Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ತವರಿನ ಸೆಳೆತಕ್ಕೆ ಸಿಕ್ಕ ಜಿಂಕೆಮರಿ

Friday, 10.08.2018, 7:00 AM       No Comments

ಕನ್ನಡದ ‘ನಂದ ಲವ್ಸ್ ನಂದಿತಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದ ನಂದಿತಾ ಶ್ವೇತಾ, ‘ಜಿಂಕೆಮರಿ’ ಎಂದೇ ಗುರುತಿಸಿಕೊಂಡವರು. 10 ವರ್ಷ ಚಂದನವನದಲ್ಲಿ ಕಾಣೆಯಾಗಿದ್ದ ಈ ಜಿಂಕೆ ಮರಿ, ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕಿರಾತಕ’ ಸೀಕ್ವೆಲ್ ಮೂಲಕ ಸ್ಯಾಂಡಲ್​ವುಡ್​ಗೆ ಮರುಪ್ರವೇಶ ಮಾಡುತ್ತಿದೆ. ಹೆಸರಾಂತ ನಿರ್ಮಾಣ ಸಂಸ್ಥೆ, ಖ್ಯಾತ ನಟನ ಜತೆ ತೆರೆಹಂಚಿಕೊಳ್ಳುವ ಮೂಲಕ ಬರುತ್ತಿರುವುದಕ್ಕೆ ಸಖತ್ ಖುಷಿಯಲ್ಲಿದ್ದಾರೆ ಶ್ವೇತಾ. ಪರಭಾಷೆಯಲ್ಲಿ ಖ್ಯಾತಿ ಗಳಿಸಿರುವ ಈ ಕನ್ನಡತಿ, ಸ್ಯಾಂಡಲ್​ವುಡ್ ಮೇಲಿದ್ದ ಸೆಳೆತ, ಬೆಂಗಳೂರಿನ ಮೇಲಿರುವ ಪ್ರೀತಿ ಬಗ್ಗೆ ಸಿನಿವಾಣಿ ಜತೆ ಮಾತನಾಡಿದ್ದಾರೆ.

| ರಾಜೇಶ್ ದುಗ್ಗುಮನೆ

ಬೆಂಗಳೂರು: ‘ನಾನು ಪಕ್ಕಾ ಕನ್ನಡದವಳು. ಬೇರೆ ರಾಜ್ಯಕ್ಕೆ ಶೂಟಿಂಗ್​ಗೆ ತೆರಳಿದಾಗ ಒಂದು ದಿನ ಗ್ಯಾಪ್ ಸಿಕ್ಕರೂ ಬೆಂಗಳೂರಿಗೆ ವಾಪಸಾಗುತ್ತೇನೆ. ಒರಾಯನ್ ಮಾಲ್​ನಲ್ಲೇ ಸಿನಿಮಾ ನೋಡುತ್ತೇನೆ. ಕಾವೇರಿ ನೀರನ್ನೇ ಕುಡಿಯುತ್ತೇನೆ. ಕಮರ್ಷಿಯಲ್ ಸ್ಟ್ರೀಟ್​ನಲ್ಲೇ ಶಾಪಿಂಗ್ ಮಾಡುತ್ತೇನೆ. ನನ್ನ ರಾಜ್ಯ, ನನ್ನ ಭಾಷೆ, ನನ್ನ ನಾಡು ಎಂಬ ಹೆಮ್ಮೆ ನನಗೆ ಯಾವಾಗಲೂ ಇದೆ. ಕನ್ನಡಿಗರು ಹೆಮ್ಮೆ ಪಡುವ ಸಿನಿಮಾಗಳನ್ನು ಮಾಡುತ್ತೇನೆ’ ಹೀಗೆ ಪಟಪಟನೆ ಮಾತು ಆರಂಭಿಸಿದರು ನಂದಿತಾ ಶ್ವೇತಾ. ಅವರ ಮಾತಿನಲ್ಲಿ ತಾಯ್ನಾಡಿನ ಬಗ್ಗೆ ಅಪಾರ ಗೌರವ ಎದ್ದು ಕಾಣುತ್ತಿತ್ತು. ಸದ್ಯ ಅವರು ತವರಿಗೆ ಮರಳುವ ಖುಷಿಯಲ್ಲಿದ್ದಾರೆ. ‘ನಂದ ಲವ್ಸ್ ನಂದಿತಾ’ ನಂತರ ಚಿತ್ರರಂಗದಿಂದ ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡಿದ್ದ ಶ್ವೇತಾ, ರಂಗಭೂಮಿಯಲ್ಲಿ ನಟನಾ ತರಬೇತಿ ಪಡೆದರು. ಸಿನಿಪಯಣ ಮತ್ತೆ ಆರಂಭಿಸಬೇಕು ಎಂದಾಗ ಅವರಿಗೆ ಕನ್ನಡ, ತಮಿಳು ಹಾಗೂ ತೆಲುಗಿನಿಂದ ಆಫರ್​ಗಳು ಬಂದವು. ಆಗ, ಶ್ವೇತಾಗೆ ಇಷ್ಟವಾಗಿದ್ದು, ತಮಿಳಿನ ‘ಅಟ್ಟಕತ್ತಿ’ ಚಿತ್ರದ ಕಥೆ. ಅವರ ನಟನೆಯ ಆ ಚೊಚ್ಚಲ ಕಾಲಿವುಡ್ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ನಂತರ ಹಿಂದಿರುಗಿ ನೋಡದ ಶ್ವೇತಾ, ತಮಿಳಿನಲ್ಲೇ ಬಿಜಿಯಾಗಿಬಿಟ್ಟರು. ‘ಎಧಿರ್ ನೀಚಲ್’, ‘ಮುಂಡಾಸ್​ಪಟ್ಟಿ’, ‘ಪುಲಿ’, ‘ಎಕ್ಕಡಿಕಿ ಪೋತಾವು ಚಿನ್ನವಾಡ’, ‘ಉಪು್ಪ ಕರುವಾಡು’ ಸೇರಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು, ಪ್ರಶಸ್ತಿಗಳನ್ನು ಬಾಚಿಕೊಂಡರು.

10 ವರ್ಷಗಳ ಸುದೀರ್ಘ ಗ್ಯಾಪ್ ನಂತರ ದೊಡ್ಡ ಅನುಭವದ ಬುತ್ತಿ ಹೊತ್ತು ಕನ್ನಡ ಚಿತ್ರರಂಗಕ್ಕೆ ವಾಪಸಾಗುತ್ತಿರುವ ಶ್ವೇತಾ ತಮ್ಮದೇ ಶೈಲಿಯಲ್ಲಿ ಎಗೈ ್ಸ್ಮೆಂಟ್ ಹಂಚಿಕೊಳ್ಳುತ್ತಾರೆ. ‘ಎಲ್ಲ ಅಂದುಕೊಂಡಂತೆ ನಡೆದಿದ್ದರೆ ನಾನು 2016ರಲ್ಲೇ ಕನ್ನಡಕ್ಕೆ ವಾಪಾಸಾಗಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅದು ಸಾಧ್ಯವಾಗಿರಲಿಲ್ಲ. ಈಗ ಒಂದು ಉತ್ತಮ ಪ್ರಾಜೆಕ್ಟ್​ನೊಂದಿಗೆ ಚಿತ್ರರಂಗಕ್ಕೆ ಮರಳುತ್ತಿದ್ದೇನೆ. ‘ನಂದ…’ ನಂತರ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸ್ಕ್ರಿಪ್ಟ್ ಓದುತ್ತಿದ್ದೇನೆ ಎನ್ನುವ ಖುಷಿ ನನಗಿದೆ. ಅದರಲ್ಲೂ ಮಂಡ್ಯ ಸೊಗಡಿನ ಸಂಭಾಷಣೆ ಇರುವುದು ಮತ್ತೊಂದು ಖುಷಿಯ ವಿಚಾರ. ‘ಕಿರಾತಕ ಸೀಕ್ವೆಲ್’ ಮೂಲಕ ಒಂದು ದೊಡ್ಡ ಜವಾಬ್ದಾರಿ ನನ್ನ ಹೆಗಲೇರಿದೆ. ಬೇರೆ ಭಾಷೆಯಲ್ಲಿ ನಟಿಸಿ, ಅಲ್ಲಿ ಖ್ಯಾತಿ ಪಡೆದುಕೊಳ್ಳುವುದು ಸಹಜ. ಅದನ್ನು ನಾನು ಈಗಾಗಲೇ ಮಾಡಿದ್ದೇನೆ. ಈಗ ಕನ್ನಡದಲ್ಲಿ ಗುರುತಿಸಿಕೊಳ್ಳುವ ಸವಾಲು ನನ್ನ ಎದುರಿದೆ. ಬೇರೆ ಕಡೆ ನಮಗೆ ಎಷ್ಟೇ ಗೌರವ ಸಿಕ್ಕರೂ ಅದನ್ನು ತಾಯ್ನಾಡಿನಲ್ಲಿ ಪಡೆದುಕೊಂಡಾಗ ಆಗುವ ಸಂತಸವೇ ಬೇರೆ’ ಎಂಬುದು ಶ್ವೇತಾ ಮಾತು.

ಭಾಷೆ ಗೊತ್ತಿಲ್ಲದೆ ಬೇರೆ ಚಿತ್ರರಂಗದಲ್ಲಿ ನೆಲೆಯೂರುವಾಗ ಅನೇಕ ಸವಾಲುಗಳು ಎದುರಾಗುತ್ತವೆ. ಶ್ವೇತಾಗೂ ಆರಂಭದಲ್ಲಿ ಅಂಥ ಅನೇಕ ಚಾಲೆಂಜ್​ಗಳು ಎದುರಾಗಿದ್ದವಂತೆ. ‘ಬಣ್ಣದ ಬದುಕು ಮುಂದುವರಿಸಿಕೊಂಡು ಹೋಗಲು ನಾನು ಮೊದಲ ಬಾರಿಗೆ ಚೆನ್ನೈಗೆ ತೆರಳಿದ್ದಾಗ ಬ್ಲಾ್ಯಂಕ್ ಆಗಿಬಿಟ್ಟಿದ್ದೆ. ತಮಿಳಿನ ಗಂಧಗಾಳಿ ಗೊತ್ತಿಲ್ಲ. ತಮಿಳು ಓದಲು ಬರುವುದಿಲ್ಲ. ಎಲ್ಲಿ ನಿಂತಿದ್ದೇನೆ ಎಂಬುದು ತಿಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಏಲಿಯನ್ ಜಗತ್ತಿಗೆ ಹೋದ ಫೀಲ್ ಆಗುತ್ತಿತ್ತು! ಸೆಟ್​ನಲ್ಲಂತೂ ತುಂಬ ಕಷ್ಟ ಪಟ್ಟಿದ್ದೇನೆ. ಎಲ್ಲರೂ ಮಾತನಾಡುವುದನ್ನು ಗಮನಿಸುತ್ತಿದ್ದೆ. ನಾನು ಅವರ ಮಾತನ್ನು ಅನುಕರಣೆ ಮಾಡಲು ಆರಂಭಿಸಿದೆ. ಒಬ್ಬೊಬ್ಬಳೆ ಮಾತನಾಡುವುದನ್ನು ನೋಡಿ ಎಲ್ಲರೂ ನಗುತ್ತಿದ್ದರು. ಆದರೆ ನಾನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮೂರನೇ ಸಿನಿಮಾಕ್ಕೆ ನಾನೇ ಡಬ್ ಮಾಡುವಷ್ಟರ ಮಟ್ಟಿಗೆ ಆ ಭಾಷೆಯನ್ನು ಕಲಿತೆ’ ಎಂದು ಸವಾಲಿನ ಹಾದಿ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರವರು.

ಇನ್ನು, ನಂದಿತಾಗೆ ಕನ್ನಡದಲ್ಲಿ ಹೆಚ್ಚು ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಇಲ್ಲವಂತೆ. ಕಲಾವಿದರಿಗೆ ಭಾಷೆ ಯಾವತ್ತೂ ಮಿತಿ ಆಗಬಾರದು ಎಂಬುದು ಅವರ ಅಭಿಪ್ರಾಯ. ಇದರ ಜತೆಗೆ ಕನ್ನಡ ಸಿನಿಮಾ ಮಾಡಬೇಕು ಎನ್ನುವ ತುಡಿತ ಮಾತ್ರ ಎಂದಿಗೂ ಕಡಿಮೆ ಆಗಿಲ್ಲ ಎನ್ನುವ ಶ್ವೇತಾ, ‘ನಿಜವಾದ ಕಲಾವಿದನಿಗೆ ಭಾಷೆ ಎಂಬುದು ಎಂದಿಗೂ ಅಡ್ಡಿ ಆಗದು. ಹೀಗಿದ್ದರೂ ನಾವು ನಮ್ಮವರು ಎಂಬುದು ಇದ್ದೇ ಇರುತ್ತದೆ. ನಾವು ಎಷ್ಟು ದೊಡ್ಡ ಹೋಟೆಲ್​ನಲ್ಲಿ ಊಟ ಮಾಡಿದರೂ ಮನೆಯಲ್ಲಿ ತಿಂದಷ್ಟು ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಸಿನಿಮಾ ವಿಚಾರದಲ್ಲಿ ನನಗೂ ಅದೇ ಆಗಿದೆ! ನನ್ನೂರು ಬೆಂಗಳೂರು. ಆದರೆ, ನನ್ನ ಸಿನಿಮಾದ ಪೋಸ್ಟರ್​ಗಳು ಮಿಂಚುತ್ತಿದ್ದುದು ಚೆನ್ನೈ ಹಾಗೂ ಹೈದರಾಬಾದ್​ನಲ್ಲಿ. ಆಗೆಲ್ಲ ಒಂದು ರೀತಿ ಬೇಸರ ಆಗುತ್ತಿತ್ತು. ಎಷ್ಟೋ ಕನ್ನಡ ಸಿನಿಮಾ ನೋಡುವಾಗ ಈ ಪಾತ್ರ ನಾನು ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಿದ್ದಿದೆ. ಕುಟುಂಬ ಸದಸ್ಯರೂ ಕನ್ನಡ ಸಿನಿಮಾ ಮಾಡು ಎಂದು ಒತ್ತಾಯಿಸುತ್ತಿದ್ದರು. ಕನ್ನಡದಲ್ಲಿ ನಟಿಸುವುದು ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಈಗ ಅವರೆಲ್ಲರಿಗೂ ನಾನು ಉತ್ತರಿಸಬಹುದು’ ಎಂದು ಬೀಗುತ್ತಾರೆ ಶ್ವೇತಾ. ಚಂದನವನಕ್ಕೆ ಬರುತ್ತಿರುವುದಕ್ಕೆ ಶ್ವೇತಾಗೆ ಸ್ವಲ್ಪ ಭಯ ಇದೆಯಂತೆ. ಹಾಗಂತ ಅದು ಸಿನಿಮಾ ವಿಚಾರದಲ್ಲಿ ಎಂದುಕೊಳ್ಳುವಂತಿಲ್ಲ. ಅವರಿಗೆ ಅಳುಕು ಉಂಟಾಗುತ್ತಿರುವುದಕ್ಕೆ ಭಿನ್ನ ಕಾರಣವಿದೆ. ‘ನಾನು ತೆರೆಮೇಲೆ ಒಂದು ರೀತಿ ಕಾಣುತ್ತೇನೆ, ತೆರೆಯಿಂದಾಚೆ ಒಂದು ರೀತಿ ಕಾಣುತ್ತೇನೆ. ಅದರಲ್ಲೂ ಇಷ್ಟು ದಿನ ನಾನು ಕಳೆದಿದ್ದು ತಮಿಳು-ತೆಲುಗು ಚಿತ್ರರಂಗದಲ್ಲಿ. ಹಾಗಾಗಿ ಬೆಂಗಳೂರಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದೆ. ಇನ್ನುಮುಂದೆ ಈ ರೀತಿ ಓಡಾಡಲು ಸಾಧ್ಯವಾಗದೆ ಇರಬಹುದು ಎಂಬ ಅಳುಕು ಇದೆ’ ಎಂದು ನಗುತ್ತಾರವರು. ಕನ್ನಡ ಚಿತ್ರರಂಗದಿಂದ ದೂರ ಇದ್ದಿದ್ದಕ್ಕೆ ಅವರಿಗೆ ಚಂದನವನದಲ್ಲಿ ಗೆಳೆಯರು ಇರುವುದು ತುಂಬ ಬೆರಳೆಣಿಕೆ ಮಾತ್ರವಂತೆ. ‘ಪ್ರಶಸ್ತಿ ಸಮಾರಂಭಗಳಲ್ಲಿ ಕೆಲ ಕನ್ನಡ ಕಲಾವಿದರು ಭೇಟಿ ಆಗಿ ಮಾತನಾಡುತ್ತಾರೆ. ಅದನ್ನು ಹೊರತುಪಡಿಸಿದರೆ, ಇಲ್ಲಿ ಫ್ರೆಂಡ್ ಸರ್ಕಲ್ ನನಗೆ ತುಂಬ ಕಡಿಮೆ. ಈಗ ಕನ್ನಡ ಚಿತ್ರರಂಗಕ್ಕೆ ವಾಪಾಸಾಗಿದ್ದೇನೆ. ನಾನು ಒಂದಷ್ಟು ವರ್ಷ ಇಲ್ಲಿ ನೆಲೆಯೂರಬೇಕು ಎಂಬ ಯೋಜನೆ ಇದೆ. ಯಶ್ ಜತೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ’ ಎನ್ನುತ್ತಾರೆ ಶ್ವೇತಾ.

(ಪ್ರತಿಕ್ರಿಯಿಸಿ: rajeshd[email protected], [email protected])

Leave a Reply

Your email address will not be published. Required fields are marked *

Back To Top