More

    ಷೇರುಪೇಟೆಯಲ್ಲಿ ಕರಡಿ ಕುಣಿತ, ಅದಾನಿ ಸಮೂಹಕ್ಕೆ ಹೊಡೆತ; ಒಂದೇ ದಿನ 2.5 ಲಕ್ಷ ಕೋಟಿ ರೂ. ನಷ್ಟ

    ನವದೆಹಲಿ: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್ ಏಷ್ಯಾದ ನಂ.1 ಶ್ರೀಮಂತ ವ್ಯಕ್ತಿ, ಉದ್ಯಮಿ ಗೌತಮ್ ಅದಾನಿ ಒಡೆತನದ ಕಂಪನಿಗಳು ಭಾರೀ ಅಕ್ರಮ ಎಸಗಿವೆ ಎಂದು ವರದಿ ನೀಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿರುವ ಅದಾನಿ ಮಾಲೀಕತ್ವದ ಎಲ್ಲಾ ಕಂಪನಿಗಳು ತೀವ್ರ ಕುಸಿತ ಕಂಡಿವೆ. ಹಿಂಡನ್​ಬರ್ಗ್ ರಿಸರ್ಚ್ ವರದಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಶುಕ್ರವಾರದಂದೂ ಸಾವಿರಾರು ಷೇರುದಾರರು ವ್ಯಾಪಕ ನಷ್ಟದ ಹೊರತಾಗಿಯೂ ಅದಾನಿ ಷೇರು ಕಂಪನಿಗಳಿಂದ ಹೊರಬಂದಿದ್ದಾರೆ.

    ಅದಾನಿ ಗ್ರೀನ್ ಎನರ್ಜಿ (ಶೇ.20), ಅದಾನಿ ಟೋಟಲ್ ಗ್ಯಾಸ್ (ಶೇ.20), ಅದಾನಿ ಪೋರ್ಟ್ಸ್ ಆಂಡ್ ಎಕನಾಮಿಕ್ ಝೆೊನ್ (ಶೇ.16.29), ಅದಾನಿ ಎಂಟರ್​ಪ್ರೖೆಸಸ್ (18.57%), ಅದಾನಿ ಟ್ರಾನ್ಸ್​ಮಿಷನ್ (20%), ಅದಾನಿ ಪವರ್ (5%) ಮತ್ತು ಅದಾನಿ ವಿಲ್ಮಾರ್ (5%) ಕಂಪನಿಗಳ ಮಾರುಕಟ್ಟೆ ಬಂಡವಾಳ ತೀವ್ರ ಪ್ರಮಾಣದಲ್ಲಿ ಕರಗಿದೆ. ಅದಾನಿ ಪಾಲುದಾರಿಕೆ ಹೊಂದಿರುವ ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಷೇರುಗಳೂ ಕುಸಿತ ಕಂಡಿವೆ. ಬರುವ ವಾರದಲ್ಲೂ ಅದಾನಿ ಮಾರುಕಟ್ಟೆ ಬಂಡವಾಳ ಕರಗುವ ಲಕ್ಷಣಗಳು ಗೋಚರಿಸಿದ್ದು, ಹೂಡಿಕೆದಾರರ ಆತಂಕ ದುಪ್ಪಟ್ಟುಗೊಳಿಸಿದೆ. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗಿರುವ ಅದಾನಿ ಸಮೂಹದ ಏಳು ಕಂಪನಿಗಳ ಮಾರುಕಟ್ಟೆ ಮೌಲ್ಯವು ಒಂದೇ ದಿನದಲ್ಲಿ 2.5 ಲಕ್ಷ ಕೋಟಿ ರೂ. ಇಳಿಕೆಯಾಗಿದೆ.

    2020ರ ಬಳಿಕ ಅದಾನಿ ಸಮೂಹ ಕಂಡ ಅತಿಹೆಚ್ಚು ಪ್ರಮಾಣದ ದೈನಂದಿನ ಕುಸಿತ ಇದಾಗಿದೆ. ಎರಡು ದಿನಗಳಲ್ಲಿ ಅದಾನಿ ಸಮೂಹ ಸಂಸ್ಥೆಗಳು ತಮ್ಮ ಮಾರುಕಟ್ಟೆ ಮೌಲ್ಯದಿಂದ 4,17,824.79 ಕೋಟಿ ರೂ. ಗಳಷ್ಟು ನಷ್ಟ ಅನುಭವಿಸಿವೆ. ಅದಾನಿ ಟೋಟಲ್ ಗ್ಯಾಸ್​ನ ಮಾರುಕಟ್ಟೆ ಮೌಲ್ಯ 1,04,580.93 ಕೋಟಿ ರೂ. ಕುಸಿದಿದ್ದರೆ, ಅದಾನಿ ಟ್ರಾನ್ಸ್​ಮಿಷನ್ ಮೌಲ್ಯ 83,265.95 ಕೋಟಿ ರೂ. ಇಳಿದಿದೆ. ಅದಾನಿ ಎಂಟರ್​ಪ್ರೖೆಸಸ್ ಮಾರುಕಟ್ಟೆ ಬಂಡವಾಳ 77,588.47 ಕೋಟಿ ರೂ., ಅದಾನಿ ಗ್ರೀನ್ ಎನರ್ಜಿ 67,962.91 ಕೋಟಿ ರೂ. ಮತ್ತು ಅದಾನಿ ಪೋಟ್ಸ್ -ಠಿ;35,048.25 ಕೋಟಿ ರೂ. ಕುಸಿದಿದೆ. ಅಂಬುಜಾ ಸಿಮೆಂಟ್ಸ್​ನ ಮಾರುಕಟ್ಟೆ ಮೌಲ್ಯ 23,311.47 ಕೋಟಿ ರೂ., ಅದಾನಿ ಪವರ್ 10,317.31 ಕೋಟಿ ರೂ., ಎಸಿಸಿ 8,490.8 ಕೋಟಿ ರೂ. ಮತ್ತು ಅದಾನಿ ವಿಲ್ಮಾರ್ 7,258.7 ಕೋಟಿ ರೂ. ಇಳಿಕೆಯಾಗಿವೆ.

    ಸೆನ್ಸೆಕ್ಸ್ ಶೇ. 1.25 ಕುಸಿತ: ಕೇಂದ್ರದ ಬಜೆಟ್ ಅಧಿವೇಶನ ಹತ್ತಿರ ಬರುತ್ತಿದ್ದಂತೆಯೇ ಷೇರು ಮಾರುಕಟ್ಟೆ ಇಳಿಕೆಯತ್ತ ಸಾಗುತ್ತಿದೆ. ಶುಕ್ರವಾರವೂ ಅದೇ ಚಿತ್ರಣ ಕಂಡುಬಂದಿದೆ. ಬ್ಯಾಂಕ್ ನಿಫ್ಟಿ ಶೇ.3.23%, ಸೆನ್ಸೆಕ್ಸ್ 1.25%ನಷ್ಟು ಕುಸಿತ ಕಂಡಿದೆ. ಮಾರುಕಟ್ಟೆ ಕುಸಿತದಿಂದಾಗಿ ಹೂಡಿಕೆದಾರರ ಸಂಪತ್ತು ಬರೀ ಎರಡು ವಹಿವಾಟು ಅವಧಿಗಳಲ್ಲಿ 10.73 ರೂ. ಲಕ್ಷ ಕೋಟಿಗೂ ಹೆಚ್ಚು ನಷ್ಟ ಕಂಡಿದೆ. ಗಣರಾಜ್ಯೋತ್ಸವದ ನಿಮಿತ್ತ ಗುರುವಾರ ಷೇರುಪೇಟೆ ವ್ಯವಹಾರ ನಡೆದಿರಲಿಲ್ಲ.

    ಷೇರು ಬೆಲೆ ಕೃತಕ ಏರಿಕೆ?: ಅದಾನಿ ಕಂಪನಿಗಳು ಲೆಕ್ಕಪತ್ರ ವಂಚನೆ, ಷೇರು ಬೆಲೆ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸ ಮಾಡಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ವರದಿಯಲ್ಲಿ ದಾಖಲಾಗಿದೆ. ಮೇಲಾಗಿ, ಕಳೆದ ಒಂದೆರಡು ವರ್ಷ ಅದಾನಿ ಒಡೆತನದ ಎಲ್ಲಾ ಷೇರುಗಳು ವಿಪರೀತ ಏರಿಕೆ ಕಂಡಿದ್ದು, ಈ ಬಗ್ಗೆ ಮಾರುಕಟ್ಟೆ ತಜ್ಞರೂ ಕುತೂಹಲ, ಆತಂಕ ವ್ಯಕ್ತಪಡಿಸಿದ್ದರು. ಷೇರು ಬೆಲೆಯಲ್ಲಿನ ಅನೈಸರ್ಗಿಕ ಏರಿಕೆ ಬಗ್ಗೆ ಹೂಡಿಕೆದಾರರು ಎಚ್ಚರಿಕೆಯಿಂದಿರಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗಳಾಗಿದ್ದವು. ಹೀಗಿದ್ದರೂ, ಮುಂದಿನ ದಿನಗಳಲ್ಲಿ ಅದಾನಿ ಸಮೂಹ ಹಿಂಡನ್​ಬರ್ಗ್ ರಿಸರ್ಚ್ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿ, ವರದಿಯ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳೆದ್ದಲ್ಲಿ ಅದಾನಿ ಷೇರು ಬೆಲೆಗಳಲ್ಲಿ ಸುಧಾರಣೆಯಾದರೂ ಆಗಬಹುದು ಎಂದು ಹೇಳಲಾಗುತ್ತಿದೆ.

    ಅದಾನಿ ಸಮೂಹಕ್ಕೆ 88 ಪ್ರಶ್ನೆ: ಹಿಂಡೆನ್​ಬರ್ಗ್ ರಿಸರ್ಚ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್​ಗೆ 88 ಪ್ರಶ್ನೆಗಳನ್ನು ಕೇಳಿದೆ. ಕಸ್ಟಮ್ ತೆರಿಗೆ ವಂಚನೆ, ನಕಲಿ ದಾಖಲೆ ಮತ್ತು ಅಕ್ರಮ ಕಲ್ಲಿದ್ದಲು ಆಮದು ಮಾಡಿದ ಆರೋಪ ಹೊತ್ತಿರುವ ಗೌತಮ್ ಅದಾನಿ ಅವರ ಕಿರಿಯ ಸೋದರ ರಾಜೇಶ್ ಅದಾನಿ ಅವರನ್ನು ‘ಅದಾನಿ ಗ್ರೂಪ್’ನ ವ್ಯವಸ್ಥಾಪಕ ನಿರ್ದೇಶಕರಾಗಿ ಮಾಡಿದ್ದೇಕೆ ಎಂದು ಕೇಳಲಾಗಿದೆ. ವಜ್ರದ ವ್ಯಾಪಾರ ಹಗರಣದಲ್ಲಿ ಗೌತಮ್ ಅದಾನಿ ಅವರ ಸೋದರ ಮಾವ ಸಮಿರೋ ವೋರಾರನ್ನು ಆಸ್ಟ್ರೇಲಿಯಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಬಗ್ಗೆ ಪ್ರಶ್ನಿಸಲಾಗಿದೆ. ಹಿಂಡೆನ್​ಬರ್ಗ್ ರಿಸರ್ಚ್ ಸಂಸ್ಥೆಯನ್ನು 2017 ರಲ್ಲಿ ನಥನ್ ಆಂಡರ್ಸನ್ ಆರಂಭಿಸಿದರು.

     

    ಹೃದಯಾಘಾತಕ್ಕೆ ಮತ್ತೊಂದು ಬಲಿ; ತಂದೆ-ತಾಯಿಯ ಏಕೈಕ ಪುತ್ರ, ಜೆಡಿಎಸ್​ ಯುವ ಮುಖಂಡ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts