Thursday, 16th August 2018  

Vijayavani

ಅಜಾತಶತ್ರು ಅಸ್ತಂಗತ - ಅಟಲ್ ಬಿಹಾರಿ ವಾಜಪೇಯಿ ವಿಧಿವಶ - ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಾಜಿ ಪ್ರಧಾನಿ ನಿಧನ        ಚತುಷ್ಪಥ ಹೆದ್ದಾರಿಯ ಹರಿಕಾರ - ನದಿಜೋಡಣೆಯ ಗುರಿಕಾರ - ಸಭ್ಯ, ಕವಿ ರಾಜಕಾರಣಿ ಅಟಲ್ ಅಜರಾಮರ        ದೆಹಲಿ ನಿವಾಸದಲ್ಲಿ ಪಾರ್ಥಿವ ಶರೀರ - ನಾಳೆ ಪಕ್ಷದ ಕಚೇರಿಯಲ್ಲಿ ದರ್ಶನ - ರಾಜ್​ಘಾಟ್​​ನಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ        ದೇಶಾದ್ಯಂತ 7 ದಿನಗಳ ಶೋಕಾಚರಣೆ - ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ - ರಾಜ್ಯದಲ್ಲಿಯೂ ಸರ್ಕಾರಿ ರಜೆ        ದೇಶ ಮಹಾನ್ ನಾಯಕನ್ನ ಕಳೆದುಕೊಂಡಿದೆ - ನಿಶ್ಯಬ್ದ, ಶೂನ್ಯ ನನ್ನನ್ನ ಆವರಿಸಿದೆ - ಅಟಲ್​ ಅಗಲಿಕೆಗೆ ಮೋದಿ ಕಂಬನಿ        ವಾಜಪೇಯಿ​ ನಿಧನ ವಿಷಾದಕರ - ದೇಶ ಕಂಡ ಅತ್ಯಂತ ಮಹಾನ್ ವ್ಯಕ್ತಿ - ಅಟಲ್ ನಿಧನಕ್ಕೆ ಸ್ವಾಮೀಜಿಗಳ ಸಂತಾಪ        ಮಡಿಕೇರಿಯಲ್ಲಿ ಕುಸಿದ ಮನೆ - ವೈಮಾನಿಕ ಸಮೀಕ್ಷೆಗೆ ಬಿಜೆಪಿ ಮನವಿ - ಕೇರಳದಲ್ಲಿ ರಕ್ಕಸ ವರುಣಗೆ 88 ಮಂದಿ ಬಲಿ        ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಕಂಪನ - ಭಾರಿ ಸ್ಫೋಟದ ಜತೆಗೆ ಕಂಪನದ ಅನುಭವ - ಇನ್ನೂ ಗೊತ್ತಾಗಿಲ್ಲ ಅಸಲಿ ಕಾರಣ...       
Breaking News

ಮಲೆನಾಡಿನ ಮಳೆಹಬ್ಬ

Wednesday, 08.08.2018, 3:00 AM       No Comments

| ದೀಪಕ್​ ಹೆಗಡೆ ಗೋಳಿಕೈ

ನಗರಗಳೆಂಬ ಕಾಂಕ್ರೀಟ್ ಕಾಡುಗಳಲ್ಲಿ ಕಾಲೇಜು ಅಥವಾ ಕಚೇರಿಯ ಕಾರ್ಯದೊತ್ತಡದಲ್ಲಿ ಯುವಜನತೆ ಕಳೆದು ಹೋಗುತ್ತಿದ್ದಾರೆ. ಅವರನ್ನು ಕೆಲ ಸಮಯವಾದರೂ ನಿಜವಾದ ಕಾಡಿನತ್ತ ಸೆಳೆಯುವ ಉದ್ದೇಶದಿಂದ ಹುಟ್ಟಿದ್ದೇ ಮಳೆ ಹಬ್ಬ. ಈಗಾಗಲೇ ಹಲವು ಕಡೆ ನಡೆದು ಯುವಜನರ ಮನಸ್ಸು ಗೆದ್ದಿರುವ ಮಳೆ ಹಬ್ಬ ಈಗ ಮತ್ತೆ ಆಗಸ್ಟ್ 11-12ರಂದು ಉತ್ತರ ಕನ್ನಡ ಜಿಲ್ಲೆಯ ವಾನಳ್ಳಿಯಲ್ಲಿ ನಡೆಯಲಿದೆ.

ಮನುಷ್ಯ ತನ್ನ ದೈನಂದಿನ ಜೀವನದ ಹೊರತಾದ ಚೈತನ್ಯ ತುಂಬುವ ಚಟುವಟಿಕೆಗಳಿಗೆ ಯಾವಾಗಲೂ ಹಂಬಲಿಸುತ್ತಿರುತ್ತಾನೆ. ಅವಸರದ, ಬಿಡುವಿಲ್ಲದ, ಒತ್ತಡದ ಕೆಲಸಕಾರ್ಯಗಳಿಗೆ ಯಾವಾಗ ಕೊಂಚ ವಿರಾಮ ಸಿಗುವುದೋ ಎಂಬ ಪ್ರಶ್ನೆ ಕಾಡುವುದು ಸಹಜ. ವ್ಯವಹಾರಿಕ ಬದುಕಿನ ಜಂಜಾಟ ಮರೆತು ನೆಮ್ಮದಿಯ ಸಮಾಧಾನದ ನಿಟ್ಟುಸಿರು ಬಿಡಲು ಹಲವರ ಹಾದಿ ಸುತ್ತಾಟ, ಪ್ರವಾಸ.

ಜನಪ್ರಿಯ ಪ್ರವಾಸಿ ತಾಣಗಳ ಭೇಟಿಯ ಪರ್ಯಾಯವಾಗಿ ಪರಿಶುದ್ಧ ಪ್ರವಾಸೋದ್ಯಮ ಎಂಬ ಪರಿಕಲ್ಪನೆಯೊಂದಿಗೆ ಮಳೆ, ಕಾಡು, ನೀರು, ಹಳ್ಳ, ತೊರೆ, ನಿಸರ್ಗ, ಪ್ರಕೃತಿಯ ಸೊಬಗನ್ನೇ ಮೂಲ ವಸ್ತುವಾಗಿಟ್ಟುಕೊಂಡು ಮಲೆನಾಡಿನ ಕೃಷಿ ಪದ್ಧತಿಯನ್ನು, ಗ್ರಾಮೀಣ ಸಂಸ್ಕೃತಿಯ ಸೊಗಡನ್ನು, ಗ್ರಾಮೀಣ ಬದುಕಿನ ಶೈಲಿಯನ್ನು ಮಲೆನಾಡಿನ ವೈವಿಧ್ಯಮಯ ಆಹಾರ ಪದ್ಧತಿಯನ್ನು ಪರಿಚಯಿಸುವುದೇ ಮಳೆಹಬ್ಬ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ವಾನಳ್ಳಿಯ ಹಸಿರು ಕಾನನದ ಕಾಲು ಹಾದಿಯಲ್ಲಿ ಆರಂಭವಾಗುವ ಮಳೆಹಬ್ಬ ನಿಸರ್ಗದ ಮಡಿಲಲ್ಲಿ ಪ್ರಕೃತಿಯ ಸೊಬಗನ್ನು ಸವಿಯುವಂತೆ ಮಾಡುತ್ತದೆ. ಪ್ರಾಣಿಗಳ ಮುಕ್ತ ಸಂಚಾರಕ್ಕೆ ಪಕ್ಷಿಗಳ ಕಲರವಕ್ಕೆ ತಡೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಚಾರಣದುದ್ದಕ್ಕೂ ಮೌನನಡಿಗೆ ವಿಶಿಷ್ಟ ಅನುಭವ ನೀಡುತ್ತದೆ. ಪ್ಲಾಸ್ಟಿಕ್ ವಸ್ತುಗಳನ್ನು, ಚೀಲಗಳನ್ನು, ಪರಿಸರಕ್ಕೆ ಹಾನಿಯುಂಟು ಮಾಡುವ ಇನ್ನಿತರ ವಸ್ತುಗಳನ್ನು ಉಪಯೋಗಿಸದೆ ಕಾಡು, ಗಿಡ, ಮರ, ಪರಿಸರವನ್ನು ಉಳಿಸುವ, ಉಳಿಸಲು ಉತ್ತೇಜನ ನೀಡುವುದು ಮಳೆಹಬ್ಬದ ಸದುದ್ದೇಶ. ಹರಿಯುವ ತೊರೆ, ಭೋರ್ಗರೆಯುವ ಜಲಪಾತ, ಎತ್ತರದ ಬೆಟ್ಟ, ಜಿಟಿ ಜಿಟಿ ಮಳೆಯ ನಡುವಿನ ಚಾರಣ, ಬೆಟ್ಟದ ಮೇಲಿನ ಬಯಲು ಜಾಗದಲ್ಲಿ ಆಡುವ ಗಿಲ್ಲಿದಾಂಡು, ಲಗೋರಿ ಎಲ್ಲವೂ ವಿಭಿನ್ನ ಅನುಭವ. ಮಲೆನಾಡಿನ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾದ ಭತ್ತದ ಗದ್ದೆಯಲ್ಲಿ ನೇಗಿಲು ಹಿಡಿದು ಹೂಟಿ ಮಾಡುವ ಅವಕಾಶವನ್ನು ಮಳೆಹಬ್ಬ ಒದಗಿಸುತ್ತದೆ. ಕೆಸರುಗದ್ದೆಯಲ್ಲಿ ಕಬಡ್ಡಿ ಮತ್ತು ಹಗ್ಗಜಗ್ಗಾಟ ಮಳೆಹಬ್ಬದ ಬಹುಮುಖ್ಯ ಆಕರ್ಷಣೆಗಳಲ್ಲೊಂದು.

ಕೆಸರುಗದ್ದೆಯಲ್ಲಿನ ಕಬಡ್ಡಿ ಆಟಗಾರರಿಗೆ ಪರಸ್ಪರ ತಂಡಗಳ ಪೈಪೋಟಿ ಒಂದೆಡೆಯಾದರೆ ಸ್ಥಳೀಯ ರೈತ ಕುಟುಂಬದ ನೂರಾರು ಜನರ ಪ್ರೋತ್ಸಾಹ ಇನ್ನೊಂದೆಡೆ. ಅಲ್ಪಪ್ರಮಾಣದ ವ್ಯವಸಾಯದ ಪಾಠ ಕಲಿಸಿದ, ಹಗ್ಗಜಗ್ಗಾಟ, ಕೆಸರುಗದ್ದೆ ಕಬಡ್ಡಿ ಆಟವಾಡಲು ಕೃಷಿ ಭೂಮಿ ಒದಗಿಸಿ ನೆರವಾದ ರೈತರಿಗೆ ಧನ್ಯವಾದ ಸಲ್ಲಿಸುವ ರೂಪದಲ್ಲಿ ರೈತರಿಗೆ ಗಿಡಗಳನ್ನು ನೀಡಿ ಅದರಲ್ಲೂ ಪರಿಸರ ಕಾಳಜಿ ಮೆರೆಯುತ್ತದೆ ಮಳೆಹಬ್ಬ.

ದಿನವಿಡೀ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆದು ಸಂಜೆಯ ಸಮಯದಲ್ಲಿ ದಟ್ಟ ಕಾಡಿನ ಮಧ್ಯದಲ್ಲಿರುವ ಮನೆಯಲ್ಲಿ ಕುಳಿತು ಒಂದಿಷ್ಟು ಮಾತುಕತೆ, ಹಾಡು-ಹಾಸ್ಯ, ಮನರಂಜನೆ ಜತೆಗೆ ಜೀವನದ ಸಿಹಿಕಹಿ ಅನುಭವಗಳನ್ನು ತೆರೆದಿಡಲು ಒಂದು ಪುಟ್ಟ ವೇದಿಕೆ ಮಳೆಹಬ್ಬದ ಕಾರ್ಯಕ್ರಮದ ಒಂದು ಭಾಗ, ಆಟ-ಪಾಠ, ಹಾಡು-ಕುಣಿತ, ಎಲ್ಲದರ ಮಧ್ಯೆ ಊಟೋಪಚಾರದಲ್ಲಿಯೂ ವೈವಿಧ್ಯತೆಯನ್ನು ಎತ್ತಿ ಹಿಡಿಯುತ್ತದೆ. ಮಳೆಹಬ್ಬ ಮಲೆನಾಡಿನ ವಿಶಿಷ್ಟ ಅಡುಗೆಗಳಾದ ಹಲಸಿನಹಣ್ಣಿನ ಕಡುಬು, ಹೋಳಿಗೆ, ಅತ್ರಾಸ, ಚಕ್ಕುಲಿ, ಜೇನುತುಪ್ಪ, ಮಾವಿನಕಾಯಿ ಉಪ್ಪಿನಕಾಯಿ ಇತರ ರುಚಿ ರುಚಿಯಾದ ಬಗೆ ಬಗೆಯ ಖಾದ್ಯಗಳು, ಅಡುಗೆಗಳು, ಸಾಂಪ್ರದಾಯಿಕ ಆಹಾರ ಪದ್ಧತಿಯ ಶೈಲಿಯನ್ನು ಪರಿಚಯಿಸುತ್ತದೆ. ಸಭೆ, ಸಮಾರಂಭ, ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಸರ ಕಾಳಜಿ ತೋರಿದರೆ ಸಾಕಾಗದು, ಅದರ ಅನುಷ್ಠಾನ ಅನಿವಾರ್ಯ. ಪರಿಸರ ಕಾಳಜಿಯ ಪ್ರಾಯೋಗಿಕ ಅನುಭವ ನೀಡಲು, ಪರಿಸರ ಕಾಳಜಿಯ ಅನುಷ್ಠಾನಕ್ಕೆ ವ್ಯವಸ್ಥಿತ ತಳಹದಿ ಕೊಡಲು ಆ ನಿಟ್ಟಿನಲ್ಲಿ ಚಿಂತನೆ ಹುಟ್ಟು ಹಾಕಲು ಮಳೆಹಬ್ಬ ಆಯೋಜಿಸಿದ್ದು ಪಾಲ್ಗೊಂಡ ಜನ ಅಲ್ಲಿ ತಿಳಿದುಕೊಂಡಿದ್ದನ್ನು, ಕಲಿತಿದ್ದನ್ನು, ತಾವು ಪಾಲಿಸಿ ಇತರರಿಗೂ ತಿಳಿಸಬೇಕು. ಮುಖ್ಯವಾಗಿ ಯುವಜನತೆಗೆ, ಮಕ್ಕಳಿಗೆ ಪರಿಶುದ್ಧ ಪ್ರವಾಸೋದ್ಯಮದ ಕುರಿತು ಜಾಗೃತಿ ಮೂಡಿಸಬೇಕೆಂಬುದು ಮಳೆಹಬ್ಬ ಆಯೋಜನೆಯ ಸದುದ್ದೇಶ. ಮಲೆನಾಡಿನ ಮಳೆಗಾಲದ ಸೊಬಗನ್ನು ತೋರಿಸುವುದರ ಜತೆಗೆ ಇಲ್ಲಿಯ ಗ್ರಾಮೀಣ ಕ್ರೀಡೆಗಳು ಮತ್ತು ಸಾಂಪ್ರದಾಯಿಕ ಶೈಲಿಯ ಅಡುಗೆ ಪರಿಚಯಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಶುದ್ಧ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸುವುದು ಮಳೆಹಬ್ಬದ ಆಶಯ. ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶ ಸೇರುವ ಯುವಜನರನ್ನು ಸೆಳೆಯಲು ಕೃಷಿ ಚಟುವಟಿಕೆಗಳ ಪ್ರಾಥಮಿಕ ತರಬೇತಿ ಜತೆಗೆ ಗಿಡ ನೆಡುವ ಕಾರ್ಯಕ್ರಮವೂ ಇದೆ. ಪರಿಸರ ಉಳಿಸುವ ಕುರಿತು ಅರಿವು, ಮೂಡಿಸುತ್ತಿರುವ ಮಳೆಹಬ್ಬ ಸಾಕಷ್ಟು ಜನರನ್ನು ತಲುಪಲಿ. ಲಕ್ಷಾಂತರ ಪ್ರವಾಸಿಗರಿಗೆ ಆತಿಥ್ಯ ನೀಡುವ ಅನುಪಮ ಅವಕಾಶ ಮಳೆಹಬ್ಬಕ್ಕೆ ಸಿಗುವಂತಾಗಲಿ. (ಹೆಚ್ಚಿನ ಮಾಹಿತಿಗೆ 8762329546)

ನಗರ ಜೀವನದಿಂದ ಬೇಸತ್ತ ಮನಸಿಗೆ ಪ್ರಕೃತಿಯ ಮಧ್ಯೆ ಸಮಾಧಾನ ಸಿಗುತ್ತದೆ. ಮನೆಯಲ್ಲಿ ಬೋರ್ ಆಗ್ತಿದೆ ಎನ್ನುತ್ತಿದ್ದ ಮಗನನ್ನು ನಾನು ಸಿನಿಮಾ, ಮಾಲ್ ಅಂತ ಸುತ್ತಾಡಿಸುತ್ತಿದ್ದೆ. ಕಳೆದ ಬಾರಿ ಮಳೆಹಬ್ಬಕ್ಕೆ ಕರೆದುಕೊಂಡು ಹೋಗಿದ್ದೆ. ಅದು ಆತನಿಗೆ ಹೊಸ ಅನುಭವವನ್ನೇ ನೀಡಿದೆ.

| ಚೈತ್ರಾ ಸರ್ದೇಶಪಾಂಡೆ ಬೆಂಗಳೂರು

 

ಗ್ರಾಮೀಣ ಸಂಸ್ಕೃತಿಯ ಪರಿಚಯವಿರದ ನಗರ ಪ್ರದೇಶದ ಜನರನ್ನು ಕರೆತಂದು ಮಳೆಯಲ್ಲಿ, ಮಣ್ಣಿನಲ್ಲಿ ಸಂಭ್ರಮಿಸುವಂತೆ ಮಾಡುವ ಜತೆಗೆ ಪರಿಶುದ್ಧ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಮಳೆಹಬ್ಬ ತೆರೆದಿಡುತ್ತದೆ.

| ನರಸಿಂಹ ಭಟ್ ಕಾಡುಮನೆ

 

ವಿವೇಚನೆ ಇಲ್ಲದ ಪ್ರವಾಸಿಗರಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಆಗುತ್ತಿದೆ. ಇದನ್ನು ತಡೆಗಟ್ಟುವ ಜತೆಗೆ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸಕ್ಕಾಗಿ ಮಳೆಹಬ್ಬ ಆಯೋಜಿಸಿದ್ದೇವೆ.

| ನಾಗರಾಜ ವೈದ್ಯ ಮಳೆಹಬ್ಬದ ಆಯೋಜಕ

Leave a Reply

Your email address will not be published. Required fields are marked *

Back To Top