More

    ಕೂಡಿ ಬಾಳೋಣ…: ಮನೋಲ್ಲಾಸ

    ಕೂಡಿ ಬಾಳೋಣ...: ಮನೋಲ್ಲಾಸ| ಭಾರತಿ ಎ. ಕೊಪ್ಪ

    ಬಡ ಕಾರ್ವಿುಕನೊಬ್ಬ ಪ್ರತಿ ತಿಂಗಳ ಮೊದಲ ದಿನ ಸಿಹಿತಿಂಡಿಯ ಅಂಗಡಿಯಲ್ಲಿ ತಪ್ಪದೇ ಹಾಜರಿರುತ್ತಿದ್ದ. ಪ್ರತಿ ಬಾರಿಯೂ ಬೇರೆ ಬೇರೆ ಸವಿರುಚಿಯ ಸಿಹಿತಿಂಡಿಗಳನ್ನು ಖರೀದಿಸಿ ಕಾರ್ವಿುಕ ತೆರಳುತ್ತಿದ್ದ. ಹೀಗೆ ಒಂದು ದಿನ ಅಂಗಡಿಯಾತ ಬೇರೊಬ್ಬ ಗಿರಾಕಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಈ ಬಡ ಕಾರ್ವಿುಕ ಒಂಟಿಯಾಗಿ ಬದುಕುತ್ತಿರುವ ವಿಚಾರ ತಿಳಿಯಿತು. ಆಗ ಅವನಿಗೆ ಅಷ್ಟೊಂದು ಸಿಹಿತಿಂಡಿ ಖರೀದಿಸಿ ಆತ ಏನು ಮಾಡುತ್ತಾನೆಂಬ ಕುತೂಹಲ ಮೂಡಿತು.

    ಯಥಾಪ್ರಕಾರ ತಿಂಗಳ ಮೊದಲ ದಿನ ಸಿಹಿತಿಂಡಿಗಾಗಿ ಕಾರ್ವಿುಕ ಬಂದಾಗ, ಅಂಗಡಿಯಾತ ಕುತೂಹಲ ತಣಿಸಿಕೊಳ್ಳಲು, ‘ಒಬ್ಬನೇ ದುಡಿದು ಒಂಟಿಯಾಗಿ ಬದುಕುವ ನಿನಗೆ ಇಷ್ಟೊಂದು ಸಿಹಿತಿಂಡಿ ಬೇಕೇ?’ ಎಂದು ಪ್ರಶ್ನಿಸಿದ. ‘ನಾನೊಬ್ಬನೇ ದುಡಿದು ನಾನೇ ಎಲ್ಲವನ್ನೂ ನನಗಾಗಿ ವಿನಿಯೋಗಿಸಿದರೆ ಫಲವೇನು ಸ್ವಾಮಿ? ನಮ್ಮೂರಿನ ಬಡ ಮಕ್ಕಳು ಸಿಹಿತಿಂಡಿಗಾಗಿ ಆಗಾಗ್ಗೆ ಆಸೆಪಟ್ಟರೂ,ಅವರ ತಂದೆ-ತಾಯಿಯರ ಸಂಕಷ್ಟದಿಂದ ಮಕ್ಕಳ ಆಸೆ ಈಡೇರಿಸಲಾಗುವುದಿಲ್ಲ. ಆದರೆ ನಾನೊಬ್ಬನೇ ಇರುವುದರಿಂದ ನನ್ನ ಅಗತ್ಯಗಳೂ ಕಡಿಮೆ. ಹಾಗಾಗಿ ದುಡಿಮೆಯ ಹಣದಲ್ಲಿ ಒಂದಷ್ಟು ಭಾಗ ತೆಗೆದಿಟ್ಟು, ಪ್ರತಿ ತಿಂಗಳ ಮೊದಲ ದಿನ ಪುಟಾಣಿಗಳನ್ನು ಒಂದೆಡೆ ಸೇರಿಸಿ, ಸಿಹಿ ಹಂಚುತ್ತೇನೆ. ಅವರ ಸಂತಸದ ಮೊಗ ನನಗೆ ಮತ್ತಷ್ಟು ದುಡಿಯಲು ಪ್ರೇರೇಪಿಸುತ್ತದೆ. ಹೊಸ ಚೈತನ್ಯ ಮೂಡಿಸುತ್ತದೆ’ ಎಂದನು. ಅಂಗಡಿಯಾತನಿಗೂ ತಾನೂ ಈ ರೀತಿಯ ಸತ್ಕಾರ್ಯದಲ್ಲಿ ತೊಡಗಬೇಕೆಂಬ ಸ್ಪೂರ್ತಿ ಆಂತರ್ಯದಲ್ಲಿ ಮೂಡಿತು.

    ‘ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವ, ಕೋಳಿಯೊಂದು ಗುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ’ ಎಂಬ ಬಸವಣ್ಣನವರ ವಚನದ ಸಾಲುಗಳಂತೆ, ಕಾಗೆ ಕೋಳಿಗಳು ಕಾಳು ಅಥವಾ ಒಂದಗುಳು ಆಹಾರ ಕಂಡರೆ ಇಡೀ ಪರಿವಾರವನ್ನು ಕೂಗಿ ಕರೆದು ಒಟ್ಟಿಗೆ ಕೂಡಿ ತಿನ್ನುತ್ತವೆ. ಎಲ್ಲವೂ ತನಗೆ ಎಂಬ ಸ್ವಾರ್ಥಪರತೆ ಮೆರೆಯದೆ, ಸಹವರ್ತಿಗಳ ಜೊತೆಗೆ ಸಂತೋಷದಿಂದ ಕೂಡಿ ತಿನ್ನುವ ಗುಣ ಬಹುತೇಕ ಪ್ರಾಣಿಪಕ್ಷಿಗಳಿಗಿವೆ. ಆದರೆ ಮಾನವರಾದ ನಾವು ನಮ್ಮೊಳಗಿನ ಸದ್ಗುಣಗಳಿಗೆ ಸ್ವಾರ್ಥದ ಪರದೆ ಕಟ್ಟಿಕೊಂಡಿರುತ್ತೇವೆ.

    ನಮ್ಮ ಆದಾಯ ಹೆಚ್ಚಾಗಿರಲಿ, ಕಡಿಮೆ ಇರಲಿ, ಅದರಲ್ಲಿ ಒಂದು ಭಾಗ ಇತರರ ಸಹಾಯಕ್ಕಾಗಿ ಮೀಸಲಿಡುವ ಮನಸ್ಥಿತಿ ಸದಾ ನಮ್ಮನ್ನು ಸಂತೋಷವಾಗಿಡುತ್ತದೆ.

    ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ

    ಕೊಟ್ಟಿದ್ದು ಕೆಟ್ಟಿತ್ತೆನಬೇಡ ಮುಂದಕ್ಕೆ|

    ಕಟ್ಟಿಹುದು ಬುತ್ತಿ| ಸರ್ವಜ್ಞ

    ಎಂಬ ಸರ್ವಜ್ಞನ ವಚನದ ಸಾಲುಗಳಂತೆ, ಉದಾರ ಮನಸ್ಸಿನಿಂದ ನಾವು ಮಾಡುವ ದಾನ, ಸಹಾಯಗಳು ನಮಗೆ ಒಳಿತನ್ನೇ ಮಾಡುತ್ತವೆ. ಸ್ವಾರ್ಥದ ಸಂಕೋಲೆಯಲ್ಲಿ ಬಚ್ಚಿಟ್ಟ, ಅಗತ್ಯಕ್ಕಿಂತ ಜಾಸ್ತಿ ಸಂಗ್ರಹಿಸಿಟ್ಟ ಧನ-ಕನಕ-ಧಾನ್ಯಗಳು ಯಾವುದಾದರೊಂದು ಅಹಿತಕರ ಸಂದರ್ಭದಲ್ಲಿ ಪರರ ಪಾಲಾಗುತ್ತವೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದನರಿತು ಕೂಡಿ ಬಾಳುವ, ಕೂಡಿ ತಿನ್ನುವ ಸಕಾರಾತ್ಮಕ ಬದುಕು ನಮ್ಮದಾಗಿಸಿಕೊಳ್ಳೋಣ.

    (ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts