Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಬದಲಾವಣೆ ಜಾಲದಲ್ಲಿರುವ ಕಾಂಗ್ರೆಸ್​ಗೆ ಪ್ರಾಜೆಕ್ಟ್ ಶಕ್ತಿ

Thursday, 09.08.2018, 3:04 AM       No Comments

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಪಕ್ಷದ ಬೇರು ಗಟ್ಟಿಯಾಗಬೇಕೆಂದರೆ ಕೇಡರ್ ಬಲಗೊಳ್ಳಲೇಬೇಕೆಂಬ ಪ್ರಯತ್ನಕ್ಕೆ ಕೈಹಾಕುತ್ತಿರುವ ಕಾಂಗ್ರೆಸ್, ಕಾರ್ಯಕರ್ತರು ಮತ್ತು ಹಿತೈಷಿಗಳ ಅಭಿಪ್ರಾಯವನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಆರಂಭಿಸಿರುವ ‘ಪ್ರಾಜೆಕ್ಟ್ ಶಕ್ತಿ’ ಯೋಜನೆಯನ್ನು ಲೋಕಸಭಾ ಚುನಾವಣೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ. ನಿರೀಕ್ಷೆಯಂತೆ ರಾಜ್ಯದಲ್ಲಿ ನೋಂದಣಿ ನಡೆದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಪ್ರಯೋಗಾರ್ಥವಾಗಿ ಇದನ್ನು ಬಳಕೆ ಮಾಡಿಕೊಳ್ಳುವ ಆಲೋಚನೆ ಇದೆ.

ಏನಿದು ಪ್ರಾಜೆಕ್ಟ್ ಶಕ್ತಿ?: ಎಸ್​ಎಂಎಸ್ ಕಳಿಸುವ ಮೂಲಕ ಕಾಂಗ್ರೆಸ್ ಸದಸ್ಯತ್ವ ಪಡೆಯುವ, ನೋಂದಣಿಯಾದವರ ಜತೆ ದ್ವಿಮುಖ ಸಂವಹನ ನಡೆಸಲು ಅನುಕೂಲವಾಗುವ ಶಕ್ತಿ ಸದಸ್ಯತ್ವ ಅಭಿಯಾನಕ್ಕೆ ಪ್ರಾಜೆಕ್ಟ್ ಶಕ್ತಿ ಎಂದು ಹೆಸರು ಕೊಡಲಾಗಿದೆ. ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು (ವೋಟರ್ ಐಡಿ) 7045006100 ನಂಬರ್​ಗೆ ಎಸ್ಸೆಮ್ಮೆಸ್ ಕಳಿಸ ಬೇಕು. ತಕ್ಷಣವೇ ಮೊಬೈಲ್​ಗೆ ಧನ್ಯವಾದ ಮೆಸೇಜ್ ಬರುತ್ತದೆ. ಬಳಿಕ ಕಾಲ್​ಸೆಂಟರ್​ನಿಂದ ದೂರವಾಣಿ ಕರೆ, ರಾಹುಲ್ ಗಾಂಧಿ ಧ್ವನಿ ಮುದ್ರಿಕೆಯಲ್ಲಿ ಧನ್ಯವಾದ ತಿಳಿಸಲಾಗುತ್ತದೆ. ಈ ಮೂಲಕ ನೋಂದಣಿ ಮಾಡಿಕೊಂಡವರು ಪ್ರಾಜೆಕ್ಟ್ ಶಕ್ತಿ ವ್ಯಾಪ್ತಿಯೊಳಗೆ ಬರಲಿದ್ದಾರೆ.

ಪಕ್ಷದ ಸಂದೇಶಗಳನ್ನು ಕಾಲಕಾಲಕ್ಕೆ ನೇರವಾಗಿ ಕಳುಹಿಸುವ ಜತೆಗೆ ಪ್ರಶ್ನೆ ರೂಪದ ಸಂದೇಶ ಕಳುಹಿಸಿ ಉತ್ತರ ಪಡೆದುಕೊಳ್ಳುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ನೋಂದಾಯಿತರ ಮೊಬೈಲ್ ಸಂಖ್ಯೆ ಜತೆ ಎಪಿಕ್ ಕಾರ್ಡ್ ಸಂಖ್ಯೆ ಕೂಡ ದಾಖಲಾಗುವುದರಿಂದ ಪ್ರತಿಯೊಬ್ಬರ ಪ್ರಾಥಮಿಕ ವೈಯಕ್ತಿಕ ಮಾಹಿತಿ ಪಕ್ಷದ ಡೇಟಾ ಬ್ಯಾಂಕ್​ನಲ್ಲಿ ಶೇಖರಣೆಯಾಗುತ್ತದೆ. ಉತ್ತರ ಬಯಸುವ ಸಂದೇಶ ಪಕ್ಷದಿಂದ ಕಳಿಸಿದಾಗ ಯಾವ ವಯಸ್ಸಿನವರು ಯಾವ ರೀತಿಯ ಅಭಿಪ್ರಾಯ ನೀಡಿದ್ದಾರೆಂಬುದೂ ಪಕ್ಷಕ್ಕೆ ಸ್ಪಷ್ಟವಾಗಿ ಅರಿವಾಗಲಿದೆ.

ಮುಂದೇನು?: ನೋಂದಣಿ ಕಾರ್ಯ ತೀವ್ರಗೊಳಿಸುವಂತೆ ಎಲ್ಲ ಹಂತದ ಘಟಕಗಳಿಗೂ ಸೂಚನೆ ನೀಡಲಾಗಿದೆ. ನಿರೀಕ್ಷೆಯಂತೆ ನೋಂದಣಿ ಪ್ರಕ್ರಿಯೆ ನಡೆದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದಿಂದ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂದು ಕೆಲವು ಕಡೆಗಳಲ್ಲಿ ಈ ವೇದಿಕೆ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅದರಂತೆಯೇ ಟಿಕೆಟ್ ನೀಡಲಾಗುತ್ತದೆ. ಮುಂದೆ ಲೋಕಸಭಾ ಚುನಾವಣೆ ವೇಳೆ ಪಕ್ಷದ ಸಂದೇಶವನ್ನು ನೋಂದಣಿಗೊಂಡವರಿಗೆ ಕಳುಹಿಸುವ ಜತೆಗೆ ಪ್ರತಿಕ್ರಿಯೆ, ನಾಡಿಮಿಡಿತ ಅರಿತು ದೋಷಗಳಿ ದ್ದರೆ ತಿದ್ದಿಕೊಳ್ಳುವ ಕೆಲಸ ಮಾಡಲು ಉದ್ದೇಶಿಸಲಾಗಿದೆ. ಪದಾಧಿಕಾರಿ ಬದಲಾವಣೆ ಸಂದರ್ಭದಲ್ಲಿಯೂ ಪ್ರಾಜೆಕ್ಟ್ ಶಕ್ತಿ ಮೂಲಕ ಅಭಿಪ್ರಾಯ ಸಂಗ್ರಹಿಸಿಯೇ ತೀರ್ಮಾನ ಕೈಗೊಳ್ಳುವ ಒಂದು ಮೆಕ್ಯಾನಿಸಂ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಂಘಟನೆ ಮೇಲೆ ಕಣ್ಣು

ಪ್ರಾಜೆಕ್ಟ್ ಶಕ್ತಿಗೆ ಮೂರು ದಿನದಲ್ಲಿ 30 ಸಾವಿರಕ್ಕಿಂತ ಹೆಚ್ಚು ನೋಂದಣಿಯಾಗಿದೆ. ಈ ಮೂಲಕ ಯಾವ ಕ್ಷೇತ್ರದಲ್ಲಿ ಸಂಘಟನೆ ಕ್ರಿಯಾಶೀಲವಾಗಿದೆ ಎಂದು ಅರಿತುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ರಾಜ್ಯದ ಎಲ್ಲ ಜಿಲ್ಲಾ, ಬ್ಲಾಕ್ ಘಟಕಗಳಿಗೂ ಪ್ರಾಜೆಕ್ಟ್ ಶಕ್ತಿಗೆ ತಕ್ಷಣವೇ ನೋಂದಣಿ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಕಾರ್ಯಕರ್ತರು ಮತ್ತು ಹಿತೈಷಿಗಳು ಮೊದಲು ನೋಂದಣಿ ಮಾಡಿಕೊಳ್ಳಬೇಕೆಂಬ ಗುರಿ ನೀಡಲಾಗಿದೆ. ಪ್ರಸ್ತುತ ರಾಜ್ಯದ ಪ್ರತಿ ಮೂಲೆಯಲ್ಲೂ ನೋಂದಣಿ ಕಾರ್ಯ ಹೇಗೆ ನಡೆದಿದೆ ಎಂಬುದನ್ನು ಬೆಂಗಳೂರು ಕಚೇರಿಯಿಂದಲೇ ವೀಕ್ಷಿಸುವ ಅವಕಾಶವಿದೆ. ಯಾವ ಬ್ಲಾಕ್, ಯಾವ ಜಿಲ್ಲಾ ಘಟಕ ನೋಂದಣಿ ಕ್ರಿಯೆಯಲ್ಲಿ ಕ್ರಿಯಾಶೀಲವಾಗಿದೆ ಎಂದು ಪರಿಶೀಲಿಸಲಾಗಿದೆ. ರಾಹುಲ್ ಗಾಂಧಿ ಅವರು ವಿಶೇಷ ಕಾಳಜಿಯಿಂದ ರೂಪಿಸಿರುವ ಈ ಯೋಜನೆ ಅನುಷ್ಠಾನಕ್ಕೆ ನಿರಾಸಕ್ತಿ ತೋರುವವರು ಯಾರೆಂಬುದೂ ಗೊತ್ತಾಗಲಿದೆ ಎಂದು ಪ್ರಾಜೆಕ್ಟ್ ಶಕ್ತಿಯ ಪ್ರಮುಖರು ತಿಳಿಸಿದ್ದಾರೆ.

ಪ್ರಾಜೆಕ್ಟ್ ಶಕ್ತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಂಘಟನೆ, ಚುನಾವಣೆ ವೇಳೆ ಈ ಯೋಜನೆ ದ್ವಿಮುಖ ಮಾಹಿತಿ ಹಂಚಿಕೊಳ್ಳಲು ಅನುಕೂಲವಾಗುತ್ತದೆ.

| ಸೂರಜ್ ಹೆಗ್ಡೆ ಪ್ರಾಜೆಕ್ಟ್ ಶಕ್ತಿ ರಾಜ್ಯ ಸಮನ್ವಯಕಾರ

ನಾಯಕತ್ವದ್ದೇ ಸವಾಲು

ಬಿಜೆಪಿಯಲ್ಲಿ ಪಕ್ಷ ಸಂಘಟನೆ ಇದೇ ರೀತಿಯ ಅಭಿಯಾನವೊಂದನ್ನು ಗುರಿ ಮುಟ್ಟಿಸಿತ್ತು. ಕಾಂಗ್ರೆಸ್​ನಲ್ಲಿ ಆ ಪರಿಸ್ಥಿತಿ ಇಲ್ಲ. ನಾಯಕರ ಆಧಾರಿತ ಕಾಂಗ್ರೆಸ್​ನಲ್ಲಿ ಆಯಾಯ ನಾಯಕರು ಸೂಚನೆ ಕೊಟ್ಟರಷ್ಟೇ ಅನುಯಾಯಿಗಳು ಆದೇಶ ಪಾಲಿಸುತ್ತಾರೆ. ಸದ್ಯ ಪ್ರಮುಖ ನಾಯಕರು ಈ ಯೋಜನೆಯಲ್ಲಿ ನೋಂದಣಿ ಮಾಡಿಸಲು ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂಬ ಮಾಹಿತಿ ಇದೆ.

Leave a Reply

Your email address will not be published. Required fields are marked *

Back To Top