Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಮಹಿಳೆಯರಿಗೆ ರಾಜಕೀಯ ಮನ್ನಣೆ ಮರೀಚಿಕೆ

Saturday, 21.04.2018, 3:04 AM       No Comments

ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಪ್ರಾತಿನಿಧ್ಯ ನೀಡುವ ಆಶಯದ ಮಸೂದೆ ಸಂಸತ್​ನಲ್ಲಿ ಮಂಡನೆಯಾಗಿ ಒಂದೂವರೆ ದಶಕವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಒಳಗೊಂಡು ಮುಂದುವರಿಯಬೇಕೆಂಬ ಭಾವನೆಯ ತಿಲಾಂಶವೂ ಮಸೂದೆಯನ್ನು ಅಂಗೀಕರಿಸಿ ಶಾಸನರೂಪ ಕೊಡಬೇಕಾದ ಸಂಸದರಲ್ಲಿ ಕಾಣಿಸುತ್ತಿಲ್ಲ.

ದೇಶದ ಜನಸಂಖ್ಯೆಯಲ್ಲಿ ತುಸು ಹೆಚ್ಚೂಕಡಿಮೆ ಅರ್ಧದಷ್ಟಿರುವ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಕೊಡುವ ಮಾತನ್ನು ಕೇಳುತ್ತ ಕೇಳುತ್ತ ಹಲವು ಚುನಾವಣೆಗಳು ಬಂದು ಹೋಗಿವೆ. ವಿಧಾನಸಭೆ ಮತ್ತು ಲೋಕಸಭೆಗೆ ಮೊದಲ ಚುನಾವಣೆ ನಡೆದ 1952ರಿಂದಲೂ ಮಹಿಳೆಯರಿಗೆ ಅಧಿಕ ಅವಕಾಶ ಕೊಡಬೇಕೆಂಬ ಒತ್ತಾಸೆಯೂ, ಕೊಡುವ ಆಶ್ವಾಸನೆಯೂ ಸಮಸಮ ನೆಲೆಯಲ್ಲಿದೆ. ಆದರೆ ಪುರುಷಪ್ರಧಾನ ವ್ಯವಸ್ಥೆಯಲ್ಲಿರುವ ಅಂತರ್ಗತ ಅಹಮಿಕೆಯ ಕಾರಣವಾಗಿಯೇ ಮಹಿಳೆಯರು ಅವಕಾಶ ವಂಚಿತರಾಗಿರುವುದನ್ನು ದೇಶ ನೋಡುವಂತಾಗಿದೆ. ಕರ್ನಾಟಕ ವಿಧಾನಸಭೆಗೆ ಇದೇ ಮೇ 12ರಂದು ಚುನಾವಣೆ ನಡೆಯುತ್ತಿದೆ. ಅಧಿಕಾರ ಹಿಡಿಯುವ ಸ್ಪರ್ಧೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಗಾಲೋಟ ನಡೆಸಿವೆ. ಆದರೆ ಯಾವ ಪಕ್ಷಕ್ಕೂ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಿಕೊಳ್ಳುವ ಒಳತುಡಿತ ಕಾಡುತ್ತಿದೆ ಎಂದೆನಿಸುತ್ತಿಲ್ಲ. ಹೀಗನ್ನಿಸಲು ಕಾರಣ ಮೂರೂ ಪಕ್ಷಗಳಲ್ಲಿ ಮಹಿಳೆಯರಿಗೆ ನೀಡಿರುವ ಟಿಕೆಟ್​ಗಳ ಸಂಖ್ಯೆ.

ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತುತ ಇರುವ ಶಾಸಕಿಯರ ಸಂಖ್ಯೆ ಐದು! 224 ಸದಸ್ಯರ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇಕಡಾವಾರು ಲೆಕ್ಕದಲ್ಲಿ ನೋಡಿದರೆ 2.25 ಮಾತ್ರ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಪ್ರಾತಿನಿಧ್ಯ ನೀಡುವ ಆಶಯದ ಮಸೂದೆ ಸಂಸತ್​ನಲ್ಲಿ ಮಂಡನೆಯಾಗಿ ಒಂದೂವರೆ ದಶಕವೇ ಕಳೆದು ಹೋಗಿದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಒಳಗೊಂಡು ಮುಂದುವರಿಯಬೇಕೆಂಬ ಭಾವನೆಯ ತಿಲಾಂಶವೂ ಮಸೂದೆಯನ್ನು ಅಂಗೀಕರಿಸಿ ಶಾಸನರೂಪ ಕೊಡಬೇಕಾದ ಸಂಸದರಲ್ಲಿ ಕಾಣಿಸುತ್ತಿಲ್ಲ. ಇಂದಿರಾ ಗಾಂಧಿ, ಜಯಲಲಿತಾ, ಮಾಯಾವತಿ, ಶಾಲಿನಿ ತಾಯಿ ಪಾಟೀಲ, ಮಮತಾ ಬ್ಯಾನರ್ಜಿ, ವಸುಂಧರಾ ರಾಜೇ, ಉಮಾ ಭಾರತಿ, ಪ್ರತಿಭಾ ಪಾಟೀಲ, ಮೀರಾ ಕುಮಾರ್, ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ನಿರ್ಮಲಾ ಸೀತಾರಾಮನ್… ಮುಂತಾದ ಕೆಲವೇ ಕೆಲವು ಹೆಸರುಗಳ ಆಚೆಗೆ ಮಹತ್ವದ ರಾಜಕೀಯ ಹುದ್ದೆಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿಲ್ಲ. ನಮ್ಮ ಸದ್ಯದ ವ್ಯವಸ್ಥೆ ಹೇಗಿದೆಯೆಂದರೆ ಅದನ್ನು ಪಡೆಯಲೂ ಆಗುತ್ತಿಲ್ಲ.

ರಾಜ್ಯ ವಿಧಾನಸಭೆಯಲ್ಲಿ 1957ರಷ್ಟು ಹಿಂದೆಯೇ 13 ಮಹಿಳಾ ಶಾಸಕರು ಇದ್ದರೆನ್ನುವುದು ಈಗ ಕನಸಿನಂತೆ ತೋರುತ್ತದೆ. ಆರು ದಶಕದ ಹಿಂದಿನ ಆ ಚುನಾವಣೆಯಲ್ಲಿ 24 ಮಹಿಳೆಯರು ಸ್ಪರ್ಧಿಸಿ 13 ಜನ ಶಾಸಕರಾದರು. ಆಗ ಒಟ್ಟಾರೆ ಇದ್ದುದು 179 ಕ್ಷೇತ್ರಗಳು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕೆ.ಎಸ್. ನಾಗರತ್ನಮ್ಮ ಗೆದ್ದರು. ಆ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುವುದು ಎಂದರೆ ತಲೆ ಗಟ್ಟಿಯಾಗಿದೆಯೆಂದು ಬಂಡೆಗೆ ಚಚ್ಚಿಕೊಂಡಂತೆ ಆಗುತ್ತಿತ್ತು. ಅಂಥ ಪ್ರತಿಕೂಲ ಸನ್ನಿವೇಶದಲ್ಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಿ ವಿಧಾನಸಭೆ ಪ್ರವೇಶಿಸಿದ ನಾಗರತ್ನಮ್ಮ, ಅದೇ ಕ್ಷೇತ್ರದಿಂದ ಏಳು ಅವಧಿಗೆ ಚುನಾಯಿತರಾದರು. ಕ್ರಮೇಣ ಕಾಂಗ್ರೆಸ್​ಗೆ ಸೇರಿದ ಅವರು ಪ್ರಥಮ ಮಹಿಳಾ ಸ್ಪೀಕರ್ ಕೂಡ ಆದರು.

ಇದೊಂದು ಆಕಸ್ಮಿಕವಲ್ಲ ಎನ್ನುವುದು ಸಾಬೀತಾಗಿದ್ದು 1962ರಲ್ಲಿ. ಆಗ ಮೂವತ್ತು ಮಹಿಳೆಯರು ಸ್ಪರ್ಧಿಸಿ 18 ಜನ ಗೆದ್ದರು. ಆದರೆ ಅಲ್ಲಿಂದ ಮುಂದಕ್ಕೆ ಅದೇನಾಯಿತೋ ಗೊತ್ತಿಲ್ಲ. 1967ರ ಹೊತ್ತಿಗೆ ಮಹಿಳೆಯರಿಗೆ ಟಿಕೆಟ್ ಕೊಡುವುದೇ ಅಪರೂಪ ಎಂಬಂತಾಯಿತು. ಆ ಚುನಾವಣೆಯಲ್ಲಿ ಕೇವಲ ಒಂಭತ್ತು ಮಹಿಳೆಯರು ಕಣಕ್ಕಿಳಿದು ಐವರು ಮಾತ್ರವೇ ಗೆಲ್ಲಲು ಸಾಧ್ಯವಾಯಿತು. 1972ರಲ್ಲಿ 28 ಮಹಿಳೆಯರು ಕಣಕ್ಕೆ ಇಳಿದರು. ಆದರೇನಂತೆ ಯಾವ ಪಕ್ಷದಿಂದಲೂ ಯಾರೊಬ್ಬರೂ ಗೆಲ್ಲಲಿಲ್ಲ. ಆ ನಂತರದ ಚುನಾವಣೆಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಸೆಯೂ ಕ್ರಮೇಣ ಬತ್ತುತ್ತ ಹೋಯಿತು. ಅಧಿಕಾರ ಹಿಡಿಯುವುದು, ಅದಕ್ಕಾಗಿ ಗೆಲ್ಲುವುದು ಮಾತ್ರವೇ ಮುಖ್ಯವಾಗಿ ಮಹಿಳೆಯರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಕಷ್ಟ ಎಂಬ ಪುರುಷ ಸ್ವಹಿತದ ಅಭಿಮತ ಎಲ್ಲ ಪಕ್ಷಗಳ ನಾಯಕರಲ್ಲೂ ಹೆಚ್ಚಾಯಿತು. ಇದೇ ಕರ್ನಾಟಕದಿಂದ 1978ರಲ್ಲಿ ರಾಜಕೀಯ ಪುನರ್ಜನ್ಮ ಪಡೆದ ಇಂದಿರಾ ಗಾಂಧಿಯವರಾಗಲೀ, 1999ರ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕುಟುಂಬ ಕ್ಷೇತ್ರ ಅಮೇಠಿಯಲ್ಲಿ ಒಂದೊಮ್ಮೆ ಸೋತರೆ ಇರಲಿ ಎಂದು ಇನ್ನೊಂದು ಕ್ಷೇತ್ರವಾಗಿ ಬಳ್ಳಾರಿಯಲ್ಲಿ ನಿಂತು ಗೆದ್ದ ಸೋನಿಯಾ ಗಾಂಧಿಯವರಾಗಲೀ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕೆಂಬ ತಾಕೀತನ್ನು ತಮ್ಮ ಪಕ್ಷದಲ್ಲೇ ನೀಡಲು ಅಸಮರ್ಥರಾದರು. ದಲಿತ ಮೀಸಲಾತಿ ಎನ್ನುವುದು ಹೇಗೆ ಭಿಕ್ಷೆಯಲ್ಲವೋ ಅದೇ ಸ್ವರೂಪದ್ದು ಮಹಿಳಾ ಮೀಸಲಾತಿ. ಆದರೆ ಕಾಯ್ದೆ ಇರಲಿ ಇಲ್ಲದಿರಲಿ ಮಹಿಳಾ ಪ್ರಾತಿನಿಧ್ಯ ತಮ್ಮಲ್ಲೇ ಜಾಸ್ತಿ ಎಂದು ಹೇಳಿಕೊಳ್ಳಲು ಈ ಹೊತ್ತು ಯಾವ ಪಕ್ಷವೂ ಸಿದ್ಧವಾಗಿಲ್ಲ.

ಬೆಂಗಳೂರು ನಗರವನ್ನೇ ತೆಗೆದುಕೊಳ್ಳೋಣ. ಈಗ 28 ವಿಧಾನಸಭಾ ಕ್ಷೇತ್ರವಿರುವ ರಾಜಧಾನಿ ನಗರದಲ್ಲಿ ಒಬ್ಬರೂ ಮಹಿಳಾ ಶಾಸಕರಿಲ್ಲ. ವಿಧಾನಸಭೆಯಲ್ಲಿ ನಾಲ್ಕೈದು ಕ್ಷೇತ್ರ ಕಡಿಮೆ ಇದ್ದ 57ರಷ್ಟು ಹಿಂದೆಯೇ ರಾಜಧಾನಿ ಮೂವರು ಮಹಿಳಾ ಎಂಎಲ್​ಎಗಳನ್ನು ನೋಡಿತ್ತು. 62ರಲ್ಲಿ 2; 78ರಲ್ಲಿ ಒಂದು; 94ರಲ್ಲಿ 2; 2008ರಲ್ಲಿ ಒಂದು ಹೀಗೆ ಮಹಿಳಾ ಪ್ರಾತಿನಿಧ್ಯ ವಿಧಾನಸಭೆಯಲ್ಲಿತ್ತು. 1967, 72, 83, 85, 89, 99, 2004ರಲ್ಲಿ ಒಬ್ಬ ಮಹಿಳೆಯೂ ವಿಧಾನ ಸಭೆಗೆ ಬೆಂಗಳೂರು ಮಹಾನಗರದಿಂದ ಆಯ್ಕೆಯಾಗಲಿಲ್ಲ. ಐದು ವರ್ಷದ ಹಿಂದೆ 2008ರಲ್ಲಿ ಒಬ್ಬರು ಆಯ್ಕೆಯಾದರು. 2013ರಲ್ಲಿ ಕಣಕ್ಕೆ ಮಹಿಳಾ ಅಭ್ಯರ್ಥಿಗಳು ಇಳಿದರಾದರೂ ಗೆಲುವು ಅವರ ಕೈಗೆಟುಕಲಿಲ್ಲ. ಈ ಸಲ ಏನಾಗುತ್ತದೋ ಗೊತ್ತಿಲ್ಲ. ಒಂದು ಮಾತಂತೂ ಸತ್ಯ, ಯಾವ ಪಕ್ಷವೂ ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳಾ ಮತದಾರರನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಇಷ್ಟೆಲ್ಲದರ ನಡುವೆಯೂ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವ ಕರ್ನಾಟಕ ಒಂದು ಆದರ್ಶವನ್ನು ದೇಶದ ಮುಂದಿಟ್ಟಿದೆ. ಪಂಚಾಯಿತಿಯ ಮೂರೂ ಹಂತಗಳಲ್ಲಿ- ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ- ಮಹಿಳೆಯರಿಗೆ ಶೇ.ಐವತ್ತರಷ್ಟು ಮೀಸಲಾತಿಯನ್ನು ಕೊಡಮಾಡಲಾಗಿದೆ. ಈ ಕಾಯ್ದೆ ಕಾರಣವಾಗಿ ರಾಜ್ಯದ ಮೂವತ್ತು ಜಿಲ್ಲಾ ಪಂಚಾಯಿತಿಗಳ 997 ಸೀಟುಗಳ ಪೈಕಿ 498 ಮಹಿಳೆಯರ ಕೈಗೆ ಸಿಗುವಂತಾಗಿದೆ. 176 ತಾಲೂಕು ಪಂಚಾಯಿತಿಗಳ ಒಟ್ಟಾರೆ 3659 ಸೀಟುಗಳಲ್ಲಿ 1829 ಮಹಿಳೆಯರಿಗೆಂದೇ ಮೀಸಲಿರಲಿದೆ. ಇನ್ನು, ಗ್ರಾಪಂಗಳ ಒಟ್ಟು ಸುಮಾರು 1 ಲಕ್ಷಕ್ಕಿಂತ ಅಧಿಕ ಸದಸ್ಯರ ಪೈಕಿ ಸರಿಸುಮಾರು ಅರ್ಧದಷ್ಟು ಮಹಿಳೆಯರು ಎಂಬುದು ಗಮನಾರ್ಹ ಸಂಗತಿ.

ಕರ್ನಾಟಕದಲ್ಲಿ ಈ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹ ಮಹಿಳೆಯರ ಸಂಖ್ಯೆ ಅಜಮಾಸು 2 ಕೋಟಿ 44 ಲಕ್ಷ. ಪುರುಷ ಮತದಾರರ ಸಂಖ್ಯೆ 2 ಕೋಟಿ 52 ಲಕ್ಷ. ಅಂದರೆ, ಪುರುಷ-ಮಹಿಳಾ ಮತದಾರರಲ್ಲಿ ಬಹಳ ಅಂತರವೇನೂ ಇಲ್ಲ ಎನ್ನುವುದನ್ನು ಅಂಕಿಸಂಖ್ಯೆ ಹೇಳುತ್ತದೆ. ಆದರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ರಾಜಕೀಯ ಪಕ್ಷಗಳಿಗೆ ಮಹಿಳೆಯರು ಮುಖ್ಯರಾಗುವುದಿಲ್ಲ. ಸೀರೆ, ಕುಕ್ಕರ್, ಟಿವಿ, ನಗದು ಮುಂತಾದವನ್ನು ನೀಡಿ ಮಹಿಳಾ ಮತದಾರರ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸವನ್ನು ಮಾಡುತ್ತ ಬಂದಿರುವ ರಾಜಕಾರಣಕ್ಕೆ ಮಹಿಳೆಯರನ್ನು ರಾಜ್ಯಾಭಿವೃದ್ಧಿಯ ಮುಖ್ಯವಾಹಿನಿಗೆ ಕರೆತರಬೇಕೆಂದು ಹೊಳೆಯದೇ ಇರುವುದಕ್ಕೆ ವಿಶೇಷ ಕಾರಣವೇನೂ ಇರುವುದು ಸಾಧ್ಯವಿಲ್ಲ. ನಮ್ಮ ವಿಧಾನಸಭೆಯಲ್ಲಿ ಕನಿಷ್ಠ ಎಂದರೂ ಎಪ್ಪತ್ತು ಮಹಿಳಾ ಶಾಸಕರು ಇರಬೇಕು. ಇದನ್ನು ಹೇಳಲು ಕಾರಣ ನಿರೀಕ್ಷಿತ ಶೇ. 33 ಮೀಸಲಾತಿ ಕಾಯ್ದೆ. ಮಾತ್ರವಲ್ಲ ಅದಕ್ಕೆ ಸಮಸಮನಾಗಿ ಮಹಿಳಾ ಪ್ರಾತಿನಿಧ್ಯ ಸಚಿವ ಸಂಪುಟದಲ್ಲೂ ಇರಬೇಕಾಗುತ್ತದೆ. ಸಿದ್ದರಾಮಯ್ಯ ಸಂಪುಟದಲ್ಲಿ ಉಮಾಶ್ರೀ ಒಬ್ಬರೇ ಸಚಿವೆ. ಮುಖ್ಯಮಂತ್ರಿ ಹೊರತಾಗಿಸಿ ಮೂವತ್ತನಾಲ್ಕು ಸಚಿವರಿರುವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರವೇ ಅವಕಾಶ ಕಲ್ಪಿಸಿರುವುದು ವಿಪರ್ಯಾಸ. ಆ ಪಕ್ಷ ಈ ಪಕ್ಷ ಎಂದಲ್ಲ ಎಲ್ಲ ಪಕ್ಷಗಳಲ್ಲಿಯೂ ಮಹಿಳೆಯರು ಅವಗಣನೆಗೆ ಈಡಾಗಿದ್ದಾರೆ. ಕರ್ನಾಟಕದ ಪ್ರಸ್ತುತದ ವಿಧಾನಸಭೆಯ 224 ಶಾಸಕರಲ್ಲಿ ಕೇವಲ ಐವರು ಮಾತ್ರವೇ ಮಹಿಳೆಯರು ಎನ್ನುವುದು ಸಾಮಾಜಿಕ ನ್ಯಾಯ ಎಂಬ ಪ್ರಹಸನದ ಮುಖವನ್ನು ಅನಾವರಣಗೊಳಿಸುತ್ತದೆ. ಈ ಬಾರಿಯಾದರೂ ಈ ಚಿತ್ರ ಬದಲಾಗುತ್ತದೆಯೇ…? ಮೇ 15ರಂದು ಒಗಟು ಒಡೆಯಲಿದೆ.

Leave a Reply

Your email address will not be published. Required fields are marked *

Back To Top