Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಮಕ್ಕಳಿಗೆ ತಿಳಿವಳಿಕೆ ನೀಡುವುದು ಹೆತ್ತವರ ಕರ್ತವ್ಯ

Saturday, 10.12.2016, 2:00 AM       No Comments

ನನ್ನ ಮೇಲ್ಬಾಕ್ಸಿಗೆ ಬರುವ ಅಪಾರ ಪತ್ರಗಳಲ್ಲಿ ಕೆಲವು, ವಿಚಿತ್ರವಾದ ಕೋರಿಕೆಯನ್ನು ನನ್ನ ಮುಂದಿಡುತ್ತವೆ. ಈ ಪತ್ರಗಳೆಲ್ಲಾ ಯುವಪೀಳಿಗೆಯ ಜನರದ್ದು ಎನ್ನುವುದು ವಿಶೇಷ. ಒಬ್ಬ ಯುವಕನ ಪತ್ರ ಹೀಗಿದೆ- ‘‘ನಾನು ಇಂಥ ನಟಿಯನ್ನು ತುಂಬಾ ಇಷ್ಟಪಡುತ್ತೇನೆ. ಅವಳನ್ನೊಮ್ಮೆ ಭೇಟಿಮಾಡಿದರೆ ಜನ್ಮ ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ. ಅವಳು ಒಬ್ಬ ನಟನನ್ನು ಮದುವೆ ಆಗುತ್ತಾಳಂತೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುಃಖವಾಗುತ್ತಿದೆ. ಹಗಲು ಊಟ ಸೇರುತ್ತಿಲ್ಲ, ರಾತ್ರಿ ನಿದ್ರೆ ಬರುತ್ತಿಲ್ಲ. ಕಾಲೇಜಿಗೆ ಹೋದರೂ ಮನಸ್ಸಿಟ್ಟು ಪಾಠ ಕೇಳಲಾಗುತ್ತಿಲ್ಲ. ನನ್ನ ಬದುಕೆಲ್ಲಾ ವ್ಯರ್ಥವೆನಿಸುತ್ತಿದೆ. ಈ ಸಂಕಟದಿಂದ ಹೇಗೆ ಹೊರಬರಲಿ? ತಿಳಿಸಿ’’.

ಮತ್ತೊಂದು ಪತ್ರ ಒಬ್ಬ ತಾಯಿಯಿಂದ- ‘‘ನನ್ನ ಮಗ ಕ್ರಿಕೆಟ್ ಆಟಗಾರನೊಬ್ಬನನ್ನು ತುಂಬಾ ಇಷ್ಟಪಡುತ್ತಾನೆ. ಅವನ ಚಿತ್ರಗಳನ್ನು ರೂಮಿನ ತುಂಬಾ ಅಂಟಿಸಿಕೊಂಡಿದ್ದಾನೆ. ಅವನ ಆಟ ಟಿವಿಯಲ್ಲಿ ಬರುತ್ತಿದ್ದರೆ ಊಟ, ನಿದ್ರೆ, ಓದು ಎಲ್ಲವನ್ನೂ ಮರೆತು ಟಿವಿಯಲ್ಲೇ ತಲ್ಲೀನನಾಗಿಬಿಡುತ್ತಾನೆ. ಆ ಆಟಗಾರ ಔಟಾದರೆ ‘ಹೋ’ ಎಂದು ಅಳುತ್ತಾ ಕೂತುಬಿಡುತ್ತಾನೆ. ಹತ್ತನೇ ತರಗತಿ ಓದುತ್ತಿರುವ ಹುಡುಗ ಹೀಗೆ ಮಾಡಿದರೆ ಏನು ಮಾಡಲಿ? ಈ ಬಗ್ಗೆ ನಾವು ಏನು ಹೇಳಿದರೂ ತೀರಾ ಸಿಟ್ಟಿಗೇಳುತ್ತಾನೆ. ಈ ಕ್ರಿಕೆಟ್ ಆಟ ನನ್ನ ಮಗನನ್ನು ಬಲಿತೆಗೆದುಕೊಂಡುಬಿಡುತ್ತದೆಯೇನೋ ಎನ್ನುವ ಭಯ ಕಾಡುತ್ತಿದೆ’’.

ಇಂಥ ನಡವಳಿಕೆಯನ್ನು ಮನೋವಿಜ್ಞಾನಿಗಳು ‘ಸೆಲೆಬ್ರಿಟಿ ವರ್ಷಿಪ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಅಂದರೆ ‘ಪ್ರಸಿದ್ಧರನ್ನು ಆರಾಧನೆ ಮಾಡುವ ಭ್ರಮೆ’ಗೆ ಒಳಗಾಗುವುದು ಎಂದರ್ಥ. ಹೀಗೆ ಭ್ರಮೆಗೆ ಒಳಗಾದವರನ್ನು ‘ಅವಿವೇಕ’ ಆಳುತ್ತದೆ. ತಮ್ಮದೇ ಭ್ರಮೆಯಲ್ಲಿ ‘ವಾಸ್ತವದ ಅರಿವ’ನ್ನು ಇವರು ಮರೆಯುತ್ತಾರೆ. ಮಕ್ಕಳು ಕುಡಿಯುವುದಕ್ಕೆ ಹಾಲು ಕೊಳ್ಳಲೂ ಅವರ ಹೆತ್ತವರಿಗೆ ಆಗುತ್ತಿಲ್ಲ ಎನ್ನುವುದು ವಾಸ್ತವ. ತಮ್ಮ ಆರಾಧ್ಯ ನಟನ ಕಟೌಟಿಗೆ ಲೀಟರ್ಗಟ್ಟಲೆ ಕ್ಷೀರಾಭಿಷೇಕ ಮಾಡುವುದು ಭ್ರಮಾಧೀನ ಮನಸ್ಸಿನ ನಡವಳಿಕೆ! ಇಂಥ ಭ್ರಮಾಧೀನರನ್ನು ‘ಮೂರ್ಖರು’ ಎಂದು ಬೈದುಬಿಡುವುದು ಸುಲಭ. ಆದರೆ ಈ ಮೂರ್ಖತೆಯನ್ನು ತೊಡೆದುಕೊಳ್ಳುವ ‘ಅರಿವ’ನ್ನು ಸಮಾಜದಲ್ಲಿ ಬೆಳೆಸಬೇಕಾಗಿರುವುದು ಅಗತ್ಯವಾಗಿ ಆಗಬೇಕಾಗಿರುವ ಕೆಲಸ.

ಈ ಪ್ರಸಿದ್ಧರ ಮನಸ್ಥಿತಿಯ ಬಗ್ಗೆಯೂ ಪಾಶ್ಚಾತ್ಯ ಮನೋವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಎಲ್ಲ ಪ್ರಸಿದ್ಧರೂ ಎರಡೆರಡು ರೀತಿಯ ಒತ್ತಡದಲ್ಲಿ ಸಿಲುಕಿ ನಲುಗುತ್ತಿರುತ್ತಾರೆ. ಒಮ್ಮೆ ಪ್ರಸಿದ್ಧಿಯ ಬೆಟ್ಟ ಏರಿದೊಡನೆಯೇ ಅವರ ಸಂಕಟದ ದಿನಗಳು ಪ್ರಾರಂಭವಾಗುತ್ತವೆ. ತಾವು ಆ ಬೆಟ್ಟದ ಇಳಿಜಾರಿನೆಡೆಗೆ ವಾಲದಿರುವಂತೆ ನೋಡಿಕೊಳ್ಳುವುದು ಅವರಿಗೆ ತಂತಿಯ ಮೇಲಿನ ನಡಿಗೆಯಂತೆ! ಅಮೆರಿಕದ ನಟಿಯೊಬ್ಬಳಿಗೆ ಒತ್ತಡದ ಕಾರಣವಾಗಿ ತಲೆಗೂದಲೆಲ್ಲಾ ಉದುರಿಹೋದುವಂತೆ! ಯಾಕೆಂದರೆ ಅವಳಿಗೆ ಪ್ರತಿಭೆ ಕಡಿಮೆಯಿತ್ತು, ಸೌಂದರ್ಯದ ಬಲದಿಂದಲೇ ಪ್ರಸಿದ್ಧಳಾಗಿದ್ದಳು. ಹೀಗಾಗಿ ಅವಳಿಗೆ ಸೌಂದರ್ಯ ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ದಿನಕ್ಕೆ ಆರಾರುಗಂಟೆಗಳ ಕಾಲ ಕಸರತ್ತು, ಕಡಿಮೆ ತಿನ್ನುವಿಕೆ, ಸೌಂದರ್ಯ ಸಾಧನಗಳ ಅತಿಬಳಕೆ ಮತ್ತು ಇವೆಲ್ಲವನ್ನೂ ನಿಭಾಯಿಸುವ ಒತ್ತಡ! ಪರಿಣಾಮ ತಲೆಗೂದಲು ಪರಾರಿ! ಇದೇ ಕಾರಣವಾಗಿ, ಅವಳ ಗಂಡ ವಿಚ್ಛೇದನ ನೀಡಿದ. ತಲೆಗೂದಲಿನ ಹಗರಣ ಬಯಲಾದ ಕಾರಣ, ಅವಳನ್ನು ಪ್ರೀತಿಸುತ್ತಿದ್ದ ಪ್ರೇಮಿಯೂ ಅವಳಿಂದ ಓಟಕಿತ್ತ! ಕಡೆಗೆ ಅವಳು ಮಾನಸಿಕ ಸ್ವಾಸ್ಥ್ಯನ್ನೇ ಕಳೆದುಕೊಂಡಳು!

ಸೆಲೆಬ್ರಿಟಿ ನಟನೊಬ್ಬನನ್ನು ಮದುವೆಯಾದ ನನ್ನ ವಿದ್ಯಾರ್ಥಿನಿಯೊಬ್ಬಳು ಕೆಲವೇ ವರ್ಷಗಳಲ್ಲಿ ಆತನಿಂದ ವಿಚ್ಛೇದನ ಪಡೆದಳು. ‘‘ಯಾಕಮ್ಮಾ? ಮನೆಯವರ ವಿರೋಧವನ್ನೂ ಕಟ್ಟಿಕೊಂಡು ಆತನನ್ನು ಮದುವೆಯಾದೆಯಲ್ಲ ತಾಯಿ? ಈಗೇನಾಯಿತು?’’ ಎಂದರೆ ‘‘ಅಯ್ಯೋ ಆತನಿಗೆ ನನ್ನ ಹಾಗೆ ಹಲವಾರು ಹೆಂಡತಿಯರಿದ್ದಾರೆ’’ ಎಂದು ಅಲವತ್ತುಕೊಂಡಳು. ಎಲ್ಲ ನಟರೂ ಹಾಗಿರಲಾರರು; ಆದರೂ ಅವರನ್ನು ದ್ವಂದ್ವಗಳು ಕಾಡುವುದು ಸಹಜ. ಹಿಂದಿ ನಟ ಆಮಿರ್ ಖಾನ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ ಮಾತು ವಿಚಾರಯೋಗ್ಯವಾಗಿದೆ- ‘‘ಒಬ್ಬ ನಟ ಮತ್ತು ನಟಿಯ ‘ಜೋಡಿ’ ನಟಿಸಿದ ಒಂದು ಸಿನಿಮಾ ಯಶಸ್ವಿಯಾಗಿ ಗಲ್ಲಾಪೆಟ್ಟಿಗೆ ತುಂಬಿಸಿಬಿಟ್ಟರೆ, ಅವರಿಬ್ಬರ ‘ಕೆಮಿಸ್ಟ್ರಿ’ ಚೆನ್ನಾಗಿ ವರ್ಕೌಟ್ ಆಗುತ್ತದೆ ಎಂದು ಪದೇಪದೆ ಅದೇ ಜೋಡಿಯನ್ನೇ ಆರಿಸುತ್ತಾರೆ. ಜನಕ್ಕೆ ಆ ಜೋಡಿ ಮತ್ತಷ್ಟು ಇಷ್ಟವಾಗಲಿ ಎಂದು ನಿರ್ದೇಶಕರು ಚುಂಬನದ ದೃಶ್ಯಗಳನ್ನೂ ಅಳವಡಿಸಿಬಿಡುತ್ತಾರೆ! ನಟಿಸುವ ನಾವೇನು ಸೂತ್ರದ ಬೊಂಬೆಗಳೇ? ನಾವೂ ಉಪ್ಪು-ಹುಳಿ-ಖಾರ ತಿನ್ನುವ ಸಾಮಾನ್ಯಜೀವಿಗಳೇ. ಆ ಜೋಡಿಗಳು ಪರಸ್ಪರ ಪ್ರಿಯರಾಗಬಹುದು, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಬಹುದು. ಆಗ ಪತ್ರಿಕೆಯ ‘ಗಾಸಿಪ್ ಕಾಲಂ’ಗಳಿಗೆ ತುತ್ತಾಗುತ್ತೇವೆ. ತೆರೆಯ ಮೇಲೆ ನಾವು ಅಪ್ಪಿಕೊಂಡದ್ದನ್ನು ನೋಡಿ ಶಿಳ್ಳೆಹಾಕುವ ಇದೇ ಜನ, ತೆರೆಯ ಹೊರಗೆ ನಾವು ಶ್ರೀರಾಮಚಂದ್ರನಂತೆ ಇರಬೇಕೆಂದು ಬಯಸುತ್ತಾರೆ! ಈ ಎರಡೂ ಕೊನೆಗಳನ್ನು ಮುಟ್ಟುವುದು ನಟನಾದವನಿಗೆ ಇರುವ ದೊಡ್ಡ ಚಾಲೆಂಜ್’’.

ಇಲ್ಲಿ ಸೆಲೆಬ್ರಿಟಿಗಳ ಸಂಕಟಗಳನ್ನು ವಿವರಿಸಿರುವುದು ನಾಣ್ಯದ ಮತ್ತೊಂದು ಮುಖದ ಪರಿಚಯಕ್ಕಾಗಿ. ಆದರೆ ಇಲ್ಲಿ ಮುಖ್ಯವಾಗಿ ರ್ಚಚಿತವಾಗಬೇಕಾಗಿರುವುದು ‘ಹೀರೋ ವರ್ಷಿಪ್ ಸಿಂಡ್ರೋಮ್ ವ್ಯಕ್ತಿಯನ್ನು ಹೇಗೆ ‘ನೆಗೆಟಿವ್ ಮೆಂಟಲ್ ಹೆಲ್ತ್’ಗೆ ತಳ್ಳಿಬಿಡುತ್ತದೆ ಎನ್ನುವುದನ್ನು ತಿಳಿಸುವುದಕ್ಕಾಗಿ. ಕೆಲವೇ ವರ್ಷಗಳ ಹಿಂದೆ, ನಾಯಕನಟರೊಬ್ಬರು ಪತ್ನಿಯನ್ನು ಹಿಂಸಿಸಿದ್ದಕ್ಕಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ, ಜೈಲಿಗೂ ಕಳುಹಿಸಲ್ಪಟ್ಟರು. ದೂರದ ಉತ್ತರ ಕರ್ನಾಟಕದ ತಂದೆ-ತಾಯಿ ಆರುವರ್ಷದ ಮಗಳನ್ನು ಕರೆತಂದು, ‘ಅವಳು ತನ್ನ ನೆಚ್ಚಿನ ನಟನ ಬಿಡುಗಡೆಗಾಗಿ ಮೂರುದಿನದಿಂದ ಅನ್ನ-ನೀರು ಬಿಟ್ಟು ಸತ್ಯಾಗ್ರಹ ಮಾಡುತ್ತಿರುವುದಾಗಿ’ ತಿಳಿಸಿದ್ದಲ್ಲದೆ, ಮಗಳ ಸಹಿತ ಎಲ್ಲ ಟಿವಿ ಚಾನಲ್ನಲ್ಲಿ ಇಡೀದಿನ ರಾರಾಜಿಸಿದರು! ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಅಲ್ಲವೇ ಈ ಪ್ರಸಂಗ? ಮಕ್ಕಳು ಹೀಗೆ ಹಠಮಾಡಿದರೆ ಅರಿವುಳ್ಳ ತಂದೆ-ತಾಯಿಯರು ಸರಿಯಾಗಿ ತಿಳಿವಳಿಕೆ ಹೇಳಬೇಕು. ‘‘ಆ ನಟ ತೆರೆಯ ಮೇಲೆ ಒಳ್ಳೆಯವನಿರಬಹುದು; ಆದರೆ ನಿಜಜೀವನದಲ್ಲಿ ತಪ್ಪು ಮಾಡಿದ್ದಾನೆ. ಆದ್ದರಿಂದಲೇ ಆತನಿಗೆ ಶಿಕ್ಷೆಯಾಗಿದೆ. ನಾವು ಆತನ ನಟನೆಯನ್ನು ಇಷ್ಟಪಡೋಣ, ಆತನ ತಪ್ಪುಗಳನ್ನಲ್ಲ. ಅಲ್ಲದೆ ಅವನೇನು ಮಾಡಿದ್ದಾನೆ ಎನ್ನುವುದು ನಮಗೆ ಸರಿಯಾಗಿ ಗೊತ್ತಿಲ್ಲ, ನಮ್ಮ ಕಣ್ಣಮುಂದೆ ನಡೆದಿರದ ವಿಷಯಕ್ಕೆ ನಾವು ತಲೆಹಾಕುವುದು ಸರಿಯಲ್ಲ. ಇದು ನಿನ್ನಂಥ ಪುಟ್ಟಹುಡುಗಿಗೆ ಅರ್ಥವಾಗುವುದಿಲ್ಲ’’- ಹೀಗೆ ಏನೆಲ್ಲಾ ತಿಳಿವಳಿಕೆ ಕೊಡಬಹುದಿತ್ತಲ್ಲ? ಒಬ್ಬ ನಟನ ವೈಯಕ್ತಿಕ ಜೀವನವನ್ನು ಗೌರವಿಸುವುದಕ್ಕಿಂತ, ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವುದು ನಮ್ಮ ಆದ್ಯಕರ್ತವ್ಯ ಆಗಬೇಕಲ್ಲವೇ? ಸಮಾಜದ ಹಿತಕ್ಕಾಗಿಯೇ ರಚಿಸಲ್ಪಟ್ಟ ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದು ಹಾಗೂ ಗೌರವಿಸುವುದನ್ನು ನಮ್ಮ ಮಕ್ಕಳಿಗೂ ಕಲಿಸಬೇಕಲ್ಲವೇ?

ಇವತ್ತು ಯುವಪೀಳಿಗೆ ಬಹುತೇಕ ಹಾದಿತಪ್ಪುತ್ತಿರುವುದೇ ‘ಬ್ಯಾಡ್ ಪೇರೆಂಟಿಂಗ್’ನಿಂದಾಗಿ ಎಂದು ಮನೋವಿಜ್ಞಾನ ತಿಳಿಸುತ್ತದೆ. ಈ ಅಂಕಣ ಪ್ರಾರಂಭವಾದಾಗಿನಿಂದ ಅಲ್ಲಲ್ಲಿ ‘ಪೇರೆಂಟಿಂಗ್’ ಬಗ್ಗೆ ಚರ್ಚೆಮಾಡುತ್ತಲೇ ಬಂದಿದ್ದೇನೆ. ಮಕ್ಕಳನ್ನು ಹೋದದಾರಿಗೆ ಬಿಟ್ಟುಬಿಡುವುದು, ಅವರೇನು ಬಯಸಿದರೂ ತಲೆಮೇಲೆ ಹೊತ್ತು ಪೂರೈಸುವುದು ಅಥವಾ ಅವರೇನು ಮಾಡಿದರೂ ಲಕ್ಷ್ಯೇ ಕೊಡದೆ ತಮ್ಮ ಪಾಡಿಗೆ ತಾವಿದ್ದುಬಿಡುವುದು- ಇವೆಲ್ಲವೂ ‘ಬ್ಯಾಡ್ ಪೇರೆಂಟಿಂಗ್’ ಎನಿಸಿಕೊಳ್ಳುತ್ತವೆ. ಇಂಥ ಮಕ್ಕಳು ದೊಡ್ಡವರಾದ ಮೇಲೆ ಏನೆಲ್ಲ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆನ್ನುವುದಕ್ಕೆ ಒಂದು ಸಣ್ಣ ಉದಾಹರಣೆ. ಮುಂಬೈಯಲ್ಲಿ ಇತ್ತೀಚೆಗೆ ಒಂದು ಸಿನಿಮಾ ಬಹಳ ಸಡಗರದಿಂದ ತೆರೆಕಂಡಿತು. ಅದನ್ನು ನೋಡಲು ಬಂದ ತರುಣಿಯೊಬ್ಬಳು ಹೇಳಿದ ಮಾತು- ‘‘ನಾನು ಈ ಸಿನಿಮಾ ನೋಡಲು ಆಫೀಸಿಗೆ 1 ವಾರ ರಜೆಹಾಕಿ ಕೋಲ್ಕತಾದಿಂದ ಬಂದಿದ್ದೇನೆ. ಒಂದು ವೇಳೆ, ಬಾಸ್ ರಜೆ ಕೊಡದಿದ್ದಿದ್ದರೆ ನಾನು ಕೆಲಸವನ್ನೇ ಬಿಡುವ ನಿರ್ಧಾರ ಮಾಡಿದ್ದೆ!’’. ಇಂಥವರನ್ನು ನೋಡಿಯೇ ‘‘ಅರಸನ ಕೂಳು ನೆಚ್ಚಿಕೊಂಡು ವರುಷದ ಕೂಳು ಬಿಟ್ಟಂತೆ’’ ಎಂಬ ಗಾದೆ ಹುಟ್ಟಿಕೊಂಡಿರಬೇಕು! ಒಂದು ಸಿನಿಮಾ ನೋಡಲು ಕೆಲಸವನ್ನೇ ಬಿಡುತ್ತೇನೆನ್ನುವುದು, ನಟ ಜೈಲುಪಾಲಾದನೆಂದು 3 ದಿನ ಉಪವಾಸ ಮಾಡುವುದು ಇವೆಲ್ಲಾ ‘ನೆಗೆಟಿವ್ ಮೆಂಟಲ್ ಹೆಲ್ತ್’ನ ಲಕ್ಷಣಗಳು.

‘ಪಾಸಿಟಿವ್ ಮೆಂಟಲ್ ಹೆಲ್ತ್’ಗೊಂದು ಉಜ್ವಲ ಉದಾಹರಣೆಯೆಂದರೆ ನಟ ಯಶ್ ಅವರ ಮಾತುಗಳು. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಆತ ಮಾತಾಡುತ್ತಿದ್ದರು. ಕಾಲೇಜು ಹುಡುಗಿಯೊಬ್ಬಳು ಯಶ್ರನ್ನು ಮದುವೆಯಾಗುವುದಾಗಿ ಹೇಳಿದ ಧ್ವನಿಯೊಂದನ್ನು ಯಶ್ ಅವರಿಗೆ ಕಾರ್ಯಕ್ರಮದಲ್ಲಿ ಕೇಳಿಸಲಾಯಿತು. ಆಗ ಅವರು ‘‘ನೋಡಿ, ನಾನೂ ನಿಮ್ಮಂತೆಯೇ ಸಾಧಾರಣ ಮನುಷ್ಯ. ಕತೆಗಾರರು ಕತೆ ಬರೆದು, ಸಂಭಾಷಣೆಕಾರರು ಸಂಭಾಷಣೆ ಬರೆದು, ನಿರ್ದೇಶಕರು ನಮ್ಮಿಂದ ಅದನ್ನು ಆಡಿಸುತ್ತಾರೆ ಮತ್ತು ನಟಿಸುವಂತೆ, ಫೈಟ್ ಇತ್ಯಾದಿ ಮಾಡುವಂತೆ ಮಾಡಿಸುತ್ತಾರೆ ಅಷ್ಟೇ. ಉಳಿದಂತೆ ನನಗೂ ನಿಮ್ಮಂತೆ ಸುಗುಣ ದುರ್ಗಣಗಳೆಲ್ಲಾ ಇವೆ. ತೆರೆಯ ಮೇಲೆ ನಾವು ಒಳ್ಳೆಯವರಾಗಿ ಕಂಡಾಕ್ಷಣ ನಾವೇನೂ ದೇವತೆಗಳಲ್ಲ. ಸಾವಿರಾರು ಹುಡುಗಿಯರು ನನ್ನನ್ನೇ ಮದುವೆಯಾಗುವುದಾಗಿ ಹೇಳಿದರೆ ನಾನೊಬ್ಬ ಎಲ್ಲಿ ಹೋಗಲಿ? ರಿಯಾಲಿಟಿಯನ್ನು ಅರ್ಥಮಾಡಿಕೊಳ್ಳಿ. ಮೊದಲು ಚೆನ್ನಾಗಿ ಓದಿ. ನಂತರ ನನಗಿಂತ ಒಳ್ಳೆಯ ಹುಡುಗ ನಿಮಗೆ ಸಿಗಬಹುದು’’ ಎಂದದ್ದು ಹಲವರು ಒಪ್ಪುವಂತಹ ಮಾತು!

ಶಾಲೆಗೆ ಹೋದಕೂಡಲೆ ಮಕ್ಕಳಿಗೆ ಅವರ ಟೀಚರ್ ಆರಾಧ್ಯದೈವವಾಗುತ್ತಾರೆ, ನಂತರ ಅವರ ಇಷ್ಟದ ಆಟಗಳ ಆಟಗಾರರು ಆರಾಧ್ಯರಾಗುತ್ತಾರೆ. ಯೌವನ ಬಂದಕೂಡಲೆ ಸಿನಿಮಾ ನಟ-ನಟಿಯರು ಆರಾಧ್ಯದೈವಗಳಾಗುತ್ತಾರೆ. ಇದನ್ನು ಹೆತ್ತವರು ಗಮನಿಸುತ್ತಾ ಇರಬೇಕು. ಬಾಲ್ಯದಿಂದಲೇ ‘‘ನೀನು ಆಟವನ್ನು ಪ್ರೀತಿಸು, ಆಟಗಾರನನ್ನಲ್ಲ; ಕಲೆಯನ್ನು ಪ್ರೀತಿಸು, ಕಲಾವಿದನನ್ನಲ್ಲ’’ ಎನ್ನುವ ಸಂದೇಶವನ್ನು ಕೊಡುತ್ತಲೇ ಇರಬೇಕು. ಆಟಗಾರನಿಗಿಂತ ಆಟ ದೊಡ್ಡದು, ಕಲಾವಿದನಿಗಿಂತ ಕಲೆ ದೊಡ್ಡದು ಎನ್ನುವ ತಿಳಿವಳಿಕೆ ಬಾಲ್ಯದಿಂದಲೇ ಜಾಗೃತವಾದರೆ ‘ಸೆಲೆಬ್ರಿಟಿ ವರ್ಷಿಪ್ ಸಿಂಡ್ರೋಮ್ಗೆ ಬಲಿಯಾಗುವ ಪ್ರಮೇಯವೇ ಬರುವುದಿಲ್ಲ.

(ಲೇಖಕರು ಆಪ್ತಸಲಹೆಗಾರರು, ಬರಹಗಾರರು)

Leave a Reply

Your email address will not be published. Required fields are marked *

Back To Top