Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಶಿರೂರು ಮಠದ ಆನೆ ಲಕ್ಷ್ಮೀಶ ಸಂಶಯಾಸ್ಪದ ಸಾವು

Saturday, 22.09.2018, 11:55 AM       No Comments

ಉಡುಪಿ: ನಾಗರಹೊಳೆ ಅಭಯಾರಣ್ಯ ಹುಣಸೂರು ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಶಿರೂರು ಮಠದ ಲಕ್ಷ್ಮೀಶ ಎಂಬ ಗಂಡಾನೆ ಸೆ.19ರಂದು ಸಂಶಯಾಸ್ಪದವಾಗಿ ಮೃತಪಟ್ಟಿದೆ.

ಐದು ವರ್ಷ ಹಿಂದೆ ಉಪ್ಪಿನಂಗಡಿಯಿಂದ ಮತ್ತಿಗೋಡು ಶಿಬಿರಕ್ಕೆ ಆನೆಯನ್ನು ಕರೆದೊಯ್ಯಲಾಗಿತ್ತು. 20 ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ಶಿಬಿರದಿಂದ ನಾಪತ್ತೆಯಾಗಿತ್ತು. ಮದವೇರಿದ್ದ ಆನೆ ಕಾಡಾನೆಗಳ ಜತೆ ಕಾಳಗ ನಡೆಸಿತ್ತು ಎನ್ನಲಾಗಿದೆ. ಸೆ.19ರಂದು ಆನೆಯನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಚುಚ್ಚುಮದ್ದು ನೀಡಿದ್ದು, ಜ್ಞಾನತಪ್ಪಿ ಎಚ್ಚರಗೊಂಡಿದ್ದ ಆನೆ ಅಸ್ವಸ್ಥಗೊಂಡು ಮೃತಪಟ್ಟಿದೆ.

ಉಡುಪಿಯಲ್ಲಿ ಪುಂಡಾಟ ಮೆರೆದಿದ್ದ ಆನೆ: ಉಡುಪಿ ಶ್ರೀಕೃಷ್ಣಮಠದಲ್ಲಿದ್ದ ಲಕ್ಷ್ಮೀಶ 2004ರ ಮೇನಲ್ಲಿ ಸಾಯಂಕಾಲ ಕೃಷ್ಣ ಮಠ ಪರಿಸರದಲ್ಲಿ ದಾಂಧಲೆ ಆರಂಭಿಸಿ, ರಥಬೀದಿ, ಕನಕದಾಸ ರಸ್ತೆ, ಮಾರುತಿ ವೀಥಿಕಾ, ಚಿತ್ತರಂಜನ್ ವೃತ್ತ, ಅನಂತೇಶ್ವರ ರಸ್ತೆ, ತೆಂಕಪೇಟೆ ಪ್ರದೇಶಗಳಿಗೆ ತೆರಳಿ ಯಾರನ್ನೋ ಹುಡುಕುವಂತೆ ಮಾಡುತ್ತಿತ್ತು. ಬಳಿಕ ಮಠದ ಬಳಿ ಮಾವುತ ಮಲಗುತ್ತಿದ್ದ ಕೋಣೆಯ ಬಳಿ ಬಂದು ಆತನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿತ್ತು. ಮಾವುತ ಅದಕ್ಕೆ ಸರಿಯಾಗಿ ಆಹಾರ ಕೊಡದೆ ದುಡಿಸಿ, ಹಿಂಸೆ ಕೊಡುತ್ತಿದ್ದ, ಇದರಿಂದ ತಾಳ್ಮೆಗೆಟ್ಟ ಆನೆ ಮಾವುತನ ವಿರುದ್ಧ ತಿರುಗಿ ಬಿದ್ದಿತ್ತು, ಆದರೆ ಮಾವುತ ಅಲ್ಲಿಂದ ಪರಾರಿಯಾಗಿ ತಪ್ಪಿಸಿಕೊಂಡಿದ್ದ. ರಾತ್ರಿ ನಗರದ ರಸ್ತೆಗಳಲ್ಲಿ ಓಡಾಡಿ ಗೂಡಂಗಡಿ, ಅಂಗಡಿ ಚಪ್ಪರಗಳನ್ನೆಲ್ಲ ಧ್ವಂಸ ಮಾಡಿದ್ದ ಲಕ್ಷ್ಮೀಶ ಮರುದಿನ ಬೆಳಿಗ್ಗೆ ಕೃಷ್ಣಮಠ ಬಾಗಿಲಲ್ಲಿದ್ದ ಮಾರುತಿ ಕಾರನ್ನು ತಲೆಯಿಂದ ಗುದ್ದಿ ಪುಡಿ ಮಾಡಿತ್ತು. ನಗರ ಬಸ್ ನಿಲ್ದಾಣ ಬಳಿ ಬಂದ ಆನೆಗೆ ಅರಣ್ಯ ಇಲಾಖೆ ತಜ್ಞ ವೈದ್ಯರು ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸಿದ್ದರು. ನಂತರ ಆನೆಯನ್ನು ಶಿರೂರು ಮೂಲಮಠದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಅದನ್ನು ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರಕ್ಕೆ ರವಾನಿಸಲಾಗಿತ್ತು.

ವೀರಪ್ಪ ಮೊಯ್ಲಿ ಹರಕೆ: ಮಠದ ದಾಖಲೆಯಂತೆ ಲಕ್ಷ್ಮೀಶ 1989 ಅ.10ರಂದು ಶಿವಮೊಗ್ಗ ಸಕ್ರೆಬೈಲು ಆನೆ ಬೀಡಾರದಲ್ಲಿ ಜನಿಸಿದೆ. ಸರ್ಕಾರಿ ದಾಖಲೆ ಪ್ರಕಾರ ಆನೆಗೆ ಪರಶುರಾಮ ಎಂದು ಹೆಸರಿಡಲಾಗಿತ್ತು. 1994ರಲ್ಲಿ ಆಗಿನ ಮುಖ್ಯಮಂತ್ರಿ ವೀರಪ್ಪ ಎಂ.ಮೊಯ್ಲಿ ತಮ್ಮ ಹರಕೆಯಂತೆ ಈ ಆನೆಯನ್ನು ಉಡುಪಿ ಕೃಷ್ಣ ಮಠಕ್ಕೆ ದಾನ ಮಾಡಿದ್ದರು. ಅಂದು ಕೃಷ್ಣಮಠ ಪರ್ಯಾಯದಲ್ಲಿದ್ದ ಶಿರೂರು ಶ್ರೀ ಲಕ್ಷ್ಮೀವರ ತೀರ್ಥರು, ಪರಶುರಾಮನಿಗೆ ಲಕ್ಷ್ಮೀಶ ಎಂದು ಮರು ನಾಮಕರಣ ಮಾಡಿದ್ದರು.

ಸಿನಿಮಾದಲ್ಲಿ ಅಭಿನಯಿಸಿದ್ದ: ಲಕ್ಷ್ಮೀಶ ಆನೆ ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ಹಲವು ದೇವಳದ ಉತ್ಸವ, ಜಾತ್ರೆಗಳಲ್ಲಿ ಪಾಲ್ಗೊಂಡು ಜನರನ್ನು ರಂಜಿಸಿದ್ದಾನೆ. ಜತೆಗೆ ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರದಲ್ಲಿ ಲಕ್ಷ್ಮೀಶ ಕಾಣಿಸಿಕೊಂಡಿದ್ದಾನೆ. ಬಳಿಕ ಹಲವು ಚಿತ್ರಗಳಲ್ಲಿ ಬೇಡಿಕೆ ಬಂದರೂ ಮಾಲೀಕ ಕರುಣಾಕರ ಪೂಜಾರಿ ಸಿನಿಮಾಗಳಿಗೆ ಆನೆಯನ್ನು ನೀಡಿರಲಿಲ್ಲ.

ಶಿರೂರು ಮಠದ ಹೆಸರಲ್ಲೇ ಇತ್ತು: ನನ್ನ ಮಾಲೀಕತ್ವಕ್ಕೆ ಲಕ್ಷ್ಮೀಶ ಬಂದಾಗಲೂ ಲಕ್ಷ್ಮೀಶ ಆನೆ ಶಿರೂರು ಮಠದ ಹೆಸರಲ್ಲೇ ಇತ್ತು ಎನ್ನುತ್ತಾರೆ ಕರುಣಾಕರ ಪೂಜಾರಿ. ನಾವು ಅದನ್ನು ಬದಲಾಯಿಸಿರಲಿಲ್ಲ. ಅರಣ್ಯ ಇಲಾಖೆ ಹಸ್ತಾಂತರ ಸಮಯದಲ್ಲಿ ಶಿರೂರು ಶ್ರೀಗಳು ನಿಯಮ ಪ್ರಕಾರ ಇನ್ನೊಂದು ಆನೆ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.

ಮಾವುತನನ್ನು ಕೊಂದಿತ್ತು: ಉಡುಪಿ ಶ್ರೀಕೃಷ್ಣಮಠದಲ್ಲಿ 10 ವರ್ಷ ಬಳಿಕ ಸಕ್ರೆಬೈಲಿನಲ್ಲಿ 5 ವರ್ಷವಿದ್ದ ಲಕ್ಷ್ಮೀಶನನ್ನು 2010ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರುಣಾಕರ್ ಪೂಜಾರಿ ಪಡೆದುಕೊಂಡಿದ್ದರು. 2012ರಲ್ಲಿ ಸುಳ್ಯದಲ್ಲಿ ಮಾವುತನ ವಿರುದ್ದ ತಿರುಗಿಬಿದ್ದ ಲಕ್ಷ್ಮೀಶ ಆತನನ್ನು ಅಟ್ಟಾಡಿಸಿತ್ತು. ಬಳಿಕ 2013ರಲ್ಲಿ ಪುತ್ತೂರಿನಲ್ಲಿ ಕೆಲಸ ಮುಗಿಸಿ ಲಾರಿಯಲ್ಲಿ ಕರೆತರುತ್ತಿದ್ದಾಗ ಮತ್ತೆ ಕೆರಳಿ ಮಾವುತ ಚಂದ್ರನ್ ಎಂಬಾತನನ್ನು ಕೆಳಕ್ಕೆ ಬೀಳಿಸಿ ಸಾಯಿಸಿತ್ತು. ಮದವೇರಿದ್ದ ಆನೆಯನ್ನು ಅಭಿಮನ್ಯು ಆನೆ ನಿಯಂತ್ರಣಕ್ಕೆ ತಂದಿತ್ತು. ಈ ಘಟನೆಯಿಂದ ಪುತ್ತೂರು ಜನತೆ ಬೆಚ್ಚಿಬಿದ್ದಿದ್ದರು. ಬಳಿಕ ಕರುಣಾಕರ್ ಪೂಜಾರಿ ಆನೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು.

ಲಕ್ಷ್ಮೀಶನನ್ನು ನಾನು 10 ವರ್ಷ ಸಾಕಿದ್ದೆ. ನಿಧನ ಸುದ್ದಿ ದುಃಖ ತರಿಸಿದೆ. 33 ವರ್ಷಗಳಲ್ಲಿ ಹಲವು ಆನೆ ಸಾಕಿದ್ದೇನೆ. ಆದರೆ ಲಕ್ಷ್ಮೀಶನ ಉತ್ತಮ ವರ್ತನೆ, ಸ್ವಭಾವ, ಕಾರ್ಯವೈಖರಿ ಬೇರೆ ಆನೆಗಳಲ್ಲಿ ಕಂಡಿರಲಿಲ್ಲ. ಅದರ ಪುಂಡಾಟಕ್ಕೆ ಕೆಲವು ಮಾವುತರ ನಿರ್ಲಕ್ಷೃವೇ ಕಾರಣ.

|ಕರುಣಾಕರ ಪೂಜಾರಿ, ಉಪ್ಪಿನಂಗಡಿ, ಆನೆಯ ಮಾಜಿ ಮಾಲೀಕ

Leave a Reply

Your email address will not be published. Required fields are marked *

Back To Top