Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಬ್ರಿಟಿಷ್ ವಿರುದ್ಧ ಹೋರಾಡಿದ ದಿಟ್ಟೆ

Thursday, 02.02.2017, 4:05 AM       No Comments

| ಹರೀಶ್ ಡಿ.ಎಲ್.

ನಿಮಗೇಕೆ ಕೊಡಬೇಕು ಕಪ್ಪ? ಯಾರನ್ನು ಕೇಳುತ್ತಿದ್ದೀ ಕಪ್ಪ ಕೊಡಲು? ಯಾತಕ್ಕೆ ಕೇಳುತ್ತಿ? ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆ ಬೆಳೆಯುತ್ತದೆ. ನೀವೇನು ಉತ್ತಿರಾ, ಬಿತ್ತಿರಾ, ಬೆಳೆದಿರಾ, ನೀರು ಹಾಯಿಸಿ ಕಳೆ ಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ! ಹೀಗೆ ಕಣ್ಣರಳಿಸಿ, ಸಿಡಿಲಿನಂತೆ ಆಕೆ ಮಾತನಾಡುತ್ತಿದ್ದರೆ ಎಂಥವರ ಎದೆಯಾದರೂ ಝುಲ್ಲೆನ್ನದಿರದು.

ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾದಲ್ಲಿ ಹಣೆತುಂಬ ವಿಭೂತಿ ಪಟ್ಟೆ ಬಳಿದುಕೊಂಡು, ಚೆನ್ನಮ್ಮನ ಪಾತ್ರಧಾರಿ ಬಿ.ಸರೋಜಾದೇವಿಯವರ ಆ ಅಭಿನಯ, ಆ ಆರ್ಭಟದ ಮಾತುಗಳು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಹಾಗೆಯೇ ಕಿತ್ತೂರು ಚೆನ್ನಮ್ಮ ಎಂಬ ಈ ಧೀರೆ ಆ ಕಾಲಕ್ಕೆ ಮಾಡಿದ ಹೋರಾಟ, ಹೆಣ್ಣೊಬ್ಬಳು ಎದುರಿಸಿ ನಿಂತ ಸವಾಲುಗಳು ಎಲ್ಲಕಾಲಕ್ಕೂ ಮಾದರಿಯಾಗಿ ನಿಲ್ಲುವಂಥವು.

ನಿಜ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಗೂ ಮೊದಲೇ ಬ್ರಿಟಿಷರ ಕಂಪನಿ ಸರ್ಕಾರದ ವಿರುದ್ಧ ಸೆಡ್ಡುಹೊಡೆದು ನಿಂತ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಹೋರಾಟ ನಡೆಸಿದ ಕನ್ನಡ ನಾಡಿನ ಹೆಮ್ಮೆಯ ರಾಣಿ.

ಸಮೃದ್ಧ ಸಂಸ್ಥಾನದ ರಾಣಿ: 1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಚೆನ್ನಮ್ಮ, ಕಾಕತಿಯ ದೇಸಾಯಿಯಾಗಿದ್ದ ಧೂಳಪ್ಪಗೌಡರ ಮಗಳು. ಒಬ್ಬ ಗಂಡು ಆ ಕಾಲಕ್ಕೆ ಏನೆಲ್ಲ ಕಲಿಯಬಹುದಾಗಿತ್ತೋ ಅಂಥವೆಲ್ಲವನ್ನೂ ಅಂದರೆ ಕುದುರೆ ಸವಾರಿ, ಬಿಲ್ಲು ವಿದ್ಯೆಯನ್ನು ಕಲಿತಿದ್ದಳು. ಗಾತ್ರದಲ್ಲಿ ಚಿಕ್ಕದಾದರೂ, ಸುಖ ಸಮೃದ್ದಿಗೆ ಹೆಸರಾಗಿದ್ದ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನೊಂದಿಗೆ 1796ರಲ್ಲಿ ಚೆನ್ನಮ್ಮನ ಮದುವೆಯಾಯಿತು. ಕಿರಿಯ ವಯಸ್ಸಿನಲ್ಲಿಯೇ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜ ನಿಜಕ್ಕೂ ಶೂರ. ಮೊದಲ ರಾಣಿ ರುದ್ರವ್ವ, ಚೆನ್ನಮ್ಮಳನ್ನು ಮಲ್ಲಸರ್ಜನ ಕಿರಿಯ ರಾಣಿಯಾಗಿ ತಂದಳು.

ಅರಾಜಕತೆಯನ್ನು ನಿಭಾಯಿಸಿದ ದಿಟ್ಟೆ: ಬಿಜಾಪುರ ಸುಲ್ತಾನರ ಪತನಾನಂತರ ಉತ್ತರ ಕರ್ನಾಟಕದಾದ್ಯಂತ ಅರಾಜಕತೆಯುಂಟಾಗಿತ್ತು. ಒಂದು ಕಡೆ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್, ಮರಾಠಾ ಪೇಶ್ವೆಗಳು ಈ ಅರಾಜಕತೆ ಲಾಭ ಪಡೆಯಲು ಹವಣಿಸುತ್ತಿರುವಂಥ ಕಾಲವದು. ಇಂಥ ಸಮಯದಲ್ಲೇ ಟಿಪ್ಪು ಸುಲ್ತಾನ್, ಕಿತ್ತೂರಿನ ರಾಜ ಮಲ್ಲಸರ್ಜನನ್ನು ಬಂಧಿಸಿ ಸೆರೆಯಲ್ಲಿಡುತ್ತಾನೆ. ಸೆರೆವಾಸದಿಂದ ತಪ್ಪಿಸಿಕೊಂಡ ದೊರೆ ಮತ್ತೆ 1809ರಲ್ಲಿ ಮರಾಠ ಪೇಶ್ವೆಗಳಿಗೂ ನೆರವಾಗಿ ಉತ್ತಮ ಬಾಂಧವ್ಯ ಹೊಂದಿದ್ದರೂ, ಪೇಶ್ವೆಗಳು ಮಲ್ಲಸರ್ಜನಿಗೆ ವಿಶ್ವಾಸ ದ್ರೋಹವೆಸಗಿ ಅವನನ್ನು ಬಂಧಿಸಿ ಮೂರು ವರ್ಷ ಪೂನಾದ ಜೈಲಿನಲ್ಲಿರಿಸುತ್ತಾರೆ. ನಂತರ 1816ರಲ್ಲಿ ಅಲ್ಲಿಂದ ಬಿಡುಗಡೆಯಾಗಿ ಕಿತ್ತೂರಿಗೆ ಮರಳುತ್ತಿದ್ದ ಮಲ್ಲಸರ್ಜ ಮಧ್ಯದಲ್ಲಿಯೇ ಕೊನೆಯುಸಿರೆಳೆದ.

ಇವನ ಬಳಿಕ ಅಧಿಕಾರವನ್ನು ವಹಿಸಿಕೊಂಡಿದ್ದವನು ಶಿವಲಿಂಗರುದ್ರಸರ್ಜ. ಆದ್ರೆ ದುರದೃಷ್ಟವಶಾತ್ ಶಿವಲಿಂಗರುದ್ರಸರ್ಜ ಕೂಡ 1824ರಲ್ಲಿ ತೀರಿಕೊಂಡಾಗ ವಾರಸುದಾರರಿಲ್ಲದೆ ರಾಜ್ಯ ಅನಾಥವಾಯಿತು. ಅವನು ಸಾಯುವ ಸಮಯದಲ್ಲಿ ಅವನ ಪತ್ನಿಗೆ ಕೇವಲ 11 ವರ್ಷ! ಹಾಗಾಗಿ ತಾನು ಮರಣ ಹೊಂದುವ ಮುನ್ನ ಮಾಸ್ತವರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತು ತೆಗೆದುಕೊಂಡಿರುತ್ತಾನೆ. ಆದರೆ ಕಂಪನಿ ಸರ್ಕಾರ ದತ್ತುಪುತ್ರ ರಾಜ್ಯವಾಳಲು ನಿರಾಕರಿಸುತ್ತದೆ. ಈ ಸಮಯದಲ್ಲಿ ಕಿತ್ತೂರಿನ ರಾಜ್ಯಾಡಳಿತವನ್ನು ಕೈಗೆ ತೆಗೆದುಕೊಂಡವಳೇ ಚೆನ್ನಮ್ಮ. ಕಿತ್ತೂರನ್ನು ಬ್ರಿಟಿಷರ ಆಕ್ರಮಣಗಳಿಂದ ರಕ್ಷಿಸಲು ಚೆನ್ನಮ್ಮ ಸಾಕಷ್ಟು ಪ್ರಯತ್ನ ಪಡುತ್ತಾಳೆ. ಮೊದಲು ಬ್ರಿಟಿಷ್ ಅಧಿಕಾರಿಗಳಾಗಿದ್ದ ಥ್ಯಾಕರೆ, ಮನ್ರೋ, ಚಾಪ್ಲಿನ್ ಮುಂತಾವರುಗಳಿಗೆ ಸಂಧಾನಕ್ಕಾಗಿ ಪತ್ರ ಬರೆಯುತ್ತಾಳೆ. ಆದರೆ ಬ್ರಿಟಿಷರಿಗೆ ಕಿತ್ತೂರನ್ನು ವಶಪಡಿಸಿಕೊಳ್ಳಲೇಬೇಕೆಂಬ ಹಠವಿತ್ತು. ಇದನ್ನರಿತ ಚೆನ್ನಮ್ಮ ಹಠ ಬಿಡದೆ ನೆರೆ ರಾಜ್ಯದ ರಾಜರುಗಳ ಸಹಕಾರ ಕೋರುತ್ತಾಳೆ. ಯಾರಿಂದಲೂ ತಕ್ಕ ಸಮಯಕ್ಕೆ ಸಹಕಾರ ದೊರೆಯದೆ ಚೆನ್ನಮ್ಮ ಏಕಾಂಗಿಯಾಗಿ ಹೋರಾಡುವಂಥ ಸ್ಥಿತಿ ಬರುತ್ತದೆ.

21 ಅಕ್ಟೋಬರ್ 1824ಕ್ಕೆ ಥ್ಯಾಕರೆ ಕಿತ್ತೂರಿನ ಮೇಲೆ ಆಕ್ರಮಣ ಮಾಡಿದಾಗ, ಅವರ ಮೇಲೆ ಕೋಟೆಯೊಳಗಿನಿಂದ ಕಿತ್ತೂರಿನ ಸಾವಿರಾರು ಸಂಖ್ಯೆಯ ವೀರರ ಪಡೆ ಒಂದೇ ಸಮನೆ ದಾಳಿ ನಡೆಸುತ್ತದೆ. ಈ ದಾಳಿಯಲ್ಲಿ ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾಗುತ್ತಾನೆ. ಸ್ಟೀವನ್ಸನ್ ಹಾಗೂ ಈಲಿಯಟ್ ಎನ್ನುವ ಇಬ್ಬರು ಅಧಿಕಾರಿಗಳು ಸೆರೆಯಾಗುತ್ತಾರೆ. ಹೀಗೆ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಕಾಳಗದಲ್ಲಿ ಗೆದ್ದು ನಾಡಿನ ಸ್ವಾತಂತ್ರ್ಯ ಪತಾಕೆಯನ್ನು ಹಾರಿಸುತ್ತಾಳೆ ಚೆನ್ನಮ್ಮ. ಇದು ಅವಳ ಜಯ ಅಷ್ಟೇ ಅಲ್ಲ, ಒಂದು ಸಣ್ಣ ಸಂಸ್ಥಾನದ ರಾಣಿಯೊಬ್ಬಳಿಂದ ಸೋತು ಅವಮಾನಿತರಾಗಿದ್ದು ಬ್ರಿಟಿಷ್ ಸರ್ಕಾರದ ಅಹಂಗೆ ಪೆಟ್ಟು. ಹಾಗಾಗಿ ಕಿತ್ತೂರಿನ ವಿರುದ್ಧ ಬ್ರಿಟಿಷ್ ಸರ್ಕಾರ ಸೇಡು ತೀರಿಸಿಕೊಳ್ಳಲು ಹವಣಿಸುತ್ತಲೇ ಇರುತ್ತದೆ. ಇಬ್ಬರ ನಡುವೆ ಮತ್ತೆ ಪತ್ರ ವ್ಯವಹಾರಗಳು ಆರಂಭಗೊಂಡು ಸೆರೆಯಲ್ಲಿದ್ದ ಸ್ಟೀವನ್ಸನ್ ಹಾಗೂ ಈಲಿಯಟ್​ರ ಬಿಡುಗಡೆಯಾಗುತ್ತದೆ. ನಂತರ 1824ರ ಡಿಸೆಂಬರ್ 3ರಂದು ಬ್ರಿಟಿಷರು ಮತ್ತೆ ಬೃಹತ್ ಸೈನ್ಯದೊಂದಿಗೆ ಕಿತ್ತೂರಿನ ಮೇಲೆ ಮುಗಿಬೀಳುತ್ತಾರೆ. ಡಿಸೆಂಬರ್ 4 ರಂದು ಸರ್ದಾರ ಗುರುಸಿದ್ದಪ್ಪ ಸೆರೆಯಾಗುತ್ತಾನೆ. ಡಿಸೆಂಬರ್ 5, 1824 ರಂದು ಕೆಚ್ಚೆದೆಯ ವೀರ ರಾಣಿ ಚೆನ್ನಮ್ಮಾಜಿ ಸೊಸೆಯಂದಿರಾದ ವೀರಮ್ಮ ಹಾಗೂ ಜಾನಕಿಬಾಯಿಯವರ ಜತೆ ಕೈದಿಯಾಗುತ್ತಾಳೆ. ಅವರನ್ನು ತುರ್ತು ವಿಚಾರಣೆ ನಡೆಸಿದ ಬ್ರಿಟಿಷ್ ನ್ಯಾಯಸ್ಥಾನವು ಬೈಲಹೊಂಗಲದ ಕಾರಾಗ್ರಹಕ್ಕೆ ಸ್ಥಳಾಂತರಿಸುತ್ತಾರೆ. ಅಲ್ಲೇ ನಾಲ್ಕು ವರ್ಷಗಳ ಕಾಲ ಸೆರೆಯಾಳಾಗಿದ್ದ ಚೆನ್ನಮ್ಮಾಜಿಯು 1829 ಫೆಬ್ರವರಿ 2 ರಂದು ಅಲ್ಲಿಯೇ ಮರಣಹೊಂದುತ್ತಾಳೆ.

ಚೆನ್ನಮ್ಮ ತೀರಿಕೊಂಡರೂ ಅವಳ ದೇಶಭಕ್ತಿ ಎಲ್ಲರಲ್ಲೂ ಹರಿದಿರುತ್ತದೆ. ಅಷ್ಟರ ಮಟ್ಟಿಗೆ ಒಂದು ಪ್ರಾಂತ್ಯದ ಸೈನ್ಯವನ್ನು ತಯಾರು ಮಾಡಿದ ಕೀರ್ತಿ ಅವಳದ್ದಾಗಿರುತ್ತದೆ. ಹಾಗಾಗಿ ಚೆನ್ನಮ್ಮನ ಮರಣದ ಬಳಿಕವೂ ದೇಶನಿಷ್ಠರ ಹೋರಾಟ ಮುಂದುವರಿಯುತ್ತದೆ. ಒಟ್ಟಾರೆಯಾಗಿ ದೇಶದ ಸ್ವಾತಂತ್ರ್ಯ ಸಂಗ್ರಾಮ ಎಂದಾಕ್ಷಣ ಕಿತ್ತೂರು ರಾಣಿ ಚೆನ್ನಮ್ಮನನ್ನು ಬಿಟ್ಟು ಮುಂದೆ ಹೋಗಲು ಸಾಧ್ಯವೇ ಇಲ್ಲ. ಅಂಥ ಒಂದು ಹೆಗ್ಗುರುತನ್ನು ಬಿಟ್ಟು ಹೋಗಿದ್ದಾಳೆ ಚೆನ್ನಮ್ಮ.

(ಇಂದು ಪ್ರಕಟವಾಗಬೇಕಾಗಿದ್ದ ನ್ಯಾಯದೇವತೆ ಅಂಕಣವು ಶುಕ್ರವಾರ ಪ್ರಕಟವಾಗಲಿದೆ. )

Leave a Reply

Your email address will not be published. Required fields are marked *

Back To Top