Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ನಮ್ಮ ಬದುಕಿನಿಂದ ಕತೆ ಕಾಣೆಯಾಗಿದೆ…

Sunday, 28.05.2017, 3:00 AM       No Comments

ತೋರಿಕೆಯ ಜಗತ್ತಿನಲ್ಲಿ ದಿನದೂಡುತ್ತಿರುವ ನಾವು ಮನಃಪೂರ್ತಿಯಾಗಿ ಮಾತಾಡಲೂ, ಹರಟೆ ಹೊಡೆಯಲೂ ಹಿಂಜರಿಯುತ್ತಿದ್ದೇವೆ. ಕಾರಣ, ಮತ್ತೊಬ್ಬರ ಸುಖ-ದುಃಖಗಳನ್ನು ಕೇಳುವ ಮನಸ್ಸುಗಳು ಕಾಣೆಯಾಗುತ್ತಿವೆ. ಹೀಗಾಗಿ ಬದುಕು ಅಸಹನೀಯವಾಗುತ್ತಿದೆ. ಪ್ರತಿಕ್ಷಣ ಸಂಚು ರೂಪುಗೊಳ್ಳುತ್ತಿರುವಂತೆ ಭಾಸವಾಗುವ ಇಂದಿನ ಸಮಾಜದಲ್ಲಿ ನಮ್ಮ ಕತೆಯನ್ನು ಯಾರ ಬಳಿ ಹೇಳಿಕೊಳ್ಳುವುದು?

 

ಅವಳಿಗೆ ಐದು ವರ್ಷ. ಅರಳು ಹುರಿದಂತೆ ಮಾತು. ಒಂದು ಘಳಿಗೆಯೂ ಸುಮ್ಮನಿರುವುದಿಲ್ಲ. ಅವಳ ಅಮ್ಮ, ಅಪ್ಪನಿಗೆ ಬಿಡುವಿರುವುದಿಲ್ಲ, ಅವರದೇ ಕೆಲಸದ ಒತ್ತಡಗಳು. ಅವಳ ಬಾಯಿಗೆ ಕಿವಿಯಾಗುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನವಳ ಸಂಗಾತಿ. ಅವಳ ಮಾತಿಗೆ ಇಂಥದೇ ವಿಷಯವೆಂಬುದಿಲ್ಲ. ಅವಳ ಜಗತ್ತಿನ ಎಲ್ಲವೂ ಮಾತುಗಳಾಗುತ್ತವೆ. ಇತ್ತೀಚೆಗಂತೂ ಅವಳ ಮಾತು ಕತೆಯಾಗುತ್ತಿದೆ. ತನಗೆ ತಿಳಿದದ್ದನ್ನೆಲ್ಲಾ ಕತೆ ಮಾಡಿ ಹೇಳುತ್ತಾಳೆ. ಅವಳ ಗೊಂಬೆಗಳು ಜೀವತಳೆದು ಪಾತ್ರಗಳಾಗುತ್ತವೆ. ಆಗ ನಾನೂ ಅವಳೂ ಜೀವತಳೆದ ಗೊಂಬೆಗಳ ಜತೆ ಪಾತ್ರಗಳಾಗಿ ಆಟ ನಿರ್ವಹಿಸಬೇಕಾಗುತ್ತದೆ. ಅಂತಹ ಆಟ ನನಗೂ ಇಷ್ಟವೇ. ಕಳೆದ ಬಾಲ್ಯವನ್ನು ಮತ್ತೆ ಪಡೆಯುವುದು ಭಾಗ್ಯವಲ್ಲವೇ? ಮೊಮ್ಮಗಳು ಆದ್ಯಳ ಜತೆ ನಾನೂ ಮಗುವಾಗುತ್ತೇನೆ.

ಸ್ಪರ್ಧಾಜಗತ್ತಿನ ಅನಿವಾರ್ಯತೆ: ನಮ್ಮ ಈ ಆಟ ಅವಳ ಅಪ್ಪ-ಅಮ್ಮನಿಗೆ ಕೆಲಕಾಲ ಸಂತೋಷ ತಂದರೂ ಆ ಸಂತೋಷ ಕ್ರಮೇಣ ಅಸಮಾಧಾನದ ರೂಪ ತಳೆಯುವುದು ನನಗೆ ಅರಿವಾಗುತ್ತದೆ. ನನಗೇ ನೇರ ಹೇಳದಿದ್ದರೂ ಮಗಳನ್ನು ಗದರಿಸುತ್ತಾ, ತಾತನಿಗೆ ತೊಂದರೆ ಕೊಡಬೇಡವೆಂದು ಮೇಲ್ನೋಟಕ್ಕೆ ನನಗೆ ಪ್ರಿಯವಾಗುವ ರೀತಿಯಲ್ಲಿಯೇ ಹೇಳುತ್ತಾ ಅವಳನ್ನು ನನ್ನಿಂದ ದೂರಮಾಡುವ ಪ್ರಯತ್ನ ಮಾಡುತ್ತಾರೆ. ಅವರಿಗೆ ತಮ್ಮ ಮಗಳು ಹೀಗೆ ಕಾಗಕ್ಕ ಗುಬ್ಬಕ್ಕನ ಕತೆಗಳಲ್ಲಿ ಕಳೆದುಹೋಗುವುದು ಇಷ್ಟವಿಲ್ಲ. ಅದಾಗಲೇ ಅವಳಿಗೆಂದೇ ಕಪಾಟಿನ ತುಂಬ ಪುಸ್ತಕಗಳನ್ನು ತುಂಬಿಸಿ ಇಟ್ಟಿದ್ದಾರೆ. ಮಕ್ಕಳಿಗೆಂದೇ ರಚಿತವಾದ ಪುಸ್ತಕಗಳಂತೆ. ಕುತೂಹಲಕ್ಕೆ ತೆಗೆದು ನೋಡಿದೆ- ಮಕ್ಕಳ ವಿಶ್ವಕೋಶ. ಐದು ವರ್ಷದ ಆ ಮುಗ್ಧ ಮಗುವಿಗೆ ಜಗತ್ತಿನ ಜ್ಞಾನವನ್ನು ಧಾರೆಯೆರೆಯುವ ಪ್ರಯತ್ನ. ಈ ಸ್ಪರ್ಧಾಜಗತ್ತಿನಲ್ಲಿ ಮಗು ಓಡಬೇಕೆಂದರೆ ಆ ವಯಸ್ಸಿನಿಂದಲೇ ಅಂತಹ ಪುಸ್ತಕಗಳು ಬೇಕಂತೆ. ಅವರ ಗೆಳೆಯರ ಆ ವಯಸ್ಸಿನ ಮಕ್ಕಳು ಆಗಲೇ ಇಂತಹ ಪುಸ್ತಕಗಳನ್ನು ಓದುತ್ತಿದ್ದಾರಂತೆ. ಅವರ ಮಕ್ಕಳಿಗಿಂತ ಇವಳೇನು ಕಮ್ಮಿ?

ಆದ್ಯಳ ಕತೆ ಕಟ್ಟುವ ರೀತಿಗೆ ನಾನು ಬೆರಗಾಗಿದ್ದೇನೆ. ಕತೆ ಹೇಳುವುದು ಅವಳಿಗೆ ಸಹಜ ಸಿದ್ಧಿಸಿದೆ. ಅವಳ ಕಲ್ಪನೆ ಎಲ್ಲೆಂದರಲ್ಲಿ ಗರಿಗೆದರಿ ಹಾರುತ್ತದೆ. ಅದಕ್ಕೆ ಭುವಿ ಬಾನಂಗಳ ಎಲ್ಲೆಗಳಿಲ್ಲ. ನಾವು ಸೃಷ್ಟಿಸಿರುವ ಎಲ್ಲ ಕಟ್ಟುಪಾಡುಗಳನ್ನೂ ನಿಮಿಷಾರ್ಧದಲ್ಲಿ ಅದು ಮೀರುತ್ತದೆ. ಜಾತಿ, ಮತ, ದೇಶಗಳ ಮಿತಿಯಿಲ್ಲ. ಸಹಜ ಸಂಚಾರದ ಗತಿ ಅದರ ರೀತಿ. ಅದು ಬಯಸುವುದು ಸಹೃದಯಿ ಕಿವಿಗಳನ್ನು ಮಾತ್ರ. ನಮ್ಮ ನಾಗರಿಕ ಜಗತ್ತು ಇಂತಹ ಕಿವಿಗಳನ್ನು ಕಸಿದುಕೊಳ್ಳುತ್ತಿದೆಯೇ? ಜ್ಞಾನವನ್ನು ಧಾರೆಯೆರೆಯುವ ಉತ್ಸಾಹದಲ್ಲಿ ಮಕ್ಕಳ ಸೃಜನಶೀಲತೆಯನ್ನು ಕೊಲ್ಲುತ್ತಿದೆಯೇ?

ಬಾಲ್ಯದ ಮಧುರ ನೆನಪು: ನಾನು ಆದ್ಯಳ ವಯಸ್ಸಿನಲ್ಲಿ ಹೀಗೆ ಕತೆ ಹೇಳುತ್ತಿದ್ದೆನೇ? ಗೊತ್ತಿಲ್ಲ. ಆದರೆ ಕತೆ ಕೇಳುತ್ತಿದ್ದುದು ಮಾತ್ರ ನೆನಪಿನಲ್ಲಿದೆ. ನನ್ನ ಅಮ್ಮ ಕೈತುತ್ತು ಹಾಕುತ್ತಾ ಕತೆ ಹೇಳುತ್ತಿದ್ದುದು ಈಗಲೂ ಒಂದು ಮಧುರ ನೆನಪು. ಕತೆ ಹೇಳುತ್ತಲೇ ನನ್ನಮ್ಮ ಲೋಕಜ್ಞಾನವನ್ನೂ ಕಲಿಸುತ್ತಿದ್ದಳು. ಅವಳು ನೀಡಿದ ಜ್ಞಾನದ ಬುತ್ತಿ ಈಗಲೂ ನನ್ನನ್ನು ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಕಾಪಾಡುತ್ತಿದೆ. ನನ್ನಮ್ಮ ಮಾತ್ರವಲ್ಲ ನನ್ನ ಹಳ್ಳಿಯ ಎಲ್ಲರೂ ಕತೆಗಾರರೇ ಆಗಿದ್ದರು. ಅವರ ಮಾತು ಕತೆಯಾಗುತ್ತಿತ್ತು. ‘ಮಾತು-ಕತೆ’ಯೆಂಬುದು ರೂಢಿಯ ಮಾತಲ್ಲ, ವಾಸ್ತವ ಸತ್ಯವಾಗಿತ್ತು. ನನ್ನ ಸೋದರಮಾವ ಬಂದರೆ ಅವರ ಯೌವನದ ದಿನಗಳನ್ನು ಕತೆ ಮಾಡಿ ಹೇಳುತ್ತಿದ್ದರು. ನನ್ನ ತಾಯಿಯ ದೊಡ್ಡಮ್ಮ ಅವರ ವೈಧವ್ಯದ ದುಃಖದ ಬದುಕನ್ನೂ ಕತೆಯಂತೆಯೇ ಹೇಳುತ್ತಿದ್ದರು. ನನ್ನಜ್ಜ ಹರೆಯದ ದಿನಗಳಲ್ಲಿಯೇ ಹೆಂಡತಿಯನ್ನು ಕಳೆದುಕೊಂಡು ಚಿಕ್ಕ ಮಕ್ಕಳನ್ನು ಸಲಹಿದ್ದನ್ನು ನನ್ನ ಸೋದರತ್ತೆ ಕಣ್ಣಂಚಿನಲ್ಲಿ ಕಂಬನಿ ತುಂಬಿಕೊಂಡೆ ನಮಗೆ ಕತೆಯ ರೀತಿ ಹೇಳುತ್ತಿದ್ದರು. ಅವರೆಲ್ಲರ ಮಾತು ಕತೆಯಾಗುತ್ತಿತ್ತು. ಊರಿನಲ್ಲಿ ನಡೆಯುವ ಕೆಲವು ಘಟನೆಗಳೂ ಕತೆಯ ರೂಪ ತಾಳುತ್ತಿದ್ದವು. ಬಾವಿಯಲ್ಲಿ ನೀರು ಸೇದುವಾಗ, ಹಳ್ಳದಲ್ಲಿ ದನದ ಮೈ ತೊಳೆಯುವಾಗ, ತೋಟದಲ್ಲಿ ವೀಳೆಯದೆಲೆ ಹಂಬಿಗೆ ನೀರು ಹಾಕುವಾಗ ಸುತ್ತಮುತ್ತಲಿನ ಎಲ್ಲ ಸಂಗತಿಗಳೂ ಕತೆಯ ರೂಪ ಪಡೆದುಕೊಳ್ಳುತ್ತಿದ್ದವು. ಕೇಳಿಸಿಕೊಳ್ಳುತ್ತಿದ್ದ ನಾವು ಅದಕ್ಕೆ ನಮ್ಮ ಪಾಲಿನ ಒಂದಷ್ಟು ಸೇರಿಸಿ ಹೊಸದೆಂಬಂತೆ ಮತ್ತೆ ಹೇಳುತ್ತಿದ್ದೆವು. ಕ್ರಮೇಣ ಅದು ‘ಇಲಿ ಹೋದದ್ದು ಹುಲಿ ಹೋಯಿತು’ ಎಂಬಂತಾಗುತ್ತಿತ್ತು. ಕಂಬಾರರು ಯಾವಾಗಲೂ ಹೇಳುತ್ತಿರುತ್ತಾರೆ- ಅವರ ಊರು ಘೊಡಗೇರಿ ಘಟಪ್ರಭಾ ದಂಡೆಯ ಮೇಲಿದೆ. ಹರಿಯುವ ನದಿ ಅಲ್ಲಿ ಒಂದು ತಿರುವು ಪಡೆಯುತ್ತದೆ. ಮಳೆಗಾಲ ಬಂದಾಗ ಅಲ್ಲಿ ಕೊಲೆಗಳು ಜಾಸ್ತಿ ನಡೆಯುತ್ತವಂತೆ. ತಮಗಾಗದವರನ್ನು ಕೊಂದು ಜನ ನದಿಗೆ ಎಸೆಯುತ್ತಾರೆ. ಒಂದೆರಡು ದಿನಗಳಲ್ಲಿ ಬಿದ್ದಲ್ಲಿಂದ ಅದು ತೇಲುತ್ತಾ ಮತ್ತೆಲ್ಲೋ ತಲುಪುತ್ತದೆ. ಹಾಗೆ ತಲುಪುವಷ್ಟರಲ್ಲಿ ಮೀನು ತಿಂದು ಗುರುತು ಹಿಡಿಯಲಾರದಂತೆ ಆ ಹೆಣ ವಿರೂಪವಾಗಿರುತ್ತದೆ. ಅಲ್ಲಿಗೆ ಸಾಕ್ಷ್ಯ ಹಾಳಾದಂತೆ. ಅಂತಹ ಹೆಣಗಳು ಇವರ ಊರ ತಿರುವಿನಲ್ಲಿ ಬಂದು ಕೊಂಚ ವಿಶ್ರಾಂತಿ ಪಡೆದು ಮುಂದೆಹೋಗುತ್ತಿದ್ದವು. ಆಗ ಆ ಹೆಣಗಳ ಬಗ್ಗೆ ಚಿತ್ರವಿಚಿತ್ರ ಕತೆಗಳು ಹುಟ್ಟಿಕೊಳ್ಳುತ್ತಿದ್ದುವಂತೆ. ಯಾರಿರಬಹುದು, ಯಾರು ಕೊಲೆ ಮಾಡಿರಬಹುದು, ಯಾಕೆ ಕೊಲೆಯಾಗಿರಬಹುದು ಇತ್ಯಾದಿಗಳ ಬಗ್ಗೆ ಅವರವರ ಕಲ್ಪನೆಗಳಿಗನುಗುಣವಾಗಿ ಕತೆಗಳು ರೂಪುಗೊಳ್ಳುತ್ತಿದ್ದವು. ತಮಗೆ ಬೇಕಾದಂತೆ ಅದನ್ನು ಸೃಷ್ಟಿಸುತ್ತಿದ್ದರು. ಕಂಬಾರರ ಸೃಜನಶೀಲತೆ ಅಲ್ಲಿ ತನ್ನ ಸಾಧ್ಯತೆಗಳನ್ನು ಕಂಡುಕೊಂಡಿತಂತೆ. ನಮ್ಮ ಜನಪದರು ಸ್ವಭಾವತಃ ಸೃಜನಶೀಲರು. ಸೃಷ್ಟಿ ನಿಸರ್ಗಸಹಜ. ಅದರ ನಾಶವೇ ನಾಗರಿಕತೆ.

ನಿಸ್ಸಾರ ವರದಿ, ರಸಭರಿತ ಕತೆ: ನಾವು ಬೆಂಗಳೂರಿನಲ್ಲಿ ನೆಲೆ ನಿಂತ ಮೇಲಿನ ಒಂದು ಪ್ರಸಂಗ ನನಗಿಲ್ಲಿ ನೆನಪಾಗುತ್ತಿದೆ. ನಮ್ಮ ಇಡೀ ಕುಟುಂಬ ನರಹಳ್ಳಿಯಿಂದ ಬೆಂಗಳೂರಿಗೆ ಬಂದಿತು. ಗಂಡನಿಲ್ಲದ ನನ್ನ ತಾಯಿಯೂ ಅನಿವಾರ್ಯವಾಗಿ ನಮ್ಮ ಜತೆ ಬಂದರು. ಆದರೆ ಈಗಲೂ ನರಹಳ್ಳಿಯಲ್ಲಿ ನಮ್ಮ ಮನೆ, ಜಮೀನು ಇದೆ. ಆಗಾಗ ನಾವು ಅಲ್ಲಿಗೆ ಹೋಗುತ್ತಿರುತ್ತೇವೆ. ಸಂಬಂಧ ಸಂಪೂರ್ಣ ಕಡಿದಿಲ್ಲ. ಒಮ್ಮೆ ನಮ್ಮ ಅಣ್ಣ ಹಳ್ಳಿಗೆ ಯಾವುದೋ ಕೆಲಸಕ್ಕೆ ಹೋಗಬೇಕಾಗಿತ್ತು. ಹೋಗಿ ಬಂದ. ಆಗ ಅಮ್ಮ ಅವನನ್ನು ವಿವರ ಕೇಳಿದರು. ‘ಮೊಳ್ಳೆಕರೀಗೌಡನನ್ನು ನೋಡಲು ಹೋಗಿದ್ದೆನಲ್ಲ, ಅವ ಊರಿನಲ್ಲಿರಲಿಲ್ಲ. ವಾಪಸು ಬಂದೆ’ ಎಂದು ಆತ ಒಂದೇ ಮಾತಿನಲ್ಲಿ ನರಹಳ್ಳಿಯ ಭೇಟಿಯ ವಿವರ ಮುಗಿಸಿದ. ನಮ್ಮಮ್ಮ ‘ಆಮೇಲೆ’ ಎಂದರು. ಅವನು ‘ಅಷ್ಟೆ’ ಎಂದ. ಅಮ್ಮನ ಮುಖ ಕಳೆಗುಂದಿತು. ಮತ್ತೊಮ್ಮೆ ನಮ್ಮಮ್ಮ ಹಳ್ಳಿಗೆ ಹೋಗಿಬಂದರು. ಅವರ ‘ಕತೆ’ ಶುರುವಾಯಿತು. ಅವರ ಸುತ್ತ ನಾವೆಲ್ಲ ಕುಳಿತು ಊರಿಂದ ತಂದ ಕೋಡುಬಳೆ ತಿನ್ನುತ್ತಾ ಕತೆ ಕೇಳಲು ಸಿದ್ಧರಾದೆವು. ‘ಇಲ್ಲಿಂದ ಹೊರಟೆನಲ್ಲಾ…’ ಎಂದು ಆರಂಭವಾದ ಕಥನ ನರಹಳ್ಳಿ ತಲುಪುವಷ್ಟರಲ್ಲಿ ನಾವು ತಿನ್ನುತ್ತಿದ್ದ ಕೋಡುಬಳೆ ಮುಗಿದು ಊಟದ ಹೊತ್ತಾಗಿತ್ತು. ಅವರ ಭೇಟಿಯ ವಿವರ ಮಧ್ಯಂತರದ ವಿರಾಮದ ನಂತರ ಮತ್ತೆ ಮುಂದುವರಿಯಿತು. ಇವರು ಹೋದಾಗಲೂ ಮೊಳ್ಳೆಕರೀಗೌಡ ಸಿಕ್ಕಿರಲಿಲ್ಲ. ಆದರೆ ಅದನ್ನು ಅವರು ಹೇಳಿದ ರೀತಿ ಮಾತ್ರ ಕತೆಯಲ್ಲ, ಕಾದಂಬರಿಯ ರೀತಿಯಿತ್ತು. ಇವರು ಹೊರಟಿದ್ದು, ದಾರಿಯಲ್ಲಿ ಯಾರೋ ಸಿಕ್ಕಿದ್ದು, ಬಸ್ಸು ತಡವಾದದ್ದು, ದಾರಿಯಲ್ಲಿ ಪ್ರಯಾಣಿಕನೊಬ್ಬನಿಗೂ ಕಂಡಕ್ಟರನಿಗೂ ಜಗಳವಾದದ್ದು ಹೀಗೆ…. ನಮ್ಮ ಅಣ್ಣನ ವಿವರ ಒಂದು ಮಾತಿನ ವರದಿ. ನಮ್ಮ ಅಮ್ಮನದು ಒಂದು ‘ಕತೆ’.

ಯಾಕೆ ಹೀಗೆ? ನನ್ನ ಅಣ್ಣನದು ಸ್ವಕೇಂದ್ರಿತ ಮನಸ್ಸು. ತನ್ನ ಕೆಲಸವೆಷ್ಟೋ ಅಷ್ಟೆ. ಆತನಿಗೆ ಬೇರೆ ಯಾವುದೇ ರೀತಿಯ ಆಸಕ್ತಿಯಿಲ್ಲ. ಅಲ್ಲದೆ ಬೇರೆಯವರ ವಿಚಾರ ಚಿಂತಿಸುವುದೂ, ಮಾತನಾಡುವುದೂ ನಾಗರಿಕತೆಯ ಲಕ್ಷಣವಲ್ಲ ಎಂಬ ನಂಬಿಕೆ. ನಮ್ಮ ಜತೆಯೂ ಅವನು ಹೆಚ್ಚು ಮಾತನಾಡುವುದಿಲ್ಲ. ಎಷ್ಟು ಬೇಕೋ ಅಷ್ಟೆ. ಅವನಿದ್ದರೆ ಒಂದು ರೀತಿ ಉಸಿರುಗಟ್ಟುವ ವಾತಾವರಣ. ಉನ್ನತ ಅಧಿಕಾರ ದಲ್ಲಿರುವ ಅವನು ಮನೆಯಲ್ಲೂ ಒಂದು ರೀತಿ ಅಧಿಕಾರಿಯೇ. ವೈಯಕ್ತಿಕ ಸಂಬಂಧವೇ ಸಾಧ್ಯವಿಲ್ಲದ ವ್ಯಕ್ತಿತ್ವ. ಅತ್ತಿಗೆ ಹಾಗಲ್ಲ. ನಮ್ಮ ಅಮ್ಮನ ಹಾಗೆ. ಕಲ್ಲನ್ನೂ ಮಾತನಾಡಿಸುತ್ತಾರೆ. ಮನೆಯ ಮುಂದೆ ತರಕಾರಿ ಗಾಡಿಯವರು ಬಂದರೆ ಅವರ ಕಷ್ಟ-ಸುಖ ವಿಚಾರಿಸುತ್ತ ಗಂಟೆಗಟ್ಟಲೆ ನಿಲ್ಲುತ್ತಾರೆ. ಕಸ ಗುಡಿಸುವವರ ಮನೆಯ ವಿವರಗಳೆಲ್ಲವೂ ಅವರಿಗೆ ಗೊತ್ತು. ನೆರೆಹೊರೆಯವರೆಲ್ಲರ ಜತೆ ಮಾತನಾಡಿ ಕಸಗುಡಿಸುವ ರಂಗಮ್ಮನ ಮಗಳ ಮದುವೆಗೆ ಸಹಾಯ ಮಾಡಿದ್ದುಂಟು. ನಮ್ಮ ಮನೆ ಎದುರಿನ ರ್ಪಾನ ಆಚೆಬದಿಯಲ್ಲಿರುವ ಪಾರ್ವತಮ್ಮನವರ ಮನೆಯಲ್ಲಿ ಏನು ಅಡುಗೆ ಎಂದು ಫೋನಿನಲ್ಲಿಯೇ ಗಂಟೆಗಟ್ಟಲೆ ಮಾತನಾಡುತ್ತಾರೆ. ನಮ್ಮ ಬಡಾವಣೆಯ ಮುಖಂಡರಾದ ಚನ್ನಬಸವಯ್ಯನವರೊಡನೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಗಮನ ವಹಿಸುತ್ತಿಲ್ಲವೆಂದು ವಾದಿಸುತ್ತಾರೆ. ನಮ್ಮ ಅಣ್ಣ ಅಂದರೆ ಅವರ ಗಂಡ ಮನೆಗೆ ಬಂದಾಗ ಈ ಎಲ್ಲ ‘ಕತೆ’ ಹೇಳುತ್ತಾರೆ. ಅಣ್ಣನಿಗೆ ಇವೆಲ್ಲ ಬೇಡದ ತಲೆಹರಟೆ ಸಂಗತಿಗಳಾಗಿ ಕಾಣಿಸುತ್ತದೆ. ಅವನು ಕೇಳಿದಂತೆ ನಟಿಸುತ್ತಾ, ಯಾವುದೋ ಫೈಲ್ ನೋಡುತ್ತಿರುತ್ತಾನೆ. ಅತ್ತಿಗೆ ಅವನೆದುರು ಮೌನಿಯಾಗುತ್ತಾರೆ. ಅವರ ಜೀವನಾಸಕ್ತಿ ಒಳಸೇರುತ್ತದೆ. ‘ಕತೆ’ ಕಣ್ಮರೆಯಾಗುತ್ತದೆ.

ಸಂಬಂಧ ಸೃಷ್ಟಿಸಿ ಕೊಂಡಾಗ ‘ಕತೆ’ ಹುಟ್ಟುತ್ತದೆ. ಸಂಬಂಧವೇ ಸಾಧ್ಯವಾಗದಿದ್ದಾಗ ‘ಕತೆ’ ಕಣ್ಮರೆಯಾಗಿಬಿಡುತ್ತದೆ. ನಮ್ಮ ಅಣ್ಣ ಕತೆ ಹೇಳುವುದಿರಲಿ, ಕೇಳಲೂ ಸಿದ್ಧನಿಲ್ಲ. ಮಕ್ಕಳು ದೂರವಿರುವ ಅವರ ಮನೆಯಲ್ಲಿ ಶಬ್ದವೆಂದರೆ ಫೈಲಿನ ಪೇಪರ್ ತಿರುಗಿಸುವ ಸದ್ದು ಮಾತ್ರವಂತೆ. ಇದು ಆಧುನಿಕ ಬದುಕಿನ ಎಲ್ಲರ ಮನೆಯ ಸ್ಥಿತಿಯೂ ಹೌದು.

ಪ್ರೀತಿ ಇಲ್ಲದಾಗ ಮಾತು ಹುಟ್ಟದು: ನನ್ನ ಗೆಳೆಯ ಇತ್ತೀಚೆಗೆ ಹೇಳುತ್ತಿದ್ದ- ಹರಟೆ ಹೊಡೆಯುವ ಸಂಸ್ಕೃತಿಯೇ ಇಂದು ಹೊರಟುಹೋಗಿದೆ. ನಾಲ್ಕು ಜನ ಗೆಳೆಯರು ಒಟ್ಟಿಗೇ ಸೇರಿದರೆ ಎರಡು ಸಾಧ್ಯತೆ- ಒಂದು ಏನು ಮಾತನಾಡಿದರೆ ಏನೋ ಎಂದು ಪ್ರತಿ ಮಾತನ್ನೂ ಅಳೆದು ತೂಗಿ ಎಚ್ಚರದಿಂದ ಮಾತನಾಡುವುದು ಅಥವಾ ವೈಯಕ್ತಿಕ ಸಂಗತಿಗಳನ್ನು ಅಪ್ಪಿತಪ್ಪಿಯೂ ಪ್ರಸ್ತಾಪಿಸದೆ ಜನರಲ್ ಆಗಿ ದೇಶ, ಆಟ, ಸಿನಿಮಾ, ಗಾಸಿಪ್ ಇತ್ಯಾದಿಗಳ ಬಗ್ಗೆ ಗೊತ್ತಿರುವ ಸಂಗತಿಗಳನ್ನೇ ಮತ್ತೆ ಹೇಳುವುದು. ಇಲ್ಲವೇ ಟ್ರಂಪ್ ಅಥವಾ ಪುಟಿನೊವ್ ಬಗ್ಗೆ ಮಾತನಾಡುವುದು. ಇದು ಸೇಫ್. ಇದಕ್ಕಿಂತ ರಕ್ಷಣಾತ್ಮಕವಾದ ಮತ್ತೊಂದು ವಿಧಾನವೆಂದರೆ ಮೊಬೈಲ್​ನಲ್ಲಿ ವಾಟ್ಸ್ಯಾಪ್ ನೋಡುತ್ತಾ, ಉತ್ತರಿಸುತ್ತಾ ಕುಳಿತುಬಿಡುವುದು. ಆಧುನಿಕ ಬದುಕಿನಲ್ಲಿ ಮಾತಿಗೇ ಬರ. ಮಾತನಾಡಿದರೂ ಅದು ಒಳಗಿನ ಹೃದಯದ ಮಾತಲ್ಲ, ಹೊರಗಿನಿಂದ ತುಂಬಿಕೊಂಡ ತಲೆಯ ಮಾತು. ಇನ್ನು ‘ಕತೆ’ಯೆಲ್ಲಿ? ಇದಕ್ಕೆ ಕಾರಣವೂ ಇದೆ. ಯಾರಿಗೂ ಯಾರ ಬಗ್ಗೆಯೂ ವಿಶ್ವಾಸವಿಲ್ಲ. ನಾವೆಲ್ಲರೂ ಅಪನಂಬಿಕೆಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಮಾತ್ರವಲ್ಲ, ಭಯದ ವಾತಾವರಣದಲ್ಲೂ ಬದುಕುತ್ತಿದ್ದೇವೆ. ಪ್ರತಿಯೊಬ್ಬರ ಮೊಬೈಲ್​ನಲ್ಲೂ ರೆಕಾರ್ಡ್ ಮಾಡಿಕೊಳ್ಳುವ ಸೌಲಭ್ಯವಿದೆ, ಕ್ಯಾಮರಾ ಇದೆ. ಯಾರು ಯಾವಾಗ ನಮ್ಮ ಮಾತುಗಳನ್ನು ದಾಖಲಿಸಿಕೊಳ್ಳುತ್ತಾರೋ? ಮಾತನಾಡಿ ಸಿಕ್ಕಿಹಾಕಿಕೊಳ್ಳುವ ಬದಲು ಮಾತನಾಡುವುದೇ ಬೇಡ. ಪ್ರೀತಿಯಿಲ್ಲದ ಮೇಲೆ ಮಾತು-ಕತೆ ಹುಟ್ಟೀತು ಹೇಗೆ?

ಇತ್ತೀಚೆಗೆ ಗೆಳೆಯನ ಆಫೀಸಿಗೆ ಹೋಗಿದ್ದೆ. ಅವನಿಗೂ ಬಿಡುವಿತ್ತು. ಹಾಗೇ ಚಹಾ ಕುಡಿಯುತ್ತಾ ಕೆಲಹೊತ್ತು ಹರಟುತ್ತಿದ್ದೆವು. ನಮ್ಮ ‘ಮಾತು-ಕತೆ’ಯಲ್ಲಿ ನಮ್ಮ ಗೆಳೆಯ ಗೆಳತಿಯರ ಬಗೆಗೆಲ್ಲಾ ಕಾಮೆಂಟ್ಸ್ ಇದ್ದಿತು. ನಾನೂ ನಿರಾತಂಕವಾಗಿ ಹರಟಿದ್ದೆ. ನಾನು ಹೊರಡುವ ಮುನ್ನ ಆತ ‘ಒಂದು ನಿಮಿಷ ತಡಿ’ ಎನ್ನುತ್ತಾ ತನ್ನ ಟೇಬಲ್ ಕೆಳಗಿದ್ದ ಒಂದು ಬಟನ್ ಒತ್ತಿ, ಹಿಂತಿರುಗಿ ನೋಡು ಎಂದ. ನನ್ನ ಹಾವಭಾವ ಸಹಿತ ನಾನಾಡಿದ ಮಾತುಗಳೆಲ್ಲ ಅಲ್ಲಿ ಟಿ.ವಿ. ಪರದೆಯ ಮೇಲೆ ಬರುತ್ತಿದೆ. ದಿಗ್ಭ್ರಾಂತಿಯಾಯಿತು. ಅವನದು ರಿಯಲ್ ಎಸ್ಟೇಟ್ ವ್ಯವಹಾರ. ಕೋಟ್ಯಂತರ ರೂಪಾಯಿ ವ್ಯವಹಾರ ಮಾತಿನ ಮೇಲೆಯೇ ನಡೆಯುತ್ತದೆ. ಒಮ್ಮೆ ಹೇಳಿ ಮತ್ತೆ ಹೇಳಿಲ್ಲ ಎಂದುಬಿಟ್ಟರೆ ನಷ್ಟವೆಷ್ಟು? ಅದಕ್ಕೇ ಆತ ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಾನೆ. ನಾನು ಅದನ್ನು ‘ಅಳಿಸಿಹಾಕು’ ಎಂದು ಹೇಳಿ ಹೊರಬಂದೆ. ಮುಂದಿನ ಸಲ ಅವನ ಜತೆ ಮಾತನಾಡುವಾಗ ನನಗೆ ನಾಲಗೆಯೇ ಹೊರಳಲಿಲ್ಲ.

ನನ್ನ ಗೆಳೆಯ ರವಿಕುಮಾರ್ ‘ಹರಟೆ ಕಟ್ಟೆ’ಯೊಂದನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ವಾರಕ್ಕೊಂದು ದಿನ ಗೆಳೆಯರೆಲ್ಲಾ ಸೇರಿ ಮುಕ್ತವಾಗಿ ಮಾತನಾಡಬೇಕೆಂಬುದು ಅವರ ಅಪೇಕ್ಷೆ. ಸಮೃದ್ಧವಾಗಿ ಊಟ ತಿಂಡಿಯ ವ್ಯವಸ್ಥೆಯನ್ನೂ ಅವರು ಮಾಡುತ್ತಾರೆಂದು ಬಲ್ಲೆ. ಆದರೆ ನಮ್ಮ ಸಾಮಾಜಿಕ ಸಂದರ್ಭದಲ್ಲೇ ಅಘೊಷಿತ ತುರ್ತಪರಿಸ್ಥಿತಿ ಇರುವಾಗ ಮುಕ್ತವಾಗಿ ಮಾತನಾಡುವುದು ಸಾಧ್ಯವೇ? ಇದು ಅಧಿಕಾರದ ಆದೇಶವಲ್ಲ, ಆಧುನಿಕ ಬದುಕಿನ ದುರಂತ ಸನ್ನಿವೇಶ. ಇಲ್ಲಿ ಮಾತು-ಕತೆ ಸಾಧ್ಯವಿಲ್ಲದ ಸ್ಥಿತಿಯೊಂದು ನಿರ್ಮಾಣವಾದಂತೆ ತೋರುತ್ತಿದೆ.

ವಿಶ್ವಾಸವಿಲ್ಲದ ವಾತಾವರಣ: ಇದು ಮುಖವಾಡಗಳ ಜಗತ್ತು. ಸಹಜ ಸಂಬಂಧವಿಲ್ಲದ ಪರಿಸರ. ಯಾರ ಬಗ್ಗೆ ಯಾರಿಗೂ ವಿಶ್ವಾಸವಿಲ್ಲ. ಯಾರು ಮಾತನಾಡಿದರೂ ವ್ಯವಹಾರದ ಎಚ್ಚರದ ಮಾತುಗಳು. ನಮ್ಮ ಸುಖ-ದುಃಖಗಳನ್ನು ಕೇಳುವ ಸಹೃದಯಿ ಮನಸ್ಸುಗಳು ಇಲ್ಲವಾಗಿವೆ. ಹೀಗಾಗಿ ನಮ್ಮ ಬದುಕಿನ ‘ಕತೆ’ ನಮ್ಮೊಳಗೇ ಉಳಿದುಬಿಡುತ್ತದೆ. ಕೇಳಿಸಿಕೊಳ್ಳುವ ಹೃದಯಗಳೇ ಇಲ್ಲದಿದ್ದಾಗ ನಮ್ಮ ‘ಕತೆ’ ಯಾರಿಗೆ ಹೇಳುವುದು? ತಲೆಯೇ ಮುಖ್ಯವಾಗಿ ಹೃದಯ ಹಿಂದೆ ಸರಿದಿದೆ. ಸಹಜ ಸಂಬಂಧ ಸಾಧ್ಯವಿಲ್ಲದಿದ್ದಾಗ ‘ಕತೆ’ ಹುಟ್ಟುವುದಿಲ್ಲ. ನಮ್ಮ ‘ಕತೆ’ಯನ್ನು ಹತ್ತಿರದವರೊಡನೆ ಹಂಚಿಕೊಳ್ಳದಿದ್ದರೆ ಬದುಕು ಸಹನೀಯವಾಗುವುದಿಲ್ಲ. ಪ್ರತಿಕ್ಷಣ ಸಂಚು ರೂಪುಗೊಳ್ಳುತ್ತಿರುವ ಸಮಾಜದಲ್ಲಿ ಹಂಚಿಕೊಳ್ಳುವುದಾದರೂ ಯಾರ ಬಳಿ? ಹೀಗಾಗಿ ಇಲ್ಲಿ ‘ಕತೆ’ಗೆ ಅವಕಾಶವಿಲ್ಲ. ಲೋಹಿಯಾ ಹೇಳುತ್ತಿದ್ದರು- ಸಮಾಜ ಜಡವಾಗಿಬಿಟ್ಟಾಗ ಕ್ರೌರ್ಯ, ಹಿಂಸೆ ಹೆಚ್ಚಾಗುತ್ತದೆ, ಆದ್ದರಿಂದ ಸಮಾಜವನ್ನು ಸೃಜನಶೀಲವಾಗಿಡಲು ಪ್ರಯತ್ನಿಸಬೇಕೆಂದು. ಆಧುನಿಕ ಪರಿಸರ ಸಮಾಜದ ಸೃಜನಶೀಲತೆಯನ್ನೇ ಕೊಲ್ಲುತ್ತಿದೆಯೇ? ‘ಕತೆ’ಯೆಂದರೆ ಕಟ್ಟುವುದಲ್ಲ, ಅದು ನಮ್ಮ ಬದುಕು. ನಮ್ಮ ಬದುಕಿನಿಂದಲೇ ಸೃಜನಶೀಲತೆ ಕಾಣೆಯಾಗುತ್ತಿದೆಯೇ?

Leave a Reply

Your email address will not be published. Required fields are marked *

Back To Top