Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಬಿಸಿಸಿಐ ದುಡಿಮೆಗೆ ಐಸಿಸಿ ಯಜಮಾನಿಕೆ…

Wednesday, 10.05.2017, 3:00 AM       No Comments

ವಿಶ್ವಸಂಸ್ಥೆಯಲ್ಲಿ ಅಮೆರಿಕ ಹೊಂದಿರುವಷ್ಟೇ ಪ್ರಭಾವವನ್ನು ವಿಶ್ವ ಕ್ರಿಕೆಟ್​ನಲ್ಲಿ ಭಾರತ ಹೊಂದಿದೆ. ಭಾರತವನ್ನು ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಎಂದು ಕರೆಯುವುದು ಖಂಡಿತಾ ತಪ್ಪಲ್ಲ…

ಕೆಲವು ವರ್ಷಗಳ ಹಿಂದೆ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದ ಮಾತಿದು. ‘ಕ್ರಿಕೆಟ್ ಜಾಗತಿಕ ಮಾರುಕಟ್ಟೆ ಹೊಂದಿದೆ ಎನ್ನುವುದೆಲ್ಲಾ ಸುಳ್ಳು. ಕ್ರಿಕೆಟ್​ಗೆ ಮಾರ್ಕೆಟ್ ಇರುವುದು ಭಾರತದಲ್ಲಿ ಮಾತ್ರ’ ಎಂದು ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದು ನಿಜವೂ ಹೌದು. 1987ರಲ್ಲಿ ಮೊಟ್ಟಮೊದಲ ಬಾರಿ ಇಂಗ್ಲೆಂಡ್​ನಿಂದ ಹೊರಗೆ ಅಂದರೆ ಭಾರತ-ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆದಾಗ ಇದ್ದ ಏಕೈಕ ಸ್ಪಾನ್ಸರ್ ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ. 1986ರಲ್ಲಿ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದ್ದ ರಿಲಯನ್ಸ್ ಐಸಿಸಿಗೆ ಆಗ 10 ಲಕ್ಷ ಡಾಲರ್ ಹಣ ನೀಡಿತ್ತು. ಸದ್ಯ ಐಸಿಸಿಯ ಯಾವುದೇ ಟೂರ್ನಿಗೆ ಹತ್ತಾರು ಪ್ರಾಯೋಜಕರಿರುತ್ತಾರೆ. ಅವರೆಲ್ಲರೂ ಆಗ ರಿಲಯನ್ಸ್ ನೀಡಿದ್ದಕ್ಕಿಂತ ನೂರಾರು ಪಟ್ಟು ಹೆಚ್ಚು ಹಣ ತೆತ್ತು ಪ್ರಾಯೋಜಕತ್ವ ಹಕ್ಕು ಖರೀದಿಸಿರುತ್ತಾರೆ. ಈ ಪ್ರಾಯೋಜಕರು ಬಹುತೇಕ ಭಾರತೀಯರೇ ಆಗಿರುತ್ತಾರೆ. ಐಸಿಸಿ ಸದ್ಯ ಗಳಿಸುತ್ತಿರುವ ಪ್ರತೀ 10 ರೂ. ಹಣದಲ್ಲಿ 9 ರೂ. ಭಾರತದಿಂದಲೇ ಬರುತ್ತಿದೆ ಎನ್ನುವುದು ಒಂದು ಲೆಕ್ಕಾಚಾರ. ಇಷ್ಟೆಲ್ಲಾ ಇದ್ದೂ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಸಿಐ ಶಕ್ತಿ ಕುಗ್ಗಿಸುವ, ಏಕಾಂಗಿಯಾಗಿಸುವ, ಅಧಿಕಾರ, ಪ್ರಭಾವ ಮೊಟಕುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಸಮಾನತೆಯ ಹೆಸರಿನಲ್ಲಿ ಹಕ್ಕು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ.

ಇತ್ತೀಚೆಗೆ ನಡೆದ ಐಸಿಸಿಯ ಮಹತ್ವದ ಸಭೆಯೊಂದರಲ್ಲಿ ಸದಸ್ಯ ದೇಶಗಳಿಗೆ ಆದಾಯ ಹಂಚಿಕೆಯ ನಿರ್ಣಯ ಅಂಗೀಕರಿಸಲಾಯಿತು. ಅದರ ಪ್ರಕಾರ, ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿದ್ದ ಬಿಗ್-3 ಮಾದರಿ ಕೈಬಿಟ್ಟು, ‘ಆಸ್ಟ್ರೇಲಿಯಾ-ಬಾಂಗ್ಲಾದೇಶ ಎಲ್ಲರೂ ಒಂದೇ ಎನ್ನುವ ಸರ್ವ ಸಮಾನತೆ’ಯ ಹೊಸ ಲಾಭ ಹಂಚಿಕೆ ಮಾದರಿ ಮೊರೆ ಹೋಗಲಾಯಿತು. ಅದರ ಪರಿಣಾಮ 2023ರವರೆಗೆ ಬಿಸಿಸಿಐ ಐಸಿಸಿಯಿಂದ 293 ದಶಲಕ್ಷ ಡಾಲರ್ ಹಣ ಮಾತ್ರ ಪಡೆಯಲಿದೆ. ಬಿಗ್-3 ಸೂತ್ರದ ಪ್ರಕಾರ ಸಿಗಬೇಕಿದ್ದ 570 ದಶಲಕ್ಷ ಡಾಲರ್ ಹಣದ ಅರ್ಧದಷ್ಟಕ್ಕೆ ಬಿಸಿಸಿಐ ಅಸಹಾಯಕವಾಗಿ ಒಪ್ಪಿಕೊಳ್ಳುವಂತಾಯಿತು. ಅಂದರೆ ಭಾರತಕ್ಕೆ ಈ ಏಳು ವರ್ಷಗಳ ಅವಧಿಯಲ್ಲಿ ಸುಮಾರು 2700 ಕೋಟಿ ರೂ. ನಷ್ಟವಾಗಲಿದೆ. ಇನ್ನು ಐಸಿಸಿ ಸಭೆಯಲ್ಲಿ ಶ್ರೀಲಂಕಾ ಬಿಟ್ಟರೆ ಬೇರೆ ಯಾರಿಂದಲೂ ಭಾರತಕ್ಕೆ ಬೆಂಬಲ ಸಿಗಲಿಲ್ಲ. ಬಿಸಿಸಿಐನಿಂದ ನಿರಂತರವಾಗಿ ವಿವಿಧ ರೂಪದಲ್ಲಿ ಸಹಾಯ ಪಡೆಯುತ್ತಿರುವ ವೆಸ್ಟ್ ಇಂಡೀಸ್, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದಂಥ ಕ್ರಿಕೆಟ್ ಮಂಡಳಿಗಳೂ ಕೈಕೊಟ್ಟವು.

ಐಸಿಸಿಯಲ್ಲಾದ ಮುಖಭಂಗಕ್ಕೆ ಪ್ರತಿಯಾಗಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯುವ ಬಿಸಿಸಿಐ ಇರಾದೆಯೂ ಫಲಿಸಲಿಲ್ಲ. ಹಿಂದೆಲ್ಲ ಯಾವುದೇ ಒಂದು ಟೂರ್ನಿ ಅಥವಾ ದ್ವಿಪಕ್ಷೀಯ ಸರಣಿ ಭಾರತ ತಂಡದ ಲಭ್ಯತೆಯ ಖಾತರಿಯಿಲ್ಲದೆ ಆಯೋಜನೆಗೊಳ್ಳುತ್ತಿರಲಿಲ್ಲ. ಆದರೆ, ಬಿಸಿಸಿಐನ ಈ ನಿಲುವಿಗೆ ಐಸಿಸಿ ಹಾಗೂ ವಿಶ್ವ ರಾಷ್ಟ್ರಗಳು ಕ್ಯಾರೇ ಅನ್ನಲಿಲ್ಲ. ಸುಪ್ರೀಂ ಕೋರ್ಟ್​ನಲ್ಲಿರುವ ಪ್ರಕರಣಗಳು, ಲೋಧಾ ಸಮಿತಿ ಶಿಫಾರಸು ಹಾಗೂ ಆಡಳಿತಾಧಿಕಾರಿಗಳ ಸಮಿತಿ ಬಿಗಿಮುಷ್ಟಿಯಲ್ಲಿ ಸಿಲುಕಿ ಬಿಸಿಸಿಐ ತನ್ನೆಲ್ಲ ವರ್ಚಸ್ಸು, ಪ್ರಭಾವ ಕಳೆದುಕೊಂಡುಬಿಟ್ಟಿರುವುದು ಅದಕ್ಕೆ ಕಾರಣ.

ಹಾಗೆಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಆಡಬಾರದು ಎಂದೇನಲ್ಲ. ಒಂದು ಮಹತ್ವದ ಟೂರ್ನಿಯಿಂದ ಹೊರಗುಳಿಯುವುದೆಂದರೆ, ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ವಂಚಿಸಿದಂತೆ. ಆದರೂ, ಎಂದೋ ಚರಮಗೀತೆ ಹಾಡಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಈ ಬಾರಿ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವುದಕ್ಕೂ ಭಾರತ ಹಾಗೂ ಇಲ್ಲಿನ ಹಣವೇ ಕಾರಣ. ಕಳೆದ ಬಾರಿಯದೇ ಕೊನೆಯ ಟೂರ್ನಿ ಎಂದು ಐಸಿಸಿ ಘೊಷಣೆ ಮಾಡಿತ್ತಾದರೂ, ಭಾರತ ಚಾಂಪಿಯನ್ ಪಟ್ಟಕ್ಕೇರಿದ್ದರಿಂದಾಗಿ ಐಸಿಸಿಗೆ ಅಪಾರ ಲಾಭ ಬಂದಿತ್ತು. ಹಾಗಾಗಿ ಐಸಿಸಿಯ ನಿರ್ಧಾರ ಬದಲಾಗಿ ಟೂರ್ನಿ ಮುಂದುವರಿಯುವಂತಾಗಿತ್ತು. ಹಾಗಿರುವಾಗ ಭಾರತ ಹಾಗೂ ಬಿಸಿಸಿಐ ಭಾವನೆಗೆ ಬೆಲೆ ಸಿಗುತ್ತಿಲ್ಲ ಎನ್ನುವುದಷ್ಟೇ ಬೇಸರಕ್ಕೆ ಕಾರಣ.

ಆಗುವುದೆಲ್ಲ ಒಳ್ಳೆಯದಕ್ಕೇ. 1990ರ ದಶಕದಿಂದ ಸಂಪತ್ತಿನ ಸುಪ್ಪತ್ತಿಗೆಯ ಮೇಲೆ ಮೈಮರೆತಿದ್ದ ಬಿಸಿಸಿಐ ಅನ್ನು ನೆಲಕ್ಕಿಳಿಸುವ ಕೆಲಸವನ್ನು ಲೋಧಾ ಸಮಿತಿ ಹಾಗೂ ಸುಪ್ರೀಂ ಕೋರ್ಟ್ ಮಾಡಿವೆ. ಮಾಹಿತಿ ಹಕ್ಕು ಕಾಯ್ದೆಯಡಿ ಸ್ವಾಯತ್ತ ಬಿಸಿಸಿಐ ಅನ್ನು ತರಬೇಕೆಂಬ ಅಹವಾಲಿನೊಂದಿಗೆ ಆರಂಭವಾದ ಪ್ರಕ್ರಿಯೆ ಇಂದು ಬಿಸಿಸಿಐ ತನ್ನ ಎಲ್ಲಾ ಅಧಿಕಾರವನ್ನು ಸುಪ್ರಿಂ ಕೋರ್ಟ್ ನಿಯುಕ್ತ ಆಡಳಿತಾಧಿಕಾರಿಗಳ ಸಮಿತಿ ಕೈಗೆ ಒಪ್ಪಿಸಿ ‘ಗೃಹಬಂಧನ’ ಅನುಭವಿಸುವ ಮಟ್ಟಕ್ಕೆ ಬಂದಿದೆ. ಕ್ರಿಕೆಟ್ ಶುದ್ಧೀಕರಣದ ದೃಷ್ಟಿಯಿಂದ ಇಂಥ ಖಡಕ್ ಕ್ರಮದ ಅಗತ್ಯವಿತ್ತು. ಉದ್ಯಮಿಗಳು, ರಾಜಕಾರಣಿಗಳ ಹಿಡಿತದಿಂದ ಪಾರು ಮಾಡಿ ವೃತ್ತಿಪರರ ಕೈಗೆ ಕ್ರಿಕೆಟ್ ಮಂಡಳಿ ಆಡಳಿತಾಧಿಕಾರ ವಹಿಸುವ ದೃಷ್ಟಿಯಿಂದ ನ್ಯಾಯಾಲಯ ತೆಗೆದುಕೊಳ್ಳುತ್ತಿರುವ ತೀರ್ವನಗಳು ಸ್ವಾಗತಾರ್ಹವೇ. ಆದರೂ, ಪಾರದರ್ಶಕತೆ, ಶಿಸ್ತುಪಾಲನೆಯ ಹೆಸರಲ್ಲಿ ಅತಿರೇಕಗಳೂ ನಡೆಯುತ್ತಿವೆಯೇ ಎಂಬ ಅನುಮಾನಗಳೂ ಬರುತ್ತಿವೆ. ಇದಕ್ಕೆ ಕಾರಣಗಳು ಹಲವು. ಮುಖ್ಯವಾಗಿ ಜಾಗತಿಕವಾಗಿ ಬಿಸಿಸಿಐ ತನ್ನ ವರ್ಚಸ್ಸು ಕಳೆದುಕೊಂಡು ಏಕಾಂಗಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ ಭಾರತದ ಶಶಾಂಕ್ ಮನೋಹರ್ ಅಧ್ಯಕ್ಷರಾಗಿದ್ದರೂ, ಅವರ ‘ಗಾಂಧಿವಾದ’ ಬಿಸಿಸಿಐಗೆ ಮುಳುವಾಗಿದೆ. ಐಸಿಸಿಯ ಕೊಪ್ಪರಿಗೆ ತುಂಬಿಸುವ ಬಿಸಿಸಿಐನ ಒಬ್ಬ ಪ್ರತಿನಿಧಿಯೂ ಸದ್ಯ ಐಸಿಸಿಯ ಹಣಕಾಸು ಸಮಿತಿಯಲ್ಲಿಲ್ಲ. ಇನ್ನು ಮಂಡಳಿ ಆಡಳಿತದ ವಿಚಾರದಲ್ಲೂ ಬ್ಯಾಂಕ್ ವಹಿವಾಟುಗಳ ಮೇಲಿನ ನಿರ್ಬಂಧದಿಂದಾಗಿ ಬಿಸಿಸಿಐ ಒಂದೊಂದು ಪಂದ್ಯ ಸಂಘಟಿಸಲೂ ಪರದಾಡುವಂತಾಗಿದೆ. ಐಪಿಎಲ್​ಗೆ ಮುನ್ನ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆತಿಥ್ಯ ವಹಿಸಲು, ವಿವಿಧ ಭತ್ಯೆಗಳನ್ನೂ ನೀಡುವುದಕ್ಕೂ ಹಣವಿಲ್ಲದೆ ಬಿಸಿಸಿಐ ಮುಜುಗರ ಅನುಭವಿಸಿತ್ತು. ಭಾರತದ ಕ್ರಿಕೆಟಿಗರಿಗೆ ಕಳೆದ ಆರು ತಿಂಗಳಿಂದ ಪಂದ್ಯಗಳ ಸಂಭಾವನೆ ಸಂದಾಯವಾಗಿಲ್ಲ ಎಂಬ ಮಾತಿದೆ. ರಾಜ್ಯ ಸಂಸ್ಥೆಗಳಿಗೆ ಮಂಡಳಿಯ ವಾರ್ಷಿಕ ಅನುದಾನಗಳು ನಿಂತುಹೋಗಿವೆ. ಬಿಸಿಸಿಐ ಪ್ರಮಾದಗಳಿಗೆ ಚುಚ್ಚುಮದ್ದು ಕೊಡುವ ಜತೆಗೆ ನ್ಯಾಯಾಲಯ ಆಡಳಿತಾಧಿಕಾರಿಗಳ ಮೂಲಕ ಸ್ವತಃ ಕ್ರಿಕೆಟ್ ಆಡಳಿತ ನಡೆಸಲು ಮುಂದಾಗಿದೆಯೇ ಎಂಬ ಭಾವನೆಯೂ ಜನರಲ್ಲಿ ಮೂಡಿದೆ. ಲೋಧಾ ಸಮಿತಿ ಶಿಫಾರಸುಗಳ ಬಗ್ಗೆ ಬಿಸಿಸಿಐಗೆ ತಕರಾರು, ಗೊಂದಲಗಳಿದ್ದಲ್ಲಿ ಅದನ್ನು ತುರ್ತಾಗಿ ಪರಿಹರಿಸಿ ಎಲ್ಲಾ ರಾಜ್ಯ ಸಂಸ್ಥೆಗಳು ಹಾಗೂ ಬಿಸಿಸಿಐನಲ್ಲಿ ಅದರ ಅಳವಡಿಕೆ ಆಗುವಂತೆ ಮಾಡಬೇಕಿದೆ. ನಂತರ ಶೀಘ್ರ ಚುನಾವಣೆ ನಡೆಸಿ ಹೊಸ ಪದಾಧಿಕಾರಿಗಳ ಸಮಿತಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಹಂಗಾಮಿ ವ್ಯವಸ್ಥೆಯೇ ಕಾಯಂ ಆಗಿ, ನ್ಯಾಯಾಲಯದ ಇತರ ಪ್ರಕರಣಗಳಂತೆ ಬಿಸಿಸಿಐ ಪ್ರಕರಣವೂ ಪಂಚವಾರ್ಷಿಕ, ದಶವಾರ್ಷಿಕ ಯೋಜನೆಯಾಗಿಬಿಟ್ಟರೆ, ಅಷ್ಟರಲ್ಲಿ ಭಾರತೀಯ ಕ್ರಿಕೆಟ್ ಸಂಪೂರ್ಣವಾಗಿ ನೆಲಕಚ್ಚುವುದರಲ್ಲಿ ಅನುಮಾನವಿಲ್ಲ.

ಭಾರತದ ಕ್ರೀಡಾವಲಯದಲ್ಲಿ ಅತೀ ಹೆಚ್ಚು ಅಶಿಸ್ತು, ಅವ್ಯವಹಾರ, ಅಪಾರದರ್ಶಕತೆ, ನಿಯಮ ಉಲ್ಲಂಘನೆಗಳು ನಡೆಯುತ್ತಿರುವುದು ಒಲಿಂಪಿಕ್ಸ್ ಸಂಸ್ಥೆ ಅಡಿಯಲ್ಲಿ ಬರುವ ಇತರ ಕ್ರೀಡಾ ಒಕ್ಕೂಟಗಳಲ್ಲಿ. ಬಿಸಿಸಿಐನಲ್ಲಿ ತರಲು ಹೊರಟಿರುವ ಎಲ್ಲಾ ಸುಧಾರಣಾ ಕ್ರಮಗಳನ್ನು ಮೊದಲನೆಯದಾಗಿ ಆ ಒಕ್ಕೂಟಗಳಲ್ಲಿ ತರಬೇಕಿತ್ತು. ಒಲಿಂಪಿಕ್ಸ್​ನಂಥ ಕ್ರೀಡಾಕೂಟಗಳಲ್ಲಿ ಪದಕ ಬರ ಅನುಭವಿಸುತ್ತಿರುವ ಭಾರತ, ಕ್ರೀಡಾ ಒಕ್ಕೂಟಗಳ ಆಡಳಿತ, ಆಟದ ಗುಣಮಟ್ಟಕ್ಕೆ ತುರ್ತಾಗಿ ಚುಚ್ಚುಮದ್ದು ನೀಡುವ ಅವಶ್ಯಕತೆ ಇದೆ. ರಾಷ್ಟ್ರೀಯ ಕ್ರೀಡಾನೀತಿ ಜಾರಿಗೆ ತಂದು ಒಕ್ಕೂಟಗಳಲ್ಲಿ ಶಿಸ್ತು ತರುವ ಪ್ರಸ್ತಾವ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಅಲ್ಲಿ ಇಪ್ಪತ್ತು ಮೂವತ್ತು ವರ್ಷಗಳಿಂದ ರಾಜಕಾರಣಿಗಳು, ಉದ್ಯಮಿಗಳೇ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ. ಆದರೆ, ಅಷ್ಟೊಂದು ಗಂಭೀರ ಸಮಸ್ಯೆಗಳಿರದ ಬಿಸಿಸಿಐ ಮಾತ್ರಕೋರ್ಟ್​ನ ಕಟ್ಟಳೆಗಳಲ್ಲಿ ಸಿಲುಕಿದೆ. ಬಿಸಿಸಿಐನ ಸಂಪತ್ತು ಹಾಗೂ ಉಳಿದ ಕ್ರೀಡಾ ಒಕ್ಕೂಟಗಳ ಆರ್ಥಿಕ ದಾರಿದ್ರ್ಯ ಇದಕ್ಕೆ ಕಾರಣವಾಗಿರಬಹುದೇ ಎಂಬುದೂ ಜನಸಾಮಾನ್ಯರ ಪ್ರಶ್ನೆಯಾಗಿದೆ.

ಬಿಸಿಸಿಐನ ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಜಗಮೋಹನ್ ದಾಲ್ಮಿಯಾ ಇರಬೇಕಿತ್ತು. ಏಕೆಂದರೆ, ಮಂಡಳಿಗೆ ಸದ್ಯದ ಗಂಡಾಂತರದಿಂದ ಪಾರುಮಾಡಬಲ್ಲ ದಿಟ್ಟ ನಾಯಕತ್ವದ ಸಮಸ್ಯೆ ಕಾಡುತ್ತಿದೆ. ಪ್ರಳಯದ ನಂತರದ ಹೊಸ ಸೃಷ್ಟಿಯಂತೆ ಬಿಸಿಸಿಐ ಅನುಭವಿಸುತ್ತಿರುವ ಸಾಡೇಸಾತಿ ಮುಂದೊಂದುದಿನ ಕೊನೆಗೊಂಡಾಗ ಹೊಸ ಆಡಳಿತ ಮಂಡಳಿ ಹೊಸ ದಿಕ್ಕು-ದಾರಿ ತೋರಿಸಬಹುದು. ಅಲ್ಲಿಯವರೆಗಿನ ಕಷ್ಟಕೋಟಲೆಗಳ ಪರಿಣಾಮ ತಂಡದ ಪ್ರದರ್ಶನದ ಮೇಲೆ ಆಗದಿದ್ದರೆ ಸಾಕು. ಕಳೆದ ಹದಿನೆಂಟು ತಿಂಗಳಿಂದ ತವರಿನಲ್ಲಿ ಸತತ ಸರಣಿಗಳನ್ನು ಗೆದ್ದಿರುವ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲೂ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡಲ್ಲಿ ನೋವಿನಲ್ಲೂ ಖುಷಿ ಪಡುವುದಕ್ಕೊಂದು ಗಟ್ಟಿ ಕಾರಣ ಸಿಕ್ಕಂತಾಗುತ್ತದೆ.

Leave a Reply

Your email address will not be published. Required fields are marked *

Back To Top