Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಅಂಕ ಮುಂದಿನ ತರಗತಿಯನ್ನು ನಿರ್ಧರಿಸಲಿ, ಬದುಕನ್ನಲ್ಲ…

Thursday, 15.02.2018, 3:03 AM       1 Comment

| ಅನಿತಾ ನರೇಶ್​ ಮಂಚಿ

ಕಣ್ಣಿಗೆ ಪಟ್ಟಿಕಟ್ಟಿದ ಕುದುರೆಯಂತೆ ಗುರಿಯೊಂದನ್ನು ಬೆನ್ನತ್ತಬಹುದು, ಗುರಿ ಮುಟ್ಟಲೂಬಹುದು. ಆದರೆ ನಡೆದ ದಾರಿಯ ಆಚೀಚಿಗಿನ ಪರಿಚಯ ಇರದು. ಮಕ್ಕಳ ಉತ್ತಮ ಭವಿಷ್ಯವೇ ತಾಯ್ತಂದೆಯರ ಬಯಕೆ ಎಂಬುದರಲ್ಲೇನೂ ಸಂಶಯವಿಲ್ಲ. ಆದರೆ ಇದ್ದೊಂದು ಬಾಲ್ಯದ ಬಾಲ ಮುರಿದೇ ಅದನ್ನು ಹೊಂದಬೇಕಿಲ್ಲ ಎನ್ನುವುದೂ ನೆನಪಿರಬೇಕು….

ಕೆಲ ವರ್ಷಗಳ ಹಿಂದಿನ ಮಾತಿದು. ಆಗಷ್ಟೇ ಗೆಳತಿಯ ಮನೆಯೊಳಗೆ ನುಗ್ಗಿದ್ದೆ. ನನ್ನನ್ನು ಆಹ್ವಾನಿಸಿದ ಅವಳಿನ್ನೇನು ಬಾಗಿಲು ಹಾಕಬೇಕು ಅನ್ನುವಷ್ಟರಲ್ಲಿ ಬಿರುಗಾಳಿಯಂತೆ ನುಗ್ಗಿದ್ದ ಒಬ್ಬ ಹುಡುಗ. ವಯಸ್ಸಿನ್ನೂ ಮೂರನ್ನು ದಾಟಿಲ್ಲ ಎಂದು ಅವನ ಹಾಲುಗಲ್ಲ ಹೇಳುತ್ತಿತ್ತು. ಅಲ್ಲೇ ಕೆಂಪನೆಯ ಬೆರಳಚ್ಚು… ಇಳಿಯುತ್ತಿದ್ದ ಕಣ್ಣೀರು ಒರೆಸಿಕೊಳ್ಳುವುದನ್ನು ಬಿಟ್ಟು ನನ್ನ ಹಿಂದಡಗಿದ. ನನಗೂ ಅವನ ಮೈನಡುಕದ ಅನುಭವ ಆಗುತ್ತಿತ್ತು. ‘ಯಾರಿವನು?’ ಎಂಬ ಪ್ರಶ್ನೆ ನನ್ನ ಕಣ್ಣಲ್ಲಿತ್ತೋ ಏನೋ, ‘ಪಕ್ಕದ ಮನೆಯ ಹುಡುಗ, ಶಂತನು’ ಎನ್ನುತ್ತ ಸಾವಕಾಶವಾಗಿ ಬಾಗಿಲು ಹಾಕಿದ ಗೆಳತಿ ಅವನನ್ನು ಎದುರು ಎಳೆದು ‘ಯಾರು ಬಂದಿದ್ದಾರೆ ಮನೆಗೆ? ಇವತ್ತು ಮಗ್ಗಿ ಹೇಳಲಿಲ್ವಾ’ ಎನ್ನುತ್ತ, ಕೆಂಪಾದ ಅವನ ಕೆನ್ನೆಯನ್ನು ನಯವಾಗಿ ಸವರಿದಳು.

ನಾಚಿಕೆಯಿಂದ ತಲೆ ತಗ್ಗಿಸಿದ. ‘ಬರೆಯಲು ಬರುತ್ತೆ ನಿಂಗೆ, ತುಂಬ ಬ್ರೖೆಟ್ ಇದ್ದೀಯ.. ಮತ್ಯಾಕೆ ಹೇಳದೇ ಪೆಟ್ಟು ತಿನ್ನೋದು ನೀನು’ ಎನ್ನುತ್ತ ಚಾಕೊಲೇಟಿನ ತುಂಡೊಂದನ್ನು ಮುರಿದು ಅವನ ಬಾಯಿಗಿಟ್ಟಳು. ಉತ್ತರಿಸುವ ಅಗತ್ಯ ಇಲ್ಲದವನಂತೆ ಅದರ ಸಿಹಿಯನ್ನು ಆಸ್ವಾದಿಸುತ್ತ ಕುಳಿತ. ಗೆಳತಿ ಫೋನ್ ತೆಗೆದು ಕರೆಮಾಡಿ ‘ಇಲ್ಲಿದ್ದಾನೆ, ಸರಿಯಾಗಿ ಮಗ್ಗಿ ಹೇಳ್ತಾ ಇದ್ದಾನೆ’ ಎಂದಳು. ಅಲ್ಲಿಟ್ಟಿದ್ದ ಕಾರಿನ ಬಗೆಗಿನ ಮ್ಯಾಗಜಿನ್​ನಲ್ಲಿನ ಕಾರಿನ ಚಿತ್ರವನ್ನು ಸ್ವಲ್ಪಹೊತ್ತು ನೋಡುತ್ತಿದ್ದವನು ಯಾವುದೋ ಹೊರಗಿನ ಶಬ್ದವನ್ನು ಗ್ರಹಿಸಿದಂತೆ ನಿರಾಳವಾದ. ಸಣ್ಣಸ್ವರದಲ್ಲಿ ಹನ್ನೆರಡರ ಮಗ್ಗಿ ಹೇಳಿ ಎದ್ದು ನಿಂತವನನ್ನು ‘ಗುಡ್ ಬಾಯ್ ’ ಎನ್ನುತ್ತ ಕಳಿಸಿದಳು ಗೆಳತಿ.

ನನಗೆ ಇದೇನೂ ಅರ್ಥವಾಗದೆ ಗೆಳತಿಯ ಕಡೆಗೆ ನೋಡಿದಾಗ, ‘ಏನೂ ಇಲ್ಲ ಬಿಡೇ, ಪುಟ್ಟಹುಡುಗ ತುಂಬಾ ಚುರುಕು. ಅದೇ ಅವನಿಗೆ ಮುಳುವಾಗಿರೋದೀಗ. ಅವರ ಮನೆಗೆ ಯಾರಾದರೂ ಬಂದರೆ ಸಾಕು, ಅವನಮ್ಮನಿಗೆ ಮಗನ ಬುದ್ಧಿವಂತಿಕೆಯ ಪ್ರದರ್ಶನ ಮಾಡುವ ಹುಮ್ಮಸ್ಸು. ಈ ಪುಟ್ಟ ವಯಸ್ಸಿಗೆ ಬರೀತಾನೆ, ಮಗ್ಗಿ ಹೇಳ್ತಾನೆ, ಸಣ್ಣಪುಟ್ಟ ಲೆಕ್ಕ ಮಾಡ್ತಾನೆ, ದೇಶಗಳ ರಾಜಧಾನಿಗಳ ಹೆಸರು ಹೇಳೋದು, ಮ್ಯಾಪ್ ನೋಡಿ ದೇಶಗಳನ್ನು ಗುರುತಿಸೋದು ಎಲ್ಲ ಗೊತ್ತು. ಮಗು ಅಲ್ವಾ, ಆಗೀಗ ತಪ್ಪುಗಳು ಆಗುತ್ತವೆ. ಆದರೆ ಸಣ್ಣ ತಪ್ಪಾದರೂ ಅವನಮ್ಮನಿಗೆ ಅವಮಾನವೆನಿಸಿ ಬಂದವರೆದುರೇ ಪೆಟ್ಟು ಬೀಳುತ್ತದೆ. ಆಗೆಲ್ಲ ಮಗು ನಮ್ಮಲ್ಲಿಗೆ ಓಡಿಬರುತ್ತದೆ. ಅವನೀಗ ಎದ್ದುಹೋಗಿದ್ದು ನೆಂಟರ ಕಾರಿನ ಸದ್ದು ಮರೆಯಾದ ಮೇಲೆ.. ಕೆಲವು ಸಲ ಯಾರಾದ್ರೂ ಮನೆಗೆ ಬಂದ್ರು ಅನ್ನುವಾಗಲೇ ಇಲ್ಲಿಗೆ ಬಂದುಬಿಡ್ತಾನೆ….’ ಎಂದಳು.

ಮೊನ್ನೆ ಯೂಟ್ಯೂಬಿನಲ್ಲಿ, ಪುಟ್ಟ ಹುಡುಗಿಯೊಬ್ಬಳು ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುವ ವಿಡಿಯೋ ನೋಡುತ್ತಿದ್ದಾಗ ಮೇಲಿನ ಹುಡುಗನ ನೆನಪಾಗಿತ್ತು. ಈಗ ಖಂಡಿತ ಆ ಹುಡುಗ ಏನೋ ಸಾಧನೆ ಮಾಡಿರುತ್ತಾನೆ ಎಂದುಕೊಂಡು ಗೆಳತಿಗೆ ಫೋನ್ ಮಾಡಿ ವಿಚಾರಿಸಿದೆ. ‘ಅವನು ಮೂರು ವರ್ಷದ ಮೊದಲು ಸುಸೈಡ್ ಮಾಡ್ಕೊಂಡ’ ಎಂದವಳ ಧ್ವನಿಯಲ್ಲಿದ್ದ ವಿಷಾದ ಎದೆ ಕಲಕಿತು. ‘ಯಾಕೇ.. ಏನಾಯ್ತು .. ಅಷ್ಟು ಚುರುಕಿನ ಹುಡುಗ ಯಾಕೆ ಹಾಗೆ ಮಾಡ್ಕೊಂಡ’ ಎಂಬ ಪ್ರಶ್ನೆಗೆ ಬಂದ ಉತ್ತರ ದಂಗುಬಡಿಸಿತ್ತು-

‘ಅವನ ಅಜ್ಜಿಮನೆಯಲ್ಲಿ ನಡೆದ ಸಮಾರಂಭಕ್ಕೆ ಅವನನ್ನು ಬಿಟ್ಟು ಉಳಿದವರೆಲ್ಲ ಹೋಗಿದ್ದರು. ‘ನಾನೂ ಬರ್ತೀನಿ…’ ಎಂಬ ಅವನ ಬಯಕೆಗೆ ವಾರ ಕಳೆದರೆ ಬರಲಿದ್ದ ಪರೀಕ್ಷೆಯನ್ನು ತಡೆಗೋಡೆ ಮಾಡಿದ್ದರು. ‘ಅಜ್ಜಿಮನೆ ಅಂತೆಲ್ಲ ತಿರುಗಿ ಹೊತ್ತುಕಳೆದರೆ ಪರೀಕ್ಷೆಯಲ್ಲಿ ಚೆನ್ನಾಗಿ ಮಾರ್ಕ ಬಾರದೆ ನೆಂಟರೆದುರು ಮಾನಹೋಗುತ್ತದೆ’ ಎಂದಿದ್ದರಂತೆ ಅವನಮ್ಮ. ಅವರು ಊರಿಗೆ ತಲುಪಿ ಫೋನ್ ಮಾಡಿದರೆ ಯಾರೂ ಎತ್ತಲಿಲ್ಲ. ಬಿಟ್ಟುಹೋದ ಸಿಟ್ಟಿಗೆ ಫೋನ್ ಎತ್ತುತ್ತಿಲ್ಲ ಎಂದು ಸುಮ್ಮನಾಗಿದ್ದರು. ಸಂಜೆ ಬಂದ ಕೆಲಸದಾಕೆ ಮನೆಬಾಗಿಲು ಬಡಿದು ಎಲ್ಲರ ಗಮನ ಸೆಳೆದಿದ್ದಳು. ಏನೋ ಅನಾಹುತ ಆಗಿದೆ ಎಂದು ಬಾಗಿಲೊಡೆದು ಒಳನುಗ್ಗುವಾಗ ಅವನು ಉಸಿರು ನಿಲ್ಲಿಸಿ ಗಂಟೆಗಳೇ ಕಳೆದಿದ್ದವು. ಮೇಜಿನ ಮೇಲೆ ಬರೆದಿಟ್ಟಿದ್ದ ಕಾಗದ ಕತೆ ಹೇಳುತ್ತಿತ್ತು.. ಮಾತು ಮೂಕವಾಗಿತ್ತು…’.

ಥಟ್ಟನೆ ನಮ್ಮ ಶಾಲೆಯ ಜೀವನ ನೆನಪಾಗಿತ್ತು.. ಅತಿಯಾದ ನಿರೀಕ್ಷೆಗಳಿಲ್ಲದ, ಶಾಲೆಗೆ ಹೋಗುವುದು ಎಂಬುದನ್ನು ಮನರಂಜನೆಯ ಇನ್ನೊಂದು ಅಂಗವಾಗಿ ಮಾಡಿಕೊಂಡಿದ್ದ ದಿನಗಳವು. ಅಧ್ಯಯನ, ಓದು ಎರಡನೇ ಸ್ಥಾನದಲ್ಲಿದ್ದು ಆಟ ಆಡುವುದು ಮೊದಲ ಸ್ಥಾನದಲ್ಲಿತ್ತು.

ಪರೀಕ್ಷೆಯಲ್ಲಿ ಪಾಸಾಗುವುದು ಎಂಬುದನ್ನು ಅದೃಷ್ಟದಾಟ ಎಂದೇ ನಂಬಿದ್ದೆವು. ನಾವು ನಡೆಯುವ ದಾರಿಬದಿಯಲ್ಲಿ, ಗುಲಾಬಿ ಬಣ್ಣದ ಕೊಳವೆಯಂತಹ ಹೂಗಳನ್ನು ಅರಳಿಸುವ ಒಂದು ಜಾತಿಯ ಬಳ್ಳಿಯಿತ್ತು. ಅದರ ಚಿಗುರೆಲೆಗಳು ನಮ್ಮ ಪರೀಕ್ಷೆಯ ರಿಸಲ್ಟ್ ಹೇಳುವ ಭವಿಷ್ಯಕಾರರಾಗಿದ್ದವು. ಮುಚ್ಚಿಕೊಂಡಂತೆ ಇರುತ್ತಿದ್ದ ಎಳೆಯ ಎಲೆಗಳನ್ನು ಒಂದಿಷ್ಟೂ ಹರಿಯದಂತೆ ತೆರೆದರೆ ಸಾಕು.. ಪರೀಕ್ಷೆ ಬರೆಯದಿದ್ದರೂ ಪಾಸು ಆಗುತ್ತೇವೆ ಎಂಬ ನಂಬಿಕೆ.

ನನ್ನ ಕ್ಲಾಸಿನಲ್ಲೇ ಇದ್ದ ಹುಡುಗಿಯೊಬ್ಬಳಂತೂ ಪರೀಕ್ಷೆಯ ಸಮಯದಲ್ಲಿ ತಲೆಬಾಚುವುದನ್ನು ವಿರೋಧಿಸುತ್ತಿದ್ದಳು. ತಲೆಯಲ್ಲಿರುವ ಹೇನುಗಳು ನಾವು ಓದಿದಷ್ಟನ್ನು ತಿಳಿದುಕೊಂಡಿರುತ್ತವಂತೆ. ಪರೀಕ್ಷಾ ಹಾಲ್​ನಲ್ಲಿ ಉತ್ತರ ಗೊತ್ತಿಲ್ಲದೆ ತಲೆಕೆರೆದುಕೊಂಡರೆ ಸಾಕು ಅವು ಉತ್ತರ ತಿಳಿಸುತ್ತವಂತೆ. ಇನ್ನೊಬ್ಬಳಂತೂ ಕಡ್ಡಾಯ ದೇವಸ್ಥಾನಕ್ಕೆ ಹಾಕುವ ಪ್ರದಕ್ಷಿಣೆಗಳೇ ಉತ್ತರ ಪತ್ರಿಕೆಯಲ್ಲಿ ಮಾರ್ಕ ಕೊಡುತ್ತವೆ ಎಂದುಕೊಂಡಿದ್ದಳು. ಪರೀಕ್ಷೆಯ ರಿಸಲ್ಟ್ ಕೇವಲ ತರಗತಿಯ ಪಾಸ್ ಮತ್ತು ಫೇಲನ್ನು ನಿರ್ಧರಿಸುತ್ತಿದ್ದವು, ನಮ್ಮ ಬದುಕಿನ ಸೋಲನ್ನಲ್ಲ.

ರಿಸಲ್ಟಿನ ದಿನ ನಾವೆಲ್ಲ ಕಡ್ಡಾಯವಾಗಿ ಒಬ್ಬರ ಅಂಗಡಿಗೆ ಭೇಟಿನೀಡುತ್ತಿದ್ದೆವು. ಚಾಚಿದ ನಮ್ಮ ಪುಟ್ಟಕೈಗಳಿಗೆ ಕಿತ್ತಳೆಯ ರುಚಿಯ ಮಿಠಾಯಿ ಬೀಳುತ್ತಿತ್ತು. ಆ ಸಲ ಪಾಸಾದ ನಾನು ಮಿಠಾಯಿಗಾಗಿ ಕೈಚಾಚಿದಾಗಲೇ, ಪಕ್ಕದಲ್ಲೊಬ್ಬ ನನ್ನ ಕ್ಲಾಸಿನ ಫೇಲ್ ಆದ ಹುಡುಗನ ಕೈಯೂ ಚಾಚಿತ್ತು. ನನಗೆ ಸಿಹಿ ಸಿಕ್ಕಿದ ಕೂಡಲೇ ‘ನೀನು ಫೇಲ್, ನಿಂಗ್ಯಾಕೆ ಮಿಠಾಯಿ?’ ಎಂದುಬಿಟ್ಟಿದ್ದೆ. ಅದನ್ನು ಕೇಳಿಸಿಕೊಂಡ ಅಂಗಡಿಯವರು ನಸುನಗುತ್ತ ಅವನ ಕೈಗೆ ಎರಡು ಮಿಠಾಯಿ ತುರುಕಿ ‘ಬರುವ ವರ್ಷ ಪಾಸ್ ಆಗಲಿಕ್ಕೆ ಶಕ್ತಿಗೆ ಇನ್ನೊಂದು’ ಎಂದಿದ್ದರು. ಸೋಲು ಎನ್ನುವುದು ಗೆಲುವಿನ ಮೆಟ್ಟಿಲು ಎಂಬುದನ್ನು ಹೀಗೆ ಸರಳವಾಗಿ ತೋರಿಸಿಕೊಟ್ಟಿದ್ದರವರು.

ಆಗೆಲ್ಲ ಫೇಲ್ ಆದ ಹುಡುಗಿಯರು ಅಳುತ್ತಿದ್ದುದು ತನ್ನೊಡನೆ ಆಟ ಆಡುವ ಗೆಳತಿಯರ ಸಂಗ ತಪ್ಪುವುದಕ್ಕೆ ಮಾತ್ರ.

ಹತ್ತನೇ ತರಗತಿಯನ್ನು ಮೂರು ಬಾರಿ ಕಟ್ಟಿ ಪಾಸ್ ಮಾಡಿದ ಸಹಪಾಠಿಯೊಬ್ಬ ಮರುವರ್ಷ ಭಾರತೀಯ ಸೇನೆ ಸೇರಿದ್ದ. ಶಾಲೆಯಲ್ಲಿ ಹಿಂದಿ ಅಕ್ಷರಗಳನ್ನು ಗುರುತಿಸಲು ಹೆಣಗಾಡುತ್ತಿದ್ದ ಆತ ಅರಳು ಹುರಿದಂತೆ ಹಿಂದಿಯಲ್ಲಿ ಮಾತನಾಡುತ್ತಿದ್ದ. ಶಾಲೆ ಕಲಿಸದ್ದನ್ನು ಬದುಕು ಕಲಿಸಿತ್ತು. ಐದನೇ ತರಗತಿಯನ್ನು ದಾಟಲಾಗದವ ಅಕ್ಕಪಕ್ಕದವರ ಹಡಿಲು ಬಿಟ್ಟ ಭೂಮಿಯಲ್ಲಿ ತರಕಾರಿ ಬೆಳೆದು ಮಾರಿ ಅದೇ ಜಮೀನನ್ನು ಖರೀದಿಸಿ ತನ್ನದಾಗಿಸುವಷ್ಟು ಬೆಳೆದಿದ್ದ. ಓದುವ ಬಯಕೆ ಇದ್ದರೂ ಅದನ್ನು ಮುಂದುವರಿಸಲು ಅವಕಾಶವಿಲ್ಲದ ಗೆಳತಿಯೊಬ್ಬಳು ಟೇಲರಿಂಗ್ ಕಲಿತು ಈಗ ಹಲವರಿಗೆ ಉದ್ಯೋಗದಾತೆಯಾಗಿದ್ದಾಳೆ. ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಿಕೊಡುತ್ತ, ಟೀಚರಾಗಬೇಕೆಂಬ ತನ್ನ ಕನಸನ್ನು ಸಾಕಾರಮಾಡಿಕೊಂಡಿದ್ದಾಳೆ. ಎಲ್ಲರೂ ಬೆರಳುಮಾಡಿ ತೋರುವ ಒಂದೇ ದಾರಿ ಗಮ್ಯದ ಕಡೆಗೆ ಎಂಬುದನ್ನು ಗಮ್ಯ ಬದಲಿಸಿ ಹೊಸದಾರಿ ಹುಡುಕಿ ನಡೆಯಹೊರಟಿದ್ದಾಳೆ.

ಕಣ್ಣಿಗೆ ಪಟ್ಟಿಕಟ್ಟಿದ ಕುದುರೆಯಂತೆ ಗುರಿಯೊಂದನ್ನು ಬೆನ್ನತ್ತಬಹುದು, ಗುರಿ ಮುಟ್ಟಲೂಬಹುದು. ಆದರೆ ನಡೆದ ದಾರಿಯ ಆಚೀಚಿಗಿನ ಪರಿಚಯ ಇರದು. ಮಕ್ಕಳ ಉತ್ತಮ ಭವಿಷ್ಯವೇ ತಾಯ್ತಂದೆಯರ ಬಯಕೆ ಎಂಬುದರಲ್ಲೇನೂ ಸಂಶಯವಿಲ್ಲ. ಆದರೆ ಇದ್ದೊಂದು ಬಾಲ್ಯದ ಬಾಲ ಮುರಿದೇ ಅದನ್ನು ಹೊಂದಬೇಕಿಲ್ಲ ಎನ್ನುವುದೂ ನೆನಪಿರಬೇಕು.

ನಾವು ಹಿಂದೆ ಪಡೆದ ಹತ್ತು ಹಲವು ಅನುಭವಗಳ ಸಿರಿ ನಮ್ಮ ಮಕ್ಕಳಿಗೇಕಿಲ್ಲ? ಮನೆಯಿಂದ ಶಾಲೆ, ಅಲ್ಲಿಂದ ಬೇರೆ ಬೇರೆ ಕ್ಲಾಸುಗಳ ಭಾರ ಹೊತ್ತು ಮನೆ ತಲುಪುವ ಮಕ್ಕಳು ಬೇರೆಯ ಲೋಕ ನೋಡುವುದು ಇಂಟರ್ನೆಟ್ಟಿನ ಕಣ್ಣಿಂದ.

ಗೆಲ್ಲುವುದೇ ನಿನಗಿರುವ ದಾರಿ ಎಂದು ಸಾರಿಹೇಳುವ ನಾವು, ಸೋಲನ್ನೂ ಸ್ವೀಕರಿಸುವ ಬಗೆಯನ್ನು ಕಲಿಸಲು ಮರೆತಿದ್ದೇವೆ. ‘ಓಡುತ್ತಲೇ ಇರುವ ಬದುಕಿನ ದಾರಿಯಲ್ಲಿ ನಮ್ಮ ಮಕ್ಕಳು ಹಿಂದುಳಿದರೆ?’ ಎಂಬುದಕ್ಕಿಂತ ‘ಉಳಿದವರು ಮುಂದೋಡುತ್ತಾರೆ’ ಎನ್ನುವುದು ನಮ್ಮ ಭಯ. ಆ ಭಯವನ್ನು ಅವರಲ್ಲೂ ತುಂಬಿ ಶಕ್ತಿಹೀನರನ್ನಾಗಿಸುವುದು ನಮ್ಮ ಕೊಂಕುಮಾತುಗಳು. ಮತ್ತೆ ಪರೀಕ್ಷೆಗಳು ಬರುತ್ತಿವೆ, ಆತ್ಮವಿಶ್ವಾಸದಿಂದ ಎದುರಿಸಿ. ಐದಂಕಿಯ ಸಂಬಳ ಪಡೆಯುವ ಮಲ್ಟಿನ್ಯಾಷನಲ್ ಕಂಪನಿಗಳು ಮಾತ್ರ ನಿಮ್ಮ ಗುರಿಯಾಗಿರದೆ, ನಿಮ್ಮ ಕಾಲಮೇಲೆ ನೀವೇ ನಿಲ್ಲುವ ಹತ್ತು ಹಲವು ಅವಕಾಶಗಳ ಬಾಗಿಲು ತೆರೆಯುವ ಪ್ರಯತ್ನ ಮಾಡಿ. ಪ್ರಾಮಾಣಿಕವಾಗಿ ದುಡಿಯುವ ಯಾವ ಉದ್ಯೋಗವೂ ದೊಡ್ಡದೇ. ನಿಮ್ಮ ಅಂಕಗಳು ನಿಮ್ಮ ಮುಂದಿನ ತರಗತಿಯನ್ನು ಮಾತ್ರ ನಿರ್ಧರಿಸಲಿ, ನಿಮ್ಮ ಬದುಕನ್ನಲ್ಲ.

(ಲೇಖಕರು ಸಾಹಿತಿ)

One thought on “ಅಂಕ ಮುಂದಿನ ತರಗತಿಯನ್ನು ನಿರ್ಧರಿಸಲಿ, ಬದುಕನ್ನಲ್ಲ…

Leave a Reply

Your email address will not be published. Required fields are marked *

Back To Top