Thursday, 20th September 2018  

Vijayavani

Breaking News

ಮಳೆ ಇಲ್ಲದೆ ಉತ್ತರ ತತ್ತರ, ಬದುಕು ದುಸ್ತರ

Saturday, 15.09.2018, 2:09 AM       No Comments

ಬೆಂಗಳೂರು: ಈ ಸಲದ ಮುಂಗಾರಿನಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿಗೆ ಹೋಲಿಸಿದರೆ ಉತ್ತರಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಅತಿಯಾಗಿದೆ. 2001ರ ನಂತರ ಈ ಜಿಲ್ಲೆಗಳಲ್ಲಿ ಮೂರನೇ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಇದು ಮುಂಗಾರು-ಹಿಂಗಾರು ಬೆಳೆ ಬಿತ್ತನೆ ಮೇಲೂ ಪರಿಣಾಮ ಬೀರಿದೆ.

ಅಧಿಕ ಬಿತ್ತನೆ, ಮಳೆ ಕೊರತೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿಯಂತೆ ರಾಜ್ಯದ 91 ತಾಲೂಕುಗಳಲ್ಲಿ ವಾಡಿಕೆ ಮಳೆಯಾಗಿಲ್ಲ. ಉತ್ತರ ಕರ್ನಾಟಕದ 69 ತಾಲೂಕುಗಳ ಪೈಕಿ ಕೇವಲ 16 ತಾಲೂಕುಗಳಲ್ಲಿ ವಾಡಿಕೆ ಮಳೆಯಾಗಿದೆ, 51 ತಾಲೂಕುಗಳಲ್ಲಿ ವಾಡಿಕೆ ಮಳೆ ಕೊರತೆಯಾಗಿದೆ. ರಾಯಚೂರಿನ ಮಾನ್ವಿ ಮತ್ತು ಸಿಂಧನೂರು ತಾಲೂಕಿನಲ್ಲಿ ವಾಡಿಕೆಗಿಂತ ಶೇ. 60 ಅಧಿಕ ಮಳೆ ಕೊರತೆಯಾಗಿದ್ದು, ಇವುಗಳನ್ನು ತೀವ್ರ ಮಳೆ ಕೊರತೆಯ ತಾಲೂಕುಗಳು ಎಂದು ಗುರುತಿಸಲಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಕಳೆದ ವರ್ಷಕ್ಕಿಂತ 3.18 ಲಕ್ಷ ಹೆಕ್ಟೇರ್ ಅಧಿಕ ಬಿತ್ತನೆಯಾಗಿದೆ.

ಬೆಳೆ ನಷ್ಟ ಸಮೀಕ್ಷೆ ಆರಂಭ

ಉತ್ತಮ ಮುಂಗಾರು ನಿರೀಕ್ಷಿಸಿದ್ದ ರೈತರಿಗೆ ಮಳೆ ಕೈಕೊಟ್ಟಿದ್ದು, ಬಿತ್ತನೆಯಾದ 62.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 14.41 ಲಕ್ಷ ಹೆಕ್ಟೇರ್​ನಷ್ಟು ಬೆಳೆ ತೇವಾಂಶ ಕೊರತೆಯಿಂದ ನಾಶವಾಗಿದೆ. ಇದರಿಂದ ಅಂದಾಜು -ಠಿ;8 ಸಾವಿರ ಕೋಟಿ ಬೆಳೆ ನಷ್ಟ ಆಗಿರು ವುದಾಗಿ ಅಂದಾಜಿಸಲಾಗಿದೆ ಎಂದು ಕೆಎಸ್​ಎನ್​ಡಿಎಂಸಿ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಇದು ಅಂತಿಮ ಅಂಕಿ- ಅಂಶವಲ್ಲ, ವಿವರವಾದ ಪ್ರತ್ಯೇಕ ಸಮೀಕ್ಷೆ ಆರಂಭವಾಗಿದೆ. ನಾಶವಾದ ಪ್ರತಿ ಹೆಕ್ಟೇರ್​ಗೆ -ಠಿ;6,800 ಸಿಗಲಿದೆ ಎಂದಿದ್ದಾರೆ.

ಮಳೆ ಕೊರತೆಯಿಂದ ಮಣ್ಣಿನಲ್ಲೂ, ವಾತಾವರಣದಲ್ಲೂ ತೇವಾಂಶ ಕೊರತೆಯಾಗಿದೆ. ಪ್ರಸ್ತುತ ಬೆಳೆದಿರುವ ಬೆಳೆಗೆ ಇದು ಹಾನಿ ತರಲಿದೆ. ಹಿಂಗಾರು ಬಿತ್ತನೆಗೂ ಪೂರಕ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ.

| ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ನಿರ್ದೇಶಕ, ಕೆಎಸ್​ಎನ್​ಡಿಎಂಸಿ

ಶೇ.32 ಮಳೆ ಕೊರತೆ

ಕೆಎಸ್​ಎನ್​ಡಿಎಂಸಿ ವರದಿಯಂತೆ ಜೂ.1ರಿಂದ ಸೆ.9ರವರೆಗೆ ಉತ್ತರ ಕರ್ನಾಟಕದಲ್ಲಿ ಸರಾಸರಿ 379 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 257 ಮಿ.ಮೀ. ಮಳೆ ದಾಖಲಾಗಿ ಶೇ.32 ಕೊರತೆಯಾಗಿದೆ. 2001ರಲ್ಲಿ ಉತ್ತರಕರ್ನಾಟಕ ಜಿಲ್ಲೆಗಳಲ್ಲಿ ಕೇವಲ 227 ಮಿ.ಮೀ. (ಶೇ. 40 ಕೊರತೆ), 2003ರಲ್ಲೂ 257 ಮಿ.ಮೀ. (ಶೇ.32 ಕೊರತೆ), 2015ರ ಇದೇ ಅವಧಿಯಲ್ಲಿ 250 ಮಿ.ಮೀ. (ಶೇ.34 ಕೊರತೆ) ಮಳೆಯಾಗಿತ್ತು. ಈ ನಡುವಿನ ವರ್ಷಗಳಲ್ಲಿ ಇಷ್ಟು ಮಳೆ ಕೊರತೆಯಾಗಿರಲಿಲ್ಲ.

Leave a Reply

Your email address will not be published. Required fields are marked *

Back To Top