Friday, 21st September 2018  

Vijayavani

Breaking News

ಸರ್ಕಾರಕ್ಕೆ ಮತ್ತೆ ಮುಂಬಡ್ತಿ ಸಂಕಷ್ಟ

Wednesday, 21.03.2018, 3:04 AM       No Comments

ನವದೆಹಲಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮುಂಬಡ್ತಿ ಮೀಸಲಾತಿ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಪಾಲನೆಗೆ ಮೀನಮೇಷ ಎಣಿಸುತ್ತಿದ್ದ ರಾಜ್ಯ ಸರ್ಕಾರದ ಲೆಕ್ಕಾಚಾರಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಒಂದು ತಿಂಗಳೊಳಗಾಗಿ ತೀರ್ಪು ಅನುಷ್ಠಾನಕ್ಕೆ ಬರಲೇಬೇಕು ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ರವಾನಿಸಿದೆ.

ಒಂದು ವೇಳೆ ಏಪ್ರಿಲ್ 20ರ ಒಳಗಾಗಿ ತೀರ್ಪು ಜಾರಿಯಾಗದಿದ್ದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಏಪ್ರಿಲ್ 25ರಂದು ನ್ಯಾಯಪೀಠದ ಮುಂದೆ ಹಾಜರಾಗಬೇಕು ಎಂದು ನ್ಯಾ.ಎ.ಕೆ. ಗೋಯೆಲ್ ಮತ್ತು ನ್ಯಾ. ಉದಯ್ ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚನೆ ನೀಡಿದೆ. ಪರಿಶಿಷ್ಟ ಜಾತಿ / ಪಂಗಡಕ್ಕೆ ಸೇರಿದ ಸರ್ಕಾರಿ ಸಿಬ್ಬಂದಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಸರ್ಕಾರದ ನೀತಿ ಸುಪ್ರೀಂಕೋರ್ಟಿನಲ್ಲಿ ಕಳೆದ ವರ್ಷವೇ ಅಮಾನ್ಯಗೊಂಡಿದ್ದರೂ, ಚುನಾವಣಾ ಲೆಕ್ಕಾಚಾರ ಹಾಕಿಕೊಂಡಿದ್ದ ಸಿದ್ದರಾಮಯ್ಯ ಸರ್ಕಾರ ತೀರ್ಪನ್ನು ಪಾಲಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿತ್ತು.

ಇದನ್ನು ಪ್ರಶ್ನಿಸಿ ಪ್ರತಿವಾದಿ ಬಿ.ಕೆ. ಪವಿತ್ರಾ ಸೇರಿದಂತೆ ಹಲವರು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತೀರ್ಪಿನ ಪಾಲನೆಗೆ ಕಾಲಾವಕಾಶದ ಅವಧಿಯನ್ನು ಸುಪ್ರೀಂಕೋರ್ಟ್ ಮೂರ್ನಾಲ್ಕು ಬಾರಿ ವಿಸ್ತರಣೆ ಮಾಡಿತ್ತು.

ಮಂಗಳವಾರದ ವಿಚಾರಣೆ ವೇಳೆ ಮತ್ತೆ ನಾಲ್ಕು ತಿಂಗಳ ವಿಸ್ತರಣೆಗೆ ಅವಕಾಶ ಕೋರಿದ ರಾಜ್ಯ ಸರ್ಕಾರದ ವಕೀಲ ಮುಕುಲ್ ರೋಹ್ಟಗಿ, ಜುಲೈವರೆಗೆ ಕಾಲಾವಕಾಶ ಬೇಕು. ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಗೊಂಡಿದೆಯಾದರೂ ಇದರ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಸಮಯಾವಕಾಶ ನೀಡಬೇಕು ಎಂದು ವಾದಿಸಿದರು.

ತ್ರಿಪುರಾ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಇಂಥದ್ದೇ ಬಿಕ್ಕಟ್ಟು ನಿರ್ವಣವಾಗಿದ್ದು, ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ರಾಜ್ಯದ ಅರ್ಜಿಯನ್ನು ಪರಿಗಣಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಬೇಕು ಎಂದು ವಿನಂತಿಸಿಕೊಂಡರು. ರೋಹ್ಟಗಿ ವಾದ ತಳ್ಳಿಹಾಕಿದ ನ್ಯಾ. ಉದಯ್ ಲಲಿತ್, ತ್ರಿಪುರಾ ಅಥವಾ ಬೇರೆ ರಾಜ್ಯಗಳ ಪ್ರಕರಣಗಳನ್ನು ಇಲ್ಲಿಗೆ ಎಳೆದು ತರಬೇಡಿ. ಅವುಗಳಿಗೂ ಕರ್ನಾಟಕದ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಂಬಡ್ತಿ ಮೀಸಲಾತಿ ನೀತಿಗೆ ಸಾಂವಿಧಾನಿಕ ಸಿಂಧುತ್ವ ಕಲ್ಪಿಸುವ ಉದ್ದೇಶದಿಂದ ಸರ್ಕಾರ ವಿಧೇಯಕವೊಂದನ್ನು ಸಿದ್ಧಪಡಿಸಿ, ಅದಕ್ಕೆ ರಾಜ್ಯ ವಿಧಾನಮಂಡಲ ಅನುಮೋದನೆಯೂ ದೊರಕಿದೆ. ರಾಜ್ಯದ ಗವರ್ನರ್ ವಿಧೇಯಕವನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಏತನ್ಮಧ್ಯೆ, ಕೇಂದ್ರ ಸರ್ಕಾರ ವಿಧೇಯಕದ ಕುರಿತಾಗಿ ಕೇಳಿದ್ದ ಪ್ರಶ್ನೆಗಳಿಗೂ ನಾವು ಸ್ಪಷ್ಟನೆಗಳನ್ನು ನೀಡಿದ್ದೇವೆ. ನಮ್ಮ ವಿಧೇಯಕಕ್ಕೆ ರಾಷ್ಟ್ರಪತಿ ಯಾವಾಗ ಅಭಿಪ್ರಾಯ ಸೂಚಿಸುತ್ತಾರೆ ತಿಳಿದಿಲ್ಲ. ಜುಲೈನಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು. ಹೀಗಾಗಿ ನ್ಯಾಯಪೀಠ ಅಲ್ಲಿಯವರೆಗೆ ಕಾಯಬೇಕು ಎಂದು ರೋಹಟ್ಗಿ ಕೋರಿದರು. ಪರಿಶಿಷ್ಟ ಜಾತಿ/ಪಂಗಡಗಳ ಸಂಘದ ಪರ ವಾದಿಸಿದ ಅಭಿಷೇಕ್ ಮನುಸಿಂಘಿ, ರೋಹ್ಟಗಿ ಪ್ರತಿಪಾದನೆಗೆ ಬೆಂಬಲ ವ್ಯಕ್ತಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿಗಳ ಪರ ವಕೀಲ ರಾಜೀವ್ ಧವನ್, ತೀರ್ಪಿನ ಅನುಷ್ಠಾನಕ್ಕೆ 2017ರ ಡಿಸೆಂಬರ್ ಅಂತ್ಯದವರೆಗೆ ಗಡುವು ನೀಡಲಾಗಿತ್ತು. ಆದರೆ 2018ರ ಮಾರ್ಚ ಅಂತ್ಯದಲ್ಲಿದ್ದರೂ ಪಾಲನೆಯಾಗಿಲ್ಲ ಎಂದರೆ ಏನರ್ಥ? ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹೊರತುಪಡಿಸಿ ಬೇರೆಯವರಿಗೆ ವಾದ ಮಂಡನೆಗೆ ಇಲ್ಲಿ ಅವಕಾಶವನ್ನೇ ನೀಡಬಾರದು ಎಂದು ವಾದಿಸಿ, ಮುಂದಿನ ವಿಚಾರಣೆಗೆ ಮುಖ್ಯ ಕಾರ್ಯದರ್ಶಿಗೆ ಹಾಜರಾಗುವಂತೆ ಸೂಚನೆ ನೀಡಬೇಕು ಎಂದರು.

‘ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಗೊಂಡಿದೆ ಎಂಬ ವಕೀಲ ರೋಹಟ್ಗಿ ಹೇಳಿಕೆಯನ್ನಷ್ಟೇ ನಾವಿಲ್ಲಿ ಪರಿಗಣಿಸುತ್ತಿದ್ದೇವೆ’ ಎಂದ ನ್ಯಾಯಪೀಠ, ಮುಂಬಡ್ತಿ ಮೀಸಲಾತಿ ಕಾನೂನುಬದ್ಧಗೊಳಿಸುವ ರಾಜ್ಯದ ಹೊಸ ವಿಧೇಯಕದ ಕುರಿತ ವಾದಕ್ಕೆ ಮನ್ನಣೆ ನೀಡಲಿಲ್ಲ ಮತ್ತು 4 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸಮ್ಮತಿಯಿಲ್ಲ ಎಂದು ತಿಳಿಸಿತು.

Leave a Reply

Your email address will not be published. Required fields are marked *

Back To Top