Thursday, 20th September 2018  

Vijayavani

Breaking News

ನಮೋ ವಿಘ್ನರಾಜ

Thursday, 13.09.2018, 2:05 AM       No Comments

ಯಾವುದೇ ಕಾರ್ಯವನ್ನು ಆರಂಭಿಸುವಾಗಲೂ ಮಹಾಗಣಪತಿಗೆ ಮೊದಲು ವಂದನೆ ಸಲ್ಲಿಸುವುದು ರೂಢಿ. ಅದರಲ್ಲೂ ಭಾದ್ರಪದ ಶುಕ್ಲ ಚತುರ್ಥಿಯ ವ್ರತಾಚರಣೆಯೂ ಮಹಾಗಣಪತಿಯ ಕುರಿತಾಗಿಯೇ ಇರುವಂಥದ್ದು. ಈ ಪರ್ವಕಾಲದಲ್ಲಿ ಸಿದ್ಧಿವಿನಾಯಕನ ಆರಾಧನೆ ಭಕ್ತರ ಪಾಪಗಳನ್ನೆಲ್ಲ ನೀಗುವುದೆಂಬ ನಂಬುಗೆ ಆಸ್ತಿಕರದು. ಗಜಮುಖನ ವ್ರತಾಚರಣೆಯ ಸಂಕ್ಷಿಪ್ತ ವಿವರ ಇಲ್ಲಿದೆ.

| ಸ್ವಾಮಿ ಹರ್ಷಾನಂದಜೀ

ಗಜಮುಖನಾದ ಗಣೇಶ ಅಥವಾ ಗಣಪತಿ ಹಿಂದೂಧರ್ಮದ ಎಲ್ಲ ಅನುಯಾಯಿಗಳಲ್ಲೂ ಬಹಳ ಜನಪ್ರಿಯವಾದ ದೇವತೆ. ಬದುಕಿನ ವಿಘ್ನಗಳನ್ನು ನಿವಾರಿಸುವ ದೇವನಾದ್ದರಿಂದ ಎಲ್ಲ ವರ್ಗದ ಜನಕ್ಕೂ ಬೇಕಾದವನು. ಜನ ಅವನನ್ನು ಪೂಜಿಸುವುದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ‘ವರದ’, ಅಥವಾ ‘ವರಪ್ರದಾತ’ ಎಂದು, ಹಾಗೂ ತಮ್ಮ ಎಲ್ಲ ವ್ಯವಹಾರಗಳಲ್ಲೂ ಜಯ ಅಥವಾ ಸಿದ್ಧಿಯನ್ನು ಕರುಣಿಸುವ ‘ಸಿದ್ಧಿದ’ ಎಂದು. ಯಾವ ಕಾರ್ಯದ ಆರಂಭ ಮಾಡುವಾಗಲೂ ಅವನಿಗೇ ಅಗ್ರಪೂಜೆ. ಸಮಗ್ರ ಜ್ಞಾನವನ್ನೂ ವಿವೇಕವನ್ನೂ ಸಾಹಿತ್ಯ ಲಲಿತಕಲೆಗಳಲ್ಲಿ ಕುಶಲತೆಯನ್ನು ನೀಡುವ ದೇವನು ಕೂಡ ಅವನೇ. ಆದುದರಿಂದಲೇ ಗಣೇಶ ಚತುರ್ಥೀ ವ್ರತಕ್ಕೆ ಅತ್ಯಂತ ಮುಖ್ಯ ಸ್ಥಾನವಿದೆ.

ಗಣಪತಿಯ ಮೂಲವನ್ನು ಕುರಿತ, ಅವನ ಮಹತ್ಕಾರ್ಯಗಳನ್ನು ಕುರಿತ, ಅವನ ವಿಶೇಷ ರೂಪದ ಪ್ರತೀಕದ ಹಿನ್ನೆಲೆಯನ್ನು ಕುರಿತ ಕಥೆಗಳು ನಮ್ಮ ಪುರಾಣಗಳಲ್ಲಿ ಸಾಕಷ್ಟಿವೆ. ಎಷ್ಟೋ ವರ್ಷಗಳಿಂದ ಪಂಡಿತರು ಈ ನಿಗೂಢ ದೇವನ ಗಜಾನನ ರೂಪದ ಒಗಟನ್ನು ಬಿಡಿಸಲು, ಅದರ ಮೂಲವನ್ನು ಹುಡುಕಲು ಹೆಣಗಿದ್ದಾರೆ. ವ್ರತಗಳ ವಿಚಾರವನ್ನು ಹೇಳುವ ಹಿಂದೂ ಧಾರ್ವಿುಕ ಗ್ರಂಥಗಳಲ್ಲಿ ಅಗ್ರಗಣ್ಯವಾದ ಈ ಗಣೇಶ ಚತುರ್ಥೀ ವ್ರತವನ್ನು ಅರ್ಥಪೂರ್ಣವಾಗಿ ಶ್ರದ್ಧಾನಿಷ್ಠೆಗಳಿಂದ ಆಚರಿಸಿ ಭಕ್ತರು ಗಣಪತಿ ದೇವನ ಅನುಗ್ರಹಕ್ಕೆ ಪಾತ್ರರಾಗಲಿ ಎಂದು ಹಾರೈಸುತ್ತ ಈ ವ್ರತಾಚರಣೆಯ ಸಮಂಜಸವೆನಿಸಬಹುದಾದ ಕೆಲವು ವಿವರಣೆಗಳು ಇಲ್ಲಿವೆ.

ಈ ಪವಿತ್ರ ತಿಥಿಯ ದಿನ ಗಣೇಶನ ಪೂಜೆಗೆ ಸೂಕ್ತವಾದ ಮುಹೂರ್ತವೆಂದರೆ ಮಧ್ಯಾಹ್ನ. ವರ್ಣರಂಜಿತವೂ ಸುಂದರವೂ ಆದ ಗಣಪತಿಯ ಮೃತ್ತಿಕಾ ಮೂರ್ತಿಯನ್ನು ತಂದು ಅದಕ್ಕೆ ತಕ್ಕುದಾದ ಪೀಠದಲ್ಲಿ ಪ್ರತಿಷ್ಠಾಪಿಸಿ ಅಲಂಕರಿಸಬೇಕು. ಪೂರ್ವವಿಧಿಗಳ ನಂತರ ಪ್ರಾಣಪ್ರತಿಷ್ಠೆಯಾಗಬೇಕು; ಅಂದರೆ, ಮೃತ್ತಿಕಾಮಯ ಮೂರ್ತಿಯಲ್ಲಿ ವಿನಾಯಕ ದೇವನನ್ನು ಆವಾಹನೆ ಮಾಡಬೇಕು. ಈ ವಿಧಿಯ ನಂತರ ಷೋಡಶೋಪಚಾರ ಪೂಜೆಯಾಗಬೇಕು.

ದೂರ್ವಾ ಅಥವಾ ಗರಿಕೆ ಹುಲ್ಲಿನ ಅರ್ಪಣೆ, ಗಣಪತಿಗೆ ಅತ್ಯಂತ ಪ್ರಿಯ ಭಕ್ಷ್ಯಳೆನಿಸಿದ ಇಪ್ಪತ್ತೊಂದು ಮೋದಕಗಳ ನೈವೇದ್ಯ – ಇವು ಪೂಜೆಯ ಮುಖ್ಯ ಅಂಗಗಳು. ದೇವಾನುಗ್ರಹದಿಂದ ನಮಗೆ ಲಭಿಸಿರುವುದನ್ನು ತೃಣದಿಂದ (ದೂರ್ವಾ) ಮೊದಲುಗೊಂಡು ನಮಗೆ ಅತ್ಯಂತ ಪ್ರಿಯವಾದ ಭಕ್ಷ್ಯವರೆಗೆ (ಮೋದಕ) ಎಲ್ಲವನ್ನೂ ಭಕ್ತಿಯಿಂದ ನಮ್ರತೆಯಿಂದ ಸಮರ್ಪಿಸಬೇಕು ಎಂಬುದು ಪೂಜೆಯ ಈ ಅಂಗಗಳ ಸಂಕೇತ. ‘ಮೋದಕ’ ಎಂಬುದರ ಶಬ್ದಾರ್ಥವೇ ಮುದ ನೀಡುವಂಥದ್ದು ಎಂದು. ಇಪ್ಪತ್ತೊಂದು ಎಂಬ ಸಂಖ್ಯೆ ನಮ್ಮ ಐದು ಜ್ಞಾನೇಂದ್ರಿಯಗಳು, ಐದು ಕಮೇಂದ್ರಿಯಗಳು, ಪ್ರಾಣಶಕ್ತಿಯ ಐದು ಕಾರ್ಯಗಳು, ಪಂಚಭೂತಗಳು ಮತ್ತು ಮನಸ್ಸು – ಇವುಗಳ ಸಂಕೇತ ಎಂದುಕೊಳ್ಳಬಹುದು. ಪರಬ್ರಹ್ಮಸ್ವರೂಪಿಯೇ ಆದ ಗಣೇಶನ ಪಾದತಲದಲ್ಲಿ ನಮ್ಮನ್ನೇ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕೆಂಬುದೇ ಈ ಪೂಜೆಯಿಂದ ಕಲಿಯಬೇಕಾದ ಮಹಾಪಾಠ. ಹೀಗೆ ಈ ವ್ರತವನ್ನು ಸಮಗ್ರವಾಗಿ ಭಕ್ತಿಯಿಂದ ಆಚರಿಸಿದ ನಂತರ ಗಣಪತಿಯ ಮೂರ್ತಿಯನ್ನು ವಿಧಿಪೂರ್ವಕವಾಗಿ ಜಲದಲ್ಲಿ ಸಮರ್ಪಿಸಬೇಕು. ಈ ಆಧುನಿಕ ಕಾಲದಲ್ಲೂ ಗಣಪತಿಮೂರ್ತಿಯನ್ನು ಒಂದೂವರೆ ಅಥವಾ 2-3 ದಿನಗಳವರೆಗೆ, ಭಾದ್ರಪದ ಶುಕ್ಲಪಕ್ಷದಲ್ಲಿ ಬರುವ ಅನಂತ ಚತುರ್ದಶೀವರೆಗೆ ಪೂಜಿಸಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಬಾವಿ, ಕೆರೆ, ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸುವುದು ವಾಡಿಕೆ.

ಗಣೇಶ ಚತುರ್ಥೀಯ ಸಂಜೆ ಚಂದ್ರನನ್ನು ನೋಡಿದವರು ಕಳ್ಳತನ ಮಾಡಿದ ಅಥವಾ ಮತ್ತಾವುದಾದರೂ ಮಿಥ್ಯಾಪವಾದಕ್ಕೆ ಗುರಿಯಾಗುತ್ತಾರೆ ಎಂಬ ನಂಬಿಕೆಯಿದೆ ಜನರಲ್ಲಿ. ಯಾದವರ ಮುಖಂಡ ಸತ್ರಾಜಿತನಿಗೆ ಸೇರಿದ, ಬಂಗಾರವನ್ನು ಸುರಿಸುವ, ಸ್ಯಮಂತಕಮಣಿಯನ್ನು ಕದ್ದ ಮಿಥ್ಯಾಪವಾದವನ್ನು ಶ್ರೀಕೃಷ್ಣ ಹೊರಬೇಕಾಗಿ ಬಂದದ್ದು ಈ ಕಾರಣದಿಂದ ಎಂಬ ಕಥೆ ಮಹಾಭಾರತದಲ್ಲಿದೆ. (ಇದೇ ಕಥೆಯು ವಾಯು, ಮತ್ಸ್ಯ ವಿಷ್ಣು ಮತ್ತು ಭಾಗವತ ಪುರಾಣಗಳಲ್ಲಿಯೂ ಬರುತ್ತದೆ.) ಅಲ್ಲಿಯೇ

ಈ ಅಪವಾದಕ್ಕೆ ಪರಿಹಾರೋಪಾಯಗಳನ್ನೂ ಹೇಳಿದೆ. ಅರಿಯದೆ ಈ ತಪ್ಪನ್ನು ಮಾಡಿದವರು,

ಸಿಂಹಃ ಪ್ರಸೇನಮವಧೀತ್ ಸಿಂಹೋಜಾಂಬವಂತಾ ಹತಃ |

ಸುಕುಮಾರಕ ಮಾ ರೋದೀಃ ತವ ಹ್ಯೇಷ ಸ್ಯಮಂತಕಃ ||

(ಸಿಂಹವು ಪ್ರಸೇನನನ್ನು ಕೊಂದಿತು. ಆ ಸಿಂಹವು ಜಾಂಬವಂತನಿಂದ ಕೊಲ್ಲಲ್ಪಟ್ಟಿತು. ಅಳಬೇಡ,

ಓ ಸುಕುಮಾರಕ, ಈ ಸ್ಯಮಂತಕ ಮಣಿಯು ನಿನ್ನದೆ.)

ಈ ಮಂತ್ರವನ್ನು ಆಚಮನದ ನೀರಿನ ಮೇಲೆ ಉಚ್ಚರಿಸಿ,

ಆ ನೀರನ್ನು ಕುಡಿದರಾಯಿತು. ಈ ಮಿಥ್ಯಾಪವಾದದಿಂದ ಮುಕ್ತರಾದಂತೆಯೇ! ಪುರಾಣಗಳಲ್ಲಿ ಮಾಘ ಶುಕ್ಲ ಚತುರ್ಥೀ ದಿನ ಬರುವ ಇನ್ನೊಂದು ಗಣೇಶ ಚತುರ್ಥೀಯ ಉಲ್ಲೇಖವಿದೆ. ಇಂದು ಅದರ ಆಚರಣೆಯಿಲ್ಲ.

ಲೇಖಕರು ಬೆಂಗಳೂರು ಶ್ರೀರಾಮಕೃಷ್ಣ ಮಠದ ಅಧ್ಯಕ್ಷರು

(ಸೌಜನ್ಯ: ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಪ್ರಕಟಿಸಿರುವ ‘ಹಿಂದೂ ಹಬ್ಬಗಳು ಮತ್ತು ಉತ್ಸವಗಳು’ ಕೃತಿಯ ಆಯ್ದ ಬರಹ )

Leave a Reply

Your email address will not be published. Required fields are marked *

Back To Top