Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ನಿಮ್ಮ ಮಗನ/ಳ ಅಡ್ಮಿಷನ್ ಆಯ್ತಾ..?

Thursday, 18.05.2017, 3:05 AM       No Comments

ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪುಷ್ಟಿ ನೀಡುವ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಶ್ಶಾಸ್ತ್ರ ಮೊದಲಾದ ವಿಷಯಗಳನ್ನು ಆಯ್ದುಕೊಳ್ಳುವವರಿಲ್ಲದೆ, ಆ ವಿಭಾಗಗಳನ್ನು ಮುಚ್ಚುವಂಥ ಪರಿಸ್ಥಿತಿ ಅನೇಕ ಕಾಲೇಜುಗಳಲ್ಲಿದೆ. ಶುದ್ಧ ವಿಜ್ಞಾನ, ಕೃಷಿ ವಿಜ್ಞಾನ ಮತ್ತು ಸಂಶೋಧನಾ ಶಾಸ್ತ್ರಗಳದ್ದೂ ಇದೇ ಕತೆ. ಜನರ ಬದಲಾದ ಚಿತ್ತಸ್ಥಿತಿಯೇ ಇದಕ್ಕೆ ಕಾರಣವೇ?

 ಬೇಸಿಗೆ ಬರುತ್ತಿದ್ದಂತೆ ಮಲೆನಾಡಿನ ಮಹಿಳೆಯರು ನಾಲ್ಕು ಜನ ಒಟ್ಟಿಗೆ ಸೇರಿದರೆ, ‘ನಿಮ್ಮನೇಲಿ ಈ ವರ್ಷದ ಉಪ್ಪಿನಕಾಯಿ ಆತನೆ ಅತ್ಗೆ?’ ಎಂದೇ ಕುಶಲೋಪರಿ ಪ್ರಾರಂಭವಾಗುತ್ತದೆ. ‘ಅಯ್ಯೋ ಇಲ್ಲಪ್ಪ, ಅಪ್ಪೆಮಿಡಿ ಸಿಕ್ರಲೆ ಉಪ್ಪಿನಕಾಯಿ?’ ವಿವರಣೆ ಬರಲಾರಂಭವಾಗುತ್ತದೆ ಹಾಗೂ ಅದರ ಕುರಿತ ಚರ್ಚೆಗೆ ಕಾವೇರುತ್ತ ಉಪ್ಪಿನಕಾಯಿ ಎಂಬುದೊಂದು ದಿವ್ಯವಸ್ತುವು ಸಕಲ ವ್ಯಂಜನಗಳನ್ನೂ ಮೀರಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಅದಕ್ಕಿರುವ ಸಾಂಸ್ಕೃತಿಕ ಪರಿಮಳವನ್ನು ಈಗೀಗ ಹಾಳುಗೆಡವಿಕೊಂಡಿದ್ದಾರೆ ಎಂಬ ಹಳಹಳಿಕೆಯ ಧಾಟಿಯಲ್ಲಿಯೂ ಮಾತಾಡುವವರು ಒಬ್ಬರಾದರೂ ಸಿಗುತ್ತಾರೆ.

ಸೀಸನ್ನಿಗೆ ತಕ್ಕಂತೆ ವಿಭಿನ್ನ ಹೂವುಗಳು, ಹಣ್ಣುಗಳು ನಮ್ಮ ಸಂಭಾಷಣೆಯನ್ನು ಆಕ್ರಮಿಸಿಕೊಳ್ಳುವುದು ಗ್ರಾಮೀಣ ಪರಿಸರದಲ್ಲಂತೂ ಅತಿಸಾಮಾನ್ಯ. ಹಾಗೆಯೇ ಮೇ ತಿಂಗಳು ಕಾಲಿರಿಸಿ ಎಸ್ಸೆಸ್ಸೆಲ್ಸಿ, ಪಿಯುಸಿ ರಿಸಲ್ಟ್ ಬಂದಿದ್ದೇ ತಡ, ಸಂತೆಯಲ್ಲಿ, ಬಸ್​ಸ್ಟ್ಯಾಂಡಿನಲ್ಲಿ, ಮದುವೆಯಂಥ ಸಮಾರಂಭದಲ್ಲಿ ಹೀಗೆ ಎಲ್ಲೇ ಯಾರೇ ಪರಿಚಯಸ್ಥರು ಸಿಕ್ಕರೂ ಸಾಕು ಒಂದು ಡೈಲಾಗ್ ಮೂಡಲೇಬೇಕು.

‘ಮಗ ಎಸ್ಸೆಸ್ಸೆಲ್ಸಿ ಮುಗಿಸಿದನಲ್ಲಾ? ಎಲ್ಲಿ ಅಡ್ಮಿಷನ್ ಮಾಡಿಸ್ತೀರಿ? ಮಗಳಿಗೆ ಪಿಯುಸಿ ಆಯ್ತಲ್ವಾ? ಯಾವ ಕೋರ್ಸ ಸೇರಿದಳು? ಯಾವ ಕಾಲೇಜಿಗೆ ಸೇರಿಸಿದ್ರಿ?’ ಎಂಬ ಪ್ರಶ್ನಾಪ್ರಹಾರ ಪ್ರಾರಂಭವಾಗುತ್ತದೆ (ಈಗಾಗಲೇ ಮಾರ್ಚ್ ತಿಂಗಳಿನಿಂದಲೇ ಯಾರ ಮಕ್ಕಳು ಎಸ್ಸೆಸ್ಸೆಲ್ಸಿ ಬರೀತಿದಾರೆ, ಎಷ್ಟು ಮಾರ್ಕ ತೆಗೆದು ಪಾಸಾಗಿದ್ದಾರೆ ಎಂಬೆಲ್ಲ ವಿವರಗಳು ಹೇಗೋ ಅವರಿಗೆ ಗೊತ್ತು). ತಂದೆ-ತಾಯಿಯರಿಗೆ ಮಕ್ಕಳ ರಿಸಲ್ಟ್​ನ ಆತಂಕದ ಜತೆ, ಈ ಸಾರ್ವಜನಿಕ ಕುತೂಹಲ, ವಿಚಾರಣಾಧೀನ ಕೈದಿಗಳ ಹಾಗೆ ಚಡಪಡಿಸುವಂತೆ ಮಾಡುತ್ತವೆ. ಪಾಪ, ಎಲ್ಲರ ಮಕ್ಕಳೂ ನೂರಕ್ಕೆ ನೂರಾ ಹತ್ತು ತೆಗೆಯಲು ಸಾಧ್ಯವೇ? ಐವತ್ತು, ಅರವತ್ತು, ಎಪ್ಪತ್ತು…. ಎಲ್ಲ ಬೆರಳುಗಳೂ ಒಂದೇಸಮ ಇರಲು ಸಾಧ್ಯವೇ? ಅವರವರ ಮಕ್ಕಳು ಅವರ ಮಾರ್ಕ… ಕುತೂಹಲ ಮಾತ್ರ ಅಕ್ಕಪಕ್ಕದವರಿಗೆ, ನೆಂಟರಿಗೆ, ಪರಿಚಿತರಿಗೆ.

ನಾನು ನನ್ನ ವಿದ್ಯಾರ್ಥಿಗಳಲ್ಲಿ ತಮಾಷೆಗೆ ಹೇಳುವುದಿದೆ- ‘ನಿಮ್ಮ ಮಾರ್ಕನ್ನು ನಿಮ್ಮ ತಂದೆ-ತಾಯಿಯರಿಗಿಂತ ಅಕ್ಕಪಕ್ಕದವರು ಕೇಳ್ತಾರೆ ಅಂತಾದ್ರೂ ಚೆನ್ನಾಗಿ ಓದಿಯಪ್ಪ’- ಅಂತ. ಹೌದಲ್ವಾ ಎಂದೆನ್ನಿಸಿದ ವಿದ್ಯಾರ್ಥಿಗಳು ತಮ್ಮ ಅಂಕಗಳು ಆ ಮಟ್ಟಿಗಾದರೂ ‘ಅನೌನ್ಸಬಲ್’ ಆಗಿರಲು ಪ್ರಯತ್ನಿಸುತ್ತಾರೆ ಎಂಬುದು ಟೀಚರುಗಳ ನಂಬಿಕೆ.

ಇರಲಿ. ಮೇ ತಿಂಗಳು ಬರುತ್ತಿದ್ದಂತೆ ಜೂನ್ ಬಂದು ಅಡ್ಮಿಷನ್ ಕಾರ್ಯಗಳು ಮುಗಿಯುವ ತನಕವೂ ‘ಮಗನಿಗೆ ಎಲ್ಲಿ ಅಡ್ಮಿಷನ್ ಮಾಡಿಸಿದ್ರಿ?’…. ಪ್ರಶ್ನೆಗಳು ಉದುರುತ್ತಲೇ ಇರುತ್ತವೆ. ನಗರದ ಅತ್ಯುತ್ತಮ ಕಾಲೇಜು ಯಾವುದು? ಯಾವ ಶಾಲೆಗೆ ಸೇರಿಸಿದರೆ ರ್ಯಾಂಕು ಬರಿಸುತ್ತಾರೆ, ಯಾವ ಯಾವ ಕಾಲೇಜಿಗೆ ಸೇರಿಸಿಬಿಟ್ಟರೆ ಸಾಕು ಭವಿಷ್ಯ ನಿಶ್ಚಿಂತೆ… ಇತ್ಯಾದಿ ವಿವರಗಳು, ಮಾಹಿತಿಗಳು ಮೊದಲೇ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದರಿಂದ ತಂದೆ-ತಾಯಿಯರಿಗೆ ಇನ್ನಷ್ಟು ಚಡಪಡಿಕೆ. ಇರಲಿ ಎಂದು ಎಲ್ಲ ಕಾಲೇಜುಗಳ ಅಪ್ಲಿಕೇಷನ್ ತಂದಿಟ್ಟುಕೊಳ್ಳುವವರೂ ಇದ್ದಾರೆ.

ಬೆಂಗಳೂರು, ಮಂಗಳೂರುಗಳಂಥ ಶೈಕ್ಷಣಿಕ ಸಂಸ್ಥೆಗಳ ಪ್ರಾಬಲ್ಯವಿರುವ ದೊಡ್ಡ ನಗರಗಳಲ್ಲಿ ಇರುವ ಹೆಸರಾಂತ ಪಿ.ಯು. ಕಾಲೇಜುಗಳಲ್ಲಿ ರಿಸಲ್ಟ್ ಬರುವ ಮೊದಲೇ ಅಡ್ಮಿಷನ್ ಮುಗಿದಿರುತ್ತದೆ ಎಂದರೆ ನಂಬುತ್ತೀರಾ? ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಯ 9ನೇ ತರಗತಿಯ ಮಾರ್ಕ್ಸ್ ಕಾರ್ಡ, ಮಿಡ್​ಟಮ್ರ್ ಪರೀಕ್ಷೆಯ ಮಾರ್ಕ್ಸಿನ ಆಧಾರದ ಮೇಲೇ ಅಡ್ಮಿಷನ್ ನಡೆದುಹೋಗಿರುತ್ತದೆ. ಫೀಸು? ಅದನ್ನು ಕೇಳದಿರುವುದೇ ಲೇಸು. ಅಷ್ಟಕ್ಕೇ ಮುಗಿಯಲಿಲ್ಲ. ನಂತರ ಹಾಸ್ಟೆಲ್ಲು, ಟ್ಯೂಷನ್…ಇತ್ಯಾದಿ. ನಿಮ್ಮ ಮಕ್ಕಳು ನೂರಕ್ಕೆ ನೂರು (ಅದಕ್ಕೂ ಹೆಚ್ಚು ತೆಗೆದರೆ ಬೇಕಿತ್ತು!) ತೆಗೆದರೆ, ನಿಮ್ಮ ಫೀಸ್ ಮೊತ್ತದಲ್ಲಿ ಸ್ವಲ್ಪ ಹಣ ವಾಪಸ್ ಬಂದೀತು. ಅದನ್ನು ನಿಮ್ಮ ಕೈಯಲ್ಲಿ ಇಡುವುದಿಲ್ಲ. ಮುಂದಿನ ವರ್ಷದ ಫೀಸಿಗೆ ಅಡ್ಜಸ್ಟ್ ಮಾಡಿಕೊಂಡಾರು. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಪ್ಲಿಕೇಷನ್ ಫಾರಂಗಳಿಗೇ ಒಂದು ವರ್ಷದ ಫೀಸಿನಷ್ಟು (ಸರ್ಕಾರಿ ಶಾಲೆಗಳಲ್ಲಿ) ಮೊತ್ತ ಇದ್ದರೂ ಅಚ್ಚರಿಯಿಲ್ಲ. ಮಗನ/ಮಗಳ ಭವಿಷ್ಯ ಬಂಗಾರವಾಗಬೇಕೆಂಬ ಕನಸಿನಲ್ಲಿ ತಂದೆ-ತಾಯಿಯರು ಬಂಗಾರ ಅಡವಿಡಲೂ ಹಿಂದೆಮುಂದೆ ನೋಡಲಿಕ್ಕಿಲ್ಲ.

ಇದಕ್ಕೆ ಹೊರತಾಗಿ ಟ್ಯೂಷನ್ ಎಂಬ ಒತ್ತಡದ ಕಾಯಿಲೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ ಪ್ರಮೇಯವೇ ಇಲ್ಲ. ಮೊದಲೆಲ್ಲ ಓದಲು ಹಿಂದುಳಿದ ವಿದ್ಯಾರ್ಥಿಗಳಿಗೆ ಬೇಕಾಗಿದ್ದ ಟ್ಯೂಷನ್ ಇವತ್ತು ಕಡ್ಡಾಯವಾಗಿಬಿಟ್ಟಿದೆ. ಹೀಗಾಗಿ ಬೇಕೋ ಬೇಡವೋ ಟ್ಯೂಷನ್​ನತ್ತ ಹೆಜ್ಜೆಹಾಕಬೇಕಾದ ಪರಿಸ್ಥಿತಿ.

ಇದೆಲ್ಲ ಆಯಿತು, ಇನ್ನು ಶಿಕ್ಷಣದ ಗುಣಮಟ್ಟದತ್ತ ನೋಡಿದರಾದರೂ ಸಮಾಧಾನ ಆಗುವಂತಿದೆಯಾ? ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ವಿಕಸನ ಹೊಂದುತ್ತಿರುವ ಮಗುವಿಗೆ ಬೇಕಾದ ಕಲ್ಪನೆಯನ್ನು ಅರಳಿಸುವ ಕ್ರಿಯಾಶೀಲ ಚಟುವಟಿಕೆಗಳ ಬದಲು ಬಾಯಿಪಾಠದ ಸಂಸ್ಕೃತಿಯನ್ನು ಹೇರಲಾಗುತ್ತದೆ. ಯಾವ ಮಗು ಹೆಚ್ಚು ಶ್ರದ್ಧೆಯಿಂದ ‘ಮಗ್ ಅಪ್’ ಮಾಡಿ ನೆನಪಿಟ್ಟು ಉತ್ತರಿಸುತ್ತದೆಯೋ ಆ ಮಗುವಿಗೆ ಹೆಚ್ಚು ಮಾರ್ಕ. ಅಲ್ಲಿಂದಲೇ ಅಂಕಗಳ ಬೆನ್ನುಹತ್ತುವ ತಂದೆ-ತಾಯಿಯರು ಎಸ್ಸೆಸ್ಸೆಲ್ಸಿಯಲ್ಲಿರುವ ಮಗುವನ್ನು ಮುಂದಿನ ಭವಿಷ್ಯ ನಿರ್ಧರಿಸುವ ಆರ್ಟ್ಸ್/ಸೈನ್ಸ್/ಕಾಮರ್ಸ್ ಯಾವುದಕ್ಕೆ ಸೇರಿಸಬೇಕು ಎಂಬ ನಿರ್ಣಾಯಕ ಪಂದ್ಯಕ್ಕೆ ಸಿದ್ಧಗೊಳಿಸತೊಡಗುತ್ತಾರೆ. ಜ್ಞಾನದ ಹಸಿವು ಹೆಚ್ಚಿಸುವ ಶುದ್ಧ ಆಹಾರಕ್ಕಿಂತಲೂ, ಸ್ಪರ್ಧೆಯ ನಶೆ ಏರಿಸುವ, ಸೋಲಿನ ಭೀತಿಯಲ್ಲಿ ತತ್ತರಿಸುವಂತೆ ಮಾಡುವ ಅಂಕಗಳ ಮಾನದಂಡದಿಂದ ಮಗುವಿನ ಬೆಳವಣಿಗೆಯನ್ನು ಅಳೆಯತೊಡಗುತ್ತಾರೆ. ಗಣಿತಕ್ಕೆ ನೂರಕ್ಕೆ ನೂರು ತೆಗೆದರೆ ಸೈನ್ಸಿಗೆ ಹಾಕಬಹುದು, ಸಿಇಟಿ ನೀಟ್ ಬರೆಸಬಹುದು, ಡಾಕ್ಟರ್-ಇಂಜಿನಿಯರ್ ಆಗಿಸಬಹುದು…. ಎಂಬ ಲೆಕ್ಕಾಚಾರ ಶುರುಮಾಡುತ್ತಾರೆ. ಈ ‘ಲೆಕ್ಕಾಚಾರ’ವೇ ಒಂದರ್ಥದಲ್ಲಿ ನಮ್ಮ ಸಾಮಾಜಿಕ ಸ್ಥಿರತೆಯನ್ನೇ ಬುಡಮೇಲು ಮಾಡಲು ಹೊರಟಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಬುಡಮೇಲು ಅಂದರೆ ಇನ್ನೇನಲ್ಲ. ‘ಆರ್ಟ್ಸ್’ ವಿಭಾಗವೇ ಅಲಕ್ಷಿಸಲ್ಪಡುವ ಭಯದಲ್ಲಿದೆ. ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಶ್ಶಾಸ್ತ್ರಗಳಂಥ (ತತ್ತ್ವಶಾಸ್ತ್ರ, ತರ್ಕಶಾಸ್ತ್ರಗಳ ಮಾತುಬಿಡಿ, ಕಾಣೆಯಾಗಿಬಿಟ್ಟಿವೆ) ಆರ್ಟ್ಸ್ ಸಬ್ಜೆಕ್ಟ್ ಗಳು, ಕಲೆ, ಸಂಗೀತ, ನಾಟ್ಯಗಳಂಥ ಶುದ್ಧ ಆರ್ಟ್​ಗಳು ಸ್ವಸ್ಥ ಸಮಾಜದ ನಿರ್ವಣಕ್ಕೆ ಅಗತ್ಯ ಬೇಕಾದ, ಪುಷ್ಟಿ ನೀಡುವ, ಸೌಹಾರ್ದಕ್ಕೆ ತಳಪಾಯ ಹಾಕಬಲ್ಲ ಜ್ಞಾನದ ಕವಲುಗಳೇ ಆಗಿದ್ದವು.

ಆದರೆ ಈಗ ಇವೆಲ್ಲವುಗಳನ್ನೂ ಮೆಟ್ಟಿನಿಂತು ವಿಜ್ಞಾನವನ್ನೂ ಹಿಂದಿಕ್ಕಿ ಮುನ್ನುಗ್ಗುತ್ತಿರುವುದು ‘ವಾಣಿಜ್ಯ’ ಶಾಖೆ. ಕೆಲವೇ ವರ್ಷಗಳ ಹಿಂದೆ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಯ ಗುರಿ ಇಂಜಿನಿಯರ್ ಆಗುವುದು, ಇಲ್ಲವೇ ಡಾಕ್ಟರ್ ಆಗುವುದು ಎಂಬಂತೆ ಬಿಂಬಿಸಲಾಗುತ್ತಿತ್ತು. ಮತ್ತು ಅದಕ್ಕೆ ಬೇಕಾದ ಸಕಲ ಸಿದ್ಧತೆಗಳಲ್ಲಿ ಮುಳುಗಿದ ಕಾಲೇಜುಗಳು ಯಶಸ್ವೀ ಕಾಲೇಜುಗಳಾಗಿದ್ದವು. ಈಗಲೂ ಹಾಗೆಯೇ ನಡೆಯುತ್ತಿದ್ದರೂ ಇತ್ತೀಚಿನ ಟ್ರೆಂಡ್ 90-95 ಅಂಕ ಪಡೆದ ವಿದ್ಯಾರ್ಥಿಗಳು ವಾಣಿಜ್ಯದತ್ತ ಆಕರ್ಷಿತರಾಗುತ್ತಿರುವುದು. ಸಮಾಜದ ಸಕಲ ಅಂಗಗಳನ್ನೂ ‘ವಾಣಿಜ್ಯ’ ತನ್ನ ಅಂಕೆಗೆ ತೆಗೆದುಕೊಳ್ಳುತ್ತಿರುವುದರ ಸಂಕೇತ ಇದು ಎಂದು ಭಾವಿಸಬಹುದೇ?

ಶುದ್ಧ ವಿಜ್ಞಾನ, ಕೃಷಿ ವಿಜ್ಞಾನ, ಸಂಶೋಧನಾ ಶಾಸ್ತ್ರಗಳತ್ತ ಮನಸ್ಸು ಮಾಡುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಮಂಗಳೂರಿನಂಥ ವಿದ್ಯಾಕೇಂದ್ರಿತ ನಗರಗಳ ಅನೇಕ ಕಾಲೇಜುಗಳಲ್ಲಿ ಕಲಾ ವಿಭಾಗಗಳು ಮುಚ್ಚಲ್ಪಡುತ್ತಿದ್ದು, ಸೈನ್ಸ್ ವಿಭಾಗಗಳು ಹೆಸರಿಗೆ ಮಾತ್ರ ಕಾರ್ಯಾಚರಿಸುತ್ತಿವೆ. ಇಲ್ಲಿ ಹೀಗಾದರೆ ಅತ್ತ ವಾಣಿಜ್ಯ ಶಾಸ್ತ್ರ ವಿಭಾಗಗಳಲ್ಲಿ ಜನದಟ್ಟಣೆ ಏರ್ಪಟ್ಟು ಹೆಚ್ಚುವರಿ ವಿಭಾಗಗಳನ್ನು ತೆರೆಯಬೇಕಾದ ಸನ್ನಿವೇಶ. ಪ್ರಜ್ಞಾವಂತ ವಿದ್ಯಾರ್ಥಿಗಳ ಪ್ರಾಮಾಣಿಕ ಪ್ರಯತ್ನಗಳಿಗಿಂತ ‘ಚಾಕಚಕ್ಯತೆಯೇ’ ಮುಖ್ಯವಾಗಿರುವ ವ್ಯವಹಾರ ಆಡಳಿತಗಳ ತರಬೇತಿಯೇ ಆದ್ಯತೆ ಪಡೆಯುತ್ತಿದೆ.

ಮಕ್ಕಳ ‘ಅಡ್ಮಿಷನ್’ ಮಾಡಿಸಹೊರಟ ತಾಯ್ತಂದೆಯರು ಮುಂದೆ ಮೌಲ್ಯಯುತ ಜೀವನ ನಡೆಸಲು ಹಣದಷ್ಟೆ ಮಹತ್ವದ ಮನುಷ್ಯ ಸಂಬಂಧಗಳು, ಕೌಟುಂಬಿಕ ವಾತ್ಸಲ್ಯ, ಜೀವನದ ಸೊಗಡನ್ನು ಹೆಚ್ಚಿಸುವ ಶಾಂತ ಬದುಕನ್ನು ಕಲಿಸುವ ಜೀವನಕೌಶಲ ವೃದ್ಧಿಗೂ ಕಲಿಕೆ ನೆರವೀಯುತ್ತದೆಯೇ ಎಂಬುದನ್ನು ಕ್ಷಣಮಾತ್ರವಾದರೂ ಯೋಚಿಸುವುದೊಳಿತು. ಅಂಕಗಳಿಕೆಯೊಂದನ್ನೇ ಉದ್ದೇಶವಾಗಿಟ್ಟುಕೊಂಡಲ್ಲಿ ಅದು ಮಕ್ಕಳ ಭವಿಷ್ಯದ ಜತೆಗೆ ಪಾಲಕರ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅಂದಹಾಗೆ, ನಿಮ್ಮ ಮಕ್ಕಳ ಅಡ್ಮಿಷನ್ ಆಯ್ತಾ?!

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

Leave a Reply

Your email address will not be published. Required fields are marked *

Back To Top