Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಅತಿವೇಗ ಸಾವಿಗೆ ಸೋಪಾನ ಎಂಬ ಸುಜ್ಞಾನ ಮೂಡಲಿ

Saturday, 20.05.2017, 3:05 AM       No Comments

ದೇ ಮೇ 8ರಿಂದ 14ರವರೆಗೆ ‘ವಿಶ್ವ ರಸ್ತೆ ಸುರಕ್ಷಾ ಸಪ್ತಾಹ’ ಆಚರಿಸಲು ವಿಶ್ವಸಂಸ್ಥೆ ಕರೆಕೊಟ್ಟಿತ್ತು. ಈ ಸಂದರ್ಭದಲ್ಲಿ, ರಸ್ತೆಗಳಲ್ಲಿ ವೇಗ ನಿಯಂತ್ರಣಕ್ಕೆ ಮಹತ್ವ ಕೊಟ್ಟು ‘Save lives, Slow down’ ಎಂಬ ಘೊಷಣೆಯನ್ನು ವಿಶ್ವಕ್ಕೆ ಕೊಟ್ಟಿದೆ ವಿಶ್ವಸಂಸ್ಥೆ! ವೇಗವಾಗಿ ವಾಹನ ಓಡಿಸಿ ರಸ್ತೆ ಅಪಘಾತ ಸಂಭವಿಸಿ ಸಾಯುವವರ ಸಂಖ್ಯೆಯನ್ನು 2020ರ ವರ್ಷದ ವೇಳೆಗೆ ಶೇ.50 ಕಡಿಮೆ ಮಾಡಬೇಕು ಎಂಬುದೇ ಇದರ ಉದ್ದೇಶ. ಇದು ಸಫಲವಾಗಲು ಜನರಲ್ಲಿ ‘ಅತಿವೇಗ ಸಾವಿಗೆ ಸೋಪಾನ’ ಎಂಬ ಸುಜ್ಞಾನ ಮೂಡಲೇಬೇಕು.

ವಿಶ್ವಸಂಸ್ಥೆಯ ಈ ಮಹತ್ವದ ನಿರ್ಧಾರ ಓದಿದಾಗ ನನಗೆ ನೆನಪಾದದ್ದು ಡಾ. ಎಂ. ಚಿದಾನಂದ ಮೂರ್ತಿಯವರ ಮಾತು. ಒಂದು ಸಲ ನಾನು ಓಡಿಸುತ್ತಿದ್ದ ಕಾರಿನಲ್ಲಿ ಪಕ್ಕದಲ್ಲಿ ‘ಚಿ.ಮೂ.’ ಕೂತಿದ್ದರು. ಹಿಂದಿನಿಂದ ಒಬ್ಬ ಟೆಂಪೋ ಚಾಲಕ ಒಂದೇ ಸಮನೆ ಹಾರ್ನ್ ಮಾಡುತ್ತ, ಯಮದೂತರು ಬಂದಂತೆ ವೇಗವಾಗಿ ಬೆಂಬತ್ತಿ ಬಂದ! ತಕ್ಷಣ ಚಿ.ಮೂ. ಅವರು, ‘ವಿಜಯಲಕ್ಷ್ಮಿಯವರೇ, ಯಾರೋ ಮೇಲೆ ಹೋಗಲು ಆತುರದಲ್ಲಿದ್ದಾರೆ. ಅವರಿಗೆ ದಾರಿಬಿಡಿ. ನಮಗೆ ಮೇಲೆ ಹೋಗಲು ಅವಸರವಿಲ್ಲ. ನಾವು ನಿಧಾನವಾಗಿ ಹೋಗೋಣ’ ಎಂದರು. ಅವರ ಮಾತಿನಲ್ಲಿ ತಿಳಿಹಾಸ್ಯವಿದ್ದರೂ ಅತ್ಯಂತ ಗಂಭೀರ ಸತ್ಯವನ್ನೇ ನುಡಿದಿದ್ದರು!

8-9 ಶತಕೋಟಿ ಕಾರ್ಯನಿರತ ಜೀವಕಣಗಳನ್ನು ಹೊಂದಿರುವ ನಮ್ಮ ಮಿದುಳಿಗೆ, ಸೂಪರ್ ಕಂಪ್ಯೂಟರ್​ಗಿಂತಲೂ ಅದ್ಭುತ ಕ್ಷಮತೆಯಿದೆ, ಅಗಾಧ ಶಕ್ತಿಯಿದೆ. ಮನಸ್ಸು ಜೆಟ್​ಪ್ಲೇನ್​ಗಿಂತ ಹೆಚ್ಚು ವೇಗವಾಗಿ ಚಲಿಸಬಲ್ಲದು. ಆದರೆ, ಅತಿವೇಗದಲ್ಲಿ ಚಲಿಸುವ ಗಾಡಿಯ ಚಾಲಕನ ಮಿದುಳು ನಿರ್ಣಯ ತೆಗೆದುಕೊಳ್ಳುವ ಮೊದಲೇ ಅಪಘಾತ ಸಂಭವಿಸಿರುತ್ತದೆ. ಇದಕ್ಕೆ ಅವನ ಮನಸ್ಥಿತಿ ಕೂಡ ಪ್ರಮುಖ ಕಾರಣ ಎಂಬುದು ಇಂದಿನ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ದೃಢಪಟ್ಟ ಅಂಶ. ಒಬ್ಬ ಅಜ್ಞಾನಿಯ ತಪ್ಪಿನಿಂದ ಆ ವಾಹನದಲ್ಲಿ ಜತೆಗೆ ಇದ್ದವರು, ಇಲ್ಲವೇ ಎದುರುಬಂದ ಗಾಡಿಯಲ್ಲಿದ್ದವರೆಲ್ಲ ಯಮನ ಪಾದ ಸೇರಬೇಕಾಗುತ್ತದೆ. ಆದ್ದರಿಂದ ವಾಹನ ಚಾಲಕನಿಗೆ ತನ್ನ ಜೀವ ಮಾತ್ರವಲ್ಲದೆ ಪ್ರಯಾಣಿಕರ ಜೀವಗಳ ಬಗೆಗೆ ಕೂಡ ಕಾಳಜಿ ಇರಬೇಕು.

ಇತರರ ಜೀವದ ಕಾಳಜಿ ಎಂದಾಗ ನನಗೆ ನೆನಪಾಗುವುದು ಅನುಭವಿ ಶಿಕ್ಷಣತಜ್ಞ, ಗಾಂಧಿವಾದಿ ದಿವಂಗತ ಎಚ್.ನರಸಿಂಹಯ್ಯನವರು! ಒಂದು ಸಲ ಅವರು ಆಟೋ ಒಂದರಲ್ಲಿ ಕುಳಿತು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗುವಾಗ, ಅದರ ಚಾಲಕ ‘ಕೈಲಾಸಪತಿಯೇ…..’ ಎಂದು ಸಂತೋಷದಿಂದ ಹಾಡುತ್ತ ಎರ್ರಾಬಿರ್ರಿ ಗಾಡಿ ಓಡಿಸುತ್ತಿದ್ದುದನ್ನು ಕಂಡು ಗಾಬರಿಯಾಗಿ ‘ಅಪ್ಪಾ, ಗಾಡಿ ನಿಲ್ಲಿಸಪ್ಪ’ ಎಂದರಂತೆ. ಆಗ ಅವನು ಹಾಡು-ಗಾಡಿ ಎರಡನ್ನೂ ನಿಲ್ಲಿಸಿ ‘ಯಾಕೆ ಸ್ವಾಮಿ?’ ಎಂದು ಚಕಿತನಾಗಿ ಕೇಳಿದನಂತೆ. ಅದಕ್ಕೆ ಎಚ್ಚೆನ್, ‘ಅಪ್ಪಾ, ಕೈಲಾಸಪತಿ ಅಂತ ಹಾಡುತ್ತ, ಗಮನವಿಲ್ಲದೆಯೇ ಗಾಡಿ ಓಡಿಸಿ ನನ್ನನ್ನೇ ಕೈಲಾಸಕ್ಕೆ ಕಳಿಸಿದರೆ ಎಂಬ ಭಯ’ ಎಂದು ಮುಗುಳುನಗುತ್ತ ಇಳಿದು ಇನ್ನೊಂದು ಆಟೋ ಹತ್ತಿದರಂತೆ! ಎರಡನೆಯ ಚಾಲಕ ಮೊದಲಿನವನ ಅಪ್ಪನಂತೆ, ಹಾವು ಚಲಿಸಿದಂತೆ ರಸ್ತೆಯಲ್ಲಿ ಎಡಕ್ಕೆ ಬಲಕ್ಕೆ ತಿರುಗಿಸುತ್ತ ಸಾಗುತ್ತಿದ್ದರೆ, ಪ್ರತಿಸಲ ಅವನು ವೇಗವಾಗಿ ತಿರುಗಿಸಿದಾಗ ಎಚ್ಚೆನ್ ಜೋಲಿಹೊಡೆಯುತ್ತ ಅವನಿಗೆ ‘ಅಪ್ಪಾ ನಿಧಾನ, ಹೆಂಡತಿ-ಮಕ್ಕಳು ನಿಧಾನ’ ಎನ್ನುತ್ತಿದ್ದರಂತೆ. ಪದೇಪದೆ ಹೆಂಡತಿ ಮಕ್ಕಳನ್ನು ನೆನೆಯುತ್ತಿದ್ದ ಎಚ್ಚೆನ್ ಅವರ ಮಾತಿಗೆ ತಲೆತಿರುಗಿದ ಆ ಮೂರ್ಖ ಗಾಡಿ ನಿಲ್ಲಿಸಿ ಜೋರಾಗಿ- ‘ಇಳೀರಿ ಕೆಳಗೆ’ ಎಂದನಂತೆ! ಎಚ್ಚೆನ್ ಆಶ್ಚರ್ಯದಿಂದ ‘ಯಾಕಪ್ಪ?’ ಅಂತ ಕೇಳಿದರಂತೆ. ಅದಕ್ಕೆ- ‘‘ಗಾಡಿಯಲ್ಲಿ ಕುಳಿತಾಗಿನಿಂದ ‘ಹೆಂಡತಿ-ಮಕ್ಕಳು, ಹೆಂಡತಿ-ಮಕ್ಕಳು’ ಅಂತ ಜಪಿಸುತ್ತಿದ್ದೀರಲ್ಲ. ನನಗೂ ಹೆಂಡತಿ ಮಕ್ಕಳಿದ್ದಾರೆ’’ ಎಂದನಂತೆ ಆ ಭೂಪ! ಆಗ ಎಚ್ಚೆನ್ ನಸುನಗುತ್ತ ಹೇಳಿದರಂತೆ- ‘ಹೌದಪ್ಪ, ಅಷ್ಟೊತ್ತಿಂದ ನಾನು ನಿನ್ನ ಹೆಂಡತಿ-ಮಕ್ಕಳನ್ನೇ ಜ್ಞಾಪಿಸುತ್ತಿದ್ದೆ; ನಾನು ಮದುವೇನೇ ಆಗಿಲ್ಲಪ್ಪ’ ಎಂದಾಗ ಆ ಚಾಲಕ ಇಂಗು ತಿಂದ ಮಂಗನಂತಾದನಂತೆ!

ಆಟೋರಿಕ್ಷಾಗಳು ಸಿಕ್ಕ ಜಾಗದಲ್ಲಿ ನುಸುಳುವುದು, ಇತರರನ್ನು ಹಿಂದೆಹಾಕಿ ಮುಂದೆ ಧಾವಿಸುವುದನ್ನು ನೋಡಿದಾಗ, ಪಾಪ ಯಾಕೆ ಇವರು ಜೀವದ ಹಂಗು ತೊರೆದು ಸಾಗುತ್ತಿದ್ದಾರೆ? ಏನು ಸಾಧಿಸಲು ಧಾವಿಸುತ್ತಿದ್ದಾರೆ? ಎಂಬುದು ಅರ್ಥವಾಗುವುದಿಲ್ಲ. ಇಂಥವರ ರಕ್ತದ ಒತ್ತಡ ಮತ್ತು ಹೃದಯದ ಮಿಡಿತ ಹೆಚ್ಚಾಗುವುದೆಂದು ವೈಜ್ಞಾನಿಕವಾಗಿ ತಿಳಿದುಬಂದಿದೆ! ಇದಕ್ಕೆ ಕಾರಣ, ಆತುರದಲ್ಲಿ ಮುಂದೆ ಹೋಗುವ ಆತಂಕದಲ್ಲಿ ಅವರ ಮಿದುಳಿನಿಂದ Catecholamine  ಮತ್ತು Cartisol ಹಾಮೋನುಗಳು ಹೆಚ್ಚು ಉತ್ಪತ್ತಿ ಆಗಿ, ಹೃದಯ ಮತ್ತು ಶರೀರವನ್ನು ದುರ್ಬಲಗೊಳಿಸುತ್ತವೆ. ಮುಂದೆ ಅವರು ಪಾರ್ಶ್ವವಾಯುವಿಗೆ ಒಳಗಾಗುವ ಸಂಭವ ಕೂಡ ಹೆಚ್ಚುತ್ತದೆ. ಆದರೆ ಇಂಥ ಚಾಲಕರಿಗೆ ಸಾವನ್ನು ತಾವೇ ಸನಿಹ ತಂದುಕೊಳ್ಳುತ್ತಿದ್ದೇವೆಂಬ ಕಲ್ಪನೆ ಕೂಡ ಇಲ್ಲದಿರುವುದು ದುರಂತ. ಆದ್ದರಿಂದ ಚಾಲಕರಿಗೆ ಡ್ರೖೆವಿಂಗ್ ಲೈಸನ್ಸ್ ಕೊಡುವ ಮೊದಲು, ಅವರ ಜೀವದ ಬಗ್ಗೆ ಮತ್ತು ಅವರನ್ನು ನೆಚ್ಚಿದ ಕುಟುಂಬದವರ ಬಗ್ಗೆ ಯೋಚಿಸಲು ಮೊದಲು ತಿಳಿಸಲೇಬೇಕು. ಕೇವಲ ಡ್ರೖೆವಿಂಗ್ ಲೈಸನ್ಸ್ ಸಿಕ್ಕರೆ ಸಾಲದು; ಆ ವೃತ್ತಿಗೆ ಸರಿಯಾದ ಮಾನಸಿಕತೆ ಇರಬೇಕಾದುದು ಬಹಳ ಮುಖ್ಯ.

2013ರಲ್ಲಿ ರಸ್ತೆ ಅಪಘಾತದಲ್ಲಿ 1,37,000 ಜನ ಸತ್ತಿದ್ದಾರೆಂಬುದು ಪ್ರತಿ ಭಾರತೀಯನೂ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ಇದಕ್ಕೆ, ವೇಗವಾಗಿ ಗಾಡಿ ಓಡಿಸುವುದು ಒಂದು ಕಾರಣವಾದರೆ, ಮದ್ಯಪಾನ ಮಾಡಿ ಗಾಡಿ ಓಡಿಸುವುದು ಇನ್ನೊಂದು ಕಾರಣ ಎಂದು ಅಧಿಕೃತವಾಗಿ ತಿಳಿದುಬಂದಿದೆ. ಇತ್ತೀಚೆಗೆ ಹೆದ್ದಾರಿಯ ಆಸುಪಾಸು 500 ಮೀ. ದೂರದವರೆಗೂ ಮದ್ಯದ ಅಂಗಡಿಗಳು ಇರಬಾರದೆಂದು ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿದಾಗ ಕೂಡ ಕೆಲ ಜನರು ತಮಾಷೆ ಮಾಡುತ್ತ ಅದನ್ನು ಖಂಡಿಸಿದರು; ಇದರ ಹಿಂದಿನ ವೈಜ್ಞಾನಿಕ ಕಾರಣ ಮತ್ತು ಜನಪರ ಕಾಳಜಿಯನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗಲಿಲ್ಲ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಯವರು ಬಿಡುಗಡೆ ಮಾಡಿರುವ ‘Road accidents in India 2015’  ಎಂಬ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಶೇ. 77 ಅಪಘಾತಗಳು ಚಾಲಕನ ಅಚಾತುರ್ಯದಿಂದ ನಡೆದಿವೆ ಮತ್ತು ಅತಿಹೆಚ್ಚು ರಸ್ತೆ ಅಪಘಾತಗಳಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನ ಪಡೆದಿದೆ. ಯಾವ ರಾಜ್ಯಗಳಲ್ಲಿ ಮದ್ಯಪಾನ ನಿಷೇಧವಿದೆಯೋ ಅಲ್ಲಿ ಕುಡಿದು ಗಾಡಿ ಚಲಾಯಿಸಿ ಆಗುವ ಅಪಘಾತಗಳ ಸಂಖ್ಯೆ ಬಹಳ ಕಡಿಮೆ ಎಂದು ತಿಳಿದುಬಂದಿದೆ. ಗುಜರಾತ್​ನಲ್ಲಿ ಪಾನನಿಷೇಧ ಕಾಯ್ದೆ ಜಾರಿಯಲ್ಲಿದೆ. ಅಲ್ಲಿ ಕುಡಿತದ ಅಮಲಿನಲ್ಲಿ ಆಗುವ ಅಪಘಾತದ ಪ್ರಮಾಣ ಕೇವಲ ಶೇ. 0.25 ಅಂದರೆ, ಹೆದ್ದಾರಿ ಸಮೀಪ ಮದ್ಯದಂಗಡಿಗಳನ್ನು ನಿಷೇಧಿಸಬೇಕೆಂಬ ನ್ಯಾಯಾಲಯದ ತೀರ್ಪಿನ ಮಹತ್ತ್ವ ಅರ್ಥವಾಗುತ್ತದೆ.

ನಮ್ಮ ಪಂಚೇಂದ್ರಿಯಗಳ ಮೇಲೆ ನಿಗ್ರಹವಿಡುವುದೇ ಮಿದುಳು. ಕುಡಿದಾಗ ಮಿದುಳಿನ ನಿಯಂತ್ರಣ ತಪ್ಪಿ ಮಾತು ತೊದಲುತ್ತ, ಕೈಕಾಲುಗಳಲ್ಲಿ ನಡುಕ ಹುಟ್ಟಿ, ಕಣ್ಣು ಮಂಜಾಗಿ ದೃಶ್ಯ ಎರಡೆರಡು ಕಾಣುತ್ತದೆ. ಇದರಿಂದಾಗಿ ಎದುರಿನಿಂದ ಬರುವ ಗಾಡಿ ಸ್ಪಷ್ಟವಾಗಿ ಕಾಣದೆ ಚಾಲಕನಿಗೆ ಗಾಡಿ ಓಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ವಿಚಾರ ಮಂಥನ ಮಾಡಿದರೆ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುವುದು ಸಮಾಜಘಾತುಕ ಅಪರಾಧವೆಂದೇ ಪರಿಗಣಿಸಬೇಕು.

ಒಮ್ಮೆ ಭುವನೇಶ್ವರದ ಕಟಕ್ ಹೆದ್ದಾರಿಯಲ್ಲಿ ಶರವೇಗದಿಂದ ಬಂದ ಜೀಪು ಮಂಗವೊಂದಕ್ಕೆ ಡಿಕ್ಕಿಹೊಡೆದು ಹೋಯಿತಂತೆ. ಆಗ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಮಂಗಗಳು ಕಣ್ಣೀರು ಸುರಿಸುತ್ತ ರಸ್ತೆ ಮಧ್ಯೆ ಕುಳಿತವಂತೆ. ಪಕ್ಕದ ಊರಿನ ಜನ ಬಂದು ಬಿಳಿಬಟ್ಟೆ ಹೊದಿಸಿ, ಮಾಲೆಹಾಕಿ ಮಂಗನ ಪಾರ್ಥಿವ ಶರೀರವನ್ನು ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋದಾಗಲೇ ಅವು ರಸ್ತೆ ಖಾಲಿಮಾಡಿದವಂತೆ. ಅಲ್ಲಿಯವರೆಗೂ ಹೆದ್ದಾರಿಯ ಗಾಡಿಗಳು ನಿಂತೇ ಇದ್ದವು. ಆದರೆ ವಿಕಾಸ ಸರಣಿಯಲ್ಲಿ ‘ಮಂಗನಿಂದ ಮಾನವ’ರಾದವರು ಮಾಡುವುದೇನು? ಅಪಘಾತವಾಗಿ ಮಕ್ಕಳಿಗೋ ಮುದುಕರಿಗೋ ಪೆಟ್ಟಾದರೆ, ರೊಚ್ಚಿಗೆದ್ದು ಗಾಡಿಗೆ ಬೆಂಕಿಹಚ್ಚಿ ಚಾಲಕನಿಗೆ ಹೊಡೆದು ಬಡಿದು ಹಣ ಕೀಳುತ್ತಾರೆ!

ಏನೇ ಆಗಲಿ, ಅಪಘಾತದಿಂದಾಗುವ ಸಾವು-ನೋವು ಕಡಿಮೆಮಾಡಲು, ವೇಗವಾಗಿ ಚಲಿಸದಿರುವುದು ಮತ್ತು ಕುಡಿದು ವಾಹನ ಚಾಲನೆ ಮಾಡದಿರುವುದು ಎರಡೂ ಮುಖ್ಯ. ಇಲ್ಲದಿದ್ದರೆ ಡಿವಿಜಿ ಅವರು ‘ಮದುವೆಗೋ ಮಸಣಕೋ’ ಎಂದು ಹೇಳಿದಂತೆ ಮದುವೆಯ ದಿಬ್ಬಣಕ್ಕೆ ಹೊರಟ ಜನ ಅಪಘಾತದಲ್ಲಿ ಸಾಯುವುದು ತಪ್ಪುವುದಿಲ್ಲ. ನಮ್ಮ ದೇಶದಲ್ಲಿ, ತಮ್ಮ ತಪ್ಪಿಗೆ ಆದ ಅಪಘಾತದ ಕಾರಣವನ್ನು ಮದುಮಗಳ ‘ಕಾಲ್ಗುಣ’ದ ಮೇಲೆ ಹೇರುವ ಮೂರ್ಖರಿಗೇನೂ ಕಡಿಮೆ ಇಲ್ಲ! ಆದರೆ, ತಮ್ಮ ಮತ್ತು ಇತರರ ಜೀವಕ್ಕೆ ಸಂಚಕಾರ ತರುವ ವೇಗ ಮತ್ತು ಕುಡಿತವನ್ನು ನಿಯಂತ್ರಿಸುವ ಆಲೋಚನೆ ಇಂಥವರಲ್ಲಿ ಸ್ಪುರಿಸುವುದೇ ಇಲ್ಲ.

ವಿದೇಶಗಳಲ್ಲಾದರೆ ವಾಹನಗಳು, ರಸ್ತೆಯಲ್ಲಿ ನಡೆಯುವವರಿಗೆ ಮೊದಲ ಆದ್ಯತೆ ಕೊಟ್ಟು ನಂತರ ಚಲಿಸುತ್ತವೆ. ಆದರೆ, ನಮ್ಮಲ್ಲಿ ಚಾಲಕರು ಕುಡಿದ ಅಮಲಿನಲ್ಲಿ ಫುಟ್​ಪಾತ್ ಮೇಲೆ ಮಲಗಿದ್ದ ಬಡಪಾಯಿಗಳನ್ನು ಮೊದಲು ಯಮನ ಹತ್ತಿರ ಕಳಿಸುವುದು ದುರಂತ. ಅಪಘಾತವಾದಾಗ ತಮ್ಮದೇನೂ ತಪ್ಪಿಲ್ಲ, ಮತ್ತೊಬ್ಬರದೇ ತಪ್ಪು ಎಂದು ಎಲ್ಲ ಚಾಲಕರು ವಾದಿಸುತ್ತಾರೆ. ಆದರೆ ನಮ್ಮ ಜವಾಬ್ದಾರಿಯ ಜತೆಗೆ ಇತರರ ಬೇಜವಾಬ್ದಾರಿಗೂ ನಾವು ಗಮನ ಕೊಡಬೇಕು. ವಿದೇಶಗಳಲ್ಲಿ ಅಪ್ಪಿತಪ್ಪಿ ಒಂದು ಅಪಘಾತವಾದರೆ, ಸತ್ತವರ ಯೋಗ್ಯಸ್ಥಿತಿಯಲ್ಲಿರುವ ಅವಯವಗಳನ್ನು ಇತರರಿಗೆ ಕಸಿಕಟ್ಟಲು ಉಪಯೋಗಿಸುತ್ತಾರೆ. ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಇತರರ ಜೀವ ಉಳಿಸಲು ಬಳಕೆಯಾಗುವ ಪರಿಯಿದು. ಜನಪರ ಕಾಳಜಿ ಮೆರೆಯಲು ಮಿತಿಯಿಲ್ಲ, ಅಲ್ಲವೇ?

Leave a Reply

Your email address will not be published. Required fields are marked *

Back To Top