Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಬೇಡುವ ಕೈ ವಿಕೃತಿ, ಕೊಡುವ ಕೈ ಸಂಸ್ಕೃತಿ

Saturday, 31.03.2018, 3:04 AM       No Comments

ಇತ್ತೀಚೆಗಷ್ಟೇ ರಾಮನವಮಿ ಆಚರಿಸಿದ ನಾಡಲ್ಲಿ, ಅಲ್ಲಲ್ಲಿ ಕೋಸಂಬರಿ-ಪಾನಕ ಹಂಚುವ ಸಂಸ್ಕೃತಿ ಇನ್ನೂ ಉಳಿದಿರುವುದು ಕಂಡೆವು. ಸುಮಾರು 7000 ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ಅಶೋಕವನದಲ್ಲಿ ಶೋಕತಪ್ತಳಾದ ಸೀತಾಮಾತೆಯ ಮುಂದೆ ರಾಮದೂತ ಹನುಮಂತ ಮೊಳಕಾಲೂರಿ ಕುಳಿತು ಎರಡೂ ಕೈಗಳನ್ನು ಬೊಗಸೆ ಮಾಡಿ ಅದರಲ್ಲಿನ ಚೂಡಾಮಣಿಯನ್ನು ತೋರಿಸಿದಾಗ, ಈ ವಾನರನು ರಾಮದೂತ ಎಂದು ಸೀತಾಮಾತೆ ತಕ್ಷಣ ಅರಿತಳಂತೆ. ಅದೇ ಮಾತೆಯ ಮುಂದೆ ರಾವಣನು ಪರಿಪರಿಯಾಗಿ ಬರುತ್ತಿದ್ದನಂತೆ. ಯಾವ ವೇಷದಲ್ಲಿ ಬಂದರೂ ಅವನು ರಾವಣ ಎಂದು ಅವಳಿಗೆ ತಿಳಿಯುತ್ತಿತ್ತಂತೆ. ಆಗ ಚಕಿತಳಾದ ಒಬ್ಬ ರಾಕ್ಷಸಿ ಸೀತಾಮಾತೆಯನ್ನು ಕೇಳಿದಳಂತೆ- ‘ತಮಗೆ ಹೇಗೆ ತಿಳಿಯಿತು ಮಾತೆ ಆ ವಾನರ ರಾಮದೂತನೆಂದು?’. ಅದಕ್ಕೆ ಸೀತೆ ಉತ್ತರಿಸಿದ್ದು- ‘ಹನುಮನು ಚೂಡಾಮಣಿಯನ್ನು ತನ್ನ ಕೈಗಳಿಂದ ನನಗೆ ಕೊಡುವ ದುಸ್ಸಾಹಸ ಮಾಡಲಿಲ್ಲ; ಬದಲಿಗೆ ಬೊಗಸೆಗೈಯಲ್ಲಿ ವಿನಯದಿಂದ ಹಿಡಿದು ಹಿರಿಯರಿಗೆ ಸೂಚಿಸುವ ಗೌರವದ ಸಂಸ್ಕೃತಿ ಮೆರೆದ. ಅದರಿಂದ ಅವನು ಮರ್ಯಾದಾ ಪುರುಷೋತ್ತಮ ರಾಮನ ದೂತನೆಂದು ತಿಳಿಯಿತು!’.

ಆದರೆ ಇಂದು ಸಹಸ್ರಾರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರುತ್ತಿರುವುದು ದುರಂತ. ಹಲವು ವರ್ಷಗಳ ಹಿಂದೆ ನಾನು ಮನೆದೇವರಾದ ಬನಶಂಕರಿಯ ದರ್ಶನಕ್ಕೆ ಹೋಗಿದ್ದೆ. ಚಿಕ್ಕ ಮಗುವಿದ್ದಾಗ ತಾಯಿಯ ಸೆರಗು ಹಿಡಿದುಕೊಂಡು ಕುಣಿಕುಣಿಯುತ್ತ ಕಲ್ಯಾಣಿಯ ಸುತ್ತ ಓಡಾಡಿದ್ದ ನೆನಪು ಹಸಿರಾಗಿತ್ತು. ಸುತ್ತಲಿನ ಹಸಿರಿನ ಪ್ರತಿಬಿಂಬದಿಂದ ಕಲ್ಯಾಣಿಯ ನೀರೂ ಹಸಿರಾಗಿ ಕಂಡಿತ್ತು ಅಂದು. ಆದರೆ ಈ ಸಲ ಹೋದಾಗ ಕಲ್ಯಾಣಿ ಬತ್ತಿತ್ತು. ಅಯ್ಯೋ ದೇವರೇ, ಕಲ್ಯಾಣಿ ಸ್ಥಿತಿ ಹೀಗಾದರೆ ರೈತರ ಗತಿ ಏನು ಎಂದುಕೊಂಡು ಮೆಟ್ಟಿಲು ಇಳಿದು ಬರುತ್ತಿದ್ದಂತೆ ಒಬ್ಬ ಮುದುಕಿ, ‘ಯವ್ವಾ, ಎರಡು ರೊಟ್ಟಿ ತಿನ್ನರೀ’ ಎಂದರು. ನಾನು ‘ಬೇಡವ್ವ’ ಎಂದೆ. ಆಗ ಅವರು ಆಡಿದ ಮಾತು ಕೇಳಿ ಕರುಳು ಚುರ್ ಎಂದಿತು. ‘ಯವ್ವಾ, 4 ವರ್ಷದಿಂದ ಮಳೀ ಇಲ್ಲರೀ. ನಿಮ್ಮಂಥವರು ಎರಡು ರೊಟ್ಟಿ ತಿಂದರೆ ನಮ್ಮಂಥವರಿಗೆ ಎರಡು ತುತ್ತು ಹೊಟ್ಟಿಗೆ ಸಿಗತದರ್ರೀ’ ಎಂದರು ಆಕೆ. ಅದಕ್ಕೆ ನಾನು 10 ರೂಪಾಯಿ ಅವರ ಕೈಯಲ್ಲಿಟ್ಟು ದೇವಸ್ಥಾನದೊಳಗೆ ಹೋದೆ. ನನ್ನ ಗುರುತುಹಿಡಿದ ಅರ್ಚಕರು- ‘ಬಾಳೇಕುಂದ್ರಿ ಸಾಹೇಬರ ಮಗಳು ಬಂದಿದಾರ್ರೀ. ನಮ್ಮ ಉತ್ತರಕರ್ನಾಟಕಕ್ಕೆ ನೀರಾವರಿ ಮಾಡಿದ ಭಗೀರಥರ್ರೀ ಅವರು’ ಎಂದು ನನ್ನ ಕೈಯಲ್ಲಿ ಕುಂಕುಮಾರ್ಚನೆ ಮಾಡಿಸಿದರು. ಮರಳಿ ಹೋಗುವಾಗ ರೊಟ್ಟಿಯ ಮುದುಕಿ ಎದುರು ಪ್ರತ್ಯಕ್ಷಗೊಂಡು- ‘ಯವ್ವಾ, ನಾವೂ ಶೀಲವಂತರ್ರಿ. ಎರಡು ರೊಟ್ಟಿ ತಿಂದು ಹೋಗರ್ರಿ. 10 ರೂಪಾಯಿ ಕೊಟ್ಟಿದೀರಿ, ಹಂಗಾ ಹೋಗಬ್ಯಾಡ್ರೀ’ ಎಂದರು.

ನನಗೆ ಪರಮಾಶ್ಚರ್ಯವಾಯಿತು. ‘ನಾನಾಗಿಯೇ 10 ರೂಪಾಯಿ ಕೊಟ್ಟರೂ ಅದನ್ನು ಪುಕ್ಕಟ್ಟೆ ಪಡೆಯಲು ಇಚ್ಛಿಸದ ಆ ಮಹಾತಾಯಿ, ಅದರ ಬದಲು ರೊಟ್ಟಿ ತಿಂದುಹೋಗಿ ಎನ್ನುತ್ತಿದ್ದಾರೆ. ಆದರೆ ಸರ್ಕಾರದ ಹಣ ಕೋಟಿಗಟ್ಟಲೆ ಬಂದರೂ ರಾಜಕಾರಣಿಗಳು, ಅಧಿಕಾರಿಗಳು ನುಂಗಿ ನೀರು ಕುಡಿಯುತ್ತಾರೆ. ಇಲ್ಲಿ ಕೂಡಿಟ್ಟ ಹಣವನ್ನು ಸ್ವಿಸ್ ಬ್ಯಾಂಕ್​ನಲ್ಲಿ ಬಚ್ಚಿಡುತ್ತಾರೆ. ಅವರಿಗೆ ಬಡವರ ಗೋಳಿನ ಪರಿವೆಯೇ ಇಲ್ಲ’- ಅಂತ ಯೋಚಿಸಿದೆ. ಅದು ನನ್ನ ವಿಚಾರಕ್ಕೆ ತಿರುವು ಕೊಟ್ಟ ಘಟನೆಯಾಯ್ತು. ಕಾರ್ತಿಕ ಮಾಸವೆಂದು ಎಣ್ಣೆಗೆ ಹಣ ಹಾಕುವ ಬದಲು ಬಡವರಿಗೆ ಕೊಡುವುದು ಉತ್ತಮ ಎಂದು ಯೋಚಿಸಿ ಅವರಿಗೆ 100 ರೂಪಾಯಿ ಕೊಟ್ಟೆ. ಹತ್ತು ರೂಪಾಯಿಗೆ ರೊಟ್ಟಿ ತಿನ್ನುವ ಬದಲು 100 ರೂಪಾಯಿ ಕೊಟ್ಟ ನನ್ನ ಕಡೆಗೆ ಚಕಿತರಾಗಿ ನೋಡುತ್ತ- ‘ಯವ್ವಾ, ಬುಟ್ಟ್ಯಾಗಿನ ಎಲ್ಲ ರೊಟ್ಟಿ ಬೇಕ್ರೀ?’ ಎಂದು ಕೇಳಿದರು ಆ ಸ್ವಾಭಿಮಾನಿ ತಾಯಿ! ಅದಕ್ಕೆ ನಾನು, ‘ಇಲ್ಲವ್ವ, ನನಗೆ ಎರಡೇ ರೊಟ್ಟಿ ಸಾಕು. ನೀವು ಹಸಿದವರಿಗೆ ಹಂಚಿ’ ಎಂದೆ.

ಮರುದಿನ ಸಂಜೆ ಡಾ. ಚಿದಾನಂದ ಮೂರ್ತಿಯವರು, ಬರಗಾಲಕ್ಕೆ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗೆ 25 ಕೆ.ಜಿ. ಅಕ್ಕಿ ವಿತರಿಸಲು ದೇಣಿಗೆ ಕೇಳಲು ನನ್ನ ಮನೆಗೆ ಬಂದರು. ಆಗ ನಾನು ಬಾದಾಮಿಯ ರೊಟ್ಟಿಯ ಅಜ್ಜಿಯ ಮಾತು ಹೇಳಿದೆ. ಅವರ ಕಣ್ಣಂಚಿನಲ್ಲಿ ನೀರೂರಿದವು. ‘ವಿಜಯಲಕ್ಷ್ಮಿಯವರೇ, ಕಲಿತ ನಾಗರಿಕರು ಕಲಿಯಬೇಕಾದ ವಿಚಾರ ಇದು’ ಎಂದರು.

ಇತ್ತೀಚೆಗೆ ಬಾದಾಮಿಗೆ ಹೋದಾಗ ರೊಟ್ಟಿಯ ಅಜ್ಜಿಯನ್ನು ಹುಡುಕಿದೆ. ಚಿತ್ರಣವೇ ಬದಲಾಗಿದ್ದು ಕಂಡು ದಂಗಾದೆ. ಎಲ್ಲೆಲ್ಲೂ ಬೇಡಿಕೊಳ್ಳುವವರ ಉಪಟಳ! ರೊಟ್ಟಿ ಮಾರುತ್ತಿದ್ದ ಯುವತಿಯನ್ನು ಕರೆದು 100 ರೂಪಾಯಿ ಕೊಟ್ಟು- ‘ನೋಡವ್ವ, ಇಲ್ಲಿ ಹಸಿದವರಿಗೆ ರೊಟ್ಟಿ ಹಂಚರ್ರೀ’ ಎಂದೆ. ಅವಳು ‘ಹೂರ್ರೀ’ ಎಂದರೂ ಬೇಡಿಕೊಳ್ಳುತ್ತಿದ್ದ ಮಹಿಳೆ- ‘ರೊಕ್ಕ ನಮ್ಮ ಕೈಯಾಗ ಕೊಡ್ರೀ. ಅವಳೇನು ರೊಟ್ಟಿ ಕೊಡತಾಳ. ರೊಟ್ಟಿ-ರೊಕ್ಕ ಎರಡೂ ತಾನ ಇಟಕೋತಾಳ’ ಎಂದು ಮೂದಲಿಸಿದಳು. ಹಲವು ವರ್ಷದ ಹಿಂದಿನ ‘ನಾವು ಶೀಲವಂತರು’ ಮಾಯವಾಗಿತ್ತು. ಸ್ವಾಭಿಮಾನದ ಬದುಕು ಕಣ್ಮರೆಯಾಗಿತ್ತು. ಕಿತ್ತು ತಿನ್ನುವ ಬಡತನ, ಜತೆಗೆ ಕೆಲಸ ಮಾಡದೇ ಬೇಡಿಕೊಂಡು ತಿನ್ನುವ ಕೆಟ್ಟಪ್ರವೃತ್ತಿ ಕಾಣುತ್ತಿತ್ತು. ಅದೇ ಬಾದಾಮಿ, ಅದೇ ಬನಶಂಕರಿ; ಆದರೆ ಕೆಲವೇ ವರ್ಷಗಳಲ್ಲಿ ಜನರ ವರ್ತನೆ ಮಾತ್ರ ಅಜಗಜಾಂತರ! ಅಂದು ಕಲಿತ ನಾಗರಿಕರಿಗೆ ಕಲಿಸುವ ಸುಸಂಸ್ಕೃತ ನಡತೆ ಇಂದು ನಾಚಿಸುವಂತಹ, ಆಸೆಬುರುಕ, ಬೇಡಿಕೊಳ್ಳುವವರೂ ದರ್ಪದಿಂದ, ಅಪನಂಬಿಕೆಯಿಂದ ಮಾತನಾಡುವ ವಿಕೃತಿ! ಇದಕ್ಕೆ ಕಾರಣವೇನು ಎಂದು ಚಿಂತಿಸಿದೆ. ಆಗತಾನೇ ಮೊಬೈಲ್​ನಲ್ಲಿ ಒಂದು ವಿಡಿಯೋ ಬಂದಿತ್ತು. ಒಬ್ಬ ಮಹಿಳೆ ಕಾಳು ಎಸೆಯುತ್ತ ನಡೆದರೆ ಅವಳ ಹಿಂದೆ ನವಿಲುಗಳ ಹಿಂಡು ಓಡಿಓಡಿ ಹೋಗುತ್ತಿತ್ತು. ಬೆಳಗ್ಗೆ ಎದ್ದ ತಕ್ಷಣ ಸುತ್ತಾಡಿ ಹೆಕ್ಕಿ ತಿನ್ನುವ ಕಷ್ಟವಿಲ್ಲ. ಅವಳ ಬರವಿಗಾಗಿ ಕಾಯ್ದಿದ್ದು, ಬಂದ ತಕ್ಷಣ ಹಾರಿಕೊಂಡು ಬಂದು ಗುಂಪುಗುಂಪಾಗಿ ಅವಳ ಹಿಂದೆ ಹೋಗುತ್ತಿದ್ದವು. ಇದನ್ನೇ ಮೊಲಗಳು, ಪಾರಿವಾಳಗಳು ಕೂಡ ಮಾಡುವುದನ್ನು ತೋರಿಸಿತ್ತು ಆ ವಿಡಿಯೋ! ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಕಾಳು ತಿಂಡಿ ಹಾಕಿದವರ ಹಿಂದೆ ಹೋಗುವುದು ಹೇಗೆ ಸಹಜವೋ ಹಾಗೆ ಇಂದು ಮನುಷ್ಯರು ಕೂಡ ದುಡಿದು ತಿನ್ನುವ ಸಂಸ್ಕೃತಿ ಬಿಟ್ಟು, ಬಿಟ್ಟಿ ಕೊಟ್ಟಿದ್ದನ್ನು ತಿನ್ನಲು ಹಾತೊರೆಯುವ ವಿಕೃತಿ ಬೆಳೆಸಿಕೊಂಡಿದ್ದಾರೆ!

ಒಂದು ಕಾಲಕ್ಕೆ ಎಂಥ ಬಡರೈತರಾದರೂ ತಾವು ಉತ್ತಿ ಬಿತ್ತು ಬೆಳೆದಿದ್ದರಲ್ಲಿ ಮೂರನೇ ಒಂದು ಭಾಗವನ್ನು ಮಠಕ್ಕೆ ಕೊಟ್ಟು ಧನ್ಯರಾಗುತ್ತಿದ್ದರು. ಜಂಗಮರಿಗೆ, ಗುರುಗಳಿಗೆ ಒಂದು ರೂಪಾಯಿಯಾದರೂ ಕೊಟ್ಟು ದಾಸೋಹದಲ್ಲಿ ಭಾಗಿಯಾಗುತ್ತಿದ್ದರು, ಎಲ್ಲರೂ ಕೊಡುವ ಕೈಗಳ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದರು. ನಮ್ಮ ಅಜ್ಜ ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ ಸಿಕ್ಕಸಿಕ್ಕಲ್ಲಿ ಇರುವೆಗೂಡಿನ ಸುತ್ತಲೂ ಸ್ವಲ್ಪ ಸಕ್ಕರೆ ಹಾಕಿಬರುತ್ತಿದ್ದರು. ಶನಿವಾರ ಸಂತೆದಿನ ಹಂಡೆಯಲ್ಲಿ ಶುಚಿಯಾದ ನೀರು ಇಟ್ಟುಕೊಂಡು ಸಂತೆಗೆ ಬಂದವರಿಗೆಲ್ಲ ಒಂದು ತುಂಡು ಬೆಲ್ಲ ಕೊಟ್ಟು ಬೊಗಸೆ ತುಂಬ ನೀರು ಸುರಿದು ಅವರ ದಣಿವು, ಬಾಯಾರಿಕೆ ಆರಿಸುತ್ತಿದ್ದರು. ಮಕ್ಕಳಾದ ನಾವೂ ಅಜ್ಜನ ಸತ್ಕಾರ್ಯಕ್ಕೆ ಕೈಜೋಡಿಸುತ್ತಿದ್ದೆವು. ಆದರೆ ಇಂದು ಇತರರಿಗೆ ನೀರು ಉಣಿಸುವ ಕೈಗಳಾಗಿವೆ ಆರೋಗ್ಯಕ್ಕೆ ಹಾನಿಕಾರಕ. ಮಕ್ಕಳು ಕೆಟ್ಟ ವಿದೇಶಿ ಪಾನೀಯ ಕುಡಿದರೆ ಯುವಕರು ಮದ್ಯಪಾನ ಮಾಡಲು ಕೈಎತ್ತುವ ವಿಕೃತಿಗೆ ತುತ್ತಾಗಿದ್ದಾರೆ. ಹಿರಿಯರು, ಮಕ್ಕಳು, ಮಹಿಳೆಯರು, ಮುದುಕರು ಎನ್ನದೇ ಪ್ರತಿಯೊಬ್ಬರೂ ಆಮಿಷಕ್ಕೆ ತುತ್ತಾಗಿ ಬೇಡುವ ಕೈಗಳಾಗಿದ್ದು ದೊಡ್ಡ ದುರಂತ. ಸಮಾಜಕ್ಕೆ ಕೊಡುವ ಕೈಗಳೇ ಕಾಣುತ್ತಿಲ್ಲ.

13ನೇ ವಯಸ್ಸಿಗೇ ತಂದೆ ತನ್ನನ್ನು ಬಸವಿ ಮಾಡಿದರೂ ಹುಲಿಗೆಮ್ಮ ತನ್ನ 13 ಎಕರೆ ಭೂಮಿಯನ್ನು ಶಾಲೆ ಕಟ್ಟಲು ದಾನಮಾಡಿ, ತನ್ನ ದುಸ್ಥಿತಿ ಇತರ ಮಕ್ಕಳಿಗೆ ಬರದಿರಲಿ ಎಂದು ಶಿಕ್ಷಣಕ್ಕೆ ದಾಸೋಹ ಮಾಡಿ 70ರ ವಯಸ್ಸಿನಲ್ಲಿ ಕೂಲಿಮಾಡಿ ಗುಡಿಸಲಿನಲ್ಲಿದ್ದಾಳೆ. ಇದು ನಮ್ಮ ದೇಶದ ಸಂಸ್ಕೃತಿ. ಕೊಡುವ ಕೈ ಯಾವಾಗಲೂ ಮೇಲಿರುತ್ತದೆ. ಆದರೆ ಲಂಚ ಪಡೆಯುವ ಕೈ, ಭಿಕ್ಷೆ ಬೇಡುವ ಕೈ ಕೆಳಗಿರುತ್ತದೆ.

ಕಳೆದ 85 ವರ್ಷಗಳಿಂದ ಅಕ್ಷರ, ಅನ್ನದಾಸೋಹವನ್ನು ಸಹಸ್ರಾರು ಮಕ್ಕಳಿಗೆ ಮಾಡುತ್ತಿರುವ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳು ಅತ್ಯಂತ ಸುಸಂಸ್ಕೃತ ಕೊಡುವ ಕೈಗೆ ಅತ್ಯುತ್ತಮ ಮಾದರಿ. ‘ಆ ದೇವ ಈ ದೇವ ಮಹಾದೇವನೆನಬೇಡ, ಆ ದೇವರ ದೇವ ಭುವನದಾ ಪ್ರಾಣಿಗಳಿಗಾದವನೇ ದೇವ ಸರ್ವಜ್ಞ’ ಎನ್ನುವಂತೆ ಸಕಲರಿಗೂ ಕೊಡುವವನೇ ದೇವ. ಶರಣರು- ‘ಸೋಹಂ’ ಎಂಬುದದು ಅಂತರಂಗದ ಮದ ನೋಡಯ್ಯ, ‘ಶಿವೋಹಂ’ ಎಂಬುದದು ಬಹಿರಂಗದ ಮದ ನೋಡಯ್ಯ, ಈ ದ್ವಂದ್ವವನಳಿದು ‘ದಾಸೋಹಂ’ ಎಂದೆನಿಸಯ್ಯ ಕಪಿಲಸಿದ್ಧ ಮಲ್ಲಿಕಾರ್ಜುನ- ಎಂದಂತೆ, ಬನ್ನಿ ನಾವು ದೈವೀಸ್ವರೂಪವಾದ ಸಮಾಜಕ್ಕೆ ದಾಸರಾಗಿ ಕೊಡುವ ಕೈಗಳಾಗೋಣ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *

Back To Top