More

    ಹೃದಯದೌರ್ಬಲ್ಯದಿಂದ ದೂರವಿರಿ…: ಮನೋಲ್ಲಾಸ

    ಹೃದಯದೌರ್ಬಲ್ಯದಿಂದ ದೂರವಿರಿ...: ಮನೋಲ್ಲಾಸ| ಡಾ. ಗಣಪತಿ ಹೆಗಡೆ

    ಶಂಕರ ವಿದ್ಯಾವಂತ ಯುವಕ. ಪರಿಶ್ರಮದಿಂದ ಓದಿ ಮೇಲೆ ಬಂದವನು. ತೋಟ, ಗದ್ದೆಗಳಿದ್ದರೂ ಕೆಲವು ಕಾಲ ವಾದರೂ ಪಟ್ಟಣದಲ್ಲಿ ಉದ್ಯೋಗ ಮಾಡಬೇಕೆಂಬ ಆಸೆ ಅವನಿಗೆ. ಸರಿ, ಒಂದಾದ ಮೇಲೊಂದರಂತೆ ಕಂಪನಿಗಳಿಗೆ ಸಂದರ್ಶನಕ್ಕಾಗಿ ಹೋದ. ಆದರೆ… ಏನು ಮಾಡುವುದು? ಉದ್ಯೋಗ ಸಿಗುತ್ತಿರಲಿಲ್ಲ. ಪ್ರತಿಸಲವೂ ನಿರಾಶನಾಗಿ ಹಿಂದಿರುಗುತ್ತಿದ್ದ. ಎಂದಿನಂತೆಯೇ ಸಂದರ್ಶನಕ್ಕೆ ಹೋದ ಶಂಕರ ಅಂದೂ ಬೇಸರದಿಂದಲೇ ಮನೆಗೆ ಹಿಂದಿರುಗಿದ್ದ. ಮನೆಯ ಮೂಲೆಯೊಂದರಲ್ಲಿ ಕುಳಿತು ಅಳುತ್ತಿದ್ದ ಮಗನನ್ನು ಸಮಾಧಾನ ಪಡಿಸಲು ತಂದೆ ಸಮೀಪ ಹೋಗಿ- ‘ಶಂಕರ! ಯಾಕೋ ಇಷ್ಟೊಂದು ಬೇಜಾರಾಗಿದ್ದೀಯೋ? ಇಂದೂ ಕೆಲಸ ಸಿಗಲಿಲ್ಲವೇನೋ?’ ಎಂದು ತಲೆಯನ್ನು ನೇವರಿಸಿ ಕೇಳಿದಾಗ ಅವನ ಅಳುವಿನ ಕಟ್ಟೆಯೊಡೆಯಿತು.

    ‘ಅಪ್ಪ! ಯಾಕೋ ಯಾರೂ ಕೆಲಸ ಕೊಡುತ್ತಿಲ್ಲ, ಎಷ್ಟೊಂದು ಓದಿಯೂ ಒಂದು ಉದ್ಯೋಗ ದೊರೆಯಲಿಲ್ಲ ಅಂದರೆ ಯಾಕೆ ನಾನು ಓದಬೇಕಿತ್ತು? ನನಗೇಕೋ ಜೀವನವೇ ಬೇಡ ಅನಿಸ್ತಿದೆ’ ಎನ್ನುತ್ತ ಮತ್ತೆ ಅತ್ತ. ಅವನ ಮಾತು ತಂದೆಯ ಹೃದಯವನ್ನು ಹಿಂಡಿತು. ಇದೇನೋ ಕೆಟ್ಟ ಸೂಚನೆ ಎಂದರಿತು, ‘ಹಾಗೆಲ್ಲ ಮಾತಾಡಬೇಡಪ್ಪ, ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡ್ಕೊಳ್ಳೋಣ. ಭಗವಂತ ಖಂಡಿತವಾಗಿ ಸಹಾಯ ಮಾಡ್ತಾನೆ’ ಎನ್ನುತ್ತ ಅವನನ್ನು ಎಬ್ಬಿಸಿ ದೇವಾಲಯಕ್ಕೆ ಕರೆದುಕೊಂಡು ಹೋದರು. ಬಾಗಿಲಲ್ಲೇ ಎದುರಾದ ಜೋಯಿಸರು, ‘ಏನು ರಾಯರೇ ಮಗನನ್ನೂ ಕರೆದುಕೊಂಡು ಬಂದಿ ದೀರಲ್ಲ? ಏನು ವಿಶೇಷ?’ ಎಂದು ಪ್ರಶ್ನಿಸಿದರು. ರಾಯರು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದರು. ಅರ್ಚನೆ ಮಾಡಿದ ಜೋಯಿಸರು ಪ್ರಸಾದ ಕೊಡುವಾಗ ಆತ್ಮೀಯತೆಯಿಂದ, ‘ಶಂಕರ, ಏನಪ್ಪ ನಿನ್ನ ಸಮಸ್ಯೆ?’ ಎಂದು ಕೇಳಿದರು.

    ‘ಜೋಯಿಸರೇ, ಎಷ್ಟೊಂದು ಶ್ರಮಪಟ್ಟು ಓದಿದೆ, ಅದಕ್ಕೆ ತಕ್ಕ ಹಾಗೆ ಒಂದು ಉದ್ಯೋಗ ಸಿಗಲಿ ಅಂತ ಪ್ರಯತ್ನ ಪಟ್ಟೆ. ಆದರೆ ಫಲಿತಾಂಶ? ಎಲ್ಲಿಯೂ ಆಶಾಭಾವನೆಯೇ ಕಾಣಿಸುತ್ತಿಲ್ಲ. ಮನಸ್ಸಿನ ತುಂಬ ನಿರುತ್ಸಾಹವೇ ತುಂಬಿದೆ. ಬದುಕುವ ಧೈರ್ಯವೇ ಕಾಣಿಸುತ್ತಿಲ್ಲ, ತುಂಬ ಕುಗ್ಗಿ ಹೋಗಿರುವೆ, ಇನ್ನು ಆ ಭಗವಂತನೇ ದಾರಿ ತೋರಬೇಕು’ ಎಂದು ಅಳತೊಡಗಿದ.

    ‘ಭಗವಂತ ಸಾವಿರಾರು ವರ್ಷಗಳ ಹಿಂದೆಯೇ ಈ ಎಲ್ಲ ಸಮಸ್ಯೆಗಳಿಗೆ ದಾರಿ ತೋರಿಸಿದ್ದಾನಪ್ಪ, ನಾವು ಕಣ್ಣು ತೆರೆದು ದಾರಿಯನ್ನು ನೋಡಬೇಕಷ್ಟೆ.

    ಕ್ಲೈಬ್ಯಂ ಮಾ ಸ್ಮಗಮಃ ಪಾರ್ಥ ನೈತತ್ವಯ್ಯುಪಪದ್ಯತೇ|

    ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ||

    ಯುದ್ಧರಂಗದಲ್ಲಿ ಅರ್ಜುನನೂ ನಿನ್ನ ಹಾಗೆ ಕೈಚೆಲ್ಲಿ ಕುಳಿತಿದ್ದಾಗ ಭಗವದ್ಗೀತೆಯಲ್ಲಿ ಭಗವಂತ ಈ ಮಾತನ್ನು ಹೇಳಿದ್ದಾನೆ.

    ‘ಯಾವುದೇ ಸನ್ನಿವೇಶದಲ್ಲೂ ನಿರುತ್ಸಾಹಪಡಬಾರದು, ನಿನ್ನಲ್ಲಿ ಅದಮ್ಯವಾದ ಶಕ್ತಿಯಿದೆ. ಅದನ್ನರಿತು ಭಯ, ಕೋಪ, ಸಂಕೋಚ, ನಿರುತ್ಸಾಹ ಮೊದಲಾದ ಹೃದಯ ದೌರ್ಬಲ್ಯಗಳನ್ನು ದೂರಮಾಡಿ ಕಾರ್ಯಪ್ರವೃತ್ತನಾಗು ಧೈರ್ಯವನ್ನು ತಂದುಕೋ, ಹೇಡಿತನ ನೀಚವಾದುದು. ಯಾವ ಕಾರಣಕ್ಕೂ ಅದನ್ನು ಹತ್ತಿರ ಸುಳಿಯಲು ಬಿಡಬೇಡ. ಭಗವಂತನ ಮೇಲೆ ಭಾರಹಾಕಿ, ನಿನ್ನ ಕರ್ತವ್ಯಗಳನ್ನು ನಿರ್ವಹಿಸು. ಗುರಿ ಸಾಧಿಸುವುದರಲ್ಲಿ ಸಂದೇಹವೇ ಬೇಡ’ ಎಂದಿದ್ದಾನೆ. ಭಗವದ್ಗೀತೆಯಂಥ ಸಾಹಿತ್ಯ ಉಪದೇಶಕ್ಕಾಗಿ ಮಾತ್ರ ಉಳಿಯಬಾರದು. ಅವುಗಳನ್ನು ಜೀವನದ ಒಳಿತಿಗೆ ಬಳಸಿಕೊಳ್ಳಬೇಕು’ ಎಂದು ಜೋಯಿಸರೆಂದಾಗ ಶಂಕರನ ಮನಸ್ಸು ತಿಳಿಯಾಗಿತ್ತು. ಕಣ್ಣುಗಳಲ್ಲಿ ಹೊಳಪಿತ್ತು, ದೃಢನಿರ್ಧಾರದಿಂದ ಮೇಲೆದ್ದು ಮನೆಯಕಡೆ ಹೊರಟ.

    (ಲೇಖಕರು ಸಂಸ್ಕೃತ ಉಪನ್ಯಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts