More

    ಸವ್ಯಸಾಚಿ | ವಿರಾಟ್ ನಾಯಕತ್ವ, ಬೇಡ ವಿವಾದಗಳಿಗೆ ಮಹತ್ವ

    ಸವ್ಯಸಾಚಿ | ವಿರಾಟ್ ನಾಯಕತ್ವ, ಬೇಡ ವಿವಾದಗಳಿಗೆ ಮಹತ್ವ

    ಒಂದು ತಂಡವೆಂದ ಮೇಲೆ ಅಲ್ಲಿ ನಾಯಕತ್ವ ಗುಣವುಳ್ಳವರು ಹಲವರಿರಬೇಕು. ಆದರೆ, ನಾಯಕ ಒಬ್ಬನೇ ಇರಬೇಕು. ಅವರೆಲ್ಲರ ಗುರಿ ಒಂದೇ ಆಗಿರಬೇಕು. ಪ್ರತೀ ಪಂದ್ಯ, ಆಯಾ ಸಂದರ್ಭಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಸಲಹೆ-ಸಹಕಾರಗಳು ನಾಯಕನಿಗೆ ಸಿಗುತ್ತಿರಬೇಕು.

    ಮತ್ಸರದಿಂದ ಮತಿಗೇಡು, ಮಾನಗೇಡು…
    ಪಾಂಡವರು, ಕೌರವರು ಸಂಬಂಧದಿಂದ ಸೋದರರು. ಆ ನೂರ ಆರು ಜನ ಒಟ್ಟಿಗೆ ನಿಂತಿದ್ದರೆ, ಜಗತ್ತಿನ ಯಾವ ಶಕ್ತಿಯೂ ಅವರನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ. ಆದರೆ, ಭೀಮ ಯಾವತ್ತಿದ್ದರೂ ಪ್ರತಿಸ್ಪರ್ಧಿಯೇ ಹೊರತು ಸೋದರನಲ್ಲ, ಶತ್ರುವೇ ಹೊರತು ಸಂಬಂಧಿಯಲ್ಲ ಎಂದು ದುರ್ಯೋಧನ, ದುಶ್ಶಾಸನ ನಿರ್ಧರಿಸಿಬಿಟ್ಟಿದ್ದರು. ಇದೇ ಮಹಾಭಾರತ ಯುದ್ಧಕ್ಕೆ ಕಾರಣವಾಯಿತು. ಇದರಿಂದಾಗಿ ಇಡೀ ಕುರುವಂಶವಷ್ಟೇ ಅಲ್ಲ, ಭೂಮಂಡಲದ ಕ್ಷತ್ರಿಯ ರಾಜ ವಂಶಗಳ ನಾಶಕ್ಕೆ ಕಾರಣವಾಯಿತು. ಮಾತ್ಸರ್ಯವೆನ್ನುವುದು ಬಹಳ ಕೆಟ್ಟದ್ದು.

    ಇವತ್ತಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ವೃತ್ತಿಮಾತ್ಸರ್ಯವೆಂಬ ಕಿಡಿ ತಂದೊಡ್ಡುವ ಅವಾಂತರಗಳೂ ಒಂದೆರಡಲ್ಲ. ಪ್ರಸಿದ್ಧರ ಅಭಿಮಾನಿಗಳ ಹೆಸರಲ್ಲಿ ಉದ್ಭವವಾಗುವ ಸೋಷಿಯಲ್ ಮೀಡಿಯಾ ಗುಂಪುಗಳು ತಮ್ಮ ನಾಯಕನನ್ನು ವೈಭವೀಕರಿಸುವ ಭರದಲ್ಲಿ, ಸಮಕಾಲೀನರನ್ನು ತುಚ್ಛವಾಗಿ ನಿಂದಿಸುವುದು, ಪರಸ್ಪರರಲ್ಲಿ ದ್ವೇಷದ ಬೆಂಕಿ ಹಚ್ಚುವುದು ಟ್ರೆಂಡ್ ಆಗಿಬಿಟ್ಟಿದೆ. ಭಾರತ ಕ್ರಿಕೆಟ್ ತಂಡವನ್ನು ಟೀಮ್ ಇಂಡಿಯಾ ಎಂದು ಗುರುತಿಸುವುದಕ್ಕೆ ಕಾರಣ ಅಲ್ಲೊಂದು ಒಗ್ಗಟ್ಟಿನ ಶಕ್ತಿ ಗೋಚರವಾಗಲಿ ಎಂಬ ಸದಾಶಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಂಡದ ಸದಸ್ಯರ ನಡುವೆಯೇ ಬೆಳೆಯುತ್ತಿರುವ ಅನಾರೋಗ್ಯಕರ ಪೈಪೋಟಿ ಮಾರಕವಾಗಿ ಪರಿಣಮಿಸುತ್ತಿದೆ.

    ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾಗ, ತಂಡದ ಬ್ಯಾಟಿಂಗ್ ಶಕ್ತಿಯಾಗಿ ಬೆಳೆದವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ. ಕೊಹ್ಲಿ ರನ್ ಮಷಿನ್ ಆಗಿ ದಿಗ್ಗಜ ಸಚಿನ್ ತೆಂಡುಲ್ಕರ್​ಗೆ ಉತ್ತರಾಧಿಕಾರಿಯೆನಿಸಿದರೆ, ರೋಹಿತ್ ಶರ್ಮ ಹಿಟ್​ವ್ಯಾನ್ ಆಗಿ, ದ್ವಿಶತಕಗಳ ಸರದಾರನಾಗಿ ಮೆರೆದರು. ತೆಂಡುಲ್ಕರ್, ದ್ರಾವಿಡ್, ಗಂಗೂಲಿ, ಲಕ್ಷ್ಮಣ್​ರ ಸುವರ್ಣಯುಗದ ನಂತರ ಭಾರತೀಯ ಬ್ಯಾಟಿಂಗ್ ಬಗ್ಗೆ ಎದುರಾಳಿಗಳೂ ಅಸೂಯೆ ಪಡುವಂತೆ ಇವರಿಬ್ಬರು ಮಿಂಚಿದ್ದರು. ಆದರೆ, ಕೊಹ್ಲಿ ನಾಯಕ, ರೋಹಿತ್ ಉಪನಾಯಕರಾದ ಬಳಿಕ ಇವರಿಬ್ಬರ ನಡುವೆಯೇ ತುಲನೆ, ಸ್ಪರ್ಧೆ, ವಿಮರ್ಶೆಗಳು ಶುರುವಾಗಿದ್ದು ಅನಾರೋಗ್ಯಕರ ಪೈಪೋಟಿಗೆ ಕಾರಣವಾಯಿತು. ಅದರಲ್ಲೂ ಐಪಿಎಲ್​ನಲ್ಲಿ ನಾಯಕರಾಗಿ ಕೊಹ್ಲಿ ವೈಫಲ್ಯ ಮತ್ತು ರೋಹಿತ್​ರ ಅಪ್ರತಿಮ ಯಶಸ್ಸು ಟೀಮ್ ಇಂಡಿಯಾದಲ್ಲಿ ಇವರಿಬ್ಬರ ನಡುವೆ ಯಾರು ಶ್ರೇಷ್ಠ, ಯಾರು ನಿಕೃಷ್ಟ ಎಂಬ ಚರ್ಚೆಗೆ ವಿಷಯವಾಯಿತು. ಒಂದೇ ತಂಡದ ಪರ ಆಡುವ ಇಬ್ಬರು ಅತ್ಯುತ್ತಮ ಬ್ಯಾಟ್ಸ್​ಮನ್​ಗಳು ತಂಡದ ಶಕ್ತಿಯಾಗಬೇಕೇ ಹೊರತು, ಪರಸ್ಪರರಲ್ಲೇ ಸ್ಪರ್ಧೆ ನಡೆಸಿಕೊಂಡು ದೌರ್ಬಲ್ಯವಾಗಬಾರದು. ಸದ್ಯ ಆಗುತ್ತಿರುವುದು ಅದೇ.

    ನಾಯಕತ್ವ ಎನ್ನುವುದು ಅನುವಂಶಿಕವಲ್ಲ.

    ಬಲವಂತವಾಗಿ ಕಲಿಸುವಂಥದ್ದೂ ಅಲ್ಲ.

    ಓರ್ವ ಶ್ರೇಷ್ಠ ವ್ಯಕ್ತಿ ಅಥವಾ ಆಟಗಾರ,

    ಶ್ರೇಷ್ಠ ನಾಯಕನೂ ಆಗಿರಲೇಬೇಕೆಂದಿಲ್ಲ.

    ಏಕೆಂದರೆ, ಅವೆಲ್ಲವೂ ಬೇರೆಬೇರೆಯೇ ಸಂಗತಿಗಳು.

    ಕ್ರಿಕೆಟಿಗನಾಗಿ ಸಚಿನ್ ತೆಂಡುಲ್ಕರ್ ಶ್ರೇಷ್ಠತೆ ಏಕಮೇವಾದ್ವಿತೀಯ. ಕ್ರಿಕೆಟ್ ಚರಿತ್ರೆಯ ದಂತಕಥೆ ಅವರು. ಆದರೆ, ನಾಯಕತ್ವದ ವಿಚಾರದಲ್ಲಿ? ಓರ್ವ ವ್ಯಕ್ತಿ ತನ್ನ ಶಕ್ತಿ ಹಾಗೂ ಮಿತಿಗಳನ್ನು ಸ್ಪಷ್ಟವಾಗಿ ಅರಿತುಕೊಂಡಾಗ ದೊಡ್ಡವನಾಗುತ್ತಾನೆ. ತೆಂಡುಲ್ಕರ್ ಸಹ ತಮ್ಮ ಸಾಮರ್ಥ್ಯದ ಜತೆಗೆ ಮಿತಿಗಳನ್ನೂ ಅರಿತಿದ್ದರು. ಅದೇ ಕಾರಣಕ್ಕೆ ಅವರು ನಾಯಕತ್ವಕ್ಕಾಗಿ ಆಸೆ ಪಡಲೇಇಲ್ಲ. ನಾಯಕತ್ವವೇ ಹುಡುಕಿಕೊಂಡು ಬಂದಾಗಲೂ ನಿರಾಕರಿಸಿಬಿಟ್ಟರು.

    ಶೇನ್ ವಾರ್ನ್​ಗೆ ಅವಕಾಶ ದೊರೆತಿದ್ದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿಕೊಳ್ಳುತ್ತಿದ್ದರೋ ಏನೋ. ಆದರೆ, ವಾರ್ನ್​ಗೆ ಯಾವತ್ತೂ ಕ್ಯಾಪ್ಟನ್ಸಿ ಅವಕಾಶದ ಬಾಗಿಲು ತೆರೆಯಲೇ ಇಲ್ಲ. ಐಪಿಎಲ್​ನಲ್ಲಿ ಅಂಥ ಅವಕಾಶ ದೊರೆತಾಗ ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪ್ರಶಸ್ತಿಯನ್ನೇ ಗೆಲ್ಲಿಸಿಕೊಟ್ಟರು.

    ಅನಿಲ್ ಕುಂಬ್ಳೆಗೆ ವೃತ್ತಿಜೀವನದ ಸಂಧ್ಯಾಕಾಲದಲ್ಲಿ ನಾಯಕತ್ವದ ಅವಕಾಶ ದೊರೆಯದೇ ಹೋಗಿದ್ದರೆ, ಬಹುಶಃ ಸ್ಪಿನ್ ದಂತಕಥೆಯೆಂಬ ಹೊಗಳಿಕೆಗೇ ಅವರು ಸೀಮಿತರಾಗಿಬಿಡುವ ಅಪಾಯವಿತ್ತು. ಕುಂಬ್ಳೆ ನಾಯಕತ್ವ ಕೌಶಲ ಕಂಡಾಗ, ಇನ್ನಷ್ಟು ವರ್ಷ ಮೊದಲೇ ಅವರು ನಾಯಕರಾಗಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಮೂಡಿತ್ತು. ಮ್ಯಾಚ್​ಫಿಕ್ಸಿಂಗ್ ಸುಳಿಗೆ ಸಿಲುಕಿ ವೃತ್ತಿಜೀವನ ನಾಶ ಮಾಡಿಕೊಳ್ಳದೇ ಹೋಗಿದ್ದರೆ, ಆಲ್ರೌಂಡರ್ ಅಜಯ್ ಜಡೇಜಾ ಭಾರತ ತಂಡಕ್ಕೊಬ್ಬರು ಉತ್ತಮ ನಾಯಕರಾಗುತ್ತಿದ್ದರೋ ಏನೋ. ಆದರೆ, ಅವಕಾಶ ಅವರೇ ಹಾಳು ಮಾಡಿಕೊಂಡರು.

    ಸವ್ಯಸಾಚಿ | ವಿರಾಟ್ ನಾಯಕತ್ವ, ಬೇಡ ವಿವಾದಗಳಿಗೆ ಮಹತ್ವ

    ಹಾಗೆಂದು ನಾಯಕತ್ವ ಗುಣ ಇದ್ದವರಿಗೆಲ್ಲ ನಾಯಕರಾಗುವ ಅವಕಾಶ ಸಿಗಲೇಬೇಕೆಂಬ ಕಟ್ಟಳೆಯೇನೂ ಇಲ್ಲ ಅಥವಾ ಅವಕಾಶ ದೊರೆತವರು ಮಾತ್ರವೇ ನಾಯಕತ್ವ ಗುಣ ಉಳ್ಳವರು ಎಂದೂ ಅಲ್ಲ. ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್​ನಲ್ಲಿ ತ್ರಿವಿಕ್ರಮ ಸಾಹಸಿ. ಬಹುಶಃ ಅವರು ತೆಂಡುಲ್ಕರ್​ರಂತೆ ನಾಯಕತ್ವದ ಆಸೆಯನ್ನು ತ್ಯಾಗ ಮಾಡಿ ಬ್ಯಾಟಿಂಗ್​ನತ್ತಲೇ ಗಮನ ಕೇಂದ್ರೀಕರಿಸಿದ್ದರೆ, ಇನ್ನೊಂದಷ್ಟು ವರ್ಷ ಅವರ ಆಟ ನೋಡುವ ಅದೃಷ್ಟ ಅಭಿಮಾನಿಗಳಿಗೆ ಸಿಗುತ್ತಿತ್ತೋ ಏನೋ? ಯುವರಾಜ್ ಸಿಂಗ್ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲ, ಮನೋಭಾವದಲ್ಲೂ ಆಕ್ರಮಣಶೀಲತೆಯನ್ನೇ ಕಣಕಣದಲ್ಲೂ ತುಂಬಿಕೊಂಡವರು. ಅವಕಾಶ ದೊರೆತಿದ್ದರೆ, ಸೌರವ್ ಗಂಗೂಲಿಯಂತೆ ಅವರೂ ಕೂಡ ಅತ್ಯುತ್ತಮ ನಾಯಕರಾಗಬಹದಿತ್ತೇನೋ. ಶ್ವಾಸಕೋಶದ ಕ್ಯಾನ್ಸರ್ ಗೆದ್ದು ಕ್ರಿಕೆಟ್ ಮೈದಾನಕ್ಕೆ ಮರಳಿದರೂ, ಆಟಗಾರನಾಗಿ ಸಂತೃಪ್ತಿಯಿಂದ ನಿವೃತ್ತಿ ಹೊಂದುವ ಯೋಗ ಅವರಿಗಿರಲಿಲ್ಲ. ಗೌತಮ್ ಗಂಭೀರ್ ನಿರೀಕ್ಷೆಗಿಂತ ಬೇಗನೇ ಮಾಜಿ ಕ್ರಿಕೆಟಿಗ ಎನ್ನಿಸಿಕೊಳ್ಳುವುದಕ್ಕೂ ಬಹುಶಃ ನಾಯಕತ್ವದ ಕನಸೇ ಕಾರಣವಾಯಿತು. ಐಪಿಎಲ್​ನಲ್ಲಿ ಕೋಲ್ಕತ್ತ ನೈಟ್​ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವಿ ನಾಯಕ ಗಂಭೀರ್, ಸಂದರ್ಭ ಬಂದರೆ ತಾವೂ ನಾಯಕತ್ವಕ್ಕೆ ಯೋಗ್ಯ ವ್ಯಕ್ತಿ ಎಂಬ ಕನಸು ಕಟ್ಟಿಕೊಂಡಿದ್ದರು.

    ಆದರೆ, ಅನೇಕ ಬಾರಿ ಆಟಗಾರರ ನಾಯಕತ್ವದ ಹಂಬಲ ತಂಡದೊಳಗೇ ಅನಾರೋಗ್ಯಕರ ಪೈಪೋಟಿಗೆ ಎಡೆಮಾಡಿಕೊಡುತ್ತದೆ. ಒಂದು ತಂಡವಾಗಿ ಎದುರಾಳಿಗಳ ವಿರುದ್ಧ ಹೋರಾಡುವ ಬದಲು ಆಟಗಾರರು ತಮ್ಮ ನಡುವೆಯೇ ಸ್ಪರ್ಧೆಗಿಳಿದಾಗ ಫಲಿತಾಂಶದ ಬಗ್ಗೆ ಯೋಚಿಸಲು ಇನ್ನೇನೂ ಉಳಿಯುವುದಿಲ್ಲ.

    ಈಗ ವಿರಾಟ್ ಮತ್ತು ರೋಹಿತ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ತಾರಕಕ್ಕೇರಿರುವ ಭಾವನೆ ಬಲಿಯುತ್ತಿದೆ. ಇತ್ತೀಚೆಗಷ್ಟೇ ಮುಗಿದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮ ಯಶಸ್ಸು, ಆರ್​ಸಿಬಿ ನಾಯಕನಾಗಿ ಕೊಹ್ಲಿ ವೈಫಲ್ಯ, ಐಪಿಎಲ್​ನ ಕೊನೆಯ ಘಟ್ಟದಿಂದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯುತ್ತಿರುವ ಘಟನಾವಳಿಗಳು ಉಭಯ ಆಟಗಾರರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿಬಿಟ್ಟಿವೆ. ಟ್ವಿಟರ್, ಇನ್​ಸ್ಟಾಗ್ರಾಂ, ಫೇಸ್​ಬುಕ್​ನಲ್ಲಿ ಉಭಯ ಆಟಗಾರರ ಅಭಿಮಾನಿ ಗಳು ವಿಶ್ವಯುದ್ಧವನ್ನೇ ನಡೆಸು ತ್ತಿದ್ದರೂ, ವಿರಾಟ್- ರೋಹಿತ್ ಮಾತ್ರ ಪರ ಸ್ಪರ ಮೊಬೈಲ್​ನಲ್ಲಿ ಮಾತನಾಡಿಕೊಳ್ಳುವ ಸ್ನೇಹಪರತೆಯನ್ನೂ ಉಳಿಸಿ ಕೊಂಡಿಲ್ಲ. ಇಬ್ಬರ ನಡುವೆ ಸಂವಹನಕ್ಕಾಗಿ ಬಿಸಿಸಿಐ ಕಾನ್ಪರೆನ್ಸ್ ಕಾಲ್ ಆಯೋಜಿಸಬೇಕಾಯಿತು. ರೋಹಿತ್ ಗಾಯದ ಬಗ್ಗೆ, ಲಭ್ಯತೆ ಬಗ್ಗೆ ಸ್ವತಃ ನಾಯಕನಿಗೇ ಸ್ಪಷ್ಟತೆ ಇರಲಿಲ್ಲ ಎನ್ನುವುದು ವಿರಾಟ್ ನಾಯಕತ್ವದ ಅಪಕ್ವತೆಗೂ ಕನ್ನಡಿ ಹಿಡಿಯಿತು.

    ವಿರಾಟ್ ಶ್ರೇಷ್ಠ ಆಟಗಾರ. ಅವರ ಬ್ಯಾಟಿಂಗ್ ಶ್ರೇಷ್ಠತೆಯ ಬಗ್ಗೆ ಯಾವುದೇ ಚರ್ಚೆ ಇಲ್ಲ. ಆದರೆ, ನಾಯಕನಾಗಿ ಅವರು ಸಾಧಿಸುತ್ತಿರುವುದಕ್ಕಿಂತ ಇನ್ನೂ ಏನೋ ವಿಭಿನ್ನವಾಗಿ ಮಾಡಬಹುದಿತ್ತು ಎನ್ನುವುದೇ ಚರ್ಚೆಯ ವಿಷಯ. ಆದರೆ, ಐಪಿಎಲ್ ನಾಯಕತ್ವಕ್ಕೂ, ಟೀಮ್ ಇಂಡಿಯಾ ನಾಯಕತ್ವಕ್ಕೂ ವ್ಯತ್ಯಾಸವಿದೆ ಎನ್ನುವುದೂ ನಿಜ. ಟೀಮ್ ಇಂಡಿಯಾ ನಾಯಕರಾಗಿ ಸೋಲು-ಗೆಲುವಿನ ಲೆಕ್ಕಾಚಾರ ನೋಡುವಾಗ ಅಂಕಿ-ಅಂಶಗಳು ವಿರಾಟ್ ಉತ್ತಮ ನಾಯಕ ಎಂದೇ ಹೇಳುತ್ತಿವೆ. ಆದರೂ, ಕೊಹ್ಲಿ ಭಾರತ ತಂಡದ ನಾಯಕರಾಗಿ ಯಾವುದೇ ಮಹತ್ವದ ಟ್ರೋಫಿ ಗೆದ್ದಿಲ್ಲ ಎನ್ನುವುದು ವಾಸ್ತವ. ಕೊಹ್ಲಿ ನಾಯಕತ್ವದಲ್ಲಿ ಭಾರತ ವಿಶ್ವಕಪ್​ಗಳಲ್ಲಿ ಫೈನಲ್, ಸೆಮಿಫೈನಲ್ ಸಾಧನೆ ಮಾಡಿದ್ದರೂ, ಪ್ರತಿಕೂಲ ಸನ್ನಿವೇಶಗಳಲ್ಲಿ ಧೋನಿಯಂಥ ಚಮತ್ಕಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ, ಕಠಿಣ ಸನ್ನಿವೇಶಗಳಲ್ಲಿ ಆಟಗಾರರಿಂದ ಶ್ರೇಷ್ಠ ಆಟ ಹೊರತೆಗೆಯುವಂಥ ಸ್ಪೂರ್ತಿದಾಯಕ ನಾಯಕತ್ವ ಕಂಡುಬರುತ್ತಿಲ್ಲ ಎನ್ನುವುದು ಬೇಸರ. ಈ ಎಲ್ಲ ಅಂಶಗಳು ಐಪಿಎಲ್​ನಲ್ಲಿ ರೋಹಿತ್ ನಾಯಕತ್ವದಲ್ಲಿ ಕಂಡುಬರುತ್ತಿದೆ ಎನ್ನುವುದು ಇಷ್ಟೆಲ್ಲ ವಿವಾದಗಳಿಗೆ ಕಾರಣ.

    ಆದರೆ, ಟೀಮ್ ಇಂಡಿಯಾ ದೃಷ್ಟಿಯಿಂದ, ಅಭಿಮಾನಿಗಳ ದೃಷ್ಟಿಯಿಂದ ಅತ್ಯುತ್ತಮ ಆಟಗಾರರು ತಂಡದಲ್ಲಿರಬೇಕು ಎನ್ನುವುದಷ್ಟೇ ಮುಖ್ಯ. ಹಿಂದೆ ತೆಂಡುಲ್ಕರ್, ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ಪ್ರತಿಯೊಬ್ಬರೂ ಮುಂದಾಳುಗಳಾಗಿದ್ದರೂ, ಪರಸ್ಪರರ ಸಾಮರ್ಥ್ಯವನ್ನು ಗೌರವಿಸುತ್ತಿದ್ದರೇ ಹೊರತು, ಅವರ ನಡುವೆಯೇ ಸ್ಪರ್ಧೆ ಇರಲಿಲ್ಲ. ಟೀಮ್ ಇಂಡಿಯಾ ವಿಶ್ವಬಲಾಢ್ಯವಾಗಿ ಬೆಳೆದಿದ್ದು ಈ ದಿಗ್ಗಜರ ಇಂಥ ಗುಣಗಳಿಂದಲೇ. ಈಗಲೂ ಅಭಿಮಾನಿಗಳು ನಿರೀಕ್ಷಿಸುವುದು ಅದನ್ನೇ. ಟೀಮ್ ಇಂಡಿಯಾ ಬಲಾಢ್ಯವಾಗಲು ವಿರಾಟ್, ರೋಹಿತ್ ಇಬ್ಬರೂ ಬೇಕು. ಇವರ ಜೊತೆಗೆ ಧವನ್, ರಾಹುಲ್, ಪಾಂಡ್ಯ, ಬುಮ್ರಾ, ಶಮಿ ಮುಂತಾದವರೂ ಬೇಕು. ಪ್ರತಿಯೊಬ್ಬರೂ ತಮ್ಮ ನಡುವೆಯೇ ಪೈಪೋಟಿ ಬೆಳೆಸಿಕೊಂಡು ಪ್ರತ್ಯೇಕ ಗೋಡೆ ಕಟ್ಟಿಕೊಂಡುಬಿಟ್ಟರೆ, ಆಸ್ಟ್ರೇಲಿಯಾವನ್ನು ಸೋಲಿಸುವುದಾದರೂ ಹೇಗೆ?

    ಒಂದು ತಂಡವೆಂದ ಮೇಲೆ ಅಲ್ಲಿ ನಾಯಕತ್ವ ಗುಣವುಳ್ಳವರು ಹಲವರಿರಬೇಕು. ಆದರೆ, ನಾಯಕ ಒಬ್ಬನೇ ಇರಬೇಕು. ಅವರೆಲ್ಲರ ಗುರಿ ಒಂದೇ ಆಗಿರಬೇಕು. ಪ್ರತೀ ಪಂದ್ಯ, ಆಯಾ ಸಂದರ್ಭಕ್ಕೆ ಅನುಗುಣವಾಗಿ ಪ್ರತಿಯೊಬ್ಬರ ಸಲಹೆ-ಸಹಕಾರಗಳು ನಾಯಕನಿಗೆ ಸಿಗುತ್ತಿರಬೇಕು. ಹಲವು ಉತ್ತಮ ಆಟಗಾರರಿಂದ ಓರ್ವ ಶ್ರೇಷ್ಠ ನಾಯಕ ರೂಪುಗೊಳ್ಳುವುದಿಲ್ಲ ಅಥವಾ ಓರ್ವ ಶ್ರೇಷ್ಠ ನಾಯಕನಿದ್ದ ಮಾತ್ರಕ್ಕೆ ಸಾಧಾರಣ ತಂಡ ಅತ್ಯುತ್ತಮವಾಗಿಬಿಡುವುದಿಲ್ಲ. ಪ್ರತಿಯೊಬ್ಬ ಆಟಗಾರನನ್ನು ಆತನ ಶಕ್ತ್ಯಾನುಸಾರ ಬಳಸಿಕೊಳ್ಳುವ ವಿವೇಚನೆ ನಾಯಕನಿಗಿರಬೇಕು. ನಾಯಕನ ಪ್ರತೀ ನಿರ್ಧಾರವನ್ನು ಬೆಂಬಲಿಸಿ, ಗುರಿಸಾಧನೆ ಮಾಡುವ ಬದ್ಧತೆ ಆಟಗಾರರಿಗಿರಬೇಕು. ಆಗ ಇಂಥ ವಿವಾದಗಳು ಉದ್ಭವವಾಗುವುದಿಲ್ಲ.

    ತೆಂಡುಲ್ಕರ್ ನಾಯಕತ್ವವನ್ನು ತಿರಸ್ಕರಿಸಿದ ಮೇಲೂ ಹತ್ತು-ಹನ್ನೆರಡು ವರ್ಷ ನಿರಾಳವಾಗಿ ಆಡಿದರು. ಸಾಧನೆಗಳ ಮೇಲೆ ಸಾಧನೆ ಪೋಣಿಸಿದರು. ಅದರಿಂದ ಭಾರತೀಯ ಕ್ರಿಕೆಟ್​ಗೆ ಲಾಭವಾಯಿತು. ಸ್ವತಃ ಸಚಿನ್ ವೃತ್ತಿಜೀವನ ದೀರ್ಘಕಾಲ ವಿಸ್ತರಿಸುವುದಕ್ಕೆ ಅನುಕೂಲವಾಯಿತು. ಉಳಿದವರೂ ಸಚಿನ್ ಮೇಲ್ಪಂಕ್ತಿಯನ್ನೇ ಅನುಸರಿಸಿ ಆಟದ ಕಡೆ ಗಮನ ಕೊಟ್ಟರೆ, ಅನಗತ್ಯ ವಿವಾದಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ಎಲ್ಲರಿಗೂ ಎಲ್ಲ ಅವಕಾಶಗಳು ಸಿಗುವುದು ಸಾಧ್ಯವಿಲ್ಲ. ರೋಹಿತ್ ಮುಂದೆ ಎಂದಾದರೂ ಟೀಮ್ ಇಂಡಿಯಾ ನಾಯಕರಾಗುತ್ತಾರೋ, ಇಲ್ಲವೋ ಅದು ವಿಧಿಲಿಖಿತ. ಆದರೆ, ರೋಹಿತ್ ಶರ್ಮ ಎಂಬ ಹಿಟ್​ವ್ಯಾನ್​ನ ಲಭ್ಯತೆಯಿಂದ ಭಾರತ ತಂಡ ವಂಚಿತವಾಗಬಾರದು. ಬ್ಯಾಟ್ಸ್​ಮನ್ ಆಗಿ ರೋಹಿತ್​ರ ಶ್ರೇಷ್ಠ ವರ್ಷಗಳು ಸಲ್ಲದ ವಿವಾದಗಳಿಂದಾಗಿ ಕಳೆದುಹೋಗಬಾರದು. ಅದಷ್ಟೇ ಅಭಿಮಾನದ ಕಳಕಳಿ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts