Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ರೂಪಾಯಿ ಪಾತಾಳಕ್ಕೆ!

Friday, 29.06.2018, 3:05 AM       No Comments
<< ಡಾಲರ್ ಎದುರು ಬೃಹತ್ ಕುಸಿತ, ಭಾರತಕ್ಕೆ ಆರ್ಥಿಕ ಆಘಾತ >>

ನವದೆಹಲಿ: ನೋಟು ಅಮಾನ್ಯೀಕರಣ, ಜಿಎಸ್​ಟಿಯಂತಹ ಸವಾಲುಗಳ ಸಂದರ್ಭದಲ್ಲೂ ಗತ್ತಿನಲ್ಲಿ ಬೀಗಿದ್ದ ರೂಪಾಯಿ ಇದೀಗ ಕಚ್ಚಾ ತೈಲ ದರ ಏರಿಕೆ, ಜಾಗತಿಕ ಅನಿಶ್ಚಿತತೆಯಂತಹ ಕಾರಣಗಳಿಂದಾಗಿ ಡಾಲರ್ ಎದುರು ಸೊರಗಿದೆ. ರೂಪಾಯಿ ದರ ಕಳೆದ 19 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಭಾರತದ ಅರ್ಥವ್ಯವಸ್ಥೆಯನ್ನು ಆತಂಕಕ್ಕೆ ತಳ್ಳಿದೆ. ಗುರುವಾರ ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 68.89ರಿಂದ ದಿನದ ವಹಿವಾಟು ಆರಂಭಿಸಿದ ರೂಪಾಯಿ 49 ಪೈಸೆ ಇಳಿಕೆ ಕಂಡು ಸಾರ್ವಕಾಲಿಕ ದಾಖಲೆಯಾಗಿ 69.10 ರೂ.ರವರೆಗೆ ಕುಸಿಯಿತಾದರೂ ದಿನದ ಅಂತ್ಯಕ್ಕೆ ಕೊಂಚ ಚೇತರಿಸಿಕೊಂಡು 68.83 ರೂ.ಮುಟ್ಟಿದೆ. 2016ರ ನ.24ರಂದು ರೂಪಾಯಿ ದರ 68.86 ರೂ.ಗೆ ಇಳಿದಿದ್ದರೆ, 2013ರ ಆ.28ರಂದು 68.82 ರೂ.ಗೆ ಕುಸಿದಿತ್ತು.

ಜನವರಿ 9ರಿಂದ ರೂಪಾಯಿ, ಡಾಲರ್ ಎದುರು ಒಟ್ಟಾರೆ ಶೇ. 9.25 ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲ ಬೆಲೆಯಿಂದಾಗಿ ಹೆಚ್ಚುತ್ತಿರುವ ವಿತ್ತೀಯ ಕೊರತೆ ಮತ್ತು ಸ್ಥಿರ ಬಂಡವಾಳ ಹೊರಹರಿವು ರೂಪಾಯಿ ಮೌಲ್ಯ ಕಳೆದುಕೊಳ್ಳಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕಚ್ಚಾ ತೈಲದ ಬೆಲೆ ಕಳೆದ 4 ವರ್ಷಗಳಲ್ಲೇ ಅಧಿಕ ಮಟ್ಟಕ್ಕೆ (ಪ್ರತಿ ಬ್ಯಾರೆಲ್​ಗೆ 77.62 ಡಾಲರ್) ತಲುಪಿದ್ದು, ವರ್ಷಾರಂಭದಿಂದ ಇದುವರೆಗೆ ಶೇ. 16 ಏರಿಕೆ ಕಂಡಂತಾಗಿದೆ. ಕಳೆದ ವರ್ಷ ಒಟ್ಟಾರೆ 43 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಂಡಿದ್ದು, ಈ ವರ್ಷ ಪ್ರಮಾಣ ಹೆಚ್ಚಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಪರಿಣಾಮಗಳೇನು?

  •  ಆಮದು ಹೊರೆ: ರೂಪಾಯಿ ದುರ್ಬಲಗೊಳ್ಳುವುದರಿಂದ ದೇಶದ ಆಮದುದಾರರಿಗೆ ಭಾರಿ ಹೊರೆಯಾಗಲಿದೆ.
  •  ತೈಲ ದುಬಾರಿ : ತೈಲ ಆಮದು ದುಬಾರಿ ಆಗುವುದರಿಂದ ತೈಲ ಬೆಲೆಯೂ ಹೆಚ್ಚಳವಾಗುವುದು ನಿಶ್ಚಿತ
  •  ಬಡ್ಡಿದರ ಹೆಚ್ಚಳ: ಹಣದುಬ್ಬರದ ಒತ್ತಡದಿಂದ ಆರ್​ಬಿಐ ಪ್ರಮುಖ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ
  •  ವಿದೇಶಿ ಶಿಕ್ಷಣ, ಪ್ರವಾಸ ತುಟ್ಟಿಯಾಗುತ್ತದೆ, ಮಾಹಿತಿ ತಂತ್ರಜ್ಞಾನ, ರಫ್ತುದಾರರಿಗೆ ಲಾಭದಾಯಕ

ಕಾರಣಗಳೇನು?

  •  ಅನುತ್ಪಾದಕ ಆಸ್ತಿ ಹೆಚ್ಚಳದಿಂದಾಗಿ ಆತಂಕದಲ್ಲಿರುವ ಬ್ಯಾಂಕಿಂಗ್ ವಲಯಕ್ಕೆ ದ್ವೈವಾರ್ಷಿಕ ವರದಿಯಲ್ಲಿ ಧೈರ್ಯ ತುಂಬಲು ಆರ್​ಬಿಐ ವಿಫಲ
  •  ಅಮೆರಿಕ ಮತ್ತು ಚೀನಾ ನಡುವೆ ಬಿರುಸಾಗುತ್ತಿರುವ ವಾಣಿಜ್ಯ ಸಮರದಿಂದ ಜಾಗತಿಕ ಮಾರುಕಟ್ಟೆ ವ್ಯಾಪಾರಸ್ಥರಿಂದ ಹೂಡಿಕೆಗೆ ಹಿಂದೇಟು
  •  ಇರಾನ್​ನಿಂದ ತೈಲ ಆಮದು ಸ್ಥಗಿತಗೊಳಿಸುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್​ರಿಂದ ಮಿತ್ರರಾಷ್ಟ್ರಗಳ ಮೇಲೆ ಒತ್ತಡ, ಅಮೆರಿಕದಿಂದ ಫೆಡರಲ್ ರಿಸರ್ವ್ ದರ 25 ಮೂಲಾಂಕ ಏರಿಕೆ.

ಸೆನ್ಸೆಕ್ಸ್, ನಿಫ್ಟಿ ಕುಸಿತ

ರೂಪಾಯಿ ಕುಸಿತ ಪರಿಣಾಮ ಮುಂಬೈ ಷೇರುಪೇಟೆ ಸೂಚ್ಯಂಕದ ಮೇಲೂ ಗೋಚರಿಸಿದೆ. 35,207ರಿಂದ ದಿನದ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ 35,282ರವರೆಗೆ ಜಿಗಿತ ಕಂಡಿತಾದರೂ ದಿನದ ಅಂತ್ಯಕ್ಕೆ 179 ಅಂಕ ಕುಸಿತದೊಂದಿಗೆ 35,037.64ರಲ್ಲಿ ವಹಿವಾಟು ಮುಗಿಸಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) 10,660 ಅಂಕದೊಂದಿಗೆ ವಹಿವಾಟು ಆರಂಭಿಸಿತು. 10,674ರವರೆಗೆ ಏರಿಕೆ ಕಂಡು 82 ಅಂಕ ಕುಸಿಯುವುದರೊಂದಿಗೆ ದಿನದ ಅಂತ್ಯಕ್ಕೆ 10,589.10 ಅಂಕ ದಾಖಲಾಗಿದೆ.

ಶೀಘ್ರ 70 ರೂ.ಗೆ ಇಳಿಕೆ

ಸಮೀಕ್ಷಾ ವರದಿ ಪ್ರಕಾರ ಜಾಗತಿಕ ಮಟ್ಟದ ಅನಿಶ್ಚಿತತೆಯಿಂದಾಗಿ ರೂಪಾಯಿ ಮೌಲ್ಯ ಭವಿಷ್ಯದಲ್ಲಿ 70 ರೂಪಾಯಿಗೆ ಇಳಿಕೆ ಆದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಪ್ರಸಕ್ತ ವರ್ಷ ಪ್ರಗತಿಶೀಲ ಮಾರುಕಟ್ಟೆಗಳ ಕರೆನ್ಸಿಗಳ ಪೈಕಿ ರೂಪಾಯಿ ಹೆಚ್ಚು ನಷ್ಟಕ್ಕೀಡಾಗಿದೆ.

Leave a Reply

Your email address will not be published. Required fields are marked *

Back To Top