Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಸಾಮಾಜಿಕ ಸ್ವಾಸ್ಥ್ಯ ಹರಿಕಾರ ವಿಶ್ವಗುರು ಬಸವಣ್ಣ

Saturday, 29.04.2017, 3:05 AM       No Comments

ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನದ ಪ್ರಕಾರ ಸ್ವಾಸ್ಥ್ಯ ಅಥವಾ ಆರೋಗ್ಯವೆಂದರೆ- ‘ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸುವ ಸಾಮರ್ಥ್ಯವಿರುವುದು’. ನಮ್ಮಲ್ಲಿ ಎಷ್ಟೋ ಜನ ವೈಜ್ಞಾನೀಕರಣಗೊಂಡ ಆರೋಗ್ಯಕ್ಕೂ ಆಧ್ಯಾತ್ಮೀಕರಣಗೊಂಡ ಶರಣ ಸಂಸ್ಕೃತಿಯ ಹರಿಕಾರ ವಿಶ್ವಗುರು ಬಸವಣ್ಣನವರಿಗೂ ಹೇಗೆ ಸಾಮ್ಯವೆಂದು ಕೇಳಬಹುದು! ಆದರೆ ನಾವು ತಾತ್ತಿ್ವಕವಾಗಿ ವಿಚಾರಮಂಥನ ಮಾಡಿದರೆ, 12ನೇ ಶತಮಾನದಲ್ಲಿ ಬಸವಣ್ಣನವರ ಮುಂದಾಳತ್ವದಲ್ಲಿ ಬೆಳೆದ ಶರಣ ಸಂಸ್ಕೃತಿಯ ಪರಿಕಲ್ಪನೆ ಇಂದಿನ 21ನೇ ಶತಮಾನದ ವೈಜ್ಞಾನಿಕ ವಿದ್ಯಮಾನಕ್ಕಿಂತ ಉತ್ತಮವಾಗಿತ್ತೆಂದರೆ, ನಿಮಗೆ ಪರಮಾಶ್ಚರ್ಯವಾಗಬಹುದು! ಆರ್ಥಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಧಾರ್ವಿುಕವಾಗಿ ಸಮಾಜವನ್ನು ಸ್ವಸ್ಥಗೊಳಿಸಿದ್ದು ಬಸವಣ್ಣನವರು!

ಆರ್ಥಿಕವಾಗಿ, ಸಾಮಾಜಿಕವಾಗಿ ಫಲಕಾರಿ ಜೀವನ ನಡೆಸಲು ಸಾಮರ್ಥ್ಯ ಇಂದು ನಮಗೆ ಬರಬೇಕೆಂದರೆ, ವಿದ್ಯೆ, ಬುದ್ಧಿ, ವಿಶ್ವವಿದ್ಯಾಲಯಗಳ ಪದವಿ ಮತ್ತು ಕೈತುಂಬ ಸಂಪಾದನೆಯ ಕೆಲಸ ಬೇಕು! ಚೆನ್ನಾಗಿ ಸಂಪಾದಿಸುವವರೆಲ್ಲ ಇಂದು ಸಮಾಜಮುಖಿಗಳಾಗಿಲ್ಲ! ವಾಮಮಾರ್ಗದಿಂದ ಸಂಪಾದಿಸಿದ್ದನ್ನು ಸ್ವಿಸ್ ಬ್ಯಾಂಕಿನಲ್ಲಿ ಪನಾಮಾದಲ್ಲಿ ಇಟ್ಟು, ಇಲ್ಲಿ ಜನರ ಶೋಚನೀಯ ಸ್ಥಿತಿಗೆ ಕಾರಣರಾದ ಈ ವಿಕೃತ ಮನಸ್ಸಿನವರು ಸಾಮಾಜಿಕವಾಗಿ ಅಸ್ವಸ್ಥರು! ಅವರಿಗೆ ಚಿಕಿತ್ಸೆ ಆಗಲೇಬೇಕು. ಆದರೆ ವಿಶ್ವಗುರು ಬಸವಣ್ಣನವರು ಕೊಟ್ಟ ದಿವ್ಯಮಂತ್ರ ‘ಕಾಯಕವೇ ಕೈಲಾಸ’- ಇದು ಒಬ್ಬ ವ್ಯಕ್ತಿಯನ್ನಲ್ಲ ಇಡೀ ಸಮಾಜವನ್ನೇ ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಸ್ಥರನ್ನಾಗಿಸಿ ಫಲಕಾರಿ ಜೀವನ ನಡೆಸಲು ಅನುವುಮಾಡಿಕೊಡುತ್ತದೆ! ಯಾವುದೇ ಕೆಲಸ ಮಾಡಿದರೂ ಅದು ದೈವೀಸ್ವರೂಪವಾದ ಸಮಾಜಕ್ಕೆ ದಾಸನಾಗಿ ಎಂದು ಮಾಡಿದಾಗ ಎಲ್ಲರೂ ಸುಖ ಸಂತೃಪ್ತಿಯಿಂದ ಇರಬಹುದು ಎಂಬುದು ಬಸವಣ್ಣನವರ ಪರಿಕಲ್ಪನೆ.

ಸ್ವತಃ ಆರ್ಥಿಕತಜ್ಞರಾಗಿ ಬಿಜ್ಜಳ ರಾಜರ ಹಣಕಾಸು ನೋಡಿಕೊಳ್ಳುತ್ತಿದ್ದ, ಅವರ ಬೊಕ್ಕಸ ತುಂಬಿದ ಬಸವಣ್ಣನವರು ಆರ್ಥಿಕವಾಗಿ ಹಿಂದುಳಿದ ಬಡಬಗ್ಗರನ್ನು ಸಬಲೀಕರಣಗೊಳಿಸಿ, ಅದೇ ಸಮಯಕ್ಕೆ ಸಾಹುಕಾರರಲ್ಲಿ ಸ್ವಾರ್ಥ ಹೋಗಿ ಸದ್ಬುದ್ಧಿ ತರಲು ‘ಕಾಯಕವೇ ಕೈಲಾಸ’ ಎನ್ನುವ ದಿವ್ಯಮಂತ್ರನ್ನು ಕೊಟ್ಟರು. ಹೊಟ್ಟೆಪಾಡಿಗೆ ಕೆಲಸ ಮಾಡಿದರೆ ಅದರಲ್ಲಿ ಸ್ವಾರ್ಥ, ಲಾಭ-ನಷ್ಟಗಳ ಲೆಕ್ಕಾಚಾರ ಬರುತ್ತದೆ. ಆದರೆ ಪ್ರತಿಯೊಂದು ಕೆಲಸವನ್ನೂ ದೈವೀಸ್ವರೂಪ ಸಮಾಜಕ್ಕಾಗಿ ದಾಸನಾಗಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಅದು ಕಾಯಕವಾಗುತ್ತದೆ! ಇದೇ ಜೀವನ. ಹೀಗೆ ಸತ್ಯಶುದ್ಧ ಕಾಯಕದಲ್ಲಿ ಸವೆಸಿದರೆ ‘ಕಾಯಕಯೋಗಿಗಳು’ ಆಗುತ್ತಾರೆ. ಉದಾಹರಣೆಗೆ, ಸರ್ ಎಂ. ವಿಶ್ವೇಶ್ವರಯ್ಯ, ದಿ. ಬಾಳೇಕುಂದ್ರಿಯವರು ಕಾಯಕಯೋಗಿಗಳು! ಅವರು ಕಾವೇರಿ ಮತ್ತು ಕೃಷ್ಣೆಯ ನೀರಿನ ಸಮರ್ಪಕ ಬಳಕೆಗೆ ಶ್ರಮಿಸಿ, ಬಡರೈತರ ಹೊಲಕ್ಕೆ ನೀರುಣಿಸಿ ಕೈಲಾಸ ಕಟ್ಟಲು ಶ್ರದ್ಧೆಯಿಂದ ಶ್ರಮಿಸಿದ ಕಾಯಕಯೋಗಿಗಳು. ಆದ್ದರಿಂದ “Work is Worship’ಗಿಂತಲೂ ಅದ್ಭುತ ಪರಿಕಲ್ಪನೆ ‘ಕಾಯಕವೇ ಕೈಲಾಸ’. ಕಾರಣ “Worship’ ಎಂದಾಗ ಜನರು, ‘ಭಗವಂತ ನಿನಗೆ ಜೋಡುಗಾಯಿ ಒಡೆಸುತ್ತೇನೆ, ಅದು ಕೊಡಪ್ಪ ಇದು ಕೊಡಪ್ಪ’ ಎನ್ನುತ್ತಾರೆ! ಆದರೆ ಬಸವಣ್ಣನವರ ಸತ್ಯಶುದ್ಧ ಕಾಯಕದ ಪರಿಕಲ್ಪನೆಯಲ್ಲಿ ಸ್ವಾರ್ಥದ ಲವಲೇಶವಿಲ್ಲ. ಫಲಾಫಲದ ಅಪೇಕ್ಷೆ ಇಲ್ಲದೇ ಪರಿಶುದ್ಧ ಮನಸ್ಸಿನಿಂದ ಕಾಯಕ ಮಾಡುವುದನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ, ಎಲ್ಲರ ಬದುಕಿನಲ್ಲೂ ಸಮೃದ್ಧಿ ತಾನಾಗಿಯೇ ಬರುತ್ತದೆ.

ಅಂದಿನ ಕಾಲದ ಶರಣರು ಕಾಯಕಮಾಡಿ, ಕಲ್ಯಾಣವು ಕೈಲಾಸದಂತೆ ಕಂಗೊಳಿಸುವಂತೆ ಮಾಡಿದ್ದರು! ಯಾವ ಕೆಲಸವೂ ದೊಡ್ಡದಲ್ಲ, ಚಿಕ್ಕದಲ್ಲ; ಅದು ಕೀಳಲ್ಲ, ಕ್ಷುಲ್ಲಕವೂ ಅಲ್ಲ- ‘ಅಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ, ಮಾಡುವಲ್ಲಿ ಹುಸಿ ಇಲ್ಲದಿರಬೇಕು’- ಅಂದರೆ ಯಾವುದೇ ಕಾಯಕ ಮಾಡಿದರೂ ಅದರಲ್ಲಿ ಸುಳ್ಳು, ವಂಚನೆ ಇರಕೂಡದು ಎಂದರು. ಇಂದು ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮಾಡಿದರೆ, ಆರ್ಥಿಕವಾಗಿ ವಿಶ್ವದಲ್ಲಿ ಭಾರತ ಪ್ರಥಮವಾಗುವುದರಲ್ಲಿ ಸಂದೇಹವೇ ಇಲ್ಲ.

ಆದರೆ, ಎಷ್ಟೇ ಆರ್ಥಿಕವಾಗಿ ಬೆಳೆದರೂ ಇಂದಿನ ಸಮಾಜದಲ್ಲಿ ಎಲ್ಲಿ ನೋಡಿದರಲ್ಲಿ ಮೋಸ, ವಂಚನೆ, ಲಂಚ ಹೆಚ್ಚಾಗಿವೆ. ಇದಕ್ಕೆ ಬಸವಣ್ಣನವರು ಪಾಪದಿಂದ ಪ್ರಾಪ್ತಿಯಾದ ಹಣ ಪ್ರಾಯಶ್ಚಿತ್ತಕ್ಕೆ ಮಾತ್ರ ಪ್ರಯೋಜನ ಎಂದು ಹೇಳಿದ್ದಾರೆ.

ಬಸವಣ್ಣನವರ ವಿಚಾರದಿಂದ ಪ್ರಭಾವಿತರಾದ ಶರಣರು ಎಂದೂ ವಾಮಮಾರ್ಗದಿಂದ ಹಣವನ್ನು ಸಂಪಾದಿಸಲಿಲ್ಲ. ಅಷ್ಟೇ ಅಲ್ಲ, ಇತರರ ಹಣಕ್ಕೆ ಆಸೆಪಡಲಿಲ್ಲ. ಇದನ್ನು ಶರಣೆ ಸತ್ಯಕ್ಕ ಮನಮುಟ್ಟುವಂತೆ ಹೇಳುತ್ತಾರೆ- ‘ಲಂಚ ವಂಚನಕ್ಕೆ ಕೈಯಾನದ ಭಾಷೆ, ಬಟ್ಟೆಯಲ್ಲಿ ಹೊನ್ನವಸ್ತ್ರ ಬಿದ್ದಿದ್ದಡೆ ಕೈಮುಚ್ಚಿ ಎತ್ತಿದೊಡೆ ಅಯ್ಯಾ ನಿಮ್ಮಾಣೆ ನೀವಿಕ್ಕಿದ ಭಿಕ್ಷೆಯೊಳಗಾನಿಪ್ಪೆನಯ್ಯಾ ಶಂಭು ಜಕ್ಕೇಶ್ವರ ದೇವಯ್ಯ’. ಒಬ್ಬ ಮಹಿಳೆಯು ಪ್ರಾಮಾಣಿಕತೆಯ ಪರಾಕಾಷ್ಠೆ ಮೆರೆದಂತೆ, ಇಂದು ಜನ ಶರಣೆ ಸತ್ಯಕ್ಕನಂತೆ ಆಣೆ, ಪ್ರಮಾಣ ಮಾಡಿ ಪ್ರಾಮಾಣಿಕರಾಗಿ ಬದುಕಿದರೆ, ಬದುಕು ಬಂಗಾರವಾಗುತ್ತದೆ.

ದುರದೃಷ್ಟಕರ ಸಂಗತಿ ಎಂದರೆ, ಇಂದು ಜನರು ಹಣದ ಹಿಂದೆ ಸಾಗುವ ಹುಚ್ಚರಾಗಿದ್ದಾರೆ. ಧಾವಂತದ ಆಧುನಿಕ ಬದುಕಿನಲ್ಲಿ ಅವರು ಹೆಂಡತಿ, ಮಕ್ಕಳು, ಮನೆ-ಮಠ, ದೇವರನ್ನು ಮರೆತು ಬದುಕಿನ ಒತ್ತಡಕ್ಕೆ ಅಕಾಲಿಕವಾಗಿ ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಇಂಥವರು ಬಸವಣ್ಣನವರ ಈ ವಚನವನ್ನು ಮನನ ಮಾಡಿಕೊಳ್ಳಬೇಕು-

ಕಾಂಚನವೆಂಬ ನಾಯ ನೆಚ್ಚಿ, ನಿಮ್ಮ ನಾನು ಮರೆದೆನಯ್ಯ.

ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!

ಹಡಿಕಿಗೆ ಮೆಚ್ಚಿದ ಸೊಣಗ ಅಮೃತದ ಸವಿಯ ಬಲ್ಲುದೇ ?

ಕೂಡಲಸಂಗಮದೇವಾ.

ಇನ್ನು ಬಸವಣ್ಣನವರು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ್ದು ಉಪಮಾತೀತ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ, ಸಮಾಜ ಕಟ್ಟುವ ನಿಟ್ಟಿನಲ್ಲಿ ಅವರು ಸರ್ವರಿಗೂ ಸಮಬಾಳ್ವೆ, ಸರ್ವರಿಗೂ ಸಮಪಾಲು ತರುವ ಸಮಾನತೆಯನ್ನು ಸಾರಿದರು. ಬಸವಣ್ಣನವರು ಬಡವರ ಆರ್ಥಿಕ ಸಬಲೀಕರಣದ ಜತೆಗೆ, ಅವರಿಗೆ ಸಮಬಾಳ್ವೆ, ಸಮಾನತೆ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದವರಲ್ಲಿ ಪ್ರಥಮರು. ಪರಮಾತ್ಮನ ಅಂಶವಾದ ಆತ್ಮ ಎಲ್ಲರಲ್ಲೂ ಇರುವುದರಿಂದ ಎಲ್ಲರೂ ದೈವಾಂಶಸಂಭೂತರು ಎಂದು ಅವರು ಪ್ರತಿಪಾದಿಸಿದರು.

ಸಮಾಜದ ಎಲ್ಲ ವರ್ಗದವರಿಗೆ ಸಮಾನತೆ ಕಲ್ಪಿಸಿಕೊಡಲು ವಿಶ್ವದ ಪ್ರಪ್ರಥಮ ಸಂಸತ್ತು ಎಂದು ಪ್ರಸಿದ್ಧಿಯಾಗಿರುವ ‘ಅನುಭವ ಮಂಟಪ’ ಕಟ್ಟಿಸಿ, ಅದರ ಶೂನ್ಯ ಸಿಂಹಾಸನದಲ್ಲಿ ಜ್ಞಾನದ ಮೇರುಪರ್ವತವಾದ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿಸಿದರು. ಇಡೀ ವಿಶ್ವದಲ್ಲಿಯೇ ಒಂದೇ ಸ್ಥಳದಲ್ಲಿ ಏಕಕಾಲಕ್ಕೆ 365 ಜನ ಸಾಹಿತ್ಯ ರಚಿಸಿ ವಾಚಿಸಿದ್ದು ಈ ಅನುಭವ ಮಂಟಪದಲ್ಲಿ! ‘ವಚನ ಸಾಹಿತ್ಯ’ವೆಂಬ ವಿಶಿಷ್ಟ ವಿನೂತನ ಸಾಹಿತ್ಯ ರಚಿಸುವುದರಲ್ಲಿ ಮಹಿಳೆಯರು ಹಿಂದೆಬೀಳಲಿಲ್ಲ. ಅಕ್ಕಮಹಾದೇವಿ ಕನ್ನಡದ ಪ್ರಥಮ ಕವಯಿತ್ರಿಯಾಗಿ ಉತ್ಕೃಷ್ಟ ವಚನಗಳನ್ನು ರಚಿಸಿದ ಮಹಾನ್ ದಾರ್ಶನಿಕಳಾದಳು. ಜನರು, ಜನರಿಗಾಗಿ ರಚಿಸಿದ ಸಾಹಿತ್ಯವೇ ವಚನ. ಇದರಲ್ಲಿ ‘ವ’ ಎಂದರೆ ವಚಿಸುವುದು, ‘ಚ’ ಎಂದರೆ ಚಲನಶೀಲರಾಗಿರುವುದು, ‘ನ’ ಎಂದರೆ ನರತ್ವ ನೀಗಿ ಹರತ್ವ ಸಾಧಿಸುವುದು ಎಂದರ್ಥ.

ಇಂಥ ವಚನಗಳಲ್ಲಿ ಶರಣರು ತಮ್ಮ ಅನುಭವ ಮತ್ತು ಅನುಭಾವ ಎರಡನ್ನೂ ಸೇರಿಸಿದರು. ಆದ್ದರಿಂದ ಜ್ಞಾನ, ವಿಜ್ಞಾನ ಮತ್ತು ತತ್ತ್ವಜ್ಞಾನದ ಸುಂದರ ಸಂಗಮವಾದ ವಚನಗಳನ್ನು ಕನ್ನಡದ ವೇದವೆಂದು ಕರೆದರು! ವಚನಗಳು ಜನರಿಗೆ ಬಿಡಿಸಿದ ಬಾಳೆಹಣ್ಣಿನಂತೆ ಸುಲಭವಾಗಿ ಅರ್ಥವಾಗುವಂತಾದವು. ಬಸವಣ್ಣನವರ ವಚನಗಳ ಪ್ರಭಾವ ವರಕವಿ ದ.ರಾ. ಬೇಂದ್ರೆಯವರ ಮೇಲೆ ತುಂಬಾ ಆಗಿತ್ತು. ಬಸವಣ್ಣನವರು- ‘ಎನ್ನ ಚಿತ್ತವು ಅತ್ತಿಯಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ ನೀವಿರಿಸಿದಿರಯ್ಯ ಕೂಡಲಸಂಗಮದೇವಾ’ ಎಂದದ್ದನ್ನು ಕೆಲವು ಪಾಮರರು ‘ಅತ್ತಿಹಣ್ಣಿನಲ್ಲಿ ಹುಳ ಇರುವುದು’ ಎಂದರೆ, ಸ್ವತಃ ಅನುಭಾವಿಯಾದ ದ.ರಾ. ಬೇಂದ್ರೆಯವರು ಸರಿಯಾಗಿ ಅರ್ಥೈಸಿಕೊಂಡು ತಮ್ಮ ‘ಔದುಂಬರಗಾಥೆ’ ಕೃತಿಯಲ್ಲಿ ಅತ್ತಿಹಣ್ಣಿನ ವಿಶೇಷತೆ ಬಗ್ಗೆ ಬರೆಯುತ್ತಾರೆ. ಸಾಮಾನ್ಯವಾಗಿ ಹೂವು ಕಾಯಿ ಆಗಿ ನಂತರ ಹಣ್ಣಾಗುತ್ತದೆ. ಆದರೆ ಅತ್ತಿಹಣ್ಣು ಹೂವಾಗದೇ ನೇರ ಹಣ್ಣಾಗುತ್ತದೆ. ಅತ್ತಿಹಣ್ಣು ಬಿಡಿಸಿ ನೋಡಿದಾಗ ಅದು ಹೂವನ್ನು ತನ್ನಲ್ಲಿ ಇಟ್ಟುಕೊಂಡಿದ್ದು ಕಾಣುತ್ತದೆ. ಇದನ್ನು ಬೇಂದ್ರೆಯವರು ಚೆನ್ನಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಸಾಧಕರು ಮುಂದೆ ಸಿದ್ಧರಾಗುತ್ತಾರೆ. ಆದರೆ ಬಸವಣ್ಣನವರು ಹುಟ್ಟು ಸಿದ್ಧರಾಗಿದ್ದರಿಂದ ಅವರು ಸಾಧನೆಯನ್ನು ಮುಂದುವರಿಸಿದ ಮಹಾನ್ ಸಿದ್ಧರಾದರು!

ಇನ್ನು ಸಾಂಸ್ಕೃತಿಕವಾಗಿ ಬಸವಣ್ಣನವರು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಶರಣಸಂಸ್ಕೃತಿ ಜಗತ್ತಿನಲ್ಲಿ ಎಲ್ಲೂ ಕಂಡರಿಯದಂಥ ಅದ್ಭುತ ಸಂಸ್ಕೃತಿ. ಇದು ಸಮಾಜದ ಅವಗುಣಗಳನ್ನು ತೆಗೆದು ಜನರು ಸದ್ಗುಣಿಗಳಾಗಿ, ಸದಾಚಾರಿಗಳಾಗಿ, ಸದ್ಭಾವನೆ, ಸದ್ಭಕ್ತಿಯಿಂದ ಬದುಕುವಂತೆ ಮಾಡಿದ ಅದ್ಭುತ ಪರಿಕಲ್ಪನೆ. ಶರಣ ಸಂಸ್ಕೃತಿಯನ್ನು ಪರಿಪಾಲಿಸಿದ್ದೇ ಆದರೆ, ಸಕಲ ಚರಾಚರರ ಸರ್ವಾಂಗೀಣ ಸ್ವಾಸ್ಥ್ಯ ವಿಕಾಸ ಮತ್ತು ಸಮೃದ್ಧಿಗೆ ನಾಂದಿಯಾಗುತ್ತದೆ. ‘ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಕೂಡಲಸಂಗಮದೇವಾ ನೀವೇ ಪ್ರಮಾಣ’ ಎಂದು ಜನರನ್ನು ಸನ್ಮಾರ್ಗದಲ್ಲಿ ನಡೆಸಿದವರು ಬಸವಣ್ಣನವರು. ಇದರಿಂದ, ಕಾಶ್ಮೀರ, ಅಫ್ಘಾನಿಸ್ತಾನ, ಒಡಿಶಾ ಹೀಗೆ ಹತ್ತು ಹಲವು ಕಡೆಯಿಂದ ಸದ್ಭಕ್ತರು ಕಲ್ಯಾಣಕ್ಕೆ ಆಗಮಿಸಿದರು, ಅದನ್ನು ಸಮೃದ್ಧಗೊಳಿಸಿದರು!

ಬಸವಣ್ಣನವರ ಮಹಾಮನೆಗೆ 1000 ಕಂಬಗಳಿದ್ದವು, 5 ಮಹಾದ್ವಾರಗಳಿದ್ದವು. ದಿನಕ್ಕೆ 1,95,000 ಜನ ಜಂಗಮರು ದಾಸೋಹ ಮಾಡುತ್ತಿದ್ದರು. ಬಸವಣ್ಣನವರ ತತ್ತ್ವಸಿದ್ಧಾಂತದಿಂದ ಪ್ರಭಾವಿತರಾದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಲವು ವಿಚಾರಗಳನ್ನು ಸರ್ವರಿಗೂ ಸಮಾನತೆ ಕೊಡಲು ಸಂವಿಧಾನದಲ್ಲಿ ಅಳವಡಿಸಿದರು!ಆದ್ದರಿಂದ, ಬಸವಣ್ಣನವರನ್ನು ಒಂದು ಗುಂಪಿಗೆ, ಒಂದು ಪಂಗಡಕ್ಕೆ, ವೀರಶೈವ ಧರ್ಮಕ್ಕೆ ಸೀಮಿತಗೊಳಿಸದೇ ವಿಶ್ವಕ್ಕೆ ಕಾಯಕ ದಾಸೋಹದ ಮುಖಾಂತರ ಸಕಲ ಜೀವಾತ್ಮರ ಸ್ವಾಸ್ಥ್ಯ್ಕೆ ಶ್ರಮಿಸಿದ ವಿಶ್ವಗುರುವೆಂದು ಪರಿಗಣಿಸಿ ಅವರ ನುಡಿಗಳಂತೆ ನಡೆದರೆ ಭೂಮಿಯು ಖಂಡಿತ ‘ಭೂಕೈಲಾಸ’ವೇ ಆಗುವುದು.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top