Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಮರಳು ಖರೀದಿಯಲ್ಲಿ ಮರುಳಾಗದಿರಿ

Sunday, 07.01.2018, 5:22 PM       No Comments

<<ಎಂ-ಸ್ಯಾಂಡ್​ನಲ್ಲಿ ಕಲಬೆರಕೆ ಮಾಫಿಯಾ|ಶಿಕ್ಷೆ ಭಯವಿಲ್ಲದೆ ಎಗ್ಗಿಲ್ಲದೆ ದಂಧೆ>>

|ವಿಲಾಸ ಮೇಲಗಿರಿ ಬೆಂಗಳೂರು

ಮರಳು ಮಾರಾಟದಲ್ಲಿ ಮರುಳು ಮಾಡುವವರಿದ್ದಾರೆ ಎಚ್ಚರ..! ದಿನೇದಿನೆ ನಿರ್ಮಾಣ ಕಾಮಗಾರಿ ಹೆಚ್ಚುತ್ತಿರುವುದರಿಂದ ಮರಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ನದಿ ಮರಳು ಸಿಗುವುದು ದುಸ್ತರವಾಗಿರುವುದರಿಂದ ಮರಳು ಮಾಫಿಯಾ ಈಗ ಎಂ-ಸ್ಯಾಂಡ್ (ಮ್ಯಾನ್ಯುಫ್ಯಾಕ್ಚರಡ್​ ಸ್ಯಾಂಡ್) ಹೆಸರಿನಲ್ಲಿ ಕಲಬೆರಕೆ ದಂಧೆ ರೂಪ ಪಡೆದಿದೆ.

ಸರ್ಕಾರವೇನೋ ಮರಳಿಗೆ ಪರ್ಯಾಯವಾಗಿ ಎಂ-ಸ್ಯಾಂಡ್ ಉತ್ಪಾದನೆ ಮತ್ತು ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ. ನೈಸರ್ಗಿಕ ಸಂಪನ್ಮೂಲ ಉಳಿಸಲು ಸಹ ಇದರ ಬಳಕೆ ಹೆಚ್ಚುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಂ-ಸ್ಯಾಂಡ್ ಉತ್ಪಾದನೆಗೆ ಪರವಾನಗಿ ನೀಡುತ್ತಿದೆ. ಆದರೆ, ಇದರಲ್ಲೇ ಕಲಬೆರಕೆ ನಡೆಯುತ್ತಿದೆ ಎಂಬ ಕುರಿತು ನೂರಾರು ದೂರು ಬರುತ್ತಿವೆ.

2017-18ನೇ ಸಾಲಿನಲ್ಲಿ ಈವರೆಗೆ ಎಂ-ಸ್ಯಾಂಡ್ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಕಚೇರಿಗೆ 25-30 ದೂರು ಬಂದರೆ, ಫಿಲ್ಟರ್ ಮರಳಿನ ಕುರಿತು 120ಕ್ಕೂ ಹೆಚ್ಚು ದೂರು ಸ್ವೀಕೃತವಾಗಿವೆ. ಇವಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿವೆ. ಹಾಗಾಗಿ ಈ ಸಮಸ್ಯೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ದಿಗಿಲುಗೊಳಿಸಿದೆ.
ಎಂ-ಸ್ಯಾಂಡ್​ನಲ್ಲಿ ಜಲ್ಲಿ ಕ್ವಾರಿ ತ್ಯಾಜ್ಯ ಮಿಶ್ರಣ ಮಾಡಿ ಮಾರಾಟ ಮಾಡಿದರೆ, ಫಿಲ್ಟರ್ ಮರಳಿನಲ್ಲಿ ಮಣ್ಣು ಮಿಶ್ರಣ ಮಾಡುತ್ತಿರುವ ದೂರು ಕೇಳಿ ಬರುತ್ತಿವೆ. ಮರಳು ಕಲಬೆರಕೆ ದಂಧೆಗೆ ಕಡಿವಾಣ ಹಾಕಲು ಈ ಹಿಂದೆ ಇದ್ದ 25 ಸಾವಿರ ರೂ. ದಂಡವನ್ನು 5 ಲಕ್ಷ ರೂ.ಗೆ ಹಾಗೂ 6 ತಿಂಗಳಿದ್ದ ಜೈಲು ಶಿಕ್ಷೆ 2 ವರ್ಷಕ್ಕೆ ಹೆಚ್ಚಿಸಲಾಗಿದೆ. ಆದರೂ, ದಂಧೆಗೆ ಕಡಿವಾಣ ಬಿದ್ದಿಲ್ಲ.

ಕಲ್ಲಿನ ಪುಡಿ ಕಲಬೆರಕೆ
ಕೆಲವರು ದಪ್ಪ ಜಲ್ಲಿ ಮಾಡುವಾಗ ಉಳಿಯುವ ಪೌಡರ್​ನ್ನು ಸಂಸ್ಕರಿಸದೆ ಮರಳು ಜತೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳಲ್ಲಿ ಈ ದಂಧೆ ಹೆಚ್ಚಾಗಿ ನಡೆಯುತ್ತಿದೆ. ನದಿ ಮರಳು ಕಣಗಳು ದುಂಡಗೆ ಇರುತ್ತವೆ. ಅದೇ ರೀತಿ ಯಾವುದೇ ಮೊನಚಿಲ್ಲದ, ಚಪ್ಪಟೆಯಾಗಿಯೂ ಇಲ್ಲದ ದುಂಡನೆಯ ಕಣ ಉತ್ಪಾದಿಸಬೇಕು. ಸಾಮಾನ್ಯ ಕ್ರಷರ್​ಗಳಲ್ಲಿ ಎಂ-ಸ್ಯಾಂಡ್ ಉತ್ಪಾದಿಸಿದರೆ ಕಣಗಳು ಚಪ್ಪಟೆಯಾಗಿ ಇಲ್ಲವೆ ಮೊನಚಾಗಿರುತ್ತವೆ. ಈ ರೀತಿ ಇದ್ದರೆ ಅದು ಕಟ್ಟಡಗಳಿಗೆ ಬಲ ಕೊಡುವುದಿಲ್ಲ.
ಮರಳು ಗುಣಮಟ್ಟ ನೋಡಲು ಅದನ್ನು ಕೈಲಿ ಹಿಡಿದು ನೋಡಿದರೆ ಕಣಗಳು ದುಂಡಗೆ ಇರಬೇಕು. ಚಪ್ಪಟೆಯಾಗಿದ್ದರೆ ಅದು ಒಳ್ಳೆಯದಲ್ಲ. ಸಾಮಾನ್ಯ ಕ್ರಶರ್​ಗಳಲ್ಲಿ ನಿರ್ದಿಷ್ಟ ಗಾತ್ರ 4.75 ರಿಂದ 75 ಮೈಕ್ರಾನ್ ವರೆಗಿನ ಕಣಗಳು ಉತ್ಪಾದನೆಯಾಗುವುದು ಕಷ್ಟ. 2 ಅಥವಾ 3 ಹಂತದಲ್ಲಿ ಸಾಮಾನ್ಯ ಕ್ರಶರ್​ಗಳಲ್ಲೂ ಕ್ರಶ್ ಮಾಡಿದರೆ ಗುಣಮಟ್ಟದ ಮರಳು ಪಡೆಯಬಹುದು. ಆದರೆ, ಇದಕ್ಕೆ ಖರ್ಚು ಹೆಚ್ಚುತ್ತದೆ ಎಂಬ ಕಾರಣಕ್ಕೆ ಸಾಮಾನ್ಯ ಜಲ್ಲಿ ಕ್ರಷರ್​ಗಳಲ್ಲಿನ ತ್ಯಾಜ್ಯವನ್ನೇ ಮರಳು ಎಂದು ಮಾರಾಟ ಮಾಡುವ ದಂಧೆ ವ್ಯಾಪಕವಾಗಿದೆ ಎನ್ನುತ್ತಾರೆ ತಜ್ಞರು.

ವಿಎಸ್​ಐ ಮರಳು ಉತ್ತಮ
ವರ್ಟಿಕಲ್ ಶಾಫ್ಟ್ ಇಂಪ್ಯಾಕ್ಟ್(ವಿಎಸ್​ಐ)ಕ್ರಷರ್​ಗಳಲ್ಲಿ ತಯಾರಾದ ಎಂ-ಸ್ಯಾಂಡ್ ಗುಣಮಟ್ಟದಿಂದ ಕೂಡಿರುತ್ತದೆ. ಈ ತಂತ್ರಜ್ಞಾನದಲ್ಲಿ ಕಲ್ಲು ಒಂದಕ್ಕೊಂದು ಹೊಡೆದುಕೊಂಡು ಪುಡಿಯಾಗುವಂತೆ ಮಾಡಿ ಮರಳು ಉತ್ಪಾದಿಸಲಾಗುತ್ತದೆ. ಇದು ನದಿ ಮರಳಿನ ರೀತಿಯಲ್ಲೇ ದುಂಡಗೆ ಇರುತ್ತದೆ. ಹಾಗಾಗಿ ವಿಎಸ್​ಐ ಮರಳು ನದಿ ಮರಳಿಗಿಂತ ಉತ್ತಮವಾಗಿರುತ್ತದೆ.

ಗುಣಮಟ್ಟ ಪರೀಕ್ಷೆ ಮಾಡಿಸಿ:
ಸಾಮಾನ್ಯ ಜನರಿಗೆ ಎಂ-ಸ್ಯಾಂಡ್ ಗುಣಮಟ್ಟ ಪರೀಕ್ಷೆ ಕಷ್ಟ. ಇಂಜಿನಿಯರಿಂಗ್ ಕಾಲೇಜುಗಳ ಸಿವಿಲ್ ವಿಭಾಗ, ಇಲ್ಲವೆ ಎನ್​ಎಬಿಎಚ್ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷಿಸಿ ಬಳಸುವುದು ಒಳ್ಳೆಯದು. ಸಿವಿಲ್ ಇಂಜಿನಿಯರ್ ಸಲಹೆ ಪಡೆಯುವುದು ಇನ್ನೂ ಉತ್ತಮ. ಈ ಪರೀಕ್ಷೆಗೆ ಸುಮಾರು 500 ರೂ. ಶುಲ್ಕ ವಿಧಿಸಲಾಗುತ್ತದೆ.

 

ಕಲಬೆರಕೆ ಮರಳಿನ ಬಗ್ಗೆ ಜನ ಜಾಗೃತರಾಗುವುದು ಬಹುಮುಖ್ಯ. ದೊಡ್ಡ ಮೊತ್ತದ ಹೂಡಿಕೆ ಮಾಡಿ ಕಟ್ಟಡ ನಿರ್ವಿುಸುವವರು ಗುಣಮಟ್ಟ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಕಲಬೆರಕೆ ವಿರುದ್ಧ ಕಠಿಣ ಕಾಯ್ದೆಗೆ ಗಣಿ ಇಲಾಖೆ, ವೃತ್ತಿನಿರತ ಸಂಸ್ಥೆ ಚಿಂತನೆ ನಡೆಸುತ್ತಿವೆ.
-ಡಾ.ಅಶ್ವತ್ಥ್ ಎಂ.ಯು. ಉಪಾಧ್ಯಕ್ಷ, ಇಂಡಿಯನ್ ಕಾಂಕ್ರೀಟ್ ಇನ್​ಸ್ಟಿಟ್ಯೂಟ್.

 

20 ದಶಲಕ್ಷ ಟನ್ ಪೂರೈಕೆ!
ರಾಜ್ಯದಲ್ಲಿ ವಾರ್ಷಿಕ 26ರಿಂದ 30 ದಶಲಕ್ಷ ಟನ್ ಮರಳಿಗೆ ಬೇಡಿಕೆಯಿದ್ದರೆ, 20 ದಶಲಕ್ಷ ಟನ್​ನಷ್ಟು ಬೇಡಿಕೆಯನ್ನು ಎಂ-ಸ್ಯಾಂಡ್ ಪೂರೈಸುತ್ತಿದೆ! ವರ್ಷದಿಂದ ವರ್ಷಕ್ಕೆ ಎಂ ಸ್ಯಾಂಡ್ ಬಳಕೆ ಹೆಚ್ಚಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಎಂ ಸ್ಯಾಂಡ್’ ಪರಿಚಯಿಸಿದಾಗ ಆರಂಭದಲ್ಲಿ ಹೆಚ್ಚಿನ ಸ್ಪಂದನೆ ಸಿಗಲಿಲ್ಲ. 2013ರಲ್ಲಿ ಸ್ಥಾಪನೆಯಾದ ಏಳು ಘಟಕಗಳಿಂದ 1.47 ದಶಲಕ್ಷ ಟನ್ ಎಂ-ಸ್ಯಾಂಡ್ ಉತ್ಪಾದನೆಯಾಗಿತ್ತು. ರಾಜ್ಯದಲ್ಲಿ 164 ಎಂ-ಸ್ಯಾಂಡ್ ಉತ್ಪಾದನಾ ಘಟಕಗಳಿದ್ದು 20 ದಶಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲೇ 46 ಘಟಕಗಳಿದ್ದು, ವಾರ್ಷಿಕ 38 ಲಕ್ಷ ಟನ್ ಎಂ ಸ್ಯಾಂಡ್’ ಉತ್ಪಾದನೆಯಾಗುತ್ತಿದೆ.

ಎರಡು ಸಂಚಾರ ಪ್ರಯೋಗಾಲಯ…
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ವ್ಯಾಪ್ತಿಯ ಕಾಲೇಜುಗಳ ಪ್ರಯೋಗಾಲದಲ್ಲೂ ಎಂ-ಸ್ಯಾಂಡ್ ಪರೀಕ್ಷೆಗೆ ಅವಕಾಶವಿದೆ. ಜತೆಗೆ ಎರಡು ಸಂಚಾರ ಪ್ರಯೋಗಾಲಯ ಆರಂಭಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿದ್ಧತೆ ನಡೆಸಿದೆ.

ಮಾಹಿತಿ ಹಾಗೂ ದೂರಿಗೆ …
ದೂರು ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಟೋಲ್ ಫ್ರೀ ನಂಬರ್ 180042511110 ಸಂರ್ಪಸಿ.

Leave a Reply

Your email address will not be published. Required fields are marked *

Back To Top