Saturday, 23rd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಭದ್ರಾ ಪ್ರವಾಹಕ್ಕೆ ನಲುಗಿದ ಜನ

Thursday, 14.06.2018, 5:32 PM       No Comments

ಬಾಳೆಹೊನ್ನೂರು: ಹೋಬಳಿಯಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆ ಗುರುವಾರ ಮತ್ತಷ್ಟು ಬಿರುಸುಗೊಂಡಿದ್ದರಿಂದ ಭದ್ರಾ ನದಿ ರೌದ್ರಾವತಾರ ತಾಳಿದೆ. ಪ್ರವಾಹದಿಂದ ಮೂರು ಕಡೆಗಳಲ್ಲಿ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿವೆ.

ಗುರುವಾರ ಬೆಳಗ್ಗೆ 10 ಗಂಟೆ ವೇಳೆಗೆ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಾಗುಂಡಿ ಸಮೀಪದ ಮಹಲ್ಗೋಡು-ಹೊನ್ನವಳ್ಳಿ ಸೇತುವೆ ಮೇಲೆ ಭದ್ರಾನದಿ ನೀರು ಉಕ್ಕಿ ಹರಿದಿದ್ದರಿಂದ ಸಂಚಾರ ವ್ಯವಸ್ಥೆ ಕಡಿತಗೊಂಡಿತ್ತು. ಸಮೀಪದಲ್ಲೇ ಇರುವ ಮನೆಯೊಂದ ಒಳಭಾಗಕ್ಕೂ ನೀರು ನುಗ್ಗಿ ಹಾನಿಯುಂಟಾಯಿತು.

11 ಗಂಟೆ ವೇಳೆಗೆ ಮಾಗುಂಡಿ ಸಮೀಪದ ಜಕ್ಕಣಕ್ಕಿಯ ತೆಪ್ಪದಗಂಡಿ ಎಂಬಲ್ಲಿ ಭದ್ರಾನದಿಯ ನೀರು ಮುಖ್ಯರಸ್ತೆಗೆ ಬಂದಿದ್ದರಿಂದ ವಾಹನ ಸಂಚಾರ ಕಡಿತಗೊಂಡಿತ್ತು. ಮಧ್ಯಾಹ್ನ 12ಗಂಟೆ ವೇಳೆಗೆ ಪಟ್ಟಣ ಸಮೀಪದ ಕಳಸ ರಸ್ತೆಯ ಬೈರೇಗುಡ್ಡ ಬಳಿ ಸಹ ಭದ್ರಾನದಿ ನೀರು ರಸ್ತೆ ಮೇಲೆ ಹರಿದು ಸಂಪರ್ಕ ಕಡಿತವಾಯಿತು.

ಈ ಮೂರೂ ಭಾಗಗಳಲ್ಲಿ ರಸ್ತೆಗೆ ನೀರು ಬಂದು ನಿಲ್ಲುತ್ತಿದ್ದಂತೆ ಕಳಸ, ಹೊರನಾಡು, ಕೊಟ್ಟಿಗೆಹಾರ ಮುಂತಾದೆಡೆಗೆ ಸಂಪರ್ಕ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದ್ದು, ಎಲ್ಲಕಡೆಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಪಟ್ಟಣದಲ್ಲಿಯೂ ಭದ್ರಾ ನೀರು ಏರಿಕೆಗೊಂಡಿದ್ದು, ಎನ್.ಆರ್.ಪುರ ರಸ್ತೆಯ ಮೀನು ಮಾರ್ಕೆಟ್ ಬಳಿಯ ನೂತನ ಸಂತೆ ಮಾರುಕಟ್ಟೆ ಮಳಿಗೆಗಳು ಜಲಾವೃತಗೊಂಡಿತ್ತು. ಅಸಮರ್ಪಕ ಜಾಗದಲ್ಲಿ ಸಂತೆ ಮಾರುಕಟ್ಟೆ ನಿರ್ವಿುಸಿದ್ದು, ಅವು ಕುಸಿಯುವ ಆತಂಕ ಎದುರಾಗಿದೆ.

ಭದ್ರಾ ನದಿ ನೀರು ಹಿಮ್ಮುಖವಾಗಿ ಬರುತ್ತಿದ್ದು, ಎನ್.ಆರ್.ಪುರ ರಸ್ತೆಯಲ್ಲಿರುವ ಗ್ಯಾರೇಜ್, ಹೋಟೆಲ್ ಮತ್ತಿತರರ ಅಂಗಡಿಗಳ ಒಳಗೂ ನೀರು ನುಗ್ಗಿತ್ತು. ಗ್ಯಾರೇಜ್ ಬಳಿ ರಿಪೇರಿಗೆ ನಿಲ್ಲಿಸಿದ್ದ ಎರಡು ಕಾರುಗಳು ನೀರಿನಲ್ಲಿ ಮುಳುಗಿದವು.

ಎನ್.ಆರ್.ಪುರ ರಸ್ತೆಯ ಕಾಂಕ್ರೀಟಿಕರಣ ಹಿನ್ನೆಲೆಯಲ್ಲಿ ಗ್ಯಾರೇಜ್​ಗಳ ಸಮೀಪದಲ್ಲಿ ಕಾರ್ವಿುಕರು ಹಾಕಿದ್ದ ಟೆಂಟ್​ಗಳ ಒಳಗೂ ನೀರು ನುಗ್ಗಿ ಕಾಮಿರ್ಕರು ಅತಂತ್ರರಾದರು. ಕಾಂಕ್ರೀಟಿಕರಣಕ್ಕೆ ತಂದಿದ್ದ ಜಲ್ಲಿ, ಜಲ್ಲಿ ಕ್ರಶರ್ ಪುಡಿ, ಸಿಮೆಂಟ್, ಕಬ್ಬಿಣದ ವಸ್ತುಗಳು ಜಲಾವೃತವಾಗುತ್ತಿದ್ದಂತೆ ಕಾರ್ವಿುಕರು ಬೇರೆಡೆಗೆ ಸಾಗಿಸಿದರು.

ಕುಟುಂಬ ಸ್ಥಳಾಂತರ: ಪಟ್ಟಣದ ಹೊಳೆಬಾಗಿಲಿನಲ್ಲಿ ಭದ್ರಾನದಿ ಸನಿಹದಲ್ಲಿರುವ ಮನೆಗಳಿಗೆ ಪ್ರವಾಹದ ನೀರು ನುಗ್ಗುವ ಸಾಧ್ಯತೆಯಿರುವುದರಿಂದ ಜಿಪಂ ಸದಸ್ಯೆ ಚಂದ್ರಮ್ಮ, ಮಂಜಪ್ಪ, ಜಾನಕಿ, ಚಂದು ಹಾಗೂ ಕೌಶಲ್ಯಾ ಅವರ ಕುಟುಂಬಗಳು ಸ್ಥಳಾಂತರಗೊಳ್ಳುವಂತೆ ನಾಡಕಚೇರಿ ಅಧಿಕಾರಿಗಳು ಮಂಗಳವಾರವೇ ನೋಟಿಸ್ ನೀಡಿದ್ದಾರೆ. ಅಗತ್ಯ ಬಿದ್ದರೆ ಸಂತ್ರಸ್ತರಿಗೆ ಗಂಜಿ ಕೇಂದ್ರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಗೋಡೆಗೆ ಹಾನಿ: ಕರ್ಕೆಶ್ವರ ಗ್ರಾಪಂ ವ್ಯಾಪ್ತಿಯ ಬಾಳೆಹಿತ್ಲು ಗ್ರಾಮದ ವಿಶ್ವನಾಥ ಅವರ ಮನೆ ಹಿಂಬದಿ ಧರೆ ಕುಸಿದು ಮನೆಮೇಲೆ ಬಿದ್ದು ಹಾನಿ ಸಂಭವಿಸಿದೆ. ಪಿಡಿಒ ಲೋಕೇಶ್, ಗ್ರಾಪಂ ಅಧ್ಯಕ್ಷೆ ವಿನುತಾ ಶ್ರೀನಿವಾಸ್, ಉಪಾಧ್ಯಕ್ಷ ಎಂ.ಆರ್. ದಿನಕರ್, ನಾಡಕಚೇರಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ಜಮೀನು ಜಲಾವೃತ

ಪ್ರವಾಹದಿಂದ ನದಿಯ ಆಸುಪಾಸಿನ ಸಾವಿರಾರು ಎಕರೆ ಭತ್ತದ ಗದ್ದೆ, ಅಡಕೆ, ಕಾಫಿ, ಬಾಳೆ ತೋಟ, ವಿವಿಧ ರೀತಿಯ ಕೃಷಿ ಜಮೀನು ಜಲಾವೃತಗೊಂಡಿವೆ. ಪಟ್ಟಣದ ರೋಟರಿ ವೃತ್ತದ ಸಮೀಪದ ಗದ್ದೆ, ಅಡಕೆ ತೋಟ, ಮಸೀದಿ ಮುಂಭಾಗದ ಅಡಕೆ ತೋಟ, ಡೋಬಿಹಳ್ಳ ಸಮೀಪದ ಅಡಕೆ ತೋಟಗಳು, ಹೊಳೆಬಾಗಿಲು, ಬಂಡಿಮಠ, ಮಾಗುಂಡಿ, ಬನ್ನೂರು, ಜಕ್ಕಣಕ್ಕಿ ಮುಂತಾದೆಡೆ ಕೃಷಿ ಜಮೀನುಗಳು ನೀರಲ್ಲಿ ಮುಳುಗಿವೆ.

 

ದಿಢೀರ್ ಏರಿಕೆ

ಪಟ್ಟಣದಲ್ಲಿ ಹರಿಯುವ ಭದ್ರಾನದಿಯಲ್ಲಿ ಬೆಳಗ್ಗೆ 7ಗಂಟೆ ವೇಳೆಗೆ 3.5 ಮೀಟರ್ ನೀರಿನ ಹರಿವು ಇದ್ದು, 11 ಗಂಟೆ ವೇಳೆಗೆ 6 ಮೀಟರ್ ಹರಿವು ಇತ್ತು. ಮಧ್ಯಾಹ್ನ 12 ಗಂಟೆಯಾಗುತ್ತಲೇ 8.5 ಮೀಟರ್​ನಷ್ಟು ಏರಿತು. ಇದು ಹಲವು ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿದೆ.

Leave a Reply

Your email address will not be published. Required fields are marked *

Back To Top