More

    ಮಿತಬಳಸು… ಮರುಬಳಸು…: ಮನೋಲ್ಲಾಸ

    ಮಿತಬಳಸು... ಮರುಬಳಸು...: ಮನೋಲ್ಲಾಸ| ಡಾ.ವಿ.ಎಚ್.ಮೂಲಿಮನಿ

    ಭಗವಾನ್ ಬುದ್ಧ ಆಶ್ರಮದಲ್ಲಿ ಸುತ್ತಾಡುತ್ತಿದ್ದನು. ಒಬ್ಬ ಭಿಕ್ಷುವು ತನಗೆ ಚಳಿ ತಡೆಯಲು ಉಣ್ಣೆಯ ಶಾಲು ಬೇಕೆಂದು ಕೇಳಿದ. ‘ನಿನ್ನ ಹಳೆಯ ಶಾಲು ಏನಾಯಿತು’ ಎಂದು ಬುದ್ಧ ಕೇಳಿದ. ‘ಅದು ಹಳೆಯದಾಗಿ ಅಂಚುಗಳು ಕಿತ್ತು ಬಂದವು. ಅದನ್ನು ಈಗ ಹಾಸಲು ಬಳಸುತ್ತಿದ್ದೇನೆ’ ಎಂದ ಭಿಕ್ಷು. ‘ನಿನ್ನ ಬಳಿ ದಿಂಬಿಗೊಂದು ಚೀಲವಿತ್ತಲ್ಲವೆ, ಅದೇನಾಯಿತು’ ಎಂದ ಬುದ್ಧ. ‘ನನ್ನ ತಲೆಯಿಟ್ಟು ಹಳ್ಳವಾಗಿ ತೂತು ಬಿದ್ದುಹೋಗಿತ್ತು. ಅದನ್ನು ಕತ್ತರಿಸಿ ಕಾಲೊರೆಸಲು ಮಾಡಿಕೊಂಡಿದ್ದೇನೆ, ಸ್ವಾಮಿ’ ಎಂದ ಭಿಕ್ಷು. ಬುದ್ಧನಿಗೆ ಸಮಾಧಾನವಾದಂತೆ ಕಾಣಲಿಲ್ಲ. ಅವನು ಯಾವ ವಿಚಾರವನ್ನೂ ಆಳವಾಗಿ ನೋಡದೆ ಬಿಡುತ್ತಿರಲಿಲ್ಲ. ‘ನಿನ್ನ ಹಳೆಯ ಕಾಲೊರಸನ್ನು ಏನು ಮಾಡಿದೆ’ ಎಂದು ಕೇಳಿದ. ‘ಗುರುವೇ, ಕಾಲೊರೆಸು ಹಳೆಯದಾಗಿ ದಾರಗಳು ಕಿತ್ತು ಬಂದವು. ಅದರ ಉದ್ದದ, ಅಡ್ಡದ ದಾರ ಬಿಡಿಸಿ ದೀಪದ ಬತ್ತಿಗಳನ್ನಾಗಿ ಹೊಸೆದೆ. ಅವು ದೀಪ ಉರಿಸಲು ಬಳಕೆಯಾದವು’ ಎಂದ ಭಿಕ್ಷು. ಬುದ್ಧನಿಗೆ ಸಂತೋಷವಾಯ್ತು. ಭಿಕ್ಷುವಿಗೆ ಹೊಸ ಶಾಲು ಸಿಕ್ಕಿತು.

    ನಾವು ಕೊಳ್ಳುತ್ತೇವೆ, ಬಳಸುತ್ತೇವೆ, ಬಿಸಾಡುತ್ತೇವೆ. ನಮ್ಮ ಅಗತ್ಯಕ್ಕಿಂತಲೂ ಹೆಚ್ಚಾಗಿ ವಸ್ತುಗಳನ್ನು ಕೊಳ್ಳುತ್ತೇವೆ. ಕೊಳ್ಳುಬಾಕ ಸಂಸ್ಕೃತಿಯ ತಿರುಳು ಇದೇ: ಹೆಚ್ಚಾಗಿ ಕೊಳ್ಳು-ಹೆಚ್ಚಾದದ್ದನ್ನು ಬಿಸಾಡು. ಭೂತಾಯಿ ಸಂಪನ್ಮೂಲಗಳನ್ನು ಬಗೆದು, ಅದೆಷ್ಟು ತ್ಯಾಜ್ಯ ವಸ್ತುಗಳನ್ನು ತ್ಯಜಿಸುತ್ತೇವೆ. ಭಾರತೀಯರಾದ ನಾವು ಹಿಂದೆಂದೂ ಈ ಬಗೆಯಲ್ಲಿ ಹಾಳು ಮಾಡಿದ್ದಿಲ್ಲ. ನಾವು ಶುದ್ಧ, ಸರಳ ಜೀವನ ನಡೆಸಿದವರು. ನಾವು ಜಗತ್ತನ್ನು ನೋಡಿದ ದೃಷ್ಟಿಯೇ ಬೇರೆ. ಯಾವುದೇ ವಸ್ತುವಿಗೆ ಹಲವು ಬಗೆಯ ಉಪಯೋಗಗಳಿವೆಯೆಂದು ತಿಳಿದವರು ನಾವು.

    ಪ್ರಾಚೀನ ಭಾರತೀಯರು, ವಿಚಾರವಂತರು ಪರಿಶೀಲಿಸಿದ ಪ್ರಶ್ನೆಯೆಂದರೆ, ಇದನ್ನು ಪಡೆಯುವುದು ಹೇಗೆ? ಬಯಕೆ, ಅವಶ್ಯಕತೆಗಳನ್ನು ಹೆಚ್ಚಿಸುವುದರಿಂದಲೆ ಅಥವಾ ಮಿತಗೊಳಿಸುವುದರಿಂದಲೇ? ಅವರು ಎರಡನೆಯದನ್ನು ಸರಿ ಎಂದರು. ಈ ವಿಚಾರ ಈಶಾವಾಸ್ಯೋಪನಿಷತ್​ನ ಮೊದಲ ಶ್ಲೋಕದಲ್ಲಿ ಪ್ರಕಟವಾಗಿದೆ-

    ಈಶಾವಾಸ್ಯಮಿದಂ ಸರ್ವಂ ಯತ್ಕಂಚ ಜಗತ್ಯಾಂಜಗತ್ ತೇನ್

    ತ್ಯಕೇನ ಭುಂಜೀಥಾಃ ಮಾ ಗೃದಾಃ ಕಸ್ಯ ಸ್ವಿದ್ದನಂ

    ಈ ಜಗತ್ತಿನಲ್ಲಿ ನಾವು ಕಾಣುವ ಪ್ರತಿಯೊಂದನ್ನು ದೇವರು ಸೃಷ್ಟಿಸಿದ್ದಾನೆ. ಅವುಗಳನ್ನು ಮಿತವಾಗಿ ಬಳಸೋಣ. ಇತರರಿಗೆ ಸೇರಿದ ಸಂಪತ್ತನ್ನು ಅಪಹರಿಸುವುದು ಬೇಡ. ಪ್ರಕೃತಿ ಸಂಪತ್ತು ಮಾನವರಿಗೆ ಮಾತ್ರವಲ್ಲ, ಪಶು-ಪಕ್ಷಿ, ವೃಕ್ಷಗಳು ಇತ್ಯಾದಿ ಎಲ್ಲಾ ಜೀವಿಗಳಿಗೂ ಇವುಗಳನ್ನು ಉಪಯೋಗಿಸುವ ಹಕ್ಕಿದೆ. ಈ ತಲೆಮಾರು ಮಾತ್ರವಲ್ಲ, ಮುಂದಿನ ಎಲ್ಲ ತಲೆಮಾರುಗಳಿಗೂ ಪ್ರಕೃತಿ ಸಂಪತ್ತು ಬೇಕು. ಆದುದರಿಂದ ಪ್ರಕೃತಿ ಸಂಪತ್ತನ್ನು ಧೂಳಿಪಟ ಮಾಡುತ್ತಿರುವ ಇಂದಿನ ಪ್ರವೃತ್ತಿ ಎಷ್ಟು ಅಪಾಯಕರವೆಂಬುದನ್ನು ಸೂಚಿಸುತ್ತದೆ.

    ಉಪಯೋಗಿಸು-ಬಿಸಾಡು ಪ್ರವೃತ್ತಿ ಮಾನವ ಕುಲಕ್ಕೆ ಮಹಾ ಹಾನಿಕಾರಕ. ಈ ಪ್ರವೃತ್ತಿ ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಇತ್ತಿಚೆಗೆ ಸ್ವಲ್ಪ ನಮ್ಮ ದೇಶದಲ್ಲೂ ಸೋಂಕುಜಾಢ್ಯವಾಗಿ ಹರಡುತ್ತಿ್ತೆ. ಇದರಿಂದಾಗಿ ಮನುಕುಲ ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೊಳ್ಳುಬಾಕ ಸಮಾಜಕ್ಕೆ ಈ ಹಳೆಯ ಕಥೆಯು ಪಾಠ ಕಲಿಸುತ್ತದೆಯಲ್ಲವೆ…

    (ಲೇಖಕರು ನಿವೃತ್ತ ಪ್ರಾಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts