Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಪ್ರಬುದ್ಧ ಭಾಷಣಕ್ಕಾಗಿ ಧನ್ಯವಾದ ಪ್ರಣಬ್​ದಾ…..

Monday, 25.06.2018, 3:05 AM       No Comments

| ಡಾ. ಮನಮೋಹನ ವೈದ್ಯ

ತಮ್ಮದೇ ಪಕ್ಷದ ನಾಯಕರ ತೀವ್ರ ವಿರೋಧದ ನಡುವೆಯೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್​ಎಸ್​ಎಸ್​ನ ತೃತೀಯ ವರ್ಷದ ಸಂಘಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪ್ರಜಾಪ್ರಭುತ್ವದ ಮೌಲ್ಯವಾದ ಮುಕ್ತಸಂವಾದದ ವಿಷಯದಲ್ಲಿನ ಅವರ ದೃಢತೆಯ ಬಗ್ಗೆ ನಮಗೆ ಕೃತಜ್ಞತಾಪೂರ್ವಕ ಮೆಚ್ಚುಗೆಯಿದೆ. ನಾಗಪುರ ಭೇಟಿಯ ವೇಳೆ ಡಾ. ಹೆಡಗೇವಾರರ ಪೂರ್ವಜರ ಮನೆಗೆ ಭೇಟಿಯಿತ್ತ ಅವರು ತಮ್ಮದೇ ಮಾತಿನಲ್ಲಿ ಹೇಳಿದಂತೆ ‘ಭಾರತದ ಶ್ರೇಷ್ಠಪುತ್ರ’ನಿಗೆ ಗೌರವ ಸಲ್ಲಿಸಿದರು. ಆರ್​ಎಸ್​ಎಸ್ ಕೇಂದ್ರ ಕಾರ್ಯಾಲಯದಲ್ಲಿ ಡಾ. ಹೆಡಗೇವಾರ್ ಮತ್ತು ಶ್ರೀಗುರೂಜಿಯವರ ನೆನಪಿನಲ್ಲಿ ನಿರ್ವಿುಸಿರುವ ಸ್ಮೃತಿಮಂದಿರಕ್ಕೂ ಭೇಟಿಯಿತ್ತು ಗೌರವ ಅರ್ಪಿಸಿದರು. ಬಳಿಕ, ಸಾರ್ವಜನಿಕರ ಮುಂದೆ ಪ್ರಾಮಾಣಿಕತೆಯಿಂದ ವಿಚಾರಗಳನ್ನು ಮಂಡಿಸಿದರು. ಈ ಸಭೆಗೂ ಮೊದಲು ಕ್ಯಾಮರಾ ಕಣ್ಣಿಂದ ದೂರದಲ್ಲಿ ಆರ್​ಎಸ್​ಎಸ್​ನ ಹಿರಿಯ ಪದಾಧಿಕಾರಿಗಳು, ವಿಶೇಷ ಆಹ್ವಾನಿತರ ಜತೆ ನಡೆದ ಪರಿಚಯಾತ್ಮಕ ಸಭೆಯಲ್ಲಿ ಭಾಗವಹಿಸಿ ಸರಳ ನಡವಳಿಕೆ ಪ್ರದರ್ಶಿಸಿದರು. ವೈಯಕ್ತಿಕ ಪರಿಚಯದ ವೇಳೆ ಸ್ವಯಂ ಪರಿಚಯಿಸಿಕೊಳ್ಳುವ ಸಲಹೆ ಮುಂದಿಟ್ಟ ಅವರು, ಉಳಿದವರು ಪರಿಚಯ ಮಾಡಿಕೊಳ್ಳುವ ಉದಾಹರಣೆ ಗಮನಿಸಿ ‘ನಾನು ಪ್ರಣಬ್ ಮುಖರ್ಜಿ’ ಎಂದು ಸರಳವಾಗಿ ಪರಿಚಯಿಸಿಕೊಂಡಿದ್ದು ಹೃದಯರ್ಸ³ಯಾಗಿತ್ತು.

ಪ್ರಣಬ್​ದಾ ಲಿಖಿತ ಇಂಗ್ಲಿಷ್ ಭಾಷಣದೊಂದಿಗೆ ಬಂದಿದ್ದರು. ಆರ್​ಎಸ್​ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಿಂದಿಯಲ್ಲಿ ಭಾಷಣ ಮಾಡಿದರು. ಆದರೂ ಅವರಿಬ್ಬರ ಮಾತುಗಳು ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’- ಒಂದೇ ಸತ್ಯವನ್ನು ಜ್ಞಾನಿಗಳು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ ಎನ್ನುವ ಸಂಗಮಬಿಂದುವಿನಲ್ಲಿ ಒಂದಾದವು. ಅನನ್ಯವಾದ ಸಮಗ್ರ ದೃಷ್ಟಿಯ ಮೇಲೆ ಆಧಾರಿತವಾದ ಭಾರತೀಯ ರಾಷ್ಟ್ರದ ಪರಿಕಲ್ಪನೆಯು ಪಶ್ಚಿಮದ ಸ್ಟೇಟ್-ನೇಷನ್ ಪರಿಕಲ್ಪನೆಗಿಂತ ಭಿನ್ನವೆನ್ನುವುದನ್ನು ಪ್ರಣಬ್​ದಾ ಸ್ಪಷ್ಟವಾಗಿ ವಿವರಿಸಿದರು. ನಮ್ಮ 5000 ವರ್ಷಗಳ ನಾಗರಿಕತೆಯ ಇತಿಹಾಸವನ್ನು ಒತ್ತಿಹೇಳಿದರು. ನಮ್ಮ ಜೀವನದೃಷ್ಟಿಯಲ್ಲಿ ಅವಿಭಾಜ್ಯವಾಗಿರುವ ನಂಬಿಕೆಗಳ ಮೇಲೆ ಬೆಳಕುಚೆಲ್ಲುತ್ತ ‘ವಸುಧೈವ ಕುಟುಂಬಕಮ್, ‘ಸರ್ವೆ ಭವಂತು ಸುಖಿನಃ’ ಎನ್ನುವ ವಿಚಾರಗಳು, ವೈವಿಧ್ಯದ ಮೌಲ್ಯಗಳು, ಮತನಿರಪೇಕ್ಷತೆ, ಸಹಿಷ್ಣುತೆ ಮೊದಲಾದ ಪ್ರಾಚೀನ ಮೌಲ್ಯಗಳನ್ನು ಸ್ವತಂತ್ರ ಭಾರತದ ಸಂವಿಧಾನದಲ್ಲಿಯೂ ಸೇರಿಸಿದ್ದನ್ನು ಸ್ಮರಿಸಿದರು. ಮೋಹನ್ ಭಾಗವತ್ ಅವರೂ ಇದೇ ವಿಚಾರಗಳನ್ನು ಬೇರೆ ಶಬ್ದಗಳಲ್ಲಿ ವ್ಯಕ್ತಪಡಿಸಿದರು. ‘ಸಹಿಷ್ಣುತೆ’ಯ ಬದಲು ‘ಎಲ್ಲ ವಿಚಾರಗಳ ಒಪ್ಪಿಕೊಳ್ಳುವ ಸ್ವಭಾವ’ ಎಂಬ ಪದಗುಚ್ಛ ಬಳಸಿದರು. ಯಾವುದೇ ಭಾರತೀಯನನ್ನು ‘ಬೇರೆ’ ಅಥವಾ ‘ಹೊರಗಿನವನು’ ಎಂದು ನಡೆಸಿಕೊಳ್ಳಲಾಗದು. ಏಕೆಂದರೆ ನಾವೆಲ್ಲ ಒಂದೇ ಪೂರ್ವಜರಿಂದ ಬಂದವರು ಎಂದು ಒತ್ತಿಹೇಳಿದರು. ಭಾರತದ ರಾಷ್ಟ್ರೀಯ ಜೀವನ ಒಂದು ಮತ, ಭಾಷೆ ಅಥವಾ ಜನಾಂಗದ ಆಧಾರದ ಮೇಲೆ ಬೆಳೆದುಬಂದದ್ದಲ್ಲ. ಬದಲಾಗಿ, ಅಧ್ಯಾತ್ಮ ಆಧಾರಿತವಾದ ಸಮಗ್ರ ಜೀವನದೃಷ್ಟಿ ಮತ್ತು ಅದರಿಂದ ಹೊರಹೊಮ್ಮಿದ ಮೌಲ್ಯಗಳ ಆಧಾರದ ಮೇಲೆ ನಿಂತಿದ್ದು ಎಂದು ಇಬ್ಬರೂ ಭಾಷಣದಲ್ಲಿ ಒತ್ತಿಹೇಳಿದರು. ಭಾಗವತರು ‘ಸಂಘ ಸಂಘವಾಗಿಯೇ ಇರುವುದು ಮತ್ತು ಪ್ರಣಬ್​ದಾ ಅವರಾಗಿಯೇ ಇರುವರು. ಸಂಘದ ಕಾರ್ಯಕ್ರಮಕ್ಕೆ ಬಂದಾಕ್ಷಣ, ಸಂಘವಾಗಲೀ ಪ್ರಣಬ್​ದಾ ಅವರಾಗಲೀ ಬದಲಾಗಬೇಕಿಲ್ಲ. ಇನ್ನೊಬ್ಬರ ವಿಚಾರವನ್ನು ಗೌರವಿಸುವುದು ಭಾರತೀಯ ಸಂಪ್ರದಾಯವಾಗಿದೆ, ಇನ್ನೊಬ್ಬರ ಮೇಲೆ ಹೇರುವಿಕೆಯಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಜೀವನದೃಷ್ಟಿ, ಮೌಲ್ಯಗಳೇ ನಮ್ಮ ಸಂವಿಧಾನದಲ್ಲಿ ಪ್ರತಿಬಿಂಬಿತವಾಗಿವೆ. ಇಂತಹ ಮಾನವೀಯ ಮತ್ತು ವೈಶ್ವಿಕ ದೃಷ್ಟಿಕೋನವೇ ನಮ್ಮ ಪರಂಪರಾಗತ ಶ್ರೇಷ್ಠ ಆಸ್ತಿಯಾಗಿದೆ. ಹಿಂದೆ ಭಾರತದ ಭಾಗವಾಗಿದ್ದ ನೆರೆಯ ಪಾಕಿಸ್ತಾನವೂ ಭಾರತದ ಸಂವಿಧಾನ ರಚನೆಯಾದ ಸಮಯದಲ್ಲೇ ತನ್ನ ಸಂವಿಧಾನವನ್ನೂ ರಚಿಸಿತು. ಆದರೆ ಅದು ಎಲ್ಲರನ್ನೂ ಒಳಗೊಳ್ಳುವ ಇಂತಹ ಮೌಲ್ಯಗಳನ್ನು ಹೇಳುವುದಿಲ್ಲ. ಪರಂಪರೆಯಿಂದ ನಮ್ಮಲ್ಲಿ ಅಂತರ್ಗತವಾಗಿ ಬಂದ ವೈವಿಧ್ಯವನ್ನು ಉಲ್ಲೇಖಿಸುವುದೂ ಇಲ್ಲ. ಸಹಜವಾಗಿ ಉದ್ಭವಿಸುವ ಪ್ರಶ್ನೆಯೆಂದರೆ, ಎರಡೂ ಒಂದೇ ದೇಶವಾಗಿದ್ದಾಗ ಮತ್ತು ಜನರೂ ಒಂದೇ ದೇಶಕ್ಕೆ ಸೇರಿದವರಾಗಿದ್ದರೂ, ಮುಂದೆ ಈ ಭಿನ್ನತೆ ಹೇಗೆ ನುಸುಳಿತು? ನಮ್ಮ ಪರಂಪರೆಯಿಂದ ಪಡೆದ ಅಧ್ಯಾತ್ಮ ಆಧಾರಿತ ಸಮಗ್ರ ಜೀವನದೃಷ್ಟಿಯಲ್ಲಿಯೇ ಇದಕ್ಕೆ ಉತ್ತರವಿದೆ. ಪೂರ್ವ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಗುರುದೇವ ರವೀಂದ್ರನಾಥ ಟ್ಯಾಗೋರರು ಇದನ್ನು ‘ಹಿಂದು ಜೀವನದೃಷ್ಟಿ’ ಎಂದು ವ್ಯಾಖ್ಯಾನಿಸಿದ್ದಾರೆ. ಪಾಕಿಸ್ತಾನ ಈ ಜೀವನದೃಷ್ಟಿಯನ್ನು ನಿರಾಕರಿಸಿತು, ಭಾರತ ಸ್ವೀಕರಿಸಿತು. ಉದಾರಭಾವ, ಸರ್ವರನ್ನೂ ಒಳಗೊಳ್ಳುವ ಮೌಲ್ಯಗಳು ಸಂವಿಧಾನದಲ್ಲಿ ಸೇರಿರುವುದು ಭಾರತದ ಈ ಸ್ವಭಾವಕ್ಕೆ ಕಾರಣವಲ್ಲ; ಬದಲು ನಮ್ಮ ಪುರಾತನ ಹಿಂದು ಜೀವನದೃಷ್ಟಿಯಲ್ಲಿ ಇದು ಅಂತರ್ಗತವಾಗಿರುವುದೇ ಕಾರಣ. ಇಂತಹ ಉದಾರಭಾವ, ಬಹುತ್ವದ ಮೌಲ್ಯಗಳು ಸಂವಿಧಾನದ ಮೂಲಕ ನಮಗೆ ಬಂದಿವೆಯೇ ಹೊರತು ಸಂವಿಧಾನದಿಂದಾಗಿಯೇ ಬಂದಿದ್ದಲ್ಲ. ನಮಗೆ ಪರಂಪರೆಯಿಂದ ಉದಾರಭಾವ, ಮತನಿರಪೇಕ್ಷತೆ, ಸರ್ವಸಮಾವೇಶಕ ಮೌಲ್ಯಗಳು ದೊರಕಿವೆ. ಕನಿಷ್ಠ 5000 ವರ್ಷಗಳಿಂದ ನಾವು ಹೀಗೇ ಇರುವೆವು. ಹಾಗಾಗಿ ಸಂವಿಧಾನವನ್ನು ಗೌರವಿಸುವುದು, ಅದರಂತೆ ನಡೆಯುವುದು ನಮ್ಮೆಲ್ಲರ ಅದ್ಯಕರ್ತವ್ಯವೇ ಸರಿ. ಆರ್​ಎಸ್​ಎಸ್ ಈ ಮಾರ್ಗದಲ್ಲಿ ಸ್ಥಿರವಾಗಿ ನಡೆಯುತ್ತಿದೆ. ಸಂಘವನ್ನು ಅಂದಿನ ಸರ್ಕಾರಗಳು ನ್ಯಾಯಯುತವಲ್ಲದ ರೀತಿಯಲ್ಲಿ 2 ಬಾರಿ ನಿಷೇಧಿಸಿದ ಹೊರತಾಗಿಯೂ, ನಿಷೇಧ ವಿರೋಧಿಸಿ ನಡೆದ ಸತ್ಯಾಗ್ರಹಗಳು ಶಿಸ್ತು-ಶಾಂತಿಯಿಂದಲೇ ಕೂಡಿದ್ದವು. ಸಂಪೂರ್ಣ ಸಾಂವಿಧಾನಿಕವಾದ ಸತ್ಯಾಗ್ರಹದ ಇಂತಹ ಉದಾಹರಣೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇನ್ನೊಂದಿಲ್ಲ. ಆದರೆ ಸಂವಿಧಾನದ ಪ್ರತಿ ತತ್ತ್ವವನ್ನೂ ಉಲ್ಲಂಘಿಸುವವರು, ಹಿಂಸೆಯ ದಾರಿ ಹಿಡಿದವರು, ನಮ್ಮ ಸೈನ್ಯದ ಮೇಲೆಯೇ ದಾಳಿಮಾಡುವವರು, ವಿಘಟನಕಾರಿ ಮತ್ತು ಅಸಾಂವಿಧಾನಿಕ ಚಟುವಟಿಕೆಗಳನ್ನು ಬೆಂಬಲಿಸುವವರೇ ಆರ್​ಎಸ್​ಎಸ್​ಗೆ ಸಂವಿಧಾನವನ್ನು ಬೋಧಿಸಲು ಮುಂದಾಗುತ್ತಿದ್ದಾರೆ! ಈ ವರ್ಷ ಏಪ್ರಿಲ್ 2ರಂದು ಬಿಜೆಪಿ ಸರ್ಕಾರವಿರುವ 6 ರಾಜ್ಯಗಳಲ್ಲಿ ನಡೆದ ‘ಭಾರತ್ ಬಂದ್’ ಅಪ್ರಚೋದಿತ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಯಿತು. ಇದಕ್ಕೆ ರಾಹುಲ್ ಗಾಂಧಿ ಮತ್ತು ಸೆಕ್ಯುಲರ್-ಲಿಬರಲ್ ಲಾಬಿಯ ಬೆಂಬಲವೂ ದೊರಕಿತು. ಈ ಹಿಂಸಾಚಾರಗಳು ನಡೆದಾಗ ಅಂಬೇಡ್ಕರ್ ಮತ್ತು ನಮ್ಮ ಸಂವಿಧಾನ ಹೇಳಿದ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಯಾವ ಮೌಲ್ಯಗಳೂ ಪರಿಗಣನೆಗೇ ಬರಲಿಲ್ಲ.

ಪ್ರಣಬ್​ದಾ ಭಾಷಣದ ನಂತರ ಈ ಭೇಟಿಯಿಂದ ಏನು ಹೊರಬರಬಹುದು? ಎಂದು ಆತಂಕಗೊಂಡವರು ತಕ್ಷಣವೇ ಈ ಭೇಟಿಯ ಸಾರಾಂಶವನ್ನು ವಿವರಿಸಿಬಿಡಲು ಮುಂದಾದರು. ಈ ಪ್ರತಿಕ್ರಿಯೆಗಳು ನಮ್ಮ ದೇಶದ ರಾಜಕೀಯ ಮತ್ತು ಬುದ್ಧಿಜೀವಿ ವರ್ಗದಲ್ಲಿ ಎಡಪಂಥೀಯರ ಪ್ರಭಾವ ಇನ್ನೂ ಇದೆ ಎನ್ನುವುದನ್ನು ಹೊರಹಾಕಿದವು. ಭಾರತೀಯವಲ್ಲದ ಈ ಎಡ ಸಿದ್ಧಾಂತದಲ್ಲಿ ನಿಸ್ಸಂಶಯವಾಗಿ ಅಸಮ್ಮತಿ, ಸ್ವತಂತ್ರತೆ, ಸಹಿಷ್ಣುತೆಗಳ ಕೊರತೆಯಿದೆ. ಭಾಷಣದ ವಿಶ್ಲೇಷಣೆ ಮಾಡದೇ ಪ್ರಣಬ್​ದಾ ಸೆಕ್ಯುಲರಿಸಂ, ನೆಹರು ಮೊದಲಾದ ವಿಷಯಗಳ ಬಗ್ಗೆ ಮಾತನಾಡಿ ಆರ್​ಎಸ್​ಎಸ್​ಗೆ ಕನ್ನಡಿ ಹಿಡಿದರು ಇತ್ಯಾದಿಯಾಗಿ ವ್ಯಾಖ್ಯಾನಿಸಲು ತೊಡಗಿದರು. ಆದರೆ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರಣಬ್​ರ ನಾಗಪುರ ಭೇಟಿಯ ಟೀಕಾಕಾರರಿಗೆ ಮೋಹನ್ ಭಾಗವತ್ ಭಾಷಣದ ಕುರಿತು ಹೇಳುವುದು ಏನೂ ಇರಲಿಲ್ಲ. ಅವರ ಭಾಷಣವನ್ನು ಕೇಳಿರದ ಸಾಧ್ಯತೆಯೂ ಇದೆ. ಹಾಗೆಯೇ, ಇದು ಅವರ ‘ವಾಕ್ ಸ್ವಾತಂತ್ರ್ಯ’ದ ಉನ್ನತವಾದ ವ್ಯಾಖ್ಯೆ- ತಾವು ಹೇಳುವುದೆಲ್ಲವೂ ಸರಿ, ಉಳಿದುದೆಲ್ಲವೂ ತಪ್ಪು ಎನ್ನುವುದಕ್ಕೆ ಸರಿಯಾಗಿ ಇದೆ.

ಈ ವಿಷಯದಲ್ಲಿ ಬಂದ ಎಲ್ಲ ಋಣಾತ್ಮಕ ಲೇಖನಗಳಲ್ಲಿ ಒಬ್ಬರೂ ತಮ್ಮ ಅನುಭವದ ಕುರಿತು ಹೇಳಲಿಲ್ಲ. ಯಾಕೆಂದರೆ ಅವರಿಗೆ ಆರ್​ಎಸ್​ಎಸ್​ನೊಂದಿಗೆ ನಡೆಸುವ ಯಾವುದೇ ಸಂವಾದ ‘ಧರ್ಮನಿಂದನೆ’ ಮತ್ತು ಇದರ ಪರಿಣಾಮ ‘ಲಿಬರಲ್ ಲೆಫ್ಟ್’ ಗುಂಪಿನಿಂದ ತತ್​ಕ್ಷಣ ಬಹಿಷ್ಕಾರ! ಇಂತಹ ಒತ್ತಡದ ಸನ್ನಿವೇಶದಲ್ಲಿ ಆರ್​ಎಸ್​ಎಸ್ ಸರಸಂಘಚಾಲಕರು ಹೇಳುವುದನ್ನು ಕೇಳುವುದು ಅವರಿಗೆ ಒಂದು ಆಯ್ಕೆಯೇ ಅಲ್ಲ.

ಪ್ರಣಬ್​ದಾ ಆರ್​ಎಸ್​ಎಸ್​ಗೆ ಕನ್ನಡಿ ಹಿಡಿದರು ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ ತಿಳಿದಿರಲಿಕ್ಕಿಲ್ಲ, ಕನ್ನಡಿಯಲ್ಲಿ ನೋಡಿಕೊಳ್ಳಲು ಸಂಘ ಸದಾ ತೆರೆದಿದೆ ಹಾಗೂ ಪ್ರತಿವರ್ಷ ಚಿಂತನ ಬೈಠಕ್​ಗಳು, ಪ್ರತಿನಿಧಿ ಸಭಾದಲ್ಲಿ ಅವಲೋಕನಗಳು ನಡೆಯುತ್ತವೆ. ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಗಳು ಮತ್ತು ಅಗತ್ಯ ಬದಲಾವಣೆಗಳ ಕುರಿತು ಈ ಸಭೆಗಳಲ್ಲಿ ಚಿಂತನೆ ನಡೆಸಲಾಗುತ್ತದೆ. ಆದರೆ ಎಲ್ಲರನ್ನು ಒಳಗೊಳ್ಳುವ ಪ್ರಗತಿಪರ ಮೌಲ್ಯಗಳ ಮೇಲೆ ಹಕ್ಕುಸ್ವಾಮ್ಯವಿರುವವರಂತೆ ಎಡಪಂಥೀಯರು ಮಾತನಾಡಿದರೂ, ತಮ್ಮ ವ್ಯವಹಾರದಲ್ಲಿ ಮಾತ್ರ ಅಸಹಿಷ್ಣುತೆಯ ಎಲ್ಲ ಗುಣಗಳನ್ನು ತೋರಿಸುತ್ತಾರೆ. ಇವರು ಕನ್ನಡಿ ನೋಡುವುದು ಯಾವಾಗ? ಅವರು ಕನ್ನಡಿಯಲ್ಲಿ ನೋಡಿಕೊಳ್ಳಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸತ್ಯವೆನ್ನುವುದು ಮಾತ್ರ ಅವರ ವ್ಯವಹಾರದಲ್ಲಿ ಬಿಂಬಿತವಾಗುತ್ತಲೇ ಇದೆ ಹಾಗೂ ಜನರು ಅವರ ಮಾತು-ಕೃತಿಗಳ ನಡುವಿನ ಅಂತರವನ್ನು, ಬೂಟಾಟಿಕೆಯ ಅತಿರೇಕವನ್ನು ಗಮನಿಸುತ್ತಲೇ ಇರುತ್ತಾರೆ.

ಇವೆಲ್ಲದರ ನಡುವೆ ಕೃತಜ್ಞತೆ ಸಲ್ಲಿಸಬೇಕಾದ ಒಂದು ಅಂಶವೆಂದರೆ- ಅವರು ಈ ಪ್ರಮಾಣದ ಅಸಹಿಷ್ಣುತೆಯನ್ನು ತೋರಿಸದೇ ಇದ್ದಿದ್ದರೆ, ಪ್ರತಿವರ್ಷ ನಡೆಯುವ, ಪ್ರತಿಬಾರಿಯೂ ವಿಶಿಷ್ಟ ಅತಿಥಿಗಳನ್ನು ಭಾಷಣಕಾರರಾಗಿ ಅಹ್ವಾನಿಸುವ ಈ ಕಾರ್ಯಕ್ರಮ ಮಾಧ್ಯಮದವರ ಗಮನ ಸೆಳೆಯುತ್ತಿರಲಿಲ್ಲ. ಕಮ್ಯುನಿಸ್ಟರು ಮತ್ತು ಅವರಿಂದ ಪ್ರೇರಣೆ ಪಡೆದವರ ಟೊಳ್ಳುವಾದಗಳ ಕಾರಣದಿಂದ ಜನರು ಈ ಕಾರ್ಯಕ್ರಮದ ನೇರಪ್ರಸಾರ ನೋಡುವುದು ಸಾಧ್ಯವಾಯಿತು. ಜೂನ್ 1ರಿಂದ 6ರವರೆಗೆ ಆರ್​ಎಸ್​ಎಸ್ ವೆಬ್​ಸೈಟ್ ಮೂಲಕ ಸಂಘವನ್ನು ಸೇರಲು ಪ್ರತಿದಿನ ಸರಾಸರಿ 378 ‘ಜಾಯಿನ್ ಆರೆಸ್ಸೆಸ್’ ಮನವಿಗಳು ಬಂದವು. ಆದರೆ ಕಾರ್ಯಕ್ರಮದ ದಿನ 1,779 ಮನವಿಗಳು ಬಂದವು! ಇದಕ್ಕಿಂತ ಹೆಚ್ಚು ಇನ್ನೇನನ್ನು ಹೇಳಲಿ!

(ಲೇಖಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ)

ಓದುಗರ ಗಮನಕ್ಕೆ: ಅನಿವಾರ್ಯ ಕಾರಣದಿಂದ ವರುಣ್ ಗಾಂಧಿ ಅವರ ‘ಯಂಗ್ ಇಂಡಿಯಾ’ ಅಂಕಣ ಇಂದು ಪ್ರಕಟವಾಗಿಲ್ಲ.

Leave a Reply

Your email address will not be published. Required fields are marked *

Back To Top