Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಒಪ್ಪವಳಿಸುವ ಮುಪ್ಪನ್ನು ಒಪ್ಪುವುದೆ ಒಳಿತು

Sunday, 30.04.2017, 3:05 AM       No Comments

ಮುಪ್ಪು ಒಂದು ವಾಸ್ತವ. ಬಾಲ್ಯ, ಯೌವನಗಳಿಗೆ ಮಾತ್ರವಲ್ಲ, ಮುಪ್ಪಿಗೂ ಒಂದು ಚೆಲುವಿದೆ, ಘನತೆಯಿದೆ ಎಂಬುದನ್ನು ಅರಿತಾಗ ಮುಪ್ಪು ಸಹಜವಾಗಿಯೇ ಸಹನೀಯವಾಗುತ್ತದೆ. ಯೌವನ ಪಡೆಯಲು ಹಂಬಲಿಸಿದರೆ, ಮುಪ್ಪಿಗೆ ನೀಡುವುದರಲ್ಲೇ ಸಂತೋಷ. ಯೌವನವು ಮುಪ್ಪಿನ ಅನುಭವ ಜಗತ್ತನ್ನು, ಅದರಿಂದಲೇ ಪಡೆದ ವಿವೇಕವನ್ನು ಗೌರವದಿಂದ ಸ್ವೀಕರಿಸುವುದು ಸಾಧ್ಯವಾಗಬೇಕು.

 ಸಾಮಾನ್ಯವಾಗಿ ನಮ್ಮಲ್ಲಿ ಬಾಲ್ಯ, ಯೌವನದ ವರ್ಣನೆ ಸಹಜ. ಅಷ್ಟಾದಶ ವರ್ಣನೆಗಳಲ್ಲಿ ಇವೂ ಸೇರಿವೆ. ಹೀಗಾಗಿ ನಮ್ಮ ಕವಿಗಳು ಬಾಲ್ಯ, ಯೌವನವನ್ನು ಅನಿವಾರ್ಯವೆಂಬಂತೆ ವರ್ಣಿಸಿದ್ದಾರೆ. ಜತೆಗೆ ಅವು ಚೆಲುವಿನ ತಾಣಗಳು. ಚೆಲುವನ್ನು ವರ್ಣಿಸುವುದು ಉತ್ಸಾಹದಾಯಕ. ಆದರೆ ಕುರೂಪದ ವರ್ಣನೆ ನಮ್ಮಲ್ಲಿ ಹೆಚ್ಚು ಕಾಣಿಸುವುದಿಲ್ಲ. ನನಗೆ ನೆನಪಿರುವಂತೆ ‘ಯಶೋಧರ ಚರಿತೆ’ಯಲ್ಲಿ ಬರುವ ಅಷ್ಟಾವಂಕನ ವರ್ಣನೆ, ಕನಕದಾಸರ ‘ನಳಚರಿತೆ’ಯಲ್ಲಿ ಬರುವ ನಳ ರೂಪಾಂತರಗೊಂಡಾಗಿನ ವರ್ಣನೆ ಬಿಟ್ಟರೆ ಕುರೂಪದ ವರ್ಣನೆ ಅಪರೂಪ. ಮಂಥರೆಯನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಚೆಲುವಿನ ವರ್ಣನೆಗೆ ನಿದರ್ಶನ ಬೇಕೆ? ಎಲ್ಲ ಕಡೆ ಧಾರಾಳ ಸಿಗುತ್ತದೆ. ನಮ್ಮಲ್ಲಿ ಮುಪ್ಪಿನ ವರ್ಣನೆಯೂ ಅತ್ಯಂತ ವಿರಳ.

ಬಸವಣ್ಣನ ವಚನವೊಂದರಲ್ಲಿ ಮುಪ್ಪಿನ ವರ್ಣನೆಯಿದೆ- ‘ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರಗೂಡುವೋಗದ ಮುನ್ನ | ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ | ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ | ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ | ಪೂಜಿಸು ನಮ್ಮ ಕೂಡಲಸಂಗಮದೇವನ’. ಮತ್ತೊಂದು ಮುಪ್ಪಿನ ವರ್ಣನೆ ಹರಿಹರನ ‘ನಂಬಿಯಣ್ಣನ ರಗಳೆ’ಯಲ್ಲಿ ಬರುತ್ತದೆ. ಅಲ್ಲಿ ಶಿವ ವೃದ್ಧ ಮಾಹೇಶ್ವರನ ವೇಷಧರಿಸಿ ಬರುತ್ತಾನೆ- ‘ಕಯ್ಯ ಕೊಡೆಯಿಂ ಮಯ್ಯ ತೆರೆಯಿಂ ಜೋಲ್ವ ಪುರ್ವಿಂ ನೇಲ್ವ ತೋಳ ತೊವಲಿಂ ಇಟ್ಟ ವಿಭೂತಿಯಿಂ ಊರಿದ ಯಷ್ಟಿಯ ಕೋಲಿಂ ಪಿಡಿದ ಕಮಂಡಲದಿಂದಿಳಿದ ಬೆಳುಗಡ್ಡದಿಂ ನಡುಗುವ ನರೆದಲೆಯಿಂ ನರೆತು ಸಡಿಲ್ವ ಸರ್ವಾಂಗದಿಂ ಪುಣ್ಯಂ ಪಣ್ಣಾದಂತೆ…’

ನಟನೆ ಸುಂದರ, ವಾಸ್ತವ ಕಠೋರ: ಈ ಎರಡೂ ಕಡೆ ದೇಹ ತನ್ನ ಸೌಷ್ಠವವನ್ನು ಕಳೆದುಕೊಳ್ಳುತ್ತಿರುವ ಚಿತ್ರವಿದೆ. ದೇಹ ತನ್ನ ಶಕ್ತಿಯನ್ನು ಕಳೆದುಕೊಂಡು ದುರ್ಬಲವಾಗುವುದು ಮುಪ್ಪಿನ ಸ್ಥಿತಿ. ಬಸವಣ್ಣನ ವಚನದಲ್ಲಿ ಆ ವಿಷಾದವಿದೆ. ಕೂದಲು ನರೆತು, ಚರ್ಮ ಸುಕ್ಕುಗಟ್ಟಿ, ಹಲ್ಲು ಬಿದ್ದು, ಬೆನ್ನು ಬಾಗಿ, ಸ್ವಸಾಮರ್ಥ್ಯವಿಲ್ಲದೆ ಕೋಲುಹಿಡಿದು ಅನ್ಯರ ಆಶ್ರಯ ಬಯಸುವ ಮೊದಲು ಕೂಡಲಸಂಗಮನನ್ನು ಪೂಜಿಸು ಎಂಬುದು ಅಲ್ಲಿಯ ಭಾವ. ಮೃತ್ಯು ಹತ್ತಿರವಾಗಿರುವ ಸೂಚನೆ ಅಲ್ಲಿದೆ. ಹರಿಹರನಲ್ಲಿಯೂ ಮುಪ್ಪಿನ ವರ್ಣನೆ ಅದೇ ರೀತಿ ಇದ್ದರೂ ಭಾವ ಬೇರೆ. ಇಲ್ಲಿ ಪುಣ್ಯ ಹಣ್ಣಾದಂತೆ ಮುಪ್ಪುಬಂದಿದೆ ಎನ್ನುವಾಗ ವಿಷಾದವಿಲ್ಲ, ಮಾಗಿದ ಮನಃಸ್ಥಿತಿಯನ್ನು ಇದು ಸೂಚಿಸುತ್ತದೆ. ಅದಕ್ಕೆ ಕಾರಣವೂ ಇದೆ. ಇದು ಶಿವನ ಮುಪ್ಪು, ಜತೆಗೆ ಇದು ವೇಷ, ನಿಜವಲ್ಲ. ನಟನೆ ಯಾವಾಗಲೂ ಸುಂದರ. ವಾಸ್ತವ ಕಠೋರ.

ಇದು ದೇಹ ಮನಸ್ಸುಗಳ ಸಂಬಂಧವೂ ಹೌದು. ಉತ್ಸಾಹ ಇದ್ದಾಗ ವಿವೇಕ ಇರುವುದಿಲ್ಲ, ವಿವೇಕ ಬರುವ ವೇಳೆಗೆ ಉತ್ಸಾಹ ಮಾಯವಾಗಿ ಬಿಡುತ್ತದೆ ಎಂಬ ಮಾತಿದೆ. ಇದೂ ಸಹ ದೇಹ ಮನಸ್ಸುಗಳ ಬಗ್ಗೆಯೇ ಹೇಳುವಂಥದು. ಯೌವನ ಉತ್ಸಾಹದ ಚಿಲುಮೆ. ವೃದ್ಧಾಪ್ಯ ವಿವೇಕದ ಮೂರ್ತರೂಪ. ಇದೇನೂ ನಿಯಮವಲ್ಲ. ರೂಢಿಯ ಮಾತಷ್ಟೆ. ಯೌವನದಲ್ಲಿ ವಿವೇಕವೂ, ಮುಪ್ಪಿನಲ್ಲಿ ಉತ್ಸಾಹವೂ ಇರಬಾರದೆಂದೇನಿಲ್ಲ. ಆದರೆ ದೇಹ ಮನಸ್ಸುಗಳ ಹೊಂದಾಣಿಕೆ ಸುಲಭವಲ್ಲ ಎಂದಷ್ಟೇ ಇದರ ತಾತ್ಪರ್ಯ. ಯೌವನವಾಗಲೀ ಮುಪ್ಪಾಗಲೀ ಅದೊಂದು ಮನಃಸ್ಥಿತಿ ಎಂದು ಹೇಳುತ್ತಾರೆ. ಇದು ಅರ್ಧಸತ್ಯ. ದೇಹದ ಅಸ್ತಿತ್ವವನ್ನು ಅಲ್ಲಗಳೆಯಲಾದೀತೆ?

ಮುಪ್ಪನ್ನೂ ಸ್ವೀಕರಿಸಬೇಕು: ನಾವು ಬಾಲ್ಯ ಯೌವನಗಳನ್ನು ಸಂಭ್ರಮಿಸುವ ಹಾಗೆ ಮುಪ್ಪನ್ನು ಸ್ವೀಕರಿಸುವುದಿಲ್ಲ. ‘ಹುಣಸೇ ಮರಕ್ಕೆ ಮುಪ್ಪು ಬರಬಹುದು ಆದರೆ ಹುಳಿಗೆ ಮುಪ್ಪೇ?’ ಎಂಬ ಗಾದೆಮಾತೇ ಇದೆಯಲ್ಲ! ಮುಪ್ಪನ್ನು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸುತ್ತದೆ. ಈಗಂತೂ ದೇಹದ ಮುಪ್ಪಿನ ಲಕ್ಷಣಗಳನ್ನು ಮರೆಮಾಚಲು ಏನೆಲ್ಲ ಪ್ರಯತ್ನ ಮಾಡುತ್ತೇವೆ. ನರೆಗೆ ಕಪ್ಪುಬಣ್ಣ, ತೆರೆಗೆ ಮಸಾಜ್, ವೇಷಭೂಷಣದಲ್ಲೂ ಯೌವನದ ಸೊಬಗು ಇತ್ಯಾದಿ… ಆದರೆ ದೇಹದ ಶಕ್ತಿ ಕುಗ್ಗುವುದನ್ನು ತಡೆಯಲಾದೀತೇ? ಪು.ತಿ. ನರಸಿಂಹಾಚಾರ್ ಅವರು ಹೇಳುತ್ತಿದ್ದರು- ‘ಮುಪ್ಪನ್ನು ನಾವು ಒಪ್ಪಿಕೊಳ್ಳಬೇಕಪ್ಪಾ! ದೇವರು ತಾನು ಕೊಟ್ಟಿರುವ ಒಂದೊಂದೇ ಅಂಗಾಂಗಗಳನ್ನು ಕ್ರಮೇಣ ಹಿಂತಿರುಗಿ ಪಡೆದುಕೊಳ್ಳುತ್ತಾನೆ. ಕಣ್ಣು ಕೊಟ್ಟಿದ್ದ, ಈಗ ನನ್ನ ಕಣ್ಣು ಸರಿ ಕಾಣಿಸುವುದಿಲ್ಲ, ಹರಿ ತಾನು ಕೊಟ್ಟಿದ್ದನ್ನು ಮತ್ತೆ ಹಿಂತಿರುಗಿ ತೆಗೆದುಕೊಂಡಿದ್ದಾನೆ. ಕಿವಿಯ ಸ್ಥಿತಿ ಸ್ವಲ್ಪ ಪರವಾಗಿಲ್ಲ, ಅದನ್ನೂ ಯಾವಾಗ ತೆಗೆದುಕೊಳ್ಳುತ್ತಾನೋ! ನಾಲಗೆಯ ಚಪಲ ಮಾತ್ರ ಜಾಸ್ತಿ ಮಾಡಿದ್ದಾನೆ. ನಿಯಂತ್ರಿಸಿಕೊಳ್ಳಬೇಕು. ಅದೇನೂ ಒಳ್ಳೆಯದಲ್ಲ. ಏನು ಮಾಡುವುದು, ಎಲ್ಲಾ ಅವನಿಚ್ಛೆ!’. ಇದು ಮುಪ್ಪನ್ನು ಸಮಾಧಾನವಾಗಿ ಸ್ವೀಕರಿಸುವ ಒಂದು ಮಾದರಿ. ಆದರೆ ಎಲ್ಲರೂ ಪು.ತಿ.ನ. ಅಲ್ಲವಲ್ಲ!

ಮುಪ್ಪಿನ ಸಮಸ್ಯೆಯ ಒಂದು ನೆಲೆ- ನೋಡನೋಡುತ್ತಿದ್ದಂತೆ ದೇಹದ ಶಕ್ತಿ ಕುಗ್ಗಿ ದುರ್ಬಲವಾಗುವುದು. ದಿನನಿತ್ಯದ ನಮ್ಮ ಚಟುವಟಿಕೆಗಳಲ್ಲಿ ದೇಹದ ಪಾತ್ರ ಅತ್ಯಂತ ಮಹತ್ವದ್ದು. ಮುಪ್ಪಿನಲ್ಲಿ ಅಂಗಾಂಗಗಳು ಕ್ರಮೇಣ ತಮ್ಮ ದೃಢತೆ ಕಳೆದುಕೊಂಡು ನಿಸ್ತೇಜವಾಗುತ್ತವೆ. ಇದು ಅನೇಕ ಸಮಸ್ಯೆಗಳಿಗೆ ಹಾದಿಮಾಡಿಕೊಡುತ್ತದೆ. ಸಾಮಾನ್ಯ ಸಹಜ ಸಂಗತಿಗಳಿಗೂ ಮತ್ತೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಈ ಅವಲಂಬನೆಯ ಬದುಕು ಅಸಹನೀಯವೆನ್ನಿಸತೊಡಗುತ್ತದೆ. ದೇಹದ ದೃಢತೆಯನ್ನು ಕಾಯ್ದು ಕೊಳ್ಳುವುದೆ ಒಂದು ಸವಾಲಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಹಾದಿಯಾಗುತ್ತದೆ. ತಾಳಿಕೊಳ್ಳುವ ಶಕ್ತಿ ಕಡಿಮೆಯಾದಂತೆ ಅನಾರೋಗ್ಯಕ್ಕೆ ಅವಕಾಶ ಅಧಿಕವಾಗುತ್ತದೆ. ಇಂದ್ರಿಯಗಳು ತಮ್ಮ ಪಟುತ್ವ ಕಳೆದುಕೊಳ್ಳುವುದರಿಂದ ಅವುಗಳಿಂದಲೇ ಪಡೆಯಬಹುದಾದ ಸುಖಗಳಿಂದ ವಂಚಿತವಾದ ಬದುಕು ನಿಸ್ಸಾರವೆನ್ನಿಸತೊಡಗುತ್ತದೆ.

ಚಿಗುರಿಗೆ ಅವಕಾಶ ಕಲ್ಪಿಸಬೇಕು: ಮುಪ್ಪಿನ ಮತ್ತೊಂದು ನೆಲೆ ಮನಸ್ಸಿಗೆ ಸಂಬಂಧಿಸಿದ್ದು- ನಮ್ಮನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವ ಆವರಿಸುತ್ತದೆ. ಕುಟುಂಬದಲ್ಲಾಗಲೀ, ಸಂಘಟನೆಯಲ್ಲಾಗಲೀ, ದೇಶದಲ್ಲಾಗಲೀ ಬದಲಾವಣೆ ತೀರಾ ಸಹಜ. ಹೊಸ ತಲೆಮಾರು ಬಂದಾಗ ಹಳೆಯ ತಲೆಮಾರು ಅದಕ್ಕೆ ಅವಕಾಶ ಮಾಡಿಕೊಟ್ಟು ಹಿಂದೆ ಸರಿಯಬೇಕು. ಹಣ್ಣೆಲೆ ಉದುರಿ ಚಿಗುರಿಗೆ ಅವಕಾಶ ಕಲ್ಪಿಸಬೇಕು. ಆ ಚಿಗುರೂ ಕ್ರಮೇಣ ಹಣ್ಣಾಗುತ್ತದೆ. ಇದು- ಪ್ರಕೃತಿ ನಿಯಮ. ಆದರೆ ಮಾನವ ಜಗತ್ತಿನಲ್ಲಿ ಈ ಹಸ್ತಾಂತರ ಅಷ್ಟು ಸುಲಭವಲ್ಲ. ಅಧಿಕಾರದ ಮೋಹವೇ ಹಾಗೆ. ಮುಪ್ಪಿನ ಮೂರು ಮಾದರಿಗಳನ್ನು ನಾವು ಗಮನಿಸಬಹುದು.

ನನ್ನ ಗೆಳೆಯನೊಬ್ಬ ಮನೆಯಲ್ಲಿ ಎಲ್ಲ ಕೆಲಸವನ್ನೂ ತಾನೇ ಮಾಡುತ್ತಿದ್ದ. ತನ್ನಿಂದಲೇ ಸಂಸಾರ ಸಾಗುತ್ತಿದೆ ಎಂಬ ಅಹಂ ಸಹಜವಾಗಿಯೇ ಅವನಲ್ಲಿತ್ತು. ಈಗ ಅವನ ಮಕ್ಕಳು ದೊಡ್ಡವರಾಗಿದ್ದಾರೆ. ದುಡಿಯುತ್ತಿದ್ದಾರೆ. ಅಪ್ಪನಿಗಿಂತಲೂ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಈಗ ಅಪ್ಪ ಆರಾಮವಾಗಿರಲಿ ಎಂಬುದು ಮಕ್ಕಳ ಅಪೇಕ್ಷೆ. ಸಂಸಾರದ ಎಲ್ಲ ಜವಾಬ್ದಾರಿಯನ್ನೂ ತಾವೇ ವಹಿಸಿಕೊಂಡಿದ್ದಾರೆ. ಕೆಲವೊಮ್ಮೆ ಅಪ್ಪನ ಸಲಹೆ ಕೇಳುತ್ತಾರೆ. ಮತ್ತೆ ಕೆಲವೊಮ್ಮೆ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೆ ಕಾರಣವೂ ಇದೆ. ಬದಲಾದ ಕಾಲಮಾನದಲ್ಲಿ ಹಳೆಯ ತಲೆಮಾರಿಗೆ ಸೇರಿದ ಅಪ್ಪನ ಆಲೋಚನೆಗಳು ಹೊಂದುವುದಿಲ್ಲ. ಹೀಗಾಗಿ ಅಪ್ಪನನ್ನು ಕೇಳುವುದಿಲ್ಲ. ಇದರಿಂದಾಗಿ ನನ್ನ ಗೆಳೆಯನಿಗೆ ಸಿಟ್ಟು. ಮಾತುಮಾತಿಗೆ ಸಿಡುಕು. ಜತೆಗೆ ಈತ ಮೊದಲಿನಿಂದಲೂ ಮಕ್ಕಳಿಗೆ ಸಲುಗೆ ಕೊಟ್ಟರೆ ಹಾಳಾಗುತ್ತಾರೆ ಎಂದು ನಂಬಿ ಮಕ್ಕಳ ಜತೆ ಗಂಭೀರವಾಗಿದ್ದವನು. ಈಗಲೂ ಅದೇ ಸ್ವಭಾವ. ಹೀಗಾಗಿ ಮಕ್ಕಳು ಅವನ ಜತೆ ಹೆಚ್ಚು ಮಾತನಾಡುವುದಿಲ್ಲ. ಬದಲಿಗೆ ಅವರ ಅಮ್ಮನ ಜತೆ ಸಮಯ ಸಿಕ್ಕಾಗಲೆಲ್ಲ ಹರಟುತ್ತಿರುತ್ತಾರೆ. ಇವನೊಂದು ರೀತಿ ಏಕಾಂಗಿ. ಮನೆಯಲ್ಲಿ ಎಲ್ಲರೂ ತನ್ನನ್ನು ಕಡೆಗಣಿಸಿದ್ದಾರೆ ಎಂದು ಅವನ ಆರೋಪ. ಹೆಂಡತಿಯೂ ಮಕ್ಕಳ ಪರ ಎಂದು ಅಧಿಕ ಸಿಟ್ಟು. ನಾನು ಮಕ್ಕಳಿಗೆ ಹೇಳಿದೆ- ಸೌಜನ್ಯಕ್ಕಾದರೂ ಸಲಹೆ ಕೇಳಿ, ಅವನನ್ನೂ ಒಳಗೊಳ್ಳಿ. ಮಕ್ಕಳ ಉತ್ತರ- ‘ಸಲಹೆ ಕೇಳಬಹುದು ಅಂಕಲ್, ಆದರೆ ಅವರ ಸಲಹೆಗಳು ಅನೇಕ ಸಲ ಕಾರ್ಯಸಾಧುವಲ್ಲ, ಸಲಹೆ ಕೇಳಿ ಅನುಸರಿಸದಿದ್ದರೆ ಅವರಿಗೆ ಮತ್ತಷ್ಟು ಸಿಟ್ಟು, ತಮ್ಮ ಮಾತು ಕೇಳುವುದಿಲ್ಲ ಅಂತ. ಕೇಳಿದರೆ ಆ ಕೆಲಸವೇ ಆಗುವುದಿಲ್ಲ. ಏನು ಮಾಡಬೇಕು ನೀವೇ ಹೇಳಿ. ಆದ್ದರಿಂದ ನಾವು ಅವರ ಸಲಹೆ ಕೇಳುತ್ತಿಲ್ಲ. ಅವರ ಬಗ್ಗೆ ನಮಗೆ ಗೌರವವಿಲ್ಲವೇ?’. ಮಕ್ಕಳ ಮಾತುಗಳೂ ನಿಜವೆನ್ನಿಸಿತು. ಗೆಳೆಯನಿಗೆ ನಾನು ವಿವರಿಸಲು ಪ್ರಯತ್ನಿಸಿದೆ. ನಾನೂ ಮಕ್ಕಳ ಪರ ಎಂದು ಅವನಿಗೀಗ ನನ್ನ ಮೇಲೂ ಸಿಟ್ಟು. ನನ್ನಿಂದಲೂ ದೂರ. ಮತ್ತಷ್ಟು ಏಕಾಂಗಿ. ಹೆಚ್ಚಾದ ಸಿಡುಕು.

ಹೊಂದಾಣಿಕೆಯ ಚಿತ್ತಸ್ಥಿತಿ: ನನ್ನ ಹಿರಿಯ ಗೆಳೆಯರೊಬ್ಬರು ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದಾರೆ. ವೃತ್ತಿಯಿಂದ ಮಾತ್ರವಲ್ಲ, ಕೌಟುಂಬಿಕ ಜವಾಬ್ದಾರಿಗಳಿಂದಲೂ ಅವರು ಒಂದು ರೀತಿ ನಿವೃತ್ತರು. ಮನೆಯ ಎಲ್ಲ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ ಸ್ವತಂತ್ರರಾಗಿದ್ದಾರೆ. ಒಂದು ರೀತಿ ನಿರ್ಲಿಪ್ತರು. ಯಾವ ವಿಚಾರದಲ್ಲೂ ಮೂಗು ತೂರಿಸುವುದಿಲ್ಲ. ಏನಾದರೂ ಸಲಹೆ ಕೇಳಿದರೆ ನೀಡುತ್ತಾರೆ. ಅದನ್ನು ಪಾಲಿಸಲೇಬೇಕೆಂದಿಲ್ಲ. ಇಲ್ಲವೇ ತಮ್ಮ ಪಾಡಿಗೆ ತಾವು ಸುಮ್ಮನಿರುತ್ತಾರೆ. ಯಾವ ಸಂಗತಿಗಳಲ್ಲೂ ಈಗ ಅವರಿಗೆ ಆಯ್ಕೆಯಾಗಲೀ, ಆಸಕ್ತಿಯಾಗಲೀ ಇಲ್ಲ. ಪಡೆದಷ್ಟರಲ್ಲಿ ತೃಪ್ತಿ. ಅವರಿಂದ ಕುಟುಂಬದಲ್ಲಿ ಯಾರಿಗೂ ಕಿರಿಕಿರಿಯಿಲ್ಲ. ಅವರಿಗೂ ಬದುಕು ಅಸಹನೀಯವೆನ್ನಿಸಿಲ್ಲ. ಕುಟುಂಬದವರೂ ಅವರ ಅಗತ್ಯಗಳನ್ನು ಅರ್ಥಮಾಡಿಕೊಂಡು ಪೂರೈಸುತ್ತಾರೆ. ನಿಸ್ಸಂಗತ್ವವೇ ಅವರಿಗೆ ಬದುಕನ್ನು ಸಹನೀಯವಾಗಿಸಿದೆ. ಕಾಲ ಕಳೆಯಲು ಅವರು ತಮ್ಮದೇ ಮಾರ್ಗ ಕಂಡುಕೊಂಡಿದ್ದಾರೆ. ಮೌನಧ್ಯಾನವೂ ಅದರಲ್ಲೊಂದು.

ನನ್ನ ದೊಡ್ಡಮ್ಮ ಚಿಕ್ಕಂದಿನಲ್ಲೇ ಗಂಡನನ್ನು ಕಳೆದುಕೊಂಡವರು. ನಮ್ಮ ಮನೆಯಲ್ಲೇ ಇದ್ದಾರೆ. ಒಂದು ರೀತಿಯಲ್ಲಿ ನಮ್ಮ ಮನೆಯ ಎಲ್ಲ ಜವಾಬ್ದಾರಿಯನ್ನೂ ಹೊತ್ತವರು. ಅವರ ಮಾತೆಂದರೆ ಎಲ್ಲರಿಗೂ ವೇದವಾಕ್ಯ. ಸಂಪ್ರದಾಯದ ಪರಿಸರದಲ್ಲಿ ಬೆಳೆದು ಬಂದವರು. ಈಗ ಇಳಿವಯಸ್ಸು. ಮೊದಲಿನ ಶಕ್ತಿ ಉತ್ಸಾಹಗಳಿಲ್ಲ. ಸುಮ್ಮನೆ ತಮ್ಮ ಪಾಡಿಗೆ ತಾವಿರಬೇಕಾದ ಸ್ಥಿತಿ. ಆದರೂ ನಿರಂತರ ಚಟುವಟಿಕೆಯ ಜೀವ. ಈಗಲೂ ಒಂದು ನಿಮಿಷವೂ ಸುಮ್ಮನಿರುವುದಿಲ್ಲ. ಏನಾದರೂ ಕೆಲಸ ಮಾಡುತ್ತಿರುತ್ತಾರೆ. ಆದರೆ ಅದು ಸಹಜೀವಿಗಳ ಅಗತ್ಯಕ್ಕೆ ಪೂರಕವಾಗಿರುತ್ತದೆ. ಅಧಿಕಾರ ಚಲಾವಣೆಯ ಲವಲೇಶ ಅಂಶವೂ ಇಲ್ಲ. ಹೀಗಾಗಿ ಅವರು ಎಲ್ಲರಿಗೂ ಬೇಕು, ಅವರ ಆರೋಗ್ಯವೂ ಚಂದ ಇದೆ. ಕಾಲಕ್ಕೆ, ಅಗತ್ಯಕ್ಕೆ ತಕ್ಕಂತೆ ಬದಲಾಗಿದ್ದಾರೆ. ಗೊಜ್ಜು ಹುಳಿಗಳಿಂದ ಆರಂಭವಾದ ಅವರ ಬದುಕು ಈಗ ಪಿಜ್ಜಾ-ಬರ್ಗರ್​ವರೆಗೂ ಬಂದಿದೆ. ಹಳ್ಳಿಗೆ ಹೋಗಿ ಉಪ್ಸಾರು ಮುದ್ದೆ ತಿನ್ನುವಂತೆಯೇ ಮೊಮ್ಮಕ್ಕಳ ಜತೆ ಪಿಜ್ಜಾ ಸಹ ತಿಂದು ಆನಂದಿಸುತ್ತಾರೆ. ನನ್ನ ಮಗಳು ಹೇಳುತ್ತಾಳೆ- ಅಜ್ಜಿಗೆ ಜೀನ್ಸ್ ಕೊಡಿಸಿದರೆ ಹೇಗೆ? ಅದಕ್ಕೂ ಅವರು ಸಿದ್ಧರಿರುವಂತೆ ತೋರುತ್ತದೆ. ನಾವೇ ಮನಸ್ಸು ಮಾಡಿಲ್ಲ. ಇವರಿಗೆ ಮುಪ್ಪು ಬಂದಿದೆ ಎಂದೇ ಅನ್ನಿಸುತ್ತಿಲ್ಲ.

ಮುಪ್ಪಿಗೂ ಒಂದು ಚೆಲುವಿದೆ: ಮುಪ್ಪು ಒಂದು ವಾಸ್ತವ. ದೈಹಿಕ ಬದಲಾವಣೆಗಳು ತೀರಾ ಸಹಜ. ಆದರೆ ಅದಕ್ಕೂ ಒಂದು ಚೆಲುವಿದೆ. ನಾನು ನೋಡಿದ ಅತ್ಯಂತ ಚೆಲುವೆ ನನ್ನಮ್ಮ. ಅದೂ ಅವರ ಇಳಿವಯಸ್ಸಿನಲ್ಲಿ. ನಾಚಿಕೊಳ್ಳುವ ಮುದುಕಿಯೂ ಸುಂದರಿ ಎಂದು ಅನಂತಮೂರ್ತಿ ಒಮ್ಮೆ ಹೇಳಿದ್ದು ನೆನಪಾಗುತ್ತಿದೆ. ಈಗ ನಮ್ಮ ಸಮಾಜ ನಾಚಿಕೆಯನ್ನೇ ಕಳೆದುಕೊಂಡುಬಿಟ್ಟಿದೆ. ಸಮಾಜದ ವಿಕೃತಿಗೆ ಇದೂ ಒಂದು ಪ್ರಮುಖ ಕಾರಣ. ನಾಚಿಕೆ ಒಂದು ಸಾಮಾಜಿಕ ಮೌಲ್ಯ. ಅದು ಹೆಣ್ಣಿಗೆ ಮಾತ್ರವಲ್ಲ, ಎಲ್ಲರಿಗೂ ಅಗತ್ಯ ಇರಬೇಕಾದಂಥದು. ವ್ಯಕಿಗಳಿರಲಿ ಸಮಾಜವೆ ನಾಚಿಕೆ ಕಳೆದುಕೊಂಡದ್ದು ನಮ್ಮ ಕಾಲದ ದುರಂತ. ಸ್ನಾನಮಾಡಿ, ತುದಿಗಂಟು ಹಾಕಿ, ಹೊಳಪು ಕಂಗಳಿಂದ ಹಾಡು ಹಾಡಿಕೊಳ್ಳುತ್ತಾ, ತುಳಸಿಗೆ ನಮಸ್ಕಾರ ಮಾಡುತ್ತಿದ್ದಾಗ ನನ್ನಮ್ಮನನ್ನು ನೋಡುವುದರಲ್ಲೇ ಒಂದು ಚಂದವಿತ್ತು. ಅದರಲ್ಲೂ ಅವರು ನನ್ನ ಅಪ್ಪನ ಬಗ್ಗೆ ಹೇಳುವಾಗಲಂತೂ ಅವರ ಸುಕ್ಕು ಕದಪೂ ಕೆಂಪಾಗಿ ಮತ್ತಷ್ಟು ಚೆಲುವಾಗಿ ಕಾಣುತ್ತಿದ್ದರು. ನನ್ನ ಅಮ್ಮ ಅವರು ನಂಬಿದ ದೇವರಲ್ಲಿ ಸದಾ ಪ್ರಾರ್ಥಿಸುತ್ತಿದ್ದರು- ‘ದೇವರೇ, ಸುಖದ ಸಾವು ಕೊಡು, ನನ್ನಿಂದ ಯಾರಿಗೂ ತೊಂದರೆಯಾಗುವುದು ಬೇಡ’. ಒಂದು ಹಬ್ಬದ ಸಂಜೆ , ಹೊಸ ಸೀರೆಯುಟ್ಟು, ತಮಗೊಪ್ಪುವ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಪಕ್ಕದ ಮನೆಯ ದೇವರ ಅಲಂಕಾರ ನೋಡಲು ಹೊರಟವರು ಮೆಟ್ಟಿಲು ಹತ್ತುತ್ತಾ ಕುಸಿದುಬಿದ್ದರು.

ಮುಪ್ಪು ಸಹಜಸಾವನ್ನು ಹಂಬಲಿಸುತ್ತದೆ. ಆದರೆ ಸಾವು ನಮ್ಮಿಷ್ಟವೇ? ಬದುಕಿರಬೇಕಲ್ಲ! ಬದುಕಿರುವವರೆಗೆ ಅದನ್ನು ಸಹನೀಯ ಮಾಡಿಕೊಳ್ಳುವುದು ನಿಜಕ್ಕೂ ಸವಾಲು. ಅದು ಸಾಧ್ಯವಾಗುವುದು ನಮ್ಮ ಮನೋಭಾವದಲ್ಲಿ ಬದಲಾವಣೆಯನ್ನು ಒಪ್ಪಿ ಸ್ವೀಕರಿಸಿದಾಗ. ರೂಢಿಸಿಕೊಂಡ ಅಹಂಭಾವವನ್ನು ಬಿಟ್ಟುಕೊಡಲು ಸಾಧ್ಯವಾದಾಗ. ಬಾಲ್ಯ, ಯೌವನಗಳಿಗೆ ಮಾತ್ರವಲ್ಲ, ಮುಪ್ಪಿಗೂ ಒಂದು ಚೆಲುವಿದೆ, ಘನತೆಯಿದೆ ಎಂದು ಅರಿತಾಗ ಮುಪ್ಪು ಸಹಜವಾಗಿಯೇ ಸಹನೀಯವಾಗುತ್ತದೆ. ಯೌವನ ಪಡೆಯಲು ಹಂಬಲಿಸುತ್ತಿರುತ್ತದೆ, ಮುಪ್ಪಿಗೆ ನೀಡುವುದರಲ್ಲಿ ಸಂತೋಷವಿದೆ. ಮುಪ್ಪು ಅನುಭವದ ಕಣಜ. ಯೌವನ ಮುಪ್ಪಿನ ಅನುಭವ ಜಗತ್ತನ್ನು, ಅದರಿಂದಲೇ ಪಡೆದ ವಿವೇಕವನ್ನು ಗೌರವದಿಂದ ಸ್ವೀಕರಿಸುವುದು ಸಾಧ್ಯವಾಗಬೇಕು.

ಬಹಳ ಹಿಂದಿನ ಒಂದು ಘಟನೆ- ವಾತ್ಸ್ಯಾಯನನ ಕಾಮಸೂತ್ರದ ಕನ್ನಡ ಅನುವಾದದ ಬಿಡುಗಡೆ ಸಮಾರಂಭ. ರಾಶಿ (ಡಾ. ಎಂ. ಶಿವರಾಂ) ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಅವರದೂ ಆಗ ಇಳಿವಯಸ್ಸು. ‘ವಯಸ್ಸಾಗುತ್ತಿದ್ದಂತೆ ಚಪಲ ಜಾಸ್ತಿಯಾಗುತ್ತದೆ’ ಎಂದರು. ಕಾಮಸೂತ್ರದ ಸಂದರ್ಭವಾದ್ದರಿಂದ ಎಲ್ಲರೂ ‘ಹೋ’ ಎಂದು ನಕ್ಕರು. ಒಂದು ನಿಮಿಷ ಸುಮ್ಮನಿದ್ದ ರಾಶಿ ನಿಧಾನವಾಗಿ, ‘ವಯಸ್ಸಾದ ಈ ಮುದುಕನಿಗೆ ಚಿಕ್ಕವರೆಲ್ಲ ಚೆನ್ನಾಗಿರಲಿ ಎಂಬ ಚಪಲ’ ಎಂದರು. ಸಭೆ ಸ್ತಬ್ಧವಾಯಿತು. ಇದು ಮುಪ್ಪಿನ ಚೆಲುವು, ಘನತೆ.

Leave a Reply

Your email address will not be published. Required fields are marked *

Back To Top