Thursday, 20th September 2018  

Vijayavani

Breaking News

ಪ್ರತಿದಿನವೂ ದೇವರ ಕೊಡುಗೆ…

Saturday, 15.09.2018, 2:03 AM       No Comments

|ಮಹಾದೇವ ಬಸರಕೋಡ

ಝೆನ್ ಗುರುವೊಬ್ಬರು ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದರು. ನಿರಾಶೆ, ಉದ್ವೇಗಗಳಿಗೆ ಅವರು ಒಳಗಾಗಿದ್ದೇ ಇಲ್ಲ, ನಿಯೋಜಿತ ಕಾರ್ಯವನ್ನು ಅಚ್ಚುಕಟ್ಟಾಗಿ ನಿಗದಿತ ಕಾಲಮಿತಿಯೊಳಗೇ ನಿಭಾಯಿಸುತ್ತಿದ್ದರು. ಎಲ್ಲರೊಂದಿಗೂ ಚೇತೋಹಾರಿಯಾಗಿ ಮಾತಾಡುತ್ತಿದ್ದರು. ಅವರಿದ್ದೆಡೆ ಸ್ನೇಹಮಯ ಮತ್ತು ಸಕಾರಾತ್ಮಕ ವಾತಾವರಣವಿರುತ್ತಿತ್ತು. ಹೀಗೆ ಬದುಕನ್ನು ಸಾರ್ಥಕವಾಗಿಯೇ ಕಳೆಯುತ್ತ ಬಂದ ಅವರಿಗೆ ಅಂತ್ಯಕಾಲ ಸನ್ನಿಹಿತವಾದಾಗ, ಶಿಷ್ಯರು, ಸ್ನೇಹಿತರು ಸೇರಿದಂತೆ ಅಗಾಧ ಸಂಖ್ಯೆಯ ಜನರು ಅಂತಿಮ ದರ್ಶನಕ್ಕಾಗಿ ಬಂದರು. ಬದುಕಿನ ಕೊನೆಯ ಕ್ಷಣಗಳಲ್ಲೂ ಅವರಲ್ಲಿನ ಆನಂದ, ಉತ್ಸಾಹ ಮಾಸಿರದಿದ್ದುದನ್ನು ಕಂಡ ಶಿಷ್ಯನೊಬ್ಬ, ‘ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ, ನಿಮ್ಮನ್ನೊಂದು ಪ್ರಶ್ನೆ ಕೇಳಲೇ’ ಎಂದಾಗ ಗುರುಗಳು ಮಂದಸ್ಮಿತರಾಗೇ ಮೌನವಾಗೇ ಸಮ್ಮತಿಸಿದರು. ಆಗ ಶಿಷ್ಯ, ‘ಗುರುಗಳೇ, ನೀವು ಒಮ್ಮೆಯೂ ದುಃಖಿತರಾಗಿದ್ದನ್ನು ನಾವು ಕಾಣಲಿಲ್ಲ. ಉತ್ಸಾಹದಿಂದಲೇ ಬಾಳು ಸಾಗಿಸಿದ್ದರ ಜತೆಗೆ ಎಲ್ಲರನ್ನೂ ಆತ್ಮೀಯವಾಗೇ ಕಂಡಿರಿ, ನಮ್ಮಲ್ಲೂ ಅಂಥ ಭಾವ-ವರ್ತನೆಗಳನ್ನು ತುಂಬಿದಿರಿ. ಇದರ ಗುಟ್ಟೇನು?’ ಎಂದು ಕೇಳಿದ.

ಗುರುಗಳು ನಗುತ್ತ, ‘‘ಅದರಲ್ಲೇನೂ ಮಹಾರಹಸ್ಯವಿಲ್ಲ; ನಾನು ಹರೆಯದವನಾಗಿದ್ದಾಗ ನನಗೊಂದು ಮುಖ್ಯವಿಚಾರ ಗಮನಕ್ಕೆ ಬಂತು; ಅದು- ನಾನು ಆನಂದವಾಗಿರುವುದು ಇಲ್ಲವೇ ದುಃಖಿಯಾಗಿರುವುದು ಸಂಪೂರ್ಣ ನನ್ನ ತೀರ್ವನಕ್ಕೆ, ಪ್ರಯತ್ನಕ್ಕೆ ಬಿಟ್ಟ ಸಂಗತಿ- ಎಂಬುದು. ಪ್ರತಿದಿನ ಮುಂಜಾನೆ ಹಾಸಿಗೆಯಿಂದ ಮೇಲೇಳುವಾಗ, ‘ಈ ದಿನವೆಂಬುದು ದೇವರು ನನಗೆ ಕೊಟ್ಟ ಬಹುದೊಡ್ಡ ಕೊಡುಗೆ; ಇಂದು ಎಲ್ಲರೊಂದಿಗೂ ಪ್ರೀತಿಯಿಂದ ಇರಬೇಕು, ಎಲ್ಲರಿಗೂ ಒಳಿತನ್ನೇ ಮಾಡಬೇಕು. ನನ್ನನ್ನು ನಂಬಿದವರ ಮುಖದಲ್ಲಿ ನಗು-ನೆಮ್ಮದಿ ತುಳುಕಿಸಲು ಸಾಧ್ಯವಾದಷ್ಟು ಯತ್ನಿಸಬೇಕು, ಇಂದು ದೇವರು ನನಗೆ ಕೊಟ್ಟಿರುವ ಈ ಸದವಕಾಶವನ್ನು ಪರಿಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು, ಮತ್ತೊಬ್ಬರಿಂದ ಪಡೆದ ಸಣ್ಣ ಸಹಾಯಕ್ಕೂ ಕೃತಜ್ಞತಾಭಾವ ವ್ಯಕ್ತಪಡಿಸಬೇಕು’ ಎಂದು ನಿರ್ಧರಿಸುತ್ತಿದ್ದೆ. ಇದೇ ನನ್ನ ಜೀವನೋತ್ಸಾಹದ ರಹಸ್ಯ…’ ಎಂದರು.

‘ಸರಳ’ವಾಗಿರುವುದು ‘ಸಂಕೀರ್ಣ’ ಸಂಗತಿಯೇನಲ್ಲ! ಶ್ರಮವಹಿಸಿ ಕೆಲಸಮಾಡುವುದು, ಸತ್ಯವನ್ನು ಹೇಳುವುದು, ಜನರೊಂದಿಗೆ ಚೆನ್ನಾಗಿ ವರ್ತಿಸುವುದು, ಅವರ ಮಾತನ್ನು ಕಾಳಜಿಯಿಂದ ಕೇಳುವುದು, ಅವರಿಗೆ ಕೃತಜ್ಞತೆ ಸಲ್ಲಿಸುವುದು- ಇಂಥ ಕೆಲಸಗಳನ್ನು ಮಾಡುವುದಕ್ಕೆ ಯಾರದೇ ಅಪ್ಪಣೆ ಬೇಕಿಲ್ಲ; ಇವೆಲ್ಲ ನಮ್ಮ ನಿರ್ಣಾಯಕ ಶಕ್ತಿ ಮತ್ತು ಪ್ರಜ್ಞೆಗೆ ಬಿಟ್ಟಿರುವಂಥವು. ಇಂಥ ಮೂಲಭೂತ ಸಂಗತಿಗಳು, ಉದಾತ್ತ ಧ್ಯೇಯದ ಈಡೇರಿಕೆಗೆ ಪೂರಕವಾಗಿ ಪರಿಣಮಿಸುತ್ತವೆ. ಎಂಬುದನ್ನು ಮರೆಯದಿರೋಣ.

(ಲೇಖಕರು ಅಧ್ಯಾಪಕರು ಹಾಗೂ ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

Back To Top