Friday, 21st September 2018  

Vijayavani

ಮತ್ತೆ ದೇವಸ್ಥಾನಕ್ಕೆ ಹೊರಟ ಸಿಎಂ - ಇಂದು ಸಂಜೆ ಶೃಂಗೇರಿ ಶಾರದಾಂಬೆಯ ದರ್ಶನ - ನಂತರ ಜಗದ್ಗುರಗಳ ಭೇಟಿ        ಕೊಡಗಿನಲ್ಲಿ ತಹಸೀಲ್ದಾರ್ ಮೇಲೆ‌ ಹಲ್ಲೆ ಪ್ರಕರಣ - ಪ್ರಕರಣ ಸಂಬಂಧ 12 ಆರೋಪಿಗಳ ಬಂಧನ        ಸಿಎಂ ದಂಗೆ ಹೇಳಿಕೆಗೆ ಆಕ್ರೋಶ - ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗದ ದೂರು - ಬಿಎಸ್​​ವೈ ನಿವಾಸಕ್ಕೆ ಬಿಗಿ ಭದ್ರತೆ        ಸಂಪುಟ ಸಭೆಯಲ್ಲಿ ಸಿಎಂ ದಂಗೆ ಹೇಳಿಕೆ ಪ್ರಸ್ತಾಪ - ಎಚ್​ಡಿಕೆ ಮಾತಿಗೆ ಹಿರಿಯ ಸಚಿವರಿಂದಲೇ ಆಕ್ಷೇಪ        ಎಸ್. ಗಿರೀಶ್​​ರಿಂದ ಆಪರೇಷನ್ ಕ್ಲೀನ್ - ಸಿಸಿಬಿ ಎಸ್ಪಿಯಾಗಿ ಬಂದ 24 ಗಂಟೆಯಲ್ಲೇ 5 ಸಿಬ್ಬಂದಿ ಎತ್ತಂಗಡಿ        ಬಾಗಲಕೋಟೆಯ ಬನಹಟ್ಟಿಯಲ್ಲೊಬ್ಬ ಪೋಲಿ ಶಿಕ್ಷಕ - ವಿದ್ಯಾರ್ಥಿನಿ ಮೊಬೈಲ್​​​ಗೆ ಐ ಲವ್ ಯೂ ಮೆಸೇಜ್       
Breaking News

ನಿಂತ ನೆಲವನ್ನೇ ನರಕವಾಗಿಸಿದರೆ ಬದುಕಿನ್ನೆಲ್ಲಿ..?!

Thursday, 27.04.2017, 3:05 AM       No Comments

ಬಿರುಬೇಸಿಗೆಯ ದಿನಗಳಲ್ಲಿ ವಾಹನದಲ್ಲಿ ಸಂಚರಿಸುವಾಗ ಸೇತುವೆ ಕಂಡಿತೆಂದರೆ ಸಾಕು, ನೀರೆಷ್ಟಿದೆ ಎಂದು ಕಣ್ಣು ಕುತೂಹಲದಿಂದ ಇಣುಕಲು ತೊಡಗುತ್ತದೆ. ಅದರಲ್ಲೂ ಈ ವರ್ಷ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುವ ಭಯ ಇರುವಾಗ, ತಣ್ಣಗೆ ಹರಿಯುವ ನದಿಯ ಜುಳುಜುಳು ಸದ್ದು ಅದೆಷ್ಟು ಅಮೂಲ್ಯ ಎನಿಸುವುದು ಸುಳ್ಳಲ್ಲ. ಕೆಲವು ಕಡೆ ಬರೀ ಮರಳು ಮಾತ್ರ ಕಾಣಿಸಿ, ‘ಈಗಲೇ ಹೀಗಾದ್ರೆ ಇನ್ನೆರಡು ತಿಂಗಳು ಹೇಗಪ್ಪಾ ಕಳೆಯುವುದು?’ ಎಂಬ ಚಿಂತೆ ಮೂಡಿ ನೀರುಳಿತಾಯದ ಹತ್ತು ಹಲವು ಯೋಜನೆಗಳು ಮನದಲ್ಲೇ ರೂಪುಗೊಳ್ಳುವುದೂ ಉಂಟು.

ಸ್ವಲ್ಪ ದಿನಗಳ ಮೊದಲು ಗಡಿನಾಡು ಕಾಸರಗೋಡಿನ ಕಡೆಗೆ ಹೋಗುತ್ತಾ ಇದ್ದೆವು. ಹೋಗುವ ದಾರಿಯಲ್ಲಿ ಒಂದು ದೊಡ್ಡ ಸೇತುವೆ ಸಿಗುತ್ತದೆ. ಒಂದು ಬದಿಯಲ್ಲಿ ಅಡಕೆ ತೋಟ, ಇನ್ನೊಂದು ಕಡೆ ಹಸಿರುಕಾಡು ಹೊಂದಿದ ಈ ನದಿಯ ಸೇತುವೆಯ ಬದಿಯಲ್ಲಿ ನಿಂತು, ನೀರಿನಲ್ಲಿ ಮೀನು ಹಿಡಿಯಲೆಂದು ಮುಳುಗೇಳುವ ಪಕ್ಷಿಗಳನ್ನು ನೋಡುವುದೆಂದರೆ ಸ್ವರ್ಗಸುಖಕ್ಕಿಂತ ಕಡಿಮೆಯದ್ದಲ್ಲ. ಹಾಗಾಗಿಯೇ ಏನೋ.. ಆ ದಾರಿ ಹಿಡಿದು ಹೋಗುವುದಿದ್ದರೆ ಬೇಗನೇ ಹೊರಟಾಗಿರುತ್ತದೆ. ಮೊನ್ನೆ ಹೋದಾಗ ನಾವು ಬಯಸಿದ ದೃಶ್ಯ ಕಾಣದೇ ಮೇಲಿನ ಕಪ್ಪು ಡಾಮರಿನ ರಸ್ತೆಗೆ ಅಡ್ಡಲಾಗಿ ಮರಳಿನ ರಸ್ತೆಯೊಂದು ಬಿಸಿಯೇರುತ್ತಾ ಮಲಗಿದ್ದಂತೆ ಕಾಣುತ್ತಿತ್ತು. ಒಂದಿಷ್ಟು ಗುಂಡಿ ಇರುವ ಜಾಗದಲ್ಲಿ ಹಸಿರಾದ ಪಾಚಿಕಟ್ಟಿದ ಸ್ವಲ್ಪ ನೀರು ಇತ್ತಷ್ಟೇ. ಕೆಲವು ಕಡೆ ಮರಳನ್ನು ಬಗೆದು ಪೈಪ್ ಇಳಿಸಿ ನೀರು ತೆಗೆಯುವ ಪ್ರಯತ್ನವೂ ನಡೆದಿತ್ತು. ನೀರಿನ ಹರಿಯುವಿಕೆ ನಿಂತು ಸುಮಾರು ದಿನಗಳೇ ಕಳೆದಿರಬೇಕು. ಹತ್ತಿರದ ಅಡಕೆ ಮರಗಳು ನೀರಮುಖ ಕಾಣದೇ ಹಳದಿ ಎಲೆಗಳನ್ನು ಹೊತ್ತು ನಿಂತಿದ್ದರೆ, ಪಕ್ಕದ ಕಾಡಿನ ಮರಗಳ ಎಲೆಗಳು ಅದಕ್ಕೆ ‘ಮ್ಯಾಚಿಂಗ್ ಮ್ಯಾಚಿಂಗ್’ ಎನ್ನುತ್ತಿದ್ದವು. ಕಾಗೆಗಳ ದಂಡೊಂದು ಆ ಮರಳಿನ ಮೇಲೆ ಕುಳಿತು ಏನನ್ನೋ ಕುಕ್ಕಿ ಕುಕ್ಕಿ ತಿನ್ನುತ್ತಿದ್ದಂತೆ ಕಾಣಿಸಿತು. ಸೂಕ್ಷ್ಮವಾಗಿ ನೋಡಿದರೆ ಗೋಣಿಚೀಲದಲ್ಲಿ ಕಟ್ಟಿ ನದಿಯ ಕಡೆಗೆ ಎಸೆದ ಮಾಂಸದಂಗಡಿಯ ತ್ಯಾಜ್ಯವದು.

‘ಥತ್.. ಎಂಥ ಮನುಷ್ಯರು. ಇವರೇನು ಹೊಟ್ಟೆಗೆ ಅನ್ನ ತಿನ್ನುವವರಲ್ಲವಾ..’ ಎನ್ನಿಸಿ ಸಿಟ್ಟು ಬಂತು. ಕುಡಿಯುವ ನೀರಿನ ಪರಿಸರವನ್ನು ಸ್ವಚ್ಛವಾಗಿಡಬೇಕೆಂಬ ಕನಿಷ್ಠ ಜ್ಞಾನವೂ ನಮ್ಮಲ್ಲಿಲ್ಲದಿರುವುದಕ್ಕೆ ದುಃಖವೂ ಮೂಡಿತ್ತು. ಇಷ್ಟು ಕೊಳಕರಿಗೆ ನೀರು ಕೊಡಬಾರದೆಂದೇ ನದಿ ಇಷ್ಟು ಬೇಗ ಬತ್ತಿದೆಯೇನೋ ಎಂದೊಂದು ಒಳದನಿಯೂ ಮೂಡಿ, ಅಲ್ಲಿಂದ ಕಾಲ್ತೆಗೆಯುವಾಗ ಅರಿವಾಗದ ಉದ್ವೇಗವೊಂದು ಮನದೊಳಗೆ ಉಳಿದುಬಿಟ್ಟಿತ್ತು.

ಪ್ರತಿದಿನ ನಗರಗಳಿಗೆ ಕುಡಿಯುವ ನೀರನ್ನು ಇನ್ನೆಷ್ಟು ದಿನ ಕೊಡಬಹುದು ಎಂಬ ಲೆಕ್ಕಾಚಾರದ ಜತೆಗೆ, ಕೃಷಿಗೆ ನೀರಿಲ್ಲ ಎಂದು ಭಯಬೀಳಿಸುವ ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ಓದಿ ಓದಿ ತಲೆಕೆಡುತ್ತಿರುತ್ತದೆ. ತಿಂಗಳ ಸಂಬಳದ ಉದ್ಯೋಗವಿಲ್ಲದ ಕೃಷಿಕ ನೆಚ್ಚಿರುವುದು ಅನ್ನ ನೀಡುವ ಭೂಮಿಯನ್ನೇ. ಕಾಲ ಕಾಲಕ್ಕೆ ಗಿಡಗಳಿಗೆ ನೀರುಣಿಸಿ ಬೆಳೆಸಿ ಇನ್ನೇನು ಫಲ ಕೈಗೆ ಬರುತ್ತದೆ ಎನ್ನುವಾಗ ನೀರಿನ ಕೊರತೆಯಿಂದ ಗಿಡಮರಗಳನ್ನೇ ಕಳೆದುಕೊಳ್ಳುವ ಸ್ಥಿತಿ ಒದಗಿದರೆ ಅದು ದುರಂತವಲ್ಲದೆ ಇನ್ನೇನು? ರಾಜ್ಯಭಾರ ಮಾಡುವ ಮಂದಿಗೆ ವೋಟಿನ ಲೆಕ್ಕಾಚಾರ ಮಾತ್ರ ಗೊತ್ತಿರುತ್ತದೆಯೇ ವಿನಾ, ಬದುಕು ಉಳಿಸುವ ಗಿಡ-ಮರಗಳ ಲೆಕ್ಕಾಚಾರ ಎಲ್ಲಿ ತಿಳಿದಿರಲು ಸಾಧ್ಯ? ಸಮಾನ ಸಮಸ್ಯೆಯ ಪಿಡುಗು ಹೊಂದಿದ ನಾವು, ನಮ್ಮ ಜನ, ನಮ್ಮ ಪರಿಸರದಲ್ಲಿರುವವರು ಇವರಿಗಷ್ಟೇ ಇಂತಹ ಕಷ್ಟ ಕಾರ್ಪಣ್ಯಗಳು ತಿಳಿದಿರುತ್ತವೆಯೇನೋ?

ಈಗೆರಡು ದಿನಗಳ ಮೊದಲಷ್ಟೇ.. ಮಂಗಳೂರಿನಿಂದ ಉಡುಪಿಯ ಕಡೆಗೆ ಹೋಗುತ್ತಿದ್ದೆವು. ನಮ್ಮ ಬಲಬದಿಯ ರಸ್ತೆಯಿಂದ ವಾಹನವೊಂದು ನಮ್ಮ ರಸ್ತೆ ಪ್ರವೇಶಿಸಿತು. ಅಲ್ಲಿಯವರೆಗೇನೋ ಮಾತನಾಡುತ್ತಿದ್ದ ನಮಗೆ ಆ ವಾಹನ ಕಂಡಕೂಡಲೇ ಮಾತು ಅದರ ಬೆಲೆ, ಅಂದ-ಚಂದ, ಅದರಲ್ಲಿರುವ ಸೌಲಭ್ಯಗಳು ಇಂತಹ ವಿಷಯಗಳ ಕಡೆ ತಿರುಗಿ, ರಸ್ತೆಯ ಇಕ್ಕೆಲಗಳನ್ನು ನೋಡುವ ನೋಟ ಅದನ್ನು ಮರೆತು ನಮ್ಮೆದುರು ಸಾಗುತ್ತಿದ್ದ ವಾಹನವನ್ನೇ ಹಿಂಬಾಲಿಸತೊಡಗಿತು. ಒಂದಿಷ್ಟು ದೂರದಲ್ಲೇ ಹಸಿರುಟ್ಟ ವನಸಿರಿಯ ನಡುವೆ ಹರಿಯುವ ನದಿಯ ಮೇಲಿನ ಸೇತುವೆ ಕಾಣಿಸತೊಡಗಿ, ‘ಅಬ್ಬಾ ನಮ್ಮೂರಲ್ಲಿ ಇನ್ನೂ ಕುಡಿಯುವಷ್ಟು ನೀರಿದೆ; ಕೃಷಿಕಾರ್ಯಗಳಿಗೂ ತೊಂದರೆಯಾಗದೇನೋ’ ಎಂದು ಯೋಚಿಸುತ್ತಿರುವಾಗಲೇ ನಮ್ಮನ್ನು ಓವರ್​ಟೇಕ್ ಮಾಡಿಹೋದ ವಾಹನದಿಂದ ಕೈಯೊಂದು ಹೊರಬಂದು ಪ್ಲಾಸ್ಟಿಕ್ ಲಕೋಟೆಯೊಂದನ್ನು ನೀರಿನ ಕಡೆಗೆಸೆಯಿತು.

ಅಲ್ಲಿಯವರೆಗೆ ಕಾಣುತ್ತಿದ್ದ ಆ ವಾಹನದ ಅಂದ-ಚೆಂದಗಳೆಲ್ಲಾ ಕ್ಷಣದಲ್ಲಿ ಕುರೂಪಗೊಂಡು ಅದರೊಳಗಿರುವ ಮನುಷ್ಯರ ಬಗೆಗೆ ಹೇವರಿಕೆ ಮೂಡಿತು. ‘ನಿಜಕ್ಕೂ ಇಂತಹವರಿಗೆ ಕಠಿಣಾತಿಕಠಿಣ ಶಿಕ್ಷೆಯ ಅಗತ್ಯವಿದೆ. ಇದು ಕೂಡಾ ಕಳ್ಳತನ, ಕೊಲೆ, ಸುಲಿಗೆಗಳಷ್ಟೇ ಘೊರ ಅಪರಾಧವೇ’- ಹೀಗೆಲ್ಲಾ ಬಡಬಡಿಸುತ್ತಿರುವಾಗಲೇ ಮನಸ್ಸು ಸುಮಾರು ವರ್ಷಗಳ ಹಿಂದಕ್ಕೆ ಸರಿದಿತ್ತು.

ಆಗೆಲ್ಲಾ ಕುಡಿಯುವ ನೀರು, ಮನೆಯೊಳಗೆ ನಳ ತಿರುಗಿಸಿದರೆ ಬರುವ ಕಾಲವಲ್ಲ. ಬಾವಿಯಿಂದ ಎಳೆಯಬೇಕು ಅಥವಾ ಕೆರೆಗೋ ಹೊಳೆಗೋ ಹೋಗಿ ಹೊತ್ತು ತರಬೇಕು. ಬೇಸಿಗೆ ಜೋರಾದಂತೆ ಕೆಲವು ಜನರ ಮನೆಯ ಬಾವಿ ಬತ್ತಿಹೋಗಿ ಅಕ್ಕಪಕ್ಕದ ಮನೆಯ ಬಾಗಿಲೆದುರು ನಿಂತು ನೀರಿಗಾಗಿ ಬೇಡುವ ಪರಿಸ್ಥಿತಿ. ಪ್ರತಿ ಹನಿ ನೀರಿಗೂ ಅಷ್ಟೇ ಬೆವರ ಹನಿಯ ಪರಿಶ್ರಮವಿತ್ತು. ಒಂದು ಲೋಟ ನೀರು ಖರ್ಚು ಮಾಡಬೇಕಾದರೂ ಯೋಚಿಸುವಂತಾಗುತ್ತಿತ್ತು. ಇದು ನೀರು ಪೋಲಾಗದಂತೆ ತಡೆಯುವಲ್ಲಿ ಸಹಕಾರಿಯಾಗುತ್ತಿದ್ದುದಂತೂ ಸತ್ಯ. ಆದರೆ ಅನುಕೂಲತೆಗಳನ್ನು ನೋಡಬೇಕಲ್ಲ ಎಂಬ ದೃಷ್ಟಿಯಿಂದ ಅಜ್ಜ ಮನೆಯ ಹಿಂದಿನ ಎತ್ತರದ ಜಾಗದಲ್ಲಿ ನೀರಿನ ಟ್ಯಾಂಕ್ ಕಟ್ಟಿಸಿದರು. ಅದರಿಂದ ಹೊರಟ ಪೈಪಿನ ನೀರು ಮನೆಯಂಗಳದ ಮೂಲೆಯ ನಳದಲ್ಲಿ ಇಳಿಯುತ್ತಿತ್ತು. ಟ್ಯಾಪ್ ತಿರುಗಿಸಿದರೆ ನೀರು ಬರುತ್ತದೆ ಎಂಬುದು ದೊಡ್ಡ ದೊಡ್ಡ ಪೇಟೆಗಳಲ್ಲಿ ಮಾತ್ರ ಸಾಧ್ಯ ಎಂದಿದ್ದದ್ದು ನಮ್ಮಜ್ಜನ ಮನೆಯಂಗಳದಲ್ಲೂ ಸಾಧ್ಯವಾದದ್ದು ನಮಗಂತೂ ಹೆಮ್ಮೆಯ ವಿಷಯವೇ. ಆಗೆಲ್ಲಾ ಅದನ್ನು ನೋಡಲೆಂದೇ ಮನೆಗೆ ಜನ ಬರುತ್ತಿದ್ದರು ಅಥವಾ ಯಾರಾದರೂ ಮನೆಗೆ ಬಂದರೆ ಅವರನ್ನು ಕರೆದೊಯ್ದು ತೋರಿಸುವಂತಹ ವಿಶೇಷ ಸ್ಥಳ ಅದೇ ಆಗಿರುತ್ತಿತ್ತು. ಹೊಸದಾಗಿ ಆಗಿದ್ದ ಕಾರಣ ಅದಕ್ಕಿನ್ನೂ ಮುಚ್ಚುವ ವ್ಯವಸ್ಥೆ ಏನೂ ಆಗಿರಲಿಲ್ಲ. ಹಾಗಾಗಿ ನಾವು ಮಕ್ಕಳು ಆ ಕಡೆ ಹೋದಾಗ ‘ಬಗ್ಗಬೇಡಿ, ಹತ್ರ ಹೋಗ್ಬೇಡಿ’ ಎನ್ನುವ ಅಜ್ಜಿ-ಅಜ್ಜನ ಎಚ್ಚರಿಕೆಯ ನುಡಿ ಹಿಂಬಾಲಿಸಿಕೊಂಡೇ ಬರುತ್ತಿತ್ತು.

ನಮ್ಮ ಹತ್ತಿರದ ನೆಂಟರೇ ಮನೆಗೆ ಬಂದಿದ್ದರು. ದೊಡ್ಡವರೆಲ್ಲಾ ಟ್ಯಾಂಕ್ ನೋಡಿ ಹೋಗಿ ಆದ ಮೇಲೆ ನಾವು ಆ ಕಡೆ ಹೋದೆವು. ನಮ್ಮ ಜೊತೆ ನೆಂಟರ ಮಕ್ಕಳೂ ಇದ್ದರು. ನಮ್ಮಜ್ಜನ ಮನೆಯಲ್ಲಿ ಮಾತ್ರ ಇರುವ ಅದರ ಬಗ್ಗೆ ನಾವು ಕೊಚ್ಚಿಕೊಂಡಿದ್ದೂ ಆಯಿತು. ನಮ್ಮ ಜತೆಯೇ ಬಂದ ನೆಂಟರ ಹುಡುಗಿಗೆ ಯಾಕೋ ನಮ್ಮ ಮಾತುಗಳು ಇಷ್ಟವಾಗಲಿಲ್ಲ. ಅದನ್ನು ವಿರೋಧಿಸುವುದಕ್ಕೆಂದೇನೋ ಆಕೆ ಫಕ್ಕನೆ ಟ್ಯಾಂಕಿನ ನೀರಿನ ಕಡೆಗೆ ಉಗುಳಿ ಬಡಬಡನೆ ಅಲ್ಲಿಂದಿಳಿದು ಓಡಿದಳು. ಅಲ್ಲಿಯವರೆಗೆ ಕಲರವ ನಡೆಸುತ್ತಿದ್ದ ನಾವುಗಳು ಈ ಆಘಾತವನ್ನು ತಾಳಲಾರದೆ ಕ್ಷಣಕಾಲ ದನಿ ಕಳೆದುಕೊಂಡಿದ್ದೆವು. ದೊಡ್ಡಣ್ಣ ಇನ್ನು ಈ ನೀರನ್ನಿಷ್ಟು ಖಾಲಿ ಮಾಡಬೇಕಷ್ಟೇ.. ಉಗುಳಿದ ನೀರನ್ನು ಕುಡಿಯಲು ಉಪಯೋಗಿಸಲಾಗದು ಎಂದುಬಿಟ್ಟ. ಬೇಸಿಗೆಯ ದಿನಗಳವು.. ಕೆರೆಯಲ್ಲೂ ಒಂದಿಷ್ಟೇ ನೀರು ಉಳಿದಿತ್ತಷ್ಟೇ.. ಇಷ್ಟು ನೀರು ತುಂಬಬೇಕಾದರೆ ನಾಲ್ಕಾರು ಬಾರಿ ಪಂಪ್ ನಿಲ್ಲಿಸಿ ಮತ್ತೆ ನಡೆಸುವ ಪರಿಸ್ಥಿತಿ.. ಸಣ್ಣ ಅಣ್ಣ ರೌದ್ರಾವತಾರ ತಾಳಿ ಅವಳನ್ನು ಹೊಡೆದುಬಿಡಬೇಕು, ಅವಳ ಕೈಕಾಲು ಮುರಿಯಬೇಕು, ಇನ್ನು ಮುಂದೆ ಆಕೆ ನಮ್ಮ ಮನೆಗೆ ಕಾಲಿಡಬಾರದು, ನಾನು ಅಜ್ಜನಿಗೆ ಹೇಳ್ತೇನೆ ಎಂದು ಅಲ್ಲಿಂದ ಓಡಿ ಹಿರಿಯರಿಗೆ ಸುದ್ದಿ ಮುಟ್ಟಿಸಿದ.

ಮನೆಯೊಳಗೂ ಈಗ ತಲೆಬಿಸಿ. ಆ ಹುಡುಗಿಗೆ ಎಲ್ಲಾ ಕಡೆಯಿಂದ ಬೈಗುಳದ ಸುರಿಮಳೆ. ಅವಳಪ್ಪನಂತೂ ಕೋಲು ಹಿಡಿದು ಅವಳನ್ನು ಹೊಡೆಯಲು ಹೊರಟು ‘ಇಂಥಾ ಮಕ್ಕಳು ಹುಟ್ಟಿಲ್ಲ ಅಂದರೆ ಯಾರು ಅಳುತ್ತಿದ್ದರು’ ಎಂದು ಕೂಗಾಡುತ್ತಿದ್ದರು. ಆ ಹುಡುಗಿಯನ್ನು ಅದೆಷ್ಟೋ ವರ್ಷಗಳವರೆಗೆ ನಾವು ಕ್ಷಮಿಸಿಯೇ ಇರಲಿಲ್ಲ.. ಆಕೆಗೂ ನಮ್ಮೆದುರು ಬರುವಾಗ ಈ ಅಳುಕು ಇನ್ನೂ ಕಾಡುತ್ತಿತ್ತೇನೋ.. ನಂತರದ ದಿನಗಳಲ್ಲಿ ಅದೊಂದು ಬಾಲ್ಯಕಾಲದ ಹುಡುಗುಬುದ್ಧಿಯಲ್ಲಿ ಆದ ಅನಾಹುತ ಎಂದು ಮರೆತುಬಿಟ್ಟಿದ್ದೆವು.

ಆದರೀಗ ಮಕ್ಕಳಲ್ಲ.. ತಿಳಿವಳಿಕೆ ಇರುವ ದೊಡ್ಡವರು ಎನಿಸಿಕೊಂಡ ಮಂದಿಯೂ ಇಂತಹುದೇ ಕೆಲಸ ಮಾಡಿ, ಯಾವ ಹಿಂಜರಿಕೆಯೂ, ಅಪರಾಧಿ ಪ್ರಜ್ಞೆಯೂ ಕಾಡದೇ, ‘ಎಲ್ಲರೂ ಮಾಡುತ್ತಾರೆ ಹಾಗೇ ನಾವೂ’ ಎಂದುಕೊಂಡು ರಾಜಾರೋಷವಾಗಿ ಸಾಗುವಾಗ ಅಂದಿನ ಅದೇ ಸಿಟ್ಟು ಮತ್ತೊಮ್ಮೆ ಮನದಲ್ಲಿ ಉಕ್ಕೇರುತ್ತದೆ. ಮುಂದಿನ ದಿನಗಳು ಹಿಂದಿನ ದಿನಗಳಷ್ಟು ಸುಖದಾಯಕ ಖಂಡಿತಾ ಅಲ್ಲ. ಗುಡ್ಡಕಾಡುಗಳು ಬೋಳಾಗಿ ಬಂದಿರುವ ಕಾಂಕ್ರೀಟು ಕಾಡುಗಳು ಯಾವ ಮೋಡವನ್ನೂ ‘ನಿಲ್ಲಿ ಮೋಡಗಳೇ’ ಎಂದು ಬೇಡಿಕೊಳ್ಳುವ ಶಕ್ತಿ ಪಡೆದಿಲ್ಲ. ನಾವು ಕೂಡಾ ನೆಲವನ್ನು ನೀರಸೆಲೆಗಾಗಿ ಆಳಕ್ಕೆ ಬಗೆಯುತ್ತೇವೆಯೇ ವಿನಾ, ನೈಸರ್ಗಿಕವಾಗಿಯೇ ಮಳೆಯಾಗಿ ಮೇಲಿನಿಂದ ಸುರಿಯುವ ನೀರಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮಲಿನಗೊಂಡ ಪರಿಸರದಲ್ಲಿ ಸುರಿದ ನೀರಿನ ಬೆಲೆ ಎಂಜಲಾದ ಟ್ಯಾಂಕಿನ ನೀರಿನಷ್ಟೇ.. ಯಾವ ಉಪಯೋಗಕ್ಕೆ ಬಂದೀತು?

ಪರಿಸರವನ್ನು ಕೊಳಕು ಮಾಡಬಾರದೆಂಬ ಮೂಲಭೂತ ಪ್ರಜ್ಞೆ ಎಲ್ಲಾ ಜನತೆಯ ಒಳಗೂ ಇಳಿದು, ಇಂತಹ ಕೆಲಸ ಮಾಡುವ ಖದೀಮರನ್ನು ಶಿಕ್ಷಿಸುವ ಕಾನೂನು ನಿಜವಾಗಿಯೂ ಅಳವಡಿಕೆಯಾಗಿ ನ್ಯಾಯಯುತವಾಗಿ ಪಾಲನೆ ಯಾದಲ್ಲಿ ನಮ್ಮ ಹೊಳೆಗಳು ಶುದ್ಧ ನೀರನ್ನೇ ಹೊತ್ತು, ಅಡೆತಡೆಯಿಲ್ಲದೆ ಸಾಗಿ ನಮಗೂ ನೀರು ನೀಡುವ ಭರವಸೆ ಕೊಟ್ಟಾವೇನೋ….

Leave a Reply

Your email address will not be published. Required fields are marked *

Back To Top