More

    ಪರಂಪರೆ|ಅಶ್ವಮೇಧ ಯಾಗಕ್ಕೆ ವೇದವ್ಯಾಸರ ಸೂಚನೆ

    ಪರಂಪರೆ|ಅಶ್ವಮೇಧ ಯಾಗಕ್ಕೆ ವೇದವ್ಯಾಸರ ಸೂಚನೆಕುರುಕುಲದ ಹಿರಿಯನಾದ ಧೃತರಾಷ್ಟ್ರನೇ ಸ್ವತಃ ವಾಸ್ತವದ ಚಿಂತನೆಯ ಹಿತನುಡಿಗಳನ್ನು ಹೇಳಿ ಯುಧಿಷ್ಠಿರನನ್ನು ಸಮಚಿತ್ತನನ್ನಾಗಿಸಲು ಪ್ರಯತ್ನಿಸಿದನು. ಆದರೆ ಅವನು ಮಾತ್ರ ಅದೇ ಗ್ಲಾನಿಯಲ್ಲೇ ಮುಳುಗಿ ಮೌನವಾಗಿಯೇ ಕುಳಿತಿದ್ದನು. ಅದನ್ನು ಗಮನಿಸಿದ ಶ್ರೀಕೃಷ್ಣನೇ ಯುಧಿಷ್ಠಿರನ ಸಮ್ಮುಖಕ್ಕೆ ಬಂದು ಅವನನ್ನು ಸಮಚಿತ್ತನನ್ನಾಗಿಸಲು ತೊಡಗಿದನು. ಕುರುಕುಲ ಶ್ರೇಷ್ಠ! ಯಾರೇ ಸಮಾಧಾನ ಹೇಳಿದರೂ ಮೃತರಾದವರನ್ನೇ ಪುನಃ ಪುನಃ ನೆನೆದು ಶೋಕಿಸುತ್ತಿದ್ದರೆ ಅವರ ಜೀವಾತ್ಮವನ್ನು ಹಿಂದೆಳೆದು ಮತ್ತಷ್ಟು ಸಂಕಟದಲ್ಲಿ ಮುಳುಗಿಸಿದಂತಾಗುತ್ತದೆ. ಈ ದುಃಖವನ್ನು ತೊರೆದು ನಾನಾ ವಿಧವಾದ ಧರ್ಮಯುಕ್ತ ಕರ್ಮಗಳನ್ನು ಕೈಗೊಳ್ಳುವ ಮೂಲಕ ದೇವತೆಗಳನ್ನು ಹಾಗೂ ಶಾಸ್ತ್ರೋಕ್ತ ತರ್ಪಣಾದಿ ಕಾರ್ಯಗಳ ಮೂಲಕ ಪಿತೃಗಳನ್ನು ತೃಪ್ತಿಗೊಳಿಸು.

    ಅತಿಥಿಗಳಿಗೆ ಅನ್ನ ಪಾನಾದಿಗಳನ್ನು ಉಣಿಸಿ, ದೀನ ದುರ್ಬಲರಿಗೂ ಇಷ್ಟಭೋಜನ, ತಕ್ಕ ಇಷ್ಟದ್ರವ್ಯಗಳನ್ನು ನೀಡಿ ತೃಪ್ತಿಗೊಳಿಸು. ಈಗಾಗಲೇ ಕುಲಶ್ರೇಷ್ಠ ಭೀಷ್ಮನಿಂದ ಜೀವನ, ಧರ್ಮ, ನೀತಿ ಹಾಗೂ ರಾಜಧರ್ಮಪಾಲನೆಯ ಉತ್ಕ್ರಷ್ಟ ಬೋಧನೆ ಪಡೆದು ಸಾಕಷ್ಟು ಜ್ಞಾನವನ್ನು ಸಂಪಾದಿಸಿರುವೆ. ವ್ಯಾಸಮಹರ್ಷಿಗಳು, ದೇವರ್ಷಿ ನಾರದರು, ನೀತಿಜ್ಞನಾದ ವಿದುರರಿಂದಲೂ ಜ್ಞಾನಗ್ರಹಣ ಗೈದಿರುವ ನಿನಗೆ ಅವುಗಳನ್ನು ಅನುಸರಿಸಿ ರಾಜ್ಯಭಾರವನ್ನು ನಿರ್ವಹಿಸುವುದೇ ಪರಮ ಕರ್ತವ್ಯ, ಧರ್ಮವಾಗಿದೆ. ಮುಂದಿನ ಪೀಳಿಗೆಯವರಿಗೆ ನೀನು ತೋರಿಸುವ ತಕ್ಕ ಮಾರ್ಗ ಅದೇ ಆಗಿದೆ. ಯುದ್ಧವು ಘಟಿಸಿದಾಗ ಅದರಲ್ಲಿ ಪಾಲ್ಗೊಂಡ ಕ್ಷತ್ರಿಯನು ವೀರೋಚಿತವಾಗಿ ಹೋರಾಡಿ ಪ್ರಾಣವನ್ನು ತ್ಯಜಿಸಿದರೆ ನಿಶ್ಚಿತವಾಗಿ ಸ್ವರ್ಗಲೋಕವನ್ನೇ ಸೇರುತ್ತಾನೆ.

    ಈವರೆಗೆ ಘಟಿಸಿರುವುದೆಲ್ಲ ವಿಧಿಯ ನಿಯಮದಂತೆ ಅವಶ್ಯವಾಗಿ ಸಂಭವಿಸತಕ್ಕದ್ದೇ ಆಗಿತ್ತು ಎಂದು ತಿಳಿದುಕೊ. ಅದರ ನಿರ್ಣಯವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದರಿತು ಮುಂದಿರುವ ಕರ್ಮಭಾರವನ್ನು ನಿರ್ವಹಿಸಬೇಕಾದುದು ಧರ್ಮ’ ಇತ್ಯಾದಿ ಮಾತುಗಳಿಂದ ಸಮಾಧಾನಿಸಿದನು ಆದರೂ ಯುಧಿಷ್ಠಿರನು ವಾಸ್ತವಕ್ಕೆ ಮರಳದೆ ಚಿಂತಾಮಗ್ನನಾಗಿಯೇ ಇದ್ದುದನ್ನು ಕಂಡ ವ್ಯಾಸಮಹರ್ಷಿಗಳು, ‘ಇದೇನು ಯುಧಿಷ್ಠಿರ? ನಿನ್ನ ಬುದಿಟಛಿಗೆ ಕವಿದ ಮಲಿನತೆಯು ತೊಲಗಲಿಲ್ಲವೆ? ಬಾಲ ಬುದ್ಧಿಯವನಂತೆ ವರ್ತಿಸುತ್ತಿರುವೆ. ಅವಿವೇಕಿಯಾಗಿ ಮೋಹದಲ್ಲಿ ಸಿಲುಕಿಕೊಂಡಿರುವೆ. ಶ್ರೀಕೃಷ್ಣನಾದಿಯಾಗಿ ನಾವೆಲ್ಲ ಹೇಳಿದ್ದು ವ್ಯರ್ಥ ಪ್ರಲಾಪವಾಯಿತೇ? ಯುದ್ಧದಂಥ ಮಾರಣಹೋಮದೊಂದಿಗೇ ಕ್ಷತ್ರಿಯನು ಜೀವನವನ್ನು ನಡೆಸಬೇಕಾಗಿರುವುದು ಎಂದು ನೀನು ತಿಳಿದವನೇ ಆಗಿರುವೆ.

    ಲೋಕದಲ್ಲಿ ಯಾವುದೇ ಕ್ಷತ್ರಿಯನೂ ಯುದ್ಧಕರ್ಮವೆಸಗಿ ನಿನ್ನಂತೆ ದುರ್ಬಲಚಿತ್ತನಾಗಲಾರನು. ನಿನ್ನೊಳಗಿನ ಮೋಹದ ನಿವಾರಣೆಗೆ ಎಷ್ಟೆಲ್ಲ ತಿಳಿವಳಿಕೆಯನ್ನು ನೀಡಿರುವೆನು. ಎಲ್ಲ ವ್ಯರ್ಥ ಎಂಬಂತೆ ನೀನು ಅಜ್ಞಾನವನ್ನು ಅವಲಂಬಿಸಿಕೊಂಡಿರುವುದು ಯೋಗ್ಯವಾದುದಲ್ಲ. ನಿನ್ನಲ್ಲಿ ಅವಿತಿರುವ ಈ ಪಾಪಪ್ರಜ್ಞೆಯಿಂದ ಮುಕ್ತನಾಗಿ ನಿಲ್ಲು. ದೋಷಭಾವದಿಂದ ಮುಕ್ತನಾಗಲು ಶಾಸ್ತ್ರಗಳು ಮಾರ್ಗಗಳನ್ನು ಸೂಚಿಸಿವೆ. ಅವುಗಳಲ್ಲಿ ಶ್ರೇಷ್ಠ ಮಾರ್ಗವೆಂದರೆ ರಾಜಸೂಯ, ಅಶ್ವಮೇಧ ಮುಂತಾದ ಯಾಗಗಳನ್ನು ನೆರವೇರಿಸುವುದು. ತ್ರೇತಾಯುಗದಲ್ಲಿ ಸ್ವಯಂ ಶ್ರೀರಾಮನೇ ಅಶ್ವಮೇಧಯಾಗವನ್ನು ಜರುಗಿಸಿ ರಾವಣ ಹತ್ಯೆಯ ದೋಷವನ್ನು ಕಳೆದುಕೊಂಡಿರುವನು. ನಿಮ್ಮದೇ ಕುಲದ ಕೀರ್ತಿಶಾಲಿ ಭರತಚಕ್ರವರ್ತಿಯು ಅಶ್ವಮೇಧ ಯಾಗ ಮಾಡಿರುವನು. ನೀನೂ ಅದನ್ನೇ ಮಾಡಿ ಕೃತಾರ್ಥನಾಗು’ ಎಂದು ಸೂಚಿಸಿದರು.

    ವ್ಯಾಸರ ಮಾತುಗಳನ್ನು ಕೇಳಿದ ಯುಧಿಷ್ಠಿರನು ಪ್ರತಿಕ್ರಿಯಿಸುತ್ತ, ‘ಇಂಥ ಮಹಾಯಾಗ ನೆರವೇರಿಸಲು ತನ್ನಿಂದ ಹೇಗೆ ಸಾಧ್ಯ? ಹಸ್ತಿನಾವತಿಯ ರಾಜಕೋಶ ಬರಿದಾಗಿದೆ. ಮಿತ್ರರಾಜರು ನಮ್ಮೊಡನೆ ಬೆಂಬಲಿಸಿ ಬಂದು ತಮ್ಮ ಕೋಶವನ್ನು ಬರಿದಾಗಿಸಿಕೊಂಡಿರುವರು. ಸಾಕಷ್ಟು ಅರ್ಥಬಲವನ್ನು ಇರಿಸಿಕೊಳ್ಳದೆ ಆ ಮಹಾಯಜ್ಞವನ್ನು ಸಾರ್ಥಕವಾಗಿ ನೆರವೇರಿಸಲು ನನ್ನಿಂದ ಹೇಗೆ ಸಾಧ್ಯ?’ ಎಂಬ ಆತಂಕವನ್ನು ತೋಡಿಕೊಂಡನು.
    (ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ)

    ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts