Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಒಂದೇ ಒಂದು ಕ್ಷಣ ಈ ಬಗ್ಗೆ ಚಿಂತಿಸಬಾರದೇ….?

Sunday, 14.05.2017, 3:00 AM       No Comments

ಆಹಾರವನ್ನು ವ್ಯರ್ಥಮಾಡಬಾರದು ಎಂಬುದು ಒಂದು ಕಾಲಕ್ಕೆ ನಮ್ಮ ಜೀವನವಿಧಾನವಾಗಿತ್ತು, ಅಲಿಖಿತ ನಿಯಮವಾಗಿತ್ತು. ಆದರೀಗ, ಊಟದೆಲೆಯಲ್ಲಿ ಆಹಾರ ಬಿಡುವುದು ಪ್ರತಿಷ್ಠೆಯ, ನಾಗರಿಕತೆಯ ಲಕ್ಷಣವಾಗಿಬಿಟ್ಟಿರುವುದು ವಿಪರ್ಯಾಸ. ಹೀಗೆ ವ್ಯರ್ಥವಾಗುವ ಆಹಾರಪದಾರ್ಥಗಳು ಕಸದತೊಟ್ಟಿ ಸೇರುವ ಬದಲು ಹಸಿದ ಹೊಟ್ಟೆಗಳನ್ನು ತಣಿಸುವಂತಾಗುವುದು ಉಚಿತವಲ್ಲವೇ?

ಇತ್ತೀಚೆಗೆ ಸುದ್ದಿಯೊಂದನ್ನು ಓದಿದೆ- ಬೆಂಗಳೂರಿನ ಕಲ್ಯಾಣ ಮಂಟಪಗಳಲ್ಲಿ ವರ್ಷಕ್ಕೆ ಸುಮಾರು 500 ಕೋಟಿ ರೂ. ಮೌಲ್ಯದ ಆಹಾರ ಪದಾರ್ಥಗಳು ವ್ಯರ್ಥವಾಗುತ್ತವೆ ಎಂದು ಆಹಾರತಜ್ಞರು ಅಂದಾಜುಮಾಡಿದ್ದಾರೆ (ವಿಜಯವಾಣಿ, ಮೇ. 6). ನಾವು ಅನೇಕ ಸುದ್ದಿಗಳನ್ನು ಓದಿ ಮರೆಯುತ್ತೇವೆ. ನಮಗೆ ಪತ್ರಿಕೆಯೂ ಒಂದು ಮನರಂಜನೆಯ ಸಾಧನ. ನಮ್ಮ ಮಾಧ್ಯಮ ಮಿತ್ರರೂ ಅನೇಕ ವೇಳೆ ಸುದ್ದಿಯನ್ನು ರಂಜಕವಾಗಿಯೇ ವರದಿ ಮಾಡುತ್ತಾರೆ. ಆದರೆ ಇಂಥ ಸುದ್ದಿಗಳು ಓದಿ ಮರೆಯುವಂಥವಲ್ಲ.

ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ: ಇಡೀ ಇಂಗ್ಲೆಂಡ್ ಪ್ರತಿನಿತ್ಯ ಸೇವಿಸುವಷ್ಟು ಆಹಾರ ಪದಾರ್ಥವನ್ನು ಇಂಡಿಯಾದಲ್ಲಿ ನಾವು ಪ್ರತಿನಿತ್ಯ ವ್ಯರ್ಥಮಾಡುತ್ತಿದ್ದೇವೆ. ಅಂದರೆ ನಾವು ವ್ಯರ್ಥಮಾಡುತ್ತಿರುವ ಆಹಾರವನ್ನು ಉಳಿಸಿದರೆ ಇಂಗ್ಲೆಂಡ್​ನಂತಹ ಒಂದು ದೇಶವನ್ನು ನಾವು ಸಾಕಬಹುದು. ಆದರೆ ಭಾರತದಲ್ಲಿಯೇ ಪ್ರತಿರಾತ್ರಿ 20 ಕೋಟಿ ಜನರು ರಾತ್ರಿ ಹೊಟ್ಟೆತುಂಬ ಊಟಮಾಡದೆ ಹಸಿವಿನಿಂದ ಮಲಗುತ್ತಾರೆ. ಸರಿಯಾದ ಪೌಷ್ಟಿಕ ಆಹಾರವಿಲ್ಲದೆ ಬರುವ ರೋಗಗಳಿಂದ ಪ್ರತಿನಿತ್ಯ ಮೂರು ಸಾವಿರ ಮಕ್ಕಳು ಸಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ.

ಇವೆರಡು ಸಂಗತಿಗಳನ್ನೂ ಒಟ್ಟಿಗಿಟ್ಟು ನೋಡೋಣ. ಒಂದು ಕಡೆ ವ್ಯರ್ಥಮಾಡುತ್ತಿರುವ ಆಹಾರ, ಮತ್ತೊಂದು ಕಡೆ ಹಸಿವಿನಿಂದ ಕಂಗೆಡುತ್ತಿರುವ ಜೀವಗಳು. ಯಾಕೆ ಹೀಗೆ? ಯಾರ ತಪ್ಪು? ಅದೇ ವರದಿಯಲ್ಲಿ ‘ಆಹಾರ ಪೋಲು ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಕಲ್ಯಾಣಮಂಟಪ ಗುರಿಯಾಗಿಸಿಕೊಂಡು ಆಹಾರ ಪದಾರ್ಥ ಪೋಲು ತಡೆಗೆ ಯೋಜನೆ, ಕಾಯ್ದೆ ರೂಪಿಸಲಾಗುತ್ತಿದೆ’ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಎಲ್ಲವನ್ನೂ ಕಾನೂನಿನ ಮೂಲಕವೇ ಪರಿಹರಿಸಿಕೊಳ್ಳಬೇಕೆ? ಅದು ಸಾಧ್ಯವೇ? ದಿನನಿತ್ಯ ಮನೆಯಲ್ಲಿ ವ್ಯರ್ಥವಾಗುತ್ತಿರುವ ಆಹಾರ ಪದಾರ್ಥಗಳನ್ನು ಯಾವ ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯ?

ನಿಯಮಪಾಲನೆ ಕಡ್ಡಾಯವಾಗಿತ್ತು: ನಾವು ಚಿಕ್ಕವರಿದ್ದಾಗ ಊಟಮಾಡುವಾಗ ಎರಡು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಿತ್ತು. ಒಂದು, ಬಡಿಸಿದ ಯಾವುದನ್ನೂ ಬಿಡಬಾರದು, ತಿನ್ನಲೇಬೇಕು. ಮತ್ತೊಂದು, ಊಟಮಾಡುವಾಗ ಮಾತನಾಡಬಾರದು, ಊಟಮಾಡುವುದರಲ್ಲೂ ಒಂದು ಶ್ರದ್ಧೆಯಿರಬೇಕು. ಇದರ ಜತೆಗೆ ಮತ್ತೊಂದು ಸಂಗತಿಯೂ ರೂಢಿಯಲ್ಲಿತ್ತು. ಎಲ್ಲರೂ ಒಟ್ಟಿಗೇ ಊಟಮಾಡುವುದು. ಇವೆಲ್ಲ ಅಲಿಖಿತ ನಿಯಮಗಳು. ಈ ನಿಯಮಗಳನ್ನು ಮನೆಯವರೆಲ್ಲರೂ ಬಹುಮಟ್ಟಿಗೆ ಪಾಲಿಸುತ್ತಿದ್ದಂತೆ ನೆನಪು. ಆಗಿನ ಕಾಲದಲ್ಲಿ ಊಟವೆಂದರೆ ಒಂದು ಸಂಭ್ರಮ. ಮಕ್ಕಳು ಹೊರಗೆ ಚೆನ್ನಾಗಿ ಆಟವಾಡುತ್ತಿದ್ದುದರಿಂದ ಚಂದ ಹಸಿವಾಗುತ್ತಿತ್ತು. ಹಿರಿಯರೆಲ್ಲರೂ ದುಡಿಯುತ್ತಿದ್ದರು. ವಯಸ್ಸಾದವರೂ ಸುಮ್ಮನೆ ಕೂರುತ್ತಿರಲಿಲ್ಲ. ಜತೆಗೆ ಮಧ್ಯೆಮಧ್ಯೆ ತಿನ್ನಲು ಈಗಿನಂತೆ ಕುರುಕಲು ತಿಂಡಿ ಹೆಚ್ಚಾಗಿ ಇರುತ್ತಿರಲಿಲ್ಲ. ಬೆಳಗಿನ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ. ಕೆಲವೊಮ್ಮೆ ದಿನಕ್ಕೆರಡು ಬಾರಿ ಮಾತ್ರ ಊಟ, ಅಷ್ಟೆ. ಹೀಗಾಗಿ ಊಟಕ್ಕಾಗಿ ಕಾಯುತ್ತಿದ್ದೆವು. ಹಸಿವಾಗಿರುತ್ತಿದ್ದುದರಿಂದ ಊಟವೂ ರುಚಿಯಾಗಿರುತ್ತಿತ್ತು. ಬಿಡುವ ಪ್ರಶ್ನೆಯೇ ಇರುತ್ತಿರಲಿಲ್ಲ. ವಿಶೇಷ ತಿಂಡಿಗಳಾದರೆ, ಕೊಟ್ಟರೆ ಸಾಕೆಂದು ಕಾಯುತ್ತಿದ್ದೆವು. ನನಗಿನ್ನೂ ಚೆನ್ನಾಗಿ ನೆನಪಿದೆ. ಮನೆಗೆ ಯಾರಾದರೂ ನೆಂಟರು ಬಂದರೆ ನನ್ನ ಅಮ್ಮ ಅವರನ್ನು ಉಪಚರಿಸಲು ಏನಾದರೂ ವಿಶೇಷ ತಿಂಡಿ ಮಾಡುತ್ತಿದ್ದರು. ಮನೆಯಲ್ಲಿ ಅಗತ್ಯ ಅನುಕೂಲ ಇರುತ್ತಿಲ್ಲವಾದುದರಿಂದ ಮಿತವಾಗಿ ಅವರಿಗಷ್ಟೇ ಮಾಡುತ್ತಿದ್ದರು. ನಾವು ಮಕ್ಕಳು ನೆಂಟರ ಬಳಿಯೇ ಆ ತಿಂಡಿಗಾಗಿ ಕಾದು ಕುಳಿತಿರುತ್ತಿದ್ದೆವು. ಆದರೆ ನನ್ನ ಅಮ್ಮ ಊಟದ ಮನೆಯ ಬಾಗಿಲ ಬಳಿ ನಿಂತು, ನಮ್ಮತ್ತ ನೋಡಿ ಕಣ್ಣರಳಿಸುತ್ತಿದ್ದರು. ಅದು ನಾವು ಅಲ್ಲಿಂದ ಹೋಗಲು ಸೂಚನೆ. ನಾವು ಅರೆಮನಸ್ಸಿನಿಂದಲೇ ಅಮ್ಮನ ಕಣ್ಣೋಟಕ್ಕೆ ಹೆದರಿ ಅಲ್ಲಿಂದ ಜಾಗ ಖಾಲಿಮಾಡಿ ಬಾಗಿಲ ಮರೆಯಲ್ಲಿ ನಿಂತು ನೆಂಟರು ಕೊಟ್ಟ ತಿಂಡಿಯನ್ನು ಪೂರ್ತಿ ತಿನ್ನದೆ ಸ್ವಲ್ಪವಾದರೂ ಬಿಡಲಿ ಎಂದು ಹಂಬಲಿಸುತ್ತಿದ್ದೆವು. ನಮ್ಮ ದುರದೃಷ್ಟ. ಅವರು ತಿಂಡಿಯನ್ನು ತಟ್ಟೆಯಲ್ಲಿಟ್ಟು ಕೊಟ್ಟರೆ ತಟ್ಟೆಯನ್ನು ಮಾತ್ರ ಬಿಡುತ್ತಿದ್ದರು. ಮೊದಲು ಕಣ್ಣರಳಿಸಿದ್ದ ನಮ್ಮಮ್ಮನ ಕಣ್ಣಂಚಿನಲ್ಲಿ ಈಗ ಕಂಬನಿಯಿರುತ್ತಿತ್ತು. ಅವರೂ ಪರಿಸ್ಥಿತಿಯ ಕೂಸು.

ಬಳಗವಾಗಿ ಬದುಕಬೇಕು ಎಂಬುದು ನಮ್ಮ ಹಳ್ಳಿಯ ಜನರ ಜೀವನವಿಧಾನವಾಗಿತ್ತು. ಯಾರೇ ಮನೆಗೆ ಬಂದರೂ ಅವರನ್ನು ಆದರದಿಂದ ಉಪಚರಿಸುತ್ತಿದ್ದರು. ಬದುಕಿನಲ್ಲಿ ಬಡತನವಿದ್ದರೂ ಉಪಚಾರದಲ್ಲಿ ಬಡತನವಿರಲಿಲ್ಲ. ತಿನ್ನುವ ಆಹಾರ ಅವರಿಗೆ ದೇವರಾಗಿತ್ತು. ಎಂದೂ ಅವರು ಆಹಾರವನ್ನು ತಿರಸ್ಕಾರದಿಂದ ಕಾಣಲಿಲ್ಲ. ಆಹಾರ ಮಿಗುತ್ತದೆನ್ನುವಾಗ ನಮ್ಮ ಅಮ್ಮ ಮಕ್ಕಳೆಲ್ಲರನ್ನೂ ತನ್ನ ಸುತ್ತ ಕೂರಿಸಿಕೊಂಡು ಕತೆ ಹೇಳುತ್ತಾ ಕೈತುತ್ತು ಹಾಕಿದರೆ ‘ಕರು ಹೊರೆ ಮೇದಿತ್ತು’ ಎಂಬಂತಾಗುತ್ತಿತ್ತು. ತಿಂದದ್ದು ಗೊತ್ತಾಗುತ್ತಲೇ ಇರಲಿಲ್ಲ. ಕಲಸಿದ್ದ ದಬರಿಯಲ್ಲಿ ಎಷ್ಟಿದ್ದರೂ ಖಾಲಿಯಾಗುತ್ತಿತ್ತು. ಆ ಕೈತುತ್ತಿನ ರುಚಿ ಮತ್ತೆ ನಾನು ತಿಂದದ್ದು ನೆನಪಿಲ್ಲ. ನನ್ನ ಹೆಂಡತಿ ಅವರ ಅಜ್ಜಿ ಮಾಡುತ್ತಿದ್ದ ಕೆಂಡದ ರೊಟ್ಟಿಯ ರುಚಿಯನ್ನೂ ಹಾಗೇ ನೆನಪಿಸಿಕೊಳ್ಳುತ್ತಾರೆ. ಬಿಸಿಯಡುಗೆಯೇ ಸಾಮಾನ್ಯವಾಗಿದ್ದರೂ ತಂಗಳಿಗೂ ರುಚಿಯಿತ್ತು. ಬಾಲ್ಯದಲ್ಲಿ ಪ್ರಾಣಿಗಳೂ ನಮ್ಮ ಸಹಜೀವಿಗಳಾಗಿದ್ದವು. ಕಲಗಚ್ಚು ಹಸು ಎಮ್ಮೆಗಳಿಗೆ ಅತ್ಯಂತ ಪೌಷ್ಟಿಕ ಆಹಾರ. ಉಳಿದ ಆಹಾರ ಪದಾರ್ಥಗಳ ಮಿಶ್ರಣದಿಂದ ತಯಾರಾದ ಕಲಗಚ್ಚನ್ನು ಕರೆಯುವ ಹಸು ಎಮ್ಮೆಗಳಿಗೆ ನೀಡುತ್ತಿದ್ದರು. ಕಲಗಚ್ಚು ಅವುಗಳಿಗೆ ರಸಗವಳ.

ಊಟದ ಕ್ರಮದಲ್ಲಿ ಅಂತರ: ನಾನು ನಗರಕ್ಕೆ ಬಂದ ಮೇಲೆ ಪರಿಸ್ಥಿತಿ ಭಿನ್ನವಾಗಿತ್ತು. ಇಲ್ಲಿಯ ಆಹಾರ ಪದ್ಧತಿ ನಮ್ಮ ಹಳ್ಳಿಗಿಂತ ತೀರಾ ಭಿನ್ನವಾಗಿತ್ತು. ನಾನು ವಿದ್ಯಾರ್ಥಿದೆಸೆಯಲ್ಲಿ ಕೆಲಕಾಲ ಆಶ್ರಯ ಪಡೆದಿದ್ದ ನೆಂಟರ ಮನೆಯವರು ಆಧುನಿಕರು. ನಮ್ಮ ಊಟದ ಕ್ರಮಕ್ಕೂ ಅವರ ಕ್ರಮಕ್ಕೂ ಸಾಕಷ್ಟು ಅಂತರವಿತ್ತು. ನಾನು ಮೊದಲು ಎದುರಿಸಿದ ಸಮಸ್ಯೆಯೆಂದರೆ ಸದ್ದುಮಾಡದೆ ನಾಜೂಕಾಗಿ ತಿನ್ನಬೇಕೆನ್ನುವುದು. ಅದರಲ್ಲೂ ಪಾಯಸ ಮಾಡಿದಾಗ ಅದನ್ನು ಬೊಗಸೆಯಲ್ಲಿ ಬಳಿದು ಬಾಯೊಳಗಿಟ್ಟು ಬೆರಳು ಚೀಪುವ ರುಚಿ ಇಲ್ಲಿ ಅಸಹ್ಯವಾಗಿ ಅದನ್ನು ಬಟ್ಟಲಿನಲ್ಲಿ ಹಾಕಿ ಕಾಫಿಯಂತೆ ಕುಡಿಯಬೇಕಾಯಿತು. ಚಕ್ಕುಲಿಯನ್ನೂ ಸದ್ದಿಲ್ಲದೆ ತಿನ್ನಬೇಕಾದ ಪರಿಸ್ಥಿತಿ ಎದುರಾಯಿತು. ರುಚಿಗಿಂತ ನಾಜೂಕು ಮುಖ್ಯವಾಯಿತು. ನಂತರ ಕಡಿಮೆ ತಿನ್ನಬೇಕೆನ್ನುವುದು ಆಧುನಿಕತೆಯ ಮತ್ತೊಂದು ಲಕ್ಷಣವೆಂದು ಕ್ರಮೇಣ ಅರಿವಾಯಿತು. ಇದು ಒಳ್ಳೆಯದೇ. ಕಾರಂತರನ್ನು ಯಾರೋ ಕೇಳಿದರಂತೆ- ‘ನಿಮ್ಮ ಆರೋಗ್ಯದ ಗುಟ್ಟೇನು?’. ಅದಕ್ಕವರು ‘ಕಡಿಮೆ ತಿನ್ನುವುದು’ ಎಂದು ಅವರಿಗೆ ಸಹಜವಾದ ಖಡಕ್ ಶೈಲಿಯಲ್ಲಿ ಉತ್ತರಿಸಿದರಂತೆ. ನಮ್ಮಲ್ಲಿದ್ದ ಉಪವಾಸದ ಪರಿಕಲ್ಪನೆಯೂ ಆರೋಗ್ಯದ ಹಿನ್ನೆಲೆಯಲ್ಲಿಯೇ ರೂಪುಗೊಂಡದ್ದು. ಆದರೆ ಅವೆಲ್ಲ ಈಗ ಅರ್ಥವಿಲ್ಲದ ಆಚರಣೆಗಳಾಗಿವೆ. ಆಹಾರದಲ್ಲಿಯೇ ಆರೋಗ್ಯದ ಅರಿವೂ ಇತ್ತು. ರುಚಿಗಾಗಿ ಮಾಡುವ ಆಹಾರ ಪದಾರ್ಥಗಳಲ್ಲಿ ಆರೋಗ್ಯದ ಪದಾರ್ಥಗಳನ್ನೂ ಸೇರಿಸುತ್ತಿದ್ದರು. ಉದ್ದು ವಾತಕ್ಕೆ ಕಾರಣ, ಆದರೆ ರುಚಿ. ಮೆಣಸು ಅದಕ್ಕೆ ಮದ್ದು. ಉದ್ದು ಬಳಸುವಾಗ ಕಡ್ಡಾಯವಾಗಿ ಮೆಣಸುಕಾಳನ್ನೂ ಜತೆಯಲ್ಲಿ ಸೇರಿಸುತ್ತಿದ್ದರು. ಕ್ರಮೇಣ ರುಚಿಯೇ ಮುಖ್ಯವಾಗಿ ಆಹಾರದಲ್ಲಿ ಆರೋಗ್ಯದ ಅಂಶ ನಿರ್ಲಕ್ಷ್ಯ್ಕೊಳಗಾಯಿತು. ಆರೋಗ್ಯವೆಂದರೆ ಔಷಧ ಸೇವಿಸುವುದು ಎಂಬುದು ರೂಢಿಯಾಯಿತು. ಈಗ ಕೆಲವರು ಮಾತ್ರೆಗಳನ್ನೇ ಆಹಾರದಂತೆ ಬಳಸುತ್ತಾರೆ. ಇರಲಿ, ಕಡಿಮೆ ತಿನ್ನುವುದು ಆರೋಗ್ಯಕ್ಕಿಂತ ಫ್ಯಾಷನ್ ಎಂಬಂತಾಯಿತು. ಹೀಗಾಗಿ ಅನೇಕರು ಸಾರ್ವಜನಿಕವಾಗಿ ಕಡಿಮೆ ತಿಂದು ಗುಟ್ಟಾಗಿ ರಾಶಿ ತಿನ್ನಲಾರಂಭಿಸಿದರು. ನಮ್ಮಲ್ಲಿ ಅನೇಕರು ಸಮಾರಂಭಗಳಿಗೆ ಹೋಗಿ ಅಲ್ಲಿ ಎಲ್ಲರೆದುರು ಕಡಿಮೆ ತಿಂದು ಮನೆಗೆ ಬಂದು ಮತ್ತೆ ಊಟ ಮಾಡುವುದನ್ನು ನಾನು ಕಂಡಿದ್ದೇನೆ. ಇದು ಮುಂದೆ ಬಡಿಸಿದ್ದೆಲ್ಲವನ್ನೂ ತಿನ್ನಬಾರದು, ಅದು ಅನಾಗರಿಕತೆಯ ಲಕ್ಷಣ; ಬಡಿಸಿದ್ದರಲ್ಲಿ ಸ್ವಲ್ಪ ಬಿಡಬೇಕೆಂಬ ಪರಿಕಲ್ಪನೆಗೆ ಹಾದಿಮಾಡಿಕೊಟ್ಟಿತು. ಇದು ನಾಗರಿಕತೆಯ ಲಕ್ಷಣವಾಗಿ ಎಲೆಗೆ ಬಡಿಸಿದ ಆಹಾರ ಪದಾರ್ಥವನ್ನು ಪೂರ್ತಿ ತಿನ್ನಬಾರದು, ಬಿಡಬೇಕು; ಹಾಗೆ ಬಿಟ್ಟವರು ನಾಗರಿಕರು, ಎಲ್ಲ ತಿನ್ನುವವರು ಬಕಾಸುರರು ಎಂಬುದು ರೂಢಿಗೆ ಬಂದಿತು.

ಬಡಿಸಿದ್ದನ್ನು ವ್ಯರ್ಥಮಾಡದೆ ಎಲ್ಲವನ್ನೂ ತಿನ್ನಬೇಕು ಎಂಬುದು ನಮ್ಮ ಸಂಸ್ಕೃತಿ. ಪರಿಮಳಕ್ಕೆಂದು ಹಾಕಿದ ಕರಿಬೇವಿನ ಸೊಪ್ಪನ್ನೂ ಬಿಸಾಕಿದರೆ ನಮ್ಮ ಹಿರಿಯರು ಬೈಯುತ್ತಿದ್ದರು. ತಿನ್ನಬಹುದಾದಂತಹುದನ್ನೇ ತಾನೇ ಅಡುಗೆಗೆ ಹಾಕುವುದು. ಅಂದಮೇಲೆ ಅದನ್ನು ಬಿಸಾಕಬೇಕೇಕೆ? ಕೆಲವೊಮ್ಮೆ ನಮಗಿಷ್ಟವಾಗದುದನ್ನೂ ಬಡಿಸಿದ್ದಾರೆಂಬ ಕಾರಣಕ್ಕೆ ತಿನ್ನಬೇಕಾಗಿತ್ತು. ಅಂಥ ಆಹಾರ ಪದಾರ್ಥದಲ್ಲಿ ಹಾಗಲಕಾಯಿ ಒಂದು. ಹೀಗೆ ಬಡಿಸಿದಾಗ ನಾವು ಮಕ್ಕಳು ಅದನ್ನು ಒಂದೇ ಗುಕ್ಕಿಗೆ ತಿಂದು, ‘ಸದ್ಯ ಮುಗಿಯಿತಲ್ಲ’ ಎಂದು ಸಮಾಧಾನದ ನಿಟ್ಟುಸಿರು ಬಿಡುವಷ್ಟರಲ್ಲಿ ಬಡಿಸುವವರು ನಾವು ಆತುರವಾಗಿ ತಿಂದದ್ದು ಗಮನಿಸಿ ನಮಗೆ ಅದು ಇಷ್ಟವೆಂದು ಬಗೆದು ಮತ್ತಷ್ಟು ಬಡಿಸಿದ್ದೂ ಉಂಟು. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯ ಪರಿಸರದಲ್ಲಿ ಆಹಾರದಲ್ಲಿ ಆರೋಗ್ಯದ ಪರಿಕಲ್ಪನೆಯಿತ್ತು. ಏನನ್ನೂ ವ್ಯರ್ಥಮಾಡಬಾರದೆಂಬ ಎಚ್ಚರವಿತ್ತು. ಹಂಚಿ ತಿನ್ನಬೇಕೆಂಬುದು ಸಾಮಾಜಿಕ ನೀತಿಯಾಗಿತ್ತು. ಹೊಲದ ಬಳಿಗೆ ಬುತ್ತಿ ಬಂದಾಗ ನೆರೆಯವರನ್ನೂ ಕೂಗಿ ಕರೆದು ತಿನ್ನುತ್ತಿದ್ದುದು ಸಹಜ ನಡವಳಿಕೆಯಾಗಿತ್ತು. ಊಟದ ಸಮಯದಲ್ಲಿ ಜಗುಲಿಯ ಮೇಲೆ ಯಾರಿದ್ದರೂ ಅವರನ್ನೂ ಕರೆಯುವುದು ಸಾಮಾನ್ಯವಾಗಿತ್ತು. ಆದರಿಸಲು ಬಡತನವಿರಲಿಲ್ಲ. ಅದು ಜೀವನವಿಧಾನವಾಗಿತ್ತು. ಸಾಮಾನ್ಯವಾಗಿ ಬಡವರ ಸಿರಿವಂತರ ಆಹಾರದಲ್ಲಿ ಅಂತಹ ವ್ಯತ್ಯಾಸವಿರಲಿಲ್ಲ. ಆದರೆ ಅಕ್ಕಿ ಶ್ರೇಷ್ಠ, ರಾಗಿ ಕನಿಷ್ಠ ಎಂಬ ತಾರತಮ್ಯ ಸೃಷ್ಟಿಯಾದದ್ದು ಹೇಗೆ? ಇದರ ಹಿಂದಿನ ಹುನ್ನಾರವಾದರೂ ಯಾವುದು? ನಾಗರಿಕತೆಯ ಸೂಚನೆಯನ್ನು ನಾವು ಅಲ್ಲಿಂದಲೇ ಕಾಣಬಹುದೇ?

ಸಂಸ್ಕೃತಿ ಮತ್ತು ನಾಗರಿಕತೆ: ಬಡಿಸಿದ್ದನ್ನು ವ್ಯರ್ಥಮಾಡದೆ ತಿನ್ನಬೇಕೆಂಬುದು ಸಂಸ್ಕೃತಿಯಾದರೆ ಬಡಿಸಿದ್ದೆಲ್ಲವನ್ನೂ ತಿನ್ನಬಾರದೆಂಬುದು ನಾಗರಿಕತೆ. ಎಲೆಯಲ್ಲಿ ಬಡಿಸಿದ್ದನ್ನು ಶಾಸ್ತ್ರಕ್ಕೆಂದು ತಿಂದು ಉಳಿದದ್ದನ್ನು ಚೆಲ್ಲುವುದೇ ಪ್ರತಿಷ್ಠೆ. ಬಳಗವಾಗಿ ಬದುಕಬೇಕೆನ್ನುವುದು ಹಳೆಯ ಮಾತು. ಹೊಸ ರೀತಿಯನ್ನು ನೋಡಿ- ಒಂದು ಮಧ್ಯಾಹ್ನ ಗೆಳೆಯನೊಬ್ಬನ ಮನೆಗೆ ಹೋಗಿದ್ದೆ. ಅದು ಊಟದ ಸಮಯ. ನನಗೂ ಹಸಿವಾಗಿತ್ತು. ಅವರು ಮೂವರು ಅಣ್ಣತಮ್ಮಂದಿರು. ಎಲ್ಲರೂ ನನಗೆ ಗೊತ್ತಿದ್ದವರೆ. ಎಲ್ಲರೊಡನೆ ಹರಟುತ್ತ ಊಟಕ್ಕೇಳಿಸುತ್ತಾರೆಂದು ಕಾಯುತ್ತಿದ್ದೆ. ಅಷ್ಟರಲ್ಲಿ ಒಬ್ಬ ‘ಈಗ ಬಂದೆ’ ಎಂದು ಹೇಳಿ ಒಳಗೆ ಹೋದ. ಉಳಿದ ಇಬ್ಬರು ನನ್ನೊಡನೆ ಮಾತನಾಡುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಒಳಗೆ ಹೋದವನು ಹೊರಗೆ ಬಂದು ಮತ್ತೊಬ್ಬನಿಗೆ ಕಣ್ಸನ್ನೆ ಮಾಡಿದ. ಅವನು ‘ಒಂದು ನಿಮಿಷ’ ಎನ್ನುತ್ತಾ ಒಳಗೆ ಹೋದ. ಉಳಿದಿಬ್ಬರು ಯಥಾಪ್ರಕಾರ ನನ್ನೊಡನೆ ಮಾತನಾಡುತ್ತಲೇ ಇದ್ದರು. ಈಗ ಆತ ಬಂದ. ಉಳಿದ ಮತ್ತೊಬ್ಬ ಒಳಗೆ ಹೋದ. ಸರದಿಯಂತೆ ಒಳಗೆ ಹೋದವರು ಒಬ್ಬೊಬ್ಬರೆ ಊಟಮಾಡಿ ಹೊರಗೆ ಬರುತ್ತಿದ್ದರು. ನಾನು ಮಾತ್ರ ಅಲ್ಲಿಯೇ ಹಾಗೇ ಹರಟುತ್ತ ಕುಳಿತಿದ್ದೆ. ಸತ್ಯ ತಿಳಿಯಲು ವಿಶೇಷ ಜ್ಞಾನವೇನೂ ಬೇಕಾಗಿರಲಿಲ್ಲ. ಕೆಲಕ್ಷಣ ಅಲ್ಲಿದ್ದು ಹೊರಬಂದೆ. ಇದು ನಾಗರಿಕ ಜಗತ್ತಿನ ಸ್ವಂತ ಅನುಭವದ ಒಂದು ನಿದರ್ಶನ. ನಾಗರಿಕತೆಯ ಹೆಸರಿನಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ಇದು ನಾವು ಸಾಧಿಸಿರುವ ಪ್ರಗತಿ. ಇದೊಂದು ರೂಪಕವಷ್ಟೆ. ನಾಗರಿಕತೆಯ ಹೆಸರಿನಲ್ಲಿ ನಾವು ಸ್ವಾರ್ಥಕೇಂದ್ರಿತ ಸಮಾಜವೊಂದನ್ನು ರೂಪಿಸುತ್ತಿದ್ದೇವೆಯೇ?

ಈಗ ಮೊದಲು ಬಿಟ್ಟಲ್ಲಿಗೆ ಬರೋಣ- ಆಹಾರ ವ್ಯರ್ಥಮಾಡಬಾರದೆನ್ನುವುದು ಒಂದು ಕಾಲಕ್ಕೆ ಜೀವನವಿಧಾನವಾಗಿತ್ತು. ಈಗ ಆಹಾರ ಬಿಡುವುದು ಪ್ರತಿಷ್ಠೆಯ, ನಾಗರಿಕತೆಯ ಲಕ್ಷಣವಾಗಿದೆ. ಹೀಗೆ ಉಣ್ಣದೆ ಬಿಡುವ ವ್ಯರ್ಥ ಆಹಾರ ಕಸದತೊಟ್ಟಿ ಸೇರುತ್ತದೆ. ನಮ್ಮ ಸಭೆ ಸಮಾರಂಭಗಳಲ್ಲಿ ಹೀಗೆ ವ್ಯರ್ಥವಾಗುವ ಆಹಾರದ ಪ್ರಮಾಣ ಶೇ. 40ರಷ್ಟು ಎಂಬುದು ಒಂದು ಅಂದಾಜು. ಪ್ರತಿಷ್ಠೆಗೆಂದೇ ವಿವಿಧ ಬಗೆಯ ಹತ್ತಾರು ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವುದು ಇತ್ತೀಚೆಗಿನ ಟ್ರೆಂಡ್. ಅವರ ಮದುವೆಯಲ್ಲಿ ಮೂವತ್ತೆರಡು ಐಟಂ ಇತ್ತು. ನಮ್ಮ ಮನೆ ಸಮಾರಂಭದಲ್ಲಿ ಅದಕ್ಕಿಂತ ಜಾಸ್ತಿ ಇರಬೇಕೆಂಬ ಸ್ಪರ್ಧೆ. ಇತ್ತೀಚೆಗೆ ನಾನು ಹೋಗಿದ್ದ ಒಂದು ಸಮಾರಂಭದಲ್ಲಿ ಐವತ್ತೆಂಟು ಬಗೆಯ ಖಾದ್ಯಗಳಿದ್ದವು. ಅವುಗಳೆಲ್ಲವನ್ನೂ ತಿನ್ನುವುದಿರಲಿ ರುಚಿ ನೋಡುವುದೂ ಮನುಷ್ಯಮಾತ್ರರಿಗೆ ಸಾಧ್ಯವಿರಲಿಲ್ಲ. ಅಂದಮೇಲೆ ಮಾಡಿದ್ದೆಲ್ಲವೂ ಏನಾಗಬೇಕು?

ಆಹಾರಪೋಲು ತಡೆಯಬೇಕಿದೆ: ಉಂಡು ಉಳಿದ ಆಹಾರವನ್ನು ಸದ್ಬಳಕೆ ಮಾಡಿಕೊಳ್ಳಲು ವಿನೂತನ ಯೋಜನೆ ಹಾಗೂ ಆಹಾರಪೋಲು ತಡೆಗೆ ಕಟ್ಟುನಿಟ್ಟಿನ ಕಾಯ್ದೆ ಜಾರಿಗೆ ತರಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿದುಬಂದಿದೆ. ಇದರ ಮೊದಲ ಭಾಗವಾಗಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ಉಳಿದ ಆಹಾರ ಪದಾರ್ಥವನ್ನು ಹಸಿದವರಿಗೆ ಹಂಚಲು ಯೋಜನೆ ರೂಪಿಸುತ್ತಿದೆ. ಕಲ್ಯಾಣಮಂಟಪಗಳಲ್ಲಿ ಮಿಕ್ಕಿದ ಆಹಾರ ಕೆಡದಂತೆ ಸಂಗ್ರಹಿಸಿಡಲು ರೆಫ್ರಿಜರೇಟರ್ ಕಡ್ಡಾಯಗೊಳಿಸುವ ಸಲಹೆಯನ್ನು ಸ್ವಯಂಸೇವಾ ಸಂಸ್ಥೆಗಳು ಸರ್ಕಾರಕ್ಕೆ ನೀಡಿವೆ. ಪ್ರತಿ ಕಲ್ಯಾಣಮಂಟಪಗಳೂ ಸಾಮರ್ಥ್ಯಕ್ಕೆ ಅನುಗುಣವಾಗಿ ನೂರರಿಂದ ಸಾವಿರ ಜನರಿಗೆ ಸಾಕಾಗುವಷ್ಟು ಆಹಾರ ಸಂಗ್ರಹಿಸುವ ರೆಫ್ರಿಜರೇಟರ್ ಹೊಂದಬೇಕಾಗುತ್ತದೆ. ಹೀಗೆ ಸಂಗ್ರಹಿಸಲಾಗುವ ಆಹಾರವನ್ನು ಕಲ್ಯಾಣಮಂಟಪದ ಮಾಲೀಕರು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸ್ವಯಂಸೇವಾ ಸಂಸ್ಥೆಗಳಿಗೆ ತಿಳಿಸಿ ಅದನ್ನು ಕೊಳೆಗೇರಿ ನಿವಾಸಿಗಳು, ಭಿಕ್ಷುಕರ ನಿರಾಶ್ರಿತರ ಕೇಂದ್ರ, ಅನಾಥಾಶ್ರಮಗಳು ಮೊದಲಾದ ಕಡೆ ವಿತರಿಸುವ ಹೊಣೆ ಹೊರಬೇಕಾಗುತ್ತದೆ. ಇದರ ವೆಚ್ಚವನ್ನು ಸಮಾರಂಭದ ಆಯೋಜಕರಿಂದಲೇ ವಸೂಲಿಮಾಡಲೂ ಅವಕಾಶ ಕಲ್ಪಿಸಬಹುದು. ತಪ್ಪಿದರೆ ದಂಡ ವಿಧಿಸಲೂ ಅವಕಾಶವಿದೆ.

ಇದೆಲ್ಲಾ ಸರಿಯೇ! ಒಳ್ಳೆಯ ಆಲೋಚನೆ. ಆದರೆ ಎಲ್ಲವನ್ನೂ ಕಾನೂನಿನ ಮೂಲಕವೇ ಮಾಡಲು ಸಾಧ್ಯವೇ? ತಿನ್ನುವ ಆಹಾರವನ್ನು ವ್ಯರ್ಥಮಾಡುವುದಿಲ್ಲ ಎಂಬ ಒಂದು ಸಣ್ಣ ನಿರ್ಧಾರವನ್ನು ನಮ್ಮ ಜನ ಕೈಗೊಂಡರೆ, ಅದು ಮೊದಲಿದ್ದಂತೆ ಜೀವನವಿಧಾನವಾದರೆ ಹಸಿದ ಅನೇಕ ಹೊಟ್ಟೆಗಳಿಗೆ ಆಹಾರ ನೀಡಿದ ಪುಣ್ಯ ಬರುತ್ತದೆ. ಮಾನವೀಯತೆ ಎಂದರೆ ಏನು ಎಂಬುದಕ್ಕೆ ಷೇಕ್​ಸಾದಿ ‘ಹಸಿದವನ ಮುಂದೆ ಉಣ್ಣದಿರುವುದೇ ಮಾನವೀಯತೆ’ ಎಂದು ಹೇಳಿದ್ದು ನೆನಪಾಗುತ್ತಿದೆ. ಅದನ್ನು ಕೊಂಚ ಬದಲಾಯಿಸಿ ಹೇಳುವುದಾದರೆ ಹಸಿವಿನಿಂದ ಅನೇಕ ಮಂದಿ ನರಳುತ್ತಿರುವಾಗ ಆಹಾರವನ್ನು ವ್ಯರ್ಥ ಚೆಲ್ಲದಿರುವುದೇ ಮಾನವೀಯತೆ ಎನ್ನಬಹುದು. ನಮ್ಮ ಜನ ಈ ಬಗ್ಗೆ ಒಂದು ಕ್ಷಣ ಚಿಂತಿಸಿಯಾರೇ?

Leave a Reply

Your email address will not be published. Required fields are marked *

Back To Top