Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಪರಿಶ್ರಮ, ತಾಳ್ಮೆಯ ಮಹತ್ವ

Wednesday, 13.06.2018, 3:03 AM       No Comments

| ಡಾ. ಗಣಪತಿ ಹೆಗಡೆ

ತಾಳುವಿಕೆಗಿಂತ ತಪವು ಬೇರಿಲ್ಲ ಎಂದಿದ್ದಾರೆ ದಾಸಶ್ರೇಷ್ಠರು, ಅಂದರೆ ತಾಳ್ಮೆ ಎಂಬುದು ಶ್ರೇಷ್ಠವಾದ ತಪಸ್ಸು ಎಂದರ್ಥ. ತಂದೆ, ತಾಯಿ ಹಾಗೂ ಗುರುಗಳನ್ನು ಎಂದಿಗೂ ನೋಯಿಸಬಾರದು. ಏಕೆಂದರೆ ಅವರು ನಮ್ಮ ಹಿತೈಷಿಗಳು. ಆದ್ದರಿಂದ ಅವರನ್ನು ನೋಯಿಸುವುದು ಅಪರಾಧ ಎಂಬುದು ನಮ್ಮ ಹಿರಿಯರ ನಂಬಿಕೆ. ನಾವು ಸುಸಂಸ್ಕೃತರಾಗಿ, ವಿದ್ಯಾವಿನಯ ಸಂಪನ್ನರಾಗಿ, ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಸಂಪಾದಿಸಿದರೆ ಮೊದಲು ಸಂತಸ ಪಡುವವರು ನಮ್ಮ ತಂದೆ, ತಾಯಿ ಹಾಗೂ ಗುರುಗಳು. ಆದ್ದರಿಂದ ಅವರು ಹೇಳಿದ ಹಾಗೆ ನಡೆದು, ಅವರು ಹೇಳಿಕೊಟ್ಟಿದ್ದನ್ನು ಕಲಿತು, ಅವರು ಹಾಕಿಕೊಟ್ಟಂಥ ಸನ್ಮಾರ್ಗದಲ್ಲಿ ನಾವು ನಡೆಯಬೇಕು.

ಜಮದಗ್ನಿ ಮತ್ತು ಪರಶುರಾಮರ ಕಥೆ ಇದಕ್ಕೆ ಉತ್ತಮ ಉದಾಹರಣೆ. ‘ಗುರುರವಿಜ್ಞಾನಿ ಅವಿಚಾರಣಿಯಃ’ ಎಂಬ ನುಡಿಮುತ್ತಿನಂತೆ ನಮ್ಮ ಹಿತ ಬಯಸುವ ಪ್ರತಿಯೊಬ್ಬನನ್ನು ನಾವು ಗೌರವಿಸಬೇಕು ಮತ್ತು ಆದರಿಸಬೇಕು. ಸಮಾಜದಲ್ಲಿ ಗೌರವಯುತವಾದ ಸ್ಥಾನ ಸಂಪಾದನೆಯೇ ನಮ್ಮ ಜೀವಿತದಲ್ಲಿ ಮುಖ್ಯ ಉದ್ದೇಶವಾಗಿರಬೇಕು. ಅಂತಹ ಸ್ಥಾನ ಪಡೆಯಬೇಕಾದರೆ ನಾವು ಇತರರನ್ನು ಗೌರವದಿಂದ ನೋಡುವುದನ್ನು ಕಲಿಯಬೇಕು. ಇತರರನ್ನು ಗೌರವಿಸಿದರೆ ಸಹಜವಾಗಿ ಅವರು ನಮ್ಮನ್ನು ಗೌರವಿಸುತ್ತಾರೆ. ಅರಿವಿನ ಮೂಲ ಆಚಾರ್ಯ ಎಂದಿದ್ದಾರೆ ನಮ್ಮ ಹಿರಿಯರು. ಅಂದರೆ, ನಾವು ವಿದ್ಯೆಯ ಮೂಲಕ ಸಂಪಾದಿಸಬೇಕಾದ ಜ್ಞಾನ ಆ ಗುರುವಿನಲ್ಲಿರುತ್ತದೆ. ಭೂಮಿಯ ಒಡಲಲ್ಲಿ ನೀರಿರುವಂತೆ ಗುರುವಿನಲ್ಲಿ ಜ್ಞಾನ ಅಡಗಿರುತ್ತದೆ. ಹಾಗಾದರೆ ಸದ್ಗುರುವಿನಲ್ಲಿರುವ ಜ್ಞಾನವನ್ನು ಹೇಗೆ ಪಡೆಯಬೇಕು.

ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ|

ಏವಂ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ||

ಎಂಬಂತೆ ರೈತನೊಬ್ಬ ಭೂಮಿಯಲ್ಲಿರುವ ನೀರನ್ನು ಪಡೆಯಲು ಸನಿಕೆಯನ್ನು ಹಿಡಿದು ಹಲವಾರು ದಿನಗಳ ಕಾಲ ಅಗೆಯುತ್ತ ಹೋಗುತ್ತಾನೆ, ಕೊನೆಗೊಂದು ದಿವಸ ಅದೆಷ್ಟೋ ಆಳ ಅಗೆದು ತೆಗೆದ ಮೇಲೆ ಆತನಿಗೆ ಅಮೃತಸಮಾನವಾದ ನೀರು ಸಿಗುತ್ತದೆ. ಹಾಗೆಯೇ, ಶಿಷ್ಯನಾದವನು ತನ್ನ ಗುರುವಿನ ಶುಶ್ರೂಷೆ ಮಾಡುತ್ತ ಆ ಗುರುವಿನ ಒಲವನ್ನು ಗಳಿಸಿಕೊಂಡಾಗ, ಗುರುವಿನಲ್ಲಿರುವಂಥ ಅಮೃತ ಸಮಾನವಾದಂಥ ವಿದ್ಯೆ ಶಿಷ್ಯನಿಗೆ ಸಿಗುತ್ತದೆ. ಎಲ್ಲದಕ್ಕೂ ಪರಿಶ್ರಮ ಬೇಕು ಅಷ್ಟೆ. ಯಾರಲ್ಲಿ ಪರಿಶ್ರಮವಿರುತ್ತದೋ, ಯಾರಲ್ಲಿ ತಾಳ್ಮೆ ಇರುತ್ತದೋ, ಯಾರಲ್ಲಿ ಪ್ರಯತ್ನವಿರುತ್ತದೋ ಆತನಿಗೆ ಜಗತ್ತೇ ವಶವಾಗುತ್ತದೆಂದು ನಮ್ಮ ಹಿರಿಯರು ಹೇಳಿದ್ದಾರೆ. ಅಂತಹವನು ಸಮಗ್ರವಾಗಿ ವಿದ್ಯೆಯನ್ನು ಕಲಿತು ಮಹಾಜ್ಞಾನಿಯಾಗುತ್ತಾನೆ. ಪರಿಶ್ರಮ, ಪ್ರಯತ್ನ ಹಾಗೂ ತಾಳ್ಮೆ ಈ ಮೂರು ಇಲ್ಲದಿರುವವನು ಅಜ್ಞಾನಿಯಾಗುತ್ತಾನೆ, ದೈನ್ಯದಿಂದ ಬದುಕುತ್ತಾನೆ. ಆದ್ದರಿಂದ ದೈನ್ಯತೆಯನ್ನು ತೊರೆದು ಪರಿಶ್ರಮಿಯಾಗಿ ಪ್ರಯತ್ನ ಪಟ್ಟು ಜ್ಞಾನವನ್ನು ಸಂಪಾದನೆ ಮಾಡಬೇಕೆಂದು ನಮ್ಮ ಹಿರಿಯರು ಹೇಳಿದ್ದಾರೆ.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

Leave a Reply

Your email address will not be published. Required fields are marked *

Back To Top