Saturday, 21st July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

2024ರ ನಂತರದಲ್ಲೂ ಮೋದಿಯೇ ಪ್ರಧಾನಿ

Saturday, 17.03.2018, 3:05 AM       No Comments

ನವದೆಹಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಜನಪ್ರಿಯತೆಗೆ ಒಂದಿಷ್ಟೂ ಧಕ್ಕೆಯಾಗಿಲ್ಲ. ಅವರು 2019ರಲ್ಲಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೇರುವ ಜತೆಗೆ, 2024ರ ನಂತರದಲ್ಲೂ ಪ್ರಧಾನಿಯಾಗಿ ಆಡಳಿತ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಬ್ಲೂಮ್​ಗ್ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಸೇರಿ ಹಲವು ಪಕ್ಷಗಳಲ್ಲಿನ ಪ್ರಭಾವಿ ಮತ್ತು ವರ್ಚಸ್ವಿ ನಾಯಕರ ಕೊರತೆ ಇದಕ್ಕೆ ಕಾರಣ ಎಂದು ಸಮೀಕ್ಷಾ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇತ್ತೀಚೆಗಷ್ಟೇ ಜೀವಿತಾವಧಿ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ಗಿಟ್ಟಿಸಿಕೊಂಡಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್​ನ ಸವೋಚ್ಚ ನಾಯಕ ಆಯತುಲ್ಲಾ ಖೋಮೇನಿ, ಫ್ರಾನ್ಸ್​ನ ಇಮ್ಯಾನುಯಲ್ ಮಾಕ್ರಾನ್, ಇಸ್ರೇಲ್​ನ ಬೆಂಜಮಿನ್ ನೆತನ್ಯಾಹು ಸೇರಿ ವಿಶ್ವದ 16 ನಾಯಕರ ಕುರಿತು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ವಿಶ್ಲೇಷಣೆಯ ವಿವರ

ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿರಬಹುದು. ಈ ಕಾರಣದಿಂದಾಗಿ ಪ್ರಮುಖ ಸುಧಾರಣಾ ನೀತಿಗಳನ್ನು ಜಾರಿಗೊಳಿಸಲು ಅಡಚಣೆ ಉಂಟಾಗಬಹುದು. ಆದರೂ, ಪ್ರಧಾನಿ ನರೇಂದ್ರ ಮೋದಿ ರಾಜಕೀಯ ವಲಯದಲ್ಲಿನ ತಮ್ಮ ಪ್ರಭಾವವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದೆ. ಈ ಎಲ್ಲ ಚುನಾವಣೆಗಳಲ್ಲಿನ ಬಿಜೆಪಿ ಗೆಲುವಿಗೆ ಮೋದಿ ಅವರ ಜನಪ್ರಿಯತೆ ಕಾರಣವಾಗಿದೆ. ಹಾಗಾಗಿ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಲಭಿಸಿ, ಮೋದಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. 2024ರ ನಂತರದಲ್ಲೂ ಅವರು ಪ್ರಧಾನಿಯಾಗಿ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಜನಪ್ರಿಯತೆಯಲ್ಲಿ ಮೋದಿ ಮುಂದು

ಪಿಯು ರಿಸರ್ಚ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಶೇ. 88 ಇದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಪ್ರಿಯತೆ ಶೇ. 58 ಇದೆ. ಶೇ.39 ಜನಪ್ರಿಯತೆಯೊಂದಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೊನೆಯ ಸ್ಥಾನದಲ್ಲಿದ್ದಾರೆ.

ಬೆಂಜಮಿನ್ ನೆತನ್ಯಾಹು

ಇಸ್ರೇಲ್​ನ ಪ್ರಧಾನಿಯಾಗಿರುವ ಬೆಂಜಮಿನ್ ನೆತನ್ಯಾಹು ಸಾಕಷ್ಟು ವಿವಾದಗಳ ಸುಳಿಗೆ ಸಿಲುಕಿದ್ದಾರೆ. ಇದರಿಂದಾಗಿ ಪೊಲೀಸರ ವಿಚಾರಣೆಗೆ ಒಳಪಡುವ ಅಪಾಯವಿದೆ. ಒಂದು ವೇಳೆ ಇದರಿಂದ ಪಾರಾಗಲು ಸಾಧ್ಯವಾದರೆ, 2019ರ ನಂತರದಲ್ಲಿ ನಾಲ್ಕು ವರ್ಷಗಳ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಬಹುದು.

ಕ್ಸಿ ಜಿನ್​ಪಿಂಗ್

ಚೀನಾದ ಜೀವಿತಾವಧಿ ಅಧ್ಯಕ್ಷರಾಗಿರುವ ಕ್ಸಿ ಜಿನ್​ಪಿಂಗ್ ಇನ್ನೊಂದು ದಶಕ ಕಾಲ ಅಧ್ಯಕ್ಷರಾಗಿ ಆಡಳಿತ ನಡೆಸುವ ಸಾಧ್ಯತೆ. ಆರೋಗ್ಯ ಉತ್ತಮವಾಗಿದ್ದರೆ, 2030ರವರೆಗೂ ಅಧಿಕಾರ ನಡೆಸಬಹುದು.

ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುವವರೆಗೂ ಅವರ ಆಡಳಿತ ಅಬಾಧಿತವಾಗಿರುತ್ತದೆ. ಇದಕ್ಕಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಒಟ್ಟಾಗಿ ವಿಶೇಷ ಮಿಲಿಟರಿ ಕಾರ್ಯಾಚರಣೆ ಮಾಡಬೇಕಾಗುತ್ತದೆ.

ಶಿಂಜೊ ಅಬೆ

ಜಪಾನ್​ನ ಪ್ರಧಾನಿಯಾಗಿ ಈಗಾಗಲೆ 6 ವರ್ಷ ಆಡಳಿತ ನಡೆಸಿರುವ ಶಿಂಜೊ ಅಬೆ ಕೂಡ ಭೂವಿವಾದದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರು ತಮ್ಮ ಆಡಳಿತಾವಧಿ ಮುಗಿವ ಮುನ್ನವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಅಮೆರಿಕದ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ. ನಿರುದ್ಯೋಗ ಸಮಸ್ಯೆ ಕಳೆದ 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಆದರೂ, ಅವರ ಜನಪ್ರಿಯತೆ ಕುಸಿಯುತ್ತಿರುವುದರಿಂದ, ಪ್ರಸಕ್ತ ಅವಧಿ ನಂತರದಲ್ಲಿ ಅವರು ಅಧ್ಯಕ್ಷರಾಗಿ ಮುಂದುವರಿವ ಸಾಧ್ಯತೆ ಕಡಿಮೆ.

ವ್ಲಾದಿಮಿರ್ ಪುತಿನ್

ಕಳೆದ 18 ವರ್ಷಗಳಿಂದ ರಷ್ಯಾದ ಅಧ್ಯಕ್ಷರಾಗಿರುವ ವ್ಲಾದಿಮಿರ್ ಪುತಿನ್ 6 ವರ್ಷಗಳ ಮತ್ತೊಂದು ಅವಧಿಗೆ ಮರುಆಯ್ಕೆಯಾಗುವುದು ಬಹುತೇಕ ನಿಶ್ಚಿತ. ಆದರೆ, ರಷ್ಯಾದ ಸಂವಿಧಾನದ ಪ್ರಕಾರ 2024ಕ್ಕೆ ಈ ಹುದ್ದೆಯಿಂದ ಕೆಳಗಿಳಿದರೂ, ತಮಗೆ ಬೇಕಾದ ವ್ಯಕ್ತಿಯನ್ನು ಆ ಸ್ಥಾನದಲ್ಲಿ ಕೂರಿಸಿ, ಪರೋಕ್ಷವಾಗಿ ಆಡಳಿತ ನಡೆಸುವ ಸಾಧ್ಯತೆ.

Leave a Reply

Your email address will not be published. Required fields are marked *

Back To Top