Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ವೀರಶೈವರು ದುರ್ಬಲರಲ್ಲ, ಪ್ರಬಲರು

Sunday, 08.04.2018, 11:55 PM       No Comments

ಜಮಖಂಡಿ:ಕೆಲವರು ವೀರಶೈವರು ದುರ್ಬಲರೆಂದು ತಿಳಿದುಕೊಂಡಿದ್ದಾರೆ. ನಾವು ದುರ್ಬಲರಲ್ಲ ಪ್ರಬಲರು, ನಮ್ಮ ಧರ್ಮಕ್ಕೆ ಬೆಂಕಿ ಹಚ್ಚಲು ಬಂದರೆ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಶ್ರೀಗಳು ಹೇಳಿದರು.

ನಗರದ ಕಲ್ಯಾಣ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ವೀರಶೈವ ಧರ್ಮ ಎಂದರೆ ಫುಟ್​ಬಾಲ್ ಚೆಂಡು ಎಂದುಕೊಂಡಿದ್ದಾರೆ. ನಾವು ಭದ್ರ ಗೋಡೆಯಾಗಿದ್ದೇವೆ ಎಂದ ಅವರು, ಸಮಾಜದ ಒಳಿತಿಗಾಗಿ, ಧರ್ಮದ ಉನ್ನತಿಗಾಗಿ ವೀರಶೈವ ಧರ್ಮದ ಎಲ್ಲ ಒಳಪಂಗಡದವರು ಒಗ್ಗಟ್ಟಾಗಬೇಕು ಎಂದರು.

ಹನುಮಂತನನ್ನು ಸುಡಲು ಬಾಲಕ್ಕೆ ಹಚ್ಚಿದ ಬೆಂಕಿ ತನ್ನ ರಾಜ್ಯ ಸುಡುತ್ತದೆ ಎಂದು ರಾವಣನಿಗೆ ಗೊತ್ತಾಗಲಿಲ್ಲ. ಇದು ಲಂಕಾದ ಭವಿಷ್ಯಕ್ಕೆ ಹಚ್ಚಿದ ಬೆಂಕಿಯಾಗಿತ್ತು. ಧರ್ಮಕ್ಕೆ ಇವರು ಹಚ್ಚಿದ ಬೆಂಕಿ ಮುಂದೊಂದು ದಿನ ಅವರ ಭವಿಷ್ಯಕ್ಕೆ ಬೆಂಕಿ ಹಚ್ಚಿಕೊಂಡಂತೆ ಎಂದರು.

ಪ್ರತ್ಯೇಕ ಧರ್ಮಕ್ಕಾಗಿ ರಚಿಸಿದ ಕಾನೂನು ತಜ್ಞರ ಸಮಿತಿ ವರದಿ ಸಲ್ಲಿಸಲು 6 ತಿಂಗಳ ಅವಧಿ ಕೇಳಿತ್ತು. ಆದರೆ, ಅವರು 2 ತಿಂಗಳಿನಲ್ಲಿ ವರದಿ ನೀಡಿದ್ದಾರೆ. ವೀರಶೈವ ಲಿಂಗಾಯತರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದ್ದು ಸರಿಯಾದ ಕ್ರಮವಲ್ಲ ಎಂದರು.

ಮುಖ್ಯಮಂತ್ರಿ ಅವರು ಎರಡು ಬಣದವರು ಕೂಡಿಕೊಂಡು ಬಂದರೆ ಮಾತ್ರ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದರು. ಆದರೆ ಅವರು ಹೇಳಿದಂತೆ ನಡೆದುಕೊಳ್ಳದೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಪಂಚಾಚಾರ್ಯರು ಬಸವಣ್ಣನವರ ವಿರೋಧಿಗಳಲ್ಲ. ಬಸವಣ್ಣ ಎಲ್ಲೂ ಲಿಂಗಾಯತ ಪದ ಬಳಕೆ ಮಾಡಿಲ್ಲ, ಆದರೆ ಮೂರು ಬಾರಿ ವೀರಶೈವ ಪದ ಬಳಕೆ ಮಾಡಿದ್ದಾರೆ ಎಂದರು.

ವೀರಶೈವರು ಜಂಗಮರು, ಉಳಿದ ಒಳಪಂಗಡದವರೆಲ್ಲ ಲಿಂಗಾಯತರು ಎಂಬುದು ಶುದ್ಧ ಸುಳ್ಳು. ಇದಕ್ಕೆ ಯಾವ ದಾಖಲೆ ಆಧಾರಗಳಿಲ್ಲ. ಜಂಗಮರು ಹಾಗೂ ಎಲ್ಲ ಒಳಪಂಗಡದವರು ಸೇರಿ ವೀರಶೈವ ಲಿಂಗಾಯತರಾಗಿದ್ದಾರೆ ಎಂದರು.

ಶಹಾಪುರದ ಸೂಗುರೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಮನುಕುಲಕ್ಕೆ ಧಾರ್ವಿುಕ ಸಂಸ್ಕಾರ ಕೊಟ್ಟಿದ್ದು ಭಾರತ, ವೀರಶೈವ ಲಿಂಗಾಯತ ಧರ್ಮವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಒಡೆಯುವ ಹುನ್ನಾರ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ. ಪಂಚಪೀಠಗಳ ಗೌರವ ಕಡಿಮೆ ಮಾಡಲು ಹಲವರು ಧರ್ಮ ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು ಮಾತನಾಡಿ, ಧರ್ಮಕ್ಕೆ ಧಕ್ಕೆ ಬಂದರೆ ಸಹಿಸುವುದಿಲ್ಲ, ಪ್ರಜ್ಞಾವಂತ ಸಮಾಜ ಬಾಂಧವರು ಧರ್ಮದ ಕಡೆಗೆ ಗಮನ ಹರಿಸಬೇಕು. ನಾವೆಲ್ಲ ಭಾವನಾ ಜೀವಿಗಳು. ಬೆರೆತು ನಡೆಯಬೇಕಿದೆ ಎಂದರು.

ಶೂರ್ಪಾಲಿಯ ಸುನಂದಮ್ಮ ತಾಯಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮಕ್ಕೆ ಇತಿಹಾಸವಿದೆ. ಮಠಾಧೀಶರು ಧರ್ಮ ಪ್ರತಿಪಾದನೆ ಮಾಡಬೇಕೆ ವಿನಾ ರಾಜಕೀಯ ಮಾಡಬಾರದು. ಭಕ್ತರು ಆಸೆ-ಆಮಿಷಕ್ಕೊಳಗಾಗದೆ ಒಳ್ಳೆಯ ವ್ಯಕ್ತಿಗಳ ಆಯ್ಕೆಗೆ ಬೆಂಬಲ ನೀಡಬೇಕು ಎಂದರು.

ಶ್ರೀಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಶರಣಬಸವ ಶ್ರೀಗಳು, ಶ್ರೀಶೈಲ ಶ್ರೀಗಳು, ವಿಶ್ವನಾಥ ಶಾಸ್ತ್ರಿ, ಪ್ರಮೀಳಾ ತಾಯಿ, ನೀಲಮ್ಮ ತಾಯಿ ಇದ್ದರು.

ಶ್ರೀಶೈಲ ಪೀಠದ ಸಾಧಕರು ವೇದಘೊಷ ಹೇಳಿದರು. ಭಾರತಿ ಕುರಿ ಪ್ರಾರ್ಥಿಸಿದರು. ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸ್ವಾಗತಿಸಿ, ನಿರೂಪಿಸಿದರು.

ಕಾಂಗ್ರೆಸ್​ಗೆ ಲಿಂಗಾಯತರು ಮತ ನೀಡಬೇಕೆಂದು ಸಾರ್ವಜನಿಕವಾಗಿ ಬಹಿರಂಗ ಹೇಳಿಕೆ ನೀಡಿರುವ ಮಾತೆ ಮಹಾದೇವಿ ಅವರು ಧರ್ಮದ ಕಾರ್ಯ ಬಿಟ್ಟು ಚುನಾವಣೆಗೆ ನಿಲ್ಲಬೇಕು. ಮತ್ತೊಮ್ಮೆ ನಿಮ್ಮ ಪರೀಕ್ಷೆ ಮಾಡಿಕೊಳ್ಳಬೇಕು. ಬಸವಣ್ಣನವರ ವಚನ ಮತ್ತು ಅಂಕಿತನಾಮ ತಿದ್ದಿ ಸ್ವಾರ್ಥಕ್ಕೆ ಬಳಸಿಕೊಂಡಿದ್ದವರಿಗೆ ಬಸವಣ್ಣನವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಮಾಜ ಉಳಿಯಬೇಕು. ಧರ್ಮ ಒಡೆಯುವವರಿಗೆ ಜನರು ತಕ್ಕ ಪಾಠ ಕಲಿಸಬೇಕು.

| ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಶ್ರೀಗಳು, ಶ್ರೀಶೈಲ ಪೀಠ

 

 

Leave a Reply

Your email address will not be published. Required fields are marked *

Back To Top