ಹಿಡಿದಂಗೆ ತಪ್ಪದಲೆ ಮರಣ ಕಾಣಯ್ಯ ಸರ್ವಜ್ಞ’ ಎಂಬ ಸರ್ವಜ್ಞನ ಮಾತಿನಂತೆ, ಕುಡುಕರಿಗೆ ಬೇಗ ಮರಣ ಬರುವುದು ಖಚಿತ. ಇದಕ್ಕೆ ಕಾರಣ ಶರೀರದಲ್ಲಿರುವ ಎಲ್ಲ ಆವಯವಗಳು ನಾಶವಾಗುತ್ತವೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ದಪ್ಪಗಾಗಿ ಬಂಜೆತನ ಹೆಚ್ಚುತ್ತದೆ. ಗಂಡಸರಲ್ಲಿ ಪುರುಷತ್ವ ಹೋಗಿ ನಪುಂಸಕರಾಗುತ್ತಾರೆ. ಇದರಿಂದ ಅವರ ವಂಶದ ಕುಡಿ ಬೆಳೆಯುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲ ಗರ್ಭಿಣಿ ಕುಡಿದರೆ ಗರ್ಭದಲ್ಲಿರುವ ಭ್ರೂಣದ ಮಿದುಳು, ಹೃದಯ ನಾಶವಾಗಿ- fetal alcoholic syndrome(FAS))ನಂಥ ಭಯಂಕರ ಪರಿಣಾಮ ಭ್ರೂಣದ ಮೇಲೆ ಆಗುತ್ತದೆ. ಇದರಿಂದ ಮಗುವಿನ ತಲೆ ಚಿಕ್ಕದಾಗಿ ಅಪಕ್ವ ಮಗು ಬುದ್ಧಿಮಾಂದ್ಯವಾಗಿ ಹುಟ್ಟುತ್ತದೆ. ಆ ಮಕ್ಕಳೂ ಕುಡುಕರಾಗುವ ಸಾಧ್ಯತೆ ಹೆಚ್ಚು. ಜತೆಗೆ ದುಷ್ಕರ್ವಿುಗಳಾಗಿ ಅಪರಾಧಿಗಳಾಗುವುದು ಶೇ.40ರಷ್ಟು ಹೆಚ್ಚು

ಎಂದು ತಿಳಿದುಬಂದಿದೆ. ಹೀಗೆ ಕುಡುಕರಿಗೆ ಒಂದೋ ಮಕ್ಕಳಾಗುವುದಿಲ್ಲ, ಅವರು ಸತ್ಪ್ರಜೆಗಳಾಗುವ ಸಂಭವ ಕಡಿಮೆ. ಇದನ್ನು ಸರ್ವಜ್ಞ- ‘ಮದ್ಯಪಾನವ ಮಾಡಿ ಇದ್ದುದೆಲ್ಲವ ನೀಗಿ, ಬಿದ್ದು ಬರುವವನ ಸದ್ದಡಗಿ

ಸಂತಾನ ಎದ್ದು ಹೋಗುವುದು ಸರ್ವಜ್ಞ’- ಎಂದು ಹೇಳಿದ್ದು ಸಾರ್ವಕಾಲಿಕ ಸತ್ಯವೆಂದು ವಿಜ್ಞಾನ ಸಾರುತ್ತಿದೆ.

ಇನ್ನು ಪುರಾಣದ ಕತೆಯ ಕಡೆ ಗಮನ ಹರಿಸೋಣ. ರಾಕ್ಷಸರ ಗುರು ಶುಕ್ರಾಚಾರ್ಯರು ಸಾವನ್ನು ಗೆಲ್ಲುವ ಸಂಜೀವಿನಿ

ಕಂಡುಹಿಡಿದರು. ಇದರಿಂದ ರಾಕ್ಷಸರ ಬಲ ಹೆಚ್ಚುತ್ತದೆ ಎಂಬ ಭಯದಿಂದ ದೇವತೆಗಳು ಕುತಂತ್ರಮಾಡಿದರು. ಶುಕ್ರಾಚಾರ್ಯರಿಗಿದ್ದ

ದೌರ್ಬಲ್ಯವೆಂದರೆ ಸುರಾಪಾನ. ಅವರಿಗೆ ಕಂಠಪೂರ್ತಿ ಕುಡಿಸಿ ಎಚ್ಚರ ತಪ್ಪಿದಾಗ ದೇವತೆಗಳು ಸಂಜೀವಿನಿಯನ್ನು ಕದ್ದರು. ಎಚ್ಚರವಾದಾಗ ತನ್ನಿಡೀ ಜೀವನದ ಸಾಧನೆಯನ್ನು ಕುಡಿತದಿಂದ ಕಳೆದುಕೊಂಡೆನಲ್ಲ ಎಂದು ಹಳಹಳಿಸಿ ಹತಾಶರಾಗಿ ರಾಕ್ಷಸರು ಯಾರೂ ಕುಡಿಯಬಾರದೆಂದು ಆದೇಶಿಸಿದರು ಶುಕ್ರಾಚಾರ್ಯರು. ಇದರಿಂದ ರಾಕ್ಷಸರು ಬಲಿಷ್ಠರಾದರು. ದೇವತೆಗಳು ಸುರಾಪಾನ ಮಾಡಿ ದುರ್ಬಲರಾದರು!

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪಾನನಿಷೇಧದ ಕುರಿತು ಉಲ್ಲೇಖಿಸಿದ್ದಾರೆ. ರಾಮರಾಜ್ಯದ ಪರಿಕಲ್ಪನೆಯಿದ್ದ ಗಾಂಧೀಜಿ ಕೂಡ ಪಾನವಿರೋಧಿ ಆಗಿದ್ದರು. ಆದರೂ ನಮ್ಮ ಸ್ವಾರ್ಥಿ ರಾಜಕಾರಣಿಗಳು ಜನರಿಗೆ ಹೆಂಡ-ಹಣ ಕೊಟ್ಟು ಸಮಾಜದಲ್ಲಿ ಕೊಲೆ, ಅತ್ಯಾಚಾರ ಹೆಚ್ಚುವಂತೆ ಮಾಡಿದ್ದಾರೆ. ಸಾಯುವುದರ ಮೇಲೆ ಮೇಯುವುದು ಬಿದ್ದಂತೆ ಎಡಪಂಥೀಯ ಪ್ರಗತಿಪರರು ಆಧುನಿಕತೆಯ ಸೋಗಿನಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ ಹೆಚ್ಚಿಸಿ ವನಿತೆಯರಿಂದಲೇ ಭಾರತದ ವಿನಾಶಕ್ಕೆ ಮುಂದಾಗಿದ್ದಾರೆ. ಮಹಿಳೆಯರು ಸಕಾಲಕ್ಕೆ ಎಚ್ಚೆತ್ತು ಕಿಟ್ಟಿಪಾರ್ಟಿಗಳಲ್ಲಿ ಕುಡಿಯುವ ದುರಭ್ಯಾಸ ನಿಲ್ಲಿಸಿ ಸಮಾಜವು ಸುಸಂಸ್ಕೃತ ಸುಶೀಲವಾಗಲು ಸಹಕರಿಸಬೇಕು, ಶ್ರಮಿಸಬೇಕು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top