Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಸಾಧಕರ ಕಥೆಗಳಲ್ಲಿದೆ ಜೀವನದ ಪಾಠ

Wednesday, 17.05.2017, 3:05 AM       No Comments

ಪ್ರತಿಯೊಬ್ಬರ ಜೀವನದಲ್ಲೂ ಏನಾದರೊಂದು ಕಥೆ-ವ್ಯಥೆ ಇದ್ದೇ ಇರುತ್ತದೆ.

ದೊಡ್ಡವರು-ಚಿಕ್ಕವರು, ಸಾಧಕರು-ನಿಷ್ಪ್ರಯೋಜಕರು, ಗಣ್ಯರು- ಸಾಮಾನ್ಯರು, ಬಡವರು-ಸಿರಿವಂತರು… ಜಗತ್ತಿನಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಕಥೆ. ಕೆಲವರದು ದೊಡ್ಡ ಕಥೆಯಾದರೆ, ಹಲವರದು ಸಣ್ಣ ಕಥೆ. ಕೆಲವರ ಜೀವನದಲ್ಲಿ ಅಬ್ಬಾ, ಅದ್ಭುತ, ಪವಾಡ ಎನ್ನುವಂಥ ಸಂಗತಿಗಳಿರುತ್ತವೆ. ಯಾವುದೋ ಒಂದು ಸಂದರ್ಭ ಬಂದಾಗ ಈ ಕಥೆಗಳಿಗೆ ಮಾನವಾಸಕ್ತಿ ಕೆರಳಿಸುವಂಥ ಶಕ್ತಿ ಇರುತ್ತದೆ. ಆದರೂ, ವ್ಯಕ್ತಿ ಎತ್ತರಕ್ಕೆ ಬೆಳೆದಾಗ ಮಾತ್ರ ಆತನ ಬದುಕಿನ ಕಥೆಗೆ ಮಹತ್ವ. ಬೀದಿಯಲ್ಲಿ ಹೋಗುವ ಅನಾಮಿಕನಿಗಿಂತ ಬಿಎಂಡಬ್ಲ್ಯು ಕಾರಿನಲ್ಲಿ ಬಂದಿಳಿಯುವವನ ಬಗ್ಗೆ ಜನ ಕುತೂಹಲದಿಂದ ತಿಳಿದುಕೊಳ್ಳುತ್ತಾರೆ.

ಆದರೆ, ಒಂದಂತೂ ಸತ್ಯ. ಕಥೆಗಳಿಗೆ ಒಂದು ಪೀಳಿಗೆಯನ್ನು ಪ್ರಭಾವಿಸುವ ಶಕ್ತಿ ಇರುತ್ತದೆ. ಒಬ್ಬರ ಯಶಸ್ಸಿನ ಕಥೆ ಅನೇಕರಿಗೆ ಯಶಸ್ಸಿನ ದಾರಿ ತೋರಿಸುತ್ತದೆ. ಜನರಿಗೂ ಯಶಸ್ವಿ ವ್ಯಕ್ತಿಗಳ ವರ್ತಮಾನಕ್ಕಿಂತ ಅವರ ಪೂರ್ವಜೀವನದ ಬಗ್ಗೆಯೇ ಆಸಕ್ತಿ ಜಾಸ್ತಿ. ಸ್ಟೀವ್ ಜಾಬ್ಸ್ ಅಥವಾ ಚಾರ್ಲಿ ಚಾಪ್ಲಿನ್ ಅಥವಾ ಮಿಸ್ಟರ್ ಬೀನ್ ಜೀವನದ ಟರ್ನಿಂಗ್ ಪಾಯಿಂಟ್ ಬಗ್ಗೆ, ಅವರ ಕಷ್ಟದಿನಗಳ ಹ್ಯೂಮನ್ ಇಂಟರೆಸ್ಟ್ ಕಥೆಗಳ ಬಗ್ಗೆ ಜನರಿಗೆ ಹೆಚ್ಚು ಕುತೂಹಲ. ಭಾರತದಲ್ಲಿ ಲಕ್ಷಾಂತರ ಮಕ್ಕಳು ನಿತ್ಯ ಬೆಳಗಿನ ಜಾವ ಎದ್ದು ಕ್ರಿಕೆಟ್ ಅಭ್ಯಾಸದಲ್ಲಿ ತೊಡಗುತ್ತಾರೆ. ಆದರೆ, ಇವತ್ತಿಗೂ ಸಚಿನ್ ತೆಂಡುಲ್ಕರ್, ಕೋಚ್ ಅಚ್ರೇಕರ್ ನೀಡುತ್ತಿದ್ದ 1 ರೂ. ನಾಣ್ಯದ ಬಹುಮಾನಕ್ಕಾಗಿ ಯಾವ ರೀತಿ ಕಷ್ಟಪಡುತ್ತಿದ್ದರು ಎಂಬ ಕಥೆಯ ಬಗ್ಗೆಯೇ ಹೆಚ್ಚು ಆಸಕ್ತಿ. ಬೆಳಗಿನ ಜಾವ 4-5 ಗಂಟೆಗೇ ಎದ್ದು ಜಾಗಿಂಗ್, ಜಿಮ್ೆ ತೆರಳುವ ಲಕ್ಷಾಂತರ ಜನರಿದ್ದಾರೆ. ಆದರೂ, ವಿರಾಟ್ ಕೊಹ್ಲಿ ಬೆಳಗಿನ ಜಾವ 5ಕ್ಕೇ ಎದ್ದು ಪ್ರಾಕ್ಟೀಸ್ ಮಾಡುತ್ತಾರೆ ಎಂಬುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿರುತ್ತದೆ.

ಯಾರನ್ನೋ ಅನುಕರಿಸಿ ಜೀವನದಲ್ಲಿ ನಾವೇನೂ ಆಗುವುದು ಸಾಧ್ಯವಿಲ್ಲ. ನಮ್ಮ ಜೀವನದ ಯಶಸ್ಸಿಗೆ ನಾವೇ ಏನಾದರೂ ಮಾಡಬೇಕು, ಕಷ್ಟಪಡಬೇಕು. ನಮ್ಮ ಗುರಿ ಸಾಧನೆಗೆ ನಮ್ಮದೇ ದಾರಿಯಲ್ಲಿ ಆಗಬೇಕು. ಆದರೂ, ಸಾಧಕರ ಯಶೋಗಾಥೆಗಳಿಂದ ಪ್ರೇರಣೆ ದೊರಕುತ್ತದೆ. ಮನೋಬಲ ಹೆಚ್ಚಾಗುತ್ತದೆ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್​ಸ್ಟಾರ್ ಆದ ಕಥೆ, ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಗಾಡ್​ಫಾದರ್​ಗಳಿಲ್ಲದೆ ಏಕಾಂಗಿ ಹೋರಾಟ ನಡೆಸಿ ಸೂಪರ್​ಸ್ಟಾರ್​ಗಳಾದ ಅಮಿತಾಭ್ ಬಚ್ಚನ್, ಅಕ್ಷಯ್ಕುಮಾರ್, ಶಾರುಖ್ ಖಾನ್​ಗಳ ಕಥೆಗಳು ಜನರಿಗೆ ನಾವೂ ಅವರಂತೆ ಆಗಬಹುದು ಎಂಬ ಭರವಸೆ ಮೂಡಿಸುತ್ತದೆ. ಬಡಕುಟುಂಬದಲ್ಲಿ ಹುಟ್ಟಿ ಬೆಳೆದು, ಟಿಕೆಟ್ ಕಲೆಕ್ಟರ್ ಹುದ್ದೆಯಲ್ಲೇ ಕಳೆದುಹೋಗಬಹುದಾಗಿದ್ದ ಯುವಕನೊಬ್ಬ ಮಹೇಂದ್ರ ಸಿಂಗ್ ಧೋನಿಯಾಗಿ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆದ್ದುಕೊಟ್ಟ ಕಥೆ ಜನರಿಗೆ ಹೋರಾಟದ ಹಾದಿಯಲ್ಲಿ ದಾರಿದೀಪವಾಗುತ್ತದೆ.

ಯಾವುದೇ ಕ್ಷೇತ್ರವಿರಲಿ, ಯಶಸ್ವಿ ವ್ಯಕ್ತಿಗಳ ಆತ್ಮಕಥೆ ಓದುವುದರಿಂದ ಅನೇಕ ಲಾಭವಿದೆ. ಹಲವು ಬಾರಿ ಆತ್ಮಕಥೆಗಳಲ್ಲಿ ವ್ಯಕ್ತಿಯ, ವ್ಯಕ್ತಿತ್ವದ ವೈಭವೀಕರಣವಿರುತ್ತದೆ. ಸಕಾರಾತ್ಮಕ ಅಂಶಗಳಷ್ಟೇ ಉಲ್ಲೇಖಿತವಾಗಿರುತ್ತದೆ. ಉತ್ಪ್ರೇಕ್ಷಿತ ಅಂಶಗಳಿರುತ್ತವೆ. ಇದೆಲ್ಲದರ ಹೊರತಾಗಿಯೂ ಈ ಆತ್ಮಕಥೆಗಳು ಜೀವನದ ಅನೇಕ ರಹಸ್ಯಗಳಿಗೆ, ಸಮಸ್ಯೆಗಳಿಗೆ ಪರಿಹಾರದ ದಾರಿ ತೋರುತ್ತವೆ. ಒಬ್ಬ ವ್ಯಕ್ತಿಯ ಸಮಸ್ಯೆ ಎಲ್ಲರಿಗೂ ಇರಬೇಕೆಂದಿಲ್ಲ. ಒಬ್ಬರಿಗೆ ಅನ್ವಯವಾದ ಪರಿಹಾರ ಸೂತ್ರ ಎಲ್ಲರಿಗೂ ಮಾದರಿಯಾಗಬೇಕೆಂದಿಲ್ಲ. ಆದರೂ, ಸಮಸ್ಯೆ, ಸಂಕಷ್ಟಗಳ ಸಂದರ್ಭವನ್ನು ಅವರು ಎದುರಿಸಿದ ಬಗೆ, ಪ್ರವಾಹದ ವಿರುದ್ಧ ಈಜುವ ಛಾತಿಯನ್ನು, ಆತ್ಮಸ್ಥೈರ್ಯವನ್ನು ಈ ಕಥೆಗಳು ಬೆಳೆಸುತ್ತವೆ. ಇದೇ ಕಾರಣಕ್ಕೆ, ಅನೇಕರ ಕಥೆಗಳು, ವ್ಯಕ್ತಿಗತ ಸಾಹಸಗಳು ತರ್ಕರಹಿತವೆನಿಸಿದರೂ, ಕೆಲವರಿಗಾದರೂ ಪ್ರೇರಣಾದಾಯಿಯಾದರೆ, ಅದರಿಂದ ತಪ್ಪೇನಿಲ್ಲ.

13 ವರ್ಷದ ಯಾಸ್ಮಿನ್ ಅದೊಂದು ದಿನ ಶಾಲೆಯಿಂದ ಬರುವ ಹೊತ್ತಿಗೆ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿತ್ತು. ಕಿತ್ತುತಿನ್ನುವ ಬಡತನದ ನಡುವೆ ಮಗಳನ್ನು ಓದಿಸುವುದು ಅಸಾಧ್ಯ ಎಂದು ನಿಶ್ಚಯಿಸಿದ್ದ ಅಪ್ಪ, ಯಾಸ್ಮಿನ್ ಮದುವೆಯನ್ನು ಆಕೆಗಿಂತ 10 ವರ್ಷ ಹಿರಿಯ ವ್ಯಕ್ತಿಯೊಂದಿಗೆ ಮಾಡಿಬಿಟ್ಟಿದ್ದ. ಗಂಡನೆನಿಸಿಕೊಂಡಾತ ಕುಡುಕನಾಗಿದ್ದ, ಜೂಜುಕೋರನಾಗಿದ್ದ, ಎಲ್ಲಾ ದುರ್ಗಣಗಳನ್ನು ಮೈಗೂಡಿಸಿಕೊಂಡಿದ್ದ. ಮದುವೆಯಾಗಿ ಹದಿನೈದು ವರ್ಷ ಕಳೆಯುವ ಹೊತ್ತಿಗೆ ಯಾಸ್ಮಿನ್​ಗೆ ಮೂರು ಮಕ್ಕಳ ಜೊತೆಗೆ ಮೈತುಂಬ ಹೊಡೆದ, ಬಡಿದ, ಸುಟ್ಟ ಗಾಯದ ಕಲೆಗಳನ್ನು ದಯಪಾಲಿಸಿದ್ದ! ಅದೊಂದು ದಿನ ಯಾಸ್ಮಿನ್ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದವಳು, ಮರಳುವ ಹೊತ್ತಿಗೆ ಮನೆಯಲ್ಲಿ ಏನೋ ಆಗಬಾರದ್ದು ಆಗಿದೆ ಎಂಬ ವಾಸನೆ ಬಡಿದಿತ್ತು. ಅದಾದ ಕೆಲವು ದಿನಗಳಲ್ಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಗಂಡನನ್ನು ಪೊಲೀಸರು ಬಂಧಿಸಿದ್ದರು.

ಇದು ಯಾಸ್ಮಿನ್ ಜೀವನದ ಟರ್ನಿಂಗ್ ಪಾಯಿಂಟ್. ಆಕೆಯ ಒಂದು ಸುಳ್ಳು ಗಂಡನನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡುತ್ತಿತ್ತು. ಆದರೆ, ಸುಳ್ಳು ಹೇಳುವುದು ಆಕೆಗೆ ಇಷ್ಟವಿರಲಿಲ್ಲ. ಹಾಗಾಗಿ ಆಕೆ ಗಂಡನ ಕುಟುಂಬದವರ ಹಲ್ಲೆ, ಕೊಲೆ ಬೆದರಿಕೆ ಯಾವುದಕ್ಕೂ ಜಗ್ಗದೆ ಗಂಡನ ವಿರುದ್ಧ ಸಾಕ್ಷ್ಯ ನುಡಿದಳು. ತನ್ನ ಮೂವರು ಮಕ್ಕಳೊಂದಿಗೆ ಪ್ರತ್ಯೇಕ ಬದುಕು ಕಟ್ಟಿಕೊಂಡಳು. ಊರಿನ ಸರ್ಕಾರಿ ಶಾಲೆಯಲ್ಲಿ 250 ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಿ ಅನುಭವವಿದ್ದ ಯಾಸ್ಮಿನ್, ಸಣ್ಣಪುಟ್ಟ ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ಓದಿಸಿದಳು. ಅದೊಂದು ದಿನ ಟಿವಿಯಲ್ಲಿ ಜನಪ್ರಿಯ ಮಾಸ್ಟರ್​ಷೆಫ್ ಕಾರ್ಯಕ್ರಮದ ಜಾಹೀರಾತು ನೋಡಿ ನೋಂದಾಯಿಸಿಕೊಂಡ ಯಾಸ್ಮಿನ್, ಆಡಿಷನ್​ನಲ್ಲಿ ನಳಪಾಕದ ಮೂಲಕ ತೀರ್ಪಗಾರರ ಮೆಚ್ಚುಗೆ ಪಡೆದು ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಷ್ಟೇ ಅಲ್ಲ, ಫೈನಲ್​ವರೆಗೆ ಸಾಗಿ ಅಂತಿಮ ಐವರು ಅತ್ಯುತ್ತಮ ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದು ಬದುಕಿನ ದಿಕ್ಕನ್ನೇ ಬದಲಾಯಿಸಿತು. ಸದ್ಯ ಯಾಸ್ಮಿನ್ ದೇಶದ ಅತ್ಯುತ್ತಮ ಷೆಫ್(ಬಾಣಸಿಗ)ಗಳಲ್ಲೊಬ್ಬರು. ಎಲ್ಲಕ್ಕಿಂತ ಮುಖ್ಯವಾಗಿ ಸತ್ಯದ ಪರ ಹೋರಾಡಿ ಗೆದ್ದ ಅವರ ಕಥೆ ಎಲ್ಲರಿಗೂ ಪ್ರೇರಣೆ. ಸಾಮಾನ್ಯರು ಅಸಾಮಾನ್ಯರಾಗುವ ಇಂಥ ಅವಕಾಶಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲೊಂದು ಬಾರಿ ಎದುರಾಗಿರುತ್ತವೆ. ಆದರೆ, ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ವ್ಯಕ್ತಿತ್ವ ಹಾಗೂ ಜೀವನದ ದಿಕ್ಕನ್ನು ಬದಲಾಯಿಸಿಬಿಡುತ್ತದೆ.

ಸ್ತ್ರೀ-ಪುರುಷ ಲಿಂಗಾನುಪಾತದ ಅಸಮತೋಲನಕ್ಕೆ ಕುಖ್ಯಾತವಾದ ಹರ್ಯಾಣ ರಾಜ್ಯದ ಒಂದು ಹಳ್ಳಿ ಚಪ್ಪರ್. ಆ ಹಳ್ಳಿಯಲ್ಲಿ 1000 ಗಂಡುಗಳಿಗೆ ಇದ್ದ ಹೆಣ್ಣು ಮಕ್ಕಳ ಸಂಖ್ಯೆ 877. ಅಲ್ಲಿ ಹೆಂಗಸರು ಘೂಂಘಟ್ (ಅವಕುಂಠನ) ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿರಲಿಲ್ಲ. ಪುರುಷಪ್ರಧಾನ ವ್ಯವಸ್ಥೆಯ ಎಲ್ಲ ಕಟ್ಟುಪಾಡುಗಳು ಆಚರಣೆಯಲ್ಲಿದ್ದ ಹಳ್ಳಿ ಅದು. ಆದರೆ, ಅಲ್ಲೂ ಬದಲಾವಣೆಯ ಪರ್ವ ಕಾಣಿಸಿಕೊಂಡಿತು. ನೀಲಂ ಎಂಬ 31 ವರ್ಷದ ಗೃಹಿಣಿ ಅಕಸ್ಮಾತ್ ಆಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ (ಸರಪಂಚ್) ಆಗುವ ಅವಕಾಶ ಬಳಸಿಕೊಂಡು, ಹಳ್ಳಿಯಲ್ಲಿ ಬದಲಾವಣೆ ತಂದಳು. ಹೆಣ್ಣು ಭ್ರೂಣಹತ್ಯೆ ವಿರುದ್ಧ ಜಾಗೃತಿ ಮೂಡಿಸಿದಳು. ಮಹಿಳೆಯರೂ ಮನುಷ್ಯರು ಎಂಬ ಸಾಮಾಜಿಕ ಬದಲಾವಣೆಗೆ ಕಾರಣಳಾದಳು. ಸದ್ಯ ಅಲ್ಲಿ ಯಾವ ಕುಟುಂಬದಲ್ಲಿ ಹೆಣ್ಣು ಶಿಶು ಹುಟ್ಟಿದರೂ, ಊರಿಗೆ ಊರೇ ಸಂಭ್ರಮಿಸುವ ವಾತಾವರಣವಿದೆ.

ಯಾವುದೇ ಬದಲಾವಣೆ ಮೊದಲ ಹೆಜ್ಜೆಯಿಂದ ಶುರುವಾಗುತ್ತದೆ. ಹಾಗಾಗಿ ಯಾರೋ ಶುರುಮಾಡಲಿ, ಮತ್ತಾರೋ ಬೆಂಬಲಿಸಲಿ, ಸೂಕ್ತ ಸಮಯ ಬರಲಿ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ರಾಹುಲ್ ದ್ರಾವಿಡ್ ಜೂನಿಯರ್ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ವಿವಿಧ ಲೀಗ್​ಗಳ ಫಲಿತಾಂಶದ ಸ್ಕೋರ್ ಪಟ್ಟಿಯನ್ನು ಸ್ವತಃ ಪತ್ರಿಕಾ ಕಚೇರಿಗಳಿಗೆ ತೆರಳಿ ಕೊಟ್ಟುಬರುತ್ತಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲಾ ಎದ್ದು 5 ಗಂಟೆಗೆ ಕ್ರಿಕೆಟ್ ಮೈದಾನ ತಲುಪಿ ಅಭ್ಯಾಸ ಆರಂಭಿಸುತ್ತಿದ್ದರು. ಎಂಥ ಸಂದರ್ಭದಲ್ಲೂ ಅವರು ನಿತ್ಯದ ಅಭ್ಯಾಸವನ್ನು ತಪ್ಪಿಸುತ್ತಿರಲಿಲ್ಲ. ದ್ರಾವಿಡ್ ಯಶಸ್ವಿ ಕ್ರಿಕೆಟಿಗ ಆಗಿದ್ದು ಹೇಗೆ ಎಂಬುದನ್ನು ವಿವರಿಸುವ ಅವರ ಆತ್ಮಕಥೆ ಓದುವುದರಿಂದ ನಮಗೆ ಅವರ ಅಭ್ಯಾಸ ಕ್ರಮದ ಜೊತೆಗೆ, ಕ್ರಿಕೆಟಿಗ ಆಗಬಯಸುವವ ಯಾವ ರೀತಿ ಶಿಸ್ತು, ಸಂಯಮ, ಏಕಾಗ್ರತೆ, ಪ್ರಯತ್ನಶೀಲತೆ, ಸೋಲಿನಿಂದ ಧೃತಿಗೆಡದ, ಯಶಸ್ಸಿನಿಂದ ಮೈಮರೆಯದ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎನ್ನುವುದನ್ನು ಕಲಿಸುತ್ತದೆ.

ಹೀಗೆ ಪ್ರತಿಯೊಬ್ಬರ ಜೀವನದ ಕಥೆಯಲ್ಲೂ ಕಲಿಯುವವರಿಗೆ ನೂರಾರು ಪಾಠಗಳಿರುತ್ತವೆ. ಆದರೆ, ನಮ್ಮ ಕಥೆ ಯಾವುದು ಎಂದು ನಿರ್ಧರಿಸುವವರು ನಾವೇ…

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top