Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ರಾಜಕಾರಣಕ್ಕೇ ಹುಚ್ಚುಹಿಡಿದರೆ, ಬಿಡಿಸುವವರಾರು?

Tuesday, 17.04.2018, 3:05 AM       No Comments

ಸಂಸ್ಕೃತಿಪ್ರೇಮಿಗಳು ಇಂದಿಗೂ ಮೆಚ್ಚಿಕೊಳ್ಳುವುದು ತಮಿಳರ ಸಾಧನೆ, ಸಿದ್ಧಿಗಳನ್ನು. ಭರತನಾಟ್ಯ, ಅಲ್ಲಿನ ದೇವಾಲಯಗಳ ಜಗತ್ ಪ್ರಸಿದ್ಧ ಉತ್ಸವಗಳು, ಭಾಷಾಭಿಮಾನ, ಯಾವುದೇ ಶಾಸ್ತ್ರೀಯ ಜ್ಞಾನ ಇತ್ಯಾದಿಗಳಲ್ಲಿ ತಮಿಳರನ್ನು ಸರಿಗಟ್ಟಬಲ್ಲವರು ವಿರಳ. ಹೀಗಿರುವಾಗ ಕನ್ನಡಿಗರ ಮೇಲೆ ವಿಷ ಕಾರುವವರು, ಚಳವಳಿ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಜಾತಿವಾದಿಗಳು ಹೇಗೆ ಬಂದರು?

ಇದನ್ನೋದುವಾಗ ನನಗೇ ಹುಚ್ಚು ಹಿಡಿದಿದೆ ಎಂದು ನಿಮಗೆ ಎನಿಸಿದರೆ ಆಶ್ಚರ್ಯಪಡುವ ಕಾಲ ಇದಲ್ಲ. ಹುಚ್ಚು ಆಗಿದೆ, ಹೆಚ್ಚಾಗುತ್ತಿದೆ, ಉಪಶಮನ ಲಕ್ಷಣಗಳು ಕಾಣುತ್ತಿಲ್ಲ. ‘ಚುನಾವಣೆಗಳು ಎಂಬವು ಜೂಜಿನ ಮಟ್ಟಕ್ಕೆ ಇಳಿದಿದೆ’ ಎಂದರೆ ‘ಏನು ಮಾಡೋಣ? ಸಂದರ್ಭಗಳು ಹಾಗೆ ಮಾಡಿವೆ’ ಎಂದು ಕೈ ಒದರಿಕೊಂಡು ಬೇಜವಾಬ್ದಾರಿ, ಟೊಳ್ಳು ಸಮರ್ಥನೆ, ಆತ್ಮವಂಚನೆ ಮಾಡಿಕೊಳ್ಳುವ ಸಮುದಾಯಗಳು ಹುಟ್ಟಿವೆ. ಎಲ್ಲಿಂದ ಮೊಳೆತು ಬಂದವು, ಈ ಜನಸಮುದಾಯಗಳು? ಪ್ರಶ್ನಿಸಿದರೆ ‘ಜಾತೀಯ ಜನಜಾಗೃತಿ ಆಗುತ್ತಿದೆ. ಋಣಾತ್ಮಕವಾಗಿ ನೋಡಬೇಡಿ. ನಿಮ್ಮ ಓಬಿರಾಯನ ಕಾಲದ ದೃಷ್ಟಿ ಸರಿಪಡಿಸಿಕೊಳ್ಳಿ’ ಎಂದು ನನ್ನಂಥ ವಯಸ್ಸಾದವರಿಗೇ ಬಾಯಿ ಬಡಿಯುವುದು, ತಿರಸ್ಕಾರವಾಗಿ ಮಾತನಾಡುವುದು, ನನ್ನ ಬಗೆಯ ದೃಷ್ಟಿ ಇರುವವರನ್ನು ಹತ್ತಿಕ್ಕುವ ನಾನಾ ಪ್ರಯತ್ನ ಮಾಡುವುದು, ಬರೆಹಗಳನ್ನು ಅಪಪ್ರಚುರಿಸಿ, ತಿರುಚಿ ಜನಗೊಂದಲ ಎಂಬ ಮಂಕನ್ನು ಹರಡುವುದು, ದೊಂಬಿ ಏರ್ಪಡಿಸುವುದು-ಇಂಥ ‘ಪ್ರಗತಿಶೀಲ’ ಕಾರ್ಯಗಳು ಈಗ ಸಾಮಾನ್ಯವಾಗಿ ಬಿಟ್ಟಿವೆ.

ಉದಾಹರಣೆಗಳು ಬೇಕೆ? ಕಾವೇರಿಯ ಬಗ್ಗೆ ‘ನಾವು ಹಿಡಿದದ್ದೇ ನ್ಯಾಯ, ಕೋರ್ಟ್, ಟ್ರಿಬ್ಯುನಲ್ ಬೇಡ’ ಎಂದು ತಮಿಳುನಾಡಿನಲ್ಲಿ ಇತ್ತೀಚೆಗೆ ಒಂದು ರೈಲನ್ನೇ ಸುಟ್ಟರು. ಸುಟ್ಟವರು? ಕೆಲಸವಿಲ್ಲದ ಖಾಲಿ, ಪ್ರತಿಪಕ್ಷದವರು ಎಂದು ಕಾಣಿಸಿತ್ತು. ಕ್ರೆಡಿಟ್ ಅವರದೇ ಆಗಬೇಕಲ್ಲ? ಆಳುಗರು ಇದನ್ನು ತಡೆದರೆ ‘ಇವರು ಕೇಂದ್ರದ ಏಜೆಂಟರು’ ‘ತಮಿಳರ ವಿರುದ್ಧ’ ಎಂದು ಕೂಗು ಎಬ್ಬಿಸಿ, ರಾಜಕೀಯ ಲಾಭ ಪಡೆಯುವುದು ಈ ಚಳವಳಿಯ ಉದ್ದೇಶ. ಹಾಗೂ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಜಪ್ತಿಯಾಗುವ ಸನ್ನಿವೇಶದಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರ. ಕರುಣಾನಿಧಿ ಕಾಲದಿಂದ ನಡೆದು ಬಂದ ರೀತಿ. ಜಯಲಲಿತಾ ಏನೂ ಕಡಿಮೆ ಆಗಲಿಲ್ಲ. ತಮಿಳರ ಈ ಹುಚ್ಚು ನೋಡಿ ದುಃಖ, ಸಂಕಟ, ಉರಿ ಏಳುತ್ತದೆ. ‘ತಮಿಳುನಾಡೇ ನಿನಗೀ ಗತಿಯೇ?’

ನಾನು, ನೀವು ಯಾರೂ ರಾಷ್ಟ್ರಾಭಿಮಾನಿಗಳು, ಸಂಸ್ಕೃತಿ ಪ್ರೇಮಿಗಳು ಇಂದಿಗೂ ಮೆಚ್ಚಿಕೊಳ್ಳುವುದು ತಮಿಳರ ಸಾಧನೆ, ಸಿದ್ಧಿಗಳನ್ನು. ಅಲ್ಲಿನ ಸಂಗೀತವಿದ್ಯೆ ಅಮೆರಿಕ, ಆಸ್ಟ್ರೇಲಿಯಾದಂಥ ವಿದೇಶಗಳಲ್ಲೂ ಆಕರ್ಷಕವಾಗಿ ಹರಡಿ, ಕೀರ್ತಿ ತರುತ್ತಿದೆ. ಭರತನಾಟ್ಯ, ಅಲ್ಲಿನ ದೇವಾಲಯಗಳ ಜಗತ್ ಪ್ರಸಿದ್ಧ ಉತ್ಸವಗಳು, ಭಾಷಾಭಿಮಾನ, ಯಾವುದೇ ಶಾಸ್ತ್ರೀಯ ಜ್ಞಾನದಲ್ಲಿ, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳಲ್ಲಿ ತಮಿಳರನ್ನು ಸರಿಗಟ್ಟಬಲ್ಲವರು ವಿರಳ. ತಮಿಳು ಚಿತ್ರಗಳಲ್ಲಿ ಒರಿಜಿನಾಲಿಟಿ ರೀತಿ ಆವಿಷ್ಕಾರಗಳು, ಎಲ್ಲರಿಗಿಂತ ಮುಂದಾದ ಅನ್ವೇಷಣೆಗಳು ಇವು ಇತರರಿಗೆ ಬೆರಗು ನೀಡುತ್ತವೆ. ಹೀಗಿರುವಾಗ ರೈಲು ಸುಡುವವರು, ಕನ್ನಡಿಗರ ಮೇಲೆ ವಿಷ ಕಾರುವವರು, ಕನ್ನಡಿಗರನ್ನು ಸವಾರಿ ಮಾಡುವವರು, ಚಳವಳಿ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಜಾತಿವಾದಿಗಳು ಎಲ್ಲಿಂದ ಹುಟ್ಟಿ ಬಂದರು? ‘ದೋಷ=ಕಳಂಕ=ಭ್ರಷ್ಟ ಈ ಶಬ್ದಗಳಿಗೆ ‘ದೂಷಿತ’ ಎಂಬರ್ಥದಲ್ಲಿ ‘ದುಷ್ಟ’ ಎಂಬುದು ಸಂಸ್ಕೃತದ ತದ್ಧಿತಾಂತ ಚಛ್ಜಛ್ಚಿಠಿಜಿಡಚ್ಝ… ಎನ್ನಬಹುದಾದ ಸಮೀಕರಣ. ಈಗಣ ರಾಜಕೀಯ ಧುರೀಣರು ಅಲ್ಲಿಯ ಏನನ್ನೂ ಪ್ರತಿನಿಧಿಸುವವರಲ್ಲ! ‘ಜಲ್ಲಿಕಟ್ಟು’ ಎಂಬ ಕ್ರೂರ ಸ್ಪರ್ಧೆಯನ್ನು ಉಚ್ಚ ನ್ಯಾಯಾಲಯ ಪ್ರತಿಷೇಧ ಮಾಡಿದಾಗ ಜನ ಕೇಳಲಿಲ್ಲ.

ನಮ್ಮ ಕರ್ನಾಟಕದಲ್ಲೂ ಹುಚ್ಚು ಹೆಚ್ಚಾಗಿಯೇ ಇದೆ. ಸ್ವಾರ್ಥಿ ರಾಜಕಾರಣಿಗಳು ಬಯಸಿದಾಗ ಸರ್ಕಾರಪ್ರೇರಿತ, ಪೋಷಿತ ‘ಬಂದ್’ಗಳು

ಬೇಕಾದಾಗ ಅದನ್ನು ಕಾಂಟ್ರಾಕ್ಟು ಹಿಡಿದು ನಡೆಸುವ ಕೆಲವರೂ ನಿರ್ವಣವಾಗಿದ್ದಾರೆ. ಕೋರ್ಟ್ ‘ಬಂದ್’ ಕರೆ ಕೊಡುವುದು ಅಪರಾಧ ಎಂದು ತೀರ್ಪಿತ್ತರೂ, ಇವರು ಕೇಳುವುದಿಲ್ಲ. ಸರ್ಕಾರದ ತೀಟೆ, ತುರಿಸು, ಶಮನ ಮಾಡುವವರಾರು? ಚುನಾವಣೆ ನಿಯಮ, ಸಂಹಿತೆಗಳು ಜಾರಿಯಾದರೂ ‘ರ್ಯಾಲಿ’ಗಳು ನಡೆದೇ ಇವೆ. ಅಲ್ಲಿ ಕರೆತರುವವರಿಗೆ ಹಣ ಸಂದಾಯ ಆಗದೆ ಅವರು ಅರಮನೆ ಮೈದಾನದಲ್ಲಿ ಸೇರುವುದಿಲ್ಲ. ಬಹಿರಂಗ ಸತ್ಯ ಇದು. ಇಲ್ಲಿ ಕೇಳಿರಿ-ಮಾರಾಯ್ರೆ! ಇಲ್ಲೆಲ್ಲು ಐಡಿಯಾಲಜಿ, ಧ್ಯೇಯಗಳನ್ನು ಹುಡುಕಬೇಡಿ. ಹುಚ್ಚಾಗುತ್ತೀರಿ! ಘೋಷಣೆ, ರ್ಯಾಲಿ, ರೋಡ್ ಷೋ ಇವೆಲ್ಲ ಇತರರನ್ನು ಮರುಳು ಮಾಡುವ, ಬೆದರಿಸುವ ತಂತ್ರಗಳು. ಇಲ್ಲೂ ಓಟು ಬರುವುದಿಲ್ಲ. ವಿಚಾರವಂತರಾಗಿ, ಯೋಚಿಸಿ, ಜವಾಬ್ದಾರಿಯಿಂದ ಓಟು ಹಾಕುವ ಅಥವಾ ಬೇಸತ್ತು ನಿಷ್ಕ್ರಿಯರಾಗುವ ಜನ ಇಲ್ಲವೆಂದಲ್ಲ. ಇದ್ದಾರೆ. ಆದರೆ ನಿಮ್ಮ ನಾಯಕರನ್ನು ನಿರ್ಧರಿಸುವವರು ಅವರಲ್ಲ! ಓಟು ಸಂಪಾದನೆ ತರುವುದು- ಒಂದು ಜಾತಿ, ಎರಡು ಹಣ. ಇಂದಿನಷ್ಟು ಜಾತಿಬಲ, ಅದನ್ನು ಗುತ್ತಿಗೆ ಪಡೆದು, ಬೆದರಿಸಿಯೋ, ನಾನಾ ವಂಚನೆಗಳಿಂದಲೋ ಗುಡಿಸಿ ರಾಶಿ ಹಾಕಿಕೊಳ್ಳುವ ಶಕ್ತಿ, ಹಿಂದೆ ಎಂದೂ ಇರಲಿಲ್ಲ ಎಂದರೆ ನೀವು ಬೆಚ್ಚುತ್ತೀರಿ! ಯಾರ್ಯಾರೋ ಟಿಕೆಟ್ಟು ಪಡೆಯುವುದೂ ಇದೆ. ಕೊಡದಿದ್ದರೆ ದಾಂಧಲೆ, ಗಲಭೆ, ಜಾತೀಯ ದ್ವೇಷದಡಿ, ನಿರಪರಾಧಿಗಳಿಗೆ ‘ಜೈಲು’, ಅಪರಾಧಿಗಳಿಗೆ ‘ಬೇಲು’-ಇವೆಲ್ಲ ಇವೆ.

ಪಕ್ಷಾಂತರ ನಡೆಯುವುದೂ ಜಾತಿ, ಹಣ ಬಲದಿಂದಲೇ! ಪ್ರತಿಪಕ್ಷಗಳಿಗೆ ನಿರಾಸೆ. ಎಲ್ಲೆಲ್ಲೂ ‘ಪಾರ್ಲಿಮೆಂಟು ಮಂತ್ರ’ ಎನ್ನುತ್ತ ‘ಡೆಮಾಕ್ರಸಿಗೆ ಅಪಾಯ’ ಎಂದು ಕೂಗಾಡುತ್ತ, ಒಂದು ಅಧಿವೇಶನವನ್ನೇ ನಡೆಯಗೊಡಲಿಲ್ಲವಲ್ಲ? ಇದು ಹುಚ್ಚೋ? ಬೆಪ್ಪೋ? ದುರುಳತನವೋ? ಎನ್​ಸಿಸಿ ಎಂದು ಕೇಳಿಯೇ ಇಲ್ಲದವ ಒಂದು ರಾಷ್ಟ್ರೀಯ ಪಕ್ಷಾಧ್ಯಕ್ಷ. ಬೆಂಗಳೂರಲ್ಲಿ ಹೇಳುತ್ತಾನೆ-‘ಮೋದಿಗೆ ವಾರಾಣಸಿಯಲ್ಲಿ ಸೋಲು ಸಂಭವ’ ಎಂದು.

ಯಾವ ಜೋಯಿಸರ ಹುಚ್ಚಾಟವೋ? ಹಿಂದಣವನು ಹೇಳಿದ, ಮಹಾಭಾರತದಲ್ಲಿ-‘ಕೌರವರು ನಾನಾರೆಂದು ಅರಿಯದೇ ಯುದ್ಧಕ್ಕೆ ಬಂದು ಮೋಸ ಹೋದರು. ಭೀಷ್ಮ ಸಾಯುವುದರಲ್ಲಿದ್ದು, ದ್ರೋಣ ಮುದುಕನಾಗಿದ್ದು ನಾನೀಗ ಯಾರೊಡನೆ ಯುದ್ಧ ಮಾಡಲಿ?’ ಎಂದು. ಅದರ ಪ್ರತಿರೂಪ ಈ ಉತ್ತರ. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯನ್ನು ಕೆಳಗಿಳಿಸಲು ದೊಡ್ಡ ಚಳವಳಿ ನಡೆಸಿ ಹತಾಶರಾದರು-ಕಮ್ಯುನಿಸ್ಟ್, ಕಾಂಗ್ರೆಸ್ಸು, ಇನ್ನಿತರ ವಾಮಪಂಥೀಯರು ‘ಇದಾಗದು’ ಎಂದು ಅಂದದ್ದು ವಿವೇಕದಿಂದಲ್ಲ. ಅನಿವಾರ್ಯ, ಅಶಕ್ತತೆಯಿಂದ. ಅವರ ಭವಿಷ್ಯಕ್ಕೆ ಹಣವೂ ಇಲ್ಲ. ಜನಬಲವೂ ಇಲ್ಲ. ಬಲ ತುಂಬಿಕೊಳ್ಳಲು ಇಲ್ಲಿ ಧರ್ಮವನ್ನೇ ಒಡೆಯುವ ತಂತ್ರ ಫೇಲ್ ಆಯ್ತು.

ದಿಕ್ಕುಗೆಟ್ಟ ಕಾಷಾಯವೇಷಧಾರಿ ಹೇಳುತ್ತಾರೆ ‘ಕಾಂಗ್ರೆಸ್ಸಿಗೇ ಓಟು ಹಾಕಿ’ ಎಂದು. ಈಗ ಪ್ರಶ್ನೆ- ಕಾಂಗ್ರೆಸ್ಸಿಗೇ ಕಾಷಾಯ ತೊಡಿಸಿ ಆಯಿತೋ? ಅಥವಾ ಕಾಷಾಯವೇ ಕಾಂಗ್ರೆಸ್ಸಾಗಿ ಬದಲಾಯಿತೋ?

ಒಬ್ಬ ವಚನಕಾರರು ಹೇಳಿದರು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದು. ಅದೊಂದು ಕಾಲವಯ್ಯ. ಈಗ ಯಾವ ರಾಜಕಾರಣಿಯ ಬಾಯಲ್ಲಿದೆ ಈ ಜ್ಯೋತಿರ್ಮಯಿ ಲಿಂಗ? ಎರಡಾದ ಪಂಗಡಗಳಲ್ಲಿ ಯಾರು ಉತ್ತರಿಸುತ್ತೀರಿ? ‘ಲಿಂಗ’ ಇರುವುದು ಹೃದಯ ಗುಹೆಯಲ್ಲಿ ಎಂಬುದು ಕಠೋಪನಿಷತ್ತಿನಷ್ಟು ಹಳೆಯ ಮಂತ್ರಗಳಲ್ಲಿ. ತಿಳಿಯುವುದು ಯಾವಾಗಲಯ್ಯ? ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದರು ಇನ್ನೊಬ್ಬರು. ‘ಬುಸುಗುಡುವ ಹಾವಿನಂತೆ’ ಎಂದು ಯಾರಾದರೂ ಹೇಳಿದರೆ? ಮಠಪತಿಗಳೇ? ರಾಜಕಾರಣಿಗಳ ಹುಚ್ಚಾಟದಲ್ಲಿ ಸಿಕ್ಕಿರಿ ಎಂದು ಯಾರು ಕರೆ ಕೊಟ್ಟರು? ರಾಜಕಾರಣ ಬಿಟ್ಟಲ್ಲವೆ ಬಸವಣ್ಣ ಹೊರಬಂದು ಸುಧಾರಕರಾದದ್ದು? ನೀವು ವಿರುದ್ಧಮಾರ್ಗದಲ್ಲಿ ನಡೆದು ಏಕೆ ಅವರ ಹೆಸರು ಹಾಳು ಮಾಡುತ್ತೀರಿ? ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?’ ಎಂಬ ಜ್ಞಾನೋದಯದ ಮಾತು ನಿಮಗೆ ಏಕೆ ಪಥ್ಯವಲ್ಲ? ನಿಮ್ಮ ಡೊಂಕು ಯಾವುದು? ‘ಡೋಂಕು ಬಾಲದ ನಾಯಕರೇ ನೀವೇನೂಟ ಮಾಡಿದಿರಿ? ಕುಣಿಕ ಕುಟ್ಟುವ ಒನಕೇಲಿ ಹೊಡೆದರೆ, ಕುಂಯ್, ಕುಂಯ್ ರಾಗವ ಹಾಡುವಿರಿ’ ಎಂದರಲ್ಲ ಪುರಂದರದಾಸರು. ಯಾರಿಗೆ ಹೇಳಿದ್ದು? ‘ಕುರುಡು ನಾಯಿ ಸಂತೆಗೆ ಬಂದಿತ್ತು’ ಎಂದರಲ್ಲ, ಅದು ಯಾರ ಸಂತೆ? ಯಾವುದು ಆ ಪ್ರಾಣಿ? ಈಗ ಹೇಳಿ. ಲಿಂಗವು ಸ್ಥಾವರವಾಗಲಿ, ಬೇರೆಯೇ ಆಗಲಿ, ದ್ವಾದಶ ಜ್ಯೋತಿರ್ಲಿಂಗಗಳು ಈಗ ಇರುವಲ್ಲಿ ರೇಡಿಯೋ ವಿಕಿರಣಗಳ ತಡೆಗೆ ಅಲ್ಲಿ ರುದ್ರ ಈ ರೂಪಗಳನ್ನು ತಳೆದ ಎಂಬುದು ವೈಜ್ಞಾನಿಕ ಸತ್ಯ ಎಂದು ಈಗ ತಿಳಿಯುತ್ತಿದೆ. ಒಳಗಿನ ಅಗ್ನಿಶಮನಕ್ಕೆ ಹೀಗೆ ಹೊರಗಣ ‘ಅಗ್ನಿಲಿಂಗ’ ಸ್ಥಾಪನೆ, ಅವತಾರ.

ವೇದ ಹೇಳಿತ್ತು-ಅಗ್ನಿ, ಸೂರ್ಯ, ಶಿವ, ರುದ್ರ-ಇವು ಪರ್ಯಾಯ ನಾಮಗಳು. ಅಗ್ನಿಶಮನಕ್ಕಾಗಿಯೇ ‘ಅಭಿಷೇಕಪ್ರಿಯೋ ಶಿವಃ’ ಎಂಬ ಮಾತು ಬಂದಿತ್ತು. ಅದಕ್ಕೆಂದೇ ಅಗ್ನಿಪ್ರಸಾದ=ಭಸ್ಮವೇ ಇಂದಿಗೂ ಪ್ರಸಾದ. ಬಿಲ್ವಪತ್ರೆಗೆ ಉಪಶಮನ ಶಕ್ತಿ ಉಂಟು. ಅಲ್ಲಿ ಲಕ್ಷ್ಮೀನಿವಾಸವೆಂದು ಶ್ರೀಸೂಕ್ತ ಹೇಳುತ್ತದೆ. ‘ದೇವನೊಬ್ಬ ನಾಮ ಹಲವು’ ಎಂಬುದು ಇಂದಿನ ರಾಜಕಾರಣಿಗಳು ಮಾಡುವ ಮೃದುಹಿಂದುತ್ವ ವಂಚನೆಯಲ್ಲವಲ್ಲ, ‘ರಾಗಾ’ ಎಳೆಯುವ ‘ರಾಗರಿಗೆ’ ಇದನ್ನು ಹೇಳುವವರಾರು? ಜಗಳವೇಕೆ? ಕೋಪವೇಕೆ? ಕಾಷಾಯಧಾರಿಗಳೇ! ನಿಮಗೂ ಬೇಕು, ರಾಜಕೀಯ ಶಕ್ತಿ. ಅಧ್ಯಾತ್ಮಶಕ್ತಿಯಲ್ಲ! ಇದು ಬಹಿರಂಗ ಸತ್ಯ. ‘ಧಿಗ್ ಬಲಂ ಕ್ಷತ್ರಿಯ ಬಲಂ, ಬ್ರಹ್ಮತೇಜೋ ಬಲಂ ಬಲಂ’ ಎಂದರು ಸೋತ ವಿಶ್ವಾಮಿತ್ರರು. ನೀವು ಇದರ ವಿರುದ್ಧ ನಡೆಯುತ್ತ ಸಾಧಿಸುವುದು ಒಂದೇ-ಸ್ವಾತ್ಮನಾಶ. ‘ಜಾತಿ ಬೇಡ’ ಎನ್ನುತ್ತ ಜಾತಿಗೇ ಗಂಟು ಬೀಳುವುದು, ‘ವರ್ಣಾಶ್ರಮ ಬೇಡ’ ಎನ್ನುತ್ತ ಆಶ್ರಮ, ಕಾಷಾಯಗಳಿಗೇ ಶರಣಾಗುವುದು-ಇದು ಹುಚ್ಚಲ್ಲದೆ ಬೇರೇನು’? ಜೈಲು ಸೇರುವ ಉದ್ದೇಶವೇ? ಜಯಲಲಿತಾಗೆ ಶಿಕ್ಷೆಯಾದ ಮೇಲೂ ಜನ ಗೌರವಿಸಿದರಲ್ಲ? ಒಳಗಿದ್ದೇ ಶಶಿಕಲಾ ಮಾಡುತ್ತಿರುವುದೇನು? ಹಿರಣ್ಯಕಶಿಪು ಕಾಲವೂ ಹೀಗೇ ಆದಾಗ, ಕಂಬದಿಂದ ಒಂದು ಆಕೃತಿ ಹೊರ ಬಂತು! ಮುಗಿಸಿತ್ತು. ಅದು ಎಲ್ಲೆಲ್ಲೂ ಇದೆ. ದೈವಶಕ್ತಿ. ಹುಚ್ಚು ಬಿಡಿಸುವುದು ಇದೇ!

(ಲೇಖಕರು ಬಹುಶ್ರುತ ವಿದ್ವಾಂಸರು,

ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top