Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಸ್ಯಾಮ್ಸನ್ ಅಬ್ಬರಕ್ಕೆ ಶರಣಾದ ಆರ್​ಸಿಬಿ

Monday, 16.04.2018, 3:03 AM       No Comments

|ಗಣೇಶ್ ಉಕ್ಕಿನಡ್ಕ

ಬೆಂಗಳೂರು: ಪರಿಸರ ಉಳಿಸುವ ಜಾಗೃತಿಯಲ್ಲಿ ಹಸಿರು ಜೆರ್ಸಿಯೊಂದಿಗೆ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್​ಸಿಬಿ) ತಂಡ ಕಣಕ್ಕಿಳಿದು ಎಲ್ಲರ ಗಮನ ಸೆಳೆದರೂ ಗೆಲುವಿನ ಹರ್ಷ ಕಾಣಲಿಲ್ಲ. ಐಪಿಎಲ್-11ರ ತವರಿನ 2ನೇ ಪಂದ್ಯದಲ್ಲಿ ಕಣಕ್ಕಿಳಿದ ಆರ್​ಸಿಬಿ ತಂಡ ಕನ್ನಡಿಗ ಶ್ರೇಯಸ್ ಗೋಪಾಲ್(22ಕ್ಕೆ 2) ಸ್ಪಿನ್ ದಾಳಿ ಹಾಗೂ ಸಂಜು ಸ್ಯಾಮ್ಸನ್(92*ರನ್, 45ಎಸೆತ, 2 ಬೌಂಡರಿ, 10 ಸಿಕ್ಸರ್ ) ಸ್ಪೋಟಕ ಆಟಕ್ಕೆ 19 ರನ್​ಗಳಿಂದ ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಶರಣಾಯಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ತಂಡ ಸ್ಪಿನ್ನರ್ ಚಾಹಲ್(22ಕ್ಕೆ2) ದಾಳಿಗೆ ಆರಂಭಿಕ ಆಘಾತ ಕಂಡರೂ ನಂತರ ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್​ಗೆ 217 ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಆರ್​ಸಿಬಿ ತಂಡ ವಿರಾಟ್ ಕೊಹ್ಲಿಯ(57ರನ್, 30ಎಸೆತ, 7ಬೌಂಡರಿ, 2ಸಿಕ್ಸರ್) ಆಕರ್ಷಕ ಅರ್ಧಶತಕದಿಂದ ಗೆಲುವಿನತ್ತ ಸಾಗಿದ್ದರೂ ನಂತರ ದಿಢೀರ್ ಕುಸಿತ ಕಂಡು 6 ವಿಕೆಟ್​ಗೆ 198 ರನ್ ಗಳಿಸಲಷ್ಟೆ ಶಕ್ತವಾಯಿತು. ಅಂತಿಮವಾಗಿ ಮಂದೀಪ್ ಸಿಂಗ್(47*ರನ್, 25 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ವಾಷಿಂಗ್ಟನ್ ಸುಂದರ್(35ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಗೆಲುವಿನ ಪ್ರಯತ್ನ ಮಾಡಿದರೂ ಯಶಸ್ಸು ಸಿಗಲಿಲ್ಲ.

ಆರ್​ಸಿಬಿಗೆ ಶ್ರೇಯಸ್ ಲಗಾಮು: ಕೊಹ್ಲಿ ಮತ್ತು ಡಿಕಾಕ್ ಜೋಡಿ ಅಬ್ಬರಿಸುತ್ತಿದ್ದಾಗ ಗೆಲುವಿನತ್ತ ಸಾಗಿದ್ದ ಆರ್​ಸಿಬಿ ತಂಡಕ್ಕೆ ಲಗಾಮು ಹಾಕಿದ್ದು ಸ್ಥಳೀಯ ಪ್ರತಿಭೆ ಶ್ರೇಯಸ್ ಗೋಪಾಲ್. ಕೊಹ್ಲಿ ಹಾಗೂ ವಿಲಿಯರ್ಸ್​ರ ವಿಕೆಟ್ ಉರುಳಿಸಿ ರಾಜಸ್ಥಾನದ ಜಯಕ್ಕೆ ಕಾರಣರಾದರು. ವಿಲಿಯರ್ಸ್​ಗೆ ವಿಕೆಟ್ ಕೀಪರ್ ಜಾಸ್ ಬಟ್ಲರ್ ಆರಂಭದಲ್ಲೆ ಎರಡು ಬಾರಿ ಜೀವದಾನ ನೀಡಿದರು. 2 ರನ್ ಗಳಿಸಿದ್ದಾಗ ಕನ್ನಡಿಗ ಶ್ರೇಯಸ್ ಗೋಪಾಲ್ ಓವರ್​ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಲು ಮುಂದೆ ಬಂದ ಎಬಿಡಿ ಸ್ಟಂಪ್ಡ್ ಔಟ್​ನಿಂದ ಬಚಾವಾದರೆ, ಬೆನ್ನಲ್ಲೆ ಬಟ್ಲರ್ ರನೌಟ್ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡರು. ತಂಡದ ಮೊತ್ತ 10.1 ಓವರ್​ಗಳಲ್ಲಿ 101 ಆಗಿದ್ದಾಗ ಮಿಡ್​ವಿಕೆಟ್​ನತ್ತ ಸಿಕ್ಸರ್​ಗೆ ಪ್ರಯತ್ನಿಸಿದ ಕೊಹ್ಲಿ ಕ್ಯಾಚ್ ಕೊಟ್ಟು ಔಟಾದರಲ್ಲದೆ, ಪಂದ್ಯ ರಾಜಸ್ಥಾನದ ಕಡೆಗೆ ತಿರುವಿತು. ಆದಾಗ್ಯೂ ಎಲ್ಲರ ಹಾಟ್ ಫೇವರಿಟ್ ಬ್ಯಾಟ್ಸ್​ಮನ್ ಎಬಿಡಿ ವಿಲಿಯರ್ಸ್(20) ಕ್ರೀಸಿನಲ್ಲಿದ್ದಾಗ ಆರ್​ಸಿಬಿ ಅಭಿಮಾನಿಗಳು ಗೆಲುವಿನ ಆಸೆ ಕಳೆದುಕೊಂಡಿರಲಿಲ್ಲ. ಆದರೆ ತಲಾ 1 ಸಿಕ್ಸರ್, ಬೌಂಡರಿಗಷ್ಟೆ ಎಬಿಡಿ ಅಬ್ಬರ ನಿಂತಿತು. ಶ್ರೇಯಸ್ ಗೋಪಾಲ್ ಓವರ್​ನಲ್ಲಿ ಎಬಿಡಿ ಉನಾದ್ಕತ್​ಗೆ ಕ್ಯಾಚ್ ನೀಡುತ್ತಿದ್ದಂತೆ ಆರ್​ಸಿಬಿ ಗೆಲುವಿನ ಆಸೆ ಕೈಬಿಟ್ಟಿತು.

ವಿರಾಟ್ ಕೊಹ್ಲಿ ಕ್ಲಾಸ್ ಫಿಫ್ಟಿ

ರಾಜಸ್ಥಾನ ನೀಡಿದ ಬೃಹತ್ ಸವಾಲನ್ನು ಬೆನ್ನಟ್ಟಲು ಬೇಕಿದ್ದ ಉತ್ತಮ ಆರಂಭ ಸಿಗಲಿಲ್ಲ. ಕಿವೀಸ್ ಸ್ಪೋಟಕ ಬ್ಯಾಟ್ಸ್​ಮನ್ ಬ್ರೆಂಡನ್ ಮೆಕ್ಕಲಂ(4) ಒಂದು ಬೌಂಡರಿ ಬಾರಿಸಿ ಕನ್ನಡಿಗ ಕೆ ಗೌತಮ್ೆ ವಿಕೆಟ್ ಒಪ್ಪಿಸಿದರು. ಆ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ವಿಂಟಾನ್ ಡಿಕಾಕ್(26) ಆಕರ್ಷಕ ಬ್ಯಾಟಿಂಗ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಇವರಿಬ್ಬರು 2ನೇ ವಿಕೆಟ್​ಗೆ ಬಿರುಸಿನ 77ರನ್ ಜತೆಯಾಟವಾಡಿ ಗೆಲುವಿನ ನಿರೀಕ್ಷೆ ಮೂಡಿಸಿದರು. ಈ ನಡುವೆ ಡಿಕಾಕ್​ರನ್ನು ಡಾರ್ಸಿ ಶಾರ್ಟ್ ಔಟ್ ಮಾಡಿ ರಾಜಸ್ಥಾನಕ್ಕೆ ಮೊದಲ ಬ್ರೇಕ್ ಒದಗಿಸಿದರು.

ಸ್ಯಾಮ್ಸನ್ ಆರ್ಭಟ

ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ 45 ರನ್ ಬಾರಿಸಿ ಪ್ರತಿರೋಧ ನೀಡಿದ್ದ ನಾಯಕ ಅಜಿಂಕ್ಯ ರಹಾನೆ(36ರನ್, 20 ಎಸೆತ, 6 ಬೌಂಡರಿ, 1ಸಿಕ್ಸರ್) ಇಲ್ಲಿ ಜಾಗರೂಕತೆಯ ಇನಿಂಗ್ಸ್ ಮೂಲಕ ಆರಂಭ ಒದಗಿಸಿದರು. ಬಿಗ್​ಬಾಷ್ ಸ್ಪೋಟಕ ಸ್ಟಾರ್ ಬ್ಯಾಟ್ಸ್​ಮನ್ ಡಾರ್ಸಿ ಶಾರ್ಟ್ (11) ನಾಯಕನೊಂದಿಗೆ ಕಣಕ್ಕಿಳಿದರೂ ಈ ಬಾರಿಯೂ ನಿರೀಕ್ಷೆಯ ಬ್ಯಾಟಿಂಗ್ ಮಾಡಲಿಲ್ಲ. ಒಂದು ಹಂತದಲ್ಲಿ ರಾಜಸ್ಥಾನ ತಂಡ 160ರ ಗಡಿ ದಾಟುವುದು ಕಠಿಣವಾಗಿತ್ತು. ಆದರೆ ಏಕಾಂಗಿಯಾಗಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಕೇರಳ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ ಸ್ಲಾಗ್ ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳನ್ನು ಬೆಂಡೆತ್ತಿದರು. ಆಕರ್ಷಕ 10 ಸಿಕ್ಸರ್​ಗಳ ಸಿಡಿಸಿದ ಸ್ಯಾಮ್ಸನ್ ನಿರಾಳವಾಗಿ ತಂಡದ ಮೊತ್ತವನ್ನು 215ರ ಗಡಿ ದಾಟಿಸಿದರು.

ಯಜುವೇಂದ್ರ ಚಾಹಲ್ ಆರಂಭಿಕ ಬ್ರೇಕ್

ಹಿಂದಿನೆರಡು ಪಂದ್ಯಗಳಲ್ಲಿ ನೀರಸವಾಗಿದ್ದ ಯಜುವೇಂದ್ರ ಇಲ್ಲಿ ಲಯಕ್ಕೆ ಮರಳಿದರಲ್ಲದೆ, ರಾಜಸ್ಥಾನಕ್ಕೆ ಆರಂಭಿಕ ಬ್ರೇಕ್ ಕೊಟ್ಟರು. ರನ್ ಗಳಿಸಲು ಪರದಾಡುತ್ತಿದ್ದ ಡಾರ್ಸಿ ಶಾರ್ಟ್​ರನ್ನು ಚಾಹಲ್ ತಂಡದ ಮೊತ್ತ 53 ಆಗುವಷ್ಟರಲ್ಲಿ ಡಗ್​ಔಟ್ ಸೇರಿಸಿದರು. ಬಳಿಕ ಕ್ರೀಸಿಗಿಳಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್(27ರನ್, 21 ಎಸೆತ, 2 ಬೌಂಡರಿ, 1 ಸಿಕ್ಸರ್), ಸಂಜು ಸ್ಯಾಮ್ಸನ್ ಜತೆ ಬಿರುಸಿನ ಬ್ಯಾಟಿಂಗ್ ಮೂಲಕ 100ರ ಗಡಿ ದಾಟಿಸಿದರು. ಖೆಜ್ರೋಲಿಯಾ ಓವರ್ ಒಂದರಲ್ಲಿ ತಲಾ 1ಬೌಂಡರಿ, ಸಿಕ್ಸರ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಸ್ಟೋಕ್ಸ್​ಗೆ ಬ್ರೇಕ್ ನೀಡಿದ್ದು ಚಾಹಲ್.

 

 

Leave a Reply

Your email address will not be published. Required fields are marked *

Back To Top