ಮಂಡ್ಯ: ರೈತ ನಾಯಕ, ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ಅವರ ಅಂತಿಮ ಸಂಸ್ಕಾರ ನಾಳೆ ಬೆಳಗ್ಗೆ 11 ಗಂಟೆಗೆ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ನಡೆಯಲಿದೆ.
ಬೆಳಗ್ಗೆ 6 ರಿಂದ 11ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.
ಫೆ. 18ರ ಭಾನುವಾರ ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಬ್ಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದಾಗ ಎದೆನೋವಿನಿಂದಾಗಿ ಕುಸಿದುಬಿದ್ದಿದ್ದ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಮೂಲತಃ ಕಬ್ಬಡ್ಡಿ ಕ್ರೀಡಾಪಟುವಾಗಿದ್ದ ಕೆ .ಎಸ್. ಪುಟ್ಟಣ್ಣಯ್ಯ ಅವರು ಕೊನೆ ಬಾರಿಯೂ ಕಬ್ಬಡ್ಡಿ ನೋಡುತ್ತಲೇ ಪ್ರಾಣ ಬಿಟ್ಟಿದ್ದರು.
ಸದ್ಯ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಪುಟ್ಟಣ್ಣಯ್ಯ ಅವರ ಪಾರ್ಥೀವ ಶರೀರವನ್ನು ಇಡಲಾಗಿದೆ. ವಿದೇಶದಲ್ಲಿರುವ ಅವರ ಮಕ್ಕಳಿಗೆ ವೀಸಾ ಸಮಸ್ಯೆಯಾಗಿದ್ದರಿಂದ ಇಂದು ಸಂಜೆ ವೇಳೆಗೆ ಅವರು ಬರಲಿದ್ದು, ನಾಳೆ ಮುಂಜಾನೆ ಕ್ಯಾತನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.