Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಸಾಲಮನ್ನಾ, ರೈತರಿಗೆ ಸ್ವಲ್ಪ ಸಮಾಧಾನ

Monday, 16.04.2018, 3:06 AM       No Comments

|ಶಿವಾನಂದ ತಗಡೂರು

ಬೆಂಗಳೂರು: ರೈತರ ಸಾಲಮನ್ನಾ ಘೋಷಣೆ ಮಾಡಿ ವರ್ಷ ತುಂಬಿದರೂ ಪೂರ್ತಿ ಹಣ ಬಿಡುಗಡೆ ಮಾಡದೆ ರೈತರ ಅಸಮಾಧಾನಕ್ಕೆ ಗುರಿಯಾಗಿದ್ದ ರಾಜ್ಯ ಸರ್ಕಾರ ಕೊನೆಗೂ ಎರಡನೇ ಕಂತಿನಲ್ಲಿ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಮುಂದಾಗಿದೆ. ಇಷ್ಟಾಗಿಯೂ ಸರ್ಕಾರ 3287 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದರಿಂದಾಗಿ ವಿಧಾನಸಭೆ ಚುನಾವಣೆ ಬಳಿಕ ಮುಂದೆ ಅಧಿಕಾರಕ್ಕೆ ಬರಲಿರುವ ಸರ್ಕಾರಕ್ಕೆ ಆ ಮೊತ್ತ ಪಾವತಿಸುವ ಹೊಣೆ ಹೆಗಲೇರಲಿದೆ. ‘ಕೈ ಕೊಟ್ಟ ಸಾಲಮನ್ನಾ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸುವ ಮೂಲಕ ವಿಜಯವಾಣಿ ಗಮನ ಸೆಳೆದಿತ್ತು. ಚುನಾವಣೆ ಹೊತ್ತಿನಲ್ಲಿ ಈ ಸುದ್ದಿ ಸರ್ಕಾರಕ್ಕೂ ಇರಿಸುಮುರಿಸು ತಂದಿತ್ತು. ಈ ಬಗ್ಗೆ ತಕ್ಷಣ ಗಮನಹರಿಸಿದ ಸಿಎಂ, ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದರು.

ಸಾಲಮನ್ನಾ ಘೋಷಣೆ: 2017 ಜೂನ್​ನಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ತಲಾ 50 ಸಾವಿರ ರೂ.ಗಳಂತೆ ಒಟ್ಟು 22,27,506 ರೈತರ 8165 ಕೋಟಿ ರೂ. ಸಾಲಮನ್ನಾ ಮಾಡುವುದಾಗಿ ಸಿಎಂ ಘೋಷಿಸಿದ್ದರು. ಆದರೆ ಹತ್ತು ತಿಂಗಳ ಅವಧಿಯಲ್ಲಿ ಸಾಲಮನ್ನಾಗೆ ನೀಡಿದ್ದು 2878 ಕೋಟಿ ರೂ. ಮಾತ್ರ. ಹೀಗಾಗಿ ರೈತರ ಖಾತೆಗಳಿಗೆ ಹಣ ಜಮೆ ಆಗದೇ, ಸಾಲ ನವೀಕರಣ ಮತ್ತು ಹೊಸ ಸಾಲ ಪಡೆಯಲು ರೈತರು ಪರದಾಡುವಂತಾಗಿತ್ತು.

ಹಣಕಾಸು ಇಲಾಖೆ ಸುಸ್ತು

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಸರ್ಕಾರ ಶಾಸಕರ ಒತ್ತಡಕ್ಕೆ ಮಣಿದು ಹೊಸ ಯೋಜನೆಗಳನ್ನುಘೋಷಣೆ ಮಾಡಿದ್ದರಿಂದ ಹೆಚ್ಚು ಹಣವನ್ನು ಅಲ್ಲಿಗೆ ಒದಗಿಸುವುದು ಅನಿವಾರ್ಯವಾಯಿತು. ಹಾಗಾಗಿ ಸಾಲ ಮನ್ನಾ ಯೋಜನೆಗೆ ಸಂಪನ್ಮೂಲ ಕ್ರೋಡೀಕರಣದ್ದೇ ಸಮಸ್ಯೆಯಾಯಿತು. ಹಣ ಬಿಡುಗಡೆಗೆ ಸಿಎಂ ಆದೇಶಿಸಿದರೂ, ಖಜಾನೆಯಲ್ಲಿ ಹಣವಿಲ್ಲದೆ ಇಲಾಖೆ ಅಸಹಾಯಕತೆ ವ್ಯಕ್ತಪಡಿಸಿತು. ಸಾಲಮನ್ನಾ ಘೋಷಣೆಯೊಂದಿಗೆ ಪೂರ್ಣ ಹಣವನ್ನು ಸರ್ಕಾರ ತುಂಬಿಕೊಟ್ಟಿದ್ದರೆ, ಇಷ್ಟು ಸಮಸ್ಯೆ ಎದುರಾಗುತ್ತಿರಲಿಲ್ಲ.

ಸಾಲದ ಹೊರೆ ಬಳುವಳಿ

ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಕೊನೆಯ ಅಧಿವೇಶನದಲ್ಲಿ 3300 ಕೋಟಿ ರೂ ಸಾಲಮನ್ನಾ ಘೋಷಣೆ ಮಾಡಿದ್ದರು. ಆದರೆ ಆ ಸರ್ಕಾರದ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಬಂದಿದ್ದು 940 ಕೋಟಿ ಮಾತ್ರ. ಇನ್ನುಳಿದ 2360 ಕೋಟಿ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಬಂದ ಮೇಲೆ ತೀರಿಸಿತ್ತು. ಇದೇ ಸಂಪ್ರದಾಯ ಈಗಲೂ ಮುಂದುವರಿದಂತಾಗಿದೆ.

ಈ ವರ್ಷ ಅನ್ನದಾತರಿಗೆ ಅರ್ಧ ಹಣವಷ್ಟೇ ಅದೃಷ್ಟ

ಸರ್ಕಾರದ ಸೂಚನೆಯಂತೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು ಇನ್ನೊಂದು ಕಂತಿನಲ್ಲಿ ಅಪೆಕ್ಸ್ ಬ್ಯಾಂಕ್​ಗೆ 2 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಖಜಾನೆಗೆ ನಿರ್ದೇಶನ ನೀಡಿದೆ. ವಾರದೊಳಗೆ ಈ ಮೊತ್ತ ಬ್ಯಾಂಕ್​ಗೆ ಬರಲಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗಳು ಅಪೆಕ್ಸ್ ಬ್ಯಾಂಕ್​ನತ್ತ ಮುಖ ಮಾಡಿವೆ. ಈಗ ಬರಲಿರುವ ಹಣವೂ ಸೇರಿದಂತೆ ಬ್ಯಾಂಕ್​ಗೆ ಎರಡು ಕಂತಿನಲ್ಲಿ 4878 ಕೋಟಿ ರೂ. ಬಂದಂತಾಗುತ್ತದೆ. ಅಂದರೆ ಬಿಡುಗಡೆಯಾಗಬೇಕಿದ್ದ ಒಟ್ಟೂ 8165 ಕೋಟಿ ರೂ. ಪೈಕಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಮೊತ್ತ ಬ್ಯಾಂಕ್​ಗೆ ಜಮೆ ಆದಂತಾಗುತ್ತದೆ.

 

 

Leave a Reply

Your email address will not be published. Required fields are marked *

Back To Top